-->
ಸ್ಫೂರ್ತಿಯ ಮಾತುಗಳು : ಸಂಚಿಕೆ - 121

ಸ್ಫೂರ್ತಿಯ ಮಾತುಗಳು : ಸಂಚಿಕೆ - 121

ಸ್ಫೂರ್ತಿಯ ಮಾತುಗಳು : ಸಂಚಿಕೆ - 121
ಲೇಖಕರು : ರಮೇಶ ಎಂ. ಬಾಯಾರು 
ರಾಜ್ಯಪ್ರಶಸ್ತಿ ಪುರಸ್ಕೃತ ನಿವೃತ್ತ ಅಧ್ಯಾಪಕರು
ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
ಮೊಬೈಲ್ ಸಂಖ್ಯೆ : +91 94486 26093
rameshbayar@gmail.com 

                   
       ಶಾಲೆಯ ನಾಲ್ಕು ಗೋಡೆಗಳ ನಡುವೆ ಎಲ್ಲರ ಕಲಿಕೆ ನಡೆಯುತ್ತದೆ. ಆದರೆ ಜೀವನಕ್ಕೆ ಬೇಕಾದ ಕಲಿಕೆಯೆಲ್ಲವನ್ನೂ ಗಳಿಸಲು ಈ ನಾಲ್ಕು ಗೋಡೆಗಳ ನಡುವಣ ಸ್ಥಳವೇ ಅಂತಿಮವಲ್ಲ. ಅತ್ಯಲ್ಪ ಭಾಗವನ್ನು ಮಾತ್ರವೇ ನಾವು ಶಾಲೆಗಳಿಂದ ಗಳಿಸುತ್ತೇವೆ. ಜೀವನದ ಕಲಿಕೆಯ ಬಹು ಭಾಗ ಬಯಲು ಶಾಲೆಯಲ್ಲಿ ನಡೆಯುತ್ತದೆ. ಶಾಲಾ ಶಿಕ್ಷಣದ ಜೊತೆಗೂ ಬಯಲು ಶಾಲೆಗಳಲ್ಲಿ ನಾವು ಕಲಿತಿರುತ್ತೇವೆ. ಮನೆಯೇ ಮೊದಲ ಪಾಠ ಶಾಲೆ, ಅಮ್ಮನೇ ಮೊದಲ ಗುರು ಎನ್ನುತ್ತೇವೆ. ಮನೆಯು ಮೊದಲ ಬಯಲು ಶಾಲೆಯಾಗಿದೆ. ತಂದೆ, ತಾಯಿ, ಅಜ್ಜ, ಅಜ್ಜಿ... ಹೀಗೆ ಮನೆ ಮಂದಿಯಿಂದ ತಿಳಿಯುವ ಅನೇಕ ವಿಚಾರಗಳಿವೆ. ಬಯಲು ಶಾಲೆಗಳ ವ್ಯಾಪ್ತಿಯು ಬಲು ಎತ್ತರ ಬಿತ್ತರಗಳಿಂದ ಕೂಡಿದೆ.

ಓದು ಬರಹ ಮತ್ತು ಲೆಕ್ಕವೇ ಶಿಕ್ಷಣವೂ ಅಲ್ಲ, ಅದೇ ಜೀವನವೂ ಅಲ್ಲ. ಓಬಲೆಗಳೊಂದಿಗೆ ನಾವು ಗಳಿಸಲೇ ಬೇಕಾದ ಜ್ಞಾನ ಅಪಾರ. ಮನೋಲ್ಲಾಸ, ದೇಹೋಲ್ಲಾಸಗಳೇ ಆರೋಗ್ಯ ಸೂತ್ರಗಳು. ಇವುಗಳನ್ನು ಗಳಿಸಲು ಸಹಸ್ರಾರು ಮೂಲಗಳಿವೆ. ನೃತ್ಯ, ಹಾಡು, ಸಂಗೀತ ವಾದನಗಳು, ವ್ಯಾಯಾಮ, ಉತ್ತಮ ಆಹಾರ ಇವೆಲ್ಲವೂ ಬಲವಾದ ಬದುಕನ್ನು ಕಟ್ಟಲು ಓಬಲೆಗಿಂತಲೂ ಹೆಚ್ಚು ಅಗತ್ಯ.

ಮಾನವನಾದವನು ಎಲ್ಲ ನೃತ್ಯ ಪ್ರಕಾರಗಳಲ್ಲಿ ತನ್ನನ್ನು ತೊಡಗಿಸಿಕೊಳ್ಳುವುದು ಅಸಾಧ್ಯ. ಶಾಸ್ತ್ರೀಯ, ಜನಪದ ಎಂಬ ಪ್ರಮುಖ ನೃತ್ಯ ಪ್ರಕಾರಗಳ ಒಳಹೊಕ್ಕಾಗ ವಿವಿಧ ನೃತ್ಯಗಳು ಕಾಣಿಸುತ್ತವೆ. ಭರತನಾಟ್ಯ, ಕೂಚುಪುಡಿ, ಮಣಿಪುರಿ, ಕಥಕ್, ಒಡಿಶಾ, ಸತ್ರಿಯಾ, ಮೋಹಿನಿಯಾಟ್ಟಂ ಎಂಬ ಅಷ್ಟ ಪ್ರಕಾರಗಳು ಶಾಸ್ತ್ರೀಯ ನೃತ್ಯಕ್ಕೆ ಸೇರಿವೆ. ಜನಪದ ನೃತ್ಯಗಳು ಸ್ಥಳಿಯ ಸಾಂಸ್ಖೃತಿಕ ಬದುಕು, ಜೀವನ ಶೈಲಿಗಳು ಮತ್ತು ಭೌಗೋಳಿಕ ತಳಹದಿಯ ಮೇಲೆ ನೆಲೆ ನಿಂತಿವೆ. ತುಳುನಾಡಿನಲ್ಲೇ ಅನೇಕ ಜನಪದ ನೃತ್ಯಗಳಿವೆ. ಕೋಲಾಟ, ಕೊರವಂಜಿ ಮುಂತಾದ ಅನೇಕ ಜನಪದ ನೃತ್ಯಗಳು ಪ್ರದೇಶ, ರಾಜ್ಯ ರಾಷ್ಟ್ರಗಳನ್ನು ಮೀರಿ ವಿಸ್ತರಿಸಿವೆ. ನೃತ್ಯ, ನಾಟಕ, ಹರಿಕತೆಗಳೆಲ್ಲವೂ ಕಲೆಗಳು. ಕಲಾವಿದರ ಸೃಷ್ಟಿಗೆ ಬಯಲು ಶಾಲೆಗಳೇ ಕಾರಣ.

ನೃತ್ಯಗಳು ಶೃಂಗಾರ, ಹಾಸ್ಯ, ಕರುಣ, ರೌದ್ರ, ವೀರ, ಭಯಾನಕ, ಭೀಭತ್ಸ, ಅದ್ಭುತ ಮತ್ತು ಶಾಂತ ನವರಸಗಳ ಮೂಲಕ ನೋಡುಗರ ಮನೋಲ್ಲಾಸವನ್ನು ನೂರ್ಮಡಿಸುತ್ತವೆ. ನೃತ್ಯಗಾರರಿಗೆ ಆನಂದ ಮತ್ತು ವ್ಯಾಯಾಮಗಳೆರಡನ್ನೂ ಒದಗಿಸುತ್ತವೆ. ಜೊತೆಗೆ ಆರ್ಥಿಕವಾಗಿ ಸಹಾಯವಾಗುತ್ತದೆ. ನೃತ್ಯಗಳ ಹಿಮ್ಮೇಳನದಲ್ಲಿ ಸಹಕರಿಸುವ ನಾನಾ ಸಂಗೀತ ವಾದಕರು, ಹಾಡುಗಾರರಿಗೆ ಉದ್ಯೋಗ ದೊರೆಯುತ್ತದೆ. ಹೀಗೆಯೇ ಯಕ್ಷಗಾನ, ನಾಟಕಗಳು ಅಸಂಖ್ಯರಿಗೆ ಬದುಕನ್ನು ನೀಡಿ ಜನರ ಮನೋಲ್ಲಾಸ ವರ್ಧನೆಯಲ್ಲಿ ಪ್ರಮುಖ ಪಾತ್ರವಹಿಸುತ್ತಿವೆ. ಚಿತ್ರಕಲೆ, ಭಾಷಣ ಕಲೆ, ಲೇಖನ ಕಲೆ ಹೀಗೆ ಬೌದ್ಧಿಕ ಪ್ರದರ್ಶನ ಕಲೆಗಳೂ ಇವೆ. ಜ್ಞಾನದ ವಿಸ್ತರಣೆ, ಸ್ವಸ್ಥ ಸಮಾಜದ ನಿರ್ಮಾಣದಲ್ಲಿ ಸಾಹಿತ್ಯಾದಿ ಕಲೆಗಳ ಕೊಡುಗೆ ಅನನ್ಯ. ಯೋಗ, ಕ್ರೀಡೆ, ಕರಾಟೆ ಮುಂತಾದ ಕ್ಷೇತ್ರಗಳು ಜನರ ವ್ಯಾಯಾಮ ಮನೊಲ್ಲಾಸಗಳ ಮೂಲಗಳು. ಬದುಕಿನ ಅನಿವಾರ್ಯ ಭಾಗವಾದ ಕಲೆಗಳಲ್ಲಿ ಒಂದನ್ನಾದರೂ ನಾವು ಬಯಲು ಶಾಲೆಯ ನೆರವಿನಿಂದ ನಮ್ಮದಾಗಿಸಿಕೊಂಡರೆ ನಮ್ಮ ಬದುಕಿನ ಕಳೆಯೇರುತ್ತದೆ.

ಹಸಿವೆಯನ್ನು ತಾಳುವ ಶಕ್ತಿ ಯಾರಿಗೂ ಇಲ್ಲ. ಕೃಷಿಯ ಹೊರತಾಗಿ ಹಸಿವು ನೀಗಲು ಪರ್ಯಾಯ ದಾರಿಗಳೇ ಇಲ್ಲ. ಕೃಷಿ ಸಾಧನೆಗೂ ಬಯಲು ಶಾಲೆ ಅಪಾರ ಕೊಡುಗೆ ನೀಡುತ್ತದೆ. ಅನುಭವಿ ಕೃಷಿಕರ, ಕೃಷಿ ತಜ್ಞರ ಸಲಹೆ ಮತ್ತು ಮಾರ್ಗದರ್ಶನದಿಂದ ಕೃಷಿಯನ್ನು ಲಾಭಕರ ಮತ್ತು ಆರೋಗ್ಯಕರಗೊಳಿಸಲು ಸಾಧ್ಯವಿದೆ. ಯಾವ್ಯಾವ ರೋಗಗಳು ಬೆಳೆಗಳನ್ನು ನಾಶಪಡಿಸುತ್ತವೆ? ರೋಗಗಳು ತಗಲುವ ಕಾಲಮಾನ ಮತ್ತು ಕಾರಣ, ನಿಯಂತ್ರಣ ಹೇಗೆ ಮುಂತಾದ ವಿಚಾರಗಳು ಬಯಲು ಶಾಲೆಯಲ್ಲೇ ದೊರೆಯುತ್ತವೆ. ಬಯಲು ಶಾಲಾ ಶಿಕ್ಷಣ ನಿಶ್ಶುಲ್ಕದಲ್ಲಿ ಲಭ್ಯ. ಬಯಲು ಶಾಲೆಯಲ್ಲಿ ಶಿಕ್ಷಣ ಪಡೆಯುವ ಮನಸ್ಸು ಮಾಡಿದರೆ ಮಾತ್ರ ದೇಶೋದ್ಧಾರ. ಕೇಳಿ ಅರಿಯುವವನ ಬದುಕು ಉಚ್ಛವಾಗುತ್ತದೆ, ಕೇಳಿ ಅರಿಯಲು ಸಂಕೋಚ ಪಡುವವನ ಬದುಕು ಕೊಚ್ಚೆಯಾಗಿಯೇ ತುಚ್ಛವಾಗಿ ಉಳಿಯುತ್ತದೆ.

ಬಯಲು ಶಾಲೆಯಿಂದ ಸಿಗುವ ಎಲ್ಲ ಅನುಭವಗಳನ್ನು ಅಂತರ್ಗತಮಾಡಿಕೊಂಡು ಜೀವನವನ್ನು ಸಾರ್ಥಕಗೊಳಿಸಬೇಕು. ನಮ್ಮ ಬಾಹ್ಯ ಸೌಂದರ್ಯ ಶಾಶ್ವತವಲ್ಲ. ಅದು ಚರ್ಮವಿರುವತನಕ ಮಾತ್ರ ಆಕರ್ಷಕ, ಅಂತರ್ಗತವಾಗಿರುವ ಸೌಂದರ್ಯ ಜೀವನಾಂತ್ಯದ ತನಕ ಉಳಿಯುತ್ತದೆ. ಅಂತರ್ಗತ ಸೌಂದರ್ಯವು ಬಯಲುಶಾಲೆಯಿಂದ ಪಡೆಯುವ ಜ್ಞಾನದ ಆಧಾರದಲ್ಲಿರುತ್ತದೆ.
........ರಮೇಶ ಎಂ. ಬಾಯಾರು ಎಂ.ಎ, ಬಿಎಡ್
ರಾಜ್ಯಪ್ರಶಸ್ತಿ ಪುರಸ್ಕೃತ ನಿವೃತ್ತ ಅಧ್ಯಾಪಕರು
“ಸ್ಕಂದ” ಕುಳ ಗ್ರಾಮ
ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
ಮೊಬೈಲ್ ಸಂಖ್ಯೆ : +91 94486 26093
rameshbayar@gmail.com 
******************************************** 


Ads on article

Advertise in articles 1

advertising articles 2

Advertise under the article