-->
ಜೀವನ ಸಂಭ್ರಮ : ಸಂಚಿಕೆ - 143

ಜೀವನ ಸಂಭ್ರಮ : ಸಂಚಿಕೆ - 143

ಜೀವನ ಸಂಭ್ರಮ : ಸಂಚಿಕೆ - 143
ಲೇಖಕರು : ಎಂ.ಪಿ. ಜ್ಞಾನೇಶ್ 
ಶಿಕ್ಷಣಾಧಿಕಾರಿ 
ಪ್ರಧಾನ ಮಂತ್ರಿ ಪೋಷಣ್ ಶಕ್ತಿ ನಿರ್ಮಾಣ
(ಮಧ್ಯಾಹ್ನ ಉಪಹಾರ ಯೋಜನೆ) 
ಜಿಲ್ಲಾ ಪಂಚಾಯತ್ ಮಂಗಳೂರು
ದಕ್ಷಿಣ ಕನ್ನಡ ಜಿಲ್ಲೆ 
                   
                    
ಮಕ್ಕಳೇ.... ಈಗಾಗಲೇ ಅವಿದ್ಯೆ, ಅಸ್ಮಿತ, ಅಭಿನೀವೇಶ, ರಾಗ ಕ್ಲೇಶದ ಬಗ್ಗೆ ತಿಳಿದುಕೊಂಡಿದ್ದೇವೆ. ಈಗ ದ್ವೇಷ ಕ್ಲೇಶದ ಬಗ್ಗೆ ತಿಳಿದುಕೊಳ್ಳೋಣ. 

ನಾವು ವಸ್ತುಗಳನ್ನು ಅನುಭವಿಸುತ್ತೇವೆ, ಸುಖದ ಅನುಭವ ಮನಸ್ಸಿನಲ್ಲಿ ಸೂಕ್ಷ್ಮ ರೂಪದಲ್ಲಿ ಉಳಿಯುತ್ತದೆ. ಇದಕ್ಕೆ "ಅನುಭವದ ಸೂಕ್ಷ್ಮ ರೂಪ" ಎನ್ನುತ್ತೇವೆ. ಪ್ರಸಂಗ ಬಂದಾಗ, ಅನುಭವದ ಸೂಕ್ಷ್ಮ ರೂಪ ವ್ಯಕ್ತವಾಗುತ್ತದೆ. ಇದಕ್ಕೆ ಸ್ಮರಣ ಎನ್ನುವರು. ಉದಾಹರಣೆಗೆ, ಒಂದು ಹೂವನ್ನು ಅನುಭವಿಸಿದ್ದೇವೆ ಎಂದಿಟ್ಟುಕೊಳ್ಳಿ. ಕೆಲವು ಸಮಯ ಹೋದ ಮೇಲೆ, ಒಮ್ಮೆ ಯಾವಾಗಲಾದರೂ ಯಾರಾದರೂ ಹೂ ಎಂದಾಗ, ಹಿಂದಿನ ಹೂವಿನ ರೂಪ, ಬಣ್ಣ ಮತ್ತು ವಾಸನೆ ನೆನಪಿಗೆ ಬರುತ್ತದೆ. ಆ ಹೂವನ್ನು ಮತ್ತೊಮ್ಮೆ ನೋಡಬೇಕು, ಸುಖ ಪಡಬೇಕು ಅನಿಸುತ್ತದೆ. ಹೀಗೆ ಅನಿಸುತ್ತದೆಯಲ್ಲ ಅದೇ ರಾಗ. ಅದು ಬೇಕು ಅನಿಸುತ್ತದೆ. ಅದನ್ನು ಇನ್ನೊಮ್ಮೆ ನೋಡಬೇಕು, ಇನ್ನೊಮ್ಮೆ ಮುಟ್ಟಬೇಕು, ಇನ್ನೊಮ್ಮೆ ಆಘ್ರಾಣಿಸಬೇಕು, ಇನ್ನೊಮ್ಮೆ ರುಚಿಸಬೇಕು, ಇನ್ನೊಮ್ಮೆ ಕೇಳಬೇಕು ಅನಿಸುತ್ತದೆ. ಹೀಗೆ ಅನಿಸುವುದಕ್ಕೆ ಎಳೆತ ಸೆಳೆತ ಎನ್ನುತ್ತೇವೆ. ಇದೇ ರಾಗ. ಮನಸ್ಸು ಅದರ ಕಡೆ ಹರಿಯುತ್ತದೆ. ಆ ವಸ್ತು ಮನಸ್ಸನ್ನು ಸೆಳೆಯುತ್ತದೆ. ಮತ್ತೆ ಮತ್ತೆ ಅನುಭವಿಸಬೇಕು ಅನಿಸುತ್ತದೆ. ಆಗ ಈ ರಾಗ ಗಟ್ಟಿಗೊಳ್ಳುತ್ತದೆ, ಆಸಕ್ತಿ ಹೆಚ್ಚಾಗುತ್ತದೆ. ಮುಂದೆ ಅದನ್ನು ಬಿಡಲು ಮನಸ್ಸು ಒಪ್ಪುವುದಿಲ್ಲ. ಹಾಗೆ ಇರಬೇಕು ಅನಿಸುತ್ತದೆ. ಇದೇ ರಾಗ. ಮೊದಲು ಸಣ್ಣದಾಗಿ ಪ್ರಾರಂಭವಾಗಿ, ವ್ಯಾಪಿಸುತ್ತಾ ವ್ಯಾಪಿಸುತ್ತಾ ಜೀವನವನ್ನು ಆವರಿಸಿಕೊಳ್ಳುತ್ತದೆ. ಆಮೇಲೆ ಅದರಿಂದ ಪಾರಾಗುವುದು ಕಷ್ಟ. ಸುಖದ ಹಿಂದೆ ಆಳವಾಗಿ ಇಳಿದಾಗ ತೊಂದರೆ. ಜಗತ್ತಿನಲ್ಲಿ ಇರುವುದನ್ನೆಲ್ಲ ಅನುಭವಿಸಬೇಕು. ಅನುಭವಿಸುತ್ತಾ ಇರಬೇಕು. ಆ ಅನುಭವ ಅತೀ ಆಸಕ್ತಿ ಹೊಂದಿರಬಾರದು. ರಾಗ ಇರಬೇಕು. ಅದು ಬಂಧನಕಾರಿಯಾಗಿ ಇರಬಾರದು. ಅತಿಯಾದರೆ ಕ್ಲೇಶ. ಅದು ಬಂಧನ ಮತ್ತು ದುಃಖಕ್ಕೆ ಕಾರಣ. ವಸ್ತು ನೋಡಿದಾಗ ಎರಡು ರೀತಿ ಅನುಭವ ಆಗುತ್ತದೆ. ಅದು ಸುಖ ಅಥವಾ ದುಃಖ. ಮೂರನೆಯ ಸಾಧ್ಯತೆ ಏನು ಆಗುವುದಿಲ್ಲ. ಸುಖದ ಅನುಭವ ಆದಾಗ ರಾಗ. ದುಃಖದ ಅನುಭವ ಆದಾಗ ದ್ವೇಷ ಹುಟ್ಟುತ್ತದೆ. ಸುಖದ ಅನುಭವದಲ್ಲಿ ಆಧಾರವಸ್ತು ಬೇಕು ಅನಿಸುತ್ತದೆ. ದುಃಖದ ಅನುಭವದಲ್ಲಿ ಆಧಾರವಸ್ತು ಬೇಡ ಅನಿಸುತ್ತದೆ. ದುಃಖದಿಂದಾಗಿ ಬೇಡ ಅನ್ನುವ ಭಾವ ತಯಾರಾಗುತ್ತದೆ. ಅದಕ್ಕೆ ದ್ವೇಷ ಎನ್ನುತ್ತೇವೆ. ಬೇಡ ಅಂದರೆ ತಪ್ಪಿಲ್ಲ. ಅದು ಇರಲೇಬಾರದು, ನಾಶ ಮಾಡಬೇಕು ಅನಿಸುತ್ತದೆಯಲ್ಲ ಅದು ಕ್ಲೇಶ. ಅದನ್ನು ಕೇಳಿದರೆ ತಾಪ ಉಂಟಾಗುತ್ತದೆ. ದ್ವೇಷ ದುಃಖಕ್ಕೆ ಕಾರಣವಾದ ಭಾವ. ದ್ವೇಷ, ವಸ್ತು ಬೇಡ ಅನಿಸುವುದು ಸಾಮಾನ್ಯ. ಕೆಲವು ಬೇಡ ಅನಿಸುತ್ತದೆ. ಕೆಲವು ಬೇಕು ಅನಿಸುತ್ತದೆ. ಎಲ್ಲರಿಗೂ ಎಲ್ಲ ಬೇಕು ಅನಿಸುವುದಿಲ್ಲ. ಬೇಕು ಬೇಡ ಜೀವನವನ್ನು ಸುಂದರಗೊಳಿಸುತ್ತದೆ. ಜೀವನ ಕಾಪಾಡುತ್ತದೆ. ಮನುಷ್ಯನ ಬದುಕನ್ನು ಸಮೃದ್ಧಗೊಳಿಸುತ್ತದೆ. ಬೇಕು ಬೇಡ ಇರೋದ್ರಿಂದ ಬದುಕು ಚೆಂದ. ಬೇಡ ಅನ್ನುವುದು ದ್ವೇಷಕ್ಕೆ ಇಳಿದರೆ ಜೀವನ ಹಾಳಾಗುತ್ತದೆ. ಯಾವುದೇ ವಸ್ತು ಮುಟ್ಟಿ, ಕೇಳಿ, ರುಚಿಸಿ, ನೋಡಿದಾಗ ಬೇಕು ಬೇಡ ಅನಿಸುತ್ತದೆ. ಬೇಕಾದ ವಸ್ತು ಬಯಸುವುದು. ಬೇಡವಾದುದನ್ನು ದೂರಸರಿಸುವುದು ತಪ್ಪಲ್ಲ. ಆದರೆ ಬೇಕಾದ ವಸ್ತು ರಾಗದ ರೂಪ ತಾಳಿದರೆ, ಬೇಡದ ವಸ್ತು ದ್ವೇಷದ ರೂಪ ತಾಳಿದರೆ ಕ್ಲೇಶ. ಇದು ಜೀವನ ಹಾಳುಮಾಡುತ್ತದೆ. ನಾವು ಬೇಕು ಬೇಡ ಗಳಿಗೆ ಪರಿಮಿತಿ ಹಾಕಿಕೊಂಡು, ಮಿತಿಯಲ್ಲಿ ನಡೆದರೆ ಜೀವನ ಸುಂದರವಾಗುತ್ತದೆ. ಕೆಲವು ವಸ್ತುಗಳು ಕೆಲವು ಕಾಲದಲ್ಲಿ ಬೇಕು ಅನಿಸುತ್ತದೆ. ಅದೇ ವಸ್ತು ಕೆಲವು ಕಾಲದಲ್ಲಿ ಬೇಡ ಅನಿಸುತ್ತದೆ. ಚಳಿಗಾಲದಲ್ಲಿ ಉಷ್ಣತೆ ಬೇಕು ಅನಿಸುತ್ತದೆ. ಅದೇ ಬೇಸಿಗೆಯಲ್ಲಿ ಉಷ್ಣತೆ ಬೇಡ ಅನಿಸುತ್ತದೆ. ಚಳಿಗಾಲದಲ್ಲಿ ತಂಪು ಬೇಡ ಅನಿಸುತ್ತದೆ. ಬೇಸಿಗೆಯಲ್ಲಿ ತಂಪು ಬೇಕು ಅನಿಸುತ್ತದೆ. ಇದರಿಂದ ನಮಗೆ ಸಮಾಧಾನ ಆಗುತ್ತದೆ. ಕೆಲವು ಕಾಲದಲ್ಲಿ ಕೆಲವರು ಬೇಕು ಅನಿಸುತ್ತದೆ. ಕೆಲವು ಸಮಯದಲ್ಲಿ ಅದೇ ವ್ಯಕ್ತಿಗಳು ಬೇಡ ಅನಿಸುತ್ತದೆ. ಅಷ್ಟಕ್ಕೆ ಇತ್ತು ಎಲ್ಲಾ ಸರಿ. ಅದನ್ನು ಮೀರಿ ಜೀವನ ವ್ಯಾಪಿಸಿತ್ತು ಅಂದರೆ ಜೀವನ ಹಾಳಾಗುತ್ತದೆ. ರಾಗ ದ್ವೇಷ ಪರಸ್ಪರ ಹೊಂದಾಣಿಕೆ ಆಗಿರುತ್ತದೆ. ಅವು ಮೈತ್ರಿಯಿಂದ ಇರುತ್ತವೆ. ರಾಗದ ಜೊತೆಯಲ್ಲಿ ದ್ವೇಷ, ದ್ವೇಷದ ಜೊತೆಯಲ್ಲಿ ರಾಗ ಜೊತೆಯಲ್ಲಿ ಇರುತ್ತವೆ. ರಾಗ ಕಡಿಮೆಯಾದಾಗ, ದ್ವೇಷ ಕಡಿಮೆಯಾಗುತ್ತದೆ. ಅತಿ ಪ್ರೇಮ ಅತಿ ದ್ವೇಷಕ್ಕೆ ಕಾರಣವಾಗುತ್ತದೆ. ಅತಿ ತಿರಸ್ಕಾರ ಪ್ರೇಮಕ್ಕೂ ಕಾರಣವಾಗುತ್ತದೆ. ಅತೀಬೇಕು ಅತೀ ಬೇಡ ದೂರಸರಿಸಿದರೆ, ಕಡಿಮೆ ಮಾಡಿದರೆ, ಮಧ್ಯಮ ಮಾರ್ಗ ಅನುಸರಿಸಿದರೆ, ಅದೇ ಬಂಗಾರದ ಮಾರ್ಗ. ಇತಿಹಾಸ ಪುರಾಣವೆಂದರೆ ರಾಗ ದ್ವೇಷದ ಕಥೆಗಳು. ಬೇಕು ಅಂತ ಒಬ್ಬ. ಅದು ಸಿಗದಂತೆ ಮಾಡಬೇಕೆಂದು ಇನ್ನೊಬ್ಬ. ಅದು ನನಗೆ ಸಿಗಬೇಕು ಎಂದು ಇನ್ನೊಬ್ಬ. ಇಬ್ಬರ ನಡುವೆ ಜಗಳ. ಅದರಲ್ಲಿ ಒಬ್ಬ ಸಾಯುತ್ತಾನೆ. ಮತ್ತೊಬ್ಬ ಗೆಲ್ಲುತ್ತಾನೆ. ಅವನ ವಿರುದ್ಧ ಮತ್ತೊಬ್ಬ ಬರುತ್ತಾನೆ. ಬದಲಾಗುತ್ತಾ ಹೋಗುತ್ತದೆ. ಇದೇ ಇತಿಹಾಸ. ಇವುಗಳನ್ನು ಏಕೆ ಓದಬೇಕೆಂದರೆ ಬದುಕಿನ ಪಾಠ ಕಲಿಯಲು ಓದಬೇಕು. ರಾಗದಿಂದ ದ್ವೇಷದಿಂದ ಏನಾಗುತ್ತದೆ ಅನ್ನುವುದನ್ನು ತಿಳಿಯಲು ಸಾಧ್ಯ.

ಶುಕ್ರಾಚಾರ್ಯರಿಗೆ ದೇವಯಾನಿ ಎಂಬ ಮಗಳಿದ್ದಳು. ಬಹಳ ಬುದ್ಧಿವಂತೆ, ಸೌಂದರ್ಯವಂತೆ. ರಾಜ ಋಷ ಪರ್ವನಿಗೆ ಶರ್ಮಿಷ್ಠೆ ಎಂಬ ಮಗಳಿದ್ದಳು. ಋಷಪರ್ವನ ಗುರು ಶುಕ್ರಾಚಾರ್ಯ. ಶರ್ಮಿಷ್ಠೆ ಮತ್ತು ದೇವಯಾನಿ ಗೆಳತಿಯರು. ಉಣ್ಣುವುದು, ತಿನ್ನುವುದು, ಆಡುವುದು ಎಲ್ಲವೂ ಜೊತೆಯಲ್ಲಿ. ಹೀಗಿರಬೇಕಾದರೆ ಒಂದು ಘಟನೆ ಆಯಿತು.

ಒಂದು ದಿನ ನದಿಯಲ್ಲಿ ಸ್ನಾನ ಮಾಡಲು ದೇವಯಾನಿ ಮತ್ತು ಶರ್ಮಿಷ್ಠೆ ಜೊತೆಯಲ್ಲಿ ಹೋದರು. ಸ್ನಾನ ಮಾಡುವ ಮುನ್ನ, ಬಟ್ಟೆ ಬಿಚ್ಚಿ ಅಕ್ಕಪಕ್ಕ ಇಟ್ಟು ಸ್ನಾನಕ್ಕೆ ಹೋದರು. ಸ್ನಾನ ಮಾಡುತ್ತಿದ್ದಾಗ ಗಾಳಿ ಬೀಸಿ ಇಬ್ಬರ ಬಟ್ಟೆಗಳು ಮಿಶ್ರವಾದುವು. ಮೊದಲು ರಾಜಪುತ್ರಿ ಶರ್ಮಿಷ್ಠೆ ಬಂದು ಬಟ್ಟೆ ತೊಟ್ಟಳು. ಆಕಸ್ಮಿಕ ಆ ಬಟ್ಟೆ ದೇವಯಾನಿಯದಾಗಿತ್ತು. ಇದನ್ನು ನೋಡಿದ ದೇವಯಾನಿ ಗೆ ಕೋಪ ಬಂದಿತು. ದೇವಯಾನಿ ಹೇಳಿದಳು "ಎಷ್ಟು ಗರ್ವ ನಿನಗೆ, ನನ್ನ ಬಟ್ಟೆ ಹಾಕಿಕೊಳ್ಳಲು, ನಾನು ನಿನ್ನ ತಂದೆಯ ಗುರುವಿನ ಮಗಳು" ಎಂದಳು. ಆಗ ಶರ್ಮಿಷ್ಠೆಗೆ ಕೋಪ ಬಂತು, ಕೋಪದಿಂದ ಹೇಳಿದಳು. "ನಿಮ್ಮ ತಂದೆ ನಮ್ಮ ತಂದೆಯ ಸೇವಕ, ನಾವು ಕೊಟ್ಟರೆ ನಿಮ್ಮ ಬದುಕು" ಎಂದಳು. ಮಿತ್ರ ಇದ್ದವರು ಮುಂದೆ ಜಗಳ ಅತಿರೇಕಕ್ಕೆ ಹೋಯಿತು. ದೇವಯಾನಿ ಹೋಗಿ ತಂದೆಯ ಬಳಿ ಹೇಳಿದಳು. ನೀವು ಅವಳ ತಂದೆಯ ಸೇವಕ, ಅವರು ಕೊಡುವುದರಿಂದ ನಮ್ಮ ಬದುಕು, ಎಂದು ಬೈದಿದ್ದಾಳೆ. ಎಂದು ಹೇಳಿದಳು. ಈ ಮಾತು ಕೇಳಿ ಶುಕ್ರಾಚಾರ್ಯ ಶಾಪ ಕೊಡಲು ತಯಾರಾದ. ಮಕ್ಕಳು ಸಣ್ಣವರು ಎಂದು ಭಾವಿಸದೆ, ಮಗಳು ಹೇಳಿದ್ದನ್ನು ತಂದೆ ಕೇಳಿದನು. ಎಲ್ಲಾ ಹಾಳಾಗುತ್ತದೆ ಎಂದು ತಿಳಿದ ಋಷಪರ್ವ ರಾಜ ಶುಕ್ರಾಚಾರ್ಯರಲ್ಲಿ ಪ್ರಾರ್ಥಿಸಿದ. ಆಗ ದೇವಯಾನಿ ಶರತ್ತು ಹಾಕಿದಳು. ಆ ಷರತ್ತು ಏನೆಂದರೆ ತನ್ನ ಶರ್ಮಿಷ್ಠೆ ಸೇವಕಿಯರೊಂದಿಗೆ ನನ್ನ ಸೇವಕಿಯಾಗಬೇಕು. ಮುಂದೆ ಹಾನಿಯಾಗುವುದು ಬೇಡ ಎಂದು ಶರ್ಮಿಷ್ಠೆ ಒಪ್ಪಿ ತನ್ನ ಸೇವಕಿಯರೊಂದಿಗೆ ದೇವಯಾನಿಯ ಸೇವಕಿಯಾದಳು. ಮುಂದೆ 25 ವರ್ಷದ ಸುಂದರ ತರುಣ, ಬಲಿಷ್ಠ ಯುವರಾಜ, ಯಯಾತಿ ದೇವಯಾನಿಯನ್ನು ಮದುವೆಯಾದ. ಮದುವೆಯಾದ ಮೇಲೆ ಶರ್ಮಿಷ್ಠೆ ಸೇವಕಿಯಾಗಿ ಮುಂದುವರಿದಳು. ಯಯಾತಿ ರಾಜ, ಶರ್ಮಿಷ್ಠೆ ರಾಜಪುತ್ರಿ. ಯಯಾತಿಯ ಕಣ್ಣು ಶರ್ಮಿಷ್ಠೆ ಮೇಲೆ ಬಿತ್ತು. ಶರ್ಮಿಷ್ಠೆಯನ್ನು ಮದುವೆಯಾದ. ಇದನ್ನು ಕಂಡು ದೇವಯಾನಿಗೆ ಕೆಡುಕೆನಿಸಿತು. ಕೋಪ ದ್ವೇಷದಿಂದ ಬಂದು ತಂದೆ ಮುಂದೆ ನಡೆದ ಘಟನೆ ಹೇಳಿ, ಗಂಡ ಎನ್ನುವುದನ್ನು ಮರೆತು, ಶಿಕ್ಷಿಸಬೇಕೆಂದು ಹಠ ಹಿಡಿದಳು. ಶುಕ್ರಾಚಾರ್ಯ ಮಗಳ ಮಾತಿಗೆ ಸೋತು ಯಯಾತಿ ಮುದುಕನಾಗು ಎಂದು ಶಾಪ ಹಾಕಿದ. 25 ಯುವಕ ಯಯಾತಿ ಮುದುಕನಾದ. ಇವರ ಮುಂದಿನ ಸಂತತಿಯೇ ಮಹಾಭಾರತ ಯುದ್ಧಕ್ಕೆ ಕಾರಣವಾಯಿತು. ರಾಗ ಹೋಗಿ ದ್ವೇಷಕ್ಕೆ ಕಾರಣವಾಯಿತು ಅಲ್ಲವೇ ಮಕ್ಕಳೇ. ಬೇಕು ಅನ್ನುವುದು ವ್ಯಾಮೋಹಕ್ಕೆ ಇಳಿಯಬಾರದು. ಬೇಡ ಅನ್ನುವುದು ದ್ವೇಷಕ್ಕೆ ಕಾರಣ ಆಗಬಾರದು. ಅಲ್ಲವೆ ಮಕ್ಕಳೇ...
......................................... ಎಂ.ಪಿ. ಜ್ಞಾನೇಶ್ 
ಶಿಕ್ಷಣಾಧಿಕಾರಿ 
ಪ್ರಧಾನ ಮಂತ್ರಿ ಪೋಷಣ್ ಶಕ್ತಿ ನಿರ್ಮಾಣ
(ಮಧ್ಯಾಹ್ನ ಉಪಹಾರ ಯೋಜನೆ) 
ಜಿಲ್ಲಾ ಪಂಚಾಯತ್ ಮಂಗಳೂರು
ದಕ್ಷಿಣ ಕನ್ನಡ ಜಿಲ್ಲೆ 
*******************************************


Ads on article

Advertise in articles 1

advertising articles 2

Advertise under the article