-->
ಮಕ್ಕಳಿಗಾಗಿ ವಿಜ್ಞಾನ : ಸಂಚಿಕೆ - 38

ಮಕ್ಕಳಿಗಾಗಿ ವಿಜ್ಞಾನ : ಸಂಚಿಕೆ - 38

ಮಕ್ಕಳಿಗಾಗಿ ವಿಜ್ಞಾನ : ಸಂಚಿಕೆ - 38
ಲೇಖಕರು : ದಿವಾಕರ ಶೆಟ್ಟಿ ಎಚ್
ನಿವೃತ್ತ ಪ್ರವಾಚಕರು
ಸರಕಾರಿ ಶಿಕ್ಷಕ ಶಿಕ್ಷಣ ಮಹಾವಿದ್ಯಾಲಯ
ಮಂಗಳೂರು, ದಕ್ಷಿಣ ಕನ್ನಡ ಜಿಲ್ಲೆ
Mob: 9448571203


         
    ಪ್ರೀತಿಯ ಮಕ್ಕಳೇ... ಇಲ್ಲಿಯವರೆಗೆ ರಕ್ತ ನಾಳಗಳ ಬಗ್ಗೆ ಬಹಳ ವಿಸ್ತಾರವಾಗಿ ತಿಳಿದೆವು. ಇವತ್ತು ರಕ್ತವನ್ನೊತ್ತುವ ಪಂಪ್ ಎಂದು ಕರೆಸಿಕೊಳ್ಳುವ ಹೃದಯದ ಬಗ್ಗೆ ಮತ್ತು ಇತರ ವಿವರಗಳನ್ನು ತಿಳಿಯೋಣ. ಹೃದಯ ರಕ್ತವನ್ನೊತ್ತುವ ಪಂಪೇ ಹೊರತು ರಕ್ತವನ್ನೆತ್ತುವ ಪಂಪು ಅಲ್ಲ ಎಂಬುದು ನಿಮಗೆ ಖಾತ್ರಿಯಾಗಿದೆ. ಈ ಹೃದಯದ ಸಂಕೀರ್ಣತೆಯ ಅಧ್ಯಯನ ಅಂದರೆ ಜೀವ ವಿಕಾಸದ ಅಧ್ಯಯನವೇ. ಎರೆಹುಳುವಿನಲ್ಲಿ ಏಳು ಜೊತೆ ಹೃದಯಗಳು ಜೀರ್ಣ ನಾಳದ ಇಕ್ಕೆಲಗಳಲ್ಲಿ ಕಂಡು ಬರುತ್ತವೆ. ಅಲ್ಲಿಂದ ನೀವು ಸಂಧಿಪದಿಗಳಿಗೆ ಬಂದರೆ (arthropods) ಜಿರಳೆಯಲ್ಲಿ ಹೃದಯ ದೇಹದ ಮೇಲ್ಭಾಗದಲ್ಲಿದೆ (dorsal heart). ಅಲ್ಲಿಂದ ನೀವು ಬೆನ್ನು ಮೂಳೆ ಇರುವ ಪ್ರಾಣಿಗಳಲ್ಲಿ (vertebrae) ಬಂದರೆ ಹೃದಯ ದೇಹದ ಕೆಳಭಾಗದಲ್ಲಿದೆ (ventral heart). ಕಶೇರುಕಗಳಲ್ಲಿ ದೇಹದ ಬೇರೆ ಬೇರೆ ಭಾಗಗಳಿಂದ ರಕ್ತವನ್ನು ಸ್ವೀಕರಿಸುವ ಕೋಣೆಗಳನ್ನು ಹೃತ್ಕರ್ಣಗಳು (atrium/auricles) ಎಂದು ಕರೆದರೆ ರಕ್ತವನ್ನು ದೇಹದ ಬೇರೆ ಬೇರೆ ಭಾಗಗಳಿಗೆ ಒತ್ತುವ ಕೋಣೆಗಳು ಹೃತ್ಕುಕ್ಷಿಗಳೆಂದಾಗುತ್ತವೆ (ventricles). ಹೃತ್ಕರ್ಣಗಳು ದೇಹದಿಂದ ರಕ್ತವನ್ನು ಸ್ವೀಕರಿಸಿ ಅಲ್ಲಿಯೇ ಪುಸಕ್ಕನೆ ಹೃತ್ಕುಕ್ಷಿಗೊಳಗೆ ತಳ್ಳಿ ಬಿಡುವುದರಿಂದ ಅವುಗಳ ಗೋಡೆಗಳು ತೆಳು ಆದರೆ ಹೃತ್ಕುಕ್ಷಿಗಳ ಭಿತ್ತಿ ಬಲಯುತವಾಗಿ ಮತ್ತು ದಪ್ಪನಾಗಿರಬೇಕಾಗುತ್ತದೆ. 

ಮೀನುಗಳ ಹೃದಯದಲ್ಲಿರುವುದು ಎರಡೇ ಕೋಣೆಗಳು. ಒಂದು ಹೃತ್ಕರ್ಣ ಮತ್ತು ಒಂದೇ ಹೃತ್ಕುಕ್ಷಿ. ಹೃತ್ಕರ್ಣ ದೇಹದ ಎಲ್ಲಾ ಕಡೆಯಿಂದ ರಕ್ತವನ್ನು ಸ್ವೀಕರಿಸಿದರೆ ಹೃತ್ಕುಕ್ಷಿ ಮೆದುಳು, ಕಿವಿರು ಮತ್ತು ದೇಹದ ಇತರ ಭಾಗಗಳಿಗೆ ರಕ್ತವನ್ನು ಕಳಿಸುತ್ತದೆ. ಇಲ್ಲಿ ಆಮ್ಲಜನಕ ಸಹಿತ (ಶುದ್ದ) ಮತ್ತು ಆಮ್ಲಜನಕ ರಹಿತ (ಅಶುದ್ಧ) ರಕ್ತ ಎಂಬ ಕಲ್ಪನೆ ಇಲ್ಲ. ಅಲ್ಲಿಂದ ಉಭಯವಾಸಿಗಳಿಗೆ (amphibia) ಬಂದರೆ ಮೂರು ಕೋಣೆಗಳ ಹೃದಯವಿದೆ. ಎರಡು ಹೃತ್ಕರ್ಣಗಳು ಮತ್ತು ಒಂದು ಹೃತ್ಕುಕ್ಷಿ. ಎಡ ಹೃತ್ಕರ್ಣ ದೇಹದ ಭಾಗಗಳಿಂದ ಆಮ್ಲಜನಕ ರಹಿತ ರಕ್ತ ಸ್ವೀಕರಿಸಿದರೆ ಬಲ ಹೃತ್ಕರ್ಣ ಶ್ವಾಸಕೋಶದಿಂದ ಆಮ್ಲಜನಕ ಸಹಿತ ರಕ್ತವನ್ನು ಸ್ವೀಕರಿಸುತ್ತವೆ. ಅಲ್ಲಿಂದ ಎರಡೂ ರಕ್ತ ಹೃತ್ಕುಕ್ಷಿಗೆ ತಳ್ಳಿದಾಗ ರಕ್ತ ಮಿಶ್ರವಾಗುತ್ತದೆ. ಈ ಮಿಶ್ರ ರಕ್ತ ದೇಹದ ಎಲ್ಲ ಭಾಗಗಳಿಗೆ ತಳ್ಳಲ್ಪಡುತ್ತವೆ. ಸರಿಸೃಪಗಳನ್ನು (reptiles) ಗಮನಿಸಿದರೆ ಅಲ್ಲಿ 4 ಕೋಣೆಗಳ ಹೃದಯವಿದೆ. ಆದರೆ ಹೃತ್ಕುಕ್ಷಿಗಳ ನಡುವಿನ‌ ಗೋಡೆ ಪೂರ್ಣವಾಗಿಲ್ಲ. ಆದ್ದರಿಂದ ಶುದ್ಧ ಮತ್ತು ಅಶುದ್ಧ ರಕ್ತ ಅಲ್ಪ ಪ್ರಮಾಣದಲ್ಲಿ ಮಿಶ್ರವಾಗುತ್ತದೆ. ಅಲ್ಲಿಂದ ಪಕ್ಷಿಗಳು (aves) ಮತ್ತು ಸಸ್ತನಿಗಳಿಗೆ (mammals) ಬಂದರೆ ಹೃದಯದ ಕೋಣೆಗಳು ತಲಾ 4 ಇದ್ದು ಹೃತ್ಕುಕ್ಷಿಗಳ ನಡುವಿನ ಗೋಡೆಗಳು ಪೂರ್ತಿಯಾಗಿವೆ. ಆದ್ದರಿಂದ ಇಲ್ಲಿ ಶುದ್ಧ ಮತ್ತು ಅಶುದ್ಧ ರಕ್ತಗಳ ಮಿಶ್ರಣವಾಗುವುದಿಲ್ಲ. ಅಂದರೆ ದೇಹದ ಎಲ್ಲಾ ಭಾಗಗಳು ಆಮ್ಲಜನಕ ಸಹಿತ ರಕ್ತವನ್ನು ಪಡೆಯುತ್ತವೆ.
 
ಹಾಗಾದರೆ ಉಳಿದ ಜೀವಿಗಳ ವಿಷಯದಲ್ಲಿ ಅಸಡ್ಡೆ ತೋರಿದ ನಿಸರ್ಗ ಪಕ್ಷಿ ಮತ್ತು ಸಸ್ತನಿಗಳ ವಿಷಯದಲ್ಲಿ ತುಂಬಾ ಕಾಳಜಿ ತೆಗೆದುಕೊಂಡಿರುವುದಾದರೂ ಏಕೆ? ಕೆಳ ಹಂತದ ಪ್ರಾಣಿಗಳ ಶಕ್ತಿಯ ಬೇಡಿಕೆ ಕಡಿಮೆ. ಅಂದರೆ ಅವು ಶೀತ ರಕ್ತ ಪ್ರಾಣಿಗಳು. ಇಲ್ಲಿ ಶೀತ ರಕ್ತ ಪ್ರಾಣಿಗಳು ಎಂಬ ಪದ ಪ್ರಯೋಗ ತಪ್ಪು. ಇವುಗಳ ದೇಹದ ಉಷ್ಣತೆ ಸ್ಥಿರವಾಗಿರುವುದಿಲ್ಲ ಅಂದರೆ ಅದು ವಾತಾವರಣ ಉಷ್ಣತೆಯೊಂದಿಗೆ ಬದಲಾಗುತ್ತದೆ. ಅಂದರೆ ಇವು ವಿಷಮ ಶಾಖ ಜೀವಿಗಳು (poikilothermic animals). ಆದರೆ ಪಕ್ಷಿಗಳು ಮತ್ತು ಸಸ್ತನಿಗಳು ತಮ್ಮ ದೇಹದ ಉಷ್ಣತೆಯನ್ನು ಕಾಯ್ದುಕೊಳ್ಳುವ ಅಂದರೆ ನೀವು ಹೇಳುವ ಬಿಸಿ ರಕ್ತ ಪ್ರಾಣಿಗಳು. ಇವುಗಳನ್ನು ಸಮ ಶಾಖ ಜೀವಿಗಳು (homeothermic animals) ಎಂದರೆ ಸರಿ. ಮಾನವನ ದೇಹದ ಉಷ್ಣತೆ 36°C ಆದರೆ ಕೋಳಿಯದ್ದು 42°C. ಉಷ್ಟ್ರ ಪಕ್ಷಿಯ ದೇಹದ ಉಷ್ಣತೆ ಗಮನಿಸಿ ಅದನ್ನು ಬೆಂಕಿ ಕೋಳಿ ಅಂತಲೇ ಕರೆಯುವುದಲ್ಲವೇ? ಇವುಗಳ ದೇಹದ ಉಷ್ಣತೆ ವಾತಾವರಣದ ಉಷ್ಣತೆಗಿಂತ ಹೆಚ್ಚಿರುವುದರಿಂದ ನಿರಂತರವಾಗಿ ದೇಹದ ಶಾಖ ನಷ್ಟವಾಗುತ್ತಲೇ ಇರುತ್ತದೆ. ಗಾಳಿಗೆ ತೆರೆದಿಟ್ಟ ಬಿಸಿ ಕಾಫಿ ತಣ್ಣಗಾಗುತ್ತಲೇ ಇರುವ ಹಾಗೆ. ನಾವು ಈ ಕಾಫಿಯನ್ನು ಪದೇ ಪದೇ ಬಿಸಿ ಮಾಡಿದ ಹಾಗೆ ಈ ಜೀವಿಗಳು ಶಕ್ತಿ ಉತ್ಪಾದಿಸುತ್ತಲೇ ಇರಬೇಕಾಗುತ್ತದೆ. ನಾವು ಕಾಫಿ ತಣ್ಣಗಾಗಬಾರದೆಂದು ಥರ್ಮಾಸ್ ಫ್ಲಾಸ್ಕ್ನಲ್ಲಿ ಹಾಕಿ ಇಡುತ್ತೇವಲ್ಲ ಹಾಗೆ ಈ ಪ್ರಾಣಿಗಳು ತಮ್ಮ ದೇಹವನ್ನು ಗರಿಗಳಿಂದ, ಕೂದಲಿನಿಂದ, ತುಪ್ಪಳದಿಂದ, ಬ್ಲಬ್ಬರ್ ನಿಂದ ಹೊದಿಸಿಕೊಳ್ಳುತ್ತದೆ. ಅದೇ ನಿಲಿ ತಿಮಿಂಗಿಲಗಳು ಸುಮಾರು12 ಅಡಿ ದಪ್ಪದ ಬ್ಲಬ್ಬರ್ ಅನ್ನು ಹೊಂದಿರುತ್ತದೆ. ಮಾನವನ ದಪ್ಪ ಹೊಟ್ಟೆಯೂ ಅದೇ. ಆದ್ದರಿಂದ ಇವುಗಳಲ್ಲಿ ಪ್ರತೀ ಕೋಶವೂ ಶಕ್ತಿ ಉತ್ಪಾದಿಸುತ್ತಲೇ ಇರಬೇಕಾಗುತ್ತದೆ. ಅದಕ್ಕೆ ಯಾವಾಗಲೂ ಆಮ್ಲಜನಕ ಸಹಿತ ರಕ್ತ ಬೇಕು. ಅದಕ್ಕಾಗಿ ಮಾನವನ ಹೃದಯಕ್ಕೆ ನಾಲ್ಕು ಕೋಣೆಗಳು. ಎಲ್ಲಿಯಾದರೂ ಹೃತ್ಕುಕ್ಷಿಗಳ ನಡುವಿನ ಗೋಡೆ ಸರಿಯಾಗಿಲ್ಲದಿದ್ದರೆ ನೀಲಿ ಶಿಶು (blue baby) ಎಂದು ಹೊಸ ನಾಮಕರಣ ಮಾಡುತ್ತೀರಿ..

ಹೃದಯದ ವಿನ್ಯಾಸಕ್ಕೆ ಅದೆಷ್ಟು ತಯಾರಿ ಇತ್ತು ನೋಡಿದಿರಾ?
.................................... ದಿವಾಕರ ಶೆಟ್ಟಿ ಎಚ್
ನಿವೃತ್ತ ಪ್ರವಾಚಕರು
ಸರಕಾರಿ ಶಿಕ್ಷಕ ಶಿಕ್ಷಣ ಮಹಾವಿದ್ಯಾಲಯ
ಮಂಗಳೂರು, ದಕ್ಷಿಣ ಕನ್ನಡ ಜಿಲ್ಲೆ
Mob: 9448571203
******************************************** 


Ads on article

Advertise in articles 1

advertising articles 2

Advertise under the article