-->
ನಿಷ್ಪಾಪಿ ಸಸ್ಯಗಳು : ಸಂಚಿಕೆ - 56

ನಿಷ್ಪಾಪಿ ಸಸ್ಯಗಳು : ಸಂಚಿಕೆ - 56

ನಿಷ್ಪಾಪಿ ಸಸ್ಯಗಳು : ಸಂಚಿಕೆ - 56
ಲೇಖಕರು: ವಿಜಯಾ ಬಿ ಶೆಟ್ಟಿ ಸಾಲೆತ್ತೂರು
ಸಹ ಶಿಕ್ಷಕಿ, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ
ಬಾಳೆಪುಣಿ (ಇರಾ), ಬಂಟ್ವಾಳ ತಾಲೂಕು
ದಕ್ಷಿಣ ಕನ್ನಡ ಜಿಲ್ಲೆ

      

ಪ್ರೀತಿಯ ಮಕ್ಕಳೇ,
     ಹೇಗಿದ್ದೀರಿ? ಆಗೊಮ್ಮೆ ಈಗೊಮ್ಮೆ ಬಿರುಸಿನ ಮಳೆ ಸುರಿಯಲಾರಂಭಿಸಿದೆ. ನಿಸರ್ಗದ ರಸದೌತಣ! ಮಳೆಯನ್ನು ನೋಡುವುದೇ ಒಂದು ಸೊಗಸು !
       ಮಳೆಗಾಲ ಕಾಲಿಟ್ಟರೆ ಸಾಕು, ಹೊಸ ಹೊಸ ಗಿಡಗಳು ಭೂಮಾತೆಯ ಮಡಿಲಲ್ಲಿ ಜನ್ಮ ತಳೆಯಲಾರಂಭಿಸುತ್ತವೆ. ಕೆಲವು ಸಸ್ಯಗಳಿಗೆ ಅಂಗನವಾಡಿ ಮಕ್ಕಳಂತೆ ಅತ್ತಿತ್ತ ತುಂಬಾ ಸಣ್ಣ ಪುಟ್ಟ ಸಸ್ಯಗಳಿದ್ದರೇ ಖುಷಿ. ಆ ಸಣ್ಣ ಪೊದರುಗಳ ನಡುವೆ ತಾನೂ ಆಟವಾಡುತ್ತಾ ಬೆಳೆದು ನಿಲ್ಲುತ್ತದೆ. ಅದೂ ತುಂಬಾ ಮೃದುವಾಗಿ ತನ್ನ ಪುಟ್ಟ ಪುಟ್ಟ ಶಾಖೆಗಳನ್ನು ಜಾಗವಿದ್ದಷ್ಟೆ ಚಾಚಿಕೊಳ್ಳುತ್ತದೆ. ಇಂತಹ ಒಂದು ನಿಷ್ಪಾಪಿ ಸಸ್ಯ ಕನ್ನಡದ ಗಧಾಪತ್ರಿ ತುಳುವಿನ ನೆಡಿಲ್, ಇಂಗ್ಲೀಷ್ ನ Bandicoot berry. ಲೀಯಾ ಇಂಡಿಕಾ (Leea Indica) ಎಂಬ ಶಾಸ್ತ್ರೀಯ ನಾಮದ ಈ ಪೊದರು ಸಸ್ಯ ವಿಟೇಸಿ (Vitaceae) ಕುಟುಂಬಕ್ಕೆ ಸೇರಿದೆ.        ಮನುಷ್ಯರಲ್ಲಿ  ನನ್ನದಿಷ್ಟು ಜಾಗ, ನಿನ್ನದಿಷ್ಟು ಜಾಗ ವೆಂದು ಅಣ್ಣ ತಮ್ಮಂದಿರೇ ಹೊಯ್ ಕೈ ಮಾಡಿಕೊಂಡರೆ ಈ ಪುಟ್ಟ ಸಸ್ಯ ಸಮಪಾಲು ಸಮಬಾಳು ಎಂದು ಎಲ್ಲ ಸಸ್ಯಗಳ ಜೊತೆ ಬಹಳಷ್ಟು ಹೊಂದಿಕೊಂಡು ಬೆಳೆಯುತ್ತದೆ. ಈ ಸಸ್ಯ ಭಾರತದಾದ್ಯಂತ ಕಾಣಸಿಗುತ್ತದೆ. ಮಲೇಷ್ಯಾ, ಚೀನಾ, ನೇಪಾಳ, ಇಂಡೋನೇಷ್ಯಾ, ಥೈಲ್ಯಾಂಡ್, ಆಸ್ಟ್ರೇಲಿಯಾ ಮೊದಲಾದ ದೇಶಗಳಲ್ಲಿ ಕಾಣಸಿಗುವುದು. ನಾಲ್ಕೈದು ಮೀಟರ್ ಎತ್ತರ ಬೆಳೆಯಬಲ್ಲ ಈ ಸಸ್ಯದ ಚಿಗುರು ಸುರುಳಿಯಾಕಾರದಿಂದ ಬಿಡಿಸಿಕೊಂಡು 3,5,7 ಎಲೆಗಳ ಸಂಯುಕ್ತ ರೂಪದೊಂದಿಗೆ ಕಾಣಿಸಿಕೊಳ್ಳುತ್ತದೆ. ಚಿಗುರೆಲೆ ಮುದ್ದು ಮುದ್ದಾಗಿ ಬೀಟ್ರೂಟ್ ಗಡ್ಡೆಯ ಬಣ್ಣದಲ್ಲಿರುತ್ತದೆ. ದಿನ ಕಳೆದಂತೆ ತಿಳಿ ಹಸಿರಾಗುತ್ತಾ ಮತ್ತೆ ಗಾಢ ಹಸಿರಾಗಿ ಪ್ರೌಢತೆ ಪಡೆಯುತ್ತದೆ. ಎಲೆಯ ಮಧ್ಯಭಾಗ ಸ್ವಲ್ಪ ಅಗಲವಾಗಿದ್ದು ಎರಡು ತುದಿಗಳು ಚೂಪಾಗಿರುತ್ತದೆ. ಎಲೆಯ ಅಂಚು ಕನಿಷ್ಟ ಚೂಪಾದ ಹಲ್ಲಿನಂತಿರುತ್ತದೆ. ಎಲೆಯ ಕೆಳ ಮೇಲ್ಮೈ ತಿಳಿ ಹಸಿರಾಗಿದ್ದು ಮೇಲ್ಭಾಗಕ್ಕಿಂತ ಒರಟಾಗಿರುತ್ತದೆ. ಕಾಂಡವು ಕಂದು ನೇರಳೆ ಛಾಯೆಯಲ್ಲಿರುತ್ತದೆ. ಈ ಲಿಯಾ ಇಂಡಿಕಾ ಸಸ್ಯವು ಅರೆ ನೆರಳು ಪ್ರದೇಶವನ್ನು ಹೆಚ್ಚು ಇಷ್ಟಪಡುತ್ತದೆಯಾದ್ದರಿಂದ ಒಂಟಿಯಾಗಿ ಕಾಣಸಿಗುವುದು ವಿರಳ.
       ಹಸಿರು ಮಿಶ್ರಿತ ಬಿಳಿ ಪುಟಾಣಿ ಹೂಗಳ ಗೊಂಚಲು ಈ ಗಿಡವನ್ನು ಗುರುತಿಸಲು ಸಹಾಯಕ. ಗೋಳಾಕಾರದ ಹಸಿರು ಕಾಯಿಗಳು ನೇರಳೆ ಮಿಶ್ರಿತ ಕಪ್ಪು ಬಣ್ಣದ ಹಣ್ಣುಗಳಾಗುತ್ತವೆ. ಇದರ ಎಳೆಯ ಚಿಗುರನ್ನು ಕೆಲವೆಡೆ ತರಕಾರಿಯಾಗಿಯೂ ಬಳಸುವರಂತೆ. ದನಕರುಗಳಿಗೂ ಮೇವು ಆಗುವುದಲ್ಲದೆ ರೈತರಿಗೆ ಗೊಬ್ಬರವಾಗಿಯೂ ಬಳಸಲ್ಪಡುತ್ತದೆ. ಮಕ್ಕಳ ಎದೆನೋವಿಗೆ ಹೂಗೊಂಚಲು ಬಳಕೆಯಾದರೆ ಹುಳುಕಜ್ಜಿ, ಅತಿಸಾರ, ಅಲರ್ಜಿ, ತಲೆನೋವು, ತಲೆ ತಿರುಗುವುದು, ಕರುಳಿನ ಕ್ಯಾನ್ಸರ್, ಗರ್ಭಾಶಯದ ಕ್ಯಾನ್ಸರ್ ಇತ್ಯಾದಿಗಳಿಗೆ ಔಷಧ ನೀಡುವ ಮೂಲಿಕೆಯಾಗಿದೆ.
       ಮಾರ್ಗದ ಬದಿ, ಗುಡ್ಡದಂಚು, ಗದ್ದೆ ತೋಟಗಳ ಬದಿಗಳಲ್ಲಿ ಸುಲಭವಾಗಿ ಕಾಣಸಿಗುವ ಲೀಯಾ ಇಂಡಿಕಾ ಜೂನ್ ನಿಂದ ಮಾರ್ಚ್ ವರೆಗೂ ಹೂ ಹಣ್ಣುಗಳಿಂದ ತುಂಬಿರುತ್ತದೆ. 
         ಮಕ್ಕಳೇ,  ಈ ಸಸ್ಯದ ಉಪಯೋಗದ ಬಗ್ಗೆ ನಾವು ಗಮನಿಸಬೇಕಾದ ಒಂದಿಷ್ಟು ವಿಚಾರಗಳಿವೆ. ಹುಲಿ, ಆನೆ, ನವಿಲು ಇತ್ಯಾದಿಗಳ ಆಕಾರ, ಶಕ್ತಿಯನ್ನು ಕಂಡು ನಾವು ಬೆರಗಾಗುತ್ತೇವೆ. ಕಾಡಿನಲ್ಲಿರುವ ಬೃಹತ್ ಮರಗಳನ್ನು ಎವೆಯಿಕ್ಕದೆ ಅರೆಘಳಿಗೆ ನಿಂತು ನೋಡುತ್ತೇವೆ. ಆದರೆ ಈ ಲೀಯಾ ಇಂಡಿಕಾ ಸಸ್ಯವನ್ನು ನಾವು ಗಮನಿಸುವುದೇ ಇಲ್ಲ! ಯಾವುದೋ ಒಂದು ಸಾಮಾನ್ಯ ಗಿಡವೆಂದು ಮುಂದೆ ಸಾಗುತ್ತೇವೆ. ನಿಮ್ಮ ಮನೆಯ ಸುತ್ತ ಗಿಡ, ಮರ, ಬಳ್ಳಿಗಳೇನಾದರೂ ಇದ್ದರೆ ಅವುಗಳ ನಡುವೆ ಖಂಡಿತವಾಗಿಯೂ ಈ ಸಸ್ಯ ಹುಟ್ಟಿರುತ್ತದೆ. ಅರೆ! ನಾವು ನೆಟ್ಟೇ ಇಲ್ಲ.. ಎಂದು ನೀವು ಅಂದುಕೊಂಡರೆ ನಿಮ್ಮೆದುರಿಗೆ ಈ ಗಿಡ ಗೆಲುವಿನ ನಗೆ ಬೀರುತ್ತದೆ !
      ಲೀಯಾ ಇಂಡಿಕಾದಲ್ಲಿ ಮೂಡುವ ಹೂಗೊಂಚಲಲ್ಲಿ ಐದು ಎಸಳುಗಳ ಐದು ಕೇಸರಗಳಿರುವ ಪುಷ್ಪಗಳು ಒಮ್ಮೆಲೇ ಅರಳುವುದಿಲ್ಲ ಗೊತ್ತಾ..? ಅದರಿಂದ ಏನು ಲಾಭ ಹೇಳಿ. ಯಾರಿಗೆ ಲಾಭ ಗೊತ್ತಾ? ಈ ಹೂ ಗೊಂಚಲಲ್ಲಿ ಹೂಗಳು  ಕೆಲವಾರು ದಿನಗಳ ವರೆಗೆ ಅರಳುತ್ತಲೇ ಇರುತ್ತವೆ. ಹಾಗೆಯೇ ಹಣ್ಣುಗಳೂ ಆಗುತ್ತಲೇ ಇರುತ್ತವೆ. ಇಷ್ಟು ದೀರ್ಘ ಕಾಲ ತಿನಿಸು ಸಿಗುವುದಾದರೆ ಅತಿಥಿಗಳು ನಿತ್ಯವೂ ಬರುತ್ತಲೇ ಇರುವುದು ಸಹಜವಲ್ಲವೇ? ಇದರ ಹೂಗೊಂಚಲಿನಲ್ಲಿ ಯಾವಾಗಲೂ ಬಣ್ಣದ ಚಿಟ್ಟೆಗಳು ವಿಹರಿಸುತ್ತಿರುತ್ತವೆ. ಆದ್ದರಿಂದಲೇ ದೇಶ ವಿದೇಶಗಳ ಚಿಟ್ಟೆ ಪಾರ್ಕ್ ಗಳಲ್ಲಿ ಈ ಗಿಡಕ್ಕೆ ಪ್ರಮುಖ ಸ್ಥಾನವಿದೆ! ಕೆಲವು ಜಾತಿಯ ನೊಣಗಳು ಕೂಡ ಮಕರಂದ ಹೀರಲು ಬರುತ್ತಿರುವಂತೆಯೇ ಇದರ ಹಣ್ಣಗಳನ್ನು ತಿನ್ನಲು ಸಣ್ಣ ಪುಟ್ಟ ಕೀಟಗಳು, ಇರುವೆಗಳು, ಪಕ್ಷಿಗಳು  ಯಾವಾಗಲೂ ನೆಲೆಯಾಗಿರುತ್ತವೆ. ದೀರ್ಘ ಕಾಲ ಹಣ್ಣುಗಳು ಲಭ್ಯ ಇರುವುದರಿಂದ ಆಹಾರಕ್ಕಾಗಿ ದೂರ ಹೋಗಲಾರದ ಜೀವಿಗಳು ಈ ಸಸ್ಯವನ್ನೆ ಅವಲಂಬಿಸಿ ಬದುಕುತ್ತವೆ. ಎಲ್ಲಕ್ಕಿಂತ ಹೆಚ್ಚಾಗಿ ಈ ಗಿಡದಲ್ಲಿ ಜೇಡಗಳು ಬಲೆ ಹೆಣೆದು ಭೋಜನಕ್ಕಾಗಿ ಕಾಯುತ್ತಿರುತ್ತವೆ. ಕುಳಿತಲ್ಲೇ ತರಹಾವರಿ ಬಾಡೂಟ ಯಾರಿಗೆ ಬೇಡ! ಇನ್ನೂ ವಿಶೇಷವೆಂದರೆ ನೀಲಿ ರೆಕ್ಕೆಗಳ ದೊಡ್ಡ ಗಾತ್ರದ ನೊಣಗಳು ಈ ಗಿಡದ ಹಣ್ಣುಗಳ ಒಳಗೆ ಮೊಟ್ಟೆಗಳನ್ನಿಡುತ್ತವೆ. ತನ್ನ ಸಂತಾನ ವೃದ್ಧಿಗೆ ಈ ಹಣ್ಣುಗಳನ್ನೇ ಆಶ್ರಯ ತಾಣವಾಗಿಸಿರುವುದು  ವಿಸ್ಮಯವಲ್ಲವೇ! ಈ ಪಕ್ಷಿ ಪ್ರಾಣಿಗಳಿಂದ ಗಿಡಗಳಿಗೂ ಪ್ರಯೋಜನವಿದೆ. ನಾವು ನೆಡದೇ ನಮ್ಮಂಗಳದ ಬದಿಯಲ್ಲಿ ಗಿಡ ಹುಟ್ಟಲು ಇವೇ ಕಾರಣ. ಪಕ್ಷಿಗಳು ತಮ್ಮ ಹಿಕ್ಕೆಯ ಮೂಲಕ ಬೀಜ ಪ್ರಸಾರ ನಡೆಸುತ್ತವೆ. ಪರಿಸರದ ಉಳಿವಿಗಾಗಿ ಈ ಗೆಳೆತನ ನಿರಂತರವಾಗಿ ಸಾಗಲೇ ಬೇಕು. ಅರ್ಧ ನೆರಳು ಅರ್ಧ ಬಿಸಿಲಿನ ತಂಪಾದ ಜಾಗದಲ್ಲಿ ತನ್ನ ಪರಿವಾರದ ಜೊತೆ  ಬದುಕುವ ಲೀಯಾ ಇಂಡಿಕಾ  ಪರಿಸರದ ಪ್ರಮುಖ ಕೊಂಡಿಯಾಗಿದೆ. ಮಾತ್ರವಲ್ಲದೆ  ಹಿಂದೂಗಳು ಅಂತ್ಯಕ್ರಿಯೆಯ ನಂತರದ ಆಚರಣೆಗಳಲ್ಲಿ ಇದನ್ನು ಬಳಸುತ್ತಾರೆ.
      ಇದರ ಉಳಿವು ಮಾನವನ ಉಳಿವಿಗೂ ಅತ್ಯಗತ್ಯ ಅಲ್ಲವೇ? ನಾವೂ ಇದರ ಉಳಿವಿನ ಬಗ್ಗೆ ಚಿಂತಿಸುವ ಅಗತ್ಯವಿದೆ. ಈ ಗಿಡವನ್ನು ಗುರುತಿಸುವುದು ಮಾತ್ರವಲ್ಲದೇ ಸ್ನೇಹಿತರಿಗೂ ತಿಳಿಸುವಿರಲ್ಲವೇ?
      ಸರಿ ಮಕ್ಕಳೇ, ಮುಂದಿನ ವಾರ ಇನ್ನೊಂದು ನಿಷ್ಪಾಪಿ ಸಸ್ಯದ ಜೊತೆ ಭೇಟಿಯಾಗುತ್ತೇನೆ.. ನಮಸ್ಕಾರ.
..................... ವಿಜಯಾ ಬಿ ಶೆಟ್ಟಿ ಸಾಲೆತ್ತೂರು
ಸಹ ಶಿಕ್ಷಕಿ, ಸರ್ಕಾರಿ ಹಿರಿಯ ಪ್ರಾಥಮಿಕ
ಶಾಲೆ ,  ಬಾಳೆಪುಣಿ (ಇರಾ)
ಬಂಟ್ವಾಳ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
Mob : +91 78925 87191
*******************************************




Ads on article

Advertise in articles 1

advertising articles 2

Advertise under the article