-->
ಮಕ್ಕಳ ಕಥೆಗಳು - ಸಂಚಿಕೆ : 09 - ಸ್ವರಚಿತ ಕಥೆ : ಭೂಮಿ 10ನೇ ತರಗತಿ

ಮಕ್ಕಳ ಕಥೆಗಳು - ಸಂಚಿಕೆ : 09 - ಸ್ವರಚಿತ ಕಥೆ : ಭೂಮಿ 10ನೇ ತರಗತಿ

ಮಕ್ಕಳ ಕಥೆಗಳು - ಸಂಚಿಕೆ : 09
ಸ್ವರಚಿತ ಕಥೆ : ಭೂಮಿ 
10ನೇ ತರಗತಿ
ವಿವೇಕ ಬಾಲಕಿಯರ ಪ್ರೌಢಶಾಲೆ, ಕೋಟ 
ಬ್ರಹ್ಮಾವರ ತಾಲೂಕು, ಉಡುಪಿ ಜಿಲ್ಲೆ



     ಒಂದು ಊರಲ್ಲಿ ಒಬ್ಬ ರಾಜನಿದ್ದ. ಅವನಿಗೆ ಮೂವರು ಮಕ್ಕಳಿದ್ದರು. ಅವರಲ್ಲಿ ಒಬ್ಬನು ಕುಮಾರ, ಬಿಂಬಸಾರ, ರತ್ನಾಕರ. ರಾಜನ ಹೆಂಡತಿ ತೀರಿಕೊಂಡಿದ್ದಳು. ಒಂದು ದಿನ ರಾಜ ಮೂವರ ಹತ್ತಿರ ನೀವು ದೊಡ್ಡವರಾದ ಮೇಲೆ ನನಗೆ ಏನೇನು ಮಾಡುತ್ತೀರಾ ಎಂದು ಕೇಳಿದ. ಕುಮಾರ, "ಅಪ್ಪ ನಾನು ದೊಡ್ಡವನಾದ ಮೇಲೆ ನಿಮಗೊಂದು ದೊಡ್ಡ ಬಂಗಲೆ ಕಟ್ಟಿಸಿ ನಿಮಗೆ ಸಕಲ ಐಶ್ವರ್ಯಗಳನ್ನು ನೀಡುತ್ತೇನೆ" ಎಂದ. ಆಗ ಬಿಂಬಸಾರ, "ಅಪ್ಪ ನಾನು ನಿಮ್ಮನ್ನು ಇನ್ನೊಂದು ದೇಶದ ರಾಜನನ್ನಾಗಿ ಮಾಡುವೆ" ಎಂದ. ನಂತರ ರತ್ನಾಕರನ ಬಾಯಲ್ಲಿ ದೊಡ್ಡ ಮಾತುಗಳೇ ಬಂದವು. "ನಾನು ದೊಡ್ಡವನಾದ ಮೇಲೆ ನನ್ನ ಕೈಯಲ್ಲಿ ಎಷ್ಟಾಗುತ್ತದೋ ಅಷ್ಟು ನಿಮ್ಮನ್ನು ಆರೋಗ್ಯವಾಗಿ ನೋಡಿಕೊಳ್ಳುತ್ತೇನೆ" ಎಂದ. ಈ ಮಾತಿನಿಂದ ಅಪ್ಪನಿಗೆ ಸಂತೊಷವಾಗಲಿಲ್ಲ. ಬದಲಾಗಿ ನನ್ನ ಮಗನಾಗಿ ಇವನು ಮೂರ್ಖನಂತೆ ಮಾತನಾಡುತ್ತಿದ್ದಾನೆ ಎಂದು ಮನಸ್ಸಿನಲ್ಲೇ ಯೋಚಿಸಿದ. ಅಂದಿನಿಂದ ರಾಜ ರತ್ನಾಕರನನ್ನು ಕಡೆಯಾಗಿ ನೋಡುತ್ತಿದ್ದನು. ಎಲ್ಲ ವಿಚಾರದಲ್ಲೂ ತಿರಸ್ಕಾರ ಮಾಡುತ್ತಿದ್ದ. ಅವರಿಗೆ ಸಕಲ ಶಸ್ತ್ರಾಸ್ತ್ರ ವಿದ್ಯೆಯನ್ನು ಕಲಿಸಿ ಜಾಣರನ್ನಾಗಿ ಮಾಡಿದ. ಹೀಗೆ ಮುಂದುವರೆಯುತ್ತಾ ಹೋಯಿತು. ದಿನ ಕಳೆಯುತ್ತಾ ಹೋದಂತೆ ಮೂವರು ದೊಡ್ಡವರಾದರು. ಒಂದು ದಿನ ಕುಮಾರ ಯುದ್ದಕ್ಕೆಂದು ಹೊರಗಡೆ ಹೋಗಿದ್ದಾಗ ಒಬ್ಬಳು ಸುಂದರಿಯನ್ನು ನೋಡಿ ಮದುವೆಯಾಗಿ ಯಾರಿಗೂ ಹೇಳದೆ ಕೇಳದೆ ಊರನ್ನು ಬಿಟ್ಟು ಹೋಗಿಬಿಟ್ಟ. ಬಿಂಬಿಸಾರ ಕೂಡ ಅಣ್ಣನನ್ನೇ ಅನುಸರಿಸಿದ. ಸ್ವಲ್ಪ ದಿನಗಳಾದ ಮೇಲೆ ಅಪ್ಪನಿಗೆ ಈ ವಿಷಯ ತಿಳಿಯಿತು. ಮತ್ತೆ ಸ್ವಲ್ಪ ದಿನಗಳಾದ ಮೇಲೆ ಅವನು ಮಕ್ಕಳಿಗೆ ಪತ್ರ ಬರೆಯುತ್ತಾನೆ. ಪತ್ರದಲ್ಲಿ "ಮಕ್ಕಳೇ ಚೆನ್ನಾಗಿದ್ದೀರಾ" ಎಂದು. ಅವರು ಮರು ಪತ್ರದಲ್ಲಿ "ನಮಗೆ ನೀವು ಯಾರೆಂದು ತಿಳಿದಿಲ್ಲ ನಾವು ಇಲ್ಲಿ ಚೆನ್ನಾಗಿದ್ದೇವೆ ನಮ್ಮಸಂತೋಷವನ್ನು ನೀವು ಕೆಡಿಸಬೇಡಿ" ಎಂದು ಪತ್ರವನ್ನು ಕಳುಹಿಸಿದರು. ಅದನ್ನು ನೋಡಿ ಅಪ್ಪನಿಗೆ ಆಶ್ಚರ್ಯವಾಗಿ ತುಂಬಾ ದುಖಃವಾಗುತ್ತದೆ. ಆಗ ರಾಜನಿಗೆ ತನ್ನ ತಪ್ಪಿನ ಅರಿವಾಗುತ್ತದೆ. ನಾನು ದುಡ್ಡಿನ ಆಸೆಯಿಂದ ಈ ಮಗನನ್ನು ತಿರಸ್ಕಾರ ಮಾಡಿದೆನಲ್ಲ ಅವನನ್ನು ಕರೆದ ಅಪ್ಪಿಕೊಂಡು ಬಿಕ್ಕಿ ಬಿಕ್ಕಿ ಅತ್ತನು. ರತ್ನಾಕರ ಹೇಳಿದ ಹಾಗೆ ಅಪ್ಪನನ್ನು ಚೆನ್ನಾಗಿ ನೋಡಕೊಂಡ ಅವರಿಬ್ಬರು ಮೋಸ ಮಾಡಿದರು. ನಂತರ ರಾಜ ಮತ್ತು ಅವನ ಮಗ ಸುಖವಾಗಿದ್ದರು.
..................................................... ಭೂಮಿ 
10ನೇ ತರಗತಿ
ವಿವೇಕ ಬಾಲಕಿಯರ ಪ್ರೌಢಶಾಲೆ, ಕೋಟ 
ಬ್ರಹ್ಮಾವರ ತಾಲೂಕು, ಉಡುಪಿ ಜಿಲ್ಲೆ
******************************************


                    

ನಮ್ಮ ಮನೆಯಲ್ಲಿ ಅಂದು ಎಲ್ಲರೂ ಜಾತ್ರೆಗೆಂದು ಹೊಸ ಬಟ್ಟೆ ಧರಿಸಿಕೊಂಡು ಹೊರಟಿದ್ದರು. ಅದರಲ್ಲಿ ನಾನು ಒಬ್ಬಳಾಗಿದ್ದೆ. ನಾನು ಅಂದು ಇಸ್ತ್ರೀ ಮಾಡಿದ ಲಂಗ ರವಿಕೆ ಹಾಕಿಕೊಂಡು ಚೆನ್ನಾಗಿ ತಲೆ ಬಾಚಿಕೊಂಡು ಹಬ್ಬಕ್ಕೆ ಹೋಗುವ ಖುಷಿಯಲ್ಲಿದ್ದೆ. ಎಲ್ಲರೂ ಕೂಡಾ ಆಟೋರಿಕ್ಷಾ ಹತ್ತಿಕೊಂಡು ಹೋದೆವು. ಹಲವಾರು ಅಂಗಡಿಗಳನ್ನು ನೋಡಿ ನನಗೆ ತುಂಬಾ ಸಂತೋಷವಾಯಿತು. ಹಾಗೆ ಒಂದು ಬದಿಯಲ್ಲಿ ನೋಡಿದರೆ ರಂಗಮಂಟಪದಲ್ಲಿ ಹಲವಾರು ಸಾಂಸ್ಕೃತಿಕ ಕಾರ್ಯಕ್ರಮಗಳು ಇದ್ದವು. ನಂತರ ನಾನು ಮನೆಯವರೊಂದಿಗೆ ಸುತ್ತಲು ಶುರುಮಾಡಿದೆ. ನಾನು ಹಾಗೆ ಸುತ್ತುತ್ತಿರುವಾಗ ನನ್ನ ಗೆಳತಿ ನನಗೆ ಸಿಕ್ಕಳು. ಅವಳು ಕೂಡಾ ನಮ್ಮ ಜೊತೆ ಸುತ್ತಲು ಸೇರಿಕೊಂಡಳು. ನಾನು ಅವಳೊಂದಿಗೆ ಸುತ್ತುತ್ತಾ ಇಬ್ಬರೂ ಒಂದೇ ತರಹದ ಕಿವಿಯೋಲೆಗಳನ್ನು ತೆಗೆದುಕೊಂಡೆವು. ತರತರದ ತಿಂಡಿತಿನಿಸುಗಳನ್ನು ತಿಂದೆವು. ನಾನು ನನ್ನ ಮನೆಯವರೊಂದಿಗೆ ತಂಪು ತಂಪಾದ ಐಸ್ ಕ್ರೀಮನ್ನು ತಿನ್ನುತ್ತಾ ನಿಂತಿದ್ದೆ. ಯಾರೋ ನನ್ನನ್ನು ತಳ್ಳಿಕೊಂಡು ಹೋದರು. ನನ್ನ ಕೈಯಲ್ಲಿರುವ ಐಸ್ ಕ್ರೀಮ್ ಕೆಳಗೆ ಬಿದ್ದಿತು. ನನಗೆ ತುಂಬಾ ಸಿಟ್ಟು ಬಂದಿತು. ಅವರಿಗೆ ಬಯ್ಯುವಷ್ಟರಲ್ಲಿ, ಅವರು ಮುಂದೆ ಹೋದರು. ನಾನು ಹಿಂದಿನಿಂದ ಅವರನ್ನು ನೋಡಿದ್ದರಿಂದ ಅವರು ಯಾರೆಂದು ನನಗೆ ತಿಳಿಯಲಿಲ್ಲ. ಆದರೂ ಎಲ್ಲೋ ಒಂದು ಕಡೆ ಅವರು ನನಗೆ ಪರಿಚಯ ಎಂದು ಮನಸ್ಸು ಹೇಳುತ್ತಿತ್ತು. ನಾನು ನಮ್ಮ ಮನೆಯವರೊಂದಿಗೆ ಇದ್ದ ಕಾರಣ ನಾನು ಅವರನ್ನು ಹಿಂಬಾಲಿಸಲು ಹೋಗಲಿಲ್ಲ. 
      ಮಾರನೆಯ ದಿವಸ ಸಂಜೆ ದೇವಸ್ಥಾನದಲ್ಲಿ ಹಣ್ಣು ಕಾಯಿ ಮಾಡಿಸಲು ಹೋದೆವು. ಅಲ್ಲಿ ಅವಳು ನನ್ನ ಕಣ್ಣಿಗೆ ಬಿದ್ದಳು. ನಾನು ಅವಳ ಅರ್ಧ ಮುಖವನ್ನು ನೋಡಿದೆ. ಅವಳ ಪೂರ್ತಿ ಮುಖ ನೋಡಬೇಕೆನ್ನುವಷ್ಟರಲ್ಲಿ ಅವಳು ಅಲ್ಲಿಂದ ಪರಾರಿಯಾಗಿ ಬಿಟ್ಟಳು. ಆದರೂ ಅವಳನ್ನು ಪೂರ್ತಿಯಾಗಿ ನೋಡಲಿಕ್ಕೆ ನನಗೆ ಭಾರಿ ಭಯ. ಅದಕ್ಕೆ ಒಂದು ಕಥೆಯೇ ಇದೆ. ಅದೇನೆಂದರೆ ನನ್ನ ಏಳನೆಯ ತರಗತಿಯ ಒಂದು ಕಾರ್ಯಕ್ರಮದ ದಿನ ಅವಳು ನನಗೆ ಒಂದು ಸರವನ್ನು ಕೊಟ್ಟಿದ್ದಳು. ನಾನು ಆ ದಿನ ಸರ ಹಾಕಿಕೊಂಡೇ ಬರಬೇಕೆಂದು ತೀರ್ಮಾನಿಸಿದ್ದೆ. ಗಡಿಬಿಡಿಯಲ್ಲಿ ಮರೆತುಹೋಗಿತ್ತು. ಸೀರೆ ಉಟ್ಟಿದ್ದರಿಂದ ನನ್ನ ಕುತ್ತಿಗೆ ಬೋಳಾಗಿ ಕಾಣುತ್ತಿತ್ತು. ಹಾಗಾಗಿ ನಾನು ಅವಳ ಹತ್ತಿರ ಸರ ಕೇಳಿದೆ. ಅವಳು ಮೊದಮೊದಲು ನಾನು ಕೊಡುವುದಿಲ್ಲವೆಂದು ಹಠ ಹಿಡಿದಿದ್ದಳು. ನಂತರ ಹೇಗೋ ಕಾಡಿಬೇಡಿ ತೆಗೆದುಕೊಂಡೆ. ನಾನು ಇವತ್ತು ಸಂಜೆನೇ ಸರವನ್ನು ಮರಳಿ ಕೊಡುತ್ತೇನೆ ಎಂದು ಹೇಳಿದ್ದೆ. ನಂತರ ನಾವು ಕಾರ್ಯಕ್ರಮದಲ್ಲಿ ತೊಡಗಿಕೊಂಡೆವು. ಭಾಷಣ ಮಾಡಿದೆವು. ಹೇಗೋ ಹೀಗೋ ಕಾರ್ಯಕ್ರಮ ಮುಗಿದು ಹೋಯಿತು. ನಾವೆಲ್ಲರೂ ಮನೆಗೆ ಹೊರಟೆವು. ಮನೆಗೆ ಹೋದ ಮೇಲೆ ನೋಡುತ್ತೇನೆ.... ಅವಳ ಸರ ನನ್ನ ಹತ್ತಿರವೇ ಇತ್ತು. ನನಗೆ ಭಯವಾಗ ತೊಡಗಿತು. ಆ ದಿನ ಶಾಲೆಯ ಕೊನೆಯ ದಿನವಾದ್ದರಿಂದ ಅವಳು ಇನ್ನು ಶಾಲೆಗೆ ಬರುವುದಿಲ್ಲ. ನಾನು ತುಂಬಾ ಹೊತ್ತು ಯೋಚನೆ ಮಾಡಿದ ನಂತರ ಅವಳು ಯಾವಾಗಲಾದರೂ ಸಿಕ್ಕಾಗ ಕೊಟ್ಟರಾಯಿತು ಎಂದು ಸುಮ್ಮನಾದೆ. ಮತ್ತೆ ನನಗೆ ಅವಳು ಸಿಕ್ಕಿದ್ದು ನಾನು ಒಂಬತ್ತನೆಯ ತರಗತಿಯಲ್ಲಿ ಓದುತ್ತಿರುವಾಗ. ಆವಾಗ ಅವಳ ಸರ ಎಲ್ಲಿ ಹೊಗಿತ್ತೋ ಎಂದು ನನಗೆ ಗೊತ್ತೇ ಇರಲಿಲ್ಲ. ಹೇಗಾದರೂ ಮಾಡಿ ಇವಳ ಕಣ್ಣಿಗೆ ನಾನು ಕಾಣಿಸಿಕೊಂಡರೆ ಇವಳು ಆ ಸರವನ್ನು ಕೇಳಲುಬಹುದು, ಎಂದು ಹೇಗೋ ಮಾಡಿ ತಲೆ ಬಗ್ಗಿಸಿ ದೇವಸ್ಥಾನದಿಂದ ಹೊರಗೆ ಬಂದೆ. 
       ನಮ್ಮ ಮನೆಯವರು ಸಾಂಸ್ಕೃತಿಕ ಕಾರ್ಯಕ್ರಮ ನೋಡಬೇಕೆಂದರು. ನಾನು ಎಲ್ಲಾದರೂ ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಹೋದರೆ ಅವಳು ಎಲ್ಲಾದರೂ ನನ್ನ ನೋಡಿದರೆ ಎಂಬ ಭಯ ಉಂಟಾಗಿತ್ತು. ನಾನು ಹೇಳಿದೆ... ನನಗೆ ತಿರುಗಿ ತಿರುಗಿ ತುಂಬಾ ಸುಸ್ತಾಗಿದೆ. ನಾನು ಬರುವುದಿಲ್ಲ. ಇವತ್ತು ಕಾರ್ಯಕ್ರಮ ನೋಡುವುದು ಬೇಡವೆಂದು ಹೇಳಿದೆ. ಆದರೂ ಅವರು ನೋಡಲೇಬೇಕೆಂದರು. ಮತ್ತು ನನ್ನನ್ನು ಎಳೆದುಕೊಂಡೇ ಹೋದರು. ನಾನು ಮನಸ್ಸಿಲ್ಲದ ಮನಸ್ಸಿನಿಂದ ಹೋದೆ. ಕಾರ್ಯಕ್ರಮ ನೋಡಬೇಕಾದರೆ ನನ್ನ ಪಕ್ಕದಲ್ಲಿ ಕೂತಿದ್ದವರನ್ನು ಗಮನಿಸಿದೆ. ನಾನು ಆವಾಗ ದೇವಸ್ಥಾನದಲ್ಲಿ ನೋಡಿದ ಕೈ, ಅದೇ ಬಳೆ, ಅದೇ ಕಿವಿಯೋಲೆ, ನನಗೆ ತುಂಬಾ ಭಯವಾಯಿತು. ಅವಳು ಇಲ್ಲೇ ಇದ್ದಾಳೆ ಎಂದು ಭಯದಿಂದಲೇ
ಅವಳ ಮುಖವನ್ನು ನೋಡಿದರೆ ನಾನು ಅಂದು ಕೊಂಡ ವ್ಯಕ್ತಿ ಅವರಾಗಿರಲಿಲ್ಲ. ನಾನು ಅರ್ಧಮುಖ ನೋಡಿದ್ದರಿಂದ ಅವಳೆಂದು ಕಲ್ಪನೆ ಮಾಡಿಕೊಂಡೇ ನನ್ನ ಕಲ್ಪನೆ ಸುಳ್ಳಾಗಿತ್ತು. ನನಗೆ ತುಂಬಾ ಖುಷಿಯಾಯಿತು. ಖುಷಿಯಿಂದಲೇ ಕಾರ್ಯಕ್ರಮ ನೋಡಿದೆ.
..................................................... ಭೂಮಿ 
10ನೇ ತರಗತಿ
ವಿವೇಕ ಬಾಲಕಿಯರ ಪ್ರೌಢಶಾಲೆ, ಕೋಟ 
ಬ್ರಹ್ಮಾವರ ತಾಲೂಕು, ಉಡುಪಿ ಜಿಲ್ಲೆ
******************************************



            
ಅತ್ಯಂತ ಹೆಚ್ಚಿನ ಪ್ರಶಂಸೆ ಪಡೆದ ಒಂದು ಕಲೆ ಇದು. ಕಾರಂತರು ಮೆಚ್ಚಿದ ಕಲೆ ಇದು. ಕರಾವಳಿಯ ನೆಚ್ಚಿನ ಕಲೆ ಇದು. ಇದರ ಬಗ್ಗೆ ಹೇಳಲು ಇನ್ನೂ ಹಲವು ಇದೆ. ನಾನು ನನ್ನ ಒಂದು ಕಥೆಯನ್ನು ಹೇಳುತ್ತೇನೆ....

ಆಗ ತಾನೇ ಪರೀಕ್ಷೆ ಶುರುವಾಗಿತ್ತು. ನಾನು ಆಗ ಆರನೇ ತರಗತಿ ಇರಬಹುದು. ಒಂದು ದಿನ ನಾನು ಮತ್ತು ನನ್ನ ಸ್ನೇಹಿತೆ ಬಸ್ಸ್ ಗೆಂದು ಕಾಯುತ್ತಿದ್ದೆವು. ಆಗ ನಮ್ಮ ಊರಿನ ಕಡೆ ಮೇಳದ ಬಸ್ಸ್ ಒಂದು ಹೋಗುತ್ತಿತ್ತು. ನಾನು ಆ ಮೇಳದ ಎರಡು ಪ್ರಸಂಗವನ್ನು ಮೊದಲೇ ನೋಡಿದ್ದೆ. ನನಗೆ ಅವರು ಕುಣಿಯುವ ಶೈಲಿ ಇರಬಹುದು, ಮಾತನಾಡುವ ಆ ಗಾಂಭೀರ್ಯ ಇರಬಹುದು ನನಗೆ ತುಂಬಾ ಇಷ್ಟವಾಗುತ್ತಿತ್ತು. ಮತ್ತೆ ನನಗೆ ಚೌಕಿಗೆ ಹೋಗುವುದೆಂದರೂ ತುಂಬಾ ಇಷ್ಟ. ಒಟ್ಟಿನಲ್ಲಿ ಹೇಳಬೇಕೆಂದರೆ ನನಗೂ ಮತ್ತು ನನ್ನ ಸ್ನೇಹಿತೆಗೆ ಯಕ್ಷಗಾನ ಎಂದರೆ ತುಂಬಾ ಇಷ್ಟ. ಆ ದಿನ ನಮಗೆ ೧ನೇ ಪರೀಕ್ಷೆ ಗಣಿತ ಆಗಿತ್ತು. ಹೀಗೆ ನಾವಿಬ್ಬರೂ ಯೋಚನೆ ಮಾಡುತ್ತಾ ಶಾಲೆಗೆ ನಡೆದವು. ಶಾಲೆಯಲ್ಲಿ ಕೂತರೆ ಯಕ್ಷಗಾನದ್ದೇ ಯೋಚನೆ. ಪಾಠ ಕೇಳಲು ಆಗಲಿಲ್ಲ. ಹೇಗೋ ಗಡಿಯಾರದ ಸಣ್ಣ ಮುಳ್ಳು ೪ರ ಕಡೆ ಬಂದಿತ್ತು. ಶಾಲೆಯೂ ಬಿಟ್ಟಿತು. ನಾನು ಮತ್ತು ನನ್ನ ಸ್ನೇಹಿತೆ ಬಸ್ಸಿನಿಂದ ಇಳಿದು ನಡೆದುಕೊಂಡು ಹೋದೆವು. ನನ್ನ ಮನೆ ಸ್ನೇಹಿತೆ ಮನೆಯಿಂದ ಒಂದು ಸ್ವಲ್ಪ ದೂರ ಇದೆ. ಆದರೆ ಅದು ಅವಳಿಗೆ ಗೊತ್ತಿರಲಿಲ್ಲ. ನಾನು ಹೀಗೆ ಮನೆಗೆ ಹೋಗುವಾಗ ನನ್ನ ಬಲಗಡೆ ತಿರುಗಿ ನೋಡುತ್ತೇನೆ.... ಯಕ್ಷಗಾನದ ರಂಗಸ್ಥಳ ಅದೂ ನನಗೆ ಇಷ್ಟವಾದ ಪ್ರಸಂಗ ಬೇರೆ. ಖುಷಿಯಿಂದಲೇ ಮನೆಗೆ ಹೋಗುವಾಗ ನನಗೆ ಒಂದು ಯೋಚನೆ.... ನನಗೆ ನನ್ನ ದೊಡ್ಡ ಅಕ್ಕ ಬೈತಾಳೆ ಅಂತ. ಏಕೆಂದರೆ ಆ ದಿನ ಒಂದೇ ಪರೀಕ್ಷೆ ಆಗಿತ್ತು ಅಷ್ಟೇ. ಇನ್ನೂ ಎರಡು ದಿನ ಪರೀಕ್ಷೆ ಬಾಕಿ ಇತ್ತು. ಅರ್ಧ ಖುಷಿಯಲ್ಲಿ ಅರ್ಧ ಬೇಸರದಲ್ಲಿ ಮನೆ ಕಡೆ ನಡೆದೆ. ಖುಷಿಯಲ್ಲಿ ಏಕೆಂದರೆ ಎಲ್ಲೋ ಒಂದು ಕಡೆಯಲ್ಲಿ ಅಕ್ಕ ನನ್ನನ್ನು ಹೋಗಲು ಬಿಡುತ್ತಾಳೆ ಎಂಬ ಒಂದು ಆಸೆಯಿಂದ. ಬೇಸರ ಏಕೆಂದರೆ: ಹೋಗಲು ಬಿಡದೆ ಇರಬಹುದು ಎಂಬ ನಿರಾಶೆಯಿಂದ. ಮನೆಗೆ ಹೋಗಿ ಚೀಲ ತೆಗೆದು ಕೈ ಕಾಲು ಮುಖ ತೊಳೆಯುತ್ತಿರುವಾಗ ಅಕ್ಕ ನನ್ನನ್ನು ಹೀಯಾಳಿಸಿ : "ಇವತ್ತು ಇಲ್ಲೇ ಯಕ್ಷಗಾನ ಅಂತೆ ನೀನು ಹೋಗೋದಿಲ್ವ" ಎಂದು ಕೇಳಿದಳು. ಅವಳು ನನ್ನ ಮೇಲೆ ವಿಶ್ವಾಸ ಇಟ್ಟು ಕೇಳುತ್ತಿದ್ದಾಳೆಂದು : "ಹೌದು ಇವತ್ತು ನಾನ್ ಹೋಗ್ಬೇಕು. ನಿನಗೆ ಗೊತ್ತಲ್ವ ನನಗೆ ಯಕ್ಷಗಾನ ಎಂದರೆ ಎಷ್ಟು ಇಷ್ಟ ಎಂದು." ಅಕ್ಕ : "ನಾಳೆ ಕನ್ನಡ ವಿಜ್ಞಾನ ಪರೀಕ್ಷೆ ಇದೆ. ಮತ್ತೆ ಯಕ್ಷಗಾನ ಅಂತೆ. ಸುಮ್ನೆ ಮನೇಲಿ ಓದ್ಕೊ" ಎಂದಳು. ನನಗೆ ಆಮೇಲೆ ಗೊತ್ತಾಯ್ತು ಅವಳು ಹೀಯಾಳಿಸಿದ್ದೆಂದು. ನಾನು ಹೇಳಿದೆ : "ಹೇಗೋ ಒಂಬತ್ತು ಗಂಟೆಗೆ ಯಕ್ಷಗಾನ ಶುರು. ನನ್ನದು ಆವಾಗ ಓದಿಯಾಗಿರುತ್ತೆ. ಮತ್ತೆ ನಾನು ಓದಿಕೊಳ್ಳುವುದಿಲ್ಲವಲ್ಲ. ಅದಕ್ಕೆ....... ಅಕ್ಕ: "ಏನು ಬೇಡ ನಾಳೆ ಪರೀಕ್ಷೆ ಬರೆಯುವಾಗ ನಿದ್ರೆ ಬರುತ್ತೆ. ಪರೀಕ್ಷೆ ಬರೀಯೋಕ್ಕಾಗಲ್ಲ" ಎಂದಳು. ನಾನು ನಿರಾಶೆಯಿಂದ ಸ್ನಾನ ಎಲ್ಲ ಮುಗಿಸಿ ಮನಸ್ಸಿಲ್ಲದ ಮನಸ್ಸಿನಿಂದ ಓದಲು ಕುಳಿತುಕೊಂಡೆ. ಫೋನ್ ರಿಂಗಾದ ಶಬ್ಧ ಕೇಳಿ ಓಡಿಬಂದು ಫೋನನ್ನು ರಿಸೀವ್ ಮಾಡಿದೆ. ಅದು ನನ್ನ ಗೆಳತಿಯ ಕಾಲ್ ಆಗಿತ್ತು ಅವಳು: "ನಾನು ನನ್ನ ಅಪ್ಪನ ಜೊತೆ ಯಕ್ಷಗಾನಕ್ಕೆ ಹೋಗುತ್ತೇನೆ." ಎಂದಳು. ನಾನು ಹುಂ ಎಂದು ಫೋನ್ ಅನ್ನು ಕಟ್ ಮಾಡಿ ಇಟ್ಟೆ. ನನಗೆ ಮತ್ತೂ ಬೇಸರವಾಯಿತು. ಯಕ್ಷಗಾನದ ಯೋಚನೆಯಲ್ಲೇ ಅರ್ಧ ಓದಿದೆ. ಅರ್ಧ ಬೇಸರದಲ್ಲೆ ಇದ್ದೆ. ೮:೩೦ಕ್ಕೆ ನನ್ನ ಅತ್ತಿಗೆ ಮತ್ತು ಅಣ್ಣ ಬಂದರು. ಅವರೂ ಕೂಡಾ ಯಕ್ಷಗಾನಕ್ಕೆ ಎಂದು ಬಂದಿದ್ದರು. ನನ್ನನ್ನು ಅತ್ತಿಗೆ ಹೀಯಾಳಿಸಿ : "ಮಗ ಯಕ್ಷಗಾನಕ್ಕೆ ಹೋಗುವುದಿಲ್ವ ಎಂದು ಕೇಳಿದರು. ನಾನು ಅದಕ್ಕೆ ಏನೂ ಉತ್ತರ ಕೂಡಲೇ ಇಲ್ಲ. ನನ್ನ ಪಾಡಿಗೆ ನಾನು ಓದಿಕೊಳ್ಳುತ್ತ ಇದ್ದೆ. ನನ್ನ ಅಮ್ಮ ಮತ್ತು ನನ್ನ ತಮ್ಮ ಆಟಕ್ಕೆ ಹೋದರು. ನಂತರ ಅಣ್ಣ ಅತ್ತಿಗೆ ಹೋರಡ್ಬೇಕೆನ್ನುವಷ್ಟರಲ್ಲಿ ನನ್ನ ದೊಡ್ಡ ಅಕ್ಕ ನನ್ನ ಇನ್ನೊಂದು ಅತ್ತಿಗೆ ಮಗುವನ್ನು ಕರೆದುಕೊಂಡು ಹೋಗಲು ಹೇಳಿದರು. ನಾನು ಕೂಡಾ ಇದೇ ನೆಪ ಮಾಡಿಕೊಂಡು ಅಕ್ಕನ ಹತ್ತಿರ : "ನಾನು ಮಗುವಿನ ಜೊತೆಗೆ ಹೋಗಿ ಬರುತ್ತೇನೆ. ಯಕ್ಷಗಾನ ನೋಡುವುದಿಲ್ಲ" ಎಂದೆ. ಅದಕ್ಕೆ ಅಕ್ಕ : "ಹಾಂ....... ಹುಂ.... ಅಂತ ಒಪ್ಪಿಕೊಂಡಳು. ನನಗಂತೂ ತುಂಬಾ ಖುಷಿಯಾಯಿತು. ನಂತರ ನಾನು ಅತ್ತಿಗೆ, ಅಣ್ಣ, ಮಗು ನಾವೆಲ್ಲ ಹೊರಟೇಬಿಟ್ಟೆವು. ಆಮೇಲೆ ನಾವು ಮೊದಲು ಚೌಕಿಗೆ ಹೋದೆವು. ಅಲ್ಲಿ ಪೂಜೆ ಮುಗಿಸಿಕೊಂಡು ಬಂದೆವು. ಅಣ್ಣ ನನ್ನ ಹತ್ತಿರ : "ನಾನು ಸ್ವಲ್ಪ ಹೊತ್ತು ಬಿಟ್ಟು ಬರುತ್ತೇನೆ ಅಷ್ಟರವರೆಗೆ ನೀವು ಇಲ್ಲೇ ಇರಿ ಎಂದು ಹೇಳಿದ. ನನಗೆ ಮತ್ತೂ ಖುಷಿಯಾಯಿತು. ಇನ್ನೊಂದು ಚಾನ್ಸ್ ಸಿಕ್ಕಿತಲ್ಲ ಎಂದು. ನಾನು ಯಕ್ಷಗಾನವನ್ನು ನೋಡುತ್ತಿದ್ದೆ. ನಂತರ ನನ್ನ ಸ್ನೇಹಿತೆ ಮತ್ತು ಅವಳ ಅಪ್ಪ ಬಂದರು. ನಾನು ಅವರೊಂದಿಗೆ ಅಣ್ಣ ತೆಗೆಸಿಕೊಟ್ಟ ಮಂಡಕ್ಕಿ ಉಪ್ಕರಿಯನ್ನು ತಿನ್ನುತ್ತಾ ಯಕ್ಷಗಾನವನ್ನು ವೀಕ್ಷಿಸಿದೆ. ಆಮೇಲೆ ಅಣ್ಣ ಬಂದೆ ಬಿಟ್ಟನು. ನಾನು ಅವರೊಂದಿಗೆ ಹೊರಟೆ. ಹೋಗಲು ಮನಸ್ಸಿಲ್ಲದ ಹಾಗೆ ಹಿಂದೆ ನೋಡುತ್ತಾ ಮುಂದೆ ನೋಡುತ್ತಾ ಮನೆಗೆ ಬಂದು ಓದಲು ಕುಳಿತುಕೊಂಡೆ.
.................................................. ಭೂಮಿ 
10ನೇ ತರಗತಿ
ವಿವೇಕ ಬಾಲಕಿಯರ ಪ್ರೌಢಶಾಲೆ, ಕೋಟ 
ಬ್ರಹ್ಮಾವರ ತಾಲೂಕು, ಉಡುಪಿ ಜಿಲ್ಲೆ
******************************************



Ads on article

Advertise in articles 1

advertising articles 2

Advertise under the article