-->
ಮೊದಲ ಶಿಬಿರದ ಅನುಭವ - ಬರಹ : ವಿನುತಾ ಲಸ್ರಾದೊ

ಮೊದಲ ಶಿಬಿರದ ಅನುಭವ - ಬರಹ : ವಿನುತಾ ಲಸ್ರಾದೊ

ಲೇಖನ : ಮೊದಲ ಶಿಬಿರದ ಅನುಭವ
ಬರಹ : ವಿನುತಾ ಲಸ್ರಾದೊ
ಪ್ರಥಮ ಬಿ.ವಿ.ಎ.
ಸಿ.ಕೆ.ಎಮ್. ಕಾಲೇಜು
ವಿಶುವಲ್ ಆರ್ಟ್ಸ್,
ಉಡುಪಿ
      
      

ರಜಾ ಮಜಾ ಬೇಸಿಗೆ ಶಿಬಿರಕ್ಕೆ ವರ್ಲಿ ಕಾರಾಗಾರ ನಡೆಸಲು ಸಂಪನ್ಮೂಲ ವ್ಯಕ್ತಿಯಾಗಿ ನನ್ನನ್ನು
ಆಹ್ವಾನಿಸಿದಾಗ, ಮೊದಲೇ ಬೇಸಿಗೆ ಶಿಬಿರಗಳ ವಿರೋಧಿಯಾಗಿದ್ದಕ್ಕೋ ಏನೋ ನಿರಾಕರಿಸುವುದೇ ಒಳ್ಳೆಯದೆಂದು ತೀರ್ಮಾನಿಸಿ ಬಿಟ್ಟಿದ್ದೆ. ಆದರೆ C.K.M Group ನಲ್ಲಿ ಬೇಸಿಗೆ ಶಿಬಿರದಲ್ಲಿ ಭಾಗವಹಿಸಿದರೆ ಆಂತರಿಕ ಅಂಕಗಳಿಗೆ ಪರಿಗಣಿಸಲಾಗುವುದು. ಎಂಬ ಮೆಸೇಜ್ ನೋಡಿ ಹೋಗುವುದೇ ಲೇಸೆಂದು ಈ ಶಿಬಿರದಲ್ಲಿ ಭಾಗವಹಿಸಲು ತಯಾರಾದೆ. ಶಿಬಿರದಲ್ಲಿ 3 ರಿಂದ 16 ವರ್ಷದ ಮಕ್ಕಳಿದ್ದರಿಂದ ಎಲ್ಲರಿಗೂ ಅನುಕೂಲಕರವಾಗುವಂತೆ ನನ್ನ ವಿಷಯವನ್ನು ರಚಿಸಬೇಕಿತ್ತು. ಹೀಗಾಗಿ ಆತಂಕದಿಂದಲೇ ನನ್ನ ಮೊದಲ ಶಿಬಿರದ ಅನುಭವ ಪಡೆಯಲು ತುರಾತುರಿಯಲ್ಲಿ ತಯಾರಾದೆ. ವರ್ಲಿ ಚಿತ್ರಕಲೆ, ಕ್ಲೆ ಮಾಡಲಿಂಗ್, ಫೇಸ್ ಪೈಟಿಂಗ್, ಪಾಟ್ ಪೈಟಿಂಗ್, ಸ್ಟೋನ್ ಪೈಂಟಿಂಗ್, ನೀತಿ ಬೋಧಿ, ಚೆಸ್ ಈ ವಿಷಯಗಳನ್ನು ಮಕ್ಕಳಿಗೆ ಕಲಿಸಲು ನನಗೆ ತಿಳಿಸಲಾಯ್ತು. 
     ಬೇಸಿಗೆ ಶಿಬಿರಗಳು ಹಣಗಳಿಸಲು ಇತ್ತೀಚಿನ ವರ್ಷಗಳಲ್ಲಿ ಶುರು ಮಾಡಿರುವ ಬಿಸಿನೆಸ್ ಎಂಬ ನನ್ನ ಅನಿಸಿಕೆ ಕರಗಲು ಬಹಳ ಸಮಯವೇನೂ ಬೇಕಾಗಿರಲಿಲ್ಲ. ನಮ್ಮ ಬಾಲ್ಯದಲ್ಲಿ ರಜಾದಿನಗಳು ಬಂತೆಂದರೆ ಅಜ್ಜಿಯ ಊರಿಗೆ (ಘಟ್ಟದ ಮೇಲೆ ವಲಸೆ ಹೋದ, ನನ್ನ ಪೋಷಕರು ಕರಾವಳಿಯಲ್ಲಿ ನೆಲೆಸಿರುವ ತಮ್ಮ ತಂದೆ ತಾಯಿ ಊರಿಗೆ) ಧಾವಂತದಿಂದ ಓಡಿ ಬರುತ್ತಿದ್ದ ನಾನು ರಜೆಯ ಮಜವನ್ನು ಪೂರ್ತಿಯಾಗಿ ಅನುಭವಿಸಿ ಹಿಂತಿರುಗುತ್ತಿದ್ದೆನು. ಹೀಗಾಗಿ ರಜೆಯಲ್ಲಿ ಅಜ್ಜ ಅಜ್ಜಿಯೊಂದಿಗೆ ನೆಂಟರಿಷ್ಟರೊಂದಿಗೆ ಮಕ್ಕಳು ಸಮಯ ಕಳೆಯಬೇಕೆಂದು ನನ್ನ ಅನಿಸಿಕೆಯಾಗಿತ್ತು. ಆದರೆ ಇತ್ತೀಚಿನ ದಿನಗಳಲ್ಲಿ ಕಾಲದ ಹೊಡೆತಕ್ಕೆ ಸಿಕ್ಕ ಮಕ್ಕಳ ಅಜ್ಜಿ ಅಜ್ಜಂದಿರು ಹಳ್ಳಿ ತೊರೆದು ನಗರದ ಫ್ಲಾಟ್‌ಗಳಲ್ಲಿ ತಮ್ಮ ವಾಸ್ತವ್ಯ ಬದಲಿಸಿದ್ದು, ನನ್ನ ಅರಿವಿಗೆ ಅಷ್ಟಾಗಿ ಬಂದಿರಲಿಲ್ಲ. ಬಂದರೂ ಗಣನೆಗೆ ತೆಗೆದುಕೊಂಡಿರಲಿಲ್ಲ. ಶಾಲೆ ಇದ್ದು ಇಡೀ ದಿನ ಶಾಲೆಯಲ್ಲಿ ಕಳೆಯುವ ಮಗು ಈ ರಜಾ
ದಿನಗಳಲ್ಲಾದರೂ ಮನೆಯಲ್ಲಿ ಕಳೆಯಬಾರದೇ ಅನ್ನಿಸುತಿತ್ತು. ಪೋಷಕರು ಅದರ ಕಾರಣವನ್ನು
ವಿವರಿಸಿದಾಗ ನನ್ನ ಪೂರ್ವಾಗ್ರಹ ಪೀಡಿತ ಶಿಬಿರ ವಿರೋಧಿ ಭಾವನೆ ಸಂಪೂರ್ಣವಾಗಿ ಬದಲಾಯ್ತು. ಮನೆಯಲ್ಲಿರುವ ಮಕ್ಕಳು ಒಂದೋ ಟಿವಿಯ ಎದುರು ಅಥವಾ ಮೊಬೈಲ್ ಹಿಡಿದು ಕೂರುವ ಸೀನ್ ಟೈಮ್ ತಪ್ಪಿಸಲು ಮತ್ತು ಅವರ ಶಿಕ್ಷಣಕ್ಕೆ ಪೂರಕವಾಗಿರುವ ಕೆಲವು ಚಟುವಟಿಕೆಗಳನ್ನು ಕಲಿಯಲು ಇಲ್ಲಿಗೆ ಕಳುಹಿಸುತ್ತಿದ್ದರು. 
     ಶಿಬಿರದ ವರ್ಲಿ ಪೈಟಿಂಗ್ ಮೊದಲ ದಿನ ಮಕ್ಕಳಲ್ಲಿ ಈ ಚಿತ್ರಕಲೆಯ ಬಗ್ಗೆ ಆಸಕ್ತಿ ಮೂಡಿಸಲು ಚಿತ್ರಕಲೆ ಬೆಳೆದು ಬಂದ ರೀತಿ ರಚಿಸುವ ಬಗ್ಗೆ ಬೆಳೆದು ಬಂದ ರೀತಿ ಕಥೆಯ ಮೂಲಕ ವಿವರಿಸಿದಾಗ ಮಕ್ಕಳು ಅದನ್ನು ಚಿತ್ರಿಸುವ ಉತ್ಸಾಹ ತೋರಲಾರಂಭಿಸಿದರು. ಅಂಚುಗಳು, ಪ್ರಾಣಿ, ಗಿಡ, ಮರ, ಮನುಷ್ಯರನ್ನು ಚಿತ್ರಿಸುವ ಬಗೆಯನ್ನು ವಿವರಿಸಲಾಗಿ ತಮ್ಮದೇ ಶೈಲಿಯಲ್ಲಿ ಸ್ಕೆಚ್ ಪೆನ್ನಿನ ಸಹಾಯದಿಂದ
ಬಹಳ ಚೆನ್ನಾಗಿ ಚಿತ್ರಗಳನ್ನು ಮೂಡಿಸಿದರು.
      ಸ್ಟೋನ್ ಪೈಂಟಿಂಗ್‌ಗಾಗಿ ತಂದ ಕಲ್ಲುಗಳ ರಾಶಿಯನ್ನು ನೋಡಿ ಕಲಿಸುವ ಆಸಕ್ತಿ ನನ್ನಲ್ಲೂ
ಇಮ್ಮಡಿಸಿದ್ದು ಸುಳ್ಳಲ್ಲ. ಸಂಜೆಯಾಗುವಷ್ಟರಲ್ಲಿ ಮಕ್ಕಳು ತಮ್ಮ ಕಲ್ಪನೆಗೆ ರೆಕ್ಕೆಗಳನ್ನು ಕೊಟ್ಟ ವಿವಿಧ ಚಿತ್ರಗಳನ್ನು ಕಲ್ಲುಗಳ ಮೇಲೆ ಮೂಡಿಸಿರುವ ಸಣ್ಣ ಕ್ಲೇ ಪಾಟ್‌ಗಳ ಮೇಲೆ ಕ್ಲೇನಿಂದ ಮಕ್ಕಳು ಪುಟ್ಟ ಪುಟ್ಟ ಗುಲಾಬಿ ಹೂಗಳು ಮತ್ತು ಎಲೆಗಳಿಂದ ಅಲಂಕರಿಸಿದರು. ಅದಕ್ಕೆ ಬಣ್ಣಗಳನ್ನು ತುಂಬಲಾಯ್ತು. ಹಿರಿಯ ಮಕ್ಕಳು ತಮಗೆ ಬೇಕಾದಂತೆ ಆಕೃತಿಗಳನ್ನು ಮಾಡಿ ತಮ್ಮ ಕಲಾ ಪ್ರೌಢಿಮೆ ಪ್ರದರ್ಶಿಸಿದರು.