-->
ಸವಿಜೇನು : ಸಂಚಿಕೆ - 11

ಸವಿಜೇನು : ಸಂಚಿಕೆ - 11

ಸವಿಜೇನು : ಸಂಚಿಕೆ - 11
ಲೇಖಕರು: ನಾಗೇಂದ್ರ ಬಂಜಗೆರೆ, ಶಿಕ್ಷಕರು 
ಸರಕಾರಿ ಹಿರಿಯ ಪ್ರಾಥಮಿಕ ಶಾಲೆ, ಮಿಂಚೇರಿ
ಬಳ್ಳಾರಿ ತಾಲೂಕು ಮತ್ತು ಜಿಲ್ಲೆ
Mob : +91 99029 12684

      ಈ ಪ್ರಕೃತಿಯಲ್ಲಿ ಅತ್ಯಂತ ಸಣ್ಣ ಜೀವಿ ತನ್ನದೇ ಆದ ಪ್ರಮುಖ ಪಾತ್ರ ವಹಿಸುತ್ತದೆ. ಎಷ್ಟೋ ಬಾರಿ ಪ್ರಕೃತಿಯನ್ನು ಸಮತೋಲನ ಮಾಡುವಲ್ಲಿ ಬಹಳ ಪ್ರಧಾನ ಪಾತ್ರವನ್ನೇ ವಹಿಸುವ ಜೇನುಹುಳುಗಳ ಪಾತ್ರ ನಿಸರ್ಗದಲ್ಲಿ ಬಹಳ ದೊಡ್ಡದು. ಆ ಜೇನಿನ ಸುತ್ತ ಕಲಿತ ಪಾಠಗಳ, ಥ್ರಿಲ್ಲಿಂಗ್ ಅನುಭವಗಳ, ನೀವು ಕಂಡಿರದ ಕೇಳಿರದ ಅಗತ್ಯವಾಗಿ ತಿಳಿಯಲೇ ಬೇಕಾದ ಮಾಹಿತಿಯುತ 'ಸವಿಜೇನು' ಎಂಬ ವಿಶೇಷ ಶೀರ್ಷಿಕೆಯಡಿಯಲ್ಲಿ ವಿಸ್ತಾರವಾದ ಬರಹ ಸರಣಿಗಳನ್ನು ನೀವೂ ಓದಿ ಆನಂದಿಸಿ... ನಾಗೇಂದ್ರ ಬಂಜಗೆರೆ, ಶಿಕ್ಷಕರು ಮತ್ತು ಬರಹಗಾರರು.

               

ರಾಜಾಪುರ ಎನ್ನುವುದೊಂದು ಊರು. ಭಾರತ ದೇಶದಲ್ಲೇ ಅತ್ಯುತ್ತಮ ಮ್ಯಾಗ್ನಟೈಟ್ ಕಬ್ಬಿಣದ ಅದಿರು ಇರುವ ಕಲ್ಲು ಬಂಡೆಗಳ ಬೆಟ್ಟ ಗುಡ್ಡಗಾಡುಗಳಲ್ಲಿ ಕರಡಿ ಚಿರತೆಗಳು ಇರುವ ಪ್ರದೇಶ. ನಾನು ಅಲ್ಲಿ ನನ್ನ ಸರ್ಕಾರಿ ಸೇವೆ ಮಾಡುತ್ತಿದ್ದಾಗ 2011 ರಲ್ಲಿ ಜನಗಣತಿ ಮಾಡಲು ಜನವಸತಿಗೆ ತೆರಳಿದ್ದೆ. ಸುಮಾರು 10-11 ಗಂಟೆಯ ಸಮಯ. ಏಪ್ರಿಲ್ ತಿಂಗಳಾಗಿದ್ದರಿಂದ ಬಳ್ಳಾರಿ ಬಿಸಿಲ ಪ್ರತಾಪ ಕೇಳಬೇಕೆ??? ಸೂರ್ಯನ ಶಿಕಾರಿ ನೆತ್ತಿಗೇರಿ ಒಂದೇ ಸಮನೆ ಸುಡುತ್ತಿದ್ದುದರಿಂದ ಕಿರಿ ಕಿರಿಯಾಗಿ ತಂಪು ಹೊತ್ತಿನಲ್ಲಿ ಗಣತಿ ಮಾಡಿದರಾಯಿತು ಎಂದು ಮನೆಗೆ ಹಿಂತಿರುಗಲೆಂದು Census ಕಾಗದ ಪತ್ರ ಹಿಡಿದು ತೆರಳುತ್ತಿದ್ದೆ. ಹೋಗುತ್ತಿದ್ದಾಗ ಸುಮಾರು ನಲವತ್ತು ಐವತ್ತು ವರ್ಷದ ಜಮೀನ್ದಾರರ ಹಳೆಯ ಕಲ್ಲಿನ ಮನೆಯೊಂದನ್ನು ಅದೇ ಊರಿನ ಕೂಲಿ ಆಳುಗಳು ಕೆಡವುತ್ತಿದ್ದರು. ಮನೆ ಕೆಡವುವಾಗ ಅದೊಂದು ತರಹದ ವಾಸನೆ. ಸುಮಾರು ದೂರದವರೆಗೆ ಆ ಮುಗ್ಗಲು ವಾಸನೆ ಹರಡಿತ್ತು..

ಆ ಕೆಡವುತ್ತಿದ್ದ ಮನೆಯು ಮಾಳಿಗೆ ಮನೆಯಾಗಿತ್ತು. ಆ ಕಾಲದಲ್ಲಿ ಈಚಲ /ತಾಳೆಯ ಮರಗಳನ್ನು ಅರ್ಧಕ್ಕೆ ಸೀಳಿ ಅವುಗಳನ್ನು ಹೊಂದಿಸಿ ಮೇಲೆ ಬೇರೆ ಬೇರೆ ಮಣ್ಣನ್ನು ಮಿಶ್ರಣ ಮಾಡಿ ವಿಶೇಷ ಹದ ಮಾಡಿ ಕಲೆಸಿ ಹಾಕಿದ 'ಮಿದ್ದಿಮಣ್ಣು' ಹಾಕಿರುತ್ತಿದ್ದರು. ಇದನ್ನು ಜಂತಿ ಮನೆ, ಮಾಳಿಗೆ ಮನೆ, ಮಿದ್ದಿ ಮನೆ ಎಂದು ಕರೆಯಲಾಗುತ್ತದೆ. ಅದೆಷ್ಟೊ ಜನಗಳ ಅದೆಷ್ಟೋ ದಿನಗಳ ಬದುಕಿಗೆ ಆಸರೆಯಾಗಿದ್ದ ಈ ಮನೆಯ ಧೂಳು, ಮಣ್ಣು, ಕಲ್ಲು, ಜಂತಿಗಳು, ಸುಣ್ಣದಗೋಡೆ, ಹೊಗೆ ಸುತ್ತಿಕೊಂಡು ಕರ್ರಗಾಗಿದ್ದ ಮನೆಯಲ್ಲಿರುವ ಎಲ್ಲಾ ಕಾಗದ ಬಟ್ಟೆಗಳಂತಹ ವಸ್ತುಗಳ ಚಿತ್ರಣ ಹೇಗಿತ್ತೆಂದರೇ ಸಾರು ಮಾಡಿ ಒಗ್ಗರಣೆ ಹಾಕಿದಾಗ ಸಾರಿನಲ್ಲಿ ಬಳಸಿದ ಮುಖ್ಯಪದಾರ್ಥದ flavour, ಸಾಸಿವೆ, ಜೀರಿಗೆ ಈರುಳ್ಳಿ ಬೆಳ್ಳುಳ್ಳಿ ಕರಿಬೇವು ಎಲ್ಲವೂ ಮಿಕ್ಸ್ ಆಗಿ ultimate ಆಗಿ ಒಂದು ವಿಭಿನ್ನ ವಿಶೇಷವಾಗಿ ಒಮ್ಮೆ ಸುವಾಸಿತ ವಾಸನೆ ಬರುತ್ತದೆಯಲ್ಲಾ ?? ಆ ರೀತಿಯಾಗಿ ಅಲ್ಲಿ ಬರುತ್ತಿದ್ದ ವಾಸನೆ ಇಡೀ ಅಗಾಧ ಮಾನವ ಬದುಕಿನ ಏರಿಳಿತಗಳ ಚಿತ್ರಣವನ್ನು ವಾಸನೆಯಲ್ಲಿ ತೋರಿಸುವಂತಿತ್ತು!. ಇದೊಂದು ಮಾನವ ನಾಗರೀಕತೆಯ ವಾಸನೆ ಎಂತಲೇ ಹೇಳಬಹುದು.

ಅಂದು ಆ ಮನೆಯನ್ನು ಕೆಡವುವಾಗ ಸೊಳ್ಳೆಗಾತ್ರಕ್ಕಿಂತ ತುಸುವೇ ಹಿರಿಯ ನೂರಾರು ಹುಳುಗಳು ಗುಂಪುಕಟ್ಟಿ ಬಿಸಿಲಲ್ಲೂ ಹಾರಾಡುತ್ತಿದ್ದವು. ಹತ್ತಿರ ಹೋಗಿ ನೋಡುತ್ತಾ "ಬಾಂಡ್ರಪ್ಪ... ಅವು ನೊಣಗಳಾ ... ಸೊಳ್ಳೆಗಳಾ..?? ಎಂದು ಕೇಳಿದೆ. "ಅವು ನೊಣಗಳಂತಾವೇ ಸಾ.. ಅವು ಬಿಸಿಲು ಕಾಲದಲ್ಲಿ ಇಂತ ಗೋಡೆ, ಕಲ್ಲಿನ ಸಂದುಗಳಲ್ಲಿ ಸೇರಿಕೊಂಡಿರುತ್ತಾವೆ" ಎಂದು ಹೇಳಿದರೆ ಇನ್ನೊಬ್ಬ ಹಿರಿಯ ಕೆಲಸಗಾರ ರಾಮಜ್ಜ "ಅದೊಂದು ತರ ಜೇನು ಮೇಷ್ಟ್ರೇ.." ಎಂದು ಹೇಳಿದ. ಒಂದು ಕ್ಷಣ ನಮ್ಮ ಮೂವರಲ್ಲೇ ಚರ್ಚೆಯಾಗಿ ಅಂತಿಮವಾಗಿ ರಾಮಜ್ಜ "ತಡ್ಕ ಮೇಷ್ಟ್ರೇ.. ತೋರಿಸ್ತಿನಿ ಇಲ್ಲೊಂದೈತೆ....." ಎಂದು ತಲೆಗೆ ಟವೆಲ್ ಬಿಗಿ ಮಾಡಿಕೊಂಡು ಬೇರೆ ಜಾಗದಲ್ಲಿ ಹಾರೆಯಿಂದ ಕಲ್ಲನ್ನು ಮೀಟಿ ಕಲ್ಲನ್ನು ಕೆಡವಲು ಶುರುಮಾಡಿದ. ಬೇಸಿಗೆಯ ಬಿಸಿಲು ಚುರ್.. ಎನ್ನುತ್ತಿತ್ತು... ಬೆನ್ನಿನಲ್ಲಿ ಜುಳು ಜುಳು ಬೆವರು ಇಳಿಯುತ್ತಿದ್ದರೂ ನನ್ನದೇ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ನಿಂತುಕೊಂಡೆ. ಐದಾರು ಸಾಧಾರಣ ಗಾತ್ರದ ಕಲ್ಲುಗಳನ್ನು ಕೆಡವಿದ ಮೇಲೆ ಒಂದು ಸಂದಿಯಲ್ಲಿ ಒಂದು ಕಡ್ಡಿ ಹಿಡಿದು ಮಣ್ಣನ್ನು ಕೆರೆದ.. "ಮೇಷ್ಟ್ರೇ ಇಲ್ನೋಡಿ... ಎಂದು ಹೇಳುತ್ತಾ... ನೂರಿನ್ನೂರು ಸಣ್ಣ ಸಣ್ಣ ನೊಣದಂತಹ ಹುಳುಗಳನ್ನು ಎಬ್ಬಿಸಿದ.. ಹುಳಗಳನ್ನು ಎಬ್ಬಿಸಿ ಮಣ್ಣನ್ನು ಸರಿಸಿ ನೋಡಿದರೆ ಒಂದು ಹಿಡಿ ಗಾತ್ರದ ಚಿಕ್ಕ ಚಿಕ್ಕ ಜರಡಿಯಂತೆ ರಂದ್ರಗಳಿದ್ದ ಕಪ್ಪಾದ ಒಂದು ಪದಾರ್ಥ ಸಿಕ್ಕಿತು. ಆ ರಾಮಜ್ಜ ಅದನ್ನು ತೋರಿಸಿ "ಇದೇ ಮೇಷ್ಟೇ ಜೇನು... ಏ.. ನೋಡಲೇ ಬಾಂಡ್ರ..." ಎಂದು ಬಾಂಡ್ರಪ್ಪನ ಮುಖದ ಹತ್ತಿರ ಹಿಡಿದ.. ಇದೇ ಆ ಮಿಸುರಿ ಜೇನು.. ಜೇನುಗಳನ್ನು ಭೂಮಿಯಾದ್ಯಂತ ಅಂಟಾರ್ಕ್ಟಿಕ ಹೊರತುಪಡಿಸಿ ಎಲ್ಲಾಕಡೆಯೂ ಕಂಡು ಬರುತ್ತಾವೆ. ಅಂದ ಹಾಗೆ ಈ ಪ್ರಕೃತಿಯ ಅದ್ಬುತ ಕೀಟವಾದ ಜೇನಿನ ಪ್ರಕಾರಗಳ ಬಗ್ಗೆ ತಿಳಿಯಬೇಕಿದೆ. ನಾನು ಕಂಡಂತೆ ಜೇನು ಹುಳಗಳಲ್ಲಿ ಅನೇಕ ಪ್ರಕಾರಗಳಿವೆ. ಅವುಗಳನ್ನು ನನ್ನ ಅನುಭವದ ನೆಲೆಯಲ್ಲಿ ನೋಡುವುದಾದರೆ.....

◾ಮಿಸುರಿ (ಸೊಳ್ಳೆ) ಜೇನು
◾ಕಿರು ಜೇನು/ಪಿಟ್ ಜೇನು
◾ಕೋಲುಜೇನು
◾ಹೆಜ್ಜೇನು
◾ಮಿಸುರಿ (ಸೊಳ್ಳೆ) ಜೇನು

ಹೆಸರೇ ಹೇಳುವಂತೆ ಸೊಳ್ಳೆಗಳ ಗಾತ್ರಕ್ಕಿಂತ ತುಸು ದಪ್ಪಕಿದ್ದು ಇವು ಸಾಮಾನ್ಯವಾಗಿ ಹಳೆಯ ಕಲ್ಲಿನ ಗೋಡೆಗಳ ಸಂದುಗಳಲ್ಲಿ, ಕೆಲವು ವಿಶೇಷ ಬೆಟ್ಟಗುಡ್ಡಗಳಲ್ಲಿ ಪೆಳಕೆ- ಪಕಳೆಯಂತ (ಚಕ್ಕೆ-ಪದರದಂತಹ) ಶಿಲಾ ರಚನೆಗಳಲ್ಲಿ ಗೂಡುಕಟ್ಟುತ್ತಾವೆ. ಇವು ಸಂಖ್ಯಾ ದೃಷ್ಟಿಯಿಂದ ಕಡಿಮೆಯ ಸಂಖ್ಯೆ ಇದ್ದು ಬೇಕರಿಯ ಚೌಕಾಕಾರದ ಒಂದೋ ಎರಡೋ slice ಬ್ರೆಡ್ ನ್ನು ನಿಧಾನವಾಗಿ ಮಿದುಕೆ ಮಾಡಿದರೆ ಯಾವ ಆಕಾರ ಪಡೆಯಬಹುದೋ ಆ ರೀತಿಯಾಗಿ ಅವು ಗೂಡು ಕಟ್ಟಿದ ಸ್ಥಳದ ಆಕಾರಕ್ಕನುಗುಣವಾಗಿ ಕಟ್ಟುತ್ತವೆ. ಆ ಗೂಡಿನಲ್ಲಿ ಹದಿನೈದು ಇಪ್ಪತ್ತು ಶೈಶವಾವಸ್ಥೆಯ ಕೋಶಗಳು, ಮೇಲಿನ ಕೆಲವು ಕೋಶಗಳಲ್ಲಿ ನೀರಿನ ಹನಿಯಂತ ತುಪ್ಪವೂ ಕಂಡು ಬಂತು. ಕೈಯಲ್ಲಿ ಹಿಚುಕಿಹಾಕಿದರೂ ಕಚ್ಚದೇ ಇರುವ ಅಮಾಯಕ ಪಾಪಿ ನೋಣಗಳಿವು. ಇವು ಇತರ ಜೇನುಗಳಂತೆ ಸಾವಿರಾರು ಸಂಖ್ಯೆಯಲ್ಲಿರದೇ ಇವುಗಳ ಕುಟುಂಬದಲ್ಲಿ ಸದಸ್ಯ ಹುಳುಗಳೇ ಕಡಿಮೆ ಸಂಖ್ಯೆಯಲ್ಲಿ ಇರುತ್ತಾವೆ. ನಿಸರ್ಗದಲ್ಲಿ ಈ ಪ್ರಭೇದದ ಹುಳುಗಳು ಬಹಳ ಕಡಿಮೆ ಪ್ರಮಾಣದಲ್ಲಿ ಇದ್ದಾವೆ. ಅರಣ್ಯಗಳಿಲ್ಲದೇ ಕಾಡು ಪ್ರಾಣಿಗಳು ಇರಲು ಹೇಗೆ ಸಾದ್ಯವಿಲ್ಲವೋ ಹಾಗೆ ಕೆಲವು ಕ್ರಿಮಿ ಕೀಟ ಜೀವಿಗಳಿಗೆ ಅವುಗಳ ನೈಸರ್ಗಿಕ ಆವಾಸಸ್ಥಾನಗಳಿಗೆ ಧಕ್ಕೆ ಬಂದಿದ್ದರಿಂದ ಉಳಿದಿರುವ ಅನೇಕ ಜೀವ ಸಂಕುಲವೇ ಇಂದು ಅಪಾಯದ ಅಂಚಿನಲ್ಲಿರುವ ಜೀವಿಗಳಾಗಿವೆ. ಇನ್ನೂ ಕೆಲವು ಜೀವಸಂಕುಲ ಈಗಾಗಲೇ ನಾಮಾವಶೇಷವಾಗಿ ಉಳಿದುಕೊಂಡಿರುವುದು ನಿಮಗೆಲ್ಲಾ ಗೊತ್ತಿರುವ ಸಂಗತಿಯೇ.. ಈ ಹುಳುಗಳು ಬಹಳ ಪ್ರಮಾಣದಲ್ಲಿ ಇರ ಬೇಕಿತ್ತು. ಸಾಮಾನ್ಯವಾಗಿ ಇದನ್ನು ತಿನ್ನುವ ಅಭ್ಯಾಸ ಕಡಿಮೆ ಇರುವುದರಿಂದ ಇವುಗಳ ಪರಿಚಯ ಬಹಳ ಜನಗಳಿಗೆ ಇಲ್ಲ. ಅಲ್ಲದೇ ಜನರ ಕೈಗೆ ಅಷ್ಟು ಸುಲಭವಾಗಿ ಸಿಗದೇ ಇರುವುದು ಮತ್ತೊಂದು ಕಾರಣ. ಮಾನವನ ಪ್ರತ್ಯಕ್ಷ ಕ್ರೌರ್ಯಕ್ಕೆ ಇವು ಒಳಗಾಗಿಲ್ಲ. ನಿಸರ್ಗದಲ್ಲಿ ಸೂಕ್ಷ್ಮವಾಗಿ ಅವಲೋಕಿಸಿದರೆ single single ಹುಳುಗಳು ಅನೇಕ ತೆರನಾದ ಹೂಗಳ ಮೇಲೆ ಅಲ್ಲಲ್ಲಿ ಕಾಣಬಹುದಾದರೂ ಇವೇ 'ಮಿಸುರಿ ಜೇನು' ಹುಳು ಎಂದು ಗುರುತಿಸುವ ಬುದ್ಧಿವಂತರು ನಮ್ಮಲ್ಲಿ ತೀರಾ ಕಡಿಮೆ. ಯಾವುದೋ ನೊಣ ಎಂದಷ್ಟೇ ನಾವು ಭಾವಿಸಿ ಸುಮ್ಮನಾಗುತ್ತೇವೆ. ಅಪರೂಪಕ್ಕೆ ಈ ಮಿಸುರಿ ಜೇನನ್ನು ಸಾಕುವವರೂ ಇದ್ದಾರೆ. ಔಷಧೀಯವಾಗಿ ಇದರ ತುಪ್ಪ ಮತ್ತು ಮಕರಂಧಕ್ಕೆ ವಿಶೇಷವಾದ ಬೇಡಿಕೆ ಇದೆ. ಆದರೆ ಇಂದಿನ ಆಧುನಿಕ ವೈದ್ಯಕೀಯ ವ್ಯಾಪಕ ದಂಧೆಯ ಬಲೆಯ ನಡುವೆ ಇವುಗಳನ್ನು ಕೊಳ್ಳುವವರಾಗಲೀ, ಇವುಗಳ ಮಹತ್ವ ಬಲ್ಲವರಾಗಲಿ, ಪೋಷಿಸುವವರಾಗಲಿ ಇಲ್ಲ. ಅಲ್ಲದೇ ಈ ಹುಳಗಳ ಸಂತಾನ ಇತರೆ ಜೇ‌ನುಹುಳುಗಳಂತೆ ಅಪರಿಮಿತವಾಗಿ ಇಲ್ಲ. ಇವು ಹತ್ತಾರು ವರ್ಷಗಳಿಂದ ಒಂದೇ ಜಾಗದಲ್ಲೇ ಇದ್ದು ಅಲ್ಲಿಯೇ ವಾಸಮಾಡುತ್ತಿರುತ್ತಾವೆ. ಅಥವಾ ಇವುಗಳ ಜೀವೀತಾವಧಿ ಬಹಳ ಕಡಿಮೆ ಇರಬಹುದು. ಆದ್ದರಿಂದಲೇ ಸುಮಾರು ವರ್ಷಗಳ ಕಾಲ ನಾನು ವೀಕ್ಷಣೆ ಮಾಡಿರುವುದರಿಂದ ಇವು ಗಣನೀಯ ಪ್ರಮಾಣದಲ್ಲಿ ಹೆಚ್ಚಾಗಿದ್ದುದನ್ನು ಕಂಡಿಲ್ಲ. ಆದ್ದರಿಂದಲೇ ಇವು ಹೇರಳವಾಗಿ ಕಂಡು ಬರದೇ ಬಹಳ ವೀರಳವಾಗಿ ಅಲ್ಲಲ್ಲಿ ಕಂಡುಬರುತ್ತಾವೆ.

◾ಕಿರುಜೇನು/ಪಿಟ್ ಜೇನು : 
ಹೆಸರೇ ಹೇಳುವಂತೆ ಹುಳುಗಳು ಮಾಮೂಲಿ ಜೇನುಹುಳುಗಳ ಗಾತ್ರದಲ್ಲೇ ಇದ್ದು ಇವು ನೇತಾಡುವ ಗಿಡ ಪೊದೆ ಬಳ್ಳಿ ಗೋಡೆ ಸಂದು ಪೈಪ್ ಟ್ಯಾಂಕ್ ಹೀಗೆ ಎಲ್ಲಿ ಬೇಕಾದರೂ ಗೂಡು ಕಟ್ಟುವ ಇವು ಹುಳುಗಳು ಅಂದಾಜು ಇನ್ನೂರು ಮುನ್ನೂರರಿಂದ ಎಂಟುನೂರು ಸಾವಿರದ ವರೆಗೆ ಇರಬಹುದು. ಇದು ಒಂಥರಾ ವಿಭಕ್ತ ಕುಟುಂಬದಂತಿದ್ದು ಸಂತಾನೋತ್ಪತ್ತಿ ಕಾರ್ಯಕ್ಕಾಗಿಯೇ ಶ್ರದ್ಧೆಯಿಂದ ಕುಟುಂಬವನ್ನು ಕಾಪಿಟ್ಟು ನೋಡಿಕೊಳ್ಳುತ್ತವೆ. ಉಷ್ಣವಲಯದ ಎಲ್ಲಾ ಭಾಗದಲ್ಲೂ ಕಂಡು ಬರುವ ಇವು ಕೋಲು ಜೇನಿನಂತೆಯೇ ಇದರ ತುಪ್ಪವು ಇರುತ್ತದೆ. ಒಂದೇ ವ್ಯತ್ಯಾಸ ಮಿತ ಕುಟುಂಬ ಸದಸ್ಯರು ಮತ್ತು ಜೇನು ಗೂಡು ಕಟ್ಟವಾಗ ಅವಿರಬಹುದಾದ ಒಟ್ಟಾರೆ ತೂಕದ ಪ್ರಮಾಣವನ್ನು ಹೊರಬಹುದಾದ ಸಣ್ಣ ಕಡ್ಡಿಗಳಿಗೆ ಗೂಡನ್ನು ಕಟ್ಟುತ್ತಾವೆ. ಬಹುಶಃ ಇವೇ ಕುಟುಂಬಗಳಿಗೆ ಉತ್ತಮ ಸಂತಾನೋತ್ಪತ್ತಿ ಕಾರ್ಯ ಮಾಡಿ ಪೋಷಣೆ ಮಾಡಿಕೊಂಡು ಬಂದರೆ ಸದಸ್ಯರು ಹೆಚ್ಚಿ ಇದೇ ಕೋಲುಜೇನಾಗುತ್ತದೆ. ಇನ್ನೂ ಕೆಲವೊಮ್ಮೆ ಕೋಲು ಜೇನುಗಳಲ್ಲಿ ವಿಭಜನೆಯಾಗಿ ಕೆಲವೊಮ್ಮೆ ಒಂದು ಗುಂಪಿಗೆ ಹೆಚ್ಚು ಹುಳುಗಳು ಬೇರ್ಪಟ್ಟು ಇನ್ನೊಂದು ಗುಂಪಿನಲ್ಲಿ ಉಳಿಯುವ ಕಡಿಮೆ ಪ್ರಮಾಣದ ಹುಳುಗಳೇ ಈ ಪಿಟ್ ಜೇನು ಎಂದು ನನ್ನ ಅನಿಸಿಕೆ.. ಆದರೆ ಮೂಲತಃ ಕಿರುಜೇನು ಕಚ್ಚುವುದಿಲ್ಲ. ಸ್ವಲ್ಪಮಟ್ಟಿಗೆ ಪ್ರತಿರೋಧ ತೋರಿಸುತ್ತವೆ. ಇದರಲ್ಲಿ ತುಪ್ಪ ಗರಿಷ್ಠ ಇನ್ನೂರು ಗ್ರಾಂ ವರೆಗೂ ಸಿಗುತ್ತದೆ. ಈ ಕಿರುಜೇನುಗಳ ಸರಾಸರಿ ಸಂಖ್ಯೆಯಲ್ಲಿ ಕಡಿಮೆಯೇ ಎಂದು ಹೇಳಬಹುದು. ಇದರಿಂದ ಕೆಲವೊಮ್ಮೆ ಬಹಳ ಕಡಿಮೆ ಪ್ರಮಾಣದ ತುಪ್ಪ ಲಭ್ಯವಿರುವ ಕಾರಣ ಜೇನು ತೆಗೆಯಲು ಕಡಿಮೆ ಅಸಕ್ತಿ ತೋರಿ ಉಳಿದುಕೊಳ್ಳುವ ಸಾಧ್ಯತೆ ಅಧಿಕವಾಗಿರುತ್ತದೆ.

◾ಕೋಲುಜೇನು :
ಕೋಲಿನಂತಹ ಉದ್ದನೆಯ ಕಾಂಡಕ್ಕೆ ಗೂಡುಕಟ್ಟಿ ಒಂದು ಗೇಣಿನಿಂದ ಎರಡು ಅಡಿಯಷ್ಟು ಅಗಲ ಕೋಲಿನ ಬೆಂಬಲದಿ ಗೂಡುಕಟ್ಟವವೇ ಕೋಲುಜೇನು. ಇವು ನಮ್ಮ ಉಷ್ಣವಲಯದ ಎಲ್ಲಾ ರೀತಿಯ ಅರಣ್ಯ ಪ್ರಕಾರಗಳಲ್ಲಿ ಹೆಚ್ಚು ಕಂಡು ಬರುವ ಹುಳುಗಳೇ ಈ ಕೋಲು ಜೇನು. ಈ ಕೋಲು ಜೇನುಗಳಲ್ಲಿ ಸುಮಾರು ಎರಡುಸಾವಿರ ಹುಳುಗಳಿಂದ ಎಂಟತ್ತು ಸಾವಿರ ಹುಳುಗಳವರೆಗೆ ಕಂಡು ಬರುತ್ತಾವೆ. ಇವು ಸಾಧಾರಣ ಅಕ್ರಮಣಕಾರಿ ಆಗಿದ್ದು ಸಂತಾನೋತ್ಪತ್ತಿ ಕಾರ್ಯವೇ ಪ್ರಧಾನವಾಗಿರಿಸಿ ಸಾಂಘಿಕವಾಗಿ ಒಟ್ಟುಗೂಡಿ ಕುಟುಂಬದ ಹಾರೈಕೆ ಲಾಲನೆ ಪಾಲನೆ ರಕ್ಷಣೆ ಮಾಡಿಕೊಳ್ಳುತ್ತಾವೆ. ಅವರವರ ನಿಗದಿತ ಜವಾಬ್ದಾರಿಗಳನ್ನು ಚಾಚೂ ತಪ್ಪದೇ ಜೇನು ತರುವುದು, ಗೂಡುಕಟ್ಟುವಂತಹ ಕೆಲಸಗಳನ್ನು ಶಿಸ್ತಿನಿಂದ ಮಾಡುತ್ತವೆ. ಮಿಸುರಿ ಜೇನು ಕಿರು ಜೇನುಗಳಿಗಿಂತ ಕನಿಷ್ಠ ಹತ್ತು ಪಟ್ಟು ಅಧಿಕ ತುಪ್ಪ ಸಿಗುತ್ತದೆ. ಕೋಲುಜೇನು ಗಳು ಸಾಮಾನ್ಯವಾಗಿ ತಲೆಭಾಗದಲ್ಲಿ ತುಪ್ಪ, ನಂತರ ಮಕರಂಧ, ನಂತರ ಅವುಗಳ ಸಂತಾನೋತ್ಪತ್ತಿಗಾಗಿ ಕೋಶಗಳನ್ನು ಮಾಡುತ್ತವೆ. ಸಂತಾನ ಹೊರಬಂದಂತೆಲ್ಲಾ ತುಪ್ಪ ಖಾಲಿಯಾಗುತ್ತದೆ. ಖಾಲಿಯಾದ ಕೋಶದಲ್ಲಿ ಪುನಃ ಮೊಟ್ಟೆಗಳನ್ನು ಇಟ್ಟು ಮರಿಯಾಗುತ್ತವೆ. ಹೀಗೆ ಸಂತಾನ ಚಕ್ರ ಸಾಗುತ್ತದೆ. ಆದರೆ ಇವುಗಳಲ್ಲಿ ಸಂತಾನೋತ್ಪತ್ತಿಯ ಪ್ರಮಾಣವೂ ಅಧಿಕವಾಗಿರುತ್ತದೆ. ಅವಿಭಕ್ತ ಕುಟುಂಬದಂತೆ ಸಾವಿರಾರು ಸಂಖ್ಯೆಯಲ್ಲಿ ಇರುವ ಹುಳುಗಳು ಗರಿಷ್ಠ ಸಂಖ್ಯೆಯಾದಾಗ ಪರಸ್ಪರ ಸಂವಹನ ಮಾಡುವ ಮೂಲಕ ಪ್ರತ್ಯೇಕ ಕುಟುಂಬವಾಗಿ ಬೇರ್ಪಡುತ್ತವೆ. ಈ ಬೇರ್ಪಡುವಾಗ ಅನುಪಾತ ಸಮನಾಗಿ ಆಗದೇ ಹೆಚ್ಚುಕಡಿಮೆ ಆಗುತ್ತಿರುತ್ತದೆ. ಈ ಬೇರ್ಪಡುವ ಘಟನೆಗಳನ್ನು ನಾನು ಪ್ರತ್ಯಕ್ಷವಾಗಿ ಸಾಕಷ್ಟು ಪ್ರಕರಣಗಳಿಗೆ ಸಾಕ್ಷಿಯಾಗಿದ್ದೇನೆ. ಮನುಷ್ಯರು ಇತರ ಪ್ರಾಣಿಗಳು ಬೇರ್ಪಡುವಾಗ ಆಗುವ ಮಾನಸಿಕ, ಹಿಂಸೆ ಕ್ರೂರತ್ವ ಈ ಕೀಟಗಳಲ್ಲಿ ನಾನೆಂದು ಕಂಡಿಲ್ಲ.. ಅದಕ್ಕೆ ಬಹುಶಃ ಹೇಳುವುದು ಜೇನಿನಗೂಡಿನಂತೆ ಒಗ್ಗಟ್ಟಿನಿಂದ ಬಾಳಬೇಕೆಂದು... ಇದು ವಾಸ್ತವ ಕೂಡ ಹೌದು.

ಮಾನವನ ಅತ್ಯಂತ ಕ್ರೌರ್ಯ ಕ್ಕೆ ಒಳಗಾಗಿರುವ ಸಂತತಿ ಎಂದರೇ ಈ ಕೋಲುಜೇನು. ಸಾವಿರಾರು ವರ್ಷಗಳಿಂದಲೂ ಇವುಗಳ ಜೀವನ ಹೋರಾಟದಲ್ಲೇ ಬಂದಿವೆ. ಮನುಷ್ಯನ ಆಹಾರಕ್ಕಾಗಿ ನಾಶಮಾಡುತ್ತಾ ಬಂದಿದ್ದಾನೆ. ಬರೀ ಮನುಷ್ಯನಲ್ಲದೇ ನಾನಾ ಜಾತೀಯ ಜೇಡಗಳು ಕೂಡ ಈ ಕೋಲು ಜೇನಿನ ಗೂಡಿನ ಸುತ್ತಲೂ ಬಲೆ ಹೆಣೆದು ಹಿಡಿದು ತಿನ್ನುತ್ತಾವೆ. ಇನ್ನೂ ಉಡ, ಓತೀಕ್ಯಾತ, ಹದ್ದು, ಕೋತಿ, ಕರಡಿಗಳು ಜೇನನ್ನು ಹಿಂಸಿಸುತ್ತವೆ. ಈ ಕೋಲುಜೇನು ಅಷ್ಟಾಗಿ ಕಡಿಮೆ ಆಗಿಲ್ಲವಾದರೂ ಈಗ ಇಪ್ಪತ್ತು ವರ್ಷಗಳ ಹಿಂದೆ ಇದ್ದುದರಲ್ಲಿ ಈಗ ಅರ್ಧಕಿಂತಲೂ ಕಡಿಮೆ ಕಾಣುತ್ತಿರುವುದು ನಿಸರ್ಗದ ಅಪಾಯಕಾರಿ ವಿದ್ಯಮಾನ ಎಂದು ಹೇಳಬಹುದು.


◾ತುಡುವೆ ಜೇನು :
ಈಗ ಸುಮಾರು ಮೂವತ್ತು ವರ್ಷದ ಹಿಂದಿನ ಚಿತ್ರಣ. ಆಗಿನ ಜನಸಂಖ್ಯೆಗೆ ಫಲವತ್ತಾದ ಭೂಮಿಯೆಲ್ಲಾ ಭೂ ಒಡೆಯರ ಸ್ವತ್ತಾಗಿ ಅಲ್ಲಲ್ಲಿ ಒಂದಷ್ಟು ಸವಳು, ಬರಡು ಭೂಮಿಯ ತರಹದ ಅಲ್ಲಲ್ಲಿ ಒಂದಷ್ಟು ಸರ್ಕಾರಿ ಜಮೀನು/ ಗೋಮಾಳದ ಭೂ ಪ್ರದೇಶ ಅಲ್ಲಲ್ಲಿ ಒಂದಷ್ಟು ಉಳಿದುಕೊಂಡಿತ್ತು. ದನಕರು ಕುರಿಗಳು ಮೇಯಿಸಲು ಇದ್ದ ಜಾಗ ತೊಂಭತ್ತರ ದಶಕದಲ್ಲಿ ಜಮೀನು ಇಲ್ಲದವರಿಗೆ ಜಮೀನು ನಿಗದಿ ಮಾಡಿಕೊಂಡು ಸರ್ಕಾರಕ್ಕೆ ಮನವಿ ಸಲ್ಲಿಸಬಹುದಿತ್ತು. ದೇವರ ಪೂಜಾರಿಗಳಂತಿದ್ದ ರೆವೆನ್ಯೂ ಇನ್ಸ್ಪೆಕ್ಟರ್, village accountant ಗಳಿಗೆ ಸಲಾಂ ಹೊಡೆದು ಹೊಡೆದು ಮೂರ್ನಾಲ್ಕು ವರ್ಷಗಳಾದ ಮೇಲೆ ದಕ್ಷಿಣೆ, ಹೂವು, ತೀರ್ಥವನ್ನೂ ಈ ಭೂ ರಹಿತರೇ ನೀಡಿ ಎಲ್ಲವೂ ಸಮರ್ಪಿಸಿದ ಮೇಲೆ ಸಂತುಷ್ಟರಾದ ಮೇಲೆ ಯಾರೋ ಅದೃಷ್ಟ ಇದ್ದವರಿಗೆ ಜಮೀನು ಭಾಗ್ಯ ಸಿಗುತ್ತಿತ್ತು. ಅಂತಹ ಭಾಗ್ಯ ನಮ್ಮ ಮನೆಗೂ ಒಲಿದು ಬಂದು ನಮಗೂ ಮೂರು ಎಕರೆ ಜಮೀನು ನಮ್ಮದಾಗಿತ್ತು. ಆ ಜಮೀನು ಸಂಪೂರ್ಣ ಹಳ್ಳದ ಒಡಲು. ಆ ಜಾಗದಲ್ಲಿ ಈ ಹಿಂದೆ ಲಕ್ಷಾಂತರ ಈಚಲ ವನ ಹಬ್ಬಿತ್ತಂತೆ. ದಿನಕ್ಕೆ ನೂರಾರು ಮಟ್ಟೆ (ಮೂರು ಲೀಟರ್ ಸಾಮರ್ಥ್ಯದ ಅಂಡಾಕಾರದ ಮಡಿಕೆ.) ಈಚಲ ಹೆಂಡ ಬಸಿಯುತ್ತಿದ್ದರಂತೆ!. ಈ ಈಚಲ ಗಿಡಗಳು ಹವಾಮಾನ ವೈಪರೀತ್ಯಗಳಿಂದ ಮಳೆ ಕಡಿಮೆಯಾಗಿ, ಉಷ್ಣಾಂಶ ಹೆಚ್ಚಾಗಿ, ಬಾವಿಯಲ್ಲಿ ನೀರು ಬತ್ತಿ ಇಂದು ಕುಡಿಯುವ ನೀರು ದೊರಕಲು ಸಾವಿರಾರು ಅಡಿ ಬೋರು ಹಾಕಿಸುತ್ತಿರುವುದು ನಿಮಗೆ ಗೊತ್ತೇ ಇದೆ. ಈಚಲು ಗಿಡಗಳು ಅವಸಾನ ಆದಮೇಲೆ ಬಳ್ಳಾರಿ ಜಾಲಿ ರಾಕ್ಷಸನಂತೆ ಹಬ್ಬಿ ಸದ್ಯ ದಕ್ಷಿಣ ಭಾರತದ ಬಹುಭಾಗ ಪೂರ್ವ- ಪಶ್ಚಿಮಘಟ್ಟ ಮತ್ತು ನೀಲಗಿರಿ ಶ್ರೇಣಿಗಳನ್ನು ಹೊರತುಪಡಿಸಿ ಉಳಿದ ಭಾಗವನ್ನು ಬಳ್ಳಾರಿಜಾಲಿ, ಕಾಂಗ್ರೆಸ್, ಕಮ್ಯುನಿಸ್ಟ್ ಗಿಡಗಳೇ ನಮ್ಮ ಅಡವಿಯನ್ನು ಆಳುತ್ತಿದ್ದವು. ಬಳ್ಳಾರಿ ಜಾಲಿಯೇ ಇಲ್ಲಿನ ಪ್ರಧಾನ ಗಿಡಗಳೂ, ಮರಗಳೂ ಆಗಿದ್ದವು. ಹತ್ತಿಪ್ಪತ್ತು ವಿವಿಧ ಎತ್ತರದ ಈಚಲ ಮರಗಳು ಅಸ್ತಿತ್ವದಲ್ಲಿದ್ದವು. ಆದರೆ ಅವೂ ಕೂಡ ದಿನ ಉರುಳಿದಂತೆ ಉರುಳಿಬಿದ್ದು ನಿರ್ನಾಮವಾದವು. ಇಂದು ಎತ್ತ ನೋಡಿದರೂ ಇದೇ ಸರ್ಕಾರಿ ಜಾಲಿ ಗಿಡ ಮರಗಳದ್ದೇ ಸಾಮ್ರಾಜ್ಯ. ನಾವೆಲ್ಲಾ ಚಿಕ್ಕವರಿದ್ದಾಗ ಈ ಜಾಲಿ ಮರಗಿಡಗಳೇ ಹುಲಿ ಸಿಂಹಗಳಿರುವ ಕಾಡಿನಲ್ಲಿ ದೊಡ್ಡವಾಗಿರುತ್ತಾವೆಂದು ನಾನು ನಂಬಿದ್ದೆ. ನಮಗೆ ಜಮೀನು ಹಂಚಿಕೆಯಾದ ಜಾಗ ಹಳ್ಳದ ಒಡಲು. ಈಗಲೂ ಹಳ್ಳಬಂದರೆ ಈಗ ನಾನು ಹೇಳುತ್ತಿರುವ ಹೊಲ ಸಂಪೂರ್ಣ ಜಲಮಯವಾಗಿ ವಿಶಾಲ ಪ್ರವಾಹದ ನದಿಯಂತೆ ಹರಿಯುತ್ತದೆ. ವಿಶೇಷ ಎಂದರೇ ಅದು ಸಂಪೂರ್ಣವಾದ ಮೆಕ್ಕಲು ಮಣ್ಣಿನಿಂದ ಆವೃತವಾದ ಮಣ್ಣಿನ ದಿನ್ನೆ. ಆದರೆ ಎಂಟು ಹತ್ತು ಅಡಿ ಆಳದಲ್ಲಿ ಮರಳಿನ ನಿಕ್ಷೇಪ ಇದೆ. ಮರಳು ಎಂದರೇ ಶುದ್ಧ ನದಿಯ ಮರಳಂತೆ ಇದೆ. ಈ ಮರಳು ಸುಮಾರು 60 ಅಡಿಗೂ ಅಧಿಕ ಆಳವಾಗಿದ್ದು ಮರಳು ಉತ್ಕೃಷ್ಟ ಮಟ್ಟದ್ದಾಗಿದೆ. ನೂರಾರು ಎಕರೆ ವಿಸ್ತಾರವಾಗಿದೆ. ಮರಳಿನ ಕಳ್ಳರ ಕಣ್ಣು ಇನ್ನೂ ಈ ಒಡಲಾಳಕ್ಕೆ ಬಿದ್ದಿಲ್ಲವಾದ್ದರಿಂದ ಇನ್ನೂ ಭೂಮಿಯ ಒಡಲಾಳದಲ್ಲಿ ಉಳಿದುಕೊಂಡಿರುವುದು ಸಮಾಧಾನಕರ ಸಂಗತಿ.

ಈಗ ಎಂಟು ಹತ್ತು ವರ್ಷಗಳ ಹಿಂದೆ ಎರಡ್ಮೂರು ವರ್ಷ ಮಳೆ ಇಲ್ಲದೆ ಅಂತರ್ಜಲ ಬತ್ತಿ ನೀರು ಹೋಗಿದ್ದರಿಂದ ನೀರಿಗಾಗಿ ಆ ಜಾಗದಲ್ಲಿ ಬೋರ್ವೆಲ್ ಹಾಕಿಸಲು ಪಾಯಿಂಟ್ ಮಾಡಿಸಿದ್ದೆ. ಬೋರ್ ಕೊರೆಯುವ ಗಾಡಿ ಇಪ್ಪತ್ತು ಮೂವತ್ತು ಅಡಿಯಷ್ಟು ಸಡಿಲವಾದ ಬರೀ ಮರಳು ಬಂದಿದ್ದರಿಂದ ಕೊರೆದು ಒಳಹೋದ ರಾಡುಗಳು ಮೇಲೆ ಬರದೆ ಆಳದಲ್ಲಿ ಹೂತು ಹೋದವು. ಕೆಲವೇ ನಿಮಿಷಗಳಲ್ಲಿ ಆ ರಾಡುಗಳು ಬೋರ್ ಡ್ರಿಲ್ಲಿಂಗ್ ಮಾಡುವಾಗ ಮಾತ್ರ ಕಷ್ಟಪಟ್ಟು ತಿರುಗುತ್ತಾ ಮೇಲಕ್ಕೆ ಬಾರದೇ ಕೇವಲ ಕೆಳಮುಖ ಚಲನೆಯಲ್ಲೇ ಸಾಗುತ್ತಿದ್ದವು. ಗಾಬರಿಯಾದ ಬೋರ್ ನವರು ಇಲ್ಲಿ ಡ್ರಿಲ್ ಮಾಡಲಾಗುವುದಿಲ್ಲ. ಕೊರೆಯುವುದಿಲ್ಲ ಎಂದು ಹೇಳಿ ಮೇಲಕ್ಕೆತ್ತಲು ಹೋದರೆ ಟ್ರಾಕ್ಟರ್ ಟಿಲ್ಲರ್ ಮೇಲೆ ಹಾರುವಂತೆ ಬೋರ್ ಲಾರಿಯೇ ಹಾರುತ್ತಿತ್ತು. ಕೊರೆದ ಮೂವತ್ತು ನಲವತ್ತು ಅಡಿಗಳ ರಾಡುಗಳನ್ನು ಅರ್ಧ ಗಂಟೆ ಕೊಸರಾಡುತ್ತಾ ಬೋರು ಲಾರಿಯನ್ನು ಹಾರಿಸಿ ಹಾರಿಸಿ ಕಷ್ಟಪಟ್ಟು ಕಿತ್ತುಕೊಂಡು ಹೋಗಿದ್ದರು. ಆಮೇಲೆ ತಮಿಳುನಾಡಿನ ಯಾವುದೋ ಬೋರ್ ಗಾಡಿ ಕರೆಸಿ ಬೋರ್ ಕೊರೆಸಿದ್ದೆ. ಒಳ್ಳೆಯ ನೀರುದಕ್ಕಿತ್ತು.

ಈ ಜಾಗದಲ್ಲೇ ಮೊದಲು ಬಹುದಟ್ಟವಾಗಿ ಹರಡಿದ್ದ ಜಾಲಿಗಿಡಗಳು ನಿತ್ಯಹರಿದ್ವರ್ಣದ ಕಾಡಿನ ರೀತಿ ಇತ್ತು. ಅಂದಾಜು ಅರ್ಧ ಎಕರೆ ಜಾಗ ಇರಬಹುದು. ಅಷ್ಟು ಜಾಗದಲ್ಲಿ ದಟ್ಟವಾದ ಜಾಲಿಗಿಡಗಳ ಪೊದೆ. ಜಾಲಿಗಿಡದ ಮೇಲೆಲ್ಲಾ ಅಮೃತಬಳ್ಳಿ ಹಬ್ಬಿದ್ದರಿಂದ ಸುತ್ತಲೂ ಭತ್ತದ ಗದ್ದೆ ಮತ್ತು ಕೆಳಗೆ ಮರಳಿನ ನಿಕ್ಷೇಪ ಇರುವುದರಿಂದ ಬೇಸಿಗೆಯಲ್ಲೂ ತುಂಬಾ ಕೂಲ್ ಕೂಲ್ ಆಗಿಯೇ ಇದ್ದ ಜಾಗ. ಈಗ ಬೋರ್ ವೆಲ್ ಇರುವ ಸ್ಥಳದಲ್ಲಿ ಆಗ ಒಂದು ಹುತ್ತ ಇತ್ತು. ಆಗ ನನಗೊಂದು ಅಭ್ಯಾಸ ಇತ್ತು ಎಲ್ಲಿಯಾದರೂ ಬಹು ತಂಪಾದ ಅಚ್ಚುಮೆಚ್ಚಿನ ಜಾಗ ಎಂದು ಕಂಡು ಬಂದರೆ ಅದು ಅಡವಿಯೋ, ಬಾವಿಯೋ ಮರವೋ ಎಂದು ಬೇಧ ಭಾವ ಮಾಡದೇ ಮಲಗುವುದು.!ಇದು ಮನೆಯವರಿಗೆ ಬಹು ಕಿರಿಕಿರಿಯ ವಿಷಯವಾಗಿತ್ತು. ಅದರಂತೆ ಬಹುಕಾಲ ನಾನು ನನ್ನ ಕೆಲಸ ಕಾರ್ಯಗಳು ಮುಗಿದ ಮೇಲೆ ಈ ನಿತ್ಯಹರಿದ್ವರ್ಣದ ಕಾಡಿನಂತೆ ಸದಾ ಹಸಿರಾಗಿರುವ ಈ ಜಾಗದಲ್ಲಿ ಪೊದೆಗಳ ಒಳಗೆ ಮಲಗುತ್ತಿದ್ದೆ. ಅದೆಷ್ಟೋ ಬಾರಿ ಈ ಜಾಗದಲ್ಲಿ ಕಾಡು ಹಂದಿಗಳು ಮಲಗಿವೆ. ಒಂದು ಬಾರಿ ಒಂದು ಕಾಡು ಹಂದಿ ನಮ್ಮ ಹೊಲದ ನವಣೆ ಮತ್ತು ಸಜ್ಜೆ ಕಿತ್ತುಕೊಂಡು ಹೋಗಿ ಒಕ್ಕಲು ಮಾಡುವ ಹಾಗೆ ರಾಶಿ ಹಾಕಿ ಮರಿಯನ್ನೂ ಹಾಕಿತ್ತು. ಅಂತಹ ಜಾಗ ಅದು. ಆ ಪೊದೆಗೆ ಹೊಂದಿಕೊಂಡಂತೆ ಒಂದು ಹುತ್ತ ಇತ್ತು. ಒಂದು ದಿನ ನಾನು ಅಲ್ಲೇ ಮಲಗಿರುವಾಗ ಬೇರೊಂದು ಜಾತಿಯ ಜೇನುಹುಳುಗಳು ಗುಂಯ್ಗುಡುತ್ತಾ ಬಂದವು. ಬಂದು ಹುತ್ತದ ಸುತ್ತ ತಿರುಗಿ ತಿರುಗಿ ಹುಡುಕುತ್ತಿದ್ದವು. ನಾನು ಹೋಸ ಜೇನು ಕುಟುಂಬ ಹಾರಿ ಬಂದು ಈ ಜಾಗದಲ್ಲಿ ಗೂಡುಕಟ್ಟುತ್ತಾವೆ. ಅದು ಅಲಿಖಿತವಾಗಿ ನನಗೇ ಸೇರಿದ್ದಾಗಿತ್ತು. ಹುತ್ತದ ಬಳಿ ಹಾರಾಡುತ್ತಿದ್ದುದರಿಂದ ಅವು ಏನು ಮಾಡುವವು ಎಂದು ಸುಮ್ಮನೇ ಗಮನಿಸುತ್ತಿದ್ದೆ. ಕೆಲವು ಹುಳುಗಳು ಹುತ್ತದ ಒಳಗಡೆ ಹೋಗಿ ಸ್ಥಳ ಪರೀಶೀಲಿಸಿ ಬಂದು ಬೇರೆ ಹುಳುಗಳಿಗೂ ಹೇಳಿದವು. ನನಗೆ ಸ್ಪಷ್ಟವಾಗಿ ನೆನಪಿದೆ. ಒಳಗೆ ಹೋಗಿ ಬಂದ ರಾಣಿ ಹುಳುಗಳು ಸುರುಳಿ ಸುತ್ತುತ್ತಾ ಗುಂಯ್ಗುಡುವುದನ್ನು ವಿಶೇಷವಾಗಿ ಮಾಡುತ್ತಿತ್ತು. ಆಮೇಲೆ ಇತರ ಹುಳುಗಳು ಹೋಗಿ ಸ್ಥಳ ನೋಡಿಕೊಂಡು ಬಂದವು. ಬಹಶಃ ಗೂಡು ಕಟ್ಟಲು ಸ್ಥಳ ಓಕೆ ಆಗಿರಬೇಕು. ಆಮೇಲೆ ಗುಂಯ್ ಎನ್ನುವ ಶಬ್ಧಕ್ಕೆ ಮತ್ತೆ ಯಾವುದೋ ಕೀ ಆ್ಯಡ್ ಆಗಿ ಎಲ್ಲವೂ ಕುಳಿತುಕೊಳ್ಳುವುದನ್ನು ಸಂಭಾಷಿಸಲು free hand ಲ್ಲಿ ಗಾಳಿಯಲ್ಲಿ ಸೊನ್ನೆ ಸುತ್ತಿದ ಹಾಗೆ ಎಲ್ಲಾ ಹುಳಗಳು ತಿರುಗುತ್ತಾ ತಿರುಗುತ್ತಾ ಮೂರ್ನಾಲ್ಕು ನಿಮಿಷಗಳಲ್ಲಿ ಎಲ್ಲವೂ ಹುತ್ತದ ಒಳಗೆ ಎಲ್ಲೋ ಕುಳಿತುಕೊಂಡವು. ನಾನು ಅಂದು ಆ ಗೂಡಿನ ಬಳಿ ಹೋಗುವುದಾಗಲಿ ಬಗ್ಗಿ ನೋಡುವುದಾಗಲಿ ಮಾಡಲಿಲ್ಲ. ಯಾಕೆ ಅಂತ ಒಂದು interesting ವಿಷಯ ಏನೆಂದರೇ ಈ ಜೇನು ಕುಟುಂಬಗಳು ಹೊಸದಾಗಿ ಗೂಡು ಕಟ್ಟಿದ ಮರುದಿನದಿಂದ ಗೂಡುಕಟ್ಟುವ ಕೆಲಸ ಆರಂಭಿಸುವ ಕೆಲಸ ಮಾಡುತ್ತಾವೆ. ಒಂದು ವೇಳೆ ಅಷ್ಟರೊಳಗೆ ತಮ್ಮ ಗೂಡಿಗೆ ಏನಾದರೂ ಅಪಾಯಕಾರಿ ಎಂಬ ಸಂದೇಹ ಬಂದರೂ ಅವು ಅಲ್ಲಿಂದ ಸ್ಥಳ ಬದಲಾಯಿಸಿ ಅಲ್ಲಿಯೇ ಎಲ್ಲಿಯಾದರೂ ಗೂಡು ಕಟ್ಟುವವು. ಇಂತಹ ಹತ್ತಾರು ಸಂದರ್ಭಗಳನ್ನು ನನ್ನ ಜೇನು ಬದುಕಿನ ಆರಂಭದಲ್ಲಿ ಕಂಡಿದ್ದೇನೆ. ಎಲ್ಲಿಯಾದರೂ ಜೇನು ಹೊಸ ಸ್ಥಳದಲ್ಲಿ ಕುಳಿತುಕೊಂಡ ಕೆಲವೇ ಸಮಯದಲ್ಲಿ ತುಪ್ಪ ಇದೆಯೇ ಎಂದು check ಮಾಡಿದಾಗ ಅಪಾಯ ಅರಿತ ಅವುಗಳು ಸ್ಥಳ ಬದಲಾಯಿಸಿದ ಹತ್ತಾರು ಉದಾಹರಣೆಗಳು ನಾನು ಕಂಡಿದ್ದೇನೆ. ಆದರೆ ಎರಡ್ಮೂರು ದಿನಗಳು ಗೂಡುಕಟ್ಟುವ ಕೆಲಸ ಆರಂಭಿಸಿ ಮೊಟ್ಟೆಗಳನ್ನು ಇಟ್ಟ ನಂತರ ಅಪಾಯಕಾರಿ ಎಂದೆನಿಸಿದರೂ ಅವು ಗೂಡು ಬದಲಾಯಿಸದೇ ಶತ್ರುವಿನ ವಿರುದ್ಧ ಅವು ಹೋರಾಡುವವು. ಆನಂತರದ ದಿನಗಳಲ್ಲಿ ನಾನು ಜೇನಿನ ರಚನೆಯನ್ನೇ ನೋಡಿ ಇದರ ಸಾಧಾರಣ ವಯಸ್ಸನ್ನು ಅಂದಾಜಿಸುತ್ತಿದ್ದೆ. ಇದೆಲ್ಲದರ ಅನುಭವ ಇದ್ದ ನನಗೆ ನಾನು ಆ ಹುತ್ತದ ಬಳಿ ಹೋಗಿ ನೋಡಲಿಲ್ಲ. ಆಮೇಲೆ ನಾಲ್ಕೈದು ದಿನಗಳ ನಂತರ ಹೋಗಿ ನೋಡಿದೆಯಾದರೂ ಹುಳುಗಳ ಓಡಾಟ ಬಿಟ್ಟರೆ ಜೇ‌ನುಗೂಡಿನ ರಚನೆ ನನ್ನ ಕಣ್ಣಿಗೆ ಬೀಳಲಿಲ್ಲ.

ಒಂದೂವರೆ ತಿಂಗಳ ನಂತರದಲ್ಲಿ ಅಂದು ಹುತ್ತ ಬಗೆದಾದರೂ ಜೇನು ತೆಗೆಯಲು ನಿರ್ಧರಿಸಿ ಸಲಿಕೆ ಮತ್ತು ಹಾರೆ ತೆಗೆದುಕೊಂಡು ಹೋದೆ. ಜೇನು ತುಂಬಿಕೊಂಡು ಬರಲು ಒಂದು ತಟ್ಟೆಯನ್ನೂ ತೆಗೆದುಕೊಂಡು ಹೋಗಿದ್ದೆ. ಸಲಿಕೆ ಹಾರೆ ಬಳಸಿ ತೋಡಿ ಒಂದಷ್ಟು ಜೇನು ಕಾಣುವ ಹಾಗೆ ಮಾಡಿದೆ. ನಾನು ಸಾಮಾನ್ಯವಾಗಿ ಕೀಳುತ್ತಿದ್ದ ಹುಳುಗಳಂತೆ ಇವು ಇರಲಿಲ್ಲ. ಗಾತ್ರದಲ್ಲಿ ಇವು ನಾನು ರೆಗ್ಯೂಲರ್ ಆಗಿ ನೋಡುತ್ತಿದ್ದ ಹುಳುಗಳಿಗಿಂತ ಇವು ದೊಡ್ಡವು. ಬಣ್ಣವೂ ಕೂಡ ಇವು ಕೆಂಪು ಮಣ್ಣಿನ ಬಣ್ಣವನ್ನು ಹೋಲುತ್ತಿದ್ದವು. ಹುತ್ತದ ಗೋಡೆಗೆ ಗೂಡು ಕಟ್ಟಿದ್ದು ಹುತ್ತದ ಮಣ್ಣಿಗೂ ಹುಳುಗಳಿಗೂ ಯಾವುದೇ ದೊಡ್ಡ ವ್ಯತ್ಯಾಸ ಕಾಣಲಿಲ್ಲ.. ಜೇನು ಹುತ್ತದ ಮಣ್ಣು ಎರಡೂ ಒಂದೇ ತರ ಕಾಣುತ್ತಿದ್ದವು. ಅಷ್ಟೊತ್ತಿಗೆ ನನ್ನ ಸಲಿಕೆ ಹಾರೆಯ ಹೊಡೆತಗಳಿಗೆ ಹುತ್ತದಲ್ಲಿದ್ದ ಜೇನುಗೂಡಿನ ಹುಳುಗಳೆಲ್ಲಾ ಕೆರಳಿದ್ದವು. ಗುಂಡಿನಂತೆ ಹಾರಿ ಬಂದು ಪಟ ಪಟನೇ ಕಚ್ಚಿ ಕಚ್ಚಿ ಹೋಗುತ್ತಿದ್ದವು. ಕೈ ಹಾಕಿ ಸೊಳ್ಳೆಯಂತೆ ಅವುಗಳನ್ನು ಬಡಿದರೂ ಸಾಯುತ್ತಿದ್ದವಾದರೂ ಸಾಯುವೊಷ್ಟತ್ತಿಗಾಗಲೇ ಅವು ಕಚ್ಚಿರುತ್ತಿದ್ದವು... ಜೇನುಗೂಡು ಹುತ್ತದಲ್ಲಿದ್ದುದಕ್ಕೂ, ಆ ಹುಳುಗಳು ಬೇರೆಯೇ ಪ್ರಭೇದ ಆಗಿದ್ದುದರಿಂದ ಜೇನುಹುಳಗಳನ್ನು ಕಂಟ್ರೋಲ್ ಮಾಡಿ ಸುರಕ್ಷಿತವಾಗಿ ಜೇನು ತೆಗೆಯಲು ಹಿಡಿತ ಸಿಗಲಿಲ್ಲ.. ಆರಂಭದ ಕೆಲವೇ ಸೆಂಕೆಂಡ್ ಗಳಲ್ಲಿ ಆರೇಳು ಹುಳುಗಳು ಮುಖ, ಕೈ ತೊಡೆ ಕಾಲು ಕಾಲ್ಬೆರಳು ಹೀಗೆ ಎಲ್ಲಿ ಸಿಕ್ಕ ಸಿಕ್ಕಲ್ಲಿಗೆ ಕಚ್ಚಿದ್ದವು. ಕೋಲು ಜೇನುಹುಳುಗಳು ಕೇವಲ ಕೈ ಮುಖ ತಲೆ ಭಾಗಕ್ಕೆ ದಾಳಿ ಮಾಡುತ್ತಿದ್ದವು. ಆದರೆ ಇವು ಇರುವೆಗಳಂತೆ ಕಾಲ್ಬೆರಳು ಮೀನಖಂಡ ಮೊಣಕಾಲು ಹೀಗೆ ಎಲ್ಲೆಂದರಲ್ಲಿ ಕಚ್ಚಿ ನಖ ಶಿಖಾಂತ ಹಿಂದೆ ಮುಂದೆ ಪರಚಿ ಕೊಳ್ಳುವಂತಾಗಿತ್ತು. ಅಂದೇ ನಾನು ನನ್ನ ಜೇನಿನ ಬದುಕಿನಲ್ಲಿ ಅತಿ ಹೆಚ್ಚಿನ ಹುಳುಗಳಿಂದ ಕಚ್ಚಿಸಿಕೊಂಡಿದ್ದು. ಇವುಗಳು ಕಚ್ಚಿದ ತೀವ್ರತೆ ಕೋಲು ಜೇನುಗಳಿಗಿಂತ ಅಧಿಕ.. ಹೆಜ್ಜೇನುಗಳಿಗಿಂತ ಕಡಿಮೆ.. ಉರಿ ಮತ್ತು ಬಾವು ಮದ್ಯಮ ರೀತಿಯಲ್ಲಿ ಇರುತ್ತದೆ. ಇವೇ ತುಡುವೇ ಜೇನು.. ಇವುಗಳನ್ನೇ ಪಳಗಿಸಿ ಅವುಗಳಿಗೆ ಪೆಟ್ಟಿಗೆ frame ಇಟ್ಟು ಇಂದು ಜೇ‌ನು ಕೃಷಿಮಾಡುತ್ತಿರುವುದು. ಇಂದು ಎಲ್ಲಾ ಅಂಗಡಿ ಮಾರುಕಟ್ಟೆಗಳಲ್ಲಿ ದೊರಕುವ ಜೇನುತುಪ್ಪ ಇದೇ ತುಡುವೇ ಜೇನಿನಿಂದ ಆದದ್ದು. ಹಿಂದೆ ಈ ಜೇನುಗಳು ಹುತ್ತ ಮರದ ಪೊಟರೆಗಳಲ್ಲಿ ಕತ್ತಾಳಿ ಗುಮ್ಮಿಗಳಲ್ಲಿ ಬೆಟ್ಟಗುಡ್ಡಗಳ ಸಂದುಗಳಲ್ಲಿ ಕೋಟೆ ಕೊತ್ತಲಗಳ ಸಂದುಗಳಲ್ಲಿ ಗೂಡುಕಟ್ಟುತ್ತಿದ್ದವು. ಏಳು ತಲೆ ಜೇನು ಎಂತಲೂ ಕರೆಯುತ್ತಿದ್ದರು. ಎಂಟ ಹತ್ತು ಪದರಗಳಲ್ಲಿ ಎರಿಗಳನ್ನು ಸಾಲಿಗೆ ಕಟ್ಟಿ ತುಪ್ಪವನ್ನು ಶೇಖರಿಸುತ್ತಾ ಸಂತಾನೋತ್ಪತ್ತಿ ಮಾಡುತ್ತಾವೆ. ಕೋಲು ಜೇನುಗಳಲ್ಲಿ ಮತ್ತು ಹೆಜ್ಜೇನುಗಳಲ್ಲಿ ತಲೆಯ ಭಾಗದಲ್ಲಿ ಮಾತ್ರ ತುಪ್ಪ ಶೇಖರಿಸುತ್ತಾವೆ. ಆದರೆ ತುಡುವೆ ಜೇನು ಜೇನು ರೊಟ್ಟಿಯ ತುಂಬೆಲ್ಲಾ ಎರಡೂ ಸೈಡ್ ತುಪ್ಪ ಸಂಗ್ರಹಿಸುವುದು ವಿಶೇಷ. ಅದಕ್ಕಾಗಿಯೇ ಇವುಗಳನ್ನು ಕೃಷಿಲಾಭಕ್ಕೆ ಬಳಸಿಕೊಳ್ಳುತ್ತಿರುವುದು. ಕೋಲು ಜೇನು ಮತ್ತು ಹೆಜ್ಜೇನಿಗೆ ಹೋಲಿಸಿದರೆ ಇವುಗಳ ಸಂತಾನೋತ್ಪತ್ತಿ ಪ್ರಮಾಣ ಕಡಿಮೆಯೇ. ಇವು ಕಾಡು, ಅಡವಿಯಲ್ಲಿರುವವು Wild ಆಗಿಯೇ ಇರುತ್ತಾವೆ. ತರಬೇತಿ ಇಲ್ಲದೇ ಜೇನು ಕೀಳುವವರು ಗಂಭೀರ ಸ್ವರೂಪದ ಪರಿಣಾಮವನ್ನು ಎದುರಿಸಬೇಕಾಗಬಹುದು ಎಚ್ಚರಿಕೆಯಿಂದ ಇರುವುದು ಒಳಿತು‌.

◾ಹೆಜ್ಜೇನು :
ಹಿರಿದು + ಜೇನು = ಹೆಜ್ಜೇನು ಎಂದು ಆಗಿರುವುದರಿಂದ ಹೆಸರೇ ಹೇಳುವಂತೆ ಈ ಹುಳುಗಳು ಗಾತ್ರದಲ್ಲಿ ದೊಡ್ಡವು. ಇವು ಸಾಮಾನ್ಯವಾಗಿ ಎತ್ತರದ ಮರ/ಕಟ್ಟಡ, ಗುಡ್ಡದ ಬಂಡೆಗಲ್ಲುಗಳ ಅಂಚಿಗೆ ಗೂಡುಕಟ್ಟುವವು. ಇವು ಶತ್ರುಗಳ ಧಾಳಿಯಾದಾಗ ಪ್ರಚಂಡ ರೋಷದೊಂದಿಗೆ ಶತಗತಾಯ ಕಚ್ಚಲೇಬೇಕೆಂದು ಧಾಳಿ ಮಾಡುವವು. ಇವುಗಳು ಕಚ್ಚಿದರೆ ಅಪಾಯ ಹೆಚ್ಚು. ವರ್ಷಕ್ಕೆ ಹತ್ತಾರು ಜನ ಹೆಜ್ಜೇನು ಧಾಳಿಯಿಂದ ಮರಣಹೊಂದಿದ ಸುದ್ದಿಗಳನ್ನು ನಾವು ಆಗಾಗ ಸುದ್ದಿ ಸಮಾಚಾರಗಳಲ್ಲಿ ಕೇಳುತ್ತಿರುತ್ತೇವೆ. ಹೌದು ಇವು ಯಮಸ್ವರೂಪಿ ಹುಳುಗಳೇ..! ಹೆಜ್ಜೇನುಗಳು ದಾಳಿ ಮಾಡಿದರೆ ಇವುಗಳಿಂದ ತಪ್ಪಿಸಿಕೊಳ್ಳಲು ಯಾವ ಅವಕಾಶವೂ ಇಲ್ಲ. ಬಾವಿ ಕೆರೆ ನೀರಿಗೆ ಹಾರಿದರೂ ಶತ್ರುವನ್ನು ಕಾದಿದ್ದು ಕಚ್ಚಿಬರುತ್ತಾವೆ. ಅದು ಒಂದಲ್ಲ.. ನೂರಾರು ಸಂಖ್ಯೆಯಲ್ಲಿ..!!ಆದರೂ ಹೆಜ್ಜೇನುಗಳನ್ನು ಬೆಂಕಿ, ಹೊಗೆ ಹಾಕಿ ಹಿಂಸಿಸಿ ಕೆಲವು ಪ್ರಳಯಾಂತಕರು ತುಪ್ಪ ತೆಗೆಯುತ್ತಾರೆ. ಇದರ ತುಪ್ಪ ಇತರ ಜೇನು ತುಪ್ಪಗಳಿಗಿಂತ ಮಧುರ, ಮೃದುವಾಗಿ ಇರದೇ ಗಟ್ಟಿಯಾಗಿದ್ದು, ತುಪ್ಪ ಸ್ವಲ್ಪ ಕಾರ ಮತ್ತು ಗರಂಮಸಾಲ ಮಿಕ್ಸ್ ಆದಂತೆ ಘಾಟು ಇರುತ್ತದೆ. ಹೆಚ್ಚು ತಿಂದರೆ ಹೊಟ್ಟೆಯಲ್ಲಿ ಸಂಕಟವಾಗುವುದು. ಈ ಜೇನುಗಳಲ್ಲಿ ಹತ್ತು ಇಪ್ಪತ್ತು ಕೆಜಿ ತುಪ್ಪ ಸಿಗುವುದು. ಆದರೆ ಇವುಗಳನ್ನು ಬಿಡಿಸಲು ವಿಶೇಷ ತರಬೇತಿ ಮತ್ತು ರಕ್ಷಣಾ ಉಪಕರಣಗಳು ಅಗತ್ಯ. ಹೆಜ್ಜೇನು ಗೂಡುಗಳಿಗೆ ಬೆಂಕಿಹಾಕಿ ಅವುಗಳ ಸುಟ್ಟು ಜೇನು ತೆಗೆಯುವುದು ಸಾಮಾನ್ಯ. ಕೋಲು ಜೇನಿನಲ್ಲಿ ಹಾಲಿನಂತಹ ಬಾಲ ಹುಳುಗಳ ರೊಟ್ಟಿಯನ್ನು ತಿನ್ನುವ ಹಾಗೆ ಹೆಜ್ಜೇನುಗಳ ರೊಟ್ಟಿಯನ್ನು ತಿನ್ನಲು ಬಾರದು. ಇದರ ಕೋಶಗಳನ್ನು ಬಹಳ ಗಡುಸಾದ ಒರಟು ಮೇಣದಿಂದ ನಿರ್ಮಿಸಿರುತ್ತಾವೆ. ಇದರ ಗೂಡುಗಳನ್ನು ಸುಟ್ಟು ಹಾಕಿದ್ದರಿಂದಲೇ ಹೆಜ್ಜೇನಿನ ಪ್ರಮಾಣ ಕಡಿಮೆಯಾಗಿರುವುದು. ಹೆಜ್ಜೇನುಗಳು ಸಾಂಘಿಕವಾಗಿ ಹತ್ತಾರು ಮನೆಗಳನ್ನು ಒಂದೇ ಕಡೆ ನಿರ್ಮಿಸಿ ಗ್ರಾಮ ನಿರ್ಮಿಸಿಕೊಳ್ಳುವ ಹಾಗೆ ಒಂದೇ ಮರದಲ್ಲಿ ಐವತ್ತು- ನೂರು ಹೆಜ್ಜೇನು ಗೂಡು ಕಟ್ಟಿರುವುದನ್ನು ಬೆಂಗಳೂರಿನ ಲಾಲ್ ಬಾಗ್ ಮತ್ತು ಕುದುರೆಮುಖ ಅರಣ್ಯಗಳಲ್ಲಿ, ಹಾಗೂ ಚನ್ನಗಿರಿ ಭದ್ರಾವತಿಯ ಮದ್ಯದ ಅರಣ್ಯಗಳಲ್ಲಿ ಹಾಗೂ ಯಾಣದಲ್ಲೂ ಇತರೆ ಅನೇಕ ಕಡೆಗಳಲ್ಲಿ ನಾನು ನೋಡಿದ್ದೇನೆ.

ಇನ್ನೂ ಜೇನುಗಳ ಹುಟ್ಟು ದಕ್ಷಿಣ ಆಫ್ರಿಕಾ ಅಮೇಜಾನ ನಂತಹ ಬೃಹತ್ ಕಾಡಿನಲ್ಲಿ ನಾವು ಇದುವರೆಗೂ ಕೇಳಿರದ ಕಂಡಿರದ ಜೇನು ಸಮೂಹ ಇದ್ದಾವೆ. ಬಹುಶಃ ಇಲ್ಲಿನವರೂ ಆಕಡೆ ಹೋಗಿ ಅವುಗಳನ್ನು ಪತ್ತೆ ಮಾಡಿಲ್ಲ. ಅಲ್ಲಿನ ವಾತಾವರಣ ಬಿಟ್ಟು ಅವೂ ಬೇರೆ ಕಡೆ ಬರದೇ ನಿಗೂಢವಾಗಿಯೇ ಉಳಿದಿವೆ. ಸಾಮಾನ್ಯವಾಗಿ ಜೇನು ಹುಳುಗಳು ತೊಂದರೆ ಕೊಟ್ಟರೆ ಅಟ್ಟಾಡಿಸಿಕೊಂಡು ಕಚ್ಚುವವು. ಆದರೆ ಅಮೇಜಾನ್ ನ ಕೆಲವು ಜಾತಿಯ ಜೇನುಹುಳುಗಳು ಅವುಗಳಿಗೆ ತೊಂದರೆ ಕೊಡದಿದ್ದರೂ ಅವುಗಳಿಗೆ ಶತ್ರುಗಳೆಂದು ಸಂದೇಹ ಬಂದರೂ ಧಾಳಿ ಮಾಡಿ ಮಾರಣಾಂತಿಕವಾಗಿ ಕಚ್ಚುವಂತಹ ಜೇನು ಹುಳುಗಳೂ ಇದ್ದಾವೆ.
....................... ನಾಗೇಂದ್ರ ಬಂಜಗೆರೆ, ಶಿಕ್ಷಕರು 
ಸರಕಾರಿ ಹಿರಿಯ ಪ್ರಾಥಮಿಕ ಶಾಲೆ, ಮಿಂಚೇರಿ
ಬಳ್ಳಾರಿ ತಾಲೂಕು ಮತ್ತು ಜಿಲ್ಲೆ
Mob : +91 99029 12684
*******************************************


Ads on article

Advertise in articles 1

advertising articles 2

Advertise under the article