-->
ಜೀವನ ಸಂಭ್ರಮ : ಸಂಚಿಕೆ - 144

ಜೀವನ ಸಂಭ್ರಮ : ಸಂಚಿಕೆ - 144

ಜೀವನ ಸಂಭ್ರಮ : ಸಂಚಿಕೆ - 144
ಲೇಖಕರು : ಎಂ.ಪಿ. ಜ್ಞಾನೇಶ್ 
ಶಿಕ್ಷಣಾಧಿಕಾರಿ 
ಪ್ರಧಾನ ಮಂತ್ರಿ ಪೋಷಣ್ ಶಕ್ತಿ ನಿರ್ಮಾಣ
(ಮಧ್ಯಾಹ್ನ ಉಪಹಾರ ಯೋಜನೆ) 
ಜಿಲ್ಲಾ ಪಂಚಾಯತ್ ಮಂಗಳೂರು
ದಕ್ಷಿಣ ಕನ್ನಡ ಜಿಲ್ಲೆ 
      
                
ಮಕ್ಕಳೇ.... ನಾವು ಈ ಹಿಂದೆ ಕ್ಲೇಶಗಳ ಬಗ್ಗೆ ತಿಳಿದುಕೊಂಡಿದ್ದೇವೆ. ಈ ಕ್ಲೇಶಗಳನ್ನು ತೊಡೆದು ಹಾಕುವ ವಿಧಾನದ ಬಗ್ಗೆ ತಿಳಿದುಕೊಳ್ಳೋಣ. ಇದಕ್ಕೆ ಕ್ರಿಯಾ ಯೋಗ ಎನ್ನುವರು. ಯೋಗದಿಂದ ದೇಹ, ಮನಸ್ಸು, ಬುದ್ಧಿ ಮತ್ತು ಭಾವ ಶುದ್ದಿಯಾಗುತ್ತದೆ. ಮನಸ್ಸು ಶುದ್ಧಿಯಾದಾಗ ಜ್ಞಾನ ಮನಸ್ಸಿನಲ್ಲಿ ಹೊತ್ತಿಕೊಳ್ಳುತ್ತದೆ. ವಿವೇಕ ಜ್ಞಾನ ಉಂಟಾಗುತ್ತದೆ. ಇದರಿಂದ ಪರಮ ಶಾಂತಿ ದೊರಕುತ್ತದೆ. ಪಾತಂಜಲ ಮಹರ್ಷಿ ಹೇಳುತ್ತಾರೆ, ಯೋಗ ಎಂಟು ಅಂಗಗಳಿಂದ ಕೂಡಿದ ವಿಧಾನ. ಇದಕ್ಕೆ ಅಷ್ಟಾಂಗ ಯೋಗ ಎನ್ನುವರು. ಹೇಗೆ ವಿದ್ಯಾಭ್ಯಾಸ ಮಾಡುತ್ತೇವೆಯೋ ಹಾಗೆ. ಮೊದಲು ಪ್ರಾಥಮಿಕ, ನಂತರ ಮಾಧ್ಯಮಿಕ, ಆಮೇಲೆ ಪ್ರೌಢ ಕಲಿಯಬೇಕು. ಕೊನೆಗೂ ಒಬ್ಬ ವಿಜ್ಞಾನಿ, ಸಂಶೋಧಕ ತಯಾರಾಗುತ್ತಾನೆ. ಯೋಗವು ಎಂಟು ಅಂಗಗಳನ್ನು ಹೊಂದಿದೆ. ಕ್ರಮಬದ್ಧವಾಗಿ ಅವುಗಳನ್ನು ಮೆಟ್ಟಿಲು ಮೆಟ್ಟಿಲಾಗಿ ಏರಬೇಕು. ಇದಕ್ಕೆ ಕ್ರಿಯಾಯೋಗ ಎನ್ನುವರು. 

ಆ ಎಂಟು ಅಂಗಗಳು ಯಾವುವು ಅಂದರೆ ಯಮ, ನಿಯಮ, ಆಸನ, ಪ್ರಾಣಯಾಮ, ಪ್ರತ್ಯಾಹಾರ, ಧಾರಣ, ದ್ಯಾನ ಮತ್ತು ಸಮಾಧಿ. ಇದರಲ್ಲಿ ಪ್ರಾರಂಭ ಯಮ. ಯಮ - ಅಂದರೆ ನಾವು ತಿಳಿದಿರುವ ಯಮ ಅಲ್ಲ. ಪಾತಂಜಲರ ಪ್ರಕಾರ ಯಮ ಅಂದರೆ ಮಾಡಬಾರದನ್ನು ಮಾಡಬಾರದು. ಯಾವುದೇ ಕೆಲಸ ಮಾಡುವಾಗ ಪೂರ್ಣ ವಿಚಾರ ಮಾಡಿ, ಅದರ ಸಾಧಕ ಬಾಧಕಗಳನ್ನು ಅರಿತು, ಅದು ಬಾಧಕ ಅಂತ ಗೊತ್ತಾದರೆ, ಅದನ್ನು ಮಾಡಬಾರದು. ಯಮ ಎನ್ನುವುದು ಆರಂಭಿಕ ಶಿಕ್ಷಣ. ಯೋಗ ಶಿಕ್ಷಣದ ಪ್ರಾರಂಭಿಕ ಹಂತ. ಮನಸ್ಸು ಹೇಳಿದ್ದನ್ನೆಲ್ಲ ಮಾಡದೆ, ವಿಚಾರ ಮಾಡಿ, ಅದು ಜೀವನಕ್ಕೆ ತೊಂದರೆ ಅಂತ ಗೊತ್ತು ಮಾಡಿಕೊಂಡು, ಮಾಡದೇ ಇರುವುದು, ದೂರ ಸರಿಯುವುದೇ ಯಮ. ಇದರಲ್ಲಿ ಐದು ಪ್ರಾಕಾರ.... ಅಹಿಂಸಾ, ಸತ್ಯ, ಆಸ್ತೇಯ, ಬ್ರಹ್ಮಚರ್ಯ ಮತ್ತು ಅಪರಿಗ್ರಹ. ಇದರಲ್ಲಿ ಅಹಿಂಸೆಯ ಬಗ್ಗೆ ತಿಳಿದುಕೊಳ್ಳೋಣ....

ಅಹಿಂಸೆ : ಅಹಿಂಸೆ ಎಂದರೆ ಹಿಂಸೆ ಮಾಡಬಾರದು ಎಂದು ನಮಗೆ ಗೊತ್ತು. ಆದರೆ ಪಾತಂಜಲ ಮಹರ್ಷಿಯು ಹೇಳುತ್ತಾರೆ. ಅಹಿಂಸೆ ಮಾಡಬಾರದು ಅಂತಾದರೆ ಮನಸ್ಸು ಹೇಗಿರಬೇಕು...? ಮನಸ್ಸು ಹೇಗಿದ್ದಾಗ ಅಹಿಂಸೆಯ ಮನೋಭಾವ ಬರುವುದಿಲ್ಲ?. ಪಾತಂಜಲ ಹೇಳುತ್ತಾರೆ, ಮನಸ್ಸು ಮಧುರ ವಾಗಿರಬೇಕು, ಸುಂದರವಾಗಿರಬೇಕು, ಅದು ಅಹಿಂಸೆ. ಒಳ್ಳೆ ಒಳ್ಳೆಯದನ್ನು ನೋಡಿ ಮೆಚ್ಚಿಕೊಳ್ಳುವುದೇ ಅಹಿಂಸೆ. ಒಳ್ಳೆಯದನ್ನು ನೋಡಿ ಹಾಳು ಮಾಡಬೇಕು ಎನ್ನುವುದೇ ಹಿಂಸೆ. ಉದಾಹರಣೆಗೆ ನಮ್ಮ ಮನೆ ಚಿಕ್ಕದು, ಅಂದವಾಗಿರುವುದಿಲ್ಲ. ಎದುರಿಗೆ ಒಂದು ಸುಂದರ ದೊಡ್ಡ ಮನೆ ನಿರ್ಮಾಣ ಮಾಡಿರುತ್ತಾರೆ. ಆಗ ಅದನ್ನು ನೋಡಿ ಮೆಚ್ಚಿ, ನಾನು ಬೆಳಗ್ಗೆ ಮನೆ ಬಾಗಿಲನ್ನು ತೆರೆದರೆ, ನಿಮ್ಮ ಸುಂದರ ಮನೆ ಕಾಣುತ್ತದೆ, ಬಹಳ ಸಂತೋಷ ಆಗುತ್ತದೆ, ಅಂತ ಹೇಳುವುದೇ ಅಹಿಂಸೆ. ನಮ್ಮ ಮಾತು ಬೇರೆಯವರಿಗೆ ಸಂತೋಷವಾಗು ವಂತಿದ್ದರೆ ಅಹಿಂಸೆ. ಅದರ ಬದಲು ಈ ಮನೆ ಬಿದ್ದು ಹೋಗಲಿ ಎಂದು ಮನಸ್ಸಿನಲ್ಲಿ ಹೇಳಿಕೊಳ್ಳುವುದು ಕೂಡ ಹಿಂಸೆ. ಅಂದರೆ ನಾಶದ ಭಾವ ಬಂತು, ದ್ವೇಷದ ಭಾವ ಬಂತು, ನಾಶ, ದ್ವೇಷ, ಕ್ರೌರ್ಯದ ಭಾವ ಬಂತು ಅಂದರೆ, ಅದು ಹಿಂಸೆ. ಸಂತೋಷದ ಭಾವ ಬಂದರೆ ಅದು ಅಹಿಂಸೆ. ಜಗತ್ತಿನಲ್ಲಿ ಒಳ್ಳೆಯದು ಚೆನ್ನಾಗಿರುವುದು ಇಲ್ಲವೇನು?. ಚೆನ್ನಾಗಿರುವುದನ್ನು ನೋಡಿ ಮೆಚ್ಚುಗೆ ವ್ಯಕ್ತಪಡಿಸಬೇಕು. ನಮ್ಮ ಮನೆ ಮಗು ಫೇಲಾಗಿರಬಹುದು. ಪಕ್ಕದ ಮನೆಯ ಮಗು ಪಾಸ್ ಆಗಿದ್ದರೆ, ಕರೆದು ಹಾಲು ಹಣ್ಣು ನೀಡಿ, ಮೆಚ್ಚುಗೆ ವ್ಯಕ್ತ ಮಾಡುವುದು ಅಹಿಂಸೆ. ದುಡಿದು ಖರೀದಿಸಲು ಬಂದಾಗ ಹಣಕ್ಕೆ ಸರಿಯಾಗಿ ಸಾಮಾನು ನೀಡದಿರುವುದು ಅಹಿಂಸೆ. ಏನೇ ಮಾಡಿದರೂ ಮಧುರ ಹೃದಯದಿಂದ ಮಾಡಬೇಕಾಗುತ್ತದೆ. ಮಧುರ ಹೃದಯವಿದ್ದರೆ ಅಂತಹ ಕೃತ್ಯಗಳು ಆಗುವುದಿಲ್ಲ. ಅಂತಹ ಮಧುರ ಹೃದಯವೇ ಅಹಿಂಸೆ.

ಕೆಲವರು ನೋಡಬೇಕು. ಮನೆಗೆ ಕರೆದು ಪ್ರೀತಿಯಿಂದ ತಿಂಡಿ ಕಾಫಿ ನೀಡುತ್ತಾರೆ. ತಿಂದವನೇ ಹೃದಯಾರ ಮೆಚ್ಚುಗೆ ವ್ಯಕ್ತ ಮಾಡಿದರೆ ಅಹಿಂಸೆ. ಅದರ ಬದಲು ಇವರು ಯಾವ ಉದ್ದೇಶದಿಂದ ಕಾಫಿ ತಿಂಡಿ ನೀಡಿದ್ದಾರೋ? ಮುಂದೆ ಏನು ಮಾಡುತ್ತಾನೋ?. ಅಂತ ಭಾವಿಸಿದರೆ ಹಿಂಸೆ. ನಮಗೆ ನಮ್ಮ ಹೃದಯ ಮಹತ್ವದ್ದು ವಿನಃ ಅವರ ಹೃದಯ ತೆಗೆದುಕೊಂಡು ಮಾಡುವುದೇನಿದೆ...? ನಮ್ಮ ಹೃದಯ ಮಧುರ ಮಾಡಿಕೊಳ್ಳಬೇಕು. ಜೈನ ಶಾಸ್ತ್ರದಲ್ಲಿ ಹೇಳಿದ್ದು "ಅಹಿಂಸೆಯೇ ಧರ್ಮ" ಬಸವಣ್ಣ ಹೇಳಿದ್ದು "ದಯವಿಲ್ಲದ ಧರ್ಮ ಯಾವುದಯ್ಯ" ಎಂದರು. ಮಧುರ ಹೃದಯವೇ ಧರ್ಮ. ರಾಜ ರವಿವರ್ಮ ಸೌಂದರ್ಯವನ್ನು ಬಣ್ಣಗಳಲ್ಲಿ ಮೂಡಿಸಿದ್ದನು. ಆತನ ಉದ್ದೇಶ, ನಾನು ಯಾವ ಸೌಂದರ್ಯವನ್ನು ನೋಡಿ ಆನಂದ ಪಡುತ್ತಿದ್ದೇನೆಯೋ ಅದನ್ನು ಲಕ್ಷಾಂತರ ಮಂದಿ ನೋಡಿ ಆನಂದ ಪಡಬೇಕು ಅನ್ನುವುದೇ ಆಗಿತ್ತು. ಅಂತಾ ಹೃದಯವೇ ಅಹಿಂಸೆ. 

ಯೋಗ ಶುರುವಾಗುವುದೇ ಮಧುರ ಹೃದಯದಿಂದ. ದ್ವೇಷ, ಕ್ರೌರ್ಯ ಮತ್ತು ಅಸೂಯೆ, ಮನಸ್ಸಿನಲ್ಲಿ ತುಂಬಿದಾಗ, ಕಡೀಬೇಕು, ತುಳೀಬೇಕು, ಮುಗಿಸಬೇಕು ಅನಿಸುತ್ತದೆ. ದ್ವೇಷ ಅಂದರೆ ನನಗೆ ಬೇಡವಾದುದನ್ನು ಕಂಡರೆ ಆಗುವ ಸ್ಥಿತಿ. ಅಸೂಯೆ ಎಂದರೆ ಹೊಟ್ಟೆಕಿಚ್ಚು, ಮತ್ಸರ. ಬೇರೆಯವರಲ್ಲಿ ಹೊಸದೇನಾದರೂ ಕಂಡರೆ, ನಮ್ಮಲ್ಲಿ ಇಲ್ಲದೆ ಇದ್ದರೆ, ನಮಗೆ ತಾಪ ಶುರುವಾಗುತ್ತದೆ. ಇದೇ ಅಸೂಯೆ. ಇದೇ ನಮ್ಮನ್ನು ಹಿಂಸೆ ಮಾಡುವಂತೆ ಮಾಡುತ್ತದೆ. ಅದನ್ನು ದೂರ ಮಾಡಬೇಕು. ಇದನ್ನು ಮಾಡಬಾರದು. ಕ್ರೌರ್ಯ ಅಂದರೆ ಇನ್ನೊಬ್ಬರಿಗೆ ನೋವಾಗುವಾಗ ನನಗೆ ಸಂತೋಷವಾಗುತ್ತಿದ್ದರೆ, ಅದು ಕ್ರೌರ್ಯ. ಇನ್ನೊಬ್ಬರಿಗೆ ಹಲ್ಲೆ ಮಾಡಿ ಸಂತೋಷಪಡುವುದೇ ಕ್ರೌರ್ಯ. ಈ ದ್ವೇಷ, ಅಸೂಯೆ ಮತ್ತು ಕ್ರೌರ್ಯವನ್ನು ಮಾಡದಿರುವುದೇ ಯಮ. ಅದೇ ಅಹಿಂಸೆ. ಅವು ನಮ್ಮೊಳಗಿದ್ದರೆ ನಮ್ಮನ್ನೇ ಹಿಂಸೆ ಮಾಡುತ್ತದೆ. ಇವೆ ಮನೆ, ಮಾರು, ಸಮಾಜ, ದೇಶವನ್ನು ಹಾಳುಮಾಡುತ್ತವೆ. ಈ ಮೂರು ಕೂಡೇ ಇರುತ್ತವೆ, ಹೊರಗಡೆ ಕಾಣುವುದಿಲ್ಲ. ಇವುಗಳನ್ನು ತೆಗಿಯಬೇಕು ಪೋಷಿಸಬಾರದು. ಇವು ನಮ್ಮ ಸಂತೋಷ ತಿಂದು ಹಾಕುತ್ತವೆ. ಅಹಿಂಸೆ ಹೊಂದಿರುವ ವ್ಯಕ್ತಿ ನೋಡಿ ಸಂತೋಷ ಪಡುತ್ತಾನೆ. ಕೇಳಿ ಸಂತೋಷ ಪಡುತ್ತಾನೆ. ಮಾಡಿ ಸಂತೋಷ ಪಡುತ್ತಾನೆ. ಇನ್ನೊಬ್ಬರಲ್ಲಿರುವ ಒಳ್ಳೆಯದನ್ನು ಮೆಚ್ಚಿ ಸಂತೋಷ ಪಡುತ್ತಾನೆ. ಒಳ್ಳೆಯದು ಎಲ್ಲಿದ್ದರೂ, ಯಾರಲ್ಲಿದ್ದರೂ ಮೆಚ್ಚಿ ಪ್ರಸಂಶೆ ಮಾಡುತ್ತಾನೆ, ಇದು ಅಹಿಂಸೆ. ಇನ್ನೊಬ್ಬರ ಮನಸ್ಸಿಗೆ ಸಂತೋಷ ಮಾಡುವುದೇ ಅಹಿಂಸೆ. 

ಈ ಹೆಜ್ಜೆ ಪ್ರಥಮ ಹೆಜ್ಜೆ. ಇದನ್ನು ಪಾಲನೆ ಮಾಡಿದರೆ ನಮ್ಮ ಜೀವನ ಸುಂದರ, ಮಧುರವಾಗುತ್ತದೆ. ಹೂವು ಮಧುರ ಇದೆ. ಸುಂದರ ಇದೆ. ಇದು ಯಾರನ್ನು ಹಿಂಸಿಸುವುದಿಲ್ಲ. ನಾವೇನಾದರೂ ಕಿತ್ತು ಹೊಸಕಿ ಹಾಕಿದರೆ ನಮ್ಮ ಕೈಯನ್ನೇ ಸುವಾಸನೆ, ಮಧುರ ಮಾಡುತ್ತದೆ . ಕಾಲಲ್ಲಿ ತುಳಿದರೆ ಕಾಲನ್ನೇ ಸುವಾಸನೆ ಮಾಡುತ್ತದೆ. ಅಹಿಂಸೆಗೆ ಹೂವು ಒಂದು ಉದಾಹರಣೆ. ಅಹಿಂಸಾ ವ್ಯಕ್ತಿ ಬೇರೆಯವರನ್ನು ಮಧುರ ಮಾಡುತ್ತಾನೆ. ಮನಸ್ಸು ಮಧುರ ಇದ್ದರೆ ಅದೇ ನಮಗೆ ಎಲ್ಲಾ ಹೇಳುತ್ತದೆ. ಯಾರು ಹೇಗಾದರೂ ಆಗಲಿ. ನಮ್ಮ ಬದುಕು ಮಧುರವಾಗುತ್ತದೆ. ಮಗು ಅತ್ತರು, ನಕ್ಕರು ಸಂತೋಷ. ಏಕೆಂದರೆ ಅದರ ಹಿಂದಿರುವ ಮಧುರ ಭಾವ. ಭಾವ ಮಧುರವಾದರೆ, ನೋಟ ಮಧುರವಾಗುತ್ತದೆ. ಶಬ್ದ ಮಧುರವಾಗುತ್ತದೆ. ರಸ ಮಧುರವಾಗುತ್ತದೆ. ಗಂಧ ಎಲ್ಲಾ ಮಧುರವಾಗುತ್ತದೆ. ಮಾಡುವ ಕಾರ್ಯ ಮಧುರವಾಗುತ್ತದೆ. ವಿಕೃತ ಮನಸ್ಸು ಮಧುರ ಅಲ್ಲ, ಅದು ಹಿಂಸೆ ಅಲ್ಲವೇ ಮಕ್ಕಳೇ....
......................................... ಎಂ.ಪಿ. ಜ್ಞಾನೇಶ್ 
ಶಿಕ್ಷಣಾಧಿಕಾರಿ 
ಪ್ರಧಾನ ಮಂತ್ರಿ ಪೋಷಣ್ ಶಕ್ತಿ ನಿರ್ಮಾಣ
(ಮಧ್ಯಾಹ್ನ ಉಪಹಾರ ಯೋಜನೆ) 
ಜಿಲ್ಲಾ ಪಂಚಾಯತ್ ಮಂಗಳೂರು
ದಕ್ಷಿಣ ಕನ್ನಡ ಜಿಲ್ಲೆ 
*******************************************


Ads on article

Advertise in articles 1

advertising articles 2

Advertise under the article