ಸವಿಜೇನು : ಸಂಚಿಕೆ - 12
Sunday, June 23, 2024
Edit
ಸವಿಜೇನು : ಸಂಚಿಕೆ - 12
ಲೇಖಕರು: ನಾಗೇಂದ್ರ ಬಂಜಗೆರೆ, ಶಿಕ್ಷಕರು
ಸರಕಾರಿ ಹಿರಿಯ ಪ್ರಾಥಮಿಕ ಶಾಲೆ, ಮಿಂಚೇರಿ
ಬಳ್ಳಾರಿ ತಾಲೂಕು ಮತ್ತು ಜಿಲ್ಲೆ
Mob : +91 99029 12684
ಈ ಪ್ರಕೃತಿಯಲ್ಲಿ ಅತ್ಯಂತ ಸಣ್ಣ ಜೀವಿ ತನ್ನದೇ ಆದ ಪ್ರಮುಖ ಪಾತ್ರ ವಹಿಸುತ್ತದೆ. ಎಷ್ಟೋ ಬಾರಿ ಪ್ರಕೃತಿಯನ್ನು ಸಮತೋಲನ ಮಾಡುವಲ್ಲಿ ಬಹಳ ಪ್ರಧಾನ ಪಾತ್ರವನ್ನೇ ವಹಿಸುವ ಜೇನುಹುಳುಗಳ ಪಾತ್ರ ನಿಸರ್ಗದಲ್ಲಿ ಬಹಳ ದೊಡ್ಡದು. ಆ ಜೇನಿನ ಸುತ್ತ ಕಲಿತ ಪಾಠಗಳ, ಥ್ರಿಲ್ಲಿಂಗ್ ಅನುಭವಗಳ, ನೀವು ಕಂಡಿರದ ಕೇಳಿರದ ಅಗತ್ಯವಾಗಿ ತಿಳಿಯಲೇ ಬೇಕಾದ ಮಾಹಿತಿಯುತ 'ಸವಿಜೇನು' ಎಂಬ ವಿಶೇಷ ಶೀರ್ಷಿಕೆಯಡಿಯಲ್ಲಿ ವಿಸ್ತಾರವಾದ ಬರಹ ಸರಣಿಗಳನ್ನು ನೀವೂ ಓದಿ ಆನಂದಿಸಿ... ನಾಗೇಂದ್ರ ಬಂಜಗೆರೆ, ಶಿಕ್ಷಕರು ಮತ್ತು ಬರಹಗಾರರು.
ಜೇನು ಹುಳುಗಳ ಪಾಲಿಗೆ ಚೈತ್ರ ಮಾಸ ಸುವರ್ಣಕಾಲ ಎಂದು ಹೇಳಬಹುದು. ಪ್ರಕೃತಿಯಲ್ಲಿರುವ ಬಹುತೇಕ ಸಸ್ಯ ಸಂಕುಲವು ಹೂ ಬಿಡುವ ಕಾಲ. ವನಸುಮಗಳರಳಿ ನಿಸರ್ಗದ ಸಂತಾನ ಚಕ್ರ ಆರಂಭವೇ ಈ ಹೊಸ ಚಿಗುರು ಮೊಗ್ಗು ಹೂವುಗಳಿಂದ. ಹೀಗೆ ಕೋಟ್ಯಾಂತರ ಗಿಡ ಮರಗಳು ಹೂ ಬಿಟ್ಟಾಗ ಸಸ್ಯಗಳಲ್ಲಿ ಸಂತಾನೋತ್ಪತ್ತಿಯ ಬಹುಮುಖ್ಯವಾದ ಭಾಗವಾದ 'ಪರಾಗಸ್ಪರ್ಶ' ಎಂಬ ಕೆಲಸವನ್ನು ಮಾಡುವುದು ಮಾತ್ರ ಈ ಜೇನುಹುಳುಗಳು. ಗಾಳಿ ಮತ್ತು ಇತರ ಕೀಟಗಳು ಪರಾಗಸ್ಪರ್ಶ ಕಾರ್ಯವನ್ನು ಮಾಡುವವಾದರೂ ಅದರ ಶೇಕಡಾವಾರು ಪ್ರಮಾಣ ಕಡಿಮೆ. ಪರಾಗಸ್ಪರ್ಶ ಕೆಲಸವನ್ನು ಗರಿಷ್ಠ ಪ್ರಮಾಣದಲ್ಲಿ ಮಾಡುವುವೆಂದರೇ ಅದು ಪ್ರಕೃತಿಯಲ್ಲಿರುವ ಈ ವಿಸ್ಮಯ ಕೀಟ ನಾನಾ ನಮೂನೆಯ ಜೇನುಹುಳುಗಳು ಮಾತ್ರ.
ಕೋಲು ಜೇನು, ಕಿರುಜೇನುಗಳಲ್ಲಿ ಸಾಮಾನ್ಯವಾಗಿ ಡಿಸೆಂಬರ್ ಜನವರಿ ತಿಂಗಳಿನಿಂದ ಜೇನುಹುಳುಗಳ ಸಂತಾನೋತ್ಪತ್ತಿ ಕಾರ್ಯ ಆರಂಭವಾಗುತ್ತದೆ. ಆದರೆ ಚೈತ್ರ ಮಾಸದಲ್ಲಿ ಯಥೇಚ್ಛವಾದ ಹೂಗಳಿಂದ ಜೇನು ಮತ್ತು ಮಕರಂದವನ್ನು ಸಂಗ್ರಹಿಸುತ್ತವೆ. ಇವುಗಳ ಸಂತಾನಕ್ಕೂ ಇದೇ ಕಾಲವೇ ಈ ಜೇನುಗಳಿಗೆ ಬೆಸ್ಟ್ ಸೀಜನ್ ಕೂಡ. ಆಷಾಢ ಶ್ರಾವಣ ಮಾಸಗಳಲ್ಲಿ ನಿಸರ್ಗದಲ್ಲಿ ಹೂವು ಕಡಿಮೆಯಾಗಿ ಜೇನುಗಳಲ್ಲಿ ಸಂತಾನೋತ್ಪತ್ತಿ ಕಡಿಮೆ ಇರುತ್ತದೆ.
◾ಜೇನುಹುಳುಗಳಿಗೆ ಯಾವ ಹೂವುಗಳು ಇಷ್ಟ...??
ಈ ಪ್ರಶ್ನೆಗೆ ಉತ್ತರಿಸುವುದು ಕಷ್ಟವಾದರೂ ನನ್ನ ಅನುಭವದ ಹಿನ್ನೆಲೆಯಲ್ಲಿ ಕೆಲವು ಹೂಗಳನ್ನು ಜೇನುಹುಳುಗಳು ಬಹಳ ಇಷ್ಟ ಪಡುತ್ತಾವೆ. ಇವು ಸಾಮಾನ್ಯವಾಗಿ ಗೋಧಿಯ ಬುಡ್ಡೆಯಂತಹ ಮೊಗ್ಗಿನಿಂದ ಅರಳಿದ ಹೂಗಳಿಂದ ಹೆಚ್ಚು ಜೇನು ಸಿಗುವುದರಿಂದ ಇವು ಅಂತಹ ತೆರನಾದ ಹೂಗಳನ್ನು ಹೆಚ್ಚು ಇಷ್ಟಪಡುತ್ತಾವೆ. ಜೇನು ಹುಳುಗಳು ಹೂಗಳಿಂದ ಸಾಮಾನ್ಯವಾಗಿ ಸಂಗ್ರಹ ಮಾಡುವುದು ಮಕರಂಧ ಮತ್ತು ಹೂವಿನ ಗರ್ಭದಲ್ಲಿರುವ ಸಿಹಿಯಾದ ದ್ರವ ಅಥವಾ ಜೇನನ್ನು.. ಇವೆರಡು ಯಾವ ಹೂಗಳಲ್ಲಿ ಹೆಚ್ಚು ದೊರೆಯುತ್ತದೆಯೋ ಅಂತಹ ಹೂವುಗಳನ್ನು ಇವು ಹೆಚ್ಚು ಇಷ್ಟ ಪಡುತ್ತಾವೆ. ಅಂತಹವುಗಳಲ್ಲಿ ಕೆಲವುಗಳನ್ನು ಹೆಸರಿಸುವುದಾದರೇ..
▪️ಹೊಂಗೆ ಹೂ : ಚೈತ್ರ ಮಾಸದ ಆರಂಭ ಹೊಂಗೆ ಹೂವುಗಳ ಅರಳುವಿಕೆಯೊಂದಿಗೆ ಮೊದಲುಗೊಳ್ಳುತ್ತದೆ. ಬಯಲುಸೀಮೆಯ ಪ್ರದೇಶಗಳಲ್ಲಿ ಹೊಂಗೆ ಹೂ ಅರಳಿದ ಮರದ ತುಂಬೆಲ್ಲಾ ಈಗತಾನೇ ಜೇನಿನ ಗೂಡಿನಿಂದಲೇ ಎದ್ದು ಹಾರಾಡುತ್ತಿದ್ದಾವೇನೋ ಎಂಬಂತೆ ಲಕ್ಷಾಂತರ ಸಂಖ್ಯೆಯಲ್ಲಿ ಜೇನು ಹುಳುಗಳು ಜೇನು ಹೀರಲು ಪ್ರತಿ ಹೂವಿಂದ ಹೂವಿಗೆ ಕುಳಿತು ಏಳುತ್ತಿರುತ್ತಾವೆ. ಹೊಂಗೆ ಮರದ ಕೋಟ್ಯಾಂತರ ಹೂ ರಾಶಿಯಲ್ಲಿ ಲಕ್ಷಾಂತರ ಜೇನು ಹುಳಗಳ ಝೇಂಕಾರವೇ ಅಲ್ಲಿ ಮೇಳೈಸಿರುತ್ತದೆ. ಹೂ ಅರಳಿದ ಏಳೆಂಟು ದಿನ ಕಾಯಿಯ ಭ್ರೂಣ ಬೆಳೆಯುವವರೆಗೆ ಅಥವಾ ಪರಾಗಸ್ಪರ್ಶ ಆಗದೇ ನಿಶ್ಪಲವಾಗಿ ಹೂ ಬಿದ್ದು ಹೋಗುವವರೆಗೆ ಮಧುರ ದ್ರವವನ್ನು (ಜೇನು) ಈ ಹೂವುಗಳು ಶ್ರವಿಸುತ್ತವೆ. ಅದು ಇತರೆ ಹೂಗಳಿಗಿಂತ ಹೆಚ್ಚಾಗಿ ಕಂಡುಬರುತ್ತದೆ. ಆದ್ದರಿಂದ ಜೇನು ಹುಳಗಳು ಪಿಥಿ ಪಿಥಿ ಎನ್ನುವ ಹಾಗೆ ಹೊಂಗೆ ಮರ ಹೂ ಬಿಟ್ಟಾಗ ಮುಸುರಿಕೊಂಡಿರುತ್ತಾವೆ.
▪️ಕಾರೇಗಿಡದ ಹೂ : ಹೊಂಗೆ ಮರಗಳ ನಂತರ ಹೆಚ್ಚು ಇಷ್ಟಪಟ್ಟು ಜೇನು ಹೀರುವುದು ಈ ಕಾರೆ ಪೊಟರುಗಳಲ್ಲಿ ಹೂ ಅರಳಿದಾಗ... ಇದರ ಪ್ರತಿ ಹೂವಿನಲ್ಲೂ ನಿರಂತರವಾಗಿ ಜಿನುಗುವಂತೆ ಉತ್ಪತ್ತಿ ಆಗುವ ಜೇನಿನ ದ್ರವ ಜೇನುಹುಳುಗಳನ್ನು ಆಕರ್ಷಿಸುತ್ತಾವೆ. ಯಾವ ಗಿಡ ಹೆಚ್ಚು ಜೇನುಹುಳುಗಳು ಜೇನು ಹೀರಿ ಪರಾಗಸ್ಪರ್ಶ ಮಾಡುತ್ತಾವೋ ಆ ಗಿಡದ ಯಾವ ಹೂವು ವಿಫಲವಾಗದೇ ಆ ಗಿಡ ಎಲೆಗಳಿಗಿಂತಲೂ ಕಾಯಿಯೇ ಲಕ್ಷಾಂತರ ಮಣಿಗಳು ಪೋಣಿಸಿದಂತೆ ಫಲಭರಿತ ಕಾರೆ ಪೊಟರೆಗಳನ್ನು ಕಾಣಬಹುದು.
▪️ತೆಂಗು ಮತ್ತು ಅಡಕೆಯ ಹೊಂಬಾಳೆ (ಹಿಂಗಾರು) : ಹೊಂಗೆ ಕಾರೆ ಗಿಡಗಳಂತೆ ಅತ್ಯಂತ ಹೆಚ್ಚು ಜೇನು ಹೀರಲು ಬಯಸುವ ಹೂಗಳೆಂದರೇ ಅದು ತೆಂಗಿನ ಮರ. ಮರಗಳಲ್ಲಿ ಹೊಂಬಾಳೆ ಹೊಡೆದು ಹೂ ಬಿಟ್ಟಾಗ... ಇಲ್ಲಿಯೂ ಕೂಡ ಕಾಯಿ ಕಟ್ಟುವವರೆಗೂ ಹೂವಿನ ಗರ್ಭದಲ್ಲಿ ನಿರಂತರವಾಗಿ ಜಿನುಗುವ ಜೇನು ಇದಕ್ಕೆ ಕಾರಣ.
▪️ಮಾವಿನ ಹೂ : ಹಣ್ಣುಗಳ ರಾಜ ಮಾವು... ಮಾವಿನ ಹಣ್ಣಿನ ಸ್ವಾದ ಗೊತ್ತಿಲ್ಲದವರು ಯಾರು...??? ಹಣ್ಣಿನ ಮೂಲ ಹೂವಿನಲ್ಲೂ ಅದೆಷ್ಟೋ ಮಧುರ ಹನಿಗಳ ಸಾರ ಮಾವಿನ ಹೂವಿನಲ್ಲಿ ಸಿಗುವುದು.
▪️ಅಂಟುವಾಳ : ಮಲೆನಾಡು ಮತ್ತು ಅರೆ ಮಲೆನಾಡಿನ ವ್ಯಾಪ್ತಿಯಲ್ಲಿ ಹೊಂಗೆಯ ಮರಗಳು ಇಲ್ಲ. ಮಲೆನಾಡಿನಲ್ಲಿ ಹೊಂಗೆಯ ಬದಲಾಗಿ ಅಂಟುವಾಳ ಮರಗಳು ಕಂಡು ಬರುತ್ತಾವೆ. ಇದರ ಹೂಗಳು ಕೂಡ ಜೇನುಗಳಿಗೆ ಅಚ್ಚುಮೆಚ್ಚು. ಒಂದರ್ಥದಲ್ಲಿ ಅಂಟುವಾಳದ ಹೂವಿನಿಂದ ಆ ವರ್ಷದ ಮಳೆ ಬೆಳೆ ಸಮೃದ್ಧಿಯನ್ನು ಅಂದಾಜಿಸುವುದು ವಾಡಿಕೆಯಲ್ಲಿದೆ.
ಕೆಲವು ಸಸ್ಯ ಗಿಡ ಮರಗಳಲ್ಲಿ ಕಡಿಮೆ ಫಲ ಅಥವಾ ಕಾಯಿರ ಹಿತ ಗೊಡ್ಡುಗಿಡಗಳನ್ನು ಕಾಣಬಹುದು. ಇದಕ್ಕೆ ಕಾರಣ ಮಳೆ ನೀರಿನ ಕೊರತೆಯಿಂದ ಹೂ ಬಿಟ್ಟಾಗ ಜೇನಿನ ದ್ರವವನ್ನೂ ಸ್ರವಿಸುವಷ್ಟು ನೀರಿನ ಒರತೆ ಸಸ್ಯದಲ್ಲಿ ಇಲ್ಲದೇ ಇದ್ದಾಗ ಜೇನು ಹುಳಗಳನ್ನು ಆಕರ್ಷಿಸದೇ ಹೂಗಳು ನಿಶ್ಪಲವಾಗಿ ಉದುರಿಹೋದದ್ದು ಇದಕ್ಕೆ ಕಾರಣ. ಬಹುತೇಕ ಸಸ್ಯಗಳಲ್ಲಿ ಫಲ ಬರದೇ ಇರುವುದು ಉತ್ತಮ ಫಲ ಬರವುದೂ ಕೂಡ ಜೇನುಗಳ ಚಟುವಟಿಕೆ ಇರುವುದು ಮತ್ತು ಇಲ್ಲದೇ ಇರುವುದು ಪ್ರಧಾನ ಕಾರಣ.
ಅನಂತ ಹೂಗಳ ಪ್ರಿಯ ಜೇನು : ಜೇನುಗಳು ಎರಡನೇ ಪ್ರಾಶಸ್ತ್ಯ ವಾಗಿ ನೇರಳೆ ಹೂಗಳು, ಬನ್ನಿಮರ ಹೂಗಳು ಇನ್ನು ನೆಲ ಮಟ್ಟದ ಪೊದರುಗಳಾದ ತುಂಬೆ, ಲಂಟಾನ, ಬಳ್ಳಾರಿ ಜಾಲಿ, ಹುಣಸೇ ಹೀಗೆ ಅನಾಮಿಕ ಸಾವಿರಾರು ಸಸ್ಯಗಳ ಹೂವಿನಿಂದ ಇವು ಜೇನು ಸಂಗ್ರಹಿಸುತ್ತಾವೆ.
ಜೇನುಗಳು ಸಾಮಾನ್ಯವಾಗಿ ಮಕರಂದವನ್ನು ತನ್ನ ಸೂಕ್ಷ್ಮವಾದ ವಿಶೇಷ ಕೊಳವೆಯಂತ (ನೆಕ್ಟರ್) ಭಾಗದಿಂದ ಜೇನನ್ನು ಹೀರಿಕೊಂಡು ದೇಹದೊಳಗೆ ಸೇರಿಸುತ್ತಾವೆ. ಮಕರಂದವನ್ನು ತಮ್ಮ ಹಿಂದಿನಕಾಲುಗಳಿಗೆ ಅಂಟಿಸಿಕೊಂಡು ಬರುತ್ತವೆ. ಪ್ರತಿಹೂವಿನಲ್ಲೂ ದೊರಕುವ ಕಣಮಾತ್ರ ಜೇನು ಮತ್ತು ಮಕರಂದವನ್ನು ಸಂಗ್ರಹಿಸುವ ಚಾಕಚಕ್ಯತೆ ಮತ್ತು ಕೌಶಲ ಹೊಂದಿವೆ. ಸಂಗ್ರಹಿಸಿಕೊಂಡು ಬಂದು ಗೂಡಿಗೆ ಆಗಮಿಸಿದ ತಕ್ಷಣವೇ ಸಂಗ್ರಹಿಸಿ ತಂದ ಜೇನು ಮತ್ತು ಮಕರಂದವನ್ನು ಜೇನುಗೂಡಿನ ಆಯಾ ಭಾಗದಲ್ಲಿ ಸೇರಿಸುವ ಕರ್ತವ್ಯದ ಜವಾಬ್ದಾರಿ ಜೇನುಹುಳುಗಳಿಗೆ ಇದೆ.
ಜೇನಿನ ಬದುಕಿನಲ್ಲಾದ ಬದಲಾವಣೆಗಳು : ಜೇನುನೊಣಗಳಿಗೂ ಹೂವಿಗೂ ಅವಿನಾಭಾವ ಸಂಬಂಧ. ಬಹುಶಃ ಎಲ್ಲಾ ಹೂವುಗಳು ಇರುವುದು ಜೇನು ದುಂಬಿಗಳಿಗಾಗಿ, ಜೇನು ದುಂಬಿಗಳು ಇರುವುದು ಹೂವಿಗಾಗಿ... ಈ ನಿಸರ್ಗ ತತ್ವದ ಆಧಾರದಲ್ಲಿ ಈ ಸೃಷ್ಠಿಯ ಅಲಿಖಿತ ನಿಯಮವಾದ ಸಂತಾನೋತ್ಪತ್ತಿ ಕಾರ್ಯವು ಅದೆಷ್ಟೋ ಕೋಟ್ಯಾಂತರ ವರ್ಷಗಳಿಂದ ನಡೆದುಕೊಂಡು ಬಂದ ನಿಸರ್ಗ ನಿಯಮ. ಅದರಂತೆ ಸಾವಿರಾರು ವರ್ಷಗಳಿಂದ ಪ್ರಕೃತಿಯ ವಿಶಾಲ ಮಡಿಲಲ್ಲಿ ನಿರಂತರವಾಗಿ ಸೃಷ್ಠಿಯ ನಿಯಮ ಪಾಲಿಸುತ್ತಾ ಬಂದ ಪರಿಸರ ವ್ಯವಸ್ಥೆ ಈ ಶತಮಾನದಲ್ಲಿ ಇಡೀ ಭೂ ಜೀವ ಸಂಕುಲವೇ ಹೋರಾಟದ ಬದುಕು ದಿನದಿಂದ ದಿನಕ್ಕೆ ದುಸ್ತರ ವಾಗುತ್ತಿರುವುದು ನಮಗೆಲ್ಲಾ ತಿಳಿದಿದೆ. ನಿನ್ನೆಯಂತೆ ಇಂದು ಇಲ್ಲ, ಇಂದಿನಂತೆ ನಾಳೆ ಇಲ್ಲವೇ ಇಲ್ಲ. ಅದು ಎಂದಿಗೂ ಅಸಾಧ್ಯ ಸಂಗತಿಯೆಂದೇ ಭಾವಿಸಬಹುದು. ಅದು ಬದುಕು ಆಹಾರ ಎಲ್ಲಾ ರೀತಿಯಲ್ಲೂ ನಿನ್ನೆಯಂತೆ ಇಂದು ಇಂದಿನಂತೆ ನಾಳೆ ಅದು ಬದಲಾವಣೆಯೇ... ಅದಕ್ಕೆ ಬದಲಾವಣೆಯು ಜಗದ ನಿಯಮ ಎನ್ನುವುದು. ಈ ಬದಲಾದ ಜಗದ ನಿಯಮಗಳು ಜೀವಸಂಕುಲದ ಕೋಟ್ಯಾಂತರ ವರ್ಷಗಳ ದಿನಚರಿಯನ್ನೇ ಬದಲಿಸಿವೆ. ಅದರಂತೆ ಈ ಜೇನಿನ ಬದಲಾದ ಪ್ರಪಂಚದ ಬಗ್ಗೆ ತೆರೆದು ನೋಡುವುದಾದರೇ...
◾ಹೂವು-ಹಣ್ಣಿನ ಅಂಗಡಿಗಳಿಗೆ ಬಂದ ಜೇನುಹುಳುಗಳು.. : ಕಾಡಿನ ಪ್ರಾಣಿಗಳು ನಾಡಿಗೆ ಬಂದಾಗ ಲೈವ್ ವೀಡಿಯೋ ಸುದ್ದಿಯನ್ನು ನೀಡುವ ಸುದ್ದಿಗರು ಸಾವಿರಾರು ಜೇನುಹುಳುಗಳು ರಾತ್ರೋರಾತ್ರಿ ಪ್ರತಿದಿನವೂ ಊರೊಳಗೆ ಬರುತ್ತಿದ್ದರೂ ಯಾರೂ ಸುದ್ದಿಯ ಮಾಡಲೂ ಇಲ್ಲ. ಗಮನಿಸಲೂ ಇಲ್ಲ. ಬನ್ನಿ ನಾವು ಈ ಜೇನುನೊಣಗಳು ಕಾಡಿನಿಂದ ನಾಡಿಗೆ ಯಾಕೆ ಬಂದವು ಎಂಬುದರ ಸುದ್ದಿಯನ್ನು ನೋಡುವ...
ನೀವು ನಗರದ ಹೂವಿನ ಅಂಗಡಿಗಳಲ್ಲಿ ನೋಡಿರಬಹುದು ಅಲ್ಲಿ ಗ್ರಾಹಕರುಗಳಿಗಿಂತ ಜೇನು ನೊಣಗಳೇ ಹೆಚ್ಚಾಗಿ ಸದ್ದು ಮಾಡುತ್ತಿರುತ್ತಾವೆ. ನಾನಾ ತೆರನಾದ ಹೂಗಳ ಮಾರುಕಟ್ಟೆಯಲ್ಲಿ ವಿಶೇಷವಾಗಿ ಸುಗಂಧ ರಾಜ ಹೂವಿನ ಘಮಕ್ಕೆ ಮತ್ತು ಅದರಲ್ಲಿ ಹೆಚ್ಚಿನ ಪ್ರಮಾಣದ ಜೇನು ದೊರಕುವುದರಿಂದ ಈ ಹೂಗಳಿಂದ ಜೇನು ಹೀರಲು ಹಾತೊರೆಯುತ್ತಿರುತ್ತಾವೆ. ನೈಸರ್ಗಿಕವಾಗಿ ವಿಶಾಲ ಅರಣ್ಯಗಳ ವನರಾಶಿಯಿಂದ ಜೇನು ಸಂಗ್ರಹಿಸಬೇಕಾಗಿದ್ದ ಜೇನುನೊಣಗಳು ಹವಾಮಾನ ಪರಿಸರದಲ್ಲಿ ಆದ ನಾನಾ ಬದಲಾವಣೆಯು ಜೇನುಹುಳುಗಳನ್ನು ಎಲ್ಲಿದಂಲೋ ಕಿತ್ತು ತಂದ ಹೂಗಳ ರಾಶಿಗೆ ಆಗಮಿಸುವಂತ ಬದಲಾವಣೆಗಳು ಜೇನುಹುಳುಗಳಲ್ಲಿ ಆಯಿತು. ಇದು ಒಂದು ರೀತಿಯಲ್ಲಿ ಪ್ರಯೋಜನವೂ ಹೌದು... ನೂರಾರು ಕಿಲೋಮೀಟರ್ ದೂರ ಕ್ರಮಿಸಲು ಪಡುವ ಶ್ರಮ ಉಳಿತಾಯವಾಯಿತು. ಹೂವುಗಳ ಅಂಗಡಿಯಲ್ಲಿ ನೂರಾರು ಕಿಲೋಮೀಟರ್ ದೂರದ ಹೂಗಳು ಬಂದು ಬೀಳುವುದರಿಂದ ಇವುಗಳ ಶ್ರಮ ಕಡಿಮೆ ಮಾಡಿತು. ಅದಕ್ಕಾಗಿ ಹಗಲು ಹೊತ್ತಿನಲ್ಲಿ ಜೇನು ಮತ್ತು ಮಕರಂದವನ್ನು ಹುಡುಕುತ್ತಿದ್ದ ಜೇನುಹುಳುಗಳು ನಗರೀಕರಣ ಕೈಗಾರೀಕರಣಕ್ಕೆ ಮನುಷ್ಯ ಹೊಂದಿಕೊಂಡಂತೆ ರಾತ್ರಿಯ ಹೊತ್ತಿನಲ್ಲಿ ಆಹಾರ ಹುಡುಕುವ ನೈಟ್ ಶಿಪ್ಟ್ ಕೆಲಸಕ್ಕೂ ಈ ಜೇನುಹುಳುಗಳು ಸಿದ್ಧವಾದವು. ಈ Collective ಹೂಗಳಿಂದ ಜೇನುಸಂಗ್ರಹಿಸಲು ಈ ಹುಳುಗಳು ಉಳಿವು ಬದುಕಿನ ಹೋರಾಟವನ್ನೇ ಮಾಡುತ್ತಿದ್ದಾವೆ. ದಟ್ಟ ಟ್ರಾಪಿಕ್ ರಸ್ತೆಯಲ್ಲಿ ಆಗಾಗ್ಗೆ ಅಪಘಾತಗಳು ಆಗುವಂತೆ ಎಷ್ಟೋ ಬಾರಿ ಗ್ರಾಹಕ ಮಾರಾಟಗಾರರ ಮಧ್ಯೆ ಸಿಲುಕಿ ಸಾವನ್ನೂ ಅಪ್ಪುತ್ತಿವೆ.
◾ಬೇಕರಿಗೆ ಬಂದ ಜೇನು : ಬೇಕರಿಯಲ್ಲಿ ಸಿಗುವ ಡೈರಿ ಉತ್ಪನ್ನಗಳು ಮತ್ತು ಸಿಹಿ ತಿನಿಸುಗಳಿಗೆ ದಾಂಗುಡಿ ಇಡುತ್ತಿದ್ದ ಮನೆ ನೊಣಗಳು ಯಾವಾಗಲೂ ಇರುತ್ತಿದ್ದವು. ಬೇಕರಿಯ ವರ್ತಕರು ಗಲೀಜು ನೊಣಗಳನ್ನು ಯಾವು ಯಾವುದೋ spray ಮಾಡುವುದರ ಮೂಲಕ ಅವುಗಳನ್ನು ನಿಯಂತ್ರಿಸಲು ಬಹುತೇಕ ಯಶಸ್ವಿಯಾದರಾದರೂ ಇತ್ತೀಚಿನ ಕೆಲವು ವರ್ಷಗಳಿಂದ ಬೇಕರಿಗಳಿಗೆ ಈ ಜೇನುನೊಣಗಳ ಕಾಟ ಹೆಚ್ಚಾಗಿದೆ. ಈ ತರೆನಾದ ಜೇನುಹುಳುಗಳು ಸಾಮಾನ್ಯವಾಗಿ ಮಲೆನಾಡು ಮತ್ತು ಮಲೆನಾಡು ತಪ್ಪಲಿನ ಪ್ರದೇಶಗಳಲ್ಲಿ ಕಂಡು ಬರುತ್ತಾವೆ. ಇನ್ನೂ ಬೇಸಿಗೆ ಕಾಲದಲ್ಲಿ ತಂಪು ಪಾನೀಯ ಹೆಸರಲ್ಲಿ ಮಾರಾಟ ಮಾಡುವ ನಾನಾ ವೆರೈಟಿ ಜ್ಯೂಸ್ ಸೆಂಟರ್ ಬಳಿ ಜೇನು ಹುಳುಗಳ ಓಡಾಟವನ್ನು ನೋಡಬಹುದು. ಸಾಮಾನ್ಯವಾಗಿ ಜೇನು ಸಾಕಾಣೆದಾರರು ಹೆಚ್ಚು ತುಪ್ಪ ಉತ್ಪಾದನೆಯ ದೃಷ್ಟಿಯಿಂದ ಅವುಗಳಿಗೆ ಸಕ್ಕರೆ ನೀರನ್ನು ಬೆರೆಸಿ ಕೃತಕ ಜೇನುತುಪ್ಪ ತಯಾರು ಮಾಡಲು shortcut ದಾರಿಯನ್ನು ಅನುಸರಿಸುತ್ತಿದ್ದಾರೆ. ಸಾಕಿರುವ ಹುಳುಗಳಿಗೆ ಸಕ್ಕರೆ ನೀರನ್ನು ನೀಡುವುದರ ಮೂಲಕ ಜೇನುತುಪ್ಪ ತಯಾರು ಮಾಡುವರು. ನಿಸರ್ಗದ ಹೂವಿನಿಂದ ತಯಾರಿಸದೇ ಕೇವಲ ಸಕ್ಕರೆಯ ರಸ ಹೀರಿ ಶೇಖರಣೆ ಮಾಡಿದ್ದರಿಂದ ಇದೂ ಕೂಡ ಒಂದು ರೀತಿಯ ನಕಲಿ ಜೇನು ತುಪ್ಪ ಎಂದು ಹೇಳಬಹುದು. ಇಲ್ಲಿ ಸಾಕು ಜೇನುಗಳಿಗೆ ಸಕ್ಕರೆಯ ಸಿಹಿಯನ್ನು ಹೀರುವ ಅಭ್ಯಾಸ ಇದೆ. ಜೇನು ಕೃಷಿಯಲ್ಲಿ ಲಾಭದಾಯಕ ವಿಧಾನವಾಗಿ ಇದನ್ನು ಅನುಸರಿಸುತ್ತಿದ್ದಾರೆ. ಆದರೆ ಇತ್ತೀಚಿನ ಹಲವು ವರ್ಷಗಳಿಂದ ಹೆಜ್ಜೇನುಗಳೂ ಬೇಕರಿಯ ಸಿಹಿಯ ಹೀರಿ ಜೇನು ತಯಾರಿಸಲು ಮುಂದಾಗಿದ್ದಾವೆ! ಇದು ಪ್ರಕೃತಿಯಲ್ಲಿ ಜೇನು ಹುಳುಗಳಿಗೆ ಬೇಕಾಗಿರುವ ಮೂಲಭೂತವಾದ ವಸ್ತುಗಳ ಅಲಭ್ಯತೆಯಿಂದ ಅವು ಈ ವಿಧಾನ ಅನುಸರಿಸುತ್ತಿರುವುದು.
▪️ಕಚ್ಚದ ಜೇನುಹುಳುಗಳು : ಜೇನು ಹುಳಗಳು ಕಂಡರೆ ಸಾಕು ಕಚ್ಚುವವು ಎಂದು ಥಟ್ಟನೆ ಎಲ್ಲರಿಗೂ ಅನಿಸುವುದು. ಇನ್ನೂ ಕೆಲವರು ಜೋರಾಗಿ ಬೊಬ್ಬೆ ಹಾಕುವರು. ಅದರಿಂದ ಹಿಂದೆ ಸರಿದು ಮುನ್ನೆಚ್ಚರಿಕೆ ಕ್ರಮಗಳಿಂದ ಓಡಿಸಲು ಪ್ರಯತ್ನ ಪಡುವರು. ಆದರೆ ಹಣ್ಣು ಹೂವಿನ ಅಂಗಡಿಗೆ ಮಕರಂದಕ್ಕಾಗಿ ಬಂದ ಹುಳುಗಳು, ಬೇಕರಿಯ ಸಿಹಿ ತಿನಿಸುಗಳಿಗೆ ಬಂದ ಜೇನು ಹುಳುಗಳು ಕಚ್ಚುವುದಿಲ್ಲ. ಕೈಯಲ್ಲಿ ಮುಟ್ಟಿದರೂ ಕಚ್ಚುವುದಿಲ್ಲ. ಪ್ರಾಣ ಸಂಕಟದಂತ ಸಮಯದಲ್ಲಿ ಕೊನೆಯ ಆಯ್ಕೆಯಾಗಿ ಕಚ್ಚಬಹುದು. ಆದರೆ ವಿನಾಕಾರಣ ಹೂವಿನ ಮೇಲೆ ಕುಳಿತವು ಸ್ವೀಟ್ಸ್ ಮೇಲೆ ಕುಳಿತವುಗಳನ್ನು ಓಡಿಸುವುದರಿಂದ ಕಚ್ಚುವುದಿಲ್ಲ. ಆದರೆ ತಮ್ಮ ಗೂಡು ಮತ್ತು ಸಂತಾನಕ್ಕೆ ಧಕ್ಕೆ ಬಂದಾಗ ಮಾತ್ರ ಅವು ದೋಷದಿಂದ ಕಚ್ಚಲು ದಾಳಿ ಮಾಡುತ್ತವೆ.
ಜೇನುಗಳು ಗೂಡುಕಟ್ಟುವುದು ಮಾನವನ ಸುತ್ತಮುತ್ತವೇ..!! : ನಗರಗಳಲ್ಲಿ ದೊಡ್ಡ ದೊಡ್ಡ ಕಟ್ಟಡ, ಅಪಾರ್ಟ್ಮೆಂಟ್ ಗಳ ಮೇಲೆ ಗೂಡು ಕಟ್ಟಿರುವುದನ್ನು ನೀವು ನೋಡಿರಬಹುದು. ಹೆಜ್ಜೇನುಗಳು ಈಗಾಗಲೇ ನಗರೀಕರಣಕ್ಕೆ ಮಾರುಹೋಗಿದ್ದಾವೆ ಎಂದೆನಿಸುತ್ತದೆ. ಅರಣ್ಯಗಳಲ್ಲಿ ಇರುವುದಕ್ಕಿಂತ ಜಾಸ್ತಿ ಈಗ ನಗರಗಳಲ್ಲೇ ಜೇನುಹುಳುಗಳು ಕಂಡುಬರುತ್ತವೆ. ಇನ್ನೂ ಕೋಲು ಜೇನುಗಳು ಹಳ್ಳಿಗಳಲ್ಲಿ ಮನೆ ಗೋಡೆ, ಕಿಟಕಿ, ಗವಾಕ್ಷಿ, ಅರ್ನಾಳಿಗೆ, ಹೊಗೆ ಅನುಪಯುಕ್ತ ಹೊಗೆ ಗೂಡುಗಳಲ್ಲಿ ಜೇನುಹುಳುಗಳು ಜೇನುಗೂಡುಗಳನ್ನು ಕಟ್ಟುತ್ತಿವೆ. ನಗರಗಳಲ್ಲಿ ಟೆರಸ್ ಮೇಲಿನ ವಾಟರ್ ಟ್ಯಾಂಕ್‌ಗಳ ಮಗ್ಗುಲಲ್ಲಿ, ಪೈಪ್ ಗಳಿಗೆ, ಇತರೆ ಅನುಪಯುಕ್ತ ವಸ್ತುಗಳೆಂದು ಎಸೆದ ರಾಶಿಯಲ್ಲಿ ಜೇನುಗೂಡುಗಳನ್ನು ಕಟ್ಟುತ್ತಿವೆ. ಇಲ್ಲಿ ಬಹುಶಃ ಮಾನವನೇ ಎಲ್ಲಾ ಭಾಗವನ್ನು ಆವರಿಸಿರುವುದರಿಂದ. ಜೇನುಹುಳುಗಳೇ ನಮ್ಮ ಸುತ್ತಾ ಸುತ್ತುತ್ತಿವೆಯೆಂದು ನಮಗೆ ಹಾಗೆ ಅನಿಸುತ್ತಿದೆಯೇನೋ..??
ಜೇನುಗಳು ಭೌತಿಕ ಗೂಡುಗಳ ರಚನೆಗಾಗಿ, ಬದುಕಲು ಆಹಾರ ನೀರಿಗಾಗಿ ಒಂದು ರೀತಿಯ ಹೋರಾಟ ಮಾಡಿದರೆ ಮನುಷ್ಯನ ಸ್ವಾರ್ಥದ ಸಂಶೋಧನೆ, ಕೀಟನಾಶಕಗಳ ಆವಿಷ್ಕಾರ, ವಿಕಿರಣಶೀಲ ವಸ್ತುಗಳ ವ್ಯಾಪಕ ಬಳಕೆಯಿಂದ ಜೇನುಗಳಲ್ಲಿ ಗುಣಪಡಿಸಲಾಗದ ವೈರಸ್ಗಳು ಈ ಹುಳುಗಳನ್ನು ಭಾದಿಸುತ್ತಿವೆ. ಇದರಿಂದ ಜೇನುಹುಳುಗಳ ಸಂತಾನೋತ್ಪತ್ತಿ ಪ್ರಕ್ರಿಯೆಯ ಮೇಲೆ ಪರಿಣಾಮ ಬೀರಿ ಸಂತಾನೋತ್ಪತ್ತಿಯ ಪ್ರಮಾಣವೇ ಕುಸಿದಿರುವುದು ಬಹು ದೊಡ್ಡ ಮತ್ತು ಆತಂಕಕಾರಿ ಬದಲಾವಣೆ ಆಗಿದೆ.
ಬದಲಾವಣೆ ಜಗದ ನಿಯಮ ಸರ್ವ ಸಮ್ಮತ. ಆದರೆ ಒಂದು ಕೀಟದ ವರ್ತನೆಯಲ್ಲಿ ನನ್ನ ಅನುಭದ ಇಪ್ಪತ್ತು - ಇಪ್ಪತ್ತೈದು ವರ್ಷಗಳಲ್ಲಿ ಇಷ್ಟೊಂದು ಮಹತ್ತರ ಬದಲಾವಣೆಗಳನ್ನು ಕಂಡು ಇದು ಬದಲಾವಣೆಯೋ ಅಥವಾ ಪರಿಸ್ಥಿತಿಗೆ ತಕ್ಕ ಹೊಂದಾಣಿಕೆಯೋ ಅಥವಾ ಜೀವಸಂಕುಲದ ಅವಸಾನದ ಹಾದಿಯ ಅಸ್ಪಷ್ಟ ಚಿತ್ರಣವೋ ತಿಳಿಯದು.
ಸರಕಾರಿ ಹಿರಿಯ ಪ್ರಾಥಮಿಕ ಶಾಲೆ, ಮಿಂಚೇರಿ
ಬಳ್ಳಾರಿ ತಾಲೂಕು ಮತ್ತು ಜಿಲ್ಲೆ
Mob : +91 99029 12684
*******************************************