-->
ಗುರುಪೂರ್ಣಿಮೆ

ಗುರುಪೂರ್ಣಿಮೆ

ಲೇಖನ : ಗುರುಪೂರ್ಣಿಮೆ 
ಲೇಖಕರು : ವಿ ಶ್ರೀ ರಾಮಮೂರ್ತಿ
ನಿವೃತ್ತ ವಿಜ್ಞಾನ ಶಿಕ್ಷಕರು
"ಗೌರಿ ಕೃಪಾ" 
ವಾಟೆತ್ತಿಲ, ಅಂಚೆ: ಬಾಯಾರು 
ಮಂಜೇಶ್ವರ ತಾಲೂಕು, 
ಕಾಸರಗೋಡು ಜಿಲ್ಲೆ, ಕೇರಳ.
ಮೊಬೈಲ್ : +91 94819 74949


     ಮಕ್ಕಳೇ, ಧೋ ಎಂದು ಭೋರ್ಗರೆದು ಸುರಿಯುತ್ತಿರುವ ಮಳೆಯ ನಿಮಿತ್ತ ಪಾಠ ಪ್ರವಚನಗಳು ಸ್ವಲ್ಪ ಮಟ್ಟಿನ ವಿರಾಮ ಪಡೆದಿವೆ. ಹಿಂದಿನ ಕಾಲದಲ್ಲಿ ಆಷಾಢ ಮಾಸದಲ್ಲಿ ಇಂತಹ ಮಳೆಗಳು ಸಹಜವಾದರೂ ಪರಿಸರ ವಿನಾಶದಿಂದ ಇತ್ತೀಚೆಗಂತೂ ಮಳೆ ತುಂಬಾ ಕಡಿಮೆ. ಇಂತಹ ಆಷಾಢ ಮಳೆಯ ಸಂದರ್ಭದಲ್ಲಿ ಆಷಾಢ ಹುಣ್ಣಿಮೆಯಂದು ಆಚರಿಸಲ್ಪಡುವ ಗುರುಪೂರ್ಣಿಮ ಉತ್ಸವದ ಕುರಿತಾಗಿ ಕೆಲವೊಂದು ವಿಚಾರಗಳನ್ನು ತಿಳಿಯೋಣ. ಜುಲೈ 21ರಂದು ಬರುವ ಹುಣ್ಣಿಮೆಯೇ ಈ ವಿಶೇಷ ಹುಣ್ಣಿಮೆ. ಈ ದಿನವನ್ನು ವ್ಯಾಸ ಪೂರ್ಣಿಮ ಅಥವಾ ಗುರು ಪೂರ್ಣಿಮ ಎಂದು ಕರೆಯುವರು. 
      ಪರಾಶರ ಮಹರ್ಷಿ ಮತ್ತು ಸತ್ಯವತಿ ದಂಪತಿಗೆ ಆಷಾಢ ಮಾಸದ ಹುಣ್ಣಿಮೆಯ ದಿನದಂದು ಒಂದು ಗಂಡು ಮಗುವಾಗುತ್ತದೆ. ಆ ಮಗುವಿಗೆ ಕೃಷ್ಣ ದ್ವೈಪಾಯನ ಎಂಬ ಹೆಸರನ್ನಿಡುತ್ತಾರೆ. ಮುಂದೆ ಇವರು ಮಹಾಜ್ಞಾನಿಯಾಗಿ ಬೆಳೆದು ವೇದಗಳನ್ನು ಋಗ್ವೇದ, ಯಜುರ್ವೇದ, ಸಾಮವೇದ, ಅಥರ್ವಣ ವೇದಗಳಾಗಿ ವಿಂಗಡಿಸಿ ತಮ್ಮ ಶಿಷ್ಯರಿಗೆ ಭೋಧಿಸಿ ವೈದಿಕ ಅಧ್ಯಯನವನ್ನು ಸುಗಮಗೊಳಿಸಿದ್ದಲ್ಲದೆ ಮಹಾಕಾವ್ಯ ಮಹಾಭಾರತವನ್ನು ಹಾಗೂ 18 ಪುರಾಣಗಳನ್ನು ರಚಿಸಿದ ಮಹಾನುಭಾವರು. ಮುಂದೆ ಅವರು ವ್ಯಾಸ ಮಹರ್ಷಿ (ವ್ಯಾಸ ಅಂದರೆ ವಿಂಗಡಿಸು ಅಥವಾ ರಚಿಸು ಎಂದರ್ಥ) ಗಳೆಂದು ಪ್ರಸಿದ್ಧಿ ಪಡೆಯುತ್ತಾರೆ. ಇವರನ್ನು ಆದಿ ಗುರುಗಳೆಂದೂ ಕರೆಯುತ್ತಾರೆ. ಭಾರತದಲ್ಲಿ ಇವರ ಜನ್ಮದಿನವನ್ನು ವ್ಯಾಸ ಪೂರ್ಣಿಮೆ ಅಥವಾ ಗುರು ಪೂರ್ಣಿಮೆಯಾಗಿ ಆಚರಿಸುವರು.
     ಭಾರತೀಯ ಸಂಸ್ಕೃತಿಯಲ್ಲಿ ಗುರುವಿಗೆ ಮಹತ್ವದ ಸ್ಥಾನವಿದೆ. ಗುರುವಿನ ಮಹತ್ವವನ್ನು ಸಾರುವ ಶ್ಲೋಕವೇ ಇದೆ. ಗುರುಬ್ರಹ್ಮ ಗುರು ವಿಷ್ಣುಃ ಗುರುದೇವೋ ಮಹೇಶ್ವರಃ ಗುರು ಸಾಕ್ಷಾತ್ ಪರಬ್ರಹ್ಮ ತಸ್ಮೈಶ್ರೀ ಗುರವೇ ನಮಃ ಎಂದು ಗುರುವನ್ನು ಸ್ಮರಿಸುತ್ತೇವೆ. ಬ್ರಹ್ಮ, ವಿಷ್ಣು, ಮಹೇಶ್ವರ ಮಾತ್ರವಲ್ಲ ಸಾಕ್ಷಾತ್ ಪರಬ್ರಹ್ಮನಾಗಿರುವ ಗುರುವೇ ನಿನಗೆ ನನ್ನ ನಮನಗಳು ಎಂಬುದೇ ಈ ಶ್ಲೋಕದ ಅರ್ಥ. "ಗುರುವಿನ ಗುಲಾಮನಾಗುವ ತನಕ ದೊರೆಯದಣ್ಣ ಮುಕುತಿ" ಎಂದು ದಾಸವರೇಣ್ಯರಾದ ಪುರಂದರ ದಾಸರು ಗುರುವಿನ ಮಹತ್ವವನ್ನು ವರ್ಣಿಸುತ್ತಾರೆ. ಗುರು ಎಂಬ ಎರಡಕ್ಷರದ ಪದಕ್ಕೆ ವಿಶೇಷವಾದ ಅರ್ಥವಿದೆ. ಗುಕಾರಾಂಧಕಾರಶ್ಚ‌ಃ ರಕಾರ‌ಃ ತನ್ವಿರೋಧಕಮ್. ಇಲ್ಲಿ 'ಗು' ಅಂದರೆ ಕತ್ತಲೆ ಅಥವಾ ಅಜ್ಞಾನ 'ರ' ಅಂದರೆ ನಾಶಪಡಿಸುವುದು. ಅಜ್ಞಾನವೆಂ ಕತ್ತಲೆಯನ್ನು ದೂರಗೊಳಿಸಿ ಜ್ಞಾನವೆಂಬ ಬೆಳಕನ್ನು ನೀಡುವವನೇ ಗುರು.
ಅಖಂಡಮಂಡಲಾಕಾರಂ ವ್ಯಾಪ್ತಂ ಯೇನ ಚರಾಚರಮ್ |
ತತ್ಪದಂ ದರ್ಶಿತಂ ಯೇನ
ತಸ್ಮೈ ಶ್ರೀ ಗುರವೇ ನಮಃ || 
ಯಾವುದರಿಂದ ಈ ಅಖಂಡ ಮಂಡಲಾಕಾರವಾದ ಜಗತ್ತು ಆವರಿಸಲ್ಪಟ್ಟಿದೆಯೋ, ಅದರ ಬ್ರಹ್ಮವೆಂಬ ಪರತತ್ವದ ಮೂಲವನ್ನು ತೋರಿಸಿದ ಗುರುವಿಗೆ ನಮಸ್ಕಾರಗಳು. 'ಆಚಾರ್ಯ ದೇವೋಭವ' ಎಂದು ಗುರುಗಳಲ್ಲಿ ದೇವರನ್ನು ಕಾಣುವುದು ಇದಕ್ಕೆ ಅಲ್ಲವೆ?
     ಇತ್ತೀಚೆಗಿನ ದಿನಗಳಲ್ಲಿ ಗುರು - ಶಿಷ್ಯರ ಸಂಬಂಧಗಳು ದೂರವಾಗುತ್ತಿರುವ ಸಂದರ್ಭದಲ್ಲಿ ಗುರು ಶಿಷ್ಯರ ಸಂಬಂಧಗಳನ್ನು ಮತ್ತಷ್ಟು ಗಟ್ಟಿಗೊಳಿಸೋಣ. ಈ ಸುದಿನದಂದು ಅಜ್ಞಾನದ ಅಂಧಕಾರವನ್ನು ಹೋಗಲಾಡಿಸಿ ಸುಜ್ಞಾನದ ಬೆಳಕನ್ನು ನೀಡುವ ಗುರುಗಳಿಗೆ ಸಾಷ್ಟಾಂಗ ಪ್ರಣಾಮಗಳನ್ನು ಸಲ್ಲಿಸೋಣ. ಎಲ್ಲರಿಗೂ ಗುರು ಪೂರ್ಣಿಮೆಯ ಶುಭಾಶಯಗಳು.
................................... ವಿ ಶ್ರೀ ರಾಮಮೂರ್ತಿ
ನಿವೃತ್ತ ವಿಜ್ಞಾನ ಶಿಕ್ಷಕರು
"ಗೌರಿ ಕೃಪಾ" 
ವಾಟೆತ್ತಿಲ, ಅಂಚೆ: ಬಾಯಾರು 
ಮಂಜೇಶ್ವರ ತಾಲೂಕು, 
ಕಾಸರಗೋಡು ಜಿಲ್ಲೆ, ಕೇರಳ.
ಮೊಬೈಲ್ : +91 94819 74949
********************************************


Ads on article

Advertise in articles 1

advertising articles 2

Advertise under the article