ಸವಿಜೇನು : ಸಂಚಿಕೆ - 14
Friday, July 12, 2024
Edit
ಸವಿಜೇನು : ಸಂಚಿಕೆ - 14
ಲೇಖಕರು: ನಾಗೇಂದ್ರ ಬಂಜಗೆರೆ, ಶಿಕ್ಷಕರು
ಸರಕಾರಿ ಹಿರಿಯ ಪ್ರಾಥಮಿಕ ಶಾಲೆ, ಮಿಂಚೇರಿ
ಬಳ್ಳಾರಿ ತಾಲೂಕು ಮತ್ತು ಜಿಲ್ಲೆ
Mob : +91 99029 12684
ಈ ಪ್ರಕೃತಿಯಲ್ಲಿ ಅತ್ಯಂತ ಸಣ್ಣ ಜೀವಿ ತನ್ನದೇ ಆದ ಪ್ರಮುಖ ಪಾತ್ರ ವಹಿಸುತ್ತದೆ. ಎಷ್ಟೋ ಬಾರಿ ಪ್ರಕೃತಿಯನ್ನು ಸಮತೋಲನ ಮಾಡುವಲ್ಲಿ ಬಹಳ ಪ್ರಧಾನ ಪಾತ್ರವನ್ನೇ ವಹಿಸುವ ಜೇನುಹುಳುಗಳ ಪಾತ್ರ ನಿಸರ್ಗದಲ್ಲಿ ಬಹಳ ದೊಡ್ಡದು. ಆ ಜೇನಿನ ಸುತ್ತ ಕಲಿತ ಪಾಠಗಳ, ಥ್ರಿಲ್ಲಿಂಗ್ ಅನುಭವಗಳ, ನೀವು ಕಂಡಿರದ ಕೇಳಿರದ ಅಗತ್ಯವಾಗಿ ತಿಳಿಯಲೇ ಬೇಕಾದ ಮಾಹಿತಿಯುತ 'ಸವಿಜೇನು' ಎಂಬ ವಿಶೇಷ ಶೀರ್ಷಿಕೆಯಡಿಯಲ್ಲಿ ವಿಸ್ತಾರವಾದ ಬರಹ ಸರಣಿಗಳನ್ನು ನೀವೂ ಓದಿ ಆನಂದಿಸಿ... ನಾಗೇಂದ್ರ ಬಂಜಗೆರೆ, ಶಿಕ್ಷಕರು ಮತ್ತು ಬರಹಗಾರರು.
ನಿಸರ್ಗದ ಅಚ್ಚರಿಯ ವಿದ್ಯಮಾನಗಳು ನಿರಂತರವಾಗಿ ಸಾಗುತ್ತಿರುತ್ತಾವೆ. ಅದು ಪ್ರಕೃತಿಯ ಎಲ್ಲಾ ಆಯಾಮಗಳಲ್ಲೂ... ಜೀವಿಗಳಲ್ಲಿ ಆಯಾ ಜೀವಿಗಳ ಗುಂಪಿಗೆ ಅವು ತಲತಲಾಂತರದಿಂದ ಬಂದ ಆಹಾರ, ಸಂತಾನೋತ್ಪತ್ತಿ, ಬದುಕಿನ ವಿಧಾನಗಳು ಬೇರೆ ಬೇರೆ ಆಗಿದ್ದರೂ ಬೇರೊಂದು ಗುಂಪಿನ ಜೀವಿಗಳಿಗೆ ಮಾತ್ರ ಇತರರ ಜೀವಿಗಳ ಬದುಕು ಅಚ್ಚರಿ ಎಂಬಂತೆ ಕಾಣುವುದು. ಎಷ್ಟೋ ಬಾರಿ ಅದೆಷ್ಟೋ ಜೀವಿಗಳ ಬಗ್ಗೆ ಎಲ್ಲಾ ಚಟುವಟಿಕೆಗಳ ಬಗ್ಗೆ ಸಂಪೂರ್ಣವಾಗಿ ಈ ಆಧುನಿಕ ಯುಗದಲ್ಲೂ ಅರಿಯಲಾಗಲಿಲ್ಲ. ಕೆಲವು ಜೀವಿಗಳ ಜೊತೆಗೆ ಈ ಮನುಷ್ಯನ ಅನುಬಂಧ ಅನುಭವ ಸೇರಿ ಕಥೆ ಪುರಾಣಗಳೇ ಹುಟ್ಟಿಕೊಂಡವು. ಪ್ರತಿ ಜೀವಿಯ ಮೇಲೆಯೂ ಕಲ್ಪನೆಯ ಕತೆ ಕಟ್ಟಿದ ಮನುಕುಲ ಕೆಲವೊಮ್ಮೆ ಕಟ್ಟುಕತೆಗಳೇ ಆ ಜೀವಿಗಳ ಪಾಲಿಗೆ ವರವೂ ಶಾಪವೂ ಆದದ್ದು ಉಂಟು. ಉದಾಹರಣೆಗೆ ನರಿ ತನ್ನ ಆಹಾರ ಹುಡುಕುವಾಗ ಒಂದಷ್ಟು ಉಪಾಯಗಳನ್ನು ಕಂಡುಕೊಂಡಿದ್ದರಿಂದ ಇಡೀ ನರಿಕುಲವನ್ನೇ ಶಾಶ್ವತವಾಗಿ ಮಹಾಮೋಸದ ಪ್ರಾಣಿ ಎಂದು ಬಿಂಬಿಸಲಾಯಿತು. ಹೀಗೆ ಬೆಕ್ಕು ಗೂಬೆ ಕತ್ತೆಗಳ ಸೇರಿ ಹಲವಾರು ಪ್ರಾಣಿ ಪಕ್ಷಿಗಳು ಮನುಷ್ಯರೂ ಇಂತಹ ಕಳಂಕದಿಂದ ಹೊರಾತಾಗಿಲ್ಲ. ಇದರಂತೆ ಜೇನುಹುಳುಗಳು ಇಂತಹ ತಪ್ಪು ತಿಳುವಳಿಕೆಯ ಮಾಹಿತಿಗಳು ಈ ಕೆಳಕಂಡಂತೆ ಇವೆ.
◾ಜೇನುತುಪ್ಪದಿಂದ ಮನುಷ್ಯರ ತಲೆಗೂದಲು ಬೆಳ್ಳಗಾಗುತ್ತಾವಂತೆ....!!
ಜೇನುಹುಳುಗಳ ಬಗ್ಗೆ ವ್ಯಾಪಕವಾಗಿ ಬಳಕೆಯಲ್ಲಿರುವ ಸಾಮಾನ್ಯವಾದ ತಪ್ಪು ತಿಳುವಳಿಕೆ ಎಂದರೆ ಮನುಷ್ಯರ ಕೂದಲಿಗೆ ಜೇನುತುಪ್ಪ ಆಕಸ್ಮಿಕವಾಗಿ ಹಚ್ಚಿಕೊಂಡರೇ ತಲೆಗೂದಲು ಮಾತ್ರ ಶಾಶ್ವತವಾಗಿ ಬಿಳುಪಾಗುವುದಂತೆ! ಇದು ಯಾವ ಕಾಲದಲ್ಲಿ ಯಾರು ಹುಟ್ಟಿಸಿದ ಮೂಢನಂಬಿಕೆಯೋ ಏನೋ.. ಈ ವಿಚಾರ ಸತ್ಯವಾಗಿದ್ದರೆ ನನಗೆ ಹದಿನೆಂಟು ಇಪ್ಪತ್ತು ವರ್ಷಗಳೊಳಗೆ ತಲೆಗೂದಲೆಲ್ಲಾ ಸಂಪೂರ್ಣವಾಗಿ ಬಿಳುಪಾಗಿರುತ್ತಿತ್ತು. ಹಲವಾರು ಸಂದರ್ಭಗಳಲ್ಲಿ ನಾನು ಜೇನು ತೆಗೆಯಲು ಹೋದಾಗ ಜೇನು ಗೂಡಿಟ್ಟ ಕೊನೆಯನ್ನು ಕತ್ತರಿಸಲಾಗದೇ ಸಿಕ್ಕಿನಲ್ಲಿ ತುಪ್ಪದ ಭಾಗ ಛಿದ್ರವಾಗಿ ಜಿನುಗಿದ ಜೇನು ನನ್ನ ತಲೆ ಕೈ ಕಾಲು ಮೈಯನ್ನೂ ತೋಯುವಂತಾಗಿದೆ. ಇಂತಹ ಹತ್ತಾರು ಪ್ರಕರಣಗಳಲ್ಲಿ ಹೀಗಾಗಿದೆ. ನನ್ನ ತಂದೆ ತಾಯಿ ಸೇರಿ ನಮ್ಮ ನೆರಹೊರೆಯವರು ಮತ್ತು ಇತರರು ಈ ಮಾತನ್ನು ನೂರಾರು ಬಾರಿ ಹೇಳಿದ್ದಾರೆ. ವಾಸ್ತವವಾಗಿ ಜೇನುತುಪ್ಪ ತಲೆಗೂ ದೇಹದ ಯಾವ ಭಾಗದಲ್ಲಿ ಬಿದ್ದರೂ ಅದೊಂದು ಅಂಟು ಇರುತ್ತದೆ. ಬಟ್ಟೆಯಿಂದ ಒರೆಸಿದರೂ ಬಹಳ ಕಾಲ ಬಿಸಿಲಿಗೆ ಆವಿಯೂ ಆಗದೇ ಉಳಿಯುವುದು. ಆದರೆ ಜೇನುತುಪ್ಪಕ್ಕೆ ತಲೆಕೂದಲು ಬೆಳ್ಳಾಗಿಸುವ ಶಕ್ತಿ ಇಲ್ಲ. ಇದೊಂದು ಜನರ ಶುದ್ಧ ತಪ್ಪುತಿಳುವಳಿಕೆ. ಯಾರು ಸಮತೋಲನದ ಆಹಾರ ಸೇವಿಸುವುದಿಲ್ಲವೋ ಅವರಿಗೆ ವಿಟಮಿನ್ ಪ್ರೋಟಿನ್ ಖನಿಜಾಂಶಗಳ ಕೊರತೆಯಾಗುತ್ತದೆ. ಹಾಗೇ ಯಾರು ಹೆಚ್ಚು ಮಾನಸಿಕ ಒತ್ತಡದಿಂದ ಇರುತ್ತಾರೋ ಅವರ ಕೂದಲುಗಳು ವೈಜ್ಞಾನಿಕವಾಗಿ ಕೂದಲು ಬಿಳುಪಾಗುವುದು ನೈಜಸಂಗತಿ. ಜೇನು ತುಪ್ಪದಿಂದ ಬಿಳುಪಾಗಲು ಸಾಧ್ಯವೇ ಇಲ್ಲ. ವಾಸ್ತವವಾಗಿ ಜೇನು ಲಕ್ಷಾಂತರ ಹೂವುಗಳ ಆಯ್ದ ಭಾಗ.. ಇದರಿಂದ ಅನೇಕ ಪೋಷಕಾಂಶಗಳು ದೇಹಕ್ಕೆ ಸಿಗುವವು. ಆದರೆ ಇದರಿಂದ ತಲೆಗೂದಲು ಬಿಳಿಯಾಗುವುದೆಂದು ಜಗವೆಲ್ಲಾ ಹಬ್ಬಿಸಿದ ಕುಖ್ಯಾತಿ ಯಾರಿಗೆ ಕೊಡಬೇಕೋ ಗೊತ್ತಾಗುತ್ತಿಲ್ಲ...!!
◾ತಲೆಗೆ ಎಣ್ಣೆ ಹಾಕಿ ಜೇನು ತೆಗೆದರೆ ಸಿಕ್ಕಾಪಟ್ಟೆ ಹುಳುಗಳು ಕಚ್ಚುತ್ತಾವಂತೆ..!!
ನಾನು ಒಂಭತ್ತನೆಯ ತರಗತಿ ಓದುತ್ತಿದ್ದೆ ಎಂದೆನಿಸುತ್ತಿದೆ. ಅಂದು ಯುಗಾದಿ. ಎಣ್ಣೆ ಸ್ನಾನ ಮಾಡಬೇಕಾಗಿತ್ತಾದರೂ ನಮ್ಮದು ಅಷ್ಟೋಂದು ಶಾಸ್ತ್ರೋಕ್ತ ಆಚರಣೆಯನ್ನು ಅನುಸರಿಸದೇ ಕೇವಲ ಔಡಲ ಎಣ್ಣೆಯನ್ನು ತಲೆಯ ಮೇಲೆಲ್ಲಾ ಸುರಿದುಕೊಂಡಿದ್ದೆ. ಬಿಸಿಲಿಗೆ ಓಡಾಡಿದೆಂತೆಲ್ಲಾ ನಿಧಾನಕ್ಕೆ ಕರಗಿ ಮುಖದ ಮೇಲೆಲ್ಲಾ ಜಿನುಗಿ ಇಳಿಯುತ್ತಿತ್ತು. ಆಗ ನನ್ನ ಜೇನು ಬದುಕಿಗೆ ಹಬ್ಬ ಹರಿದಿನ ಯಾವುದೇ ಬಿಡುವು ಇರಲಿಲ್ಲ. ಎಲ್ಲೇ ಹೋದರೂ ಏನೇ ಕೆಲಸ ಮಾಡಿದರೂ ಜೇನುಗಳು ಇರಬಹುದಾದ ಸ್ಥಳಗಳಲ್ಲಿ ಒಂದು ಕಣ್ಣು ಜೇನು ಗೂಡುಗಳನ್ನು ನೋಡಲು ಬಳಸುತ್ತಲೇ ಇರುತ್ತಿದ್ದೆ. ಆ ದಿನಗಳಲ್ಲಿ ಎಂಟತ್ತು ದನಗಳು ಮನೆಯಲ್ಲಿ ಇದ್ದು ಅವುಗಳನ್ನು ಕಟ್ಟಿಹಾಕಿ ಮೇಯಿಸುವಷ್ಟು ಹುಲ್ಲುಸೊಪ್ಪಿನ ಸಂಗ್ರಹ ಇರಲಿಲ್ಲ. ಮೇವಿನ ಅಭಾವ ಇದ್ದುದರಿಂದ ಕೆಲವು ಹೊತ್ತಾದರೂ ಅಡ್ಡಾಡಿಸಿಕೊಂಡು ಬಂದರೆ ಒಂದಷ್ಟು ಹುಲ್ಲು ಉಳಿತಾಯ ಆಗುತ್ತಿತ್ತು. ಆದ್ದರಿಂದ ಅಂದು ದನಗಳ ಹೊಡೆದುಕೊಂಡು ಮೂರು ಕಿಲೋಮೀಟರ್ ಅಷ್ಟು ದೂರ ಹೋಗಿದ್ದೆ. ದನಗಳ ಕಾಯುವಾಗ ಗೊತ್ತಿರುವ ಎಲ್ಲಾ ಹಾಡುಗಳನ್ನು ಮನಸೋ ಇಚ್ಚೆ ಕೂಗಿ ಕೂಗಿ ಹಾಡುವುದು. ಬರದೇ ಇರುವ ಹಾಡುಗಳ ಆಲಾಪ ಅಷ್ಟೇ ಸದಾ ಹಾಡುವುದೇ ಬದುಕು. ಇಲ್ಲವಾದರೇ ಒಂಟೀತನ ಓಡಿಸಲು ಸುತ್ತಮುತ್ತಲಿನ ಪರಿಚಯದವರು ಮಾತಾಡಲು ಸಿಗುತ್ತಾರೆಂದರೇ ಕಿಲೋಮೀಟರ್ ಆದರೂ ಸರಿಯೇ ಬೇಜಾರಿಲ್ಲದೇ ನಡೆದುಕೊಂಡು ಹೋಗಿ ಮಾತಾಡಿಸಿಕೊಂಡು ಬರುತ್ತಿದ್ದೆ. ಹೀಗೆ ಹಾಡು ಹಾಡುತ್ತಾ ಕೈಯಲ್ಲಿ ಹಿಡಿದ ಕೋಲೊಂದನ್ನು ನೆಲಕ್ಕೆ ಬಡಿಯುತ್ತಾ ಹೋಗುತ್ತಿದ್ದಾಗ ಸಾಧಾರಣ ಎತ್ತರದ ಒಂದು ಬನ್ನಿ ಗಿಡದಲ್ಲಿ ಒಂದು ಜೇನುಕಾಣಿಸಿತು.
ಫಾಲ್ಗುಣ ಮಾಸ ಮುಗಿದು ಅಂದೇ ಚೈತ್ರಮಾಸದ ಆರಂಭ. ಸೂರ್ಯನ ತೇಜಸ್ಸು ಬ್ರಹ್ಮಾಂಡವನ್ನು ಸುಡುವಂತೆ ಪ್ರಜ್ವಲಿಸುತ್ತಿತ್ತು. ಬಡಕಲು ದೇಹವಾದರೂ ಜಳಜಳನೇ ಇಳಿಯುತ್ತಿದ್ದ ಬೆವರು. ದಿನಕ್ಕೆ ಮೂವತ್ತು ನಲವತ್ತು ಕಿಲೋಮೀಟರ್ ನಡೆಯವ ಕುರಿಕಾಯುವವರಿಗೆ, ದನ ಕಾಯುವವರಿಗೆ ಗೊತ್ತಿರುತ್ತದೆ... ಹಸಿವು ಅಂದರೆ ಏನು ಅಂತಾ... ಆದರೆ ಅಂದು ಯುಗಾದಿಯ ಸಡಗರದಲ್ಲಿದ್ದ ನನಗೆ ಅಂದು ಬೆಳ್ಳಂಬೆಳಿಗ್ಗೆಯೇ ಒಂದಷ್ಟು ಪಾಯಸ, ಸಂಡಿಗೆ ಚಿತ್ರನ್ನಾ ಅದೂ ಇದು ರಸಕವಳವೇ ಬಿದ್ದಿತ್ತು. ಆದರೂ ನನ್ನ ವ್ಯಾಪ್ತಿಯಲ್ಲಿ ಅಲ್ಲದ ಜೇನು ಕಂಡರೆ ಹೆಚ್ಚುಕಡಿಮೆ ತುಪ್ಪ ಇದ್ದರೂ ತೆಗೆಯುವುದು ಸಾಮಾನ್ಯವೇ ಆಗಿತ್ತು. ಬನ್ನಿ ಮರದ ಜೇನು ನನ್ನ ಕೈ ಎತ್ತಿದರೂ ಒಂದರ್ಧದಡಿಯಷ್ಟು ಎತ್ತರದಲ್ಲಿದೆ. ಕೈಯಲ್ಲಿದ್ದ ಕೋಲಿನ ಸಹಾಯದಿಂದ ತುಪ್ಪ ಪರೀಕ್ಷಿಸಲು ಕೋಲು ಚಾಚಿದರೆ ಕೋಲಿನ ಹಿಂದೆಯೇ ಬಂದ ಮೂರ್ನಾಲ್ಕು ಹುಳುಗಳು ಕಿವಿಗೊಂದು ಕೈಗೊಂದು ಕಚ್ಚಿ ಮರಳಿದವು. ಆರಂಭದ ದಾಳಿಗೆ ಬೆದರಿದ ನಾನು ಈ ತರ ಆರಂಭದಲ್ಲೇ ಎರ್ರಾಬಿರ್ರಿ ಹುಳುಗಳು ದಾಳಿ ಮಾಡಿದರೆ ತುಪ್ಪ ಚೆನ್ನಾಗಿಯೇ ಇದೆಯೆಂಬ ಅರ್ಥ. ಸ್ವಲ್ಪಮಟ್ಟಿಗೆ ಸಿಕ್ಕಿನ ಮಧ್ಯೆ ಇದ್ದ ಜೇನನ್ನು ಕೈಯಲ್ಲಿ ಯಾವುದೇ ತೆರನಾದ ಆಯುಧಗಳು ಇಲ್ಲದೇ ಇದ್ದುದರಿಂದ ಸುಲಭವಾಗಿ ತೆಗೆಯಲು ಸ್ವಲ್ಪವೇ ಕಷ್ಟ ಇತ್ತು. ಬನ್ನಿ ಮರದ ರೆಂಬೆಗಳು ಮುಳ್ಳಿನಿಂದ ಕೂಡಿದ್ದು ಮತ್ತು ಹುಳುಗಳ ಚುರುಕುತನ ಇದಕ್ಕೆ ಅಡ್ಡಿಯಾಗುತ್ತಿತ್ತು. ಮೊದಲ ಆರಂಭದಲ್ಲಿ ಎರಡುಹುಳಗಳು ದಾಳಿಮಾಡಿ ಕಚ್ಚಿಹೋಗಿದ್ದ ಹುಳುಗಳು ವೈರಿ ಪುನಃ ದಾಳಿ ಮಾಡಬಹುದು ಎಂದು ಅವೂ ಕೂಡ ಕುಟುಂಬದ ಸಮೇತರೆಲ್ಲರೂ ಸಿದ್ದವಾಗಿದ್ದವೆಂದು ತೋರುತ್ತದೆ. ನಾನು ಯಾವುದಕ್ಕೂ ಸೇಪ್ಟಿಗಿರಲೆಂದು ಚಳಿಯಾದಾಗ ಟವೆಲ್ ಸುತ್ತಿಕೊಳ್ಳವ ಹಾಗೆ ಮುಖಕ್ಕೆ ಟವೆಲ್ ಮುಚ್ಚಿಕೊಂಡಿದ್ದೆ. ಹಿಡಿದ ಕೋಲಿನಿಂದಲೇ ಜೇನುಗೂಡನ್ನು ಅಲುಗಾಡಿಸಲು ಒಮ್ಮೆ ಮೀಟಿದೆ. ಮುಟ್ಟುವ ಮುನ್ನವೇ ಹದಿನೈದು ಇಪ್ಪತ್ತು ಹುಳುಗಳು ನಾನು ಮುಟ್ಟಿದ ಮರು ಸೆಕೆಂಡಿಗೆ ಏಕಾಏಕಿ ದಾಳಿ ಮಾಡಿದವು. ಆ ಹುಳುಗಳೆಲ್ಲಾ ನನ್ನ ಚಲನೆಯನ್ನು ನೋಡುತ್ತಲೇ ಆಕ್ರಮಣ ಮಾಡಲು ಸಿದ್ದವಾಗಿಯೇ ಕುಳಿತಿದ್ದವು ಎಂದೆನಿಸುತ್ತದೆ. ನನ್ನ ತಲೆ ಕಿವಿ ಮುಖದ ಕಡೆ ಟವೆಲ್ ನಿಂದ ಸ್ವಲ್ಪವೇ ರಕ್ಷಣೆ ಇತ್ತಾದರೂ ತೋಳಿಲ್ಲದ ಅಂಗಿಯ ಧರಿಸಿದ್ದ ನನ್ನ ಮುಂಗೈ ಮತ್ತು ಮೊಣಕೈಗಳಿಗೆ ಯಾವುದೇ ರಕ್ಷಣೆ ಇರಲಿಲ್ಲ. ಈ ಬಾರಿ ನಾಲ್ಕೈದು ಹುಳುಗಳು ಮೊಣಕೈ, ಕಿರುಬೆರಳು, ಹೆಬ್ಬೆರಳು ಹೀಗೆ ಸಿಕ್ಕ ಸಿಕ್ಕಲ್ಲಿಗೆ ಕಚ್ಚಿದವು. ಇತ್ತ ನನ್ನ ತಲೆಯ ಮೇಲೆ ಕಿವಿ ಕಪಾಳ ಎಲ್ಲೆಂದರಲ್ಲೇ ಬಂದೂಕಿನ ಗುಂಡುಗಳಂತೆ ದಾಳಿ ಮಾಡುತ್ತಿವೆ!! ಆದರೆ ಕಚ್ಚಿದಾಗ ಬರುವ ರಸಾಯನಿಕ ವಾಸನೆ ನಿರಂತರವಾಗಿ ಬರುತ್ತಿದೆ. ಆದರೆ ಅವೆಲ್ಲವೂ ಬಟ್ಟೆಯ ಮೇಲೆಯೇ ಕಚ್ಚುತ್ತಿವೆ. ಕೈಗಂತೂ ಚಟ- ಪಟನೇ ಬಂದ ಹುಳುಗಳೆಲ್ಲಾ ಕಚ್ಚಿಹೋಗುತ್ತಿವೆ. ಅವುಗಳ ಹುಚ್ಚು ರಭಸಕ್ಕೆ ಅಲ್ಲೆಲ್ಲಿಯೂ ನಿಲ್ಲಲಾಗದೇ ಕೋಲು ಎಸೆದು ಕೈಯನ್ನು ತಿರುಗಿಸಿ ಜೇನುಹುಳುಗಳ ಓಡಿಸುತ್ತಾ ಒಂದಷ್ಟು ದೂರ ಓಡಿದೆ. ಅವೂ ಕೂಡ ನನ್ನನ್ನು ಅಟ್ಟಿಸಿಕೊಂಡು ಬಂದವಾದರೂ ಕಚ್ಚುವ ಹೊಡೆತ ಕಡಿಮೆ ಆಯಿತು. ಕಚ್ಚಿದ ಜಾಗದಲ್ಲಿ ಉರಿ ಮತ್ತು ಊತ ಜೋರಾಗುತ್ತಿತ್ತು. ಉರಿಯುತ್ತಿದ್ದ ಜಾಗದಲ್ಲಿ ಚುಚ್ಚಿಕೊಂಡಿದ್ದ ವಿಷದ ಕೊಂಡಿಯ ಎಲ್ಲಾ ಮುಳ್ಳುಗಳು ಕಿತ್ತು ತೆಗೆದೆ. ಈ ಬಾರಿ ಆರೇಳು ಹುಳುಗಳು ಎಲ್ಲೆಂದರಲ್ಲಿ ಕಚ್ಚಿದ್ದವು. ಟವೆಲ್ ಬಿಚ್ಚಿ ನೋಡಿದರೆ ಟವೆಲ್ ಮೇಲೆಯೇ ಆರೇಳು ಹುಳುಗಳು ಮುಳ್ಳನ್ನು ಚುಚ್ಚಿ ಹೋಗಿದ್ದವು. ಇಷ್ಟು ಕಚ್ಚಿಸಿಕೊಂಡ ಮೇಲೆ ಆ ಜೇನನ್ನು ಹಾಗೆ ಬಿಟ್ಟುಹೋಗಲಾಗಲಿಲ್ಲ. ಈ ಸಾರಿ ನನಗೂ ಜೇನುಹುಳುಗಳ ಮೇಲೆ ಅತೀ ಕೋಪ ಬಂದಿತು. ಏನಾದರೂ ಸರಿಯೇ ಕಿತ್ತು ತೆಗೆಯಲೇಬೇಕೆಂದು ಲುಂಗಿಯ ಇಳಿಬಿಟ್ಟು ಮೊದಲಿನಂತೆಯೇ ಟವೆಲ್ ಮುಖಕ್ಕೆ ಕಟ್ಟಿಕೊಂಡು ಪುನಃ ಜೇನು ಕೀಳಲು ಹೆಜ್ಜೆ ಹಾಕಿದೆ. ಕೋಲು ತೆಗೆದು ಎರ್ರಾ ಬಿರ್ರಿ ಹಾವು ಬಡಿದ ಹಾಗೆ ಜೇನುಕಟ್ಟಿದ್ದ ಕೊನೆಗೆ ಬಡಿದೆ. ಬಡಿಯುವ ರಭಸಕ್ಕೆ ಹುಳುಗಳು ಕೆಳಗೆ ಬೀಳುತ್ತಾ ಹಾರಿ ಮೇಲೆದ್ದು ಹೋಗುತ್ತಿದ್ದವು. ಈ ಬಾರಿ ಅವುಗಳಿಗೆ ಕಚ್ಚಲು ಅವಕಾಶ ಕೊಡಲಿಲ್ಲ. ಆದರೆ ಬಡಿದ ರಭಸಕ್ಕೆ ಜೇನಿನ ತುಪ್ಪದ ಭಾಗ ಛಿದ್ರವಾಗಿತ್ತು. ಹತ್ತಾರು ಕಡೆ ಹನಿ ಹನಿಗಳಾಗಿ ಕೆಳಗೆ ಸೋರಿ ಹೋಗುತಿತ್ತು. ಜೇನುಗೂಡು ಕಟ್ಟಿದ ಕಡ್ಡಿಯ ಮುರಿಯಲು ಮುಂಗಾಲು ಊರಿ ಜಂಪ್ ಮಾಡಿ ಎಳೆಯುತ್ತಿದ್ದೆ. ಮುಳ್ಳು ಸಹಿತ ಹಸಿಕೊನೆ ಅಷ್ಟು ಸುಲಭವಾಗಲಿಲ್ಲ. ಅಷ್ಟೊತ್ತಿಗಾಗಲೇ ಹನಿ ಹನಿ ಸೋರುತ್ತಿದ್ದ ತುಪ್ಪ ನನ್ನ ಔಡಲೆಣ್ಣೆಯ ತಲೆಯ ಮೇಲೆ ಇನ್ನೊಂದು coat ಎಣ್ಣೆ ಹಾಕಿದಂತಾಗಿತ್ತು. ಅಂತೂ ಅಂದು ಸಿಕ್ಕಾಪಟ್ಟೆ ಹುಳುಗಳ ಕಚ್ಚಿಸಿಕೊಂಡು ಸೋರಿ ಹೋಗುತ್ತಿದ್ದ ತುಪ್ಪವನ್ನು ಜೇನು ರೊಟ್ಟಿಯಲ್ಲಿ ಬಸಿದು ತಿಂದಿದ್ದೆ. ನಾನು ಅದುವರೆಗೆ ಆ ಪ್ರಮಾಣದ ಹುಳುಗಳನ್ನು ಕಚ್ಚಿಸಿಕೊಂಡಿರಲಿಲ್ಲ. ಅವರಿವರ ಬಳಿಯಲ್ಲಿ ಆ ವಿಚಾರವನ್ನು ಹೇಳಿದಾಗ ಅಂದು ನಾನು ತಲೆಗೆ ಎಣ್ಣೆಯನ್ನು ಹಾಕಿದ ಕಾರಣದಿಂದ ಜೇನುಹುಳುಗಳು ಸಿಕ್ಕಾಪಟ್ಟೆ ಕಚ್ಚಿದ್ದಕ್ಕೆ ಕಾರಣವಂತೆ !! ಅದೇ ರೀತಿಯಾಗಿ ಹಾಸ್ಟೆಲ್ ನಲ್ಲಿದ್ದ ಗೆಳೆಯ ಪಾಲಯ್ಯ ಅವರ ಗೆಳೆಯರಿಗೂ ಇದೇ ಯುಗಾದಿಯ ದಿನದಂದು ತಲೆಗೆ ಎಣ್ಣೆ ಹಾಕಿಕೊಂಡು ಹೋಗಿ ಜೇನು ತೆಗೆದಿದ್ದಕ್ಕೆ ಅಟ್ಟಾಡಿಸಿಕೊಂಡು ಕಚ್ಚಿದ್ದಂವಂತೆ!! ಸೋ ಎಣ್ಣೆ ಹಚ್ಚಿಕೊಂಡು ಜೇನು ತೆಗೆಯಬಾರದಂತೆ..!
◾ನೀರಿನಲ್ಲಿ ಕರಗಿದರೆ ಅದು ಶುದ್ಧ ತುಪ್ಪ...
ಅದ್ಯಾವುದೋ ಪ್ರಖ್ಯಾತ ಕಂಪನಿಯೊಂದು 'ಯಾವ ಜೇನುತುಪ್ಪ ನೀರಿನಲ್ಲಿ ಕರಗುವುದಿಲ್ಲವೋ ಅದು ಶುದ್ಧ ಜೇನು ಎಂದು ಜಾಹಿರಾತು ಕೊಡುತ್ತಿವೆ. ಆದರೆ ಕೋಲುಜೇನು ಪಿಟ್ಟಜೇನು, ಮಿಸ್ರಿಜೇನು ಮತ್ತು ತುಡುವೆಜೇನು ಹುತ್ತ ಮರದ ಪೊಟರೆಗಳಲ್ಲಿ ತೆಗೆದ ಜೇನುತುಪ್ಪ ನೀರಿಗೆ ಕೆಲವೇ ಸೆಕೆಂಡ್ ಗಳಲ್ಲಿ ಶೇಕಡಾ ನೂರಕ್ಕೆ ನೂರರಷ್ಟು ಬೆರೆತು ಹೋಗುತ್ತದೆ. ನೀರಿನ ಅಂಶ ಸೇರುವ ಮುನ್ನ ಬಿಸಿಲಿಗೂ ಗಾಳಿಗೂ ಆವಿಯಾಗದ ಒಂದು ಮಂದ ಜಿಗುಟಿನ ದ್ರವ. ಆದರೆ ನೀರಿನೊಂದಿಗೆ ಇದು ಸುಲಭವಾಗಿ ವರ್ತಿಸಿ ನೀರಿನೊಂದಿಗೆ ಸಮ್ಮಿಲನ ಆಗುತ್ತದೆ. ಇನ್ನೂ ಹೆಜ್ಜೇನು ತುಪ್ಪ ಮೇಲ್ಕಾಣಿಸಿದ ಜೇನಿಗಿಂತಲೂ ಸ್ವಲ್ಪ ಮಂದವಾಗಿರುತ್ತದೆ ಬಿಟ್ಟರೆ ಇದು ನೀರಿನೊಂದಿಗೆ ಕರಗದೇ ಇರುವ ದ್ರವ ಅಲ್ಲವೇ ಅಲ್ಲ. ಹಾಗೆ ತುಸು ಎಣ್ಣೆಗೆಂಪು ಇದರ ಬಣ್ಣ ಇರುತ್ತದೆ. ಆದರೆ ಈಗ ಮಾರುಕಟ್ಟೆ ಯಲ್ಲಿ ಕೆಂಪು ಬಣ್ಣದ ಜೇನುತುಪ್ಪ ಸಿಗುತ್ತದೆ ಅದು ಯಾವ ಜೇನೋ ತಿಳಿಯದು.. ಹಾಗೇ ಇದು ಖರ್ಜೂರ ಹಣ್ಣಿನ ವ್ಯವಸ್ಥಿತ ಉತ್ಪಾದನೆಯ ದ್ರವ ಎಂದು ನನಗನಿಸುತ್ತದೆ. ಆದರೆ ಇವರು ಕಾರ್ಪೋರೇಟ್ ವಲಯದವರು. ಸರ್ಕಾರದ ನಿಯಂತ್ರಕರು. ಅದು ಅಸತ್ಯವಾದರೂ ಕಾನೂನುಬದ್ಧವಾಗಿ ಎಲ್ಲಾ formalities ಕೈಗೊಂಡಿ ಇರುತ್ತಾರೆ. ಮೀಡಿಯಾ ಅಡ್ವರ್ಟೈಜ್ ಗಳಿಗೆ ಅದು ಓಡುತ್ತದೆ.
◾ರಾಣಿಜೇನಿಗೆ ದಿಬ್ಬಣಯಾತ್ರೆ.. ಗಂಡು ಜೇನಿಗೆ ಸ್ಮಶಾನ ಯಾತ್ರೆ...
ರಾಣಿ ಜೇನು ಒಂದು ಜೇನುಗೂಡಿನಲ್ಲಿ ಒಂದು ಹುಳು ಮಾತ್ರ ಇರುತ್ತದೆ ಎಂದು ಹೇಳುತ್ತಾರೆ. ಆದರೆ ನಾನು ಜೇನುಗೂಡಿನಲ್ಲಿ ನೋಡಿದಂತೆ ಹತ್ತಾರು ಹುಳುಗಳು ಇರುತ್ತವೆ. ಒಂದು ಸಾಧಾರಣವಾದ ಕೋಲು ಜೇನಿನಲ್ಲಿ ಪ್ರತಿ ಸಂತಾನ ಚಕ್ರದ ಸುತ್ತಿನಲ್ಲಿ ಕನಿಷ್ಠ ಎಂಟತ್ತು ಹುಳುಗಳು ಹುಟ್ಟುತ್ತಾವೆ. (ಸಾಕ್ಷಿ ನಿರೂಪಿಸುವೆ) ಆದರೆ ನನಗೆ ಈಗಲೂ ಪ್ರಶ್ನೆ ಇರುವುದು ರಾಣಿ ಜೇನು ಹೆಜ್ಜೇನಿನಗಾತ್ರದಲ್ಲಿ ಇರುತ್ತದೆ. ಈ ಮೊಟ್ಟೆ ಇಡುವುದು ಇದೇ ರಾಣಿಜೇನುಗಳು. ಇದೇ ರಾಣಿ ಜೇನಿನ ಸಾಂಗತ್ಯ ಮಾಡಿದ ಗಂಡು ಜೇನು ಮರಣ ಹೊಂದುವುದಂತೆ! ಈ ವಿಷಯವನ್ನು ನಾನು ಸಾರಾ ಸಗಟಾಗಿ ತಳ್ಳಿಹಾಕುತ್ತೇನೆ. ಲಿಂಗ ತಾರತಮ್ಯ ಮಾಡುತ್ತಿರುವ ಇಂದಿನ ಸಾಮಾಜಿಕ ವ್ಯವಸ್ಥೆಯಲ್ಲಿ ಗಂಡುಹೆಣ್ಣುಗಳ ಅಸಮ ಅನುಪಾತ ನೋಡಬಹುದು. ಅದೇ ತರ ಇಲ್ಲಿ ಮಿಲನ ಹೊಂದಿದ ಗಂಡುಗಳೆಲ್ಲವೂ ಮರಣ ಹೊಂದಿದ್ದರೆ ಬಹುಶಃ ರಾಣಿ ಜೇನುಗಳೇ ತುಂಬಿರುತ್ತಿದ್ದವು. ಇದು ಯಾರೋ ಅರೆ ಮಾಹಿತಿಯ ಹಿಡಿದು ನೀಡಿದ ಹೇಳಿಕೆ. ಪ್ರಕೃತಿಯಲ್ಲಿ ಮಿಲನದಿ ಮರಣ un natural...!!ನಾನು ಜೇನುಗೂಡುಗಳಲ್ಲಿ ದೊಡ್ಡ ಹುಳುವೊಂದನ್ನು (ರಾಣಿಜೇನು) ಇತರೆ ಕೀಟಗಳು ಅದನ್ನು ಹಿಡಿಯಲು ಓಡುತ್ತಾ ಹಾರುತ್ತಾ ಹಿಡಿಯುವವು. ಅದೂ ಜೇನುಗೂಡಿನ ಎರಡೂ ಬದಿಯಲ್ಲೂ,ಇದೇ ರೀತಿಯಾಗಿ ಆಟ ಆಡಿಸುತ್ತಲೇ ಇರುತ್ತದೆ. ಮೇಲೆ ಕೆಳಗೆ ಹುಳಗಳ ಮದ್ಯೆ ತುಂಬಾ ಆಟ ಆಡಿಸುತ್ತದೆ. ಇದೇ ಜೇನುಗಳ ಸರಸ... ಇದೇ ತರ ಹೆಣ್ಣು ಹುಳುಗಳು ಫಲವತ್ತತೆಗೆ ಬಂದಾಗ ವಯಸ್ಕ ಗಂಡು ಹುಳುಗಳು ರಾಣಿಜೇನಿನ ಹಿಂದೆ ಬಿದ್ದು ಅಲೆಯುವವು. ಈ ರಾಣಿ ಜೇನುಹುಳ ದೈತ್ಯವಾಗಿರುವುದರಿಂದ ಸಿಕ್ಕಾ ಪಟ್ಟೆ ಹಾರುವ ಹತ್ತಾರು ಕಿಲೋಮೀಟರ್ ತಿರುಗುವ ಶಕ್ತಿ ಇದಕ್ಕಿಲ್ಲ. ನನ್ನ ಜೇನು ಬದುಕಿನ ಇತಿಹಾಸದಲ್ಲಿ ರಾಣಿ ಜೇನೊಂದು ನೀರುಕುಡಿಯಲು ಜೇನು ಮಕರಂದ ತರಲು ಹೊರಬಂದಿಲ್ಲ. ಇದು ತನ್ನ ಪೂರ್ಣಾವಧಿ house wife. ಆದರೆ ಕೆಲವರು ಹೇಳುವರು ರಾಣಿಜೇನು ಸರಸವಾಡುತ್ತಾ ಗಂಡುಹುಳುಗಳನ್ನು ಆಕಾಶದೆತ್ತರಕ್ಕೆ ಕರೆದುಕೊಂಡು ಹೋಗುವುದಂತೆ. ಗಾಳಿಯಲ್ಲಿ ಮಿಲನ ಹೊಂದುವವಂತೆ... ಇದು ನಾನು ಕಂಡಂತೆ ಅಸತ್ಯ. ಹದ್ದುಗಳು ಆಕಾಶದಲ್ಲಿ ಮಿಲನ ಮಾಡುತ್ತಾವೆ. ಆದರೆ ನನ್ನ ಅನುಭವದಲ್ಲಿ ಜೇನುಹುಳು ಹೊರಗಿನ ವಾತಾವರಣದಲ್ಲಿ ಸೇರಿರುವುದನ್ನು ನನ್ನ ಇಪ್ಪತ್ತೈದು ವರ್ಷಗಳ ಅನುಭವದಲ್ಲಿ ಕಂಡಿರುವುದಿಲ್ಲ. ಹಾಗೆ ನಾನು ಜೇನುಗಳನ್ನು ಮುಂಜಾನೆಯಿಂದ ಕತ್ತಲಾಗುವವರೆಗೂ ಕೆಲವೊಂದು ಬಾರಿ ಬ್ಯಾಟರೀ ಬಿಟ್ಟು ರಾತ್ರಿಯ ಹೊತ್ತಲ್ಲಿ ಹೇಗೇಗೆ ಇರುತ್ತಾವೆಂದು ಗಮನಿಸಿದ್ದೇನೆ. ಈ ತರಹದ ಮಿಲನ ನಾನೆಂದೂ ಕಂಡಿಲ್ಲ.
◾ಕಚ್ಚಿದ ಜೇನುಹುಳು ಸಾಯುತ್ತದೆಯಂತೆ...
ಜೇನುಹುಳು ಕಚ್ಚಿದಾಗ ತನ್ನ ಹಿಂಬದಿಯಲ್ಲಿರುವ ವಿಷದ ಕೊಂಡಿಯನ್ನು ಶತ್ರುವಿನ ಮೇಲೆ ಚುಚ್ಚುತ್ತಾವೆ. ಈತರ ಚುಚ್ಚಿದ ಮೇಲೆ ಈ ಹುಳು ಸಾಯುತ್ತದೆ ಎಂದು ಈಗಿನ ಪ್ರಮುಖ ಸರ್ಚ್ ಇಂಜಿನ್ ಗಳಲ್ಲಿ ಸಿಗುತ್ತದೆ. ಆದರೆ ಇದು ಅಸತ್ಯವಾದದು. ಪ್ರಕೃತಿಯಲ್ಲಿ ಅನೇಕ ಜೀವಿಗಳು ಮಾನವನೂ ಸೇರಿ ಕೆಲವು ಪ್ರಮುಖ ಅಂಗಗಳು ಇಲ್ಲದೇ ಬದುಕುತ್ತಿವೆ. ಕಣ್ಣು, ಕಿವಿ, ಕಿಡ್ನಿ, ಕೈ, ಕಾಲು ಹೀಗೆ.. ಆದರೆ ಇವ್ಯಾವು ಸಾಯದೇ ಇರುವಾಗ ಜೇನುಹುಳು ಮಾತ್ರ ಯಾಕೆ ಸಾಯುತ್ತದೆ...?? ನೊಣಗಳು ಕಚ್ಚುವಾಗ ಶತ್ರುವಿನಿಂದ ಹಲ್ಲೆಗೊಳಗಾಗಿ ಸಾಯಬಹುದಾದ ಸಾಧ್ಯತೆಗಳು ಇರುತ್ತಾವೆ. ಆದರೆ ವಿಷದ ಮುಳ್ಳು ಇಲ್ಲ ಎಂಬ ಕಾರಣಕ್ಕೆ ಅದು ಸಾಯುವುದು ಎಂದು ಊಹಿಸುವುದು ತಪ್ಪು...
◾ಮನೆಯೊಳಗೆ ಜೇನುಗೂಡು ಕಟ್ಟಿದರೆ..??
ಜೇನುಗಳು ಈಗ ಗೂಡು ಕಟ್ಟಲಿಕ್ಕೆ ಯಾವುದೇ ಮಿತಿ ಇರುವುದಿಲ್ಲ. ಅವುಗಳಿಗೆ ಎಲ್ಲಿ ಸೂಕ್ತ ಸ್ಥಳ ಎಂದು ಗುರುತಿಸುತ್ತಾವೋ ಅಲ್ಲಿಯೇ ಅವು ಕಟ್ಟುತ್ತವೆ. ಇದು ಮಾನವನ ವಾಸ ಮನೆಗಳಲ್ಲೂ ಗೂಡು ಕಟ್ಟುತ್ತಾವೆ. ಕೆಲವರು ಅತಿಯಾಗಿ ತಲೆಕೆಡಿಸಿಕೊಂಡು ಅವರಿವರ ಬಳಿ ಶಾಸ್ತ್ರ ಕೇಳುವುದು ಉಂಟು. ಅವರುಗಳು ಗೂಡು ಕಟ್ಟಿರುವ ದಿಕ್ಕಿನ ಆಧಾರದಲ್ಲಿ ಫಲಾಫಲಗಳನ್ನು ಹೇಳುವರು. ಜೇನು ಗೂಡುಕಟ್ಟುವುದು ಸಂತಾನೋತ್ಪತ್ತಿಯ ಉದ್ದೇಶದಿಂದ. ಅದನ್ನು ತೆಗೆದರೆ ಕುಂಟುಂಬದ ಮಾರಣಹೋಮ ಮಾಡಿದಂತಾಗುವುದರಿಂದ ಮನೆಯಲ್ಲಿ ಕಟ್ಟಿದ ಜೇನುಗಳನ್ನು ತಗೆಯುವುದಿಲ್ಲ. ತಾವಾಗಿಯೇ ಬಿಟ್ಟುಹೋಗುವವರೆಗೂ ಕಾಯುತ್ತಾರೆ.
◾ನವಜಾತ ಶಿಶುವಿಗೆ ಜೇನುತುಪ್ಪ ಕೊಡಬಹುದೇ...?
ನವಜಾತ ಶಿಶುವಿಗೆ ಜೇನುತುಪ್ಪ ತಿನ್ನಿಸುವುದು ವೈದ್ಯಲೋಕ ಬೇಡ ಅಂತ ಹೇಳತ್ತೆ. ಆದರೆ ನನ್ನ ಅಕ್ಕನ ಮಕ್ಕಳು ಆರು ಜನ ನಮ್ಮ ಮನೆಯಲ್ಲೇ ಹುಟ್ಟಿ ಬೆಳೆದಿದ್ದಾರೆ. ಈ ಆರೂ ಮಕ್ಕಳು ಜನನವಾಗಿ ಕೆಲವೇ ನಿಮಿಷಗಳಲ್ಲಿ ಜೇನುತುಪ್ಪವನ್ನು ತಿಂದಿದ್ದಾರೆ. ಎದೆಯ ಹಾಲು ಕುಡಿಯುವ ಮುನ್ನವೇ ಜೇನುತುಪ್ಪ ತಿಂದ ಉದಾಹರಣೆಗಳು ನಮ್ಮ ಮನೆಯಲ್ಲಿ ಇದ್ದಾವೆ. ನವ ಜಾತ ಶಿಶುವಿನಿಂದ ವಯಸ್ಸಾದವರವರೆಗೆ ಜೇನು ಒಳ್ಳೆಯ ಆಹಾರವನ್ನಾಗಿ ಕೊಡಬಹುದು.
◾ಜೇನನ್ನು ಎಷ್ಟು ವರ್ಷಗಳ ಕಾಲ ಇಡಬಹುದು...?
ಈಜಿಪ್ಟಿನ ಪಿರಮಿಡ್ ಗಳಲ್ಲಿ, ಮಮ್ಮಿಗಳಲ್ಲಿ ಅವರ ಪುನರ್ಜನ್ಮಕ್ಕೆ ಸಿಹಿ ಮತ್ತು ಸಂಪತ್ತಿನ ಪ್ರತೀಕವಾಗಿ ಮಡಕೆಗಳಲ್ಲಿ ಜೇನು ತುಪ್ಪವನ್ನು ಇಡುತ್ತಿದ್ದರು ಎಂದು ಸಂಶೋದಕರು ಹೇಳುತ್ತಾರೆ. ಆದರೆ ಇದಕ್ಕೂ ಜೀವಿತಾವಧಿ ಇದೆ. ಹದಿನಾರು ಹದಿನೆಂಟು ತಿಂಗಳುಗಳು ಆದ ಮೇಲೆ ಇದರಲ್ಲಿ ಇರುವ ಗ್ಲೂಕೋಸ್ ಶುಗರ್ ಹರಳು ಹರಳಾಗಿ ಸಕ್ಕರೆಯಂತಾಗುತ್ತದೆ. ಸಕ್ಕರೆಯಂತೆ ದೊಡ್ಡ ಗಾತ್ರದಲ್ಲಿರುವುದಿಲ್ಲ. ನುಸಿ ಪುಡಿಯಂತೆ ರವೆ ರವೆಯಾಗಿ ಇರುತ್ತದೆ. ಈ ಸ್ಥಿತಿಗೆ ತಲುಪಿದ ತುಪ್ಪ ಹಾಳಾಗಿದೆ ಅಂತ ಹೇಳಬಹುದು. ಕಂಪನಿಗಳಿಂದ ಕೊಂಡತುಪ್ಪಕ್ಕೆ ಸಂರಕ್ಷಕ ಕಾರಕಗಳನ್ನು ಹಾಕಿರುವುದರಿಂದ ಇವು ಬಹಳ ಬೇಗ ಹಾಳಾಗುವುದಿಲ್ಲ.
◾ಜೇನು ಮತ್ತು ಜಂತುಹುಳುಗಳು :
ಎಲ್ಲಿ ಸಿಹಿಯೋ ಅಲ್ಲಿ ಹುಳುಗಳು ಇರುವುದು ಸಹಜ.. ಯಾರು ಹೆಚ್ಚು ಸಿಹಿಯನ್ನು ತಿನ್ನುತ್ತಾರೋ ಅವರಿಗೆ ಈ ಜಂತು ಹುಳುಗಳ ಕಾಟ ಇದ್ದು ತೆಳ್ಳಗೆ ಇರುವವರು ಸಾಮಾನ್ಯವಾಗಿ ಜಂತುಹುಳು ಹೊಂದಿರುತ್ತಾರೆ. ಅದರಂತೆ ನಾನು ತೆಳ್ಳಗೆ ಇದ್ದೆ. ಎಷ್ಟು ತಿಂದರೂ ನನ್ನ ದೇಹದಲ್ಲಿ ನೂರು ಗ್ರಾಮ್ ಜಾಸ್ತಿ ಆಗಿರಲಿಲ್ಲ. ನನ್ನ ಇಪ್ಪತ್ತಾರನೇ ವಯಸ್ಸಿನವರೆಗೂ ಹಾಗೇ ಇತ್ತು. ನನಗೆ ಯಾಕೋ ಜಂತುಹುಳ ಹೊಟ್ಟೆಯಲ್ಲಿ ಇದ್ದಾವೆ ಎಂದು ಅನಿಸುತ್ತಿತ್ತು. ಶಾಲೆಯಲ್ಲಿ ಮಕ್ಕಳಿಗೆ Albendozole ಮಾತ್ರೆಗಳನ್ನು ಕೊಡುವಾಗ ನಾನೂ ತೆಗೆದುಕೊಂಡಿದ್ದೆ. ಯಾಕೋ ಹೆವೀ ಡೋಸೇಜ್ ತೆಗೆದುಕೊಳ್ಳಬೇಕು ಎನಿಸಿ ಒಂದೇ ವಾರದಲ್ಲಿ ಎರಡು ಮಾತ್ರೆಗಳನ್ನು ತೆಗೆದುಕೊಂಡಿದ್ದೆ ಅದರ ಪರಿಣಾಮ ನನ್ನ ಕಿರು ಬೆರಳ ಗಾತ್ರ ದ ಒಂದು ಅಡಿ ಗಿಂತ ಉದ್ಧ ಒಂದು ಜಂತುಹುಳು ಹೊರ ಬಂದಿತ್ತು.!! ಅದೆಷ್ಟೋ ಸಾವಿರ ಕಿರುಹುಳುಗಳು ನನ್ನ ಕಣ್ಣಿಗೆ ಕಾಣದೇ ಹೋಗಿರಬಹುದು. ಆಗ ಬರೀ ನಲವತ್ತೇಳು ಕೆಜಿ ಇದ್ದ ನಾನು ಒಂದೆರಡು ವರ್ಷಗಳಲ್ಲಿ ಅರವತ್ತು-ಅರವತ್ತೈದು ಕೇಜಿ ತೂಗಿ ಆರೋಗ್ಯವಂತನಾದೆ. ಈ ಜಂತು ಹುಳುಗಳ ಕೊಡುಗೆಯಾಗಿ ಬಂದಿದ್ದು ನಾನು ಸಾವಿರಾರು ಜೇನುಗಳನ್ನು ತಿಂದ ಕಾರಣ. ಆದ್ದರಿಂದ ಹೆಚ್ಚು ಸಿಹಿ ತಿನ್ನುವವರು ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಬೇಕಾಗುತ್ತದೆ.
ಸರಕಾರಿ ಹಿರಿಯ ಪ್ರಾಥಮಿಕ ಶಾಲೆ, ಮಿಂಚೇರಿ
ಬಳ್ಳಾರಿ ತಾಲೂಕು ಮತ್ತು ಜಿಲ್ಲೆ
Mob : +91 99029 12684
*******************************************