ಸವಿಜೇನು : ಸಂಚಿಕೆ - 13
Sunday, June 30, 2024
Edit
ಸವಿಜೇನು : ಸಂಚಿಕೆ - 13
ಲೇಖಕರು: ನಾಗೇಂದ್ರ ಬಂಜಗೆರೆ, ಶಿಕ್ಷಕರು
ಸರಕಾರಿ ಹಿರಿಯ ಪ್ರಾಥಮಿಕ ಶಾಲೆ, ಮಿಂಚೇರಿ
ಬಳ್ಳಾರಿ ತಾಲೂಕು ಮತ್ತು ಜಿಲ್ಲೆ
Mob : +91 99029 12684
ಈ ಪ್ರಕೃತಿಯಲ್ಲಿ ಅತ್ಯಂತ ಸಣ್ಣ ಜೀವಿ ತನ್ನದೇ ಆದ ಪ್ರಮುಖ ಪಾತ್ರ ವಹಿಸುತ್ತದೆ. ಎಷ್ಟೋ ಬಾರಿ ಪ್ರಕೃತಿಯನ್ನು ಸಮತೋಲನ ಮಾಡುವಲ್ಲಿ ಬಹಳ ಪ್ರಧಾನ ಪಾತ್ರವನ್ನೇ ವಹಿಸುವ ಜೇನುಹುಳುಗಳ ಪಾತ್ರ ನಿಸರ್ಗದಲ್ಲಿ ಬಹಳ ದೊಡ್ಡದು. ಆ ಜೇನಿನ ಸುತ್ತ ಕಲಿತ ಪಾಠಗಳ, ಥ್ರಿಲ್ಲಿಂಗ್ ಅನುಭವಗಳ, ನೀವು ಕಂಡಿರದ ಕೇಳಿರದ ಅಗತ್ಯವಾಗಿ ತಿಳಿಯಲೇ ಬೇಕಾದ ಮಾಹಿತಿಯುತ 'ಸವಿಜೇನು' ಎಂಬ ವಿಶೇಷ ಶೀರ್ಷಿಕೆಯಡಿಯಲ್ಲಿ ವಿಸ್ತಾರವಾದ ಬರಹ ಸರಣಿಗಳನ್ನು ನೀವೂ ಓದಿ ಆನಂದಿಸಿ... ನಾಗೇಂದ್ರ ಬಂಜಗೆರೆ, ಶಿಕ್ಷಕರು ಮತ್ತು ಬರಹಗಾರರು.
ಅದು 2020 ಮಾರ್ಚ್ ಹದಿನೈದು - ಹದಿನಾರು.... ವಾಟ್ಸಾಪ್, ಫೇಸ್ಬುಕ್ ಇತರೆ ಸಾಮಾಜಿಕ ಜಾಲತಾಣಗಳಲ್ಲಿ ಕೊರೊನಾ ವೈರಸ್ ಬಗ್ಗೆ ಚಿತ್ರಣಗಳು ರಾರಾಜಿಸುತ್ತಿದ್ದವು. ಚೀನಾದ ಹಲವು ನಗರಗಳು ಮತ್ತು ಬೇರೆ ಯಾವುದೋ ದೇಶಗಳಲ್ಲಿ ನಿತ್ಯ ವ್ಯವಹಾರದಲ್ಲಿದ್ದ ಜನರು ಏಕಾಏಕಿ ಯಾವ ಸ್ಥಿತಿಯಲ್ಲಿರುವರೋ ಅದೇ ಸ್ಥಿತಿಯಲ್ಲಿ ಜನರು ಗಂಡು ಹೆಣ್ಣು ಅಬಾಲ ವೃದ್ಧರವರೆಗೆ ರಸ್ತೆ ಮನೆ ಮಾರುಕಟ್ಟೆ ಹಾಗೆ ಎಲ್ಲೆಂದರಲ್ಲೆ ಕುಸಿದ್ದು ಬಿದ್ದು ಹುಳುಗಳಂತೆ ಒದ್ದಾಡಿ ಒದ್ದಾಡಿ ಅಕಾಲಿಕ ಸಾವಿಗೀಡಾಗುತ್ತಿರುವ ಭಯಾನಕ ವೀಡಿಯೋಗಳು..! ನೋಡಿದರೆ ಎದೆ ಝಲ್ಲೆಂದು ಇಡೀ ಮನುಕುಲವೇ ಕೆಲವೇ ಘಂಟೆ, ದಿನಗಳಲ್ಲಿ ಸಾಂಕ್ರಾಮಿಕ ರೋಗದಿಂದ ನಾಶವಾಗುವುದಾ...??? ಪ್ರಪಂಚವೇ ಬೆಚ್ಚಿಬಿದ್ದು ತಲ್ಲಣಗೊಂಡ ದಿನಗಳು. ಗಾಸಿಪ್ ಗಾಳಿಸುದ್ದಿಗಳು ಇನ್ನೂ ವ್ಯಾಪಕವಾಗಿ ಹರಡಿ ಬದುಕಿದ್ದವರಿಗೆ ಕೊರೋನಾದ ನಡುಕ ಶುರುವಾಗಿ ಲೋ ಬೀಪಿ - ಹೈ ಬೀಪಿ ಆಗಿ ಪ್ರತಿಯೊಬ್ಬರ ಪರಿಚಯದ ಒಂದಿಬ್ಬರು ಹಠಾತ್ತನೇ ಇದ್ದಕ್ಕಿಂದ್ದಂತೆ ಸಾವೀಗೀಡಾದುದು ಇನ್ನೂ ಭಯ ಜನರಲ್ಲಿ ಹೆಚ್ಚಾಯಿತು. ಎಲ್ಲರೂ ಒಂದು ರೀತಿಯ ಸಾವಿನ ಭಯದಿಂದ ತತ್ತರಿಸಿದ ದಿನಗಳು. ಬಹುಶಃ ಈ ವೀಡಿಯೋಗಳು ಮತ್ತು ಸ್ಪಷ್ಟತೆಯಿಲ್ಲದ ಕೊರೋನಾ ರೋಗದ ಲಕ್ಷಣಗಳು ಜನರನ್ನು ಭಯಪಡಿಸಿದಷ್ಟು ಬೇರೆ ಯಾವ ಸಂಗತಿಗಳು ಭಯಪಡಿಸಲಿಲ್ಲ. ತೊಂಭತ್ತರ ದಶಕದಲ್ಲೂ ಪ್ರಳಯ ಆಗುತ್ತೆ ಅಂದಾಗಲೂ ಈ ಮಟ್ಟಿನ ಭಯ ಆಗಿರಲಿಲ್ಲ. ಅದಾಗಲೇ ಅಧಿಕೃತ ವಾಗಿ ಭಾರತದಲ್ಲಿ ಕೊರೋನ ವೈರಸ್ ಹರಡಿ ಕೊರೋನಾ ವೈರಸ್ ನಿಂದಲೇ ಸಂಭವಿಸುತ್ತಿದ್ದ ಸಾವಿನ ಸರಣಿ ಮುಂದುವರೆದಿತ್ತು. ದೇಶಾದ್ಯಂತ ಸಾಂಕ್ರಾಮಿಕ ಕಟ್ಟೆಚ್ಚರ ವಹಿಸಿ ಆರೋಗ್ಯ ನಿಯಮಾವಳಿಗಳನ್ನು ರೂಪಿಸಲಾಗಿತ್ತು. ಇತ್ತ ನಾವು ಕನಸಿನ ಮನೆಯೊಂದನ್ನು ಕೊಳ್ಳಲು ನಮ್ಮ ಜೀವನದಲ್ಲಿ ಬದುಕಿನ ಬಹುದೊಡ್ಡ ವ್ಯವಹಾರವೊಂದನ್ನು ಮಾಡಿಕೊಂಡು ಹತ್ತು ಲಕ್ಷಗಳನ್ನು ಅಡ್ವಾನ್ಸ್ ಕೊಟ್ಟಿದ್ದೆವು. ಈ ಕೊರೋನಾ ಮಧ್ಯೆ ಈ ವ್ಯವಹಾರ ಏನಾಗುವುದೋ ಏನೋ ಎಂಬ ಆತಂಕ! ಆಸ್ತಿಯ ರಿಜಿಸ್ಟರ್ ಮಾಡಿಸಲು ಸಬ್ ರಿಜಿಸ್ಟರ್ ಕಚೇರಿಗೆ ದಿನಾಲು ಎಡತಾಕಿದರೆ ರಿಜಿಸ್ಟ್ರಾರ್ ಕಛೇರಿಯಲ್ಲಿ ಆಗುತ್ತಿರುವ ಅವ್ಯವಹಾರಗಳನ್ನು, ಆಸ್ತಿ ದಾಖಲೆಗಳಲ್ಲಿ ಆಗುತ್ತಿರುವ ವ್ಯಾಪಕ ಮೋಸಗಳನ್ನು ತಡೆಗಟ್ಟಲು ಬಳಸುತ್ತಿರುವ ''ಕಾವೇರಿ' ತಂತ್ರಾಂಶದ update ಗಾಗಿ ಒಂದೆರಡು ವಾರಗಳು ತಡವಾಯಿತು. ಪ್ರಾಯೋಗಿಕವಾಗಿ ದಿನಕ್ಕೆ ಲಿಮಿಟ್ ಆಗಿ ರಿಜಿಸ್ಟರ್ ಮಾಡುವ ಕಾರ್ಯ ಆರಂಭವಾಯಿತು. ಅದ್ಯಾರೋ ಪೇಪರ್ ರೈಟರ್ ಗಳ ಕರಾಮತ್ತಿನಿಂದ ಮಾರ್ಚ್ ೨೦ ಕ್ಕೆ ನಮ್ಮ ಆಸ್ತಿಯ ನೊಂದಣಿಗೆ ದಿನಾಂಕ ಗೊತ್ತು ಮಾಡಿದರು.
ಐದು ವರ್ಷದ ಮಗಳೊಂದಿಗೆ ಹತ್ತೇ ಹತ್ತು ನಿಮಿಷದ ರಿಜಿಸ್ಟರ್ ಕೆಲಸಕ್ಕೆ ಉರಿ ಬಿಸಿಲಲ್ಲಿ ಈಗ ಆಗುವುದು.... ಆಗ ಆಗುವುದು... ಆಗಿಯೇ ಬಿಡ್ತು.. ಎಂದು ಹೊಟ್ಟೆ ಹಸಿವಾದರೂ ಹತ್ತು ನಿಮಿಷ 'Register' ಆದರೆ ನೆಮ್ಮದಿಯಿಂದ ಆಸ್ತಿ ನಮ್ಮ ಹೆಸರಿಗೆ ನೊಂದಣಿಯಾದ ಖುಷಿಗೆ ಹೋಳಿಗೆ ಊಟವನ್ನೇ ಸವಿಯೋಣವೆಂದು ಕೊನೆಗೆ ದಿನವಿಡೀ ನೀರು ಊಟ ಇಲ್ಲದೇ ರಿಜಿಸ್ಟರ್ ಕೆಲಸಕ್ಕೆ ಕಾಯುವಂತಾಯಿತು. ಕೊನೆಗೆ ಅಂದು ಸಂಜೆ SOFTWARE Close ಆದುದರಿಂದ ಬಾಯಿ ಮುಚ್ಚಿಕೊಂಡು ಅಂದು ದಿನವಿಡೀ ಊಟ ನೀರಿಲ್ಲದೇ ಉಪವಾಸಕ್ಕೆ ಅರ್ಥ ಬಾರದೇ ವಿಧಿಯಿಲ್ಲದೆ ನಾನು ಕುಮುದಾ ಮಗಳು ಬೈಕ್ ಹತ್ತಿ ಕೊರೊನಾ, ಬಿಸಿಲು ಸಾಪ್ಟ್ವೇರ್, ಆ ಪೇಪರ್ ರೈಟರ್, ಈ ಬಳ್ಳಾರಿ ಜನ... ಹಾಗೆ ಹೀಗೆ ಅಂತ ಇಡೀ ವ್ಯವಸ್ಥೆಯನ್ನು ಬಹಳ ಕಟುವಾಗಿ ಶಪಿಸುತ್ತಾ ಮನೆ ಕಡೆ ಹೋಗಲು ಸಿದ್ಧವಾದೆವು. ರಿಜಿಸ್ಟರ್ ಆಫೀಸಲ್ಲೇ ಏಳು ಗಂಟೆಯಾಗಿತ್ತು. ದಿನವೆಲ್ಲಾ ಉಪವಾಸ ಇದ್ದುದರಿಂದ ಕುಮುದಾಳಿಗಾಗಲೀ ನನಗಾಗಲಿ, ಮೇಲಾಗಿ ಲಕ್ಷಾಂತರ ವ್ಯವಹಾರದ 'ನೊಂದಣಿಯ' ವಿಷಯವಾಗಿ ಆದ ಟೆನ್ಶನ್ ನಿಂದ ಮನೆಗ್ ಹೋಗಿ ಅಡುಗೆ ಮಾಡುವ ಸಮಾಧಾನ ಇಬ್ಬರಿಗೂ ಇಲ್ಲದಿದ್ದರಿಂದ ಹೋಗುವ ಹಾದಿಯಲ್ಲೇ ಏನಾದರೂ 'ಪಾರ್ಸೆಲ್' ತೆಗೆದುಕೊಂಡು ಹೋಗಬೇಕೆಂದು ನಿರ್ಧರಿಸಿ ಬೈಕನ್ನು ಕೌಲ್ ಬಜಾರ್ ಕಡೆಗೆ ತಿರುಗಿಸಿ ಪ್ರಸಿದ್ದ ಪಾಸ್ಟ್ ಪುಡ್ ಹೋಟೆಲ್ ಒಂದರಿಂದ ಊಟವನ್ನು ಕಟ್ಟಿಸಿಕೊಂಡು ಬೈಕಿನ ಬ್ಯಾಗಿಗೆ ಹಾಕಿಕೊಂಡೆವು.
ಅಂದು ಬೆಳಿಗ್ಗೆಯಿಂದ ಒಳ್ಳೆಯ ಕೆಲಸಕ್ಕೆ ಹೋಗುತ್ತಿದ್ದೀವಿ... ಗಣೇಶ ದೇವಸ್ಥಾನ ಕ್ಕೆ ಹೋಗಬೇಕಿತ್ತು ಎಂದು ಕುಮುದಾ ಗೊಣಗುತ್ತಿದ್ದಳು. ನಾಸ್ತಿಕ ನಾದ ನಾನು ಆಸ್ತಿಯ ನೋಂದಣಿ ದಿನವೂ ದೇವಸ್ಥಾನಕ್ಕೆ ಹೋಗಲು ಸಮ್ಮತಿಸಲಿಲ್ಲ. ಆಗೂ ಹೀಗೂ ಹೋಗುತ್ತಿದ್ದೇನೇನೋ ಆದರೆ ಮನೆಯಲ್ಲಿ ಇರುವಾಗಲೇ ಆ writer ಬೇಗ ಬನ್ನಿ ಎಂದು ಕರೆ ಮಾಡಿದುದರಿಂದ ದೇವಸ್ಥಾನ ಗಣೇಶ ಎನ್ನದೇ ರಿಜಿಸ್ಟರ್ ಕಚೇರಿಗೆ ಓಡಿ ಹೊಗಿದ್ದೆವು. ಆದರೆ ಇಂದಿನ ಕೆಲಸವೂ ಆಗದೇ ಇದ್ದುದ್ದರಿಂದ ಈಗಲಾದರೂ ದೇವಸ್ಥಾನಕ್ಕೆ ಹೋಗಿ ಹೋಗಾಣ ಎಂಬ ಬೇಡಿಕೆಗೆ ಆ ದಿನವೆಲ್ಲವೂ ಪೇಚಾಡಿಯೂ ಕೆಲಸ ಆಗದೇ ಇರುವ ಅಸಮಾಧಾನ ಕ್ಕೆ 'ಆಯ್ತು ಬಾ... ಆದರೆ ನನ್ನ ಬಲವಂತ ಮಾಡೋ ಹಾಗೆ ಇಲ್ಲ' ಎಂದು ಹೇಳಿ ಬರುತ್ತಿದ್ದೆವು. ಬೆಳಗಲ್ ಕ್ರಾಸ್ ಮುಂದೆ ಬರುತ್ತಾ ಇದ್ದಾಗ ಜನನಿಬಿಡ ರಸ್ತೆಯಲ್ಲೇ ರೋಡ್ Divider ನಿಂದ ಎತ್ತಲೂ ಸರಿಯಲಾಗದೇ, ಹಾರಲಾಗದೇ 500 ರೂಪಾಯಿಯ ನೋಟೊಂದು ವಾಹನಗಳು ಹಾದುಹೋದ ರಭಸಕ್ಕೆ ಸರಿದಾಡುತ್ತಾ ಇತ್ತು. ಬೈಕನ್ನು ಸ್ಲೋ ಮಾಡುತ್ತಾ "ಕುಮುದಾ ಮುಂದೆ 500 ನೋಟು ಬಿದ್ದಿದೆ. ಇಳಿದು ತೆಗಿದುಕೊ" ಎಂದೆ. ನಾನು ರಸ್ತೆಯ ಮಧ್ಯದಲ್ಲಿ ಬೈಕ್ ನಿಲ್ಲಸಿದ್ದಕ್ಕೆ ಹಿಂದಿನ ವಾಹನಗಳು ಹಾರನ್ ಮಾಡುತ್ತಿದ್ದರೂ ರಸ್ತೆಯಲ್ಲಿ ಬಿದ್ದಿದ್ದ ಐನೂರು ರುಪಾಯಿ ಬಿಟ್ಟು ಹೋಗಲಾದೀತೇ??? ಕುಮುದಾ ಇಳಿದು ತೆಗೆದುಕೊಂಡು ಯಾರದ್ದೋ ಏನೂ ಎಂದು ನಗುಮುಖದಿಂದ ನನ್ನ ಕೈಗಿತ್ತಳು. ನಾನು ಆ ನೋಟನ್ನು ಕೈಯಲ್ಲಿ ಹಿಡಿದುಕೊಳ್ಳುವುದಕ್ಕೂ ಇನ್ನೊಬ್ಬ ಅನಾಮಿಕ ವ್ಯಕ್ತಿಯಾರೋ ಆ ನೋಟು ನನ್ನದೆಂದು, ನನ್ನ ಜೇಬಿನಿಂದಲೇ ಬಿದ್ದಿತೆಂದು, ಆಟೋ ನಿಲ್ಲಿಸಿ ಬರುವ ಅಷ್ಟೊತ್ತಿಗೆ ನೀವು ಈ ನೋಟನ್ನು ನೋಡಿ ತೆಗೆದುಕೊಂಡಿರೆಂದು ವಾದ ಮಂಡಿಸಿದ. ಪ್ರತಿಯಾಗಿ ನಾನು ನನ್ನದಲ್ಲದ ದುಡ್ಡಿಗಾಗಿ ವಾದ ಮಂಡಿಸಲು ನನ್ನ ಬಳಿ ಏನೂ ಇಲ್ಲದೇ ಕೆಲವೇ ಸೆಕೆಂಡ್ ಹಿಡಿದ ನೋಟು ನನ್ನ ಕೈಯಿಂದ ಅವನ ಕೈಗೆ ಜಾರಿತು. ಬಹುಶಃ ಈ ಐನೂರು ರೂಪಾಯಿ ಸಿಕ್ಕಿದ್ದರೇ ಆ ಖುಷಿ ಆ ದಿನವಿಡೀ ಊಟ ನೀರಿಲ್ಲದೇ ರಿಜಿಸ್ಟರ್ ಕಚೇರಿಯ ಮುಂದೆ ಕಾದಿದ್ದು, ಅಲೆದಾಡಿದ್ದು ಆ ನೋವಿನ ತೀವ್ರತೆಯನ್ನು ಕಡಿಮೆ ಮಾಡುತ್ತಿತ್ತೇನೋ...???ಆದರೆ ಅದೂ ಕೈಗೆ ಬಂದದ್ದು ಜೇಬಿಗೆ ಬರದೇ ಪರರ ಕೈಗೆ ಹೋಯಿತು.
"ಯಾಕೋ ನಮ್ ಟೈಮ್ ಇನ್ನೂ ಪಕ್ಕ ಕೂಡಿ ಬರುತ್ತಿಲ್ಲ ಕಣ್ರಿ..." ಇಷ್ಟು ದಿನ ಕೆಲವು ಸಂಬಂಧಿಕರು, ಸ್ನೇಹಿತರ ಬಳಿ ಹಣಕಾಸಿನ ಹೊಂದಾಣಿಕೆಯನ್ನು ಮಾಡುತ್ತಿದ್ದಾಗ ಇನ್ನೇನು ಅಕೌಂಟಿಗೆ ಹಣ ಬಿತ್ತು ಬಿತ್ತು ಅನ್ನುತ್ತಲೇ ನಿರೀಕ್ಷಿಸಿದ ಎಲ್ಲವೂ ಇಲ್ಲವಾದವು. ಹತ್ತಾರು ಭರವಸೆಗಳೆಲ್ಲವೂ ಬರಿದಾಗಿ ಉಳಿದದ್ದು ಒಂದೆರಡು. ಇಂದು ದಿನವಿಡೀ ಸಬ್ ರಿಜಿಸ್ಟರ್ ಆಪೀಸ್ನಲ್ಲಿ ಕಾದರೂ ಕೆಲಸವಾಗಲಿಲ್ಲ... ಈಗ ಐದುನೂರು ಕೈಗೆ ಸಿಕ್ಕಿದ್ದರೂ ನಮ್ಮದಾಗಲಿಲ್ಲ... ಎನ್ನುತ್ತಾ ಇದ್ದಳು..
ಕುಮುದಾ... ಹಣಕಾಸಿನ ವ್ಯವಹಾರ - ವಿಚಾರವೇ ಹಾಗೆ.. ನಮ್ಮದು.. ನನ್ನದು.. ಬರತ್ತೆ ಅನಿಸುವುದು ಆದರೆ ಅದು ಬರಲ್ಲ. ಏನೇನೋ ಭರವಸೆಗಳಲ್ಲಿ ಮಾತಿನಬಲೆಯೇ ಕಟ್ಟಿ ಬಹಳಷ್ಟು ಸಂದರ್ಭಗಳಲ್ಲಿ ಭ್ರಮೆಯೇ ಆಗಿರುತ್ತದೆ. ಅದು ನಮ್ಮದಾಗಲೂ ಪವಾಡವೇ ಆಗಬೇಕು. ಆಗುವ ಕಾಲಕ್ಕೆ ಒದಗುವುದು. ಇದರಲ್ಲಿ ಯಾವ ಮನುಷ್ಯರು, ಯಾವ ದೇವರು ಏನು 'ಮಾಡಲಾಗದು' ಎನ್ನುವ ಪದ ಉಚ್ಚರಣೆ ಮಾಡುವಹೊತ್ತಿಗೆ ಒಂದು ಹೇಜ್ಜೇನು ಹುಳು ಎಲ್ಲಿತ್ತೊ?? ಎಲ್ಲಿಗೆ ಹೋಗುತ್ತಿತ್ತೋ ಒಂದು 'ಮಾಡಲಾಗದು' ಪದದ 'ಮಾ' ಉಚ್ಚರಣೆಗೆ ಸರಿಯಾಗಿ ನನ್ನ ತುಟಿಯ ಮಧ್ಯೆ ಸಿಕ್ಕಿತ್ತು. ಆಕಸ್ಮಿಕವಾಗಿ ಮಾತನಾಡುವಾಗ ಬಾಯಿಗೆ ಬಂದ ಆ ಹುಳುವನ್ನು ನಾನೇ ಕಚ್ಚಿ ನುಂಗುವಂತೆ ಬಾಯಿಯನ್ನು ಲಬಕ್ಕನೇ ಮುಚ್ಚಿದ್ದರಿಂದ ಪಾಪ ಆ ಹುಳುವಾದರೂ ಏನುಮಾಡಬೇಕು??ನನ್ನ ಬಾಯಿಯ ಘರ್ಷಣೆಗೆ ಸಿಕ್ಕ ಜೇನುಹುಳು ಕೆಳತುಟಿಯ ಒಳಭಾಗಕ್ಕೆ ಕಚ್ಚಿಯೇ ಬಿಟ್ಟಿತು. ಅದರ ವಿಷದ ಮುಳ್ಳೊಂದನ್ನು ಚಟಾರನೇ ಚುಚ್ಚಿತು. ಜೇನುಹುಳುಗಳು ತನ್ನ ಹಿಂಬದಿಯಿಂದ ವಿಷದ ಕೊಂಡಿಯನ್ನು ಚುಚಿದಾಗ ಒಂದು ರೀತಿಯ ರಾಸಾಯನಿಕ ಸ್ರವಿಸುವುದರಿಂದ ಅದು ಒಂದು ತರ ವಾಸನೆ ಬರುತ್ತದೆ. ಆದರೆ ತತ್‍ಕ್ಷಣ ಬಂದೊದಗಿದ ಅಘಾತಕ್ಕೆ ಥೂ... ಥೂ... ಎನ್ನುತ್ತಾ ಒಮ್ಮೆಲೆ ಬ್ರೇಕ್ ಹಾಕಿದೆ.
ಯಾಕ್ರಿ ಏನಾಯಿತು? ಏನಾಯಿತ್ರಿ..?? ಎಂದು ಕುಮುದಾ ಗಾಬರಿಯಾಗಿ ಕೇಳಿದಳು. ಯಾವುದೋ ಜೇನುಹುಳ ಕಚ್ಚಿತು.. ಎಂದು ಬೈಕಿನ ಮಿರರ್ ನೋಡುತ್ತಾ ಆ ಮುಳ್ಳನ್ನು ತೆಗೆಯಲು ಪ್ರಯತ್ನಿಸುತ್ತಿದ್ದೆ. ಕುಮುದಾ: ಜೇನುಹುಳನಾ??? ನೋಡ್ರೀ... ಜೇನುಹುಳನೋ ಬೇರೆ ಹುಳನೋ??
ಜೇನುಹುಳನೇ ಕಣೇ... ಜೇಬಲ್ಲಿದ್ದ ಮೊಬೈಲ್ ತೆಗೆದು ಮೊಬೈಲ್ ಟಾರ್ಚ್ on ಮಾಡಿ ನಾಲಿಗೆಯಿಂದ ಒಳ ತುಟಿ ಸವರಿಕೊಂಡು ನೋಡಿದರೆ ಅಲ್ಲೊಂದು ತರಚು ತರಚಾದ ವಸ್ತು ಅಡ್ಡಬಂತು. ನೋವು ಆಗಿರುವ ಸ್ಥಳವನ್ನು ಸೂಚಿಸುತ್ತಿತ್ತು. ಮುಳ್ಳನ್ನು ಕುಮುದಾ ಉಗುರುಗಳಿಂದ ಕಿತ್ತು ತೆಗೆದಳು.
ನನಗೆ ಜೇನುಹುಳುಗಳು ಕಚ್ಚಿದ್ದು ಹೊಸತೇನಾಗಿರಲ್ಲಿಲ್ಲ... ಇದಕ್ಕೂ ಮುನ್ನ ಆಗೊಂದು ಈಗೊಂದರಂತೆ ಹೆಚ್ಚು ಕಡಿಮೆ ಸಾವಿರಾರು ಹುಳುಗಳು ಕಚ್ಚಿದ್ದಾವೆ. ಆದರೆ ಹೆಜ್ಜೇನು ಹುಳುವಿನಿಂದ ಕಚ್ಚಿಸಿಕೊಂಡ ಅನುಭವ ನನಗೆ ಇರಲಿಲ್ಲ. ಆ ದಿನವೆಲ್ಲಾ ಉಪವಾಸ ಇದ್ದ ಪರಿಣಾಮವೋ ಅಥವಾ ನಾನು ಜೇನು ಕಚ್ಚಿಸಿಕೊಳ್ಳದೇ ಅನೇಕ ವರ್ಷಗಳಾಗಿದ್ದು ಜೇನಿನ ವಿರುದ್ಧ ಹೋರಾಡುವ ಪ್ರತಿರೋಧಕ ಶಕ್ತಿ ನನ್ನಲ್ಲಿ ಕಡಿಮೆ ಆಗಿತ್ತೋ ಗೊತ್ತಿಲ್ಲ. ಕ್ಷಣಾರ್ಧದಲ್ಲಿ ತುಟಿಯೆಲ್ಲಾ ತುರಿಸತೊಡಗಿತು. ಮೊದಲೇ ಹೊಟ್ಟೆ ಹಸಿವಿನಿಂದ ಕಂಗೆಟ್ಟ ಹೊಟ್ಟೆಯಲ್ಲಿ ಸಂಕಟದ ತೀವ್ರತೆ ಹೆಚ್ಚಾಗಿ ಸಿಹಿತಿಂದಾಗ ದವಡೆಯ ಗೋಡೆಗಳು ರವೆ ರವೆಯ ತರಹ ಒರಟು ಒರಟಾದಂತೆ ದದ್ಧರಿಸಿದಂತಾಯಿತು. ಒಂದು ಕ್ಷಣ ಸುಸ್ತಾಗಿ ನರಳಿದಂತೆ ಆಯಿತು. ಯಾವ ದೇವಸ್ಥಾನವು ಬೇಡ ಇಲ್ಲೇ ರೋಡಲ್ಲಿ ನಮಸ್ಕಾರ ಮಾಡುತ್ತೀನಿ ನಡೆಯಿರಿ ಎಂದು ಕುಮುದಾ ಹೇಳಿದಳು.
ಮನೆಗೆ ಹೋಗಲು ಬೈಕ್ ಹತ್ತಿದ ಮೇಲೆ ಇಲ್ಲೇ ಯಾವುದಾದರೂ ಮೆಡಿಕಲ್ ಶಾಪ್ ಲ್ಲಿ ಮಾತ್ರೆ ಇಂಜೆಕ್ಷನ್ ಏನಾದರೂ ಇದ್ದಾವೇನೋ ಕೇಳಿ ಎಂದಳು... "ಹೇ ನಡೀ... ಜೇನು ಹುಳಕ್ಕೆ ಯಾವ ಮಾತ್ರೆ?? ಯಾವ ಇಂಜೆಕ್ಷನ್ ?? ಇಂತಹವು ಅದೆಷ್ಟೋ ಹುಳುಗಳು ಕಚ್ಚಿಸಿಕೊಂಡಿದ್ದೇನೆ. ಇಂಜೆಕ್ಷನ್ ಬೇಡ ಏನು ಬೇಡ ಸರಿ ಆಗತ್ತೆ ನಡೀ... "ಅಂತೇಳಿ ಇವಳ ಮಾತು ಕೇಳದೇ ಮೆಡಿಕಲ್ ಶಾಪ್ ಗೆ ಹೋಗದೇ ನೇರವಾಗಿ ಮನೆಗೆ ಬಂದೆವು. ಮನೆಗೆ ಬಂದ ಮೇಲೆ ದಿನಾಪೂರ ಬಿಸಿಲ ಬೆವರಿಗೆ ಮೈಯೆಲ್ಲಾ ಅಂಟಾಗಿ ಕಸಿವಿಸಿಯಾಗಿ ಸ್ನಾನವನ್ನೂ ಮಾಡಿದೆ. ಮೊದಲೇ ಬೇಸಿಗೆ... ಟ್ಯಾಪ್ ಲ್ಲಿ ಬರುತ್ತಿದ್ದ ನೀರು ಉಗುರುಬೆಚ್ಚಗಿಂತ ತುಸು ಹೆಚ್ಚೇ ಬಿಸಿಯಾಗಿತ್ತು. ಜೇನಿನ ವಿಷ ತುಂಬಿದ ತುಟಿಗಳು ತುರಿಸುತ್ತಿದ್ದುದರಿಂದ ಬಿಸಿ ನೀರನ್ನು ಬಾಯೊಳಗೂ ಹಾಕಿ ಎರಡ್ಮೂರು ಬಾರಿ ಮುಕ್ಕುಳಿಸಿದೆ. ತಡಮಾಡದೇ ಹಸಿದ ಹೊಟ್ಟೆಗೆ ಪಾರ್ಸೆಲ್ ತಂದ ಊಟವನ್ನು ಬಾಯಿಗೆ ಹಾಕಿಕೊಂಡೆವು. ಊಟ ಮಾಡಿ ಮುಗಿಸುವ ಅಷ್ಟೊತ್ತಿಗೆ ಕೆಳತುಟಿ ಇದ್ದ 'ನಾರ್ಮಲ್' ಗಿಂತಲೂ 'ಮೂರ್ನಾಲ್ಕು ಪಟ್ಟು'ದೊಡ್ಡದಾಗಿ ವಿಕಾರವಾಗಿ ಹೋಯಿತು. ಹಾಗೆ ಹಾಸಿಗೆಯಲ್ಲಿ ಬಿದ್ದುಕೊಂಡು ಹತ್ತಿಪ್ಪತ್ತು ನಿಮಿಷ ಮಾತಾಡುತ್ತಾ ದಿನದ ಸುಸ್ತಿಗೆ ಒಂದರ್ಧ ಗಂಟೆ ಒಂದು ಜೊಂಪು ನಿದ್ದೆ ಹತ್ತಿತು.. ಬಹುಶಃ ಬಿಸಿ ನೀರು ಬಾಯೊಳಗೆ ಹಾಕಿದ್ದಕ್ಕೂ, ಊಟವೂ ಸ್ವಲ್ಪಮಟ್ಟಿಗೆ ಬಿಸಿ ಇದ್ದುದರಿಂದಲೂ ಏನೋ ತುಟಿಗಳಿಗೆ ಬಿಸಿ ಮಾಡಿದ್ದರಿಂದ ತುಟಿಯ ನರಗಳು ಚುರುಕು ಆಗಿ ಸುಮ್ಮನೇ ಇದ್ದ ಸುಪ್ತ ನರಗಳೆಲ್ಲಾ active ಆಗಿ ಜೇನಿನ ವಿಷ ವ್ಯಾಪಿಸಿ ಬಾವು ಎರಡೂ ಕೆನ್ನೆಗಳಿಗೂ, ಮೇಲ್ದುಟಿಗೂ ಹಬ್ಬಿತು. ಕೆಳತುಟಿಯಂತೂ ನಿರಂತರವಾಗಿ ಬಾವುತ್ತಲೇ ಬಂದು ಏನೋ ನೋವು ಅಧಿಕ ಎನಿಸಿ ಎಚ್ಚರವಾಯಿತು. ಎದ್ದೋಗಿ ಮಿರರ್ ನೋಡಲು ಆಗದೇ ಸೆಲ್ಪಿ ತೆಗೆದುಕೊಂಡು ನೋಡಿದರೆ ನನ್ನ ಮುಖವನ್ನು ನಾನೇ ನೋಡಿ ಹೆದರಿಕೊಳ್ಳುವಷ್ಟು ವಿಕಾರವಾಗಿ ಆಯಿತು. ನನ್ನ ಕುರೂಪವನ್ನು ನೋಡಿ ಹೆದರಿದ ಕುಮುದಾ ಮೆಡಿಕಲ್ ಶಾಪ್ ಅಲ್ಲಿ ಹೋಗಿ ಏನಾದರೂ ಔಷದೀ ತಗೊಂಡು ಬರ್ರಿ ಅಂದರೂ ಬರಲಿಲ್ಲ. ನಡೀರೀ ಈಗಲಾದರೂ ಆಸ್ಪತ್ರೆಗೆ ಹೋಗೋಣ... ಎಷ್ಟೊಂದು ದಪ್ಪ ಆಯಿತಲ್ಲಾ?? ಸುಮ್ಮನೇ neglect ಮಾಡೋದು ಬೇಡ ಆಸ್ಪತ್ರೆಗೆ ಹೋಗೋಣ ಎಂದು ಹೇಳಿದಳು.
ಏನು ಆಗಲ್ವೇ... ಜೇನು ಹುಳುಗಳು ಕಚ್ಚಿಸಿಕೊಂಡು ನನಗೆ ಅಭ್ಯಾಸ ಇದೆ. ಇನ್ನೂ ಒಂದೆರಡು ಗಂಟೆಗಳಲ್ಲಿ ಸರಿ ಆಗತ್ತೆ ಎಂದು ಹೇಳಿದೆ. ನನ್ನ ಪ್ರತಿಕ್ರಿಯೆಗೆ ಸಮಾಧಾನಗೊಳ್ಳದ ಕುಮುದಾ ಆಸ್ಪತ್ರೆಗೆ ಹೋಗಲೇಬೇಕೆಂದು ಹಠ ಹಿಡಿದಳು. ಎಲ್ಲರೂ ಹೋಗೋಣ ಎಂದು ಸಿದ್ದವಾದೆವು. ಅದಾಗಲೇ ರಾತ್ರಿ 11-30 ಆಗಿದ್ದರಿಂದ ಮಗಳು ಬೇರೆ ಮಲಗಿದ್ದುದರಿಂದ ನಾನೊಬ್ಬನೇ ಹೋಗಿ ಬರುವೆ ಎಂದು ಒಂದು ಲುಂಗಿ ಜೇಬಿಲ್ಲದ ಟೀಷರ್ಟ್ ನಲ್ಲೇ ಮುಖಕ್ಕೆ ಒಂದು ಮಾಸ್ಕ್ ಹಾಕಿಕೊಂಡು ಹೊರಟು ಜಿಲ್ಲಾ ಆಸ್ಪತ್ರೆಯ OPD EMERGENCY ಕಡೆ ಹೋದೆ. ಚೀಟಿ ನೋಂದಣಿ ಅಂತಲೇ ಹನ್ನೆರಡು ಗಂಟೆ ಆಗಿ ಹೋಯಿತು. ಕರೋನಾಕ್ಕೆ ಸಂಬಂಧಿಸಿದ ಗಂಟಲು issue ಗಳಾಗಿದ್ದರೆ ಮೊದಲು ಅವರು ಕರೋನಾ ಟೆಸ್ಟ್ ಮಾಡಿಸಬೇಕಾಗಿತ್ತು. ನನ್ನದು ತುಟಿಯು ಮಾತ್ರ ಊದಿಕೊಂಡಿದ್ದರಿಂದ ನಾನು ಕರೋನಾ ಗುಣಲಕ್ಷಣಗಳ ಸಾಲಿಗೆ ಸೇರಿಸದೇ ನನಗೆ ಡಾಕ್ಟರ್ ಬಂದು ನೋಡುವರು ಎಂದು ನನ್ನನ್ನು ಕುಳಿತು ಕಾಯಲು ಹೇಳಿದರು.
ಅಲ್ಲಿದ್ದ ನರ್ಸ್ ಡಾಕ್ಟರ್ ಗಳೆಲ್ಲಾ ಮೆಡಿಕಲ್ ವಿದ್ಯಾರ್ಥಿಗಳೇ.... ನರ್ಸ್ಗಳೂ ಕೂಡ ಟ್ರೈನಿಂಗ್ practitioner ಆಗಿದ್ದರು. ಸೀನಿಯರ್ ಗವರ್ನಮೆಂಟ್ ಡಾಕ್ಟರ್ ಗಳು ಇರಬೇಕಾಗಿತ್ತಾದರೂ ಹಾಜರಿಯಲ್ಲಿ ಮಾತ್ರ ಹಾಜರಿದ್ದು ಮಧ್ಯರಾತ್ರಿ ಹನ್ನೆರಡು ಒಂದು ಗಂಟೆಯಲ್ಲಿ ಅವರೆಂದು, ಯಾರಿಗೆ ಸಿಗಬೇಕು???ಜ್ಯೂನಿಯರ್ ಡಾಕ್ಟರ್ ನರ್ಸ್ಗಳಲ್ಲೇ ಸೀನಿಯರ್ ತರ ಕೆಲವರು Act ಮಾಡುತ್ತಿದ್ದರು.
ನನಗೆ ಬಿ ಪಿ ಎಲ್ಲಾ ಚೆಕ್ ಮಾಡಿದ ಮೇಲೆ ಒಂದು ಬೆಡ್ ಮೇಲೆ ಕುಳಿತಿದ್ದೆ. ಇಪ್ಪತ್ತಾರು ಇಪ್ಪತ್ತೆಂಟು ವಯಸ್ಸಿನ ಒಬ್ಬ ಡಾಕ್ಟರೋ ಅಥವಾ ನರ್ಸೋ ಗೊತ್ತಾಗಲಿಲ್ಲ. ಕಲರ್ ಡ್ರೆಸ್ ಹಾಕಿದ್ದರು ಕತ್ತಲ್ಲಿ ,/ಕೈಯಲ್ಲಿ ಸ್ಟೆತಾಸ್ಕೋಪ್ ಇರಲಿಲ್ಲ. ಅವರ ಜೊತೆಗೆ ಒಂದಿಬ್ಬರು ಮೂವರು ಭಾವಿ ವೈದ್ಯರು ನನ್ನ ಬಳಿ ಬಂದರು. ಅದರಲ್ಲೊಬ್ಬ ವೈದ್ಯಕೀಯ ವಿದ್ಯಾರ್ಥಿನಿಯೋರ್ವಳು...
ಏನಾಯ್ತಪ್ಪ...???
ಮಾಸ್ಕ್ ಕೆಳಗೆ ಸರಿಸಿ ಮೇಡಂ ಜೇನು ಹುಳ ಕಚ್ಚಿದೆ ಮೇಡಂ ಎಂದೆ....
ಹ್ಹಾ.... ಇಷ್ಟೊತ್ತಲ್ಲಿ ಜೇನು ಹುಳ ಹೇಗೆ ಕಚ್ಚಿತು...???
ಈಗ ಕಚ್ಚಿದ್ದಲ್ಲ .. ಏಳೂವರೆ-ಎಂಟುಗಂಟೆಗೆ ಕಚ್ಚಿದೆ... ಬೈಕಲ್ಲಿ ಬರುವಾಗ ಆಕಸ್ಮಿಕವಾಗಿ ಬಾಯಿಗೆ ಅಡ್ಡ ಬಂದು ಕಚ್ಚಿತು ಎಂದೆ...
Glouse ಹಾಕಿದ ಕೈಯಲ್ಲಿ ತುಟಿಯ ಮುಟ್ಟಿನೋಡಿ ಜೇನು ಕಚ್ಚಿರುವ ಜಾಗದಲ್ಲಿ ಒಂದು sting ಇರತ್ತೆ ಅದು ತೆಗೆಯಬೇಕು ಎಂದು ಹುಡುಕಾಡುತ್ತಿದ್ದರು...
ಮೇಡಂ ಮುಳ್ಳಿಲ್ಲ... ತೆಗೆದಿದ್ದೇನೆ .. ಈ swelling ಗೆ ಏನಾದರೂ ಕೊಡಿ.. Sweling ಕಡಿಮೆ ಮಾಡಿ ಅಂದೆ...
ಪಕ್ಕದಲ್ಲೆ ನಿಂತಿದ್ದ ಆ ನರ್ಸೋ ಡಾಕ್ಟರೋ "ನಿಮಗೆ ಮದುವೆ ಆಗಿತಾ?? ಅಂದಳು...
'ಹ್ಞೂಂ ಮೇಡಂ..' ಎಂದು ಗೋಣು ಹಾಕಿದೆ...
"ಹಂಗಾದರೆ ನೀನು ಯಾವುದೋ ಮಾತ್ರೆ ತಗೊಂಡಿದ್ದೀಯಪ್ಪ.. ಅದರ ರಿಯಾಕ್ಷನ್ ಇದು... ಹೌದಾ ಅಲ್ಲವಾ ಸರಿಯಾಗಿ ಹೇಳಬೇಕು... ಏನೇನೋ ಮಾತ್ರೆ ತಗಳಾದು ರಿಯಾಕ್ಷನ್ ಮಾಡಿಕೊಂಡು ಬರೋದು... ತಗ.. ಈ ಮಾತ್ರೆ ತಗಂಡ್ ಹೋಗು ಬೆಳಕು ಹರಿಯುವಷ್ಟೊತ್ತಿಗೆ ಸರಿಯಾಗತ್ತೆ" ಎಂದು ಒಂದು ಚೀಟಿಯನ್ನು ನನ್ನ ಕೈಗಿತ್ತಳು. ನನ್ನ ಪ್ರಾಬಲಮ್ ಗೂ ಅವರು ಅಸಂಬದ್ದ ಮಾತಾಡಿದ್ದಕ್ಕೂ ಆಯಮ್ಮ ಏನೋ ಮದುವೆ -ಮುಂಜಿ, ಮಾತ್ರೆ-ಗೀತ್ರೆ ಏನೇನೋ ಹೇಳಿದ್ದು ನನ್ನನ್ನು ಕೆರಳಿಸಿತು.
ಬಾವು ಬಂದ ತುಟಿಗಳನ್ನು ನಾನು ತೆರೆದು ಮಾತಾಡಿದರೆ ಪದಗಳ ಉಚ್ಚಾರಣೆಯನ್ನು ಸರಿಯಾಗಿ ಮಾಡಲಾಗುತ್ತಿಲ್ಲ. ಆದರೂ ಬಾಯ್ದೆರೆದು "ರೀ ಮೇಡಂ... ನಾನು ಏನೋ ಪ್ರಾಬಲಮ್ ಹೇಳಿದರೆ ನೀವು ಏನೋ ಹೇಳಿ ಯಾವುದಕ್ಕೋ ಮಾತ್ರೆ ತಗೋಳಿ ಅಂತೀರಲ್ರೀ...?? ಇದು ಜೇನು ಹುಳವೇ ಕಚ್ಚಿದೆ... ಈ swelling ಗೆ ಟ್ರೀಟ್ಮೆಂಟ್ ಕೊಡ್ರಿ" ಎಂದು ಜೋರಾಗಿಯೇ ಮಾತಾಡಿದೆ.*
ನಾನು ಮಾತಾಡಿದ force ಗೆ ಕೆಲವರು ನಾನು ಹೇಳುವುದು ನಂಬಿದಂತೆ ಕಾಣಿಸಿತಾದರೂ ಆ ನರ್ಸೋ ಡಾಕ್ಟರೋ ಆಯಮ್ಮ ಮಾತ್ರ ನಾನು ಯಾವುದೋ ಮಾತ್ರೆಯನ್ನೇ ತಗೊಂಡಿದ್ದೀನಿ.. ಅಂತಲೇ ವಾದಿಸುತ್ತಿದ್ದಳು. ಮೇಡಂ ಜಾಸ್ತಿ ಮಾತಾಡಬೇಡಿ ನನಗೆ swelling ಗೆ ಟ್ರೀಟ್ಮೆಂಟ್ ಕೋಡಿ ಅಂತ ಕೇಳಿದ್ದಕ್ಕೆ "ಡಾಕ್ಟರ್, ನರ್ಸ್ ನಾವಿಲ್ಲಿದ್ದೀವಿ.. ನಮಗೆ ಗೊತ್ತು ಯಾವುದಕ್ಕೆ ಯಾವ ಟ್ರೀಟ್ಮೆಂಟ್ ಕೊಡಬೇಕು ಅಂತಾ..." ಎಂದು ಗೊಣಗುತ್ತಿದ್ದಳು...
ಮೇಡಂ ನಾನು ಜೇನಿನ ವಿಷಯದಲ್ಲಿ ಒಂಥರಾ ಡಾಕ್ಟರೇಟ್ ಮಾಡಿದ್ದೀನಿ ಆದರೆ ಸರ್ಟಿಫಿಕೇಟ್ ಇಲ್ಲ... ಪಕ್ಕದಲ್ಲಿದ್ದ ನನ್ನ ಮೊಬೈಲ್ ತೆಗೆದು ನನ್ನ YouTube ಚಾನೆಲ್ ನಲ್ಲಿ ನನ್ನದೇ ವೀಡಿಯೋ 'ಜೇನು ಕಚ್ಚಿಸಿಕೊಳ್ಳದೇ ಕೀಳುವುದು ಹೇಗೆ'?? ಎಂಬ ಮೂರ್ನಾಲ್ಕು ನಿಮಿಷದ ವೀಡಿಯೋ ಅವರ ಮುಂದೆ ಹಿಡಿದೆ... ಎರಡುನಿಮಿಷ ಇದನ್ನು ನೋಡಿ ಆಮೇಲೆ ಮಾತಾಡಿ ಎಂದು ಹೇಳಿದೆ. ರೋಚಕ ಮನೋಭಾವದಿಂದ ವೀಡಿಯೋ ನೋಡಿದ ಎಲ್ಲರೂ ಆಮೇಲೆ ಬಾರೀ ಧೈರ್ಯ... so wonderful ಏನೇನೋ ಮೆಚ್ಚುಗೆ ಹೇಳಿ ಜಾಸ್ತಿ ಲಿಪ್ movement ಮಾಡಬೇಡಿ... ಸರ್ ಎಂದು ಮರ್ಯಾದೆ ಕೊಡಲು ಶುರುಮಾಡಿದರು.
ಮೇಡಂ ನಾನು ಟೀಚರ್... ನನಗೆ ಜೇನುಗಳ ಬಗ್ಗೆ ಚೆನ್ನಾಗಿಯೇ ತಿಳಿದಿದೆ. ಆದರೆ ನನಗೆ ನಿಮ್ಮ ಹತ್ತಿರ ಈ swelling ಇಂದ ಸರಿಯಾಗಿ ಮಾತನಾಡಲಾಗುತ್ತಿಲ್ಲ. ನೀವು ನೋಡಿದರೆ ಏನೇನೋ ಬಾಯಿಗೆ ಬಂದಹಾಗೆ ಮಾತಾಡುತ್ತಿದ್ದೀರಿ... ಎಂದು ಹೇಳಿದ್ದಕ್ಕೆ ಇನ್ನೊಬ್ಬ ವಿದ್ಯಾರ್ಥಿನಿ ಗಂಟಲು swelling ಬಂದ್ರೆ ಉಸಿರಾಟಕ್ಕೆ ಪ್ರಾಬಲಮ್ ಆಗತ್ತೆ ಅಂತ ಕತ್ತಿನ ಸುತ್ತಲೂ ಮತ್ತು ಗಂಟಲೊಳಗೆ ಬ್ಯಾಟರಿ ಬಿಟ್ಟು ನೋಡಿದಳು.
ಅಲ್ಲಿಗೆ ಅವರಿಗೆ ನನ್ನ ಕೇಸ್ ಸರಿಯಾಗಿ ಅರ್ಥ ಆಯಿತು ಅನಿಸಿತು. ಅಲರ್ಜಿಗೆಂದು ಸಿಟ್ರೋಜನ್ ಮತ್ತು ಯಾವೋ ಎರಡು ಬರೆದಿದ್ದರು. ಅದನ್ನು ನಾಳೆ ಬೆಳಿಗ್ಗೆ ಮತ್ತು ಸಂಜೆ ತೆಗೆದುಕೊಳ್ಳಿ ಎಂದಿದ್ದರು. ಅದಕ್ಕೆ ಅವರೆಲ್ಲರಿಗೂ ಕರೆದು "ನೋಡಿ ಜೇನು ಹುಳು ಕಚ್ಚಿದರೆ 24 ಗಂಟೆಯೊಳಗೆ 90% ಅಷ್ಟು ಭಾವು ಕಡಿಮೆಯಾಗುತ್ತದೆ. ಕೆಲವು ಸ್ನಾಯುಗಳು ಹೆಚ್ಚು ಪದೇ ಪದೇ ಬಳಕೆಯಾಗುವಂತಹ ಮಾಂಸಖಂಡಗಳಾದರೇ ಮೂವತ್ತಾರು ಗಂಟೆಯವರೆಗೆ ಸ್ವಲ್ಪಮಟ್ಟಿಗೆ ಇರುತ್ತದೆ. sting ಚುಚ್ಚಿದ ಜಾಗ ಒಂದು point ಮಾತ್ರ ಕೆಂಪಗಾಗಿ ಉಳಿಯುತ್ತದೆ. ಆದರೆ ಇದಕ್ಕೆ ಎರಡು ಮೂರು ಬಾರಿ ಮಾತ್ರೆ ತೆಗೆದುಕೊಳ್ಳುವ ಅವಶ್ಯಕತೆ ಇಲ್ಲ . ನಾನು ಚಿಕ್ಕ ವಯಸ್ಸಿನಿಂದಲೂ ಆಗೊಮ್ಮೆ ಈಗೊಮ್ಮೆ ಒಂದೊಂದು ಬಾರಿ ಮೂರು ನಾಲ್ಕು ಹುಳುಗಳಂತೆ ಸಾವಿರಾರು ಹುಳುಗಳನ್ನು ಕಚ್ಚಿಸಿಕೊಂಡಿದ್ದೇನೆ. This is my self experience words ಎಂದು ಹೇಳಿದ್ದಕ್ಕೆ ಎಲ್ಲರೂ ಹೌದು ಹೌದು ಎಂದು ತಲೆಯಾಡಿಸಿದ್ದರು. ಮನೆಗೆ ಹೊರಡಲು ಬೆರಳಿಗೆ ಕಾರಿನ ಕೀಲಿಯ ರಿಂಗ್ ಹಾಕಿಕೊಂಡಿದ್ದು ತೆಗೆದು ಕೈಯಲ್ಲಿ ಹಿಡಿದುಕೊಂಡು ಆ ಮಾತ್ರೆ ತೆಗೆದುಕೊಂಡಿದ್ದೀರಾ ಅಂತ ಹೇಳುತ್ತಿದ್ದ ಮೇಡಂ ಬಳಿ ಹೋಗಿ ಮಾಹಿತಿಗಾಗಿ ನನಗೆ ಬೇಕು ಏನು ಮೇಡಂ ಅದು ಮಾತ್ರೆ matter ??
ಎಂಬ ಪ್ರಶ್ನೆಗೆ "ಸಾರ್ ... ಅದು...
ಹೇಳ್ರಿ ಮೇಡಂ.. ಪರವಾಗಿಲ್ಲ.. ಎಂದಿದ್ದಕ್ಕೆ ಕೆಲವು ಪೀಪಲ್ಸ್ ಯಾವುದಕ್ಕಾದರೂ ರಾತ್ರಿ ಮಾತ್ರೆ ತೆಗೆದುಕೊಳ್ತಾರೆ ಅಂದರು. ಅಂತಹ ಮಾತ್ರೆ ತೆಗೆದುಕೊಂಡರೆ mouth, lips swelling ಬರುತ್ತಾ ಮೇಡಂ???
ಹ್ಹಾ ಸರ್...
ಆಗತ್ತೆ ... ಅವು side effect..
ಒಬ್ಬೊಬ್ಬರಿಗೆ ಒಂದೊಂದು ತರ ಆಗತ್ತೆ... ಆ ತರ ಆಗಿರುವುದನ್ನು ನಾನು ಕಂಡಿದ್ದೇನೆ ಎಂದರು... ಅವರವರ ಅನುಭವ ಅವರಿಗೆ... ಅನುಭವ ಪ್ರತಿಯೊಬ್ಬರಿಗೂ ವಿಭಿನ್ನ ಮತ್ತು ವಿಶೇಷ ಅನುಭವ.. .ಎಂದು ಹೇಳಿ... ಮಾಹಿತಿಗಾಗಿ ಧನ್ಯವಾದಗಳನ್ನು ತಿಳಿಸಿ ಕೈಮುಗಿದು ಆಸ್ಪತ್ರೆಯಿಂದ ನಿರ್ಗಮಿಸಿದೆ.
ಅಯ್ಯೋ ಈ ಔಷದೀ ಮಾಫಿಯಾ ಯಾರೂ ಕಾಣದೇ ಇರುವಷ್ಟು ಆಳ ಅಗಲ ಇರುವುದು ಸ್ಪಷ್ಟ.. ಪ್ರಸಿದ್ಧ ಪ್ಯಾರಾಸಿಟಾಮಲ್ ಮಾತ್ರೆಯೊಂದರ ಬೆಲೆ 2 ರೂ.. ಇವರು ಎರಡು ಸಾವಿರ ಕೋಟಿ ರೂಗಳ ಉಡುಗೊರೆಗಳನ್ನು ಇಂಡಿಯನ್ ಮೆಡಿಕಲ್ ಅಸೋಸಿಯೇಶನ್ ಪ್ರಮುಖರಿಗೆ ನೀಡುತ್ತಾರೆಂದರೇ ಇನ್ನೂ ನೂರಾರು ರುಪಾಯಿಯ ಮಾತ್ರೆಗಳನ್ನು ಮಾರುವ ಕಂಪನಿಗಳ ಲಾಭಾಂಶ ಎಷ್ಟಿರಬಹುದು???
ಯಾವುದೋ ರೋಗ... ಯಾವುದೋ ಔಷಧಿ... ಮತ್ತ ಯಾವುದೋ ಸೈಡ್ ಎಪೆಕ್ಟ್....!ಯಾವುದೋ ಪ್ರಾಬಲಮ್ ಗೆ ಸಂಬಂಧವೇ ಇಲ್ಲದ ರೋಗ ಗುರುತಿಸುವಿಕೆ....! ಅದು ಚಿಕಿತ್ಸೆಯಾಗುವುದಿಲ್ಲ. ರೋಗಿಗಳಿಗೆ ಹಣಕಾಸಿನ ಹೊಡೆತದೊಂದಿಗೆ ಪ್ರಾಣವೇ ಹೋಗುತ್ತೆ. ಸಾಲದ್ದಕ್ಕೆ ಮತ್ತೊಂದು ಸೈಡ್ ಎಫೆಕ್ಟ್ ಆಗುವುದರಿಂದ ಆರೋಗ್ಯವಂತರು ಅನಾರೋಗ್ಯದಿಂದ ಶಾಶ್ವತವಾಗಿ ನರಳುವರು.
ಊದು ತುಟಿಯನ್ನಿಟ್ಟುಕೊಂಡು ಮನೆಗೆ ಬಂದೆ. ಕುಮುದಾಳ ಸಮಾಧಾನಕ್ಕೆ ನಾನು ಆಸ್ಪತ್ರೆಗೆ ಹೋಗಿದ್ದು. citrozine ಮಾತ್ರೆ ಈ ಜೇನು ಹುಳ ಕಚ್ಚಿದ್ದಕ್ಕೆ ಎಷ್ಟರ ಮಟ್ಟಿಗೆ ಕೆಲಸ ಮಾಡಿತೋ ಗೊತ್ತಿಲ್ಲ. ಮರುದಿನ ಸಬ್ ರಿಜಿಸ್ಟರ್ ಆಫೀಸ್ ನ writer ಈ ದಿನ ಮೊದಲು ನಿಮ್ಮದೇ ಇದೆ ಸಾರ್... ಸ್ವಲ್ಪ ಬೇಗನೇ ಬಂದಿರ್ರಿ ಎಂದು ಬೆಳಗ್ಗೆಯೇ ಕಾಲ್ ಮಾಡಿ ತಿಳಿಸಿದರು. ಮುಖ ತುಟಿಗಳು ಊದಿಕೊಂಡೇ ಇವೆ. ಆದರೆ ರಾತ್ರಿ ಹನ್ನೊಂದು ಹನ್ನೆರಡು ಗಂಟೆಯಲ್ಲಿದ್ದಷ್ಟು ಪ್ರಮಾಣದಲ್ಲಿರಲಿಲ್ಲ. ಗಣನೀಯ ಪ್ರಮಾಣದಲ್ಲಿ ತಗ್ಗಿತ್ತು. ಅದೇ ಮುಖದಲ್ಲಿ ಅಂತೂ ಬಹಳ ದಿನದ ನಮ್ಮ ಕನಸಿನ ಮನೆಯ ನೊಂದಣಿಯಂತೂ ಆಯಿತು. ಇಪ್ಪತ್ತು ಮೂವತ್ತು ನಿಮಿಷ ರಿಜಿಸ್ಟರ್ ಆದ ದಸ್ತಾವೇಜುಗಳಿಗಾಗಿ ಕಾಯುತ್ತಿದ್ದಾಗ ಸರ್ಕಾರದಿಂದ breaking news ಒಂದು ಬಂತು.. 'ಇಂದು ಮದ್ಯರಾತ್ರಿಯಿಂದಲೇ Lock down ' ಎಂದು ಆರ್ಡರ್ ಮತ್ತು ಅನ್ನೌನ್ಸ್ಮೆಂಟ್ ಆಯಿತು. ತದ ನಂತರ ಕೊರೋನಾದ ರುದ್ರ ನರ್ತನ...!ಅನೇಕ ಗೊತ್ತು ಪರಿಚಯದವರುಗಳ ಮರಣದ ಸುದ್ದಿಯನ್ನು ನಿರಂತರ ಕೇಳಬೇಕಾಯಿತು. ನ್ಯೂಸ್ಗಳಲ್ಲಿ ತೋರಿಸುತ್ತಿದ್ದ ಅಮಾನವೀಯ ಚಿತ್ರಣಗಳು, ದಿನದಿಂದ ದಿನಕ್ಕೆ ರೋಗ ಪ್ರಮಾಣ ಸಾವಿನ ಪ್ರಮಾಣ ಹೆಚ್ಚುತ್ತಾ ಹೋಯಿತು. ಕೋರೋನಾ ಬಾರದಿದ್ರೂ ಕೆಲವರು ಕೊರೋನಾದ ಭಯದಿಂದ ಸತ್ತರು. ಕೋರೋನಾ ಬಂದವರು ನಿಗದಿತ ಔಷಧ ಇಲ್ಲದೇ ಯಾವು ಯಾವುದೋ ಮಾತ್ರೆಗಳನ್ನು ತೆಗೆದುಕೊಂಡು ಶಾಶ್ವತವಾಗಿ ಶುಗರ್ ಬಿಪಿ ಯಾವ್ಯಾವೋ ರೋಗಗಳನ್ನು ದೇಹಕ್ಕೆ ಅಂಟಿಸಿಕೊಂಡರು. ಕೆಲ ವ್ಯಾಪಾರಿಗಳು ಕೋರೋನಾ ಹೆಸರಲ್ಲಿ ಲಾಭಾಂಶ ಗಳಿಸಿ ಬದುಕಿ ಹೋದರು. ಶಾಲಾಮಕ್ಕಳು ಎಕ್ಸಾಮ್ಸ್ ಇಲ್ಲದೇ ಪಾಸ್ ಆದದ್ದು, ಮಕ್ಕಳ ಶೈಕ್ಷಣಿಕ ಪ್ರಗತಿಯು ಹತ್ತು ವರ್ಷಗಳಷ್ಟು ಹಿಂದೆಹೋದದ್ದು, ಮೊಬೈಲ್ ಗೆ ಅಂಟಿಕೊಂಡು ಓದದೇ ಬರೆಯದೇ ಆಡಬಾರದ ಆಟಗಳನ್ನು ಆಡುತ್ತಿರುವುದು ಸಾಮಾನ್ಯವಾಗಿದೆ. ಇದೊಂದು ಸರ್ವತೋಮುಖ ಪ್ರಗತಿಯ ಹಿನ್ನಡೆ ಎನ್ನಬಹುದು. ನೆಪ ಹೇಳುತ್ತಾ ಬರೀ ಅನುಪಯುಕ್ತ ಕೆಲಸಗಳನ್ನೇ ಮಾಡುವ ಬದಲು ನಾಗರೀಕತೆ ಮುಂದೆ ಸಾಗಲು ಎಲ್ಲಾ ಕ್ಷೇತ್ರಗಳಲ್ಲೂ ಅಭಿವೃದ್ಧಿಯ ದಾಪುಗಾಲು ಹಾಕಬೇಕಿದೆ.
ಸರಕಾರಿ ಹಿರಿಯ ಪ್ರಾಥಮಿಕ ಶಾಲೆ, ಮಿಂಚೇರಿ
ಬಳ್ಳಾರಿ ತಾಲೂಕು ಮತ್ತು ಜಿಲ್ಲೆ
Mob : +91 99029 12684
*******************************************