-->
ಮಕ್ಕಳಿಗಾಗಿ ವಿಜ್ಞಾನ : ಸಂಚಿಕೆ - 32

ಮಕ್ಕಳಿಗಾಗಿ ವಿಜ್ಞಾನ : ಸಂಚಿಕೆ - 32

ಮಕ್ಕಳಿಗಾಗಿ ವಿಜ್ಞಾನ : ಸಂಚಿಕೆ - 32
ಲೇಖಕರು : ದಿವಾಕರ ಶೆಟ್ಟಿ ಎಚ್
ನಿವೃತ್ತ ಪ್ರವಾಚಕರು
ಸರಕಾರಿ ಶಿಕ್ಷಕ ಶಿಕ್ಷಣ ಮಹಾವಿದ್ಯಾಲಯ
ಮಂಗಳೂರು, ದಕ್ಷಿಣ ಕನ್ನಡ ಜಿಲ್ಲೆ
Mob: 9448571203


ಪ್ರೀತಿಯ ಮಕ್ಕಳೇ.... ಹಿಂದಿನ ವಾರ ನಾನು ಜೀವ ಕ್ರಿಯೆಗಳಲ್ಲೊಂದಾದ ಆಹಾರ ಪಡೆಯುವ ಕ್ರಮದ ಬಗ್ಗೆ ಹೇಳುತ್ತಿದ್ದೆ. ಆಹಾರ ತಯಾರಿಸಲಾಗದ ಪರ ಪೋಷಕ ಜೀವಿಗಳು ಬೇರೆಯವರು ತಯಾರಿಸಿದ ಜೀವಿಗಳನ್ನು ಜೀರ್ಣಿಸಿಕೊಳ್ಳಬೇಕಾಗುತ್ತದೆ. ಏಕ ಕೋಶೀಯವಿರಲಿ ಬಹು ಕೋಶೀಯವಿರಲಿ ಜೀರ್ಣ ಕ್ರಿಯೆಯಲ್ಲಿ ನಾಲ್ಕು ಹಂತಗಳಿವೆ. ಮೊದಲನೆಯದು ತಿನ್ನುವುದು (injection) ಅಂದರೆ ದೇಹದ ಒಳಗೆ ಸೇರಿಸುವ ಕ್ರಿಯೆ. ಎರಡನೆಯದು ಜೀರ್ಣಿಸುವಿಕೆ (digestion) ಅಂದರೆ ಆಹಾರದ ಘಟಕಗಳನ್ನು ದೇಹ ಹೀರಿಕೊಳ್ಳಬಹುದಾದ ಸರಳ ಘಟಕಗಳಾಗಿ ಒಡೆಯುವುದು. ಮೂರನೆಯದು ದಕ್ಕಿಸಿಕೊಳ್ಳುವುದು (assimilation) ಜೀರ್ಣಗೊಂಡ ಆಹಾರವನ್ನು ದೇಹ ಹೀರಿಕೊಳ್ಳುವುದು ಮತ್ತು ಕೊನೆಯದಾಗಿ ವಿಸರ್ಜಿಸುವುದು (egestion) ದೇಹವು ಜೀರ್ಣಿಸಲಾಗದ ಆಹಾರದ ಶೇಷವನ್ನು ಹೊರಹಾಕುವುದು. ಇದು ಜೀರ್ಣಕ್ರಿಯೆಯ ಪರಿಕ್ರಮ. ಈ ವಾರ ಅತ್ಯಂತ ಸರಳವಾದ ಅಮೀಬಾ ಹೇಗೆ ಜೀರ್ಣ ಮಾಡುತ್ತದೆ ನೋಡೋಣ.

ಅಮೀಬಾ ತನಗಿಂತ ಚಿಕ್ಕದಾದ ತನ್ನ ಆಹಾರವನ್ನು ಕಂಡ ಕೂಡಲೇ ಅದರ ಸುತ್ತಲೂ ತನ್ನ ಮಿಥ್ಯಪಾದವನ್ನು ಬೆಳೆಸಲು ತೊಡಗುತ್ತದೆ. ನೀವು ಕೇಳಬಹುದು ಅಮೀಬಾ ಹೇಗೆ ಆಹಾರವನ್ನು ನೋಡುತ್ತದೆ ಎಂದು. ನಿಮಗೆ ಆಹಾರ ಕಾಣಿಸದಿದ್ದರೂ ಅಮ್ಮ ಮಾಡಿದ ಉಪ್ಪಿಟ್ಟಿನ ಘಮ ಟಿವಿ ನೋಡುತ್ತಿರುವ ನಿಮ್ಮ ಮೂಗಿಗೆ ಅಡರಿದ ಹಾಗೆ ನಿಮಗೆ ಆಹಾರದ ಇರುವು ಗೊತ್ತಾಗುತ್ತದೆ. ಅಮ್ಮ ತಟ್ಟೆಯನ್ನು ತೆಗೆದು ಉಪ್ಪಿಟ್ಟನ್ನು ಮಗುಚಿ ಹಾಕಿ ನಿಮ್ಮ ಕಡೆಗೆ ನಡೆದು ಬರುತ್ತಿರುವ ಸದ್ದು ಕೇಳುತ್ತಿದ್ದ ಹಾಗೆ ಆಹಾರದ ಬರುವಿನ ಅರಿವು ನಿಮಗಾಗುತ್ತಿದ್ದಂತೆ ಬಾಯಿಯಲ್ಲಿ ಲಾಲಾರಸ ಉಕ್ಕಿ ಬರುತ್ತದೆ. ಇದು ಪ್ರಚೋದನೆಗೆ ತಕ್ಕ ಪ್ರತಿಕ್ರಿಯೆ ತೋರಿಸುವ ಜೀವಿಗಳ ಒಂದು ಸಾಮಾನ್ಯ ಗುಣ. ಈ ಅಮೀಬಾಕ್ಕೆ ಆಹಾರ ಎಂದರೆ ಒಂದು ರಾಸಾಯನಿಕ. ಈ ರಾಸಾಯನಿಕ ಪ್ರಚೋದನೆ ಪಡೆದ ಅಮೀಬಾ ಅದರ ಸುತ್ತಲೂ ಸುಳ್ಳುಪಾದವನ್ನು ಬೆಳೆಸುತ್ತದೆ. ಮೊದಲು ಬೊಗಸೆಯ ಹಾಗೆ, ಮತ್ತೆ ಕಪ್ಪಿನ ಹಾಗೆ, ನಂತರ ಮಡಕೆಯ ಹಾಗೆ ಬೆಳೆಯುತ್ತಾ ಬೆಳೆಯುತ್ತಾ ಹೋಗಿ ಕೊನೆಗೆ ಕುಂಬಳಕಾಯಿಯ ಹಾಗಾಗಿ ಆಹಾರವನ್ನು ತನ್ನ ಕೋಶದ ಒಳಗೆ ಸೇರಿಸಿಕೊಂಡು ಬಿಡುತ್ತದೆ. ಈ ಆಹಾರವನ್ನು ಚಿಕ್ಕ ಚೀಲದೊಳಗೆ ಹಾಕಿ ಕಟ್ಟಿ ಬಿಡುತ್ತದೆ. ಈ ಆಹಾರದ ಚೀಲವೇ ಆಹಾರದ ರಸದಾನಿ (food vacuole). ಇಲ್ಲಿಗೆ ತಿನ್ನುವ ಕೆಲಸ ಮುಗಿಯಿತು. 

ಈ ಆಹಾರದ ರಸದಾನಿಯ ಒಳಗೆ ಕೋಶ ರಸದಲ್ಲಿರುವ (cytoplasm) ಕಿಣ್ವಗಳು ಈ ಚೀಲದ ಒಳಗೆ ಚುಚ್ಚಲ್ಪಡುತ್ತವೆ. ಇದು ಹೆಚ್ಚು ಕಡಿಮೆ ಆನೆ ಬೇಲದ ಹಣ್ಣನ್ನು ಜೀರ್ಣಿಸಿದ ಹಾಗೆ. ಆನೆ ಬೇಲದ ಹಣ್ಣು ತಿನ್ನುವುದಲ್ಲ ಹಾಗೆಯೇ ನುಂಗಿ ಬಿಡುತ್ತವೆ. ಅವುಗಳ ಜಠರ ಮತ್ತು ಕರುಳಿನ ಕಿಣ್ವಗಳು ಹಣ್ಣಿನ ತೊಗಟೆಯಲ್ಲಿರುವ ರಂಧ್ರಗಳ ಮೂಲಕ ಒಳ ಹೋಗಿ ಅಲ್ಲಿಯೇ ಜೀರ್ಣಿಸುತ್ತವೆ. ಜೀರ್ಣಗೊಂಡ ಒಳಭಾಗದ ತಿರುಳು ತೊಗಟೆಯ ರಂಧ್ರಗಳ ಮೂಲಕ ಹೊರಬಂದು ಕರುಳಿನಿಂದ ಹೀರಲ್ಪಡುತ್ತದೆ. ಜೀರ್ಣಿಸಿ ಟೊಳ್ಳಾದ ಹಣ್ಣಿನ ಖಾಲಿ ಕವಚ ಅದರ ಲದ್ದಿಯೊಂದಿಗೆ ಹೊರಬರುತ್ತದೆ. ಅದರ ಕವಚ ಪುಡಿಯಾಗುವುದೂ ಇಲ್ಲ ಜೀರ್ಣವಾಗುವುದೂ ಇಲ್ಲ. ಅಮೀಬಾದ ಜೀರ್ಣಿಸುವಿಕೆ ಮತ್ತು ಹೀರಿಕೊಳ್ಳುವಿಕೆ ಹೆಚ್ಚೂ ಕಡಿಮೆ ಹೀಗೆಯೇ. ಜೀರ್ಣಿಸದೇ ಉಳಿದ ಆಹಾರವಿದೆಯಲ್ಲ ಅದನ್ನು ಹೊರ ಹಾಕಲು ಅಮೀಬಾದ ಬಳಿ ಯಾವುದೇ ಅಂಗಗಳಿಲ್ಲ. ಅಮೀಬಾ ಮುಂದೆ ಮುಂದೆ ಹೋಗುತ್ತಿದ್ದಂತೆ ಜೀರ್ಣವಾಗದ ಆಹಾರ ನ್ಯೂಟನ್ನನ ಚಲನೆಯ ಮೊದಲನೆಯ ನಿಯಮದಲ್ಲಿ ವಿವರಿಸುವ ಜಡತ್ವದ ಕಾರಣದಿಂದ ಹಿಂದೆ ಹಿಂದೆ ಉಳಿಯುತ್ತದೆ. ಯಾವಾಗ ಅದು ಕೋಶಪೊರೆಗೆ ತಾಗುತ್ತದೆಯೋ ಆಗ ಕೋಶ ಪೊರೆ ತೆರೆದು ಅದನ್ನು ಎಸೆದು ಹರಿದ ತನ್ನ ಪೊರೆಯನ್ನು ರಿಪೇರಿ ಮಾಡಿಕೊಂಡು ಮುಂದಕ್ಕೆ ಹೋಗಿಬಿಡುತ್ತದೆ. 

ನಿಮಗೆ ಆಹಾರ ಜೀರ್ಣಿಸಿಕೊಳ್ಳುವಾಗಲೂ ಓಹ್ ಪುಟ್ಟ ಅಮೀಬಾ ಹೇಗೆ ಜೀರ್ಣಿಸಿಕೊಳ್ಳಲು ಎಷ್ಟು ಕಷ್ಟಪಡುತ್ತದೆ ಎಂದು ಯೋಚಿಸಿರಲಿಕ್ಕಿಲ್ಲ. ಈಗ ತಿಳಿಯಿತೇ?

ಮುಂದಿನ ಸಂಚಿಕೆಗೆ ಕಾಯುತ್ತೀರಿ ತಾನೇ?
.................................... ದಿವಾಕರ ಶೆಟ್ಟಿ ಎಚ್
ನಿವೃತ್ತ ಪ್ರವಾಚಕರು
ಸರಕಾರಿ ಶಿಕ್ಷಕ ಶಿಕ್ಷಣ ಮಹಾವಿದ್ಯಾಲಯ
ಮಂಗಳೂರು, ದಕ್ಷಿಣ ಕನ್ನಡ ಜಿಲ್ಲೆ
Mob: 9448571203
******************************************** 


Ads on article

Advertise in articles 1

advertising articles 2

Advertise under the article