ನಿಷ್ಪಾಪಿ ಸಸ್ಯಗಳು : ಸಂಚಿಕೆ - 58
Wednesday, July 10, 2024
Edit
ನಿಷ್ಪಾಪಿ ಸಸ್ಯಗಳು : ಸಂಚಿಕೆ - 58
ಪ್ರೀತಿಯ ಮಕ್ಕಳೇ... ಹೇಗಿದ್ದೀರಿ...? ಆಧುನಿಕತೆಯ ಭರಾಟೆಯಲ್ಲಿ ಭೋರ್ಗರೆವ ಮಳೆಯ ನಡುವೆಯೂ ಹೂಕೋಸು, ಬಟಾಟೆ, ಟೊಮೇಟೊ, ಎಲೆಕೋಸುಗಳಂತಹ ತರಕಾರಿಗಳನ್ನು ಕ್ರಿಮಿನಾಶಕ ದಲ್ಲಿ ಮುಳುಗಿದ್ದರೂ ನಾವು ಮುಗಿಬಿದ್ದು ಖರೀದಿಸಿ ಸೇವಿಸುತ್ತೇವೆ. ನಾವು ನಮ್ಮ ಹಿತ್ತಿಲು ಅಥವಾ ಗುಡ್ಡ ಬೈಲು ಗದ್ದೆಗಳ ನಡುವೆ ಕಣ್ಣು ಹಾಯಿಸುವುದನ್ನೇ ಬಿಟ್ಟಿದ್ದೇವೆ ಎಂದನಿಸುತ್ತಿಲ್ಲವೇ...?
ಆಯಾ ಋತುಮಾನಗಳಲ್ಲಿ ದೊರೆಯುವ ಹಣ್ಣು, ತರಕಾರಿಗಳು ಹವಾಮಾನಕ್ಕೆ ಬೇಕಾದ ಆರೋಗ್ಯ ಶಕ್ತಿ ನೀಡುತ್ತವೆ. ಉದಾಹರಣೆಗಾಗಿ ನಾನಿಂದು ಆಯ್ಕೆ ಮಾಡಿಕೊಂಡಿರುವ ಸಸ್ಯವೆಂದರೆ ಕಾಡು ಸುವರ್ಣ ಗಡ್ಡೆ. ಇದನ್ನು ಆಂಗ್ಲ ಭಾಷೆಯಲ್ಲಿ ಡ್ರ್ಯಾಗನ್ ಕಾಂಡಯಾಮ್ ಎಂದಿದ್ದರೆ ಹಿಂದಿಯಲ್ಲಿ ಜಂಗ್ಲಿ ಸೂರನ್, ತುಳುವಿನಲ್ಲಿ ಕೇರಿ ಕೇನೆ, ಪುಂಡಿ ಕೇನೆ ಎಂದು ಕರೆಸಿಕೊಳ್ಳುತ್ತದೆ.
ಕಪ್ಪೆಗಳು ಕೂಗತೊಡಗಿದರೆ ನಮ್ಮ ರೈತರು ಮಳೆಗಾಲ ಸನ್ನಿಹಿತವಾಗಿದೆ ಎಂದು ಅರ್ಥೈಸಿಕೊಂಡಂತೆ ಗುಡ್ಡಗಾಡಿನ, ಬುಡಕಟ್ಟಿನ ಜನ ಈ ನಿಷ್ಪಾಪಿ ಸಸ್ಯದ ಮೊಳಕೆ ಕಂಡರೆ ಸಾಕು ಮಳೆ ಬಂತೆಂದೇ ನಿರ್ಧರಿಸುತ್ತಾರೆ. ಈ ಗಿಡದಡಿ ಯಾವತ್ತೂ ಮಣ್ಣು ಫಲವತ್ತಾಗಿರುತ್ತದೆ. ಇವುಗಳ ತ್ಯಾಜ್ಯ ಸೂಕ್ಷ್ಮಜೀವಿಗಳಿಗೆ, ಎರೆಹುಳು ಹಾಗೂ ಇನ್ನಿತರ ಜೀವಿಗಳಿಗೆ ಆಹಾರವಾಗುತ್ತದೆ. ಕಾಡು ಸುವರ್ಣಗಡ್ಡೆಯಲ್ಲಿ ಸಾಕಷ್ಟು ಆರೋಗ್ಯಕರ ಅಂಶಗಳಿವೆ. ಇದರಲ್ಲಿರುವ ಔಷಧೀಯ ಅಂಶ ಕರುಳಿನ ಬ್ಯಾಕ್ಟೀರಿಯಾಗಳನ್ನು ಪುನ:ಸ್ಥಾಪಿಸಲು ಸಹಾಯಮಾಡುತ್ತದೆ. ವಿಟಮಿನ್ D ಹಾಗೂ B12 ಸಮೃದ್ಧವಾಗಿದ್ದು ನಾರಿನಂಶ, ಪೋಷಕಾಂಶವನ್ನು ಹೊಂದಿದೆ. ಜೀರ್ಣಕ್ರಿಯೆ ವೃದ್ಧಿಸುವ ಜೊತೆಗೆ ಅನಗತ್ಯ ತೂಕ ಇಳಿಸಲು ಸಹಕರಿಸುತ್ತದೆ. ಕೂದಲು, ತ್ವಚೆಯ ಹೊಳಪಿಗೆ, ಮೆದುಳಿನ ಕ್ಷಮತೆ, ರಕ್ತಹೀನತೆ, ನೋವು ನಿವಾರಕ, ಮೂಲವ್ಯಾಧಿ, ಉರಿಯೂತ ಇತ್ಯಾದಿಗಳಿಗೆ ಉಪಕಾರಿಯಾಗಿದೆ. ಜನಾಂಗೀಯ ಸಮುದಾಯಗಳು ಈ ಸಸ್ಯದ ಬಳಕೆಯ ಮೂಲಕ ಆರೋಗ್ಯ ಪ್ರಯೋಜನಗಳನ್ನು ಪಡೆಯುತ್ತಿದ್ದರೂ ಆಗಿರುವ ಸಂಶೋಧನೆಗಳು ಬಹಳ ಕಡಿಮೆ. ಭಾರತಕ್ಕೆ ಸ್ಥಳೀಯ ಸಸ್ಯವಾಗಿದ್ದು ಪಶ್ಚಿಮ ಘಟ್ಟ, ಕೇರಳ, ಮಹಾರಾಷ್ಟ್ರ, ಉತ್ತರ ಭಾರತದ ರಾಜ್ಯಗಳಲ್ಲಿ ಮಾತ್ರವಲ್ಲದೆ ಅಂಡಮಾನ್ ನಿಕೋಬಾರ್ ಗಳಲ್ಲಿ ಕಾಣಸಿಗುತ್ತದೆ.
..................... ವಿಜಯಾ ಬಿ ಶೆಟ್ಟಿ ಸಾಲೆತ್ತೂರು


ಲೇಖಕರು: ವಿಜಯಾ ಬಿ ಶೆಟ್ಟಿ ಸಾಲೆತ್ತೂರು
ಸಹ ಶಿಕ್ಷಕಿ, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ
ಬಾಳೆಪುಣಿ (ಇರಾ), ಬಂಟ್ವಾಳ ತಾಲೂಕು
ದಕ್ಷಿಣ ಕನ್ನಡ ಜಿಲ್ಲೆ
ನಮ್ಮ ಹಿರಿಯರ ಕಾಲದಲ್ಲಿ ಸುರಿವ ವಿಪರೀತ ಮಳೆಗೆ ಪ್ರತ್ಯಕ್ಷವಾಗುವ ನಾನಾ ರೋಗಗಳಿಂದ ರಕ್ಷಣೆ ಪಡೆದುಕೊಳ್ಳುವುದು ಅನಿವಾರ್ಯವಾಗಿತ್ತು. ಇಂದಿನಂತೆ ಔಷಧಿಗಳು ವೈದ್ಯರು, ಆಸ್ಪತ್ರೆಗಳ ಕಲ್ಪನೆಗಳೇ ಇರಲಿಲ್ಲ. ಹೀಗಿರುವಾಗ ರೋಗನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳಲು ಸಹಾಯ ಮಾಡುತ್ತಿದ್ದುದು ಕೆಸು, ಒಂದೆಲಗ, ತಗಚೆ, ನುಗ್ಗೆ, ಕಾಡು ಸುವರ್ಣಗಡ್ಡೆ, ಹಲಸು, ಕಲ್ಲು ಹುಳಿ, ಬಿದಿರಿನ ಚಿಗುರು ಮೊದಲಾದುವು.
ನೀವು ಗುಡ್ಡ ಬೆಟ್ಟಗಳ ತಪ್ಪಲು, ಕಲ್ಲುಗಳ ಸಂದಿ, ಬೆಟ್ಟ ಬೈಲು ಗದ್ದೆಗಳ ಬದುಗಳಲ್ಲಿ ಹೋಗುವವರಾಗಿದ್ದರೆ ಈ ಗಿಡ ಕಾಣದೆ ಇರದು. ಬಹಳ ವಿಶೇಷವಾಗಿ ನಿಮ್ಮ ಗಮನ ಸೆಳೆಯಬಲ್ಲ ಈ ಸಸ್ಯ ನಿಮ್ಮನ್ನು ಹಿಡಿದು ನಿಲ್ಲಿಸುವುದಂತೂ ದಿಟ. ಕೃಷಿಕರಿಂದ ಬೆಳೆಸಲ್ಪಡುವ ಸುವರ್ಣಗಡ್ಡೆಯನ್ನು ನೀವು ನೋಡಿರಬಹುದು. ಗಡ್ಡೆಯನ್ನು ಸವಿದಿರಬಹುದು. ದಪ್ಪಗಿರುವ ಅದರ ಗಿಡದ ಕಾಂಡ ಬಿಳಿ ಹಸಿರು ಮಚ್ಚೆ ಹೊಂದಿದ್ದರೆ ಕಾಡು ಸುವರ್ಣ ಗಡ್ಡೆಯ ಕಾಂಡ ಕಪ್ಪು ತಿಳಿಹಸಿರು ಬಣ್ಣದ ಮಚ್ಚೆಗಳನ್ನು ಮೈತುಂಬ ಹೊದ್ದಿರುತ್ತದೆ. ಪಕ್ಕನೆ ಕೇರೆಹಾವನ್ನೆ ನೋಡಿದಂತೆ ಭಾಸವಾಗುವುದರಿಂದ ತುಳು ಭಾಷೆಯಲ್ಲಿ ಕೇರಿ ಕೇನೆ ಎಂದೆನಿಸಿಕೊಳ್ಳುತ್ತದೆ! ಚಿಕ್ಕ ಮರದಂತೆ ಮನೆಯಲ್ಲಿ ಬೆಳೆವ ಸುವರ್ಣಗಡ್ಡೆಯಂತೆಯೇ ಕಾಡು ಸುವರ್ಣಗಡ್ಡೆ ಗಿಡದ ಲಕ್ಷಣಗಳಿದ್ದರೂ ಭೂಗತ ಗಡ್ಡೆಯ ಮೇಲ್ಭಾಗದಿಂದ ಕಾಂಡವು 20 ರಿಂದ 40 cm ನಷ್ಟು ಎತ್ತರ ಮಾತ್ರ ಬೆಳೆಯುವುದು. ತುದಿಯಲ್ಲಿ ಒಂದೇ ಒಂದು ಎಲೆ ಅರಳುವುದಾದರೂ ಗಾತ್ರದಲ್ಲಿ ತುಂಬಾ ಸಣ್ಣಗಿರುತ್ತದೆ. ಇದರ ಟೊಳ್ಳಾದ ಕಾಂಡವೂ ಬಹಳ ತೆಳ್ಳಗಿರುತ್ತದೆ. ತ್ರಿಪಕ್ಷೀಯ ಸಂಯುಕ್ತ ಎಲೆಗಳು ಅಂಡಾಕಾರದಲ್ಲಿದ್ದು ಎರಡನೇಬಾರಿ ವಿಭಜನೆಗೊಂಡು ಸಮತಲದಲ್ಲಿ ಕೊಡೆಯಂತೆ ಹರಡಿರುತ್ತದೆ.
ಇದರಲ್ಲಿ ಲಂಬವಾಗಿ ಬೆಳೆದ ದಂಟಿನ ತುದಿಯಲ್ಲಿ ಒಂದೇ ಎಸಳು ಶಂಕುವಿನಾಕಾರದಲ್ಲಿ ಸುರುಳಿಯಂತೆ ಸುತ್ತಿ ಒಂದು ಬದಿ ದೀರ್ಘವಾಗಿರುತ್ತದೆ. ನಡುವೆ 8 _ 10 cm ಉದ್ದನೆಯ ಪುಷ್ಪಮಂಜರಿ ಕಾಣಿಸುತ್ತದೆ. ನೊಣಗಳು ಹಾಗೂ ಕೆಲವು ಜಾತಿಯ ಕೀಟಗಳು ಪರಾಗಸ್ಪರ್ಶಕ್ಕೆ ಸಹಕರಿಸುತ್ತವೆ. ಕೇಸರದಂಡದುದ್ದಕ್ಕೂ ಪುಟ್ಟ ಕಾಯಿಗಳು ವೃತ್ತಾಕಾರದಲ್ಲಿ ಜೋಡಣೆಗೊಳ್ಳುತ್ತಾ ಮೇಲ್ಮುಖವಾಗಿ ನಿಂತ ಪುಟಾಣಿ ಬಾಳೆಗೊನೆಯಂತೆ ಕಾಣಿಸುತ್ತದೆ. ಒತ್ತೊತ್ತಾಗಿ ಬೆಳೆದ ಹಸಿರು ಕಾಯಿಗಳು ಬೆಳೆದು ಪಕ್ವವಾದಾಗ ಕೆಂಪಾಗಿ ಹಕ್ಕಿಗಳಿಗೆ ಔತಣವೀಯುತ್ತದೆ. ಪಕ್ವವಾದ ಒಂದೇ ಒಂದು ಹೂಗೊಂಚಲಾದರೂ 50 ಕ್ಕಿಂತಲೂ ಹೆಚ್ಚು ಕಾಯಿಗಳಿರುತ್ತವೆ.
ಅರೇಸಿ (Araceae) ಕುಟುಂಬದ ಕೂಸು ಈ ಕಾಡು ಸುವರ್ಣಗಡ್ಡೆ. ಅಮಾರ್ಫೋಫಾಲಸ್ ಕಮ್ಯಟಟಸ್ (Amorphophallus commuortatus) ಎಂಬ ಶಾಸ್ತ್ರೀಯ ಹೆಸರು ಪಡೆದಿದೆ.
ಕಂದ ಮೂಲಗಳು ಒಂದಲ್ಲ ಒಂದು ರೀತಿಯಲ್ಲಿ ಮಾನವನ ಬದುಕನ್ನು ಮುನ್ನಡೆಸಿವೆ. ಅವುಗಳಿಂದ ನಾನಾ ರೀತಿಯ ತಿಂಡಿ ತಿನಿಸನ್ನು ತಯಾರಿಸುತ್ತಿದ್ದರು. ಕಾಡು ಸುವರ್ಣಗಡ್ಡೆಯಿಂದ ಸಾಂಬಾರು, ಪಲ್ಯ, ಬಾಜಿ, ಸಿಹಿತಿಂಡಿ, ದೋಸೆ ಗಳನ್ನು ತಯಾರಿತ್ತಿದ್ದುದಲ್ಲದೇ ಸಿಗಡಿ ಮೀನಿನ ಜೊತೆ ವಿಶೇಷ ರುಚಿ ನೀಡುವುದೆಂದು ಕಂಡುಕೊಂಡಿದ್ದರು.
ಮಕ್ಕಳೇ, ಮನುಷ್ಯನ ದುರಾಸೆಗಿಂದು ರಾತ್ರಿ ಬೆಳಕಾಗುವಾಗ ಎತ್ತರೆತ್ತರವಿದ್ದ ಗುಡ್ಡಗಳು ನೆಲಸಮವಾಗುತ್ತಿವೆ. ಕಾಡು ಸುವರ್ಣಗಡ್ಡೆಯಂತಹ ಅದೆಷ್ಟೋ ಸಸ್ಯಗಳು ಕಾಣೆಯಾಗುತ್ತಿವೆ. ಇದರ ಬಗ್ಗೆ ನಾವು ಗಮನ ಹರಿಸಿ ಇಂತಹ ಗಿಡಗಳ ರಕ್ಷಣೆ ಮಾಡಲೇಬೇಕಲ್ಲವೇ...?
ಸರಿ ಮಕ್ಕಳೇ, ಮುಂದಿನ ವಾರ ಇನ್ನೊಂದು ನಿಷ್ಪಾಪಿ ಸಸ್ಯದ ಜೊತೆ ಭೇಟಿಯಾಗುತ್ತೇನೆ.. ನಮಸ್ಕಾರ.
ಸಹ ಶಿಕ್ಷಕಿ, ಸರ್ಕಾರಿ ಹಿರಿಯ ಪ್ರಾಥಮಿಕ
ಶಾಲೆ , ಬಾಳೆಪುಣಿ (ಇರಾ)
ಬಂಟ್ವಾಳ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
Mob : +91 78925 87191
*******************************************