ಆಯುಷ್ ವೈ : ಚಿತ್ರಕಲೆ ಮತ್ತು ಯಕ್ಷಗಾನದ ವಿಶೇಷ ಪ್ರತಿಭೆ
Saturday, July 20, 2024
Edit
ಪ್ರತಿಭಾ ಪರಿಚಯ : ಆಯುಷ್ ವೈ : ಚಿತ್ರಕಲೆ ಮತ್ತು ಯಕ್ಷಗಾನದ ವಿಶೇಷ ಪ್ರತಿಭೆ
ಲೇಖನ : ತಾರಾನಾಥ್ ಕೈರಂಗಳ
ಪ್ರತಿಭೆ : ಆಯುಷ್ ವೈ
ದ್ವಿತೀಯ ಪಿಯುಸಿ (ವಿಜ್ಞಾನ ವಿಭಾಗ)
ಶಾರದಾ ಪದವಿಪೂರ್ವ ಕಾಲೇಜು
ಮಂಗಳೂರು, ದಕ್ಷಿಣ ಕನ್ನಡ ಜಿಲ್ಲೆ
ಕಲಿಕೆಯ ಪ್ರತಿಯೊಂದು ಭಾಗದಲ್ಲೂ ಕೂಡ ಚಿತ್ರಕಲೆಯ ಪ್ರಭಾವವನ್ನು ಕಾಣುತ್ತೇವೆ. ಕನಿಷ್ಠ ಚಿತ್ರಕಲೆಯ, ದೃಶ್ಯ ಕಲೆಯ ಅಭಿರುಚಿಯನ್ನಾದರೂ ಬೆಳೆಸಿ ಮುನ್ನಡೆಯುವವರು ಸೃಜನಶೀಲರಾಗಿ ಕಾಣುತ್ತಾರೆ. ಇದೇ ರೀತಿ ತಮ್ಮ ಪಠ್ಯ ಕಲಿಕೆಯ ಜೊತೆಗೆ ಚಿತ್ರಕಲೆ ಹಾಗೂ ಯಕ್ಷಗಾನವನ್ನು ಹವ್ಯಾಸವಾಗಿ ಬೆಳೆಸಿ ವಿಶೇಷ ಸಾಧನೆಗೈಯುತ್ತಿರುವ ಪ್ರತಿಭಾವಂತ ಬಾಲಕನ ಪರಿಚಯ ಇಲ್ಲಿದೆ. ಇವರೇ ಮಂಗಳೂರಿನ ಆಯುಷ್ ವೈ...
ಆಯುಷ್ ಪ್ರಸ್ತುತ ದ್ವಿತೀಯ ಪಿಯುಸಿ ಉತ್ತೀರ್ಣರಾಗಿರುವ ವಿದ್ಯಾರ್ಥಿ. ಕೆನರಾ ಹೈಸ್ಕೂಲ್ ಉರ್ವ, ಮಂಗಳೂರು, ಇಲ್ಲಿ ಹೈಸ್ಕೂಲ್ ಶಿಕ್ಷಣವನ್ನು ಹಾಗೂ ಶಾರದಾ ಪದವಿಪೂರ್ವ ಕಾಲೇಜು ಮಂಗಳೂರು ಇಲ್ಲಿ ತನ್ನ ಪದವಿಪೂರ್ವ ಶಿಕ್ಷಣವನ್ನು ಪೂರೈಸಿದ್ದಾರೆ. ನಾಲ್ಕರ ಹರೆಯದಲ್ಲೇ ಚಿತ್ರದ ನಂಟನ್ನು ಬೆಳೆಸಿ ಬೆಳೆದವರು. ತನ್ನ ಅವಿರತ ಶ್ರದ್ಧೆ, ಕಠಿಣ ಪರಿಶ್ರಮಗಳಿಂದ ಚಿತ್ರಕಲೆಯ ಪ್ರಾರಂಭಿಕ ಹಂತಗಳನ್ನು ಅಭ್ಯಾಸ ಮಾಡುತ್ತಾ ಕಲಾಕೌಶಲ್ಯವನ್ನು ಹೊಂದಿದವರು. ಪೆನ್ಸಿಲ್ ಶೇಡಿಂಗ್ ಚಿತ್ರಗಳು, ಕ್ರೆಯಾನ್ಸ್, ಆಯಿಲ್ ಪೇಸ್ಟಲ್ಸ್, ಗ್ಲಾಸ್ ಮಾರ್ಕಿಂಗ್ ಪೆನ್ಸಿಲ್ಸ್ ಹೀಗೆ ನಾನಾ ವೈವಿಧ್ಯದ ಮಾಧ್ಯಮದ ಚಿತ್ರಗಳಲ್ಲಿ ಪ್ರಾವೀಣ್ಯತೆ ಪಡೆದು ಜಲವರ್ಣ ಮಾಧ್ಯಮಕ್ಕೆ ಕಾಲಿರಿಸಿದವರು. ವಾಟರ್ ಕಲರ್, ಅಕ್ರ್ಯಾಲಿಕ್ ಕಲರ್ ಮೂಲಕ ದೃಶ್ಯ ಮಾಧ್ಯಮಕ್ಕೆ ತನ್ನದೇ ಆದ ಶೈಲಿಯನ್ನು ಹೊಂದಿಕೆ ಮಾಡಿಕೊಂಡು ಚಿತ್ರರಚನೆಯಲ್ಲಿ ತೊಡಗಿದ ಆಯುಷ್ ಗೆ ಚಿತ್ರಕಲೆಯ ನಂಟು ಒಲಿದು ಬಂದಿತು.
ಆಯುಷ್ ಇವರು ಖಾಸಗಿ ಸಂಸ್ಥೆಯಲ್ಲಿ ಉದ್ಯೋಗಿಯಾಗಿರುವ ಯಶವಂತ್ ಹಾಗೂ ಶಿಕ್ಷಕಿಯಾಗಿರುವ ಸುಮಿತ್ರಾ ದಂಪತಿಗಳ ಪುತ್ರ. ತಂದೆ ತಾಯಿಗಳ ನಿರಂತರ ಪ್ರೋತ್ಸಾಹದಿಂದ ಯಕ್ಷಗಾನ ಹಾಗೂ ಚಿತ್ರಕಲೆಯನ್ನು ಸಮಾನವಾಗಿಸುವ ಆಸ್ವಾದಿಸುವ ಗುಣವನ್ನು ಬೆಳೆಸಿಕೊಂಡಿದ್ದಾರೆ. ಪಠ್ಯಪೂರಕ ಚಟುವಟಿಕೆಗಳು ಕಲಿಕೆಗೆ ತೊಂದರೆ ಆಗುವುದಿಲ್ಲವೆನ್ನುವ ಪರಿಕಲ್ಪನೆಯನ್ನು ಹೊಂದಿರುವ ಇವರು ಆಯುಷ್ ನ ಪ್ರತಿ ಸಾಧನೆಗಳ ಹಿಂದಿರುವ ಶಕ್ತಿಗಳಾಗಿದ್ದಾರೆ.
ಬಾಲ್ಯದಿಂದಲೇ ಚಿತ್ರಕಲಾ ಗುರುಗಳಾದ ಕಲಾ ಶಿಕ್ಷಕ ಹರೀಶ್ ಆಚಾರ್ಯ ಇವರ ಬಳಿ ಚಿತ್ರಕಲಾ ಅಭ್ಯಾಸವನ್ನು ಪಡೆದುಕೊಂಡು ಕಲಾವಿದೆ ಮನೋರಂಜನಿ ರಾವ್ ಇವರ ಬಳಿ ಹೆಚ್ಚಿನ ಅವಧಿಯ ತರಬೇತಿಯನ್ನು ಪಡೆದುಕೊಂಡರು. ನಿರಂತರ ಚಿತ್ರಕಲಾ ಸ್ಪರ್ಧೆಯಲ್ಲಿ ಭಾಗವಹಿಸುತ್ತಾ ತಾಲೂಕು, ಜಿಲ್ಲೆ ರಾಜ್ಯಮಟ್ಟ ರಾಷ್ಟ್ರಮಟ್ಟದ ಪ್ರಶಸ್ತಿಗಳನ್ನು ತನ್ನದಾಗಿಸಿಕೊಂಡಿದ್ದಾರೆ. ಮಕ್ಕಳ ಜಗಲಿಯ ಸ್ಪರ್ಧೆಗಳಲ್ಲೂ ಕೂಡ ನಿರಂತರವಾಗಿ ಭಾಗವಹಿಸುತ್ತಾ ತೀರ್ಪುಗಾರರ ಮೆಚ್ಚುಗೆಗೆ ಪಾತ್ರರಾಗಿರುವುದು ಇವರ ಕಲಾ ಶ್ರೇಷ್ಠತೆಗೆ ನಿದರ್ಶನವಾಗಿದೆ. ಈವರೆಗೆ ಒಟ್ಟು 300ಕ್ಕಿಂತಲೂ ಮಿಕ್ಕಿ ಪ್ರಶಸ್ತಿಗಳನ್ನು ತನ್ನದಾಗಿಸಿಕೊಂಡಿರುವ ಇವರ ಕಲಾ ಪ್ರತಿಭೆಗೆ ಎಲ್ಲರೂ ತಲೆದೂಗಲೇಬೇಕು.
ಪ್ರಕೃತಿ ಚಿತ್ರಣ, ವಿಷಯಾಧಾರಿತ ಚಿತ್ರಗಳು, ಪ್ರಾಣಿಗಳ ಚಿತ್ರಗಳು, ವಸ್ತು ಚಿತ್ರಣಗಳು ಹೀಗೆ ಎಲ್ಲಾ ವಿಷಯ ವಸ್ತುಗಳಲ್ಲೂ ಕೂಡ ಚಾಕಚಕ್ಯತೆಯನ್ನು ಹೊಂದಿದ್ದು ಅತ್ಯುತ್ತಮ ಗುಣಮಟ್ಟದ ಚಿತ್ರ ಕಲಾಕೃತಿಗಳ ರಚನೆಯಲ್ಲಿ ಎತ್ತಿದ ಕೈ. ಹೊಯ್ಸಳ ಮತ್ತು ಕೆಳದಿ ಚೆನ್ನಮ್ಮ ಪ್ರಶಸ್ತಿ, ದಕ್ಷಿಣ ಕನ್ನಡ ಜಿಲ್ಲಾ ಸಾಹಿತ್ಯ ಪರಿಷತ್ತು ಕನ್ನಡ ರಾಜ್ಯೋತ್ಸವ ಪ್ರಶಸ್ತಿ, ಕೇಂದ್ರ ಸರಕಾರ ಆಯೋಜಿಸಿದ ಪರೀಕ್ಷಾ ಪೆ ಚರ್ಚಾ ಚಿತ್ರಕಲಾ ಸ್ಪರ್ಧೆಯಲ್ಲಿ 14 ಗ್ರಾಂ ಚಿನ್ನದ ಪದಕ, ಕಲಾ ನೈಪುಣ್ಯ ಪ್ರಶಸ್ತಿ ಮಂಡ್ಯ... ಹೀಗೆ ಸಾಲು ಸಾಲು ಪ್ರಶಸ್ತಿ ಗೌರವಗಳಿಗೆ ಪಾತ್ರರಾದ ಆಯುಷ್ ವೈ ಕಲಿಕೆಯಲ್ಲೂ ಮುಂದಿದ್ದಾರೆ. ಹತ್ತನೇ ತರಗತಿಯಲ್ಲಿ ಶೇಕಡ 94 ಹಾಗೂ ಪಿಯುಸಿ ಯಲ್ಲಿ ಶೇಕಡ 92 ಅಂಕ ಗಳಿಸಿರುವುದು ಸಾಮಾನ್ಯ ಸಂಗತಿಯೇನಲ್ಲ.
ಯಕ್ಷಗಾನದಲ್ಲೂ ಕೂಡ ವಿಶೇಷ ಆಸಕ್ತಿ ಹೊಂದಿರುವ ಇವರು 200 ಕ್ಕಿಂತಲೂ ಹೆಚ್ಚು ಪ್ರದರ್ಶನಗಳಲ್ಲಿ ಯಕ್ಷಗಾನದ ಪಾತ್ರಗಳಿಗೆ ಜೀವ ತುಂಬಿದ್ದಾರೆ. ಕಟೀಲು ಮೇಳದ ಯಕ್ಷಗಾನ ಕಲಾವಿದರಾದ ಶ್ರೀ ರಾಮಚಂದ್ರ ಮುಕ್ಕ ಇವರ ಬಳಿ ಯಕ್ಷಗಾನ ನಾಟ್ಯ ತರಬೇತಿಯನ್ನು ಪಡೆಯುತ್ತಿದ್ದಾರೆ. ಪ್ರಸಿದ್ಧ ಯಕ್ಷಗಾನ ಕಲಾವಿದರೊಬ್ಬರನ್ನು ಗುರುಗಳಾಗಿ ಪಡೆದ ಆಯುಷ್ ಯಕ್ಷಗಾನದಲ್ಲಿಯೂ ಕೂಡ ಅಪ್ರತಿಮ ಕಲಾವಿದನಾಗಿ ಹೊರ ಹೊಮ್ಮುವುದರಲ್ಲಿ ಸಂಶಯವಿಲ್ಲ. ಆಯುಷ್ ಈ ಸಮಾಜದ ಪ್ರತಿಭಾವಂತ ಬಾಲಕ. ಸಕಲಕಲಾವಲ್ಲಭರಾಗಿ ಈ ಸಮಾಜಕ್ಕೆ ಕೊಡುಗೆಯಾಗಬೇಕೆಂಬುದು ಮಕ್ಕಳ ಜಗಲಿಯ ಹಾರೈಕೆ.
................................. ತಾರಾನಾಥ್ ಕೈರಂಗಳ
ಮಕ್ಕಳ ಜಗಲಿ
ಮಕ್ಕಳ ಡಿಜಿಟಲ್ ಆನ್ಲೈನ್ ಪತ್ರಿಕೆ
ದಕ್ಷಿಣ ಕನ್ನಡ ಜಿಲ್ಲೆ.
Mob : 9844820979
******************************************