-->
ಮಕ್ಕಳಿಗಾಗಿ ವಿಜ್ಞಾನ : ಸಂಚಿಕೆ - 36

ಮಕ್ಕಳಿಗಾಗಿ ವಿಜ್ಞಾನ : ಸಂಚಿಕೆ - 36

ಮಕ್ಕಳಿಗಾಗಿ ವಿಜ್ಞಾನ : ಸಂಚಿಕೆ - 36
ಲೇಖಕರು : ದಿವಾಕರ ಶೆಟ್ಟಿ ಎಚ್
ನಿವೃತ್ತ ಪ್ರವಾಚಕರು
ಸರಕಾರಿ ಶಿಕ್ಷಕ ಶಿಕ್ಷಣ ಮಹಾವಿದ್ಯಾಲಯ
ಮಂಗಳೂರು, ದಕ್ಷಿಣ ಕನ್ನಡ ಜಿಲ್ಲೆ
Mob: 9448571203

         
ಪ್ರೀತಿಯ ಮಕ್ಕಳೇ.... ಕಳೆದ ವಾರ ರಕ್ತವನ್ನು ಒತ್ತುವವರ್ಯಾರು ಎಂಬ ಬಗ್ಗೆ ಚರ್ಚಿಸಿದೆವು. ಸ್ನಾಯುಗಳು ರಕ್ತವನ್ನೊತ್ತುವ ಮತ್ತು ರಕ್ತವನ್ನೆತ್ತುವ ಕೆಲಸ ಮಾಡುತ್ತವೆಂದಾದರೆ ಸ್ನಾಯುಗಳನ್ನು ಚಟುವಟಿಕೆಯಿಂದ ಇರಿಸಿಕೊಳ್ಳುವುದು ಮುಖ್ಯ ಎಂಬುದು ನೀವು ಅರಿತಿದ್ದೀರಿ. ಪಕ್ಷವಾತದ ಸಂದರ್ಭದಲ್ಲಿ ಕೂಡಲೇ ಪಿಸಿಯೋಥೆರಪಿ ಏಕೆ ಆರಂಭಿಸುತ್ತಾರೆ ಎನ್ನುವುದು ಅರ್ಥವಾಯಿತೇ? ಸುದೀರ್ಘಾವಧಿಗೆ ಕೋಮಾದಲ್ಲಿರುವ ವ್ಯಕ್ತಿಗೆ ಹೃದಯ ಮತ್ತು ಸ್ನಾಯುಗಳು ಏಕೆ ದುರ್ಬಲಗೊಳ್ಳುತ್ತವೆ ಎನ್ನುವುದಕ್ಕೂ ಉತ್ತರ ದೊರೆತಿರಬಹುದು. ದೇಹದ ಮೂಲೆ ಮೂಲೆಯಿಂದ ರಕ್ತವನ್ನು ಸ್ನಾಯುಗಳು ಹೃದಯಕ್ಕೆ ಕಳುಹಿಸಿದರೆ ಹೃದಯ ಇದಕ್ಕೆ ಪ್ರತಿಯಾಗಿ ಆಮ್ಲಜನಕ ಯಕ್ತ (oxygenated blood) (ಇದನ್ನು ಶುದ್ಧ ರಕ್ತ ಎಂದು ಹೇಳುವುದು ಸರಿಯಲ್ಲ) ರಕ್ತವನ್ನು ಸ್ನಾಯುಗಳಿಗೆ ಕಳುಹಿಸುವುದು. ಈ ಮೂಲಕ ಸ್ನಾಯುಗಳು ಹೃದಯಕ್ಕೆ ರಕ್ತ ಪರಿಚಲನೆಯಲ್ಲಿ ಸಹಕರಿಸುತ್ತವೆ ಎನ್ನುವದನ್ನು ನಾವು ನೆನಪಿಡಬೇಕು.

ಸಂಧಿಪದಿಗಳಲ್ಲಿ ರಕ್ತವು ತೆರೆದ ಅವಕಾಶಗಳಲ್ಲಿ ಹರಿಯುವುದರಿಂದ ಅದನ್ನು ತೆರೆದ ಸಾಗಾಣಿಕಾ ವ್ಯೂಹ (open circulatory system) ಎಂದರೆ ಅದು ಮುಚ್ಚಿದ ನಾಳಗಳಲ್ಲಿ ಹರಿದರೆ ಮುಚ್ಚಿದ ಸಾಗಾಣಿಕಾ ವ್ಯೂಹ (closed circulatory system) ಎಂದಾಗುತ್ತದೆ. ಮಾನವನಲ್ಲಿ ಮುಚ್ಚಿದ ಸಾಗಾಣಿಕಾ ವ್ಯೂಹವಿದೆ. ಹೃದಯದಿಂದ ರಕ್ತವನ್ನೊಯ್ಯುವ ರಕ್ತನಾಳಗಳು ಲೋಮನಾಳಗಳಲ್ಲಿ ಕೊನೆಗೊಳ್ಳುತ್ತವೆ. ಲೋಮನಾಳಗಳು ಒಟ್ಟು ಸೇರಿ ಉಂಟಾಗುವ ರಕ್ತನಾಳಗಳು ಹೃದಯಕ್ಕೆ ರಕ್ತವನ್ನು ಹೊತ್ತು ತರುತ್ತದೆ ಎಂಬುದು ತಿಳಿದಿತ್ತು. ಹೃದಯದಿಂದ ಬರುವ ರಕ್ತ ಲೋಮನಾಳಗಳಾಗಿ ಒಡೆದು ಖಾಲಿ ಅವಕಾಶಗಳಲ್ಲಿ ಹರಿಯುತ್ತದೆ. ಈ ಖಾಲಿ ಅವಕಾಶಗಳಿಂದ ರಕ್ತವನ್ನು ಲೋಮನಾಳಗಳು ಸಂಗ್ರಹಿಸಿ ಹೃದಯಕ್ಕೆ ಕೊಂಡೊಯ್ಯುತ್ತವೆ ಎಂದು ಬಹಳ ಕಾಲದ ವರೆಗೆ ನಂಬಲಾಗಿತ್ತು. ನಾವು ಬಿದ್ದು ತರಚಿ ಹೋದಾಗ ರಕ್ತ ಒಸರುತ್ತದಲ್ಲ ಅದು ಈ ವಾದಕ್ಕೆ ಪುಷ್ಟಿ ನೀಡಿತ್ತು. ಆದರೆ 1628 ರಲ್ಲಿ ವಿಲಿಯಂ ಹಾರ್ವೆ ಎಂಬ ಬ್ರಿಟಿಷ್ ಅಂಗರಚನಾ ಶಾಸ್ತ್ರಜ್ಞ ರಕ್ತವು ಎಲ್ಲಿಯೂ ಖಾಲಿ ಅವಕಾಶಗಳಲ್ಲಿ ಹರಿಯುವುದಿಲ್ಲ ಲೋಮನಾಳಾಗಿ ಒಡೆದ ರಕ್ತನಾಳಗಳು ಪುನಃ ಒಟ್ಟು ಸೇರಿ ಹೃದಯಕ್ಕೆ ರಕ್ತ ಸಾಗಿಸುಸುತ್ತವೆ ಎಂದ. ಆದ್ದರಿಂದ ಮನುಕುಲ ಹಾರ್ವೆಯವರನ್ನು ರಕ್ತ ಪರಿಚಲನೆಯ ಪಿತಾಮಹ ಎಂದು ಗೌರವಿಸುತ್ತದೆ.

ನಾವು ರಕ್ತದ ಬಗ್ಗೆ ಹೇಳುವಾಗ ಶುದ್ಧರಕ್ತ ಮತ್ತು ಅಶುದ್ದ ರಕ್ತ ಎನ್ನುತ್ತೇವೆ. ರಕ್ತದಲ್ಲಿ ಇರುವ ಪ್ರಮುಖ ಕಲ್ಮಶಗಳೆಂದರೆ ಇಂಗಾಲದ ಡೈಆಕ್ಸೈಡ್, ಅಮೋನಿಯ, ಯೂರಿಕ್ ಆಮ್ಲ, ಯೂರಿಯಾ ಮತ್ತಿತರ ವಸ್ತುಗಳು. ಇವುಗಳಲ್ಲಿರುವ ಇಂಗಾಲದ ಡೈಆಕ್ಸೈಡ್ ಅನ್ನು ಆಮ್ಲಜನಕ ಸೋಸಿದರೆ ಯೂರಿಯಾ, ಯೂರಿಕ್ ಆಮ್ಲ, ಅಮೋನಿಯಾ ಇತ್ಯಾದಿಗಳನ್ನು ಮೂತ್ರಜನಕಾಂಗ, ಚರ್ಮ ಮಾಡುತ್ತವೆ. ಆದ್ದರಿಂದ ರಕ್ತ ಶುದ್ದೀಕರಣ ರಕ್ತ ಪರಿಚಲನೆಯ ಉದ್ದಕ್ಕೂ ನಡೆಯುವ ಕ್ರಿಯೆ. ಅಂದರೆ ರಕ್ತ ಶ್ವಾಸಕೋಶಕ್ಕೆ ಹೋಗಿ ಬಂದಿದೆ ಎಂದ ಕೂಡಲೇ ಅದು ಶುಧ್ಧ ರಕ್ತ ಎನ್ನುವುದು ತಪ್ಪಾಗುತ್ತದೆ. ಅದು ಇಂಗಾಲದ ಡೈಆಕ್ಸೈಡ್ ಅನ್ನು ಬಿಟ್ಟುಕೊಟ್ಟ ಆಮ್ಲಜನಕವನ್ನು ಹೀರಿಕೊಂಡಿರುತ್ತದೆ. ಅಂದರೆ ಅದು ಕೇವಲ ಆಮ್ಲಜನಕ ಯುಕ್ತ ರಕ್ತ ಅಷ್ಟೇ. 
 
ಹೃದಯದಿಂದ ಹೊರಕ್ಕೆ ರಕ್ತವನ್ನು ಸಾಗಿಸುವ ರಕ್ತನಾಳಗಳು ಅಪಧಮನಿಗಳು (artery) ಮತ್ತು ಹೃದಯಕ್ಕೆ ರಕ್ತವನ್ನು ತಂದು ಸುರಿಯುವ ರಕ್ತನಾಳಗಳು ಅಭಿಧಮನಿಗಳು. ನೀವು ಹಾರ್ವೆಯವರಿಂದ ವಿವರಣೆ ಪಡೆದರೆ ಅವರ ಪ್ರಕಾರ ಲೋಮನಾಳಗಳಲ್ಲಿ ಅಂತ್ಯಗೊಳ್ಳುವ ರಕ್ತನಾಳಗಳು ಅಪಧಮನಿಗಳಾದರೆ ಲೋಮನಾಳಗಳಿಂದ ಆರಂಭಗೊಳ್ಳುವ ರಕ್ತನಾಳಗಳು ಅಭಿಧಮನಿಗಳಾಗುತ್ತವೆ. ಅಪಧಮನಿಗಳ ಮೂಲಕ ಹೃದಯವು ರಕ್ತವನ್ನು ದೇಹದ ಬೇರೆ ಬೇರೆ ಭಾಗಗಳಿಗೆ ಒತ್ತಿ ತಳ್ಳುವಾಗ ಅದು ಅಪದಮನಿಯ ಗೋಡೆಗಳ ಮೇಲೆ ಒತ್ತಡವನ್ನುಂಟು ಮಾಡುತ್ತದೆ. ಇದೇ ರಕ್ತದ ಒತ್ತಡ (blood pressure). ಹೀಗೆ ಉಂಟಾಗುವ ಒತ್ತಡವನ್ನು ತಡೆದುಕೊಳ್ಳಲು ಅಪಧಮನಿ ದಪ್ಪನೆಯ ಭಿತ್ತಿಯನ್ನು ಹೊಂದಿರಬೇಕಾಗುತ್ತದೆ. ಆದರೆ ಅಭಿಧಮನಿಗಳಿಗೆ ಈ ತಲೆಬಿಸಿ ಇಲ್ಲ. ಆದ್ದರಿಂದ ಅಬಿಧಮನಿಗಳು ತೆಳುವಾದ ಗೋಡೆಯನ್ನು ಹೊಂದಿರುತ್ತವೆ. ಆದರೆ ಅಬಿಧಮನಿಗಳು ರಕ್ತವನ್ನು ಕಾಲಿನಿಂದ ಹೃದಯಕ್ಕೆ ಅಂದರೆ ಗುರುತ್ವ ಬಲದ ವಿರುದ್ಧ ನೇರದಲ್ಲಿ ರಕ್ತವನ್ನು ಸಾಗಿಸುತ್ತವೆ. ಆದ್ದರಿಂದ ರಕ್ತ ಹಿಮ್ಮೊಗವಾಗಿ ಚಲಿಸುವ ಸಾಧ್ಯತೆಗಳಿರುತ್ತವೆ. ಇದನ್ನು ತಡೆಯಲು ಅಬಿಧಮನಿಗಳಲ್ಲಿ ಕವಾಟಗಳಿರುತ್ತವೆ. ಇದು ಅಪಧಮನಿಗಳಲ್ಲಿಲ್ಲ. ನೀವು ಜಿರಾಫೆಗಳನ್ನು ನೋಡಿದ್ದೀರಾ? ಅವುಗಳ ಕತ್ತು ಎಷ್ಟು ಉದ್ದವಿದೆ ಎಂದು ನೋಡಿಯೇ ಇರುತ್ತೀರಿ. ಇವುಗಳು ನೀರು ಕುಡಿಯುವುದನ್ನು ಊಹಿಸಿಕೊಳ್ಳಿ. ದೇಹಕ್ಕಿಂತ ಅದರ ತಲೆ 10 ಅಡಿಗಳಿಗಿಂತ ಕೆಳಗಿರುತ್ತದೆ. ಆಗ ರಕ್ತ ಒಮ್ಮೆಲೆ ಅದರ ಮೆದುಳಿಗೆ ನುಗ್ಗಿ ಮೆದುಳಿನ ರಕ್ತನಾಳಗಳು ಒಡೆದು ಜಿರಾಫೆ ಸತ್ತು ಹೋಗುತ್ತದೆ. ಆದ್ದರಿಂದ ಜಿರಾಫೆಯ ಕತ್ತಿನ ಅಪಧಮನಿಗಳಲ್ಲಿ ಕವಾಟಗಳಿರುತ್ತವೆ. ನಾನು ಹಿಂದೆ ಹೇಳಿದ ಮಾತು ನೆನಪಿದೆಯೇ...? ಪ್ರಕೃತಿ ಒಬ್ಬ ಶ್ರೇಷ್ಠ ವಿನ್ಯಾಸಕಾರ ಮತ್ತು ತಂತ್ರಜ್ಞ ಎಂದು.

ಮತ್ತಷ್ಟು ವಿಷಯಗಳಿಗಾಗಿ ನೀವು ಕಾಯಬೇಕಾಗುತ್ತದೆ.