-->
ಜಗಲಿ ಕಟ್ಟೆ : ಸಂಚಿಕೆ - 56

ಜಗಲಿ ಕಟ್ಟೆ : ಸಂಚಿಕೆ - 56

ಜಗಲಿ ಕಟ್ಟೆ : ಸಂಚಿಕೆ - 56
ತಾರಾನಾಥ್ ಕೈರಂಗಳ
ಮಕ್ಕಳ ಜಗಲಿ
ಮಕ್ಕಳ ಡಿಜಿಟಲ್ ಆನ್ಲೈನ್ ಪತ್ರಿಕೆ
ದಕ್ಷಿಣ ಕನ್ನಡ ಜಿಲ್ಲೆ. 


ಇದು ನಿಮ್ಮ ಮನೆಯ 
ಮಕ್ಕಳ ಜಗಲಿ
www.makkalajagali.com
    ಮಕ್ಕಳ ಜಗಲಿಯ ನನ್ನ ಎಲ್ಲಾ ಆತ್ಮೀಯ ಓದುಗ ಬಂಧುಗಳಿಗೆ ಪ್ರೀತಿಯ ನಮಸ್ಕಾರಗಳು.... ನಿಮ್ಮ ಜೊತೆ ಮಾತಾಡುವ ನಿಮ್ಮ ಸಲಹೆ, ಹೊಸ ಆಲೋಚನೆಗಳನ್ನು ನಮ್ಮ ಜೊತೆ ಹಂಚಿಕೊಳ್ಳುವುದಕ್ಕಾಗಿ ಈ ಜಗಲಿ ಕಟ್ಟೆ.... ಮಕ್ಕಳ ಜಗಲಿಗೆ ಸಂಬಂಧಿಸಿದ ಯಾವುದೇ ವಿಷಯದ ಕುರಿತಾಗಿ ನಿಮ್ಮ ಅನಿಸಿಕೆಗಳು ಹಾಗೂ ಸಲಹೆಗಳನ್ನು ಸ್ವೀಕರಿಸುತ್ತೇವೆ. ವಿದ್ಯಾರ್ಥಿಗಳು, ಪೋಷಕರು, ಶಿಕ್ಷಕರು, ಹಿತೈಷಿಗಳು ನಮಗೆ ಬರೆದು ಕಳುಹಿಸಿ.... ಹೆಸರು ವಿಳಾಸ ಹಾಗೂ ಭಾವಚಿತ್ರದೊಂದಿಗೆ ನಿಮ್ಮ ಅನಿಸಿಕೆಗಳು 100 ಪದಗಳ ಮಿತಿಯಲ್ಲಿರಲಿ..... ತಾರಾನಾಥ್ ಕೈರಂಗಳ



       ಕಳೆದ ವಾರಾಂತ್ಯದಲ್ಲಿ ಮೂಡಬಿದ್ರೆಯ ಆಳ್ವಾಸ್ ನಲ್ಲಿ ನಡೆಯುತ್ತಿದ್ದ ಮಕ್ಕಳ ನಾಟಕ ನೋಡಲು ಹೋಗಿದ್ದೆವು. ಖ್ಯಾತ ಲೇಖಕರಾದ ವೈದೇಹಿ ಅವರು ಬರೆದ ನಾಯಿಮರಿ ನಾಟಕವನ್ನು ರಂಗದಶಾವತಾರಿ ಡಾ. ಜೀವನ ರಾಮ್ ಸುಳ್ಯ ನಿರ್ದೇಶಿಸಿದ್ದರು. ಮನೋಜ್ಞವಾಗಿ ಮೂಡಿ ಬಂದ ಈ ನಾಯಿಮರಿ ನಾಟಕವನ್ನು ಆಳ್ವಾಸ್ ರಂಗ ಅಧ್ಯಯನ ಕೇಂದ್ರದ ವಿದ್ಯಾರ್ಥಿಗಳು ಅಭಿನಯಿಸಿದ್ದರು.
       ವಿಶೇಷವಾಗಿ ಮಕ್ಕಳಿಗೆ ಪ್ರಿಯವಾದ ನಾಟಕ ಎನ್ನುವ ಕಾರಣಕ್ಕೆ ನಮ್ಮನೆಯ ನಿಧಿ ಮತ್ತು ನಿನಾದ ತುದಿಗಾಲಲ್ಲಿ ನಮ್ಮ ಜೊತೆ ಹೊರಟು ನಿಂತಿದ್ದರು. ಒಂದು ನಿಮಿಷವೂ ವ್ಯತ್ಯಾಸವಾಗದ ಹಾಗೆ ಸರಿಯಾಗಿ ಸಾಯಂಕಾಲ 6:45 ಕ್ಕೆ ನಾಟಕ ಆರಂಭವಾಯಿತು. ನಾವೆಲ್ಲ ಕುತೂಹಲದಿಂದ ಕಣ್ಣು ಮಿಟುಕಿಸದೆ ನೋಡುತ್ತಾ ಸುಮಾರು ಒಂದು ಮುಕ್ಕಾಲು ಗಂಟೆಯ ನಾಟಕ ಮುಗಿದದ್ದೇ ತಿಳೀಲಿಲ್ಲ... ನಾಟಕದಲ್ಲಿ ಬರುವ ನಾಯಿಮರಿ, ಸಣ್ಣಮ್ಮ, ಅಜ್ಜ , ಅಜ್ಜಿ, ಪಂಚರಂಗಿ, ಮಂಗಾಣಿ, ಕಳ್ಳರು, ದರ್ಜಿ, ಹಾಗೂ ಇನ್ನಿತರ ಪಾತ್ರಧಾರಿಗಳು ನೆರೆದಿದ್ದ ಪ್ರತಿಯೊಬ್ಬ ಪ್ರೇಕ್ಷಕರನ್ನು ಮಂತ್ರಮುಗ್ಧರನ್ನಾಗಿಸಿ ಸೆಳೆದದ್ದು ತಮ್ಮ ಅತ್ಯಪೂರ್ವ ಅಭಿನಯದಿಂದ. ಭಾಗವಹಿಸಿದ ಪ್ರತಿಯೊಬ್ಬ ವಿದ್ಯಾರ್ಥಿಗಳ ಅಭಿನಯ ಎಲ್ಲರ ಮನಸೂರೆಗೊಂಡಿತ್ತು.
       ಈ ಕಥೆಯಲ್ಲಿ ಮುಖ್ಯವಾಗಿ ಬರುವಂತದ್ದು ಸಣ್ಣಮ್ಮ ಎನ್ನುವ ಬಾಲಕಿಯ ಪ್ರಾಣಿ-ಪಕ್ಷಿ ಪ್ರೇಮ. ಕಳ್ಳರ ಕಾಟದಿಂದ ಪಂಚರಂಗಿ ಎನ್ನುವ ಗಿಳಿಯ ಕಾಲಿಗೆ ಪೆಟ್ಟು ಬಿದ್ದಾಗ ಅದನ್ನು ಆರೈಕೆ ಮಾಡಿ ಸಾಕಿದ್ದು ಸಣ್ಣಮ್ಮ. ಅದೇ ರೀತಿ ತನ್ನ ಮನೆಗೆ ಹೊಸದಾಗಿ ಆಗಮಿಸಿದ ನಾಯಿಮರಿಯನ್ನು ಬಹಳ ಪ್ರೀತಿಯಿಂದ ಹಚ್ಚಿಕೊಳ್ಳುತ್ತಾಳೆ. ಕಳ್ಳರ ದಾಳಿಗೆ ಸಿಲುಕುವ ನಾಯಿಮರಿಯನ್ನು ಹೇಗೋ ಹೋರಾಟ ಮಾಡಿ ರಕ್ಷಿಸುತ್ತಾಳೆ. ತನ್ನ ನಾಯಿಮರಿ ಯ ಪ್ರಾಣ ಇನ್ನೇನೋ ಹೋಗಲಿದೆ ಎನ್ನುವಾಗ ಅಜ್ಜ ಮತ್ತು ಅಜ್ಜಿ ಸಾಯಲಿ ಬಿಡು ಸುಮ್ನಿರು ಅಂತಾರೆ. ಆದರೆ ಅದನ್ನು ರಕ್ಷಿಸುವ ಹಠವನ್ನು ತೊಟ್ಟು ಸಾಗುವ ಸಣ್ಣಮ್ಮ ತನ್ನ ಪ್ರಾಣಿ-ಪಕ್ಷಿಯ ಪ್ರೀತಿಯನ್ನು ಈ ನಾಟಕದ ಮೂಲಕ ತೋರ್ಪಡಿಸುತ್ತಾಳೆ. 
         ಈ ಬಾರಿ ಒಂದನೇ ತರಗತಿ ಸೇರಿರುವ ನಿಧಿ ನಾಟಕವನ್ನು ನೋಡ್ತಾ ನೋಡ್ತಾ ನಾಯಿಮರಿಗೆ ಕಾಟ ಕೊಡುವ ಮಂಗಾಣಿ ಮತ್ತು ಕಳ್ಳರನ್ನು ನೋಡಿ ತುಂಬಾ ದುಃಖ ಪಡ್ತಾಳೆ... ತಾನು ನೋಡುವುದು ನಾಟಕವೆನ್ನುವುದನ್ನು ಮರೆತು ಭಾವಪರವಶಳಾಗಿ ನಾಯಿಮರಿ ಆರೋಗ್ಯ ಪೂರ್ಣವಾದಾಗ ತುಂಬಾ ಖುಷಿ ಪಡ್ತಾಳೆ. 
        ಇದು ನಾಟಕದ ಒಂದು ಪ್ರಸಂಗವೆಂದು ಪರಿಗಣಿಸಿದರು ಕೂಡ ಮಕ್ಕಳ ಭಾವನಾತ್ಮಕ ಮನಸ್ಸು ಹಿರಿಯರಿಗಿಂತ ತುಂಬಾ ಪರಿಶುದ್ಧವಾಗಿರುತ್ತದೆ. ಪ್ರಾಣಿ ಮತ್ತು ಪಕ್ಷಿಗಳನ್ನು ತುಂಬಾ ಇಷ್ಟ ಪಡುವ ಮಕ್ಕಳು ಮುಗ್ದತೆಗೆ ಮತ್ತೊಂದು ಹೆಸರು. ಮಕ್ಕಳ ಮುಗ್ದತೆಗೆ ಕಾರಣವಾಗುವ ಅದೆಷ್ಟೋ ಪ್ರಸಂಗಗಳು ನಮಗೆ ಎದುರಾಗುತ್ತದೆ. ಒಂದು ಬಾರಿ ನಮ್ಮ ಮನೆಯಲ್ಲಿ ಯಾವುದೋ ಬೆಕ್ಕು ಬಂದು ತನ್ನ ಮರಿಯನ್ನು ಬಿಟ್ಟು ಬಾರದೆ ಹೋದಾಗ ಅದರ ಮರಿಗೆ ನಿತ್ಯ ಹಾಲು ಹಾಕುತ್ತಿದ್ದ ನನ್ನ ಮಗ ನಿನಾದನ ಶ್ರದ್ಧೆ ಕಂಡು ಬೆರಗಾಗಿದ್ದೆ. ಮನೆಗಳಲ್ಲಿ ಸಾಕುತ್ತಿದ್ದ ಕೋಳಿ, ಮೇಕೆ, ದನ ಕರುಗಳನ್ನು ಬೇರೊಬ್ಬರಿಗೆ ಮಾರಾಟ ಮಾಡಿದಾಗ ಆ ಮನೆ ಮಕ್ಕಳ ವೇದನೆ ಹೇಳ ತೀರದು. ಮಕ್ಕಳ ಪ್ರೀತಿ ಮಮತೆಗೆ ಸರಿಸಾಟಿ ಯಾವುದೂ ಇಲ್ಲ... ಮಕ್ಕಳ ಮುಗ್ದತೆ, ಆ ನಗು, ಆ ಪ್ರೀತಿ, ಬೆಳೆಯುತ್ತಾ ಹಿರಿಯರಾದಾಗ ಮಾಸದೆ ಹಾಗೆ ಉಳಿದುಕೊಳ್ಳುವುದಾದರೆ ಈ ಜಗತ್ತನ್ನು ವಿಶಿಷ್ಟವಾಗಿ ಆನಂದಿಸಬಹುದು... ನಮಸ್ಕಾರ
         


ಕಳೆದ ಸಂಚಿಕೆಯ ಜಗಲಿಕಟ್ಟೆ - 55 ಅಂಕಣದಲ್ಲಿ ನಿವೃತ್ತ ವಿಜ್ಞಾನ ಶಿಕ್ಷಕರಾದ ಶ್ರೀರಾಮ ಮೂರ್ತಿ... ಇವರು ತಮ್ಮ ಅನಿಸಿಕೆಯನ್ನು ಹಂಚಿಕೊಂಡಿದ್ದರು. ಕಳೆದ ವಾರದ ಜಗಲಿ ಕಟ್ಟೆಯ ಓದುಗರ ಮಾತುಕತೆಯನ್ನು ಈಗ ಓದೋಣ....


ಶಿಕ್ಷಕರ ಡೈರಿಯಲ್ಲಿ ಬಾಲಕೃಷ್ಣ ಶೆಟ್ಟಿ ಅವರು ಬರೆದ 'ಗೆಲುವಿನ ಹುಡುಕಾಟ' ಉತ್ತಮವಾದ ಲೇಖನ.... ಮನಸು ಭಾರವಾಯಿತು.... ಪಾಪ.. ಆ ಮಗುವಿನ ಒತ್ತಡ ಯಾವ ಮಾಪನಕ್ಕಾದರೂ ಸಿಕ್ಕೀತೇ?....
SSLC ಪರೀಕ್ಷೆಯಲ್ಲಿ ಅದ್ಭುತವಾಗಿ ವಿಜ್ಞಾನದ ಅಷ್ಟೂ ಚಿತ್ರ ಬಿಡಿಸಿ ಬೇರೆ ಯಾವ ಪ್ರಶ್ನೆಗೂ ಉತ್ತರಿಸಲು ಬಾರದೆ pls sir /madam pass me ಅಂತ ಬರೆಯುವ ವಿದ್ಯಾರ್ಥಿ ತಾನು fail ಅಂತ ಗೊತ್ತಾದಾಗ ಅವನ ಬೇಸರವನ್ನು ಅವನು ಯಾರ ಮುಂದೆ ತೋಡಿಕೊಂಡಾನು...??!!
.................................... ಹಸೀನ ಮಲ್ನಾಡ್
ವಿಜ್ಞಾನ ಶಿಕ್ಷಕರು
ಸರಕಾರಿ ಪ್ರೌಢಶಾಲೆ ಸುರಿಬೈಲು (RMSA)
ಬಂಟ್ವಾಳ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
********************************************


ಬಾಲಕೃಷ್ಣ ಶೆಟ್ಟಿ ಅವರು ಶಿಕ್ಷಕರ ಡೈರಿಯಲ್ಲಿ ಬರೆದ 'ಗೆಲುವಿನ ಹುಡುಕಾಟ' ಅನುಭವ ಲೇಖನದಲ್ಲಿ ಪಾತ್ರದ ಹೋಂ ಗಾರ್ಡ್ & ಶಿಕ್ಷಕರ ಪ್ರಯತ್ನಕ್ಕೆ ಅಭಿನಂದನೆಗಳು. ಒತ್ತಡ ರಹಿತ ಓದುವಿಕೆ ಮಕ್ಕಳಿಗೆ ಬಾಲ್ಯದಲ್ಲಿ ರೂಢಿಯಾಗದಿದ್ದರೆ ಅವರು ಬೆಳೆದಂತೆ ಓದುವುದೇ ಒಂದು ಸಮಸ್ಯೆಯಾಗುತ್ತದೆ ಎಂಬುದಕ್ಕೆ ಉದಾಹರಣೆಯಂತಿದೆ..
........................................ ಚಿತ್ರಾಶ್ರೀ ಕೆ.ಎಸ್. 
ಸಹ ಶಿಕ್ಷಕರು (ಕಲಾ), 
ಸರಕಾರಿ ಪ್ರೌಢಶಾಲೆ, ಬಡಗ ಎಕ್ಕಾರು, 
ಮಂಗಳೂರು ಉತ್ತರ ವಲಯ. 
ದಕ್ಷಿಣ ಕನ್ನಡ ಜಿಲ್ಲೆ 
********************************************



ನಮಸ್ತೇ.... ಬೇಕು ಎನ್ನುವುದು ವ್ಯಾಮೋಹಕ್ಕೆ ಕಾರಣವಾಗಬಾರದು, ಬೇಡ ಅನ್ನುವುದು ದ್ವೇಷಕ್ಕೆ ಗುರಿಯಾಗಬಾರದು ಎಂಬುದನ್ನು ದೇವಯಾನಿ ಮತ್ತು ಶರ್ಮಿಷ್ಠೆಯ ಕಥೆಯ ಮೂಲಕ ಶಿಕ್ಷಣಾಧಿಕಾರಿಯವರಾದ ಶ್ರೀ ಜ್ಞಾನೇಶ್ ಸರ್ ರವರು ತಮ್ಮ ಸಂಚಿಕೆಯಲ್ಲಿ ಸುಂದರವಾಗಿ ತಿಳಿಸಿದ್ದಾರೆ.    
     ಜೀವನ ಪಾಠವು ಶಾಲೆಯ ನಾಲ್ಕು ಗೋಡೆಗಳ ನಡುವೆ ಸಿಗುವದಿಲ್ಲ. ಅದನ್ನು ಕಲಿಯಲು ಶಾಲೆಯ ಹೊರಗಿನ ಇನ್ನಿತರ ಅವಕಾಶಗಳನ್ನು ಸದುಪಯೋಗ ಪಡಿಸಿಕೊಳ್ಳಬೇಕು ಎಂಬುದನ್ನು ರಮೇಶ್ ಸರ್ ಸೊಗಸಾಗಿ ನಿರೂಪಿಸಿದ್ದಾರೆ.
    ಉಸಿರಾಟ ಕ್ರಿಯೆಯಿಂದ ಶಕ್ತಿ ಬಿಡುಗಡೆಯಾಗುವ ವಿವಿಧ ಹಂತಗಳನ್ನು ಬಹಳ ಸುಂದರವಾಗಿ ದಿವಾಕರ್ ಸರ್ ರವರು ತಮ್ಮ ಮಕ್ಕಳಿಗಾಗಿ ವಿಜ್ಞಾನ ಲೇಖನದಲ್ಲಿ ಪ್ರಸ್ತುತ ಪಡಿಸಿದ್ದಾರೆ.
    ಹಿತ್ತಲ ಬುಡದಲ್ಲೇ ಇದ್ದರೂ ಗೊತ್ತಿರದ ಸಸ್ಯ ಲಿಯಾ ಇಂಡಿಕಾದ ಸೊಗಸಾದ ಪರಿಚಯ ಸಿಕ್ಕಿತು. ಧನ್ಯವಾದಗಳು ಮೇಡಂ. 
    'ನೀವು ನನ್ನನ್ನು ನಂಬಲಾರಿರಿ' ಎನ್ನುವ ಸ್ವತಃ ತಾವೇ ಭಾಷಾಂತರಿಸಿದ ಚಿಕ್ಕ ಮಕ್ಕಳಿಗಾಗಿ ಇರುವ ಸುಂದರ ಪುಸ್ತಕದ ಪರಿಚಯ ವಾಣಿಯಕ್ಕ ನವರಿಂದ.
     ಮಕ್ಕಳಲ್ಲಿ ಬೇರೆ ಬೇರೆ ಕಾರಣಗಳಿಂದ ಒತ್ತಡ ಉಂಟಾಗಿ ಶಾಲೆಗೆ ಗೈರಾಗುವ ಪ್ರಸಂಗದ ಕುರಿತಾದ ಸುಂದರ ಅನುಭವವನ್ನು ಶಿಕ್ಷಕರ ಡೈರಿಯಲ್ಲಿ ಬಾಲಕೃಷ್ಣ ಸರ್ ರವರು ಸೊಗಸಾಗಿ ಹಂಚಿಕೊಂಡಿದ್ದಾರೆ
     ರಮೇಶ್ ಉಪ್ಪುಂದರವರ ಪದದಂಗಳ ಸಂಚಿಕೆ ಚೆನ್ನಾಗಿ ಮೂಡಿ ಬಂದಿದೆ.
     ನಾಗೇಂದ್ರರವರು ತಮ್ಮ ಸವಿ ಜೇನು ಸಂಚಿಕೆಯಲ್ಲಿ ಹೆಜ್ಜೇನು ನೊಣ ಕಚ್ಚಿದ ಅನುಭವವನ್ನು ಬಹಳ ಸೊಗಸಾಗಿ ವಿವರಿದ್ದಾರೆ.
    ಸ್ವರೂಪದ ಅನ್ವೇಶ್ ಅಂಬೆಕಲ್ಲು ಅವರ ಅದ್ಭುತ ಪ್ರತಿಭೆ ತಿಳಿದು ಬೆರಗಾದೆ. ಇಂತಹ ಅದ್ಭುತ ಪ್ರತಿಭೆ ಇನ್ನಷ್ಟು ಬೆಳಗಲಿ ಎಂದು ಹಾರೈಸುತ್ತೇನೆ.
      ಈ ಸಲ ಜಗಲಿಯಲ್ಲಿ ಮಕ್ಕಳ ಬಹಳಷ್ಟು ಬರಹ, ಕವನ, ಚಿತ್ರಗಳು, ಕಥೆಗಳು ಪ್ರಕಟವಾಗಿದ್ದು ಕಂಡು ಇನ್ನಷ್ಟು ಖುಷಿಯಾಯಿತು. ಭೂಮಿಕಾ ಹಾಗೂ ಭೂಮಿಯವರ ಕಥೆಗಳು, ಸೃಷ್ಟಿಯವರ ಲೇಖನ ಬರಹ, ಮಕ್ಕಳ ಚಿತ್ರಗಳು, ಮಕ್ಕಳ ಕವನಗಳು ಎಲ್ಲವೂ ತುಂಬಾ ಸೊಗಸಾಗಿವೆ. ಎಲ್ಲಾ ಮಕ್ಕಳಿಗೆ ಅಭಿನಂದನೆಗಳು. ಹೀಗೆ ಇನ್ನು ಅನೇಕ ಮಕ್ಕಳು ಜಗಲಿಯಲ್ಲಿ ಬರೆಯುವರೆಂದು ಆಶಿಸುತ್ತೇನೆ.
    ಎಲ್ಲರಿಗೂ ಮತ್ತೊಮ್ಮೆ ಮನದಾಳದ ನಮನಗಳು.
....................................... ಶ್ರೀರಾಮ ಮೂರ್ತಿ
ನಿವೃತ್ತ ವಿಜ್ಞಾನ ಶಿಕ್ಷಕರು
ಬಾಯಾರು, ಕಾಸರಗೋಡು ಜಿಲ್ಲೆ
Mob: +91 94819 74949
*******************************************


ಓದುಗರ ಮಾತುಕತೆಯಲ್ಲಿ..... ಅನಿಸಿಕೆ ಅಭಿಪ್ರಾಯಗಳನ್ನು ಹಂಚಿಕೊಂಡು, ಬರೆಯುವ ಪ್ರತಿಯೊಬ್ಬರಿಗೂ ಪ್ರೇರಣೆಯಾಗುತ್ತಿರುವ ಮಕ್ಕಳ ಜಗಲಿ ಕುಟುಂಬದ ನಿವೃತ್ತ ವಿಜ್ಞಾನ ಶಿಕ್ಷಕರಾದ ಶ್ರೀರಾಮ ಮೂರ್ತಿ, ಹಸೀನ ಮಲ್ನಾಡ್, ವಿಜ್ಞಾನ ಶಿಕ್ಷಕರು, ಚಿತ್ರಾಶ್ರೀ ಕೆ.ಎಸ್. ಸಹ ಶಿಕ್ಷಕರು .... ಇವರಿಗೆ ಧನ್ಯವಾದಗಳು. 
       ಮಕ್ಕಳ ಜಗಲಿಗೆ ಸಂಬಂಧಿಸಿದ ಯಾವುದೇ ವಿಷಯದ ಕುರಿತಾಗಿ ನಿಮ್ಮ ಅನಿಸಿಕೆಗಳು ಹಾಗೂ ಸಲಹೆಗಳನ್ನು ಸ್ವೀಕರಿಸುತ್ತೇವೆ. ವಿದ್ಯಾರ್ಥಿಗಳು, ಪೋಷಕರು, ಶಿಕ್ಷಕರು, ಹಿತೈಷಿಗಳು ನಮಗೆ ಬರೆದು ಕಳುಹಿಸಿ.... ಹೆಸರು ವಿಳಾಸ ಹಾಗೂ ಭಾವಚಿತ್ರದೊಂದಿಗೆ ನಿಮ್ಮ ಅನಿಸಿಕೆಗಳು 100 ಪದಗಳ ಮಿತಿಯಲ್ಲಿರಲಿ.....
   ಮುಂದಿನ ವಾರದ ಜಗಲಿ ಕಟ್ಟೆಯಲ್ಲಿ ಮತ್ತೆ ಸಿಗೋಣ.... ನಮಸ್ಕಾರ
................................. ತಾರಾನಾಥ್ ಕೈರಂಗಳ
ಮಕ್ಕಳ ಜಗಲಿ
ಮಕ್ಕಳ ಡಿಜಿಟಲ್ ಆನ್ಲೈನ್ ಪತ್ರಿಕೆ
ದಕ್ಷಿಣ ಕನ್ನಡ ಜಿಲ್ಲೆ. 
Mob : 9844820979
******************************************


Ads on article

Advertise in articles 1

advertising articles 2

Advertise under the article