ಸ್ಫೂರ್ತಿಯ ಮಾತುಗಳು : ಸಂಚಿಕೆ - 125
Monday, July 22, 2024
Edit
ಸ್ಫೂರ್ತಿಯ ಮಾತುಗಳು : ಸಂಚಿಕೆ - 125
ಲೇಖಕರು : ರಮೇಶ ಎಂ. ಬಾಯಾರು
ರಾಜ್ಯಪ್ರಶಸ್ತಿ ಪುರಸ್ಕೃತ ನಿವೃತ್ತ ಅಧ್ಯಾಪಕರು
ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
ಮೊಬೈಲ್ ಸಂಖ್ಯೆ : +91 94486 26093
rameshbayar@gmail.com
ಚಲನಶೀಲವಾದವುಗಳಲ್ಲಿ ಚಂಚಲತೆ ಸಾಮಾನ್ಯ. ಗಾಳಿ, ನೀರು ಗತಿಶೀಲವಾದರೂ ಅದರ ವೇಗ ಮತ್ತು ದಾರಿಯು ಬದಲಾಗದು. ಮಾನವನ ಮನಸ್ಸು ಅತ್ಯಂತ ಚಂಚಲ. ಕ್ಷಣ ಕ್ಷಣವೂ ಮನುಷ್ಯನ ಮನಸ್ಸು ಬಣ್ಣ ಬದಲಿಸುತ್ತದೆ ಎಂದರೆ ನಿರ್ಧಾರಗಳನ್ನು ಬದಲಿಸುತ್ತಲೇ ಇರುತ್ತದೆ. ಚಂಚಲ ಮನಸ್ಸು ಸಾಧಕರ ಮಹಾ ಶತ್ರು. ಕೋತಿಯಂತೆ ಜಿಗಿಯುತ್ತಲೇ ಇರುವ ಮನಸ್ಸನ್ನು ಒಂದೆಡೆ ಕೇಂದ್ರೀಕರಿಸುವ ಛಲವಿದ್ದರೆ ಸಾಧನೆ ಸುಲಭವಾಗುವುದು.
ಮನಸ್ಸಿನ ಚಂಚಲತೆಗೆ ಪ್ರಮುಖವಾಗಿ ಮೂರು ಕಾರಣಗಳನ್ನು ಗಮನಿಸಬಹುದು. ಮೊದಲನೆಯದಾಗಿ ತನ್ನ ಬಗ್ಗೆ ತನಗೇ ವಿಶ್ವಾಸವಿಲ್ಲದಿರುವುದು. ಎಡನೆಯದಾಗಿ ನಮ್ಮನ್ನು ದಾರಿ ತಪ್ಪಿಸುವ ಸಲಹೆಗಳು. ಮೂರನೆಯದಾಗಿ ನಮಗೆ ಸಾಧಿಸುವ ಛಲವಿಲ್ಲದಿರುವುದು.
ಅವಕಾಶಗಳನ್ನು ಕೈಚೆಲ್ಲುವುದು ಮನುಜ ಸಹಜ ಗುಣ. ಸಿಗುವ ಅವಕಾಶಗಳು ಸಣ್ಣದಿರಬಹುದು ಅಥವಾ ದೊಡ್ಡದಿರಬಹುದು. ಅವುಗಳನ್ನು ಪ್ರೀತಿಯಿಂದ ಸ್ವೀಕರಿಸಿ ಸಾಧನೆ ಮಾಡುವ ಮನಸ್ಸು ಬೇಕು. “ಇದು ನನ್ನಿಂದ ಸಾಧ್ಯವೇ?” ಎಂಬ ಸಂದೇಹ ನಮಗೆ ಮಹಾ ಶತ್ರು. ಸೃಷ್ಟಿಸುವಾಗ ನಮಗೆ ನಮ್ಮದೇ ಆದ ತಾಕತ್ತುಗಳನ್ನು ಭಗವಂತ ಒದಗಿಸಿದ್ದಾನೆ. ಆ ತಾಕತ್ತನ್ನು ಅರಿಯದೆ ತನ್ನ ಬಗ್ಗೆ ಅವಿಶ್ವಾಸ ಹೊಂದುವುದು ಭಗವಂತ ನೀಡಿದ ನಮ್ಮ ಸಾಮರ್ಥ್ಯಕ್ಕೆ ನಾವು ಮಾಡುವ ಅಪಮಾನ. ನಮ್ಮ ಶಕ್ತಿಯ ಅರಿವಿದ್ದಾಗ ಮನಸ್ಸು ಚಂಚಲಗೊಳ್ಳದು. ಸಾಧನೆಯ ಮೂಲ ಮಂತ್ರ ಸ್ವಯಂ ವಿಶ್ವಾಸ ಅಥವಾ ಆತ್ಮವಿಶ್ವಾಸ “ಅಯ್ಯೋ! ನೀನಿದನ್ನು ಮಾಡಲು ಯಾಕೆ ಹೊರಟೆ? ಈ ಕೆಲಸದಲ್ಲಿ ಜಯಶಾಲಿಯಾಗುವೆನೆಂದು ಭ್ರಮಿಸಿದ್ದಿಯಾ!. ನನ್ನಲ್ಲಿ ಮೊದಲೇ ಕೇಳುತ್ತಿದ್ದರೆ ನಾನು ನಿನಗೆ ಅತ್ಯಂತ ಲಾಭಕರ ಮತ್ತು ಸುಲಭದ ಕಾರ್ಯವೊಂದರ ಸಲಹೆ ಕೊಡುತ್ತಿದ್ದೆ. ನನ್ನ ಸುಮಾರು ಮಿತ್ರರು ನೀನು ಆರಂಭಿಸಿದ ಇದೇ ಕೆಲಸ ಮಾಡಿ ಕೈಸುಟ್ಟಿದ್ದಾರೆ. ನಿನಗೂ ಪಶ್ಚಾತ್ತಾಪ ಆಗಲಿದೆ.” ನಾವು ಯಾವುದಾದರೂ ಹೊಸ ಯೋಜನೆಯೊಂದನ್ನು ಆರಂಭಿಸಿದಾಗ ನಮಗೆ ಈ ತರಹದ ಮಾತುಗಳೇ ಕೇಳಿಬರುತ್ತವೆ. ಉದ್ದೇಶಪೂರ್ವಕವಾಗಿ ಅವರು ಈ ರೀತಿ ಮಾತನಾಡುವುದಿಲ್ಲ. ತಮ್ಮ ಜಾಣ್ಮೆಯನ್ನು ಬಿಂಬಿಸುವ ಇಂತಹ ಮಾತುಗಳಿಂದ ಪರೋಕ್ಷವಾಗಿ ನಿರುತ್ಸಾಹಕ್ಕೊಳಗಾಗುತ್ತೇವೆ. ನಾವು ಚಂಚಲರಾಗುತ್ತೇವೆ. ನಮ್ಮ ಛಲ ಸುಟ್ಟು ಹೋಗುತ್ತದೆ. ಯಾವುದೇ ಕೆಲಸದಲ್ಲಿ ಸೋತ ಒಂದೆರಡು ಉದಾಹರಣೆಗಳು ಸಾರ್ವತ್ರಿಕವಲ್ಲ. ಸೋತವರ ಯೋಚನೆ, ಕರ್ತವ್ಯ ಪರತೆ, ಕೌಶಲ್ಯದ ಕೊರತೆ ಮುಂತಾದ ಅನೇಕ ಸಂಗತಿಗಳು ಅವರ ಸೋಲಿನ ಹಿಂದೆ ಇರಲೂ ಬಹುದು. ನಾವು ಈ ಅಂಶಗಳಲ್ಲಿ ಸಬಲರಾಗಿರಲೂ ಬಹುದು. ಆದರೂ ದಾರಿ ತಪ್ಪಿಸುವ ಸಲಹೆಗಳನ್ನು ಬದಿಗಿರಿಸಿ ಚಂಚಲತೆ ಕಳಚಿ ಛಲದಿಂದ ಮುನ್ನುಗ್ಗಿದರೆ ಗೆಲುವು ಬಂದೇ ಬರುತ್ತದೆ. ಸೋಲೇ ಗೆಲುವಿಗೆ ಸೋಪಾನವೂ ಆಗಬಹುದಲ್ಲವೇ?
ಮನವಿದ್ದಲ್ಲಿ ಮಾರ್ಗ ಎಂದು ಹೇಳುತ್ತಾರೆ. ಮನವಿದ್ದರೆ ಮಾರ್ಗವಿದೆಯಾದರೂ ಸಾಧನೆಯಾಗುತ್ತದೆ ಎನ್ನುವಂತಿಲ್ಲ. ಸಾಧನೆಯಾಗಲು ಸಾಧಿಸುವ ಛಲವೂ ಬೇಕು. ಒದಗಿರುವ ಅವಕಾಶಗಳನ್ನು ಸಕಾರಾತ್ಮಕವಾಗಿ ವಿನಿಯೋಗಿಸಿ ಎತ್ತರಕ್ಕೇರುವ ದೃಢವಾದ ಹುಮ್ಮನಸ್ಸು ಬೇಕು. ಚಂಚಲತೆ ನಿರಾಶೆಗೆ ಮೂಲ. “ಆಶಾವಾದ ಮತ್ತು ಛಲ” ಗೆಲುವಿಗೆ ಮೂಲ.
ರಾಜ್ಯಪ್ರಶಸ್ತಿ ಪುರಸ್ಕೃತ ನಿವೃತ್ತ ಅಧ್ಯಾಪಕರು
“ಸ್ಕಂದ” ಕುಳ ಗ್ರಾಮ
ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
ಮೊಬೈಲ್ ಸಂಖ್ಯೆ : +91 94486 26093
rameshbayar@gmail.com
********************************************