-->
ಶಿಕ್ಷಕರ ಸ್ಕೂಲ್ ಡೈರಿ : ಸಂಚಿಕೆ - 49

ಶಿಕ್ಷಕರ ಸ್ಕೂಲ್ ಡೈರಿ : ಸಂಚಿಕೆ - 49

ಶಿಕ್ಷಕರ ಸ್ಕೂಲ್ ಡೈರಿ : ಸಂಚಿಕೆ - 49
ಲೇಖಕರು : ತೇಜಸ್ವಿ ಅಂಬೆಕಲ್ಲು
ಶಿಕ್ಷಕಿ
ದ.ಕ.ಜಿ.ಪಂ. ಉನ್ನತೀಕರಿಸಿದ
ಹಿರಿಯ ಪ್ರಾಥಮಿಕ ಶಾಲೆ, ಗೋಳಿತ್ತಟ್ಟು
ಕಡಬ ತಾಲೂಕು ದಕ್ಷಿಣ ಕನ್ನಡ ಜಿಲ್ಲೆ
Mob: +91 94803 45799
           
        
ಈ ಬೇಸಿಗೆಯ ರಜೆ... ಅನಿವಾರ್ಯ ಕಾರಣಗಳಿಗಾಗಿ ಪ್ರತಿ ವರ್ಷದಂತೆ ಪ್ರವಾಸಕ್ಕೆ ಹೋಗಲಿಲ್ಲ. ಎಲ್ಲಿಯಾದರೂ ಹೋಗಲೇ ಬೇಕೆನಿಸಿತು. ನನಗೆ ಅತ್ಯಂತ ಇಷ್ಟವಾಗುವ ಸ್ಥಳ ಅದು. ನನ್ನ ಅಡುಗೆ ಮನೆ!

ತರಗತಿ ಕೋಣೆಯ ನಂತರ ಒಂದೇ ಸ್ಥಳದಲ್ಲಿ ಅತೀ ಹೆಚ್ಚು ಸಮಯ ಕಳೆಯುವ ಆಪ್ತ ಮನೆ. ಹಳತನ್ನು ಹೊಸದಾಗಿಸುವ ನನ್ನ ಕೆಲಸಗಳ ಸಾಲಿಗೆ ಅಡುಗೆ ಮನೆಯನ್ನು ಆಯ್ದುಕೊಂಡೆ. ಪ್ರತಿ ದಿನ ಅಲ್ಲೇ ಅನಿವಾರ್ಯವಾಗಿ ಕಳೆಯಬೇಕಾದಾಗ ನಾನು ಈ ಸ್ಥಳದಲ್ಲಿ ಹೇಗೆ ಖುಷಿಯಾಗಿರಬಹುದು...?ಇದು ಹೊಸತಾಗಬೇಕು ಎಂದೆನಿಸಿತು.

ಅಡುಗೆ ಸಾಮಾನುಗಳನ್ನು ಇಡುವ ಡಬ್ಬಗಳು ಪಾರದರ್ಶಕ ವಾಗಿದ್ದರೂ, ಅವುಗಳಿಗೆ ಹೆಸರು ಬರೆದು ಅಂಟಿಸಿ, ಜೋಡಿಸಿಟ್ಟಾಗ ಕೊಟ್ಟ ಖುಷಿ, ಹಸಿರನ್ನು ವಿಸ್ತರಿಸಿದಾಗ ದೊರೆತ ಸಂತೃಪ್ತಿ , ಹೀಗೆ ಇನ್ನೂ ಕೆಲವೊಂದು ಕೆಲಸಗಳ ಮೂಲಕ ಹೊಸ ರೂಪವನ್ನು ನೀಡಿ ಅನುಭವಿಸಿದ ನೆಮ್ಮದಿ ಇಂದಿಗೂ ಇದೆ.

ಬಹಳಷ್ಟು ಮಂದಿ ತಮ್ಮ ಮನೆ ಚೆನ್ನಾಗಿಲ್ಲ. ಹಳೆಯದು ಎನ್ನುವ ಸಂಕುಚಿತ ಮನೋಭಾವ
ವೇದನೆಯೊಂದಿಗೆ ಬದುಕುತ್ತಿರುವುದನ್ನು ಕಂಡಿದ್ದೇನೆ. ಆಗೆಲ್ಲಾ ನನಗನಿಸುವುದು ಹೀಗೆಯೇ! ಎಷ್ಟು ಹೊಸತಾಗಿಸಬಹುದು ಆ ವಾತಾವರಣವನ್ನು! ಅಡುಗೆ ಮನೆ, ಊಟದ ಕೋಣೆ, ಮಲಗುವ ಕೋಣೆ... ಓದುವ ಕೋಣೆ... ಹೀಗೆ ಅನುಕೂಲಕ್ಕೆ ತಕ್ಕಂತೆ ಸೃಷ್ಟಿಯೂ ಆಗುತ್ತಿದೆ. ಬದಲಾವಣೆ ನಮ್ಮ ಸ್ವಾತಂತ್ರ್ಯ. ಸಾಧ್ಯತೆಗಳನ್ನು ಸೃಷ್ಟಿಸಿಕೊಂಡು ಹೊಸ ಹುಟ್ಟನ್ನು ನೀಡುವ ಆಸಕ್ತಿಯೊಂದಿದ್ದರೆ ಎಲ್ಲವೂ ಸುಂದರವಾಗಿ ಕಾಣಲಾರಂಭಿಸ್ತದೆ.


ಹೊಸದರಲ್ಲಿ ಹೊಸತನವೇ ಸಂಭ್ರಮ. ವರ್ಷಗಳುರುಳಿದಂತೆ ಏಕಾತಾನತೆಯನ್ನು ನೀಡುವ ಇಂತಹ ಸಂದರ್ಭಗಳಿಗಾಗಿ ನಾವು ಬದಲಾಗುವುದಿದೆಯಲ್ಲಾ. ಅದು ಖುಷಿಯ ದಾರಿ. ಶಾಲಾ ಕಛೇರಿಯೊಳಗೆ ಹೀಗೆಯೇ ಏನೋ ಆರಂಭ ಮಾಡಿದೆ. ಯಾರನ್ನೂ ಕರೆಯದೆ..! ಎಲ್ಲರೂ ತಮ್ಮ ತಮ್ಮ ಸ್ಥಳವನ್ನು ಸ್ವಚ್ಛ ಮಾಡಲಾರಂಭಿಸಿದರು. ಮೇಡಂ... ನೀವು ಆರಂಭಿಸಿದ್ರಿ. ನನ್ನದು ಇನ್ನೂ ಮುಗಿಯಲಿಲ್ಲ ಎಂದ ಸಹೋದ್ಯೋಗಿ ಶಿಕ್ಷಕರ ಮಾತು ನಗು ತರಿಸಿತು.

ಗೋಪಾಡ್ಕರ್ ಸರ್ ಹೇಳುವಂತೆ ಕರೆದುಕೊಂಡು ಹೋಗುವ ಬಗೆಯಿದು.. ಬದಲಾವಣೆಯ ಕಡೆಗೆ.. ಜೀವನ ಪ್ರೀತಿಯೆಡೆಗೆ...! ಮಕ್ಕಳೂ ಹೀಗೆಯೇ.. ನಾನು ಶಾಲಾ ಅಂಗಳದಲ್ಲಿ ಕಸ ಹೆಕ್ಕಲು ಆರಂಭಿಸಿದಾಗ ಜೊತೆಯಾಗ್ತಾರೆ. ಜಗಲಿ ಒರೆಸಲು ಆರಂಭಿಸಿದ ಕೂಡಲೇ, ಮೇಡಂ ನಾನು ಒರೆಸ್ತೇನೆ ಎನ್ನುವ ಸೌಜನ್ಯವನ್ನು ತೋರಿಸುವ ಸಂಸ್ಕಾರವಂತ ಮಕ್ಕಳಿದ್ದಾರೆ. ವಿಭಿನ್ನವಾಗಿ ಆಲೋಚಿಸುವ ಮತ್ತು ಬದುಕುವ ಕುತೂಹಲವೇ ಜೀವನ ಸ್ಫೂರ್ತಿ...!

ಪ್ರತಿ ದಿನ ಈ ಸಾರಿ ಉಟ್ಟುಕೊಂಡು ಹೋಗ್ಬೇಕು ಶಾಲೆಗೆ...! ಸಾಕಾಗ್ತದೆ ಅನ್ನುವವರಿದ್ದಾರೆ..! ನಾನು ಮಕ್ಕಳಲ್ಲಿ ಹಿಂದಿನ ದಿನವೇ ಹೇಳಿ ಮರುದಿನ ಎಲ್ಲರೂ ಒಂದೇ ಬಣ್ಣದ ಬಟ್ಟೆ ಹಾಕಿಕೊಂಡು ಬರೋಣ ಎಂದಾಗ ಅವರ ಸಂಭ್ರಮ ಅವರ್ಣನೀಯ. ಅವರಲ್ಲಿ ಇರುವ ಬಣ್ಣದವರನ್ನೆಲ್ಲಾ ಹೊಂದಾಣಿಕೆ ಮಾಡಿ, ಮರುದಿನ ಶಾಲೆಗೆ ಬಂದಾಗ ಅವರ ಲವಲವಿಕೆಯನ್ನು ಕಣ್ತುಂಬಿಕೊಳ್ಳುವ ಖುಷಿ ಜೀವನ ಪ್ರೀತಿ! ಒಂದು ವಾರ ಪೂರ್ತಿ ಹಸಿರು ಬಣ್ಣದ ಉಡುಪನ್ನು ಧರಿಸಿ ಶಾಲೆಗೆ ಹೋಗಿದ್ದೆ.. ನನ್ನದೇ ಖುಷಿಗಾಗಿ...! ತರಗತಿ ಕೋಣೆಯ ಆಸನ ವ್ಯವಸ್ಥೆಯನ್ನು ವಾರಕ್ಕೊಮ್ಮೆಯಾದರೂ ಬದಲಿಸಿ, ಮಕ್ಕಳ ಸ್ಥಳಗಳನ್ನೂ ಬದಲಾಯಿಸಿದಾಗ ಕಲಿಕೆಯ ಮೇಲೆ ಧನಾತ್ಮಕ ಪರಿಣಾಮ ಬೀರಿದ್ದನ್ನು ಗಮನಿಸಿದ್ದೇನೆ. ದೌರ್ಬಲ್ಯಗಳು ವರ್ಗಾವಣೆಯಾಗದಿರಲು ಇದು ಬಹಳ ಅವಶ್ಯಕ ಸೂತ್ರ.

ಹೀಗೆಯೇ ಸಾಂದರ್ಭಿಕವಾಗಿ ನನ್ನ ಖುಷಿಯನ್ನು ಹೇಳಿಕೊಂಡಾಗ... ಒಹ್.. ಹೀಗೂ ಇರಬಹುದಲ್ವಾ! ಎಂದು ಅಳವಡಿಸಿಕೊಂಡು ಉಪಕಾರ ಸ್ಮರಣೆಯನ್ನು ಮಾಡುವ ಆತ್ಮೀಯರು ಹೆಚ್ಚಾಗುವಾಗಲೆಲ್ಲಾ ಪ್ರೀತಿಯನ್ನು ಹಂಚಿದ ಸಮಾಧಾನ. 
◾"ಮೇಡಂ.. ನೀವು ಹೇಳಿದ ಮಾತು ನನಗೆ ಬಹಳ ಸಹಾಯವಾಯಿತು ಹಿಂದೆಂದಿಗಿಂತಲೂ ಸುಖವಾಗಿದ್ದೇನೆ."

◾"ಇವತ್ತು ನಾವು ಬದುಕನ್ನು ಸಂಭ್ರಮಿಸಿಕೊಳ್ಳಲು ನಾವೇ ಬದಲಾಗಬೇಕು, ಬದಲಾವಣೆಗಳನ್ನು ಕಂಡುಕೊಳ್ಳಬೇಕು ಎನ್ನುವ ನಿಮ್ಮ ಮಾತು ನಿಜವಾಗಿಯೂ ಕೇಳಿ ಖುಷಿಯಾಯಿತು"

◾"ಹೌದಲ್ವಾ ! ನಮ್ಮ ಚಿಂತೆಗಳನ್ನು ಸಮಸ್ಯೆಗಳನ್ನು ದೂರ ಮಾಡಲಿಕ್ಕೆ ನಾವೇ ದಾರಿ ಕಂಡು ಕಂಡುಕೊಳ್ಳಬೇಕಲ್ವಾ ಧನ್ಯವಾದಗಳು ಮೇಡಂ "

ಈ ಮೇಲಿನವು ಪ್ರತಿಕ್ರಿಯೆಗಳು.....

▪️ನಿಮಗೆ ಸ್ಕೂಟಿ ಕಲಿಯಬಹುದಲ್ವಾ?
▪️ಕಾರಿನಲ್ಲಿ ಓಡಾಡಬಹುದಲ್ವಾ?
▪️ಎಷ್ಟು ದೂರ!
▪️ಸುಸ್ತಾಗುವುದಿಲ್ವಾ?
▪️ನಮಗೆ ಒಂದು ದಿನಕ್ಕೇ ಸಾಕಾಯಿತು.. ನೀವು ಅಷ್ಟು ವರ್ಷಗಳಿಂದ ಎಷ್ಟು ದೂರ ಓಡಾಡ್ತಿದ್ದೀರಿ?
     ಆತ್ಮೀಯರ ಕಾಳಜಿಯ ಮಾತುಗಳನ್ನೆಲ್ಲಾ ಕೇಳಿದಾಗ ಅರೆ!! ಇವೂ ಸಮಸ್ಯೆಗಳಾ?ಎಂದೆನಿಸುವುದಿದೆ...! ಹೆಂಡತಿ, ಮಗು, ಗಂಡ, ಅಪ್ಪ, ಅಮ್ಮ, ಅತ್ತೆ , ಮಾವ.. ಹೀಗೆ ಎಲ್ಲರಿಂದಲೂ ದೂರವಿದ್ದು ಬದುಕಿಗಾಗಿ ದುಡಿಯುವವರಿದ್ದಾರೆ...! ಅವರ ಮುಂದೆ ನಾವೆಷ್ಟು ಸುಖಿಗಳು!

ನಾನು ನನ್ನ ಮನೆ, ಶಾಲೆ, ಕೆಲಸ, ಜವಾಬ್ದಾರಿ, ಹವ್ಯಾಸಗಳನ್ನು ತುಂಬಾ ಪ್ರೀತಿಸ್ತಿದ್ದೇನೆ. ಈಗ ಹೇಳಿ ಸಮಸ್ಯೆ ಯಾರಿಗೆ...? ಇದು ಬದುಕು ಸ್ವಾಮಿ...! ಎಲ್ಲರಿಗೂ ಮನೆಯ ಸಮೀಪದಲ್ಲಿಯೇ ಉದ್ಯೋಗದ ಕಛೇರಿಗಳ ವ್ಯವಸ್ಥೆ ಕಲ್ಪಿಸಲು ಹೊರಟರೆ ಎಷ್ಟೊಂದು ಶಾಲೆ, ಕಛೇರಿಗಳ ಸೃಷ್ಟಿ ಯಾಗಬಹುದು? 

 ಬದಲಾಗಬೇಕಾದದ್ದು ಮನಸ್ಥಿತಿ...! "ಒಪ್ಪಿಕೊಳ್ಳಲಾಗದ್ದನ್ನು ಬದಲಾಯಿಸಿ.... 
ಬದಲಾಯಿಸಲಾಗದ್ದನ್ನು ಒಪ್ಪಿಕೊಳ್ಳಿ" ಎನ್ನುವ ಮಾತು ನನಗೆ ಬಹಳ ಇಷ್ಟವಾದದ್ದು. ಒಪ್ಪಿಕೊಳ್ಳುವ ನಂತರದ ಬೆಳವಣಿಗೆ ಹೇಗಿರಬೇಕು..! ಇಂತಹ ಸಂದರ್ಭಗಳಲ್ಲಿ ಖುಷಿಯನ್ನು ಹುಡುಕಲು ಆರಂಭಿಸುತ್ತೇನೆ. ಜೀವನ‌ ಪ್ರೀತಿಯೊಳಗೆ... ಹೀಗೆಯೇ ಸಂಭ್ರಮಿಸಲು ಕಾರಣಗಳ ಹುಡುಕಾಟದಲ್ಲಿ.... ನಿತ್ಯ ಖುಷಿಯಾಗಿರೋಣ.
..................................... ತೇಜಸ್ವಿ ಅಂಬೆಕಲ್ಲು
ಶಿಕ್ಷಕಿ
ದ.ಕ.ಜಿ.ಪಂ. ಉನ್ನತೀಕರಿಸಿದ
ಹಿರಿಯ ಪ್ರಾಥಮಿಕ ಶಾಲೆ, ಗೋಳಿತ್ತಟ್ಟು
ಕಡಬ ತಾಲೂಕು ದಕ್ಷಿಣ ಕನ್ನಡ ಜಿಲ್ಲೆ
Mob: +91 94803 45799
*******************************************


Ads on article

Advertise in articles 1

advertising articles 2

Advertise under the article