ಸ್ಫೂರ್ತಿಯ ಮಾತುಗಳು : ಸಂಚಿಕೆ - 120
ಸ್ಫೂರ್ತಿಯ ಮಾತುಗಳು : ಸಂಚಿಕೆ - 120
ಲೇಖಕರು : ರಮೇಶ ಎಂ. ಬಾಯಾರು
ರಾಜ್ಯಪ್ರಶಸ್ತಿ ಪುರಸ್ಕೃತ ನಿವೃತ್ತ ಅಧ್ಯಾಪಕರು
ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
ಮೊಬೈಲ್ ಸಂಖ್ಯೆ : +91 94486 26093
rameshbayar@gmail.com
ಮನೆಯಲ್ಲಿ ದನ, ನಾಯಿ ಬೆಕ್ಕು ಇರುವುದರಿಂದ ನನಗೆ ನಿಮ್ಮ ಮನೆಯ ಕಾರ್ಯಕ್ರಮಕ್ಕೆ ಬರಲಾಗುವುದಿಲ್ಲ ಎಂದು ಖಂಡಾತುಂಡವಾಗಿ ಹೇಳಿದ ಅನೇಕರಿದ್ದಾರೆ. ಆಗ ನಾನು ಯೋಚಿಸಿದ್ದೆ, “ನನಗಿಂತ ಬೆಕ್ಕು ನಾಯಿ ದನ.... ಇತ್ಯಾದಿಗಳೇ ಇವರಿಗೆ ಹೆಚ್ಚಾಯಿತೇ?." ನನ್ನ ಯೋಚನೆ ತಪ್ಪು, ಅವರ ಹೇಳಿಕೆಯೇ ಸರಿಯೆಂದು ನನಗೆ ಅರ್ಥವಾಗಲು ದೀರ್ಘ ಕಾಲವೇ ಬೇಕಾಯಿತು. ನನ್ನ ಮನೆಗೆ ಅವರು ಬರಲಿಲ್ಲವೆಂದರೆ ಅವರಿಗೆ ನನ್ನಲ್ಲಿ ಪ್ರೀತಿಯಿಲ್ಲ ಎಂದರ್ಥವಲ್ಲ. ಅವರ ದನ, ನಾಯಿ, ಬೆಕ್ಕು ಕೋಳಿಗಳಿಗೆ ಆಹಾರ ಮತ್ತು ರಕ್ಷಣೆಯ ಜವಾಬ್ದಾರಿ ಅವರಿಗಿದೆ. ನನ್ನ ಮೇಲಿನ ಪ್ರೀತಿಗಿಂತಲೂ ಆ ಮೂಕ ಜೀವಿಗಳ ಮೇಲೆ ಅವರು ತೋರುವ ಕಾಳಜಿಯು ಉತ್ಕೃಷ್ಟವಾದುದು ಅಲ್ಲವೇ...?
ನಿಷ್ಕಾಳಜಿ ಎಲ್ಲದರಲ್ಲೂ ಎಲ್ಲರಲ್ಲೂ ಸಹಜ. ಆದರೆ ಕಾಳಜಿಯು ಅತ್ಯುತ್ಕೃಷ್ಟವಾದ ಗುಣ. ಜೀವಿಗಳಿಗೆ ಸಂಬಂಧಿಸಿ ಹೇಳುವುದಾದರೆ ಇದು ಮಾನವೀಯತೆಯ ಉನ್ನತ ಸ್ಥಿತಿ. ಮನೆಯಲ್ಲಿ ಕಾಯಿಲೆಯಿಂದ ಮಲಗಿದಾಗ ಅವರ ಬಗ್ಗೆ ಮನೆಯವರೆಲ್ಲರೂ ಕನಿಕರ ಮತ್ತು ಕಾಳಜಿಯನ್ನು ವಹಿಸುತ್ತಾರೆ. ಅವರಿಗೆ ಅನುಕೂಲತೆಗಳನ್ನು ಒದಗಿಸುವ, ಅವರನ್ನು ಉಪಚರಿಸುವ ಹಂತದಲ್ಲಿ ಎಲ್ಲರೂ ಒಂದಾಗುತ್ತಾರೆ. ಪಕ್ಕದ ಮನೆಯಲ್ಲಿ ಕಾಯಿಲೆಯಿಂದ ಯಾರಾದರೂ ಮಲಗಿದ್ದಾಗ ನಾವು ಅವರನ್ನು ನೋಡಲು ಹೋಗುತ್ತೇವೆ, ಕನಿಕರ ತೋರಿಸುತ್ತೇವೆ, ಸಾಧ್ಯವಿರುವವರು ನೆರವನ್ನೂ ನೀಡುತ್ತಾರೆ. ಆದರೆ ಮನೆಯವರಿಗೆ ನೀಡುವಂತಹ ಕಾಳಜಿಯನ್ನು ಇತರರಿಗೆ ಯಾರೂ ಕೊಡಲಾರರು. ಕಾಳಜಿಯೆನ್ನುವುದು ಪ್ರೀತಿಗಿಂತಲೂ ಮಿಗಿಲಾದುದು.
ನಾವು ನಮ್ಮ ದೇಹದ ಬಗ್ಗೆ ವಿಶೇಷ ಕಾಳಜಿ ಹೊಂದಿದವರಾಗಬೇಕು. ನಮ್ಮ ದೇಹ ನಮಗೆ ಲಭಿಸಿರುವ ಮಹಾ ಉಡುಗೊರೆ. ಎಷ್ಟೇ ದೊಡ್ಡ ಸಂಪತ್ತು ದೊರೆಯುವುದಿದ್ದರೂ ದೇಹದ ಯಾವುದೇ ಅಂಗವನ್ನು ನಾವು ಯಾರಿಗೂ ನೀಡೆವು. ದೇಹದ ಅತ್ಯಂತ ಬೆಲೆ ಬಾಳುವ ಯಾವುದೇ ಅಂಗವಾಗಲೀ, ಅಂಗಾಂಶವಾಗಲೀ ಯಾವುದೇ ಒಡಕು ಅಥವಾ ಊನಗಳಿಗೊಳಗಾಗದಂತೆ ಅತೀವ ಕಾಳಜಿ ಬೇಕೇ ಬೇಕು. ಕೆಲಸ ಮಾಡುವಾಗ, ವಾಹನ ಚಲಾಯಿಸುವಾಗ, ಏರುವಾಗ, ಇಳಿಯುವಾಗ, ನಡೆಯುವಾಗ, ಓಡುವಾಗ, ತಿನ್ನುವಾಗ....... ಹೀಗೆ ಎಲ್ಲ ಸಂದರ್ಭಗಳಲ್ಲೂ ದೇಹದ ಬಗ್ಗೆ ಕಾಳಜಿ ಅತ್ಯಗತ್ಯ. ಮಾತನಾಡುವಾಗ ಆಗುವ ಪ್ರಮಾದಗಳಿಂದಲೂ ದೇಹಕ್ಕೆ ಅಪತ್ತು ಬಾರದಂತೆ ಎಚ್ಚರಿಕೆಯಿರಲೇ ಬೇಕು.
ನಮ್ಮ ಬಗ್ಗೆ ನಮಗಿರುವ ಕಾಳಜಿಯಂತೆ ನಾವಿರುವ ಪರಿಸರದ ಬಗ್ಗೆಯೂ ನಮಗೆ ಕಾಳಜಿ ಬೇಕೇ ಬೇಕು. ಸುಂದರ ಮತ್ತು ಸ್ವಚ್ಛ ಪರಿಸರವೇ ನಮಗೆ ಬದುಕು. ಪರಿಸರದ ಬಗ್ಗೆ ನಮಗೆ ಕಾಳಜಿಯಿದೆಯೇ ಎಂದು ಪ್ರಶ್ನಿಸಿದರೆ, “ಹೌದು” ಎಂಬ ನಾಲಿಗೆಯಿಂದ ಹೊರಳುತ್ತದೆ, ಹೃದಯದೊಳಗೆ “ಇಲ್ಲ” ಎಂಬ ಉತ್ತರವೇ ಧ್ವನಿಸುತ್ತಿದೆ. ನಾವು ಬದಲಾಗಲೇ ಬೇಕು, ಪರಿಸರದ ಬಗ್ಗೆ ವಿಶೇಷ ಕಾಳಜಿ ಹೊಂದಿರಲೇ ಬೇಕು. ನೀರು, ಮಣ್ಣು, ಗಾಳಿ, ಮರಗಿಡ, ಮೃಗ ಪಕ್ಷಿಗಳೆಲ್ಲವೂ ನಮ್ಮ ಪೂರ್ವಜರ ಕಾಲದಲ್ಲಿದ್ದಂತೆ ಶಾಂತವಾಗಿಲ್ಲ. ನೆಮ್ಮದಿಯಿಂದಿಲ್ಲ. ಹಿರಿಯರು ಪರಿಸರದ ಬಗ್ಗೆ ಹೊಂದಿದ್ದ ಕಾಳಜಿ ನಮ್ಮಲ್ಲಿ ಉಳಿದಿಲ್ಲ. ಅದರಿಂದಾಗಿ ಹೊಚ್ಚ ಹೊಸ ಬಗೆಯ ರೋಗಗಳು ನಮ್ಮನ್ನು ನರಳಿಸುತ್ತಿವೆ. ಪರಿಸರವೇ ರೋಗಮೂಲವಾಗಿದೆ. ಪೇಟೆಯಿಂದ ಮಾವು, ಕಿತ್ತಳೆ, ಬಾಳೆ, ಪಪ್ಪಾಯಿ, ಕಲ್ಲಂಗಡಿ ಮೊದಲಾದ ಯಾವುದೇ ವಿಧದ ಹಣ್ಣುಗಳನ್ನು ತಂದು ತಿಂದರೂ ಅವು ಪುಷ್ಟಿ ನೀಡದೆ ದೇಹದಲ್ಲಿ ಅನಾರೋಗ್ಯದ ವೃಷ್ಟಿಯನ್ನುಂಟು ಮಾಡುತ್ತಿವೆ. ಜನರ ಆರೋಗ್ಯದ ಬಗ್ಗೆ ಕಾಳಜಿಯಿರುವವರು ಆಹಾರವನ್ನು ವಿಷಮಯಗೊಳಿಸುವುದಿಲ್ಲ. ಆಹಾರವನ್ನು ವಿಷಮಯಗೊಳಿಸಿ ಲಾಭ ಗಳಿಸಲೆತ್ನಿಸುವವರು ಪಾಪದ ಹೊರೆಯೊಂದಿಗೆ ಭವಿಷ್ಯದಲ್ಲಿ ನರಳಲಿದ್ದಾರೆ.
ನಾವು ಪ್ರತಿಯೋದು ವಿಚಾರದಲ್ಲೂ ಕಾಳಜಿಯುಳ್ಳವರಾಗಬೇಕು. ನಮ್ಮ ಆಹಾರ, ಉದ್ಯೋಗ, ಕೃಷಿ, ದೇಹ, ದೇಶ, ಪ್ರಾಣಿ ಪಕ್ಷಿಗಳು, ಮನೆ ಮಂದಿ, ಸಮುದಾಯ.... ಹೀಗೆ ಎಲ್ಲದರಲ್ಲೂ ಕಾಳಜಿಯನ್ನು ಹೊಂದಿದರೆ ಬದುಕು ಸುಭಿಕ್ಷವಾಗುತ್ತದೆ.
........ರಮೇಶ ಎಂ. ಬಾಯಾರು ಎಂ.ಎ, ಬಿಎಡ್
ರಾಜ್ಯಪ್ರಶಸ್ತಿ ಪುರಸ್ಕೃತ ನಿವೃತ್ತ ಅಧ್ಯಾಪಕರು
“ಸ್ಕಂದ” ಕುಳ ಗ್ರಾಮ
ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
ಮೊಬೈಲ್ ಸಂಖ್ಯೆ : +91 94486 26093
rameshbayar@gmail.com
********************************************