-->
ನಿಷ್ಪಾಪಿ ಸಸ್ಯಗಳು : ಸಂಚಿಕೆ - 54

ನಿಷ್ಪಾಪಿ ಸಸ್ಯಗಳು : ಸಂಚಿಕೆ - 54

ನಿಷ್ಪಾಪಿ ಸಸ್ಯಗಳು : ಸಂಚಿಕೆ - 54
ಲೇಖಕರು: ವಿಜಯಾ ಬಿ ಶೆಟ್ಟಿ ಸಾಲೆತ್ತೂರು
ಸಹ ಶಿಕ್ಷಕಿ, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ 
ಬಾಳೆಪುಣಿ (ಇರಾ), ಬಂಟ್ವಾಳ ತಾಲೂಕು
ದಕ್ಷಿಣ ಕನ್ನಡ ಜಿಲ್ಲೆ


      

ಪ್ರೀತಿಯ ಮಕ್ಕಳೇ.... ಹೇಗಿದ್ದೀರಿ.... ಮಳೆರಾಯನ ಆಗಮನದಿಂದ ಪ್ರಕೃತಿ ಮಾತೆ ನಲಿದಾಡುತ್ತಾ ತರತರದ ಪುಷ್ಪಗಳ ಪೋಣಿಸುತ ಮುಡಿಗೇರಿಸುತ್ತಿದ್ದಾಳೆ.
         ನಿಸರ್ಗ ಸಮಸ್ಯೆಗಳನ್ನು ಸೃಷ್ಟಿಸಿದರೆ ನಿಸರ್ಗದಲ್ಲೇ ಉತ್ತರ ಹುಡುಕುವುದು ಪ್ರಾಣಿ, ಪಕ್ಷಿ, ಸರೀಸೃಪಗಳ ಬುದ್ದಿವಂತಿಕೆಯಾಗಿದೆ. ಮಾನವನೂ ಇದಕ್ಕೆ ಹೊರತಾಗಿಲ್ಲ. ಹಿಂದೆ ಕೀವು ಸುರಿವ  ಹುಣ್ಣುಗಳನ್ನು  ಹಳ್ಳಿಯ ಅವಿದ್ಯಾವಂತ ಪಂಡಿತರು ಗುಣಪಡಿಸುತ್ತಿದ್ದರು.
      ನಾಗರಹಾವು, ಕನ್ನಡಿ ಹಾವು ಕೆಲವೊಮ್ಮೆ ಕಟ್ಟುಹಾವುಗಳು  ಕಡಿದಾಗಲೂ  ಹಳ್ಳಿಯ ನಾಟಿ ವೈದ್ಯರು ನಾರು ಬೇರು ನೀಡಿ ಬದುಕಿಸುತ್ತಿದ್ದರು. ಅದಕ್ಕೆಂದೆ ಕೆಲವು ಸಸ್ಯಗಳು ಅಂಗಳದಲ್ಲೇ ಸ್ಥಾನ ಪಡೆಯುತ್ತಿದ್ದವು. ತುಳಸಿ ಪೂಜನೀಯ ಸಸ್ಯವಾಗಿ ಮನೆಯೆದುರಿಗೆ ಕಟ್ಟೆ ಕಟ್ಟಿಸಿಕೊಂಡರೆ ಅದೇ ಕಟ್ಟೆಯೊಳಗೆ ಗಿಡಮೂಲಿಕೆಯೊಂದು ಸ್ಥಾನ ಪಡೆಯುತ್ತಿತ್ತು ಗೊತ್ತಾ? ಅದೇ ತುಳುವಿನಲ್ಲಿ ಗರುಡಪಾತಾಳವೆಂದು, ಕನ್ನಡದಲ್ಲಿ ಸರ್ಪಗಂಧಿ, ಚಂದ್ರಿಕಾ, ಪಾತಾಳಗರುಡ, ಸರ್ಪಾಕ್ಷಿ, ಪಾತಾಳಗಂಧಿ, ಹಡಕಿ, ಇಂಗ್ಲೀಷ್ ಭಾಷೆಯಲ್ಲಿ ಸರ್ಪೆಂಟೀನಾ ರೂಟ್ ಎಂದು  ಕರೆಯಲ್ಪಡುವ ಮಹತ್ವಪೂರ್ಣ ಸಸ್ಯ.
         ಬಹುವಾರ್ಷಿಕ  ಸಸ್ಯವಾದ ಸರ್ಪಗಂಧಿ ನಿತ್ಯಹರಿದ್ವರ್ಣದ ಮೂಲಿಕಾ ಸಸ್ಯ ನೇಪಾಳ, ಶ್ರೀಲಂಕಾ, ಆಫ್ರಿಕಾ, ದ.ಅಮೇರಿಕಗಳಲ್ಲಿ ಕಾಣಸಿಗುವ ಈ ಸಸ್ಯ ಭಾರತದ ಹಿಮಾಲಯ ಶ್ರೇಣಿ, ಸಿಕ್ಕಿಂ, ಬಿಹಾರ, ಅಸ್ಸಾಂ, ಪಶ್ಚಿಮಘಟ್ಟ ದಲ್ಲಿ ಬೆಳೆಯುತ್ತದೆ.
        ಎರಡು ಅಡಿಯಷ್ಟೆತ್ತರ ಬೆಳೆಯುವ ಸರ್ಪಗಂಧಿಯು ಪೊದರು ಸಸ್ಯವೂ ಹೌದು. ಇದರಲ್ಲಿ ಬಿಳಿ ಮತ್ತು ಕೆಂಪು ಹೂಗಳಿರುವ ಎರಡು ವಿಧಗಳಿವೆ. ಎಲೆಗಳ ಮೇಲ್ಭಾಗ ಹೊಳಪಾದ ಹಸಿರಿದ್ದು ಅಡಿಭಾಗ ತಿಳಿ ಹಸಿರು ಬಣ್ಣವಿರುತ್ತದೆ. ಸುಮಾರು 8ರಿಂದ 20 cm ಉದ್ದ ಇರುವ ಎಲೆಗಳು ತುದಿಗಳಲ್ಲಿ ಚೂಪಾಗಿರುತ್ತದೆ. ಚಕ್ರಾಕಾರವಾಗಿ ಜೋಡಣೆಗೊಳ್ಳುವ ಎಲೆಗಳು ಕೆಲವು ವಿಭಾಗದಲ್ಲಿ ಎದುರು ಬದುರು ಜೋಡಣೆಯಲ್ಲೂ ಕಾಣಸಿಗುವುದು. ಇದರ  ತೊಗಟೆ ಮೃದುವಾಗಿದೆ. ಹಾವಿನಂತೆಯೇ ಅಂಕುಡೊಂಕಾದ ತಾಯಿಬೇರು ಹಾಗೂ ಉಪಬೇರುಗಳಿರುತ್ತವೆ. ತಿಳಿ ನೇರಳೆ ಹಾಗೂ ಬಿಳೀ ಬಣ್ಣದ ಹೂಗಳು ಗೊಂಚಲಾಗಿ ಕಾಣಿಸುತ್ತದೆ. ಹೂಗಳ ಕೊಳವೆಯಾಕಾರಾದ ದಂಟಿನೊಳಗೆ ಮಕರಂದವಿರುತ್ತದೆ. ಪುಷ್ಪಪಾತ್ರೆ ಹೊಳಪಿನ ಕೆಂಪುವರ್ಣದಲ್ಲಿದ್ದು ಉದ್ದನೆಯ  ಪುಷ್ಪಮಂಜರಿ ಹೊಂದಿದೆ. ತಿರುಳಿರುವ ಅಂಡಾಕಾರವಾದ ಚಿಕ್ಕ ಹಣ್ಣುಗಳಾಗುತ್ತವೆ. ಮಾಗಿದನಂತರ ಹೊಳೆಯುವ ನೇರಳೆ ಕಪ್ಪು ಬಣ್ಣವಾಗಿ ಆಕರ್ಷಕವಾಗಿ ಕಾಣಿಸುತ್ತವೆ.
       ಮಕ್ಕಳೇ, ಈ ಗಿಡವಿದ್ದಲ್ಲಿ ಹಾವುಗಳು ಬರುವುದಿಲ್ಲವೆಂದು  ಜನಪದರ ನಂಬಿಕೆ. ನಾಗರ ಹಾವನ್ನು ಕೊಂದ ಮುಂಗುಸಿಯು ಸರ್ಪಗಂಧಿ ಯ ಬೇರನ್ನು ತಿಂದು ವಿಷ ಇಳಿಸಿಕೊಳ್ಳುವುದೆಂಬ ಪ್ರತೀತಿ ಇದೆ. ಏಕೆ ಈ ರೀತಿ ಹಾವಿನ  ಜೊತೆ ಈ ಸರ್ಪಗಂಧಿಯ ಹೆಸರು ಥಳಕು ಹಾಕಿಕೊಂಡಿದೆ ಎಂದರೆ  ವಿಷದ ಹಾವು, ಚೇಳು, ಸರೀಸೃಪಗಳ ಕಡಿತಗಳಾದರೆ ಸರ್ಪಗಂಧಿಯೇ ಪರಂಪರಾಗತ  ಔಷಧವಾಗಿ  ತಲೆಮಾರಿಂದ ತಲೆಮಾರಿಗೆ ಹರಿದು ಬಂದಿದೆ. ಎಲೆ, ತೊಗಟೆ, ಹೂಗಳಲ್ಲೂ ಔಷಧೀಯ ಗುಣವಿದ್ದರೂ ಬೇರುಗಳಲ್ಲಿ 90% ದಷ್ಟು ಪ್ರಮಾಣದಲ್ಲಿರುತ್ತದೆ. ಇಷ್ಟು ಮಾತ್ರವಲ್ಲದೇ ಈ ಪ್ರಬಲ ಮೂಲಿಕೆ ಚರಕ ಸಂಹಿತೆ ಅಷ್ಟಾಂಗ ಹೃದಯ, ಸುಶ್ರುತ ಸಂಹಿತೆಯಂತಹ ಪ್ರಾಚೀನ ಆಯುರ್ವೇದ ಹಸ್ತಪ್ರತಿಗಳಲ್ಲಿ ಅಸ್ತಮಾ ರೋಗಲಕ್ಷಣಗಳನ್ನು  ನಿವಾರಿಸಲು ಬಳಕೆಯನ್ನು ದಾಖಲಿಸಲಾಗಿದೆ.
       ವರ್ತಮಾನ ಕಾಲದಲ್ಲಿ ಚೀನಾ ಸೇರಿದಂತೆ ಪ್ರಪಂಚದ ಹಲವು ಭಾಗಗಳಲ್ಲಿ ಔಷಧಿಗಾಗಿ ಬಳಕೆಯಾಗುತ್ತಿರುವ ಈ ನಿಷ್ಪಾಪಿ ಸಸ್ಯವು  ಅಪೊಸಿನಾಸಿಯೆ  (Apocynaceae) ಕುಟುಂಬಕ್ಕೆ ಸೇರಿದ್ದು ರೌವೋಲ್ಫಿಯ ಸರ್ಪೆಂಟಿನ (Rauwolifia  Serpenina) ಎಂಬ ಸಸ್ಯ ಶಾಸ್ತ್ರೀಯ ಹೆಸರನ್ನು ಪಡೆದಿದೆ.
          ರೆಸಿನ್, ಪಿಷ್ಟ, ಪೊಟಾಷಿಯಂ, ಫಾಸ್ಪೇಟ್, ಮ್ಯಾಂಗನೀಸ್ ನಂತಹ ರಾಸಾಯನಿಕಗಳಲ್ಲದೆ ಅಜ್ಮಲೀನ್, ಸರ್ಪೆಂಟಿನ್ ಮೊದಲಾದ ಹಲವಾರು ಸಸ್ಯಕ್ಷಾರಗಳನ್ನು ಒಳಗೊಂಡಿರುವ ಕಾರಣ ಆಯುರ್ವೇದ ದಲ್ಲಿ ವ್ಯಾಪಕ ಬಳಕೆಗೆ ಕಾರಣವಾಗಿದೆ. ಏರು ರಕ್ತದೊತ್ತಡಕ್ಕೆ ಹಾಗೂ ನಿದ್ರಾ ಹೀನತೆಗೆ ಔಷಧಿಯಾಗಿ ಖ್ಯಾತಿ ಪಡೆದ  ಸರ್ಪಗಂಧಿ ಮನೋರೋಗ, ಉನ್ಮಾದ, ಅಪಸ್ಮಾರ, ಆತಂಕ, ಅಧಿಕ ಜ್ವರ, ಉದ್ವೇಗ, ಮಾನಸಿಕ ಒತ್ತಡ, ಸೋರಿಯಾಸಿಸ್ ಗಳಂತಹ ಹತ್ತು ಹಲವು ರೋಗಗಳಿಗೆ ಉಪಶಮನ ಕಾರಿಯಾಗಿದೆ ಎಂದರೆ ಅಚ್ಚರಿಯೆನಿಸದೇ!. ಕ್ಷಿಪ್ರಹೃದಯ ಬಡಿತ, ಎದೆಯ ಅಸ್ವಸ್ಥತೆಗಳಿಗೆ ಉಪಶಮನ ನೀಡುವ ಅದ್ಭುತ ಮೂಲಿಕೆ ಸರ್ಪಗಂಧಿ ಯಾದರೂ  ಎಚ್ಚರಿಕೆಯಿಂದ  ವೈದ್ಯಕೀಯ ಮೇಲ್ವಿಚಾರಣೆಯ  ಮುಖೇನವೇ ಪಡೆಯುವುದು ಸೂಕ್ತ. ಏಕೆಂದರೆ ಇದರ ಸೇವನೆಯಿಂದ ಅಡ್ಡ ಪರಿಣಾಮಗಳೂ ಉಂಟಾಗುವ ಸಾಧ್ಯತೆ ಇದ್ದೇ ಇದೆ.
            ಸರ್ಪಗಂಧಿಯ ಅಗತ್ಯತೆಗೆ ತಕ್ಕಷ್ಟು ಪೂರೈಕೆಯಿಲ್ಲದೆ ಅಂದರೆ ಗಿಡದ ಲಭ್ಯತೆ ಇರದ ಕಾರಣ ಈಗ ನಕಲಿ ಔಷಧಿಯ ಬಳಕೆಯೂ ನಡೆಯುತ್ತಿದೆ ಎನ್ನಲಾಗುತ್ತದೆ. ಈ ಸಸ್ಯವು ಒಂದೇ ಸ್ಥಳದಲ್ಲಿ ದೊಡ್ಡಪ್ರಮಾಣದಲ್ಲಿ ಬೆಳೆಯುವುದಿಲ್ಲ. ಭಾರತದ ಮಧ್ಯಪ್ರದೇಶ, ಉತ್ತರಪ್ರದೇಶಗಳಲ್ಲಿ   ರೈತರು ಹೆಚ್ಚಿನ ಪ್ರಮಾಣದಲ್ಲಿ ಕೃಷಿಯಾಗಿ  ಬೆಳೆಯುತ್ತಾರೆ. ಅಕ್ಟೋಬರ್, ನವೆಂಬರ್ ನಲ್ಲಿ ಬೀಜ ಸಂಗ್ರಹ ಮಾಡಿ ಮೇ - ಜೂನ್ ನಲ್ಲಿ ಬಿತ್ತನೆ ಕಾರ್ಯ ನಡೆದು ಜುಲೈ ಆಗಸ್ಟ್ ನಲ್ಲಿ ನಾಟಿ ಮಾಡಲಾಗುತ್ತದೆ. ಯಾವುದೇ ಉಪಚಾರ ಬೇಡದ ಸರ್ಪಗಂಧಿಯನ್ನು ಬೆಳೆಸಲು ಗಿಡವನ್ನೂ ಬೇರನ್ನೂ ಬಳಸಬಹುದು.
           ಹೇರಳ ಮಳೆ ಬೀಳುವ ಪ್ರದೇಶವಿದು ಎಂಬ ಹಾಗೆ ಭೂಮಿತಾಯಿ ಹಾಕಿದ  ಸಹಿಯಂತೆ  ಕಾಣಿಸುವ ಸರ್ಪಗಂಧಿ ವಿಶ್ವದ ಹಲವಾರು ಭಾಗಗಳಲ್ಲಿ  ಪಾರಂಪರಿಕ ಔಷಧಿ. ಇದೀಗ ಅಳಿವಿನಂಚಿಗೆ ಸರಿದು ಸರಕಾರ ಕೆಂಪುಪಟ್ಟಿಗೆ ಸೇರಿಸಿಯಾಗಿದೆ. ನಾವು ಇಂತಹ ಗಿಡ ಮೂಲಿಕೆಗಳನ್ನು ಪ್ರೀತಿಸೋಣ, ಗೌರವಿಸೋಣ ಮಾತ್ರವಲ್ಲ ಉಳಿಸಲು ಪ್ರಯತ್ನಿಸೋಣ ಅಲ್ಲವೇ?
     ಸರಿ ಮಕ್ಕಳೇ, ಮುಂದಿನ ವಾರ ಇನ್ನೊಂದು ನಿಷ್ಪಾಪಿ ಸಸ್ಯದ ಜೊತೆ ಭೇಟಿಯಾಗುತ್ತೇನೆ.. ನಮಸ್ಕಾರ.
..................... ವಿಜಯಾ ಬಿ ಶೆಟ್ಟಿ ಸಾಲೆತ್ತೂರು
ಸಹ ಶಿಕ್ಷಕಿ, ಸರ್ಕಾರಿ ಹಿರಿಯ ಪ್ರಾಥಮಿಕ 
ಶಾಲೆ ,  ಬಾಳೆಪುಣಿ (ಇರಾ)
ಬಂಟ್ವಾಳ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
Mob : +91 78925 87191
*******************************************

Ads on article

Advertise in articles 1

advertising articles 2

Advertise under the article