-->
ನಿಷ್ಪಾಪಿ ಸಸ್ಯಗಳು : ಸಂಚಿಕೆ - 60

ನಿಷ್ಪಾಪಿ ಸಸ್ಯಗಳು : ಸಂಚಿಕೆ - 60

ನಿಷ್ಪಾಪಿ ಸಸ್ಯಗಳು : ಸಂಚಿಕೆ - 60
ಲೇಖಕರು: ವಿಜಯಾ ಬಿ ಶೆಟ್ಟಿ ಸಾಲೆತ್ತೂರು
ಸಹ ಶಿಕ್ಷಕಿ, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ 
ಬಾಳೆಪುಣಿ (ಇರಾ), ಬಂಟ್ವಾಳ ತಾಲೂಕು
ದಕ್ಷಿಣ ಕನ್ನಡ ಜಿಲ್ಲೆ

      

ಪ್ರೀತಿಯ ಮಕ್ಕಳೇ ಹೇಗಿದ್ದೀರಿ...? ಆಗಸದಲ್ಲಿ ಮೇಘಸ್ಫೋಟವಾದಂತೆ ಒಂದೊಂದು ಜಲರಾಶಿ ಭೂಮಿಗೆ ಸರಿಯುತ್ತಿದೆ. ನೀರೆಂಬುದು ಜೀವದ್ರವ ! ತರುಲತೆಗಳು ಸಿಂಗರಿಸಿಕೊಂಡು ಜಗತ್ತಿಗೆ ಬೆಳಕು ತುಂಬುವ ಹಬ್ಬವೇ ಮಳೆಗಾಲ.
    ಮಕ್ಕಳೇ, ಒಮ್ಮೆ ನಾವು ಗಿಡ ಮರ, ಬಳ್ಳಿಗಳ ಬಗ್ಗೆ ಗಮನ ಹರಿಸತೊಡಗಿದರೆ ಪ್ರತಿ ನೋಟವೂ ವಿಶೇಷವಾಗಿರುತ್ತದೆ. ಯಾವುದೋ ಒಂದು ಗಿಡ 'ಇದು ಹೊಸತು!' ಎಂದೆನಿಸುವುದುಂಟು. ಇಂದು ನಿಮಗೆ ಪರಿಚಯಿಸ ಹೊರಟಿರುವ ಸಸ್ಯವೂ ಅಂತಹುದೆ ಒಂದು. ಇದು ನಮ್ಮ ಪಶ್ಚಿಮ ಘಟ್ಟಗಳಿಗಿದು ಸ್ಥಳೀಯ. ಭಾರತದಲ್ಲಿ ಕರ್ನಾಟಕ, ಕೇರಳ, ಗೋವಾ, ತಮಿಳುನಾಡುಗಳಲ್ಲಿ ಹೆಚ್ಚಾಗಿ ಕಂಡು ಬರುವ ಈ ಸಸ್ಯ ಅಳಿವಿನಂಚಿನಲ್ಲಿದೆ. ಇದನ್ನು ಕನ್ನಡದಲ್ಲಿ ಕೂರಿಗೆ ಗಿಡ, ಗುಡ್ಡದ ಶಂಖಪುಷ್ಪ, ಗುರ್ಗಿಯೆಂದೂ ಕರೆಯಲಾಗುತ್ತದೆ. ಈ ಅಪರೂಪದ ಸಸ್ಯವು ಅಕಾಂಥೇಸಿ (Acanthaceae) ಕುಟುಂಬದ ಸ್ಟ್ರೋಬಿಲಾಂಥೆಸ್ ಬಾರ್ಬಟಸ್ (Strobilanthus barbetus). 
         ಈ ಗಿಡವನ್ನು ನೋಡಿದ ಕೂಡಲೇ ನೀವು ಮೂಗಿನ ಮೇಲೆ ಬೆರಳಿರಿಸುತ್ತೀರಿ! ಏಕೆಂದರೆ ಈ ಗಿಡವು ಎಲ್ಲ ಸಸ್ಯಗಳಂತೆ ಕಾಂಡವನ್ನು ಹೊಂದಿರದೆ ಆಯತಾಕಾರದ ಕಾಂಡವನ್ನು ಹೊಂದಿದೆ. ಅಷ್ಟು ಸಾಲದೆಂಬಂತೆ ಆಯತದ ಅಂಚುಗಳಲ್ಲಿ ರೆಕ್ಕೆಯಂತಹ ರಚನೆ ಇರುತ್ತದೆ. ಅದು ಬಳ್ಳಿಯಂತೆ ಸುತ್ತಲೂ ಹರಡಬಲ್ಲುದು ಅಥವಾ 3 ಅಥವಾ 4 ಮೀಟರ್ ಏರಬಲ್ಲದು. ಪೊದರು ಸಸ್ಯದಂತೆ ಕಾಣಿಸುತ್ತದೆ. ಎಲೆಗಳು ಆಯತಾಕಾರವಾಗಿದ್ದು ತುದಿ ಚೂಪಾಗಿದೆ. ಎಲೆಯ ತೊಟ್ಟಿಗೂ ಸಣ್ಣ ಪ್ರಮಾಣದ ರೆಕ್ಕೆ ಇದ್ದಂತಿದೆ. ಎಲೆಗಳು ಒಂದಕ್ಕೊಂದು ವಿರುದ್ಧ ಜೋಡಣೆಯಾಗಿ ಅಸಮಾನ ಜೋಡಿಯಾಗಿರುತ್ತದೆ. ಎಲೆಗಳ ತಳ ಊದಿಕೊಂಡಿದ್ದು ಮುಟ್ಟುವಾಗ ವೆಲ್ವೆಟ್ ಬಟ್ಟೆಯನ್ನು ಮುಟ್ಟಿದಷ್ಟೇ ಸುಖ ನೀಡುತ್ತದೆ. 
       ನಿಮಗಿನ್ನೊಂದು ವಿಶೇಷತೆಯನ್ನು ಹೇಳಬೇಕೆಂದರೆ ನೀಲಗಿರಿ ಬೆಟ್ಟಗಳಲ್ಲಿ ನೀಲಕುರುಂಜಿ ಸಸ್ಯವು 12 ವರ್ಷಗಳಿಗೊಮ್ಮೆ ಹೂ ಬಿಟ್ಟಂತೆ ಈ ಸ್ಟ್ರೋಬಿಲಾಂಥೆಸ್ ಪ್ರತಿ 7 ವರ್ಷಗಳಿಗೊಮ್ಮೆ ಮಾತ್ರವೇ ಹೂ ಬಿಡುತ್ತದೆ ! ನಿಸರ್ಗವು ಇಂತಹ ನಿಯಮಗಳಿಂದ ಸಮತೋಲನವನ್ನು ಕಾಯ್ದು ಕೊಳ್ಳುತ್ತದೆಯೇನೊ. ಇದರ ಹೂ ಕೂಡ ಅತಿ ವಿಶಿಷ್ಟವಾದುದು. ಶ್ವೇತವರ್ಣದ ಐದೆಸಳಿನ ಹೂವು ಪುಷ್ಪಪಾತ್ರೆಯಿಂದ ಕೊಳವೆಯಾಕಾರದಲ್ಲಿ ಬೆಳೆದು ಗಂಟೆಯಾಕಾರದಲ್ಲಿರುತ್ತದೆ. ದಳಗಳು 6mm ನಷ್ಟು ಉದ್ದವಿದ್ದು ಅಂಡಾಕಾರವಾಗಿ ಕೂದಲಿನೊಂದಿಗೆ ಅಂಚು ಹೊಂದಿದೆ. 4 ಕೇಸರಗಳು ಹೊರಚಾಚಿರುತ್ತವೆ. ನವಿರಾದ ಸುವಾಸನೆ ಬೀರುವ ಪುಷ್ಪಗಳು ಗೊಂಚಲುಗಳಲ್ಲಿ ಸೆಪ್ಟೆಂಬರ್ ನಿಂದ ಡಿಸೆಂಬರ್ ವರೆಗೆ ಅರಳುತ್ತಾ ಕಾಯಿಗಳಾಗುತ್ತಿರುತ್ತವೆ. ಅಂಡಾಕಾರದ ಹಣ್ಣಿನಲ್ಲಿ ಎರಡು ಬೀಜಗಳಿರುತ್ತವೆ.
         ನಿಷ್ಪಾಪಿ ಸಸ್ಯವಾದ ಈ ಕೂರಿಗೆಯನ್ನು ಬುಡಕಟ್ಟು ಜನಾಂಗಗಳು ಔಷಧಿಗಾಗಿ ಬಳಸುತ್ತವೆ. ಪ್ರೊಟೀನ್, ಫೈಟೊಸ್ಟೆರಾಲ್, ಟೆರ್ಪನಾಯ್ಡ್, ಮಾತ್ರವಲ್ಲದೆ ಫಿನಾಲಿಕ್ ಸಂಯುಕ್ತ ಗಳನ್ನು ಒಳಗೊಂಡಿರುವ ಈ ಸಸ್ಯದ ಎಲೆ ಮತ್ತು ಕಾಂಡದಿಂದ ನೋವು ನಿವಾರಕ, ಮಧುಮೇಹ, ಉರಿಯೂತ, ಅಸ್ಥಿ ಸಂಧಿವಾತ, ಆಂಟಿಟ್ಯೂಮರ್, ಕ್ಯಾನ್ಸರ್, ಹೃದಯದ ರಕ್ತನಾಳದ ಸಮಸ್ಯೆಗಳಿಗೆ ಸಹಾಯಕ ವಾಗಿದೆ. ಇದರ ಬಗ್ಗೆ ಇನ್ನೂ ಸಂಶೋಧನೆಗಳಾಗುತ್ತಲಿವೆ. ವೈಶಿಷ್ಟ್ಯ ಪೂರ್ಣ ಸಸ್ಯವರ್ಗ ತುಂಬಿರುವ ನಮ್ಮ ಪಶ್ಚಿಮ ಘಟ್ಟಗಳು ಔಷಧೀಯ ಸಸ್ಯಗಳ ಸಮೃದ್ಧ‌ ಭಂಡಾರವಾಗಿದೆ. ಇವುಗಳನ್ನು ನಾಶವಾಗದಂತೆ ನೋಡಿಕೊಳ್ಳುವುದು ಪ್ರತೀ ಮಾನವ ಜೀವಿಯ ಅಗತ್ಯ.
       ಸರಿ ಮಕ್ಕಳೇ, ಮುಂದಿನ ವಾರ ಇನ್ನೊಂದು ನಿಷ್ಪಾಪಿ ಸಸ್ಯದ ಜೊತೆ ಭೇಟಿಯಾಗುತ್ತೇನೆ.. ನಮಸ್ಕಾರ.
..................... ವಿಜಯಾ ಬಿ ಶೆಟ್ಟಿ ಸಾಲೆತ್ತೂರು
ಸಹ ಶಿಕ್ಷಕಿ, ಸರ್ಕಾರಿ ಹಿರಿಯ ಪ್ರಾಥಮಿಕ 
ಶಾಲೆ , ಬಾಳೆಪುಣಿ (ಇರಾ)
ಬಂಟ್ವಾಳ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
Mob : +91 78925 87191
*******************************************


Ads on article

Advertise in articles 1

advertising articles 2

Advertise under the article