-->
ಜೀವನ ಸಂಭ್ರಮ : ಸಂಚಿಕೆ - 142

ಜೀವನ ಸಂಭ್ರಮ : ಸಂಚಿಕೆ - 142

ಜೀವನ ಸಂಭ್ರಮ : ಸಂಚಿಕೆ - 142
ಲೇಖಕರು : ಎಂ.ಪಿ. ಜ್ಞಾನೇಶ್ 
ಶಿಕ್ಷಣಾಧಿಕಾರಿ 
ಪ್ರಧಾನ ಮಂತ್ರಿ ಪೋಷಣ್ ಶಕ್ತಿ ನಿರ್ಮಾಣ
(ಮಧ್ಯಾಹ್ನ ಉಪಹಾರ ಯೋಜನೆ) 
ಜಿಲ್ಲಾ ಪಂಚಾಯತ್ ಮಂಗಳೂರು
ದಕ್ಷಿಣ ಕನ್ನಡ ಜಿಲ್ಲೆ 

                 

ಮಕ್ಕಳೇ..... ಈಗಾಗಲೇ ಅವಿದ್ಯ, ಅಸ್ಮಿತ, ಅಭಿನೀವೇಶ ಕ್ಲೇಶಗಳ ಬಗ್ಗೆ ತಿಳಿದು ಕೊಂಡಿದ್ದೇವೆ. ಈ ದಿನ ರಾಗ ಕ್ಲೇಶದ ಬಗ್ಗೆ ತಿಳಿದುಕೊಳ್ಳೋಣ. ಎಲ್ಲಾ ಕ್ಲೇಶಗಳಿಗೆ ಅವಿದ್ಯ ಮೂಲ. ಅವಿದ್ಯ ಇಲ್ಲ, ಕ್ಲೇಶ ಕ್ಷೀಣವಾಗಿ, ಪರಿಣಾಮ ಉಂಟುಮಾಡುವುದಿಲ್ಲ. ಅದಕ್ಕೆ ಕ್ರಿಯಾ ಯೋಗ ಅಗತ್ಯ. ಗುಣವನ್ನು ಅನುಸರಿಸಿ ಉಂಟಾಗುವುದು ರಾಗ. ಸುಖ ಉಂಟಾದಂತೆ ರಾಗ ಉಂಟಾಗುತ್ತದೆ. ಇಂದ್ರಿಯ, ಮನಸ್ಸು ಮತ್ತು ವಸ್ತುವಿನ ನಡುವಿನ ಸಂಬಂಧ ಉಂಟಾದಾಗ ಸುಖ ಆಗುತ್ತದೆ. ವಸ್ತು ಹೊರಗೆ ಇದೆ. ಮನಸ್ಸು ಒಳಗೆ ಇದೆ. ಕಣ್ಣು ದೇಹದಲ್ಲಿದೆ. ಕಣ್ಣು, ಹೂವು ನೋಡಿದಾಗ, ಚಿತ್ರ ಮನಸ್ಸಿನಲ್ಲಿ ಮೂಡುತ್ತದೆ. ಆಗ ಸುಖ ಉಂಟಾಗುತ್ತದೆ. ಹಾಗೆ ಮೂಡಿದ ಚಿತ್ರ, ಹಾಗೆ ಇರಬೇಕು ಅನಿಸುತ್ತದೆ, ಅದಕ್ಕೆ ಸುಖ ಎನ್ನುವರು. 
     ಅದೇ ರೀತಿ ದೇಹದ ಒಳಗೆ ಮನಸ್ಸು, ಕಿವಿ ದೇಹದಲ್ಲಿ, ಶಬ್ದ ಹೊರಗೆ, ಈ ಮೂರು ಕೂಡಿದಾಗ ಶಬ್ದದ ತೆರೆ ಮನಸ್ಸಿನಲ್ಲಿ ಏಳುತ್ತದೆ. ಇದೇ ರೀತಿ ಮನಸ್ಸು ಒಳಗೆ, ಮೂಗು, ನಾಲಿಗೆ ಮತ್ತು ಚರ್ಮ ದೇಹದಲ್ಲಿದೆ. ಹೊರಗೆ ಸುವಾಸನೆ, ರುಚಿ ಮತ್ತು ಸ್ಪರ್ಶ ಇದೆ. ಮನಸ್ಸು ಆಯಾ ಅಂಗದ ಜೊತೆ, ಆಯಾ ಅಂಗಕ್ಕೆ ಸಂಬಂಧಿಸಿದ ವಸ್ತುವಿನಲ್ಲಿ, ಬೆರೆತಾಗ ಅದಕ್ಕೆ ಪೂರಕವಾದ ತೆರೆ ಮನಸ್ಸಿನಲ್ಲಿ ಏಳುತ್ತದೆ. ಆಗ ಸುಖವಾಗುತ್ತದೆ. ಅಂದರೆ ಮನಸ್ಸಿನಲ್ಲಿ ತೆರೆ ಏಳಬೇಕು, ಮನಸ್ಸು ಆ ವಸ್ತುವಿನೊಂದಿಗೆ ಬೆರೆತಾಗ ಸುಖವಾಗುತ್ತದೆ. ಮನಸ್ಸಿನಲ್ಲಿ ಏಳುವ ತರಂಗಗಳು ಸುಖ ಉಂಟು ಮಾಡುತ್ತವೆ. ಸುಖದ ಅನುಭವದ ಜೊತೆ ಭಾವ ತಯಾರಾಗುತ್ತದೆ. ಅದೇ ರಾಗ. ಆ ಸುಖದ ಭಾವ ಮೂರು.
1. ಸುಖ ಹಾಗೆ ಇರಲಿ ಅನಿಸುತ್ತದೆ .
2. ಯಾವ ವಸ್ತು ಸುಖ ನೀಡುತ್ತದೆಯೋ ಅದು ನಮ್ಮದಾಗಿರಬೇಕು ಅನಿಸುತ್ತದೆ.
3. ಯಾವುದರಿಂದ ಸುಖ ಸಿಗುತ್ತದೆ ಅದು ನನಗೆ ಅನುಕೂಲವಾಗಿರಬೇಕು ಅನಿಸುತ್ತದೆ.
      ರಾಗ ಎಂದರೆ ತೀವ್ರ ಒಲವು. ವಸ್ತು ಸುಖ ಕೊಡುತ್ತದೆ ಅಂದಾಗ, ನಮ್ಮ ಮನಸ್ಸಿನಲ್ಲಿ ಒಂದು ಬಗೆಯ ರಾಗ ತಯಾರಾಗುತ್ತದೆ. ಒಂದು ಬಗೆ ಆಸಕ್ತಿ, ಒಲವು ಉಂಟಾಗುತ್ತದೆ. ಆಸಕ್ತಿ ಬಂದರೆ ಮನಸ್ಸು ಅದರಲ್ಲಿ ಮುಳುಗಲು ಶುರುವಾಗುತ್ತದೆ. ಅದರ ಕೂಡ ಮನಸ್ಸು ಹೊಂದಿಕೊಳ್ಳುತ್ತದೆ. ಅದನ್ನು ಹಿಡಿಬೇಕು, ನೋಡಬೇಕು, ಹೇಳಬೇಕು, ರುಚಿಸಬೇಕು, ಇಟ್ಟುಕೊಳ್ಳಬೇಕು, ಯಾರಿಗೂ ಕೊಡಬಾರದು ಅನಿಸುತ್ತದೆ. ಇವೆಲ್ಲ ಭಾವನೆಗಳ ಒಟ್ಟು ರೂಪವೇ ರಾಗ. ಇದು ಕ್ಲೇಶ. ಯಾವಾಗಲೂ ಸುಖ ಕೊಡುವ ವಸ್ತು ದೊರೆಯುತ್ತಿರಬೇಕು. ಆ ಬಳಿಕ ವಸ್ತು ಕೊಡುವಂತಹ ದೊರಕುವಂತ ಸಂಗತಿ ಅನುಕೂಲವಾಗಿರಬೇಕು. ಇದು ರಾಗವನ್ನು ಪ್ರಪುಲ್ಲಗೊಳಿಸುತ್ತದೆ. ಸುಖದಲ್ಲಿ ನಾಲ್ಕು ಪ್ರಕಾರ......

1. ಹಿತವುಂಟು ಮಾಡುವ ಸುಖ 
2. ಅಹಿತ ಉಂಟು ಮಾಡುವ ಸುಖ 
3. ಸ್ವಲ್ಪ ಕಾಲ ಇರುವ ಸುಖ 
4. ದೀರ್ಘಕಾಲ ಇರುವ ಸುಖ 

ಯಾವ ಸುಖ ಮುಂದೆ, ಕಾಲಾಂತರದಲ್ಲಿ ಪರಿಣಾಮದಲ್ಲಿ, ಹಿತ ಮಾಡುತ್ತದೆ ಅದು ಹಿತ ಉಂಟುಮಾಡುವ ಸುಖ. ಉದಾಹರಣೆಗೆ, ಹಸಿವಾಗಿದೆ, ಹಣ್ಣು ತಿಂದೆ. ಅದು ಸುಖ. ಪರಿಣಾಮದಲ್ಲಿ, ಕಾಲಾಂತರದಲ್ಲಿ ತೊಂದರೆ ಮಾಡುವುದಿಲ್ಲ. ಯಾವ ಸುಖ ಕಾಲಾಂತರದಲ್ಲಿ, ಪರಿಣಾಮದಲ್ಲಿ ಅಹಿತ ಉಂಟು ಮಾಡುತ್ತದೆಯೋ ಅದು ಅಹಿತ ಉಂಟುಮಾಡುವ ಸುಖ. ಉದಾಹರಣೆಗೆ, ಧೂಮಪಾನ, ಮದ್ಯಪಾನ. ಕೆಲವು ಸುಖ ಸ್ವಲ್ಪ ಕಾಲ ಇರುತ್ತದೆ. ಅದು ದೂರವಾದ ಕೂಡಲೇ, ಬಿಟ್ಟ ಕೂಡಲೇ ಸುಖ ಮರೆಯಾಗುತ್ತದೆ. ಉದಾಹರಣೆಗೆ, ಊಟ. ಇನ್ನು ಕೆಲವು ಸುಖ ದೀರ್ಘಕಾಲ ಇರುತ್ತದೆ. ಉದಾಹರಣೆ, ಓದುವುದು, ಪ್ರವಾಸ. ಸಾಮಾನ್ಯ ಸುಖದ ಬಗ್ಗೆಯೂ ರಾಗ ಉಂಟಾಗುತ್ತದೆ. ರಾಗ ಉಂಟಾಗಬಾರದು ಅಂತಲ್ಲ. ಯಾವುದಕ್ಕೆ ಎಷ್ಟು ಇರಬೇಕು, ಅಷ್ಟೇ ಇದ್ದರೆ ಒಳ್ಳೆಯದು. ಅದಕ್ಕಿಂತ ಹೆಚ್ಚಾದರೆ ರಾಗ ಕ್ಲೇಶವಾಗುತ್ತದೆ. ಉದಾಹರಣೆಗೆ. ಹಸಿವಾಗಿದೆ, ಹಣ್ಣು ತಿಂದೆನು. ಅದು ಸುಖ ನೀಡಿತು. ಆ ಕ್ಷಣ ಸುಖ. ಹೊಟ್ಟೆ ತುಂಬಿದ ಮೇಲೆ, ತಿನ್ನಲು ನಿಲ್ಲಿಸಿದ ಮೇಲೆ, ಆ ಸುಖ ಹೋಯ್ತು. ಆ ಕ್ಷಣಕ್ಕೆ ರಸ ಸುಖ ನೀಡಿತು. ಇದು ಸ್ವಲ್ಪ ಕಾಲ ಇರುವಂತಹ ಹಿತಸುಖ. ಮುಂದೆ ಪರಿಣಾಮದಲ್ಲಿ, ಅಹಿತ ಉಂಟು ಮಾಡುವುದಿಲ್ಲ. ವಸ್ತು ಉಳಿಯುವುದಿಲ್ಲ. ಇದರ ಬಗ್ಗೆ ಆಸಕ್ತಿ ತಯಾರಾಗುತ್ತದೆ. ಅಂದರೆ ಹಣ್ಣನ್ನು ತಿನ್ನಬೇಕು. ತಿನ್ನಬೇಕು ಎನ್ನುವ ಆಸಕ್ತಿ ತಯಾರಾಗುತ್ತದೆ. ಅದು ನನಗೆ ಸುಖ ಕೊಡುತ್ತದೆ ಅನಿಸುತ್ತದೆ. ಯಾವಾಗ ಮನಸಿನಲ್ಲಿ ಹಣ್ಣಿನ ಚಿತ್ರ ಮೂಡುತ್ತದೆಯೋ, ಆವಾಗ ಸುಖದ ಭಾವನೆ ತಯಾರಾಗುತ್ತದೆ. ಹೀಗೆ ಸುಖದ ಭಾವನೆ ತಯಾರಾದರೆ ರಾಗ. ಆ ಹಣ್ಣು ಮತ್ತೆ ಮತ್ತೆ ಬೇಕು ಅನಿಸುತ್ತದೆ. ಅದು ನನ್ನ ಹತ್ತಿರ ಇರಬೇಕು ಅನಿಸುತ್ತದೆ. ಅದು ಸದಾ ದೊರೆಯಬೇಕು ಅನಿಸುತ್ತದೆ. ಈ ಭಾವ ತೃಷೆ, ಇಚ್ಛೆ ಅನ್ನುತ್ತೇವೆ. ರಾಗ ಮೊದಲು ಬೇಕು ಅನ್ನುವ ರೂಪ ತಾಳುತ್ತದೆ. ಅಂದರೆ ಸುಖದ ಒಲವು ತಯಾರಾಗುತ್ತದೆ. ಅದರ ಬಗ್ಗೆ ಆಸೆ ಶುರುವಾಗುತ್ತದೆ. ಅದು ನನ್ನ ಬಿಟ್ಟು ಹೋಗಬಾರದು ಅನಿಸುತ್ತದೆ. ಒಲವು, ಆಸೆ ಮತ್ತು ಲೋಭದ ಮಿಶ್ರಣವೇ ರಾಗ ಕ್ಲೇಶ.
        ಈಗ ಮದ್ಯಪಾನ, ಧೂಮಪಾನ ಆರೋಗ್ಯಕ್ಕೆ ಹಿಡಿಸದು. ಸುಖ ಅನ್ನಿಸದೆ ಇದ್ರೆ, ರಾಗ ಉಂಟಾಗುವುದಿಲ್ಲ. ರಾಗ ಇಲ್ಲದೆ ಇದ್ದರೆ ಬೇಕು ಅನಿಸುವುದಿಲ್ಲ. ಬೇಕು ಅನಿಸದೆ ಇದ್ದರೆ, ಮನುಷ್ಯ ತಿನ್ನುವುದಿಲ್ಲ. ತಿನ್ನುತ್ತಾನೆ ಅಂದರೆ ಬೇಕು ಅನಿಸುತ್ತದೆ. ಬೇಕು ಅನಿಸಿದರೆ ರಾಗ ಉಂಟಾಗಿದೆ. ರಾಗ ಉಂಟಾಗ ಬೇಕಾದರೆ ಸುಖ ಕೊಡುತ್ತದೆ. ಪರಿಣಾಮ ಹಿತವಲ್ಲ. ಅದು ಅಲ್ಪಕಾಲಿಕವೇ ಕ್ಷಣಾವರ್ತಿ. ಅದಕ್ಕೆ ಕ್ಷಣಿಕ ಸುಖ ಎನ್ನುವರು. ಯಾವಾಗಲೂ ಇದ್ದರೆ ಮತ್ತೆ ಮತ್ತೆ ತಿನ್ನಬೇಕು ಅನಿಸುವುದಿಲ್ಲ. ತಿಂದಾಗ ಆರಾಮ. ಬಿಟ್ಟ ಕೂಡಲೇ ಬೇಕು ಅನಿಸುತ್ತದೆ. ಅಷ್ಟಕ್ಕಷ್ಟೇ ಮುಗಿತಾ ಹೋಗುತ್ತದೆ. ಹಿತವಾಗಿರಲಿ, ಅಹಿತವಾಗಿರಲಿ ರಾಗ ಉಂಟಾದರೆ ಬಿಡಲು ಆಗುವುದಿಲ್ಲ. ಅದಕ್ಕೆ ವ್ಯಸನ ಎನ್ನುವರು. ವ್ಯಸನಕ್ಕೆ ಒಳಗಾದಾಗ ಸ್ವಾತಂತ್ರ್ಯ ಇಲ್ಲ. ರಾಗ ಆಳೋದಿಕ್ಕೆ ಶುರು ಮಾಡುತ್ತದೆ. ನಾವು ರಾಗದ ಗುಲಾಮರಾಗುತ್ತೇವೆ. ಯಾರೇ ಹೇಳಿದರೂ ಬಿಡುವುದಿಲ್ಲ. ಅವರು ನಮ್ಮನ್ನು ಗೌರವಿಸುತ್ತಾರೆ. ಆದರೆ ನಮ್ಮ ಮಾತು ಪಾಲಿಸಲು ಆಗೋದಿಲ್ಲ. ಗೌರವವಿದೆ, ತಾತ್ಸಾರವಿಲ್ಲ, ಸ್ವಾತಂತ್ರ್ಯ ಇಲ್ಲವಲ್ಲ ಆದ್ದರಿಂದ ಬಿಡೋದಕ್ಕೆ ಆಗೋದಿಲ್ಲ. ಅವರನ್ನು ರಾಗ, ಆಸಕ್ತಿ ಆಳುತ್ತದೆ. ಸಕ್ಕರೆ ತಿನ್ನುವುದು ಹಿತ. ಕಾಲಾಂತರದಲ್ಲಿ ಅಹಿತ ಪರಿಣಾಮ ಉಂಟುಮಾಡುತ್ತದೆ. ಬರುತ್ತಾ ಬರುತ್ತಾ, ಬೇರೆ ರೂಪ ತರುತ್ತದೆ. ಸಕ್ಕರೆ ಕಾಯಿಲೆಯಾಗುತ್ತದೆ. ಜಗತ್ತು ಇರುವುದು ಅನುಭವಿಸಲು ವಿನಹ ಸದೈವ ಅದನ್ನು ನಮ್ಮದನ್ನಾಗಿ ಮಾಡಿಕೊಳ್ಳಲು ಅಲ್ಲ. ರಾಗ ನಮ್ಮನ್ನು ಬಂಧಿಸುತ್ತದೆ. ಬಿಟ್ಟುಕೊಡಲು ಆಗುವುದಿಲ್ಲ, ಕಟ್ಟಿ ಹಾಕುತ್ತದೆ. ರಾಗ ತಪ್ಪಲ್ಲ. ಕ್ಲೇಶ ತಪ್ಪು, ರಾಗ ಬಹಳ ಆದರೆ ಕ್ಲೇಶ. ಎಷ್ಟಿರಬೇಕು ಅಷ್ಟಿದ್ದರೆ ಹಿತವಾಗುತ್ತದೆ. ಮಿತಿ ಅನ್ನೋದು ಬಹಳ ಮುಖ್ಯ. ಪ್ರೀತಿಸಬೇಕು, ಅಂಟಿಕೊಳ್ಳಬಾರದು. ರಾಗ ಭಯಾನಕ. ಎಲ್ಲಾ ಮಾಡುತ್ತದೆ. ಮನಸ್ಸು ಅಂಟಿಕೊಂಡರೆ ಅದು ಜೀವನ ಕಳೆದುಕೊಳ್ಳಲು ಚಿಂತಿಸುವುದಿಲ್ಲ. ಆದ್ದರಿಂದ ಪ್ರೀತಿಸಬೇಕು, ವ್ಯಾಮೋಹ ಮಾಡಿಕೊಳ್ಳಬಾರದು, ಅಂಟಿಕೊಳ್ಳಬಾರದು, ಅಲ್ಲವೇ ಮಕ್ಕಳೇ....
......................................... ಎಂ.ಪಿ. ಜ್ಞಾನೇಶ್ 
ಶಿಕ್ಷಣಾಧಿಕಾರಿ 
ಪ್ರಧಾನ ಮಂತ್ರಿ ಪೋಷಣ್ ಶಕ್ತಿ ನಿರ್ಮಾಣ
(ಮಧ್ಯಾಹ್ನ ಉಪಹಾರ ಯೋಜನೆ) 
ಜಿಲ್ಲಾ ಪಂಚಾಯತ್ ಮಂಗಳೂರು
ದಕ್ಷಿಣ ಕನ್ನಡ ಜಿಲ್ಲೆ 
*******************************************


Ads on article

Advertise in articles 1

advertising articles 2

Advertise under the article