-->
ಜಗಲಿ ಕಟ್ಟೆ : ಸಂಚಿಕೆ - 54

ಜಗಲಿ ಕಟ್ಟೆ : ಸಂಚಿಕೆ - 54

ಜಗಲಿ ಕಟ್ಟೆ : ಸಂಚಿಕೆ - 54
ತಾರಾನಾಥ್ ಕೈರಂಗಳ
ಮಕ್ಕಳ ಜಗಲಿ
ಮಕ್ಕಳ ಡಿಜಿಟಲ್ ಆನ್ಲೈನ್ ಪತ್ರಿಕೆ
ದಕ್ಷಿಣ ಕನ್ನಡ ಜಿಲ್ಲೆ. 


ಇದು ನಿಮ್ಮ ಮನೆಯ 
ಮಕ್ಕಳ ಜಗಲಿ
www.makkalajagali.com
    ಮಕ್ಕಳ ಜಗಲಿಯ ನನ್ನ ಎಲ್ಲಾ ಆತ್ಮೀಯ ಓದುಗ ಬಂಧುಗಳಿಗೆ ಪ್ರೀತಿಯ ನಮಸ್ಕಾರಗಳು.... ನಿಮ್ಮ ಜೊತೆ ಮಾತಾಡುವ ನಿಮ್ಮ ಸಲಹೆ, ಹೊಸ ಆಲೋಚನೆಗಳನ್ನು ನಮ್ಮ ಜೊತೆ ಹಂಚಿಕೊಳ್ಳುವುದಕ್ಕಾಗಿ ಈ ಜಗಲಿ ಕಟ್ಟೆ.... ಮಕ್ಕಳ ಜಗಲಿಗೆ ಸಂಬಂಧಿಸಿದ ಯಾವುದೇ ವಿಷಯದ ಕುರಿತಾಗಿ ನಿಮ್ಮ ಅನಿಸಿಕೆಗಳು ಹಾಗೂ ಸಲಹೆಗಳನ್ನು ಸ್ವೀಕರಿಸುತ್ತೇವೆ. ವಿದ್ಯಾರ್ಥಿಗಳು, ಪೋಷಕರು, ಶಿಕ್ಷಕರು, ಹಿತೈಷಿಗಳು ನಮಗೆ ಬರೆದು ಕಳುಹಿಸಿ.... ಹೆಸರು ವಿಳಾಸ ಹಾಗೂ ಭಾವಚಿತ್ರದೊಂದಿಗೆ ನಿಮ್ಮ ಅನಿಸಿಕೆಗಳು 100 ಪದಗಳ ಮಿತಿಯಲ್ಲಿರಲಿ..... ತಾರಾನಾಥ್ ಕೈರಂಗಳ


    ಶಾಲೆಗಳೆಲ್ಲಾ ಆರಂಭವಾಗಿದೆ. ಸರಕಾರದ ಸುತ್ತೋಲೆಯಂತೆ ಶಾಲಾರಂಭದ ಮೊದಲ ದಿನವನ್ನು ಪ್ರಾರಂಭೋತ್ಸವ ದಿನವನ್ನಾಗಿ ಎಲ್ಲಾ ಶಾಲೆಗಳಲ್ಲೂ ಆಚರಿಸಲಾಗಿದೆ. ಶಾಲೆಯಲ್ಲಿ ಉತ್ಸವದ, ಸಂಭ್ರಮದ ವಾತಾರಣವನ್ನು ನಿರ್ಮಾಣ ಮಾಡಿ ವಿದ್ಯಾರ್ಥಿಗಳ ಮನಸ್ಸನ್ನು ಗೆಲ್ಲುವ ಉದ್ದೇಶವಿದು. ರಜೆಯ ಸಡಗರದಿಂದ ಮರಳುವ ಮಕ್ಕಳಿಗೆ ಅದೇ ಸಂಭ್ರಮವನ್ನು ಉಳಿಸಿಕೊಂಡು ಶಾಲಾ ವಾತಾವರಣಕ್ಕೆ ಒಗ್ಗಿಸಿಕೊಳ್ಳುವ ಪ್ರಯತ್ನ ಇದಾಗಿದೆ. ಕಲಿಕಾಸ್ನೇಹಿ ಪರಿಸರವನ್ನು ತಯಾರುಗೊಳಿಸಿ ಸಂತಸದ ಕಲಿಕೆಗೆ ಮಕ್ಕಳನ್ನು ಸಜ್ಜುಗೊಳಿಸುವ ಪ್ರಯೋಗವಾಗಿದೆ.
       ಇದೊಂದು ಸುಂದರ ಪರಿಕಲ್ಪನೆ. ಇಂತಹ ಪರಿಕಲ್ಪನೆಗೆ ಇನ್ನಷ್ಟು ರೆಕ್ಕೆ-ಪುಕ್ಕಗಳನ್ನು ಸೇರಿಸಿ ಅಂದಗೊಳಿಸುವ ಪ್ರಯತ್ನಗಳು ಹಲವಾರು ಕಡೆಗಳಲ್ಲಿ ನಡೆದಿವೆ. ಅಂತಹ ಪ್ರಯೋಗಗಳಲ್ಲಿ ನಾವು ಸಂಯೋಜಿಸಿರುವ 'ಮಳೆ ಹಬ್ಬ' ವೂ ಒಂದು. ಶಾಲಾರಂಭದ ಜೊತೆ ಜೊತೆಗೆ ಮಳೆಯ ಆರಂಭವೂ ನಡೆಯುವುದು ಸಾಮಾನ್ಯ. ಮಕ್ಕಳಿಗೆ ಮಳೆಯೆಂದರೆ ತುಂಬಾನೆ ಇಷ್ಟ. ಮಳೆನೀರಿಗೆ ತಲೆಯೊಡ್ಡಿ ನೆನೆಯುವುದು, ಮಳೆಯ ನೀರಿಗೆ ಕಾಗದ ದೋಣಿ ಹರಿಯಬಿಡುವುದು. ಆ ತುಂತುರು ಮಳೆ, ಮೋಡಗಳ ಸಾಲು, ಬಿರುಗಾಳಿ, ಬಿರುಗಾಳಿಗೆ ತೂಗುಯ್ಯಾಲೆಯಾಡುವ ಗಿಡ ಮರಗಳು, ಮಿಂಚು, ಸಿಡಿಲು, ಬಾನಲಿ ಮೂಡುವ ಕಾಮನಬಿಲ್ಲು....!! ಸೃಷ್ಟಿಯ ಕ್ಯಾನ್ವಾಸಲಿ ದೃಶ್ಯವಾಗುವ ಎಲ್ಲವೂ ಸುಂದರ ಅನುಭವ... ಅದೊಂದು ಹಬ್ಬ... ಮಳೆ ಹಬ್ಬ...!!
    ಮಕ್ಕಳಲ್ಲಿ ನಿರ್ಭೀತ, ಸಂತಸದ, ಸ್ವಾಭಾವಿಕ, ಸ್ವಕಲಿಕಾ ಪ್ರಜ್ಞೆಯನ್ನು ಮೂಡಿಸುವ ಸಲುವಾಗಿ ನಾನು ಕರ್ತವ್ಯ ನಿರ್ವಹಿಸುತ್ತಿರುವ ಮಂಚಿ ಕೊಳ್ನಾಡು ಪ್ರೌಢಶಾಲೆಯಲ್ಲಿ ಮಳೆ ಹಬ್ಬ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಪಠ್ಯಪೂರಕಾಂಶಗಳನ್ನು ಒಳಗೊಂಡ ಚಟುವಟಿಕೆಗಳ ಆಧಾರದಲ್ಲಿ ಈ ಹಬ್ಬ ನಡೆದಿತ್ತು. ಮಕ್ಕಳನ್ನು ಕಲಿಕಾ ವಾತಾವರಣಕ್ಕೆ ತೆರೆದುಕೊಳ್ಳುವ, ತನ್ನನ್ನು ತಾನು ಸಂಪೂರ್ಣವಾಗಿ ತೊಡಗಿಸಿಕೊಳ್ಳುವ, ಮುಗ್ಧ ಭಾವನೆಗಳಿಗೆ ಪ್ರೀತಿಯ, ಸಹಕಾರದ ರಂಗುಗಳನ್ನು ಎರಚುತ್ತಾ ನೈತಿಕ ಮೌಲ್ಯ, ಸಂಸ್ಕಾರ ಭರಿತ ನಡೆಗಳಿಗೆ ಬಾಗಿಸುವ ಪ್ರಯತ್ನವಿಲ್ಲಿ ಸಾಗಿತ್ತು...! ಸುಮಾರು 300 ಮಕ್ಕಳು ಒಂದೇ ಸೂರಿನಡಿಯಲ್ಲಿ ಪ್ರೀತಿಯನ್ನು ಹಂಚಿ ಬೆರೆತು ಮೆರೆದ ಮಳೆ ಹಬ್ಬ... ಸೊಗಸಾಗಿ ಸಂಪನ್ನಗೊಂಡಿತು.!! ಸಾಮರಸ್ಯದ ಬದುಕು ಕಾಣುವ, ಸಂಭ್ರಮದ ಕಲಿಕೆಯ ಸುಂದರ ಆಲೋಚನೆಗೆ ಇದು ನಾಂದಿಯಾಯಿತು ಎಂದರೆ ಅಚ್ಚರಿ ಇಲ್ಲ...!!
      ಜೂನ್ ತಿಂಗಳೆಂದರೆ 'ಮಕ್ಕಳ ಜಗಲಿ ಶಿಶಿರ' ಮತ್ತೆ ನೆನಪಿನಂಗಳಕ್ಕೆ ಬಂದು ಸುಳಿದಾಡುತ್ತಾನೆ. ಅದಮ್ಯ ಉತ್ಸಾಹದ ಚಿಲುಮೆ, ಇನ್ನಷ್ಟು ಮಗದಷ್ಟು ಕಲಿಯಬೇಕೆನ್ನುವ ಉತ್ಕಟ ಅಭಿಲಾಷೆಯ ಶಿಶಿರ ಕಲಿಕೆಯ ಎಲ್ಲಾ ಮಗ್ಗುಲುಗಳಲ್ಲೂ ಪ್ರತಿಯೊಬ್ಬ ಮಕ್ಕಳಿಗೂ ಸ್ಫೂರ್ತಿಯಾಗುತ್ತಾನೆ..! "ಅಕ್ಕನ ಪತ್ರ" ಕ್ಕೆ ಆಸ್ಪತ್ರೆಯಲ್ಲಿಯೂ ಉತ್ತರಿಸುತ್ತಿದ್ದ ಕಾಳಜಿಗೆ ನಮ್ಮಲ್ಲಿ ಮರುತ್ತರಗಳಿಲ್ಲ. ತನ್ನ ಕೊನೆಯ ಉಸಿರಿನ ಬಾಗಿಲಿನಲ್ಲೂ ಕಲಿಕೆಯ ಹಂಬಲದಲ್ಲಿದ್ದ. ತಿಳಿಯುವ, ಅನುಭವಿಸುವ, ಪ್ರಯೋಗಿಸುವ ಪ್ರಯತ್ನಕ್ಕೆ ಯಾವತ್ತೂ ಕೂಡ ಮೊದಲ ಉದಾಹರಣೆ... 'ಶಿಶಿರ'. ಮತ್ತೆ ಮತ್ತೆ ನೆನಪಾಗುವ ನೆನಪುಗಳನ್ನು ಬಿಟ್ಟು ಹೋಗಿರುವ ನೀನು ಶಾಶ್ವತ... ಶಿಶಿರ್...!!
ನಮಸ್ಕಾರ..



ಕಳೆದ ಸಂಚಿಕೆಯ ಜಗಲಿಕಟ್ಟೆ - 53 ಅಂಕಣದಲ್ಲಿ ನಿವೃತ್ತ ವಿಜ್ಞಾನ ಶಿಕ್ಷಕರಾದ ಶ್ರೀರಾಮ ಮೂರ್ತಿ, ವಿದ್ಯಾಶ್ರೀ, ಮಂಗಳೂರು.. ಇವರು ತಮ್ಮ ಅನಿಸಿಕೆಯನ್ನು ಹಂಚಿಕೊಂಡಿದ್ದರು. ಕಳೆದ ಎರಡು ವಾರದ ಜಗಲಿ ಕಟ್ಟೆಯ ಓದುಗರ ಮಾತುಕತೆಯನ್ನು ಈಗ ಓದೋಣ....


ನಮಸ್ತೇ,
    ಪತಂಜಲಿ ಮಹರ್ಷಿ ತಿಳಿಸಿದ 5 ಬಗೆಯ ಕ್ಲೇಶಗಳು ಮತ್ತು ಅವುಗಳ ಕುರಿತಾದ ವಿಶ್ಲೇಷಣೆ ಶಿಕ್ಷಣಾಧಿಕಾರಿ ಜ್ಞಾನೇಶ್ ಸರ್ ರವರಿಂದ ಬಹಳ ಸೊಗಸಾಗಿ ಮೂಡಿ ಬಂದಿದೆ.
    ಉತ್ತಮ ಆಡಳಿತ ನಡೆಸುವವರಿಗಿರಬೇಕಾದ ಲಕ್ಷಣಗಳು, ಅರ್ಹತೆಗಳ ಕುರಿತಾದ ಸಮಯೋಚಿತ ಲೇಖನ ರಮೇಶ್ ಬಾಯಾರ್ ಸರ್ ರವರಿಂದ.
     ಆಹಾರ ತಯಾರಿಕೆ ಹಾಗೂ ಉಪಯೋಗಿಸುವ ವಿಧಾನದಿಂದ ಜೀವಿಗಳ ವರ್ಗೀಕರಣವನ್ನು ಮಾಡುವ ವಿಧಾನವನ್ನು ಸರಳವಾಗಿ ಸುಂದರವಾಗಿ ನಿರೂಪಿಸಿದ್ದಾರೆ ದಿವಾಕರ ಸರ್ ತಮ್ಮ ವೆಚ್ಞಾನಿಕ ಲೇಖನದಲ್ಲಿ.
    ಕಾಡಮಲ್ಲಿಗೆ ಗಿಡದ ಕುರಿತಾದ ವಿವರಣಾತ್ಮಕ ಮಾಹಿತಿಯನ್ನು ಒದಗಿಸಿದ್ದಾರೆ ವಿಜಯಾ ಮೇಡಂ ತಮ್ಮ ಈ ಸಲದ ನಿಷ್ಪಾಪಿ ಸಸ್ಯಗಳ ಸಂಚಿಕೆಯಲ್ಲಿ.
     ಆದರ್ಶ ಶಿಕ್ಷಕನಲ್ಲಿರಬೇಕಾದ ಗುಣಗಳ ಕುರಿತಾದ ಸುಂದರ ಲೇಖನ ಯಾಕೂಬ್ ಸರ್ ರವರಿಂದ.
    ವಾಣಿಯಕ್ಕನವರ ಪುಸ್ತಕ ಪರಿಚಯದಲ್ಲಿ ಎದ್ದು ನಿಂತ ಬಾಲ ಎನ್ನುವ ಪುಸ್ತಕದ ಪರಿಚಯ ಸೊಗಸಾಗಿ ಮೂಡಿ ಬಂದಿದೆ.
     ರಮೇಶ್ ಉಪ್ಪುಂದರವರ ಪದಗಳ ಹುಡುಕಾಟಕ್ಕೆ ಕಾರಣವಾದ ಪದದಂಗಳ ಸಂಚಿಕೆ ಚೆನ್ನಾಗಿತ್ತು.
ನಾಗೇಂದ್ರರವರ ಸವಿಜೇನು ಸಂಚಿಕೆಯಲ್ಲಿ "ಮದುಮಲೈ ಟೈಗರ್ ಪಾರೆಸ್ಟ್ ನಲ್ಲಿ ಜೇನು...." ಈ ಅನುಭವ ಬರಹದಲ್ಲಿ ನಾವೂ ಜೊತೆಗಿದ್ದು ಪ್ರವಾಸ ಹೊರಟಂತಿತ್ತು.. ಸೊಗಸಾದ ಲೇಖನ.... ಧನ್ಯವಾದಗಳು... ಸರ್.....
     ಮಕ್ಕಳ ಚಿತ್ರಗಳ ಸಂಚಿಕೆಯಲ್ಲಿ ವೈಷ್ಣವಿಯವರ ಚಿತ್ರಗಳು ಅದ್ಭುತವಾಗಿವೆ. ಅಭಿನಂದನೆಗಳು ವೈಷ್ಣವಿ.
    ಈ ವಾರ ಜಗಲಿಯಲ್ಲಿ ಲೇಖನ ಹಾಗೂ ಚಿತ್ರ ಕಳಿಸಿದ ಎಲ್ಲರಿಗೂ ನನ್ನ ಮನದಾಳದ ಕೃತಜ್ಞತೆಗಳು.
....................................... ಶ್ರೀರಾಮ ಮೂರ್ತಿ
ನಿವೃತ್ತ ವಿಜ್ಞಾನ ಶಿಕ್ಷಕರು
ಬಾಯಾರು, ಕಾಸರಗೋಡು ಜಿಲ್ಲೆ
Mob: +91 94819 74949
*******************************************



ನಮಸ್ತೇ,
     ಸುಂದರವಾದ ಕಥೆಯೊಂದರ ಮೂಲಕ ಪತಂಜಲಿ ಮಹರ್ಷಿಯ ಅಸ್ಮಿತ ಕ್ಲೇಶದ ಕುರಿತಾದ ವಿವಣಾತ್ಮಕವಾದ ಲೇಖನ ಶಿಕ್ಷಣಾಧಿಕಾರಿಯವರಾದ ಶ್ರೀ ಜ್ಞಾನೇಶ್ ಸರ್ ರವರಿಂದ.
     ನಾವು ಮಾಡುವ ಕೆಲಸಗಳ ಮೂಲಕ ನಮಗೆ ಸಿಗುವ ಫಲ ಹೇಗಿರುತ್ತದೆ ಎನ್ನುವ ವಿಚಾರದ ಕುರಿತಾಗಿ ' ಫಲನಿರೀಕ್ಷೆ' ಎನ್ನುವ ಸುಂದರ ಲೇಖನ ರಮೇಶ್ ಸರ್ ರವರಿಂದ.
     ನಿಸರ್ಗವೇ ಎಲ್ಲದಕ್ಕೂ ಮೂಲ ಎನ್ನುವ ಸಾರವನ್ನು ತಮ್ಮ ವೈಜ್ಞಾನಿಕ ಲೇಖನದಲ್ಲಿ ಬಹಳ ಸೊಗಸಾಗಿ ಹಂಚಿಕೊಂಡಿದ್ದಾರೆ ದಿವಾಕರ ಸರ್ ರವರು. ಲೇಖನ ತುಂಬಾ ಇಷ್ಟವಾಯಿತು.    
     ಈ ವಾರ ಔಷಧಿಗಳ ಆಗರವಾಗಿರುವ ಪೊನ್ನೊಲಿಗೆ ಸೊಪ್ಪು ಎನ್ನುವ ಹೊಸಗಿಡದ ಪರಿಚಯ ಸೊಗಸಾಗಿ ಮೂಡಿಬಂದಿದೆ. ಧನ್ಯವಾದಗಳು ಮೇಡಂ.
     ಈ ವಾರದ ವಾಣಿಯಕ್ಕನವರ ಪುಸ್ತಕ ಪರಿಚಯದಲ್ಲಿ 'ಸ್ಟೈಕು ಟ್ರಕ್ಕು ಹುಡಗೂರು' ಎನ್ನುವ ಪುಸ್ತಕದ ಪರಿಚಯ ಚೆನ್ನಾಗಿತ್ತು.
     ನಾಗೇಂದ್ರರವರ ಸವಿಜೇನು ಸಂಚಿಕೆಯಲ್ಲಿ ಕಾಲೇಜಿನ ಎನ್ ಎಸ್ ಎಸ್ ಕ್ಯಾಂಪಿನ ಶಿಬಿರದಲ್ಲಿ ಜೇನು ಸಲೀಸಾಗಿ ತೆಗೆದು ತನ್ನ ಸಹಪಾಠಿಗಳಿಗೆ ಹಂಚಿದ ಅನುಭವ ಕಥನ ಸೊಗಸಾಗಿ ಮೂಡಿಬಂದಿದೆ. ಧನ್ಯವಾದಗಳು ಸರ್.
     ಪರಿಸರ ದಿನಾಚರಣೆಯ ಪ್ರಯುಕ್ತ ಕೌಶೀಲಾರವರ ಕವನ ಚೆನ್ನಗಿ ಮೂಡಿ ಬಂದಿದೆ. ಸಾತ್ವಿಕ್ ಗಣೇಶ್ ರವರ ಚಿತ್ರಗಳು ಅದ್ಭುತವಾಗಿದ್ದುವು. ಅಭಿನಂದನೆಗಳು ಮಕ್ಕಳಿಗೆ.
     ರಮೇಶ್ ಉಪ್ಪುಂದ ರವರ ಪದದಂಗಳ ಸಂಚಿಕೆ ಚೆನ್ನಾಗಿತ್ತು.
     ಜಗಲಿಯ ಎಲ್ಲರಿಗೂ ಮನದಾಳದ ಕೃತಜ್ಞತೆಗಳು.
....................................... ಶ್ರೀರಾಮ ಮೂರ್ತಿ
ನಿವೃತ್ತ ವಿಜ್ಞಾನ ಶಿಕ್ಷಕರು
ಬಾಯಾರು, ಕಾಸರಗೋಡು ಜಿಲ್ಲೆ
Mob: +91 94819 74949
*******************************************


ನಮಸ್ಕಾರಗಳು ಸರ್ 
         ಜಗಲಿಯ 'ನಿಷ್ಪಾಪಿ ಸಸ್ಯಗಳು' ಸಂಚಿಕೆಯಲ್ಲಿ
ಪೊನ್ನಲಿಗೆ ಎಂಬ ಬಹುಪಯೋಗಿ ಸಸ್ಯದ ಬಗ್ಗೆ ಓದಿ ತುಂಬಾ ಖುಷಿಯಾಯ್ತು. ಬಾಲ್ಯದಲ್ಲಿ ನಮ್ಮ ತಂದೆ ಈ ಗಿಡದ ಎಲೆಗಳನ್ನು ತಂದು ಸ್ವಚ್ಛಗೊಳಿಸಿ ಸ್ವಲ್ಪ ಜೀರಿಗೆ, ಬೆಲ್ಲ, ಎಳನೀರು ಅಥವಾ ನೀರಿನೊಂದಿಗೆ ಸೇರಿಸಿ ಕೈಯಿಂದ ಹಿಸುಕಿ ರುಚಿಕರವಾದ ಪಾನೀಯ ತಯಾರಿಸಿ ನಮಗೆ ಕೊಡುತ್ತಿದ್ದರು. ಮದುವೆಯಾದ ನಂತರ ಅತ್ತೆಯವರಿಂದ ಈ ಸಸ್ಯದ ಅನೇಕ ಔಷಧೀಯ ಗುಣಗಳ ಬಗ್ಗೆ ತಿಳಿದಿದ್ದೆ. ಈಗ ವಿಜಯ ಮೇಡಂ ಸಸ್ಯದ ವೈಜ್ಞಾನಿಕ ಹೆಸರು ತಿಳಿಸಿ ಬಹಳಷ್ಟು ಮಾಹಿತಿಗಳನ್ನು ನೀಡಿದ್ದಾರೆ. ಅವರಿಗೆ ನನ್ನ ಅಂತರಾಳದ ನಮನಗಳು. ಇಂತಹ ಉಪಯಕ್ತವಾದ ಮಾಹಿತಿಯುಳ್ಳ ಸಂಚಿಕೆಯನ್ನು ಪ್ರಕಟಿಸಿದ ಜಗಲಿಗೆ ಧನ್ಯವಾದಗಳು..
......................... ಕವಿತಾ ಶ್ರೀನಿವಾಸ ದೈಪಲ 
'ಚೈತನ್ಯ ' ನೆಲ್ಯಡ್ಕ, ಅಂತರ, 
ನರಿಕೊಂಬು ಅಂಚೆ ಮತ್ತು ಗ್ರಾಮ  
ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
****************************************



ಓದುಗರ ಮಾತುಕತೆಯಲ್ಲಿ..... ಅನಿಸಿಕೆ ಅಭಿಪ್ರಾಯಗಳನ್ನು ಹಂಚಿಕೊಂಡು, ಬರೆಯುವ ಪ್ರತಿಯೊಬ್ಬರಿಗೂ ಪ್ರೇರಣೆಯಾಗುತ್ತಿರುವ ಮಕ್ಕಳ ಜಗಲಿ ಕುಟುಂಬದ ನಿವೃತ್ತ ವಿಜ್ಞಾನ ಶಿಕ್ಷಕರಾದ ಶ್ರೀರಾಮ ಮೂರ್ತಿ, ಕವಿತಾ ಶ್ರೀನಿವಾಸ ದೈಪಲ.... ಇವರಿಗೆ ಧನ್ಯವಾದಗಳು. 
       ಮಕ್ಕಳ ಜಗಲಿಗೆ ಸಂಬಂಧಿಸಿದ ಯಾವುದೇ ವಿಷಯದ ಕುರಿತಾಗಿ ನಿಮ್ಮ ಅನಿಸಿಕೆಗಳು ಹಾಗೂ ಸಲಹೆಗಳನ್ನು ಸ್ವೀಕರಿಸುತ್ತೇವೆ. ವಿದ್ಯಾರ್ಥಿಗಳು, ಪೋಷಕರು, ಶಿಕ್ಷಕರು, ಹಿತೈಷಿಗಳು ನಮಗೆ ಬರೆದು ಕಳುಹಿಸಿ.... ಹೆಸರು ವಿಳಾಸ ಹಾಗೂ ಭಾವಚಿತ್ರದೊಂದಿಗೆ ನಿಮ್ಮ ಅನಿಸಿಕೆಗಳು 100 ಪದಗಳ ಮಿತಿಯಲ್ಲಿರಲಿ.....
   ಮುಂದಿನ ವಾರದ ಜಗಲಿ ಕಟ್ಟೆಯಲ್ಲಿ ಮತ್ತೆ ಸಿಗೋಣ.... ನಮಸ್ಕಾರ
................................. ತಾರಾನಾಥ್ ಕೈರಂಗಳ
ಮಕ್ಕಳ ಜಗಲಿ
ಮಕ್ಕಳ ಡಿಜಿಟಲ್ ಆನ್ಲೈನ್ ಪತ್ರಿಕೆ
ದಕ್ಷಿಣ ಕನ್ನಡ ಜಿಲ್ಲೆ. 
Mob : 9844820979
******************************************


Ads on article

Advertise in articles 1

advertising articles 2

Advertise under the article