ಯಕ್ಷ ಧ್ರುವ ಯಕ್ಷ ಶಿಕ್ಷಣ : ವಿಭಿನ್ನ ಪರಿಕಲ್ಪನೆ
Saturday, May 11, 2024
Edit
ನಿಮ್ಮೂರ ಶಾಲೆಯ ಸುದ್ದಿ : ಸಂಚಿಕೆ - 07
............................ ತಾರಾನಾಥ್ ಕೈರಂಗಳ
ಲೇಖನ : ಯಕ್ಷ ಧ್ರುವ ಯಕ್ಷ ಶಿಕ್ಷಣ : ವಿಭಿನ್ನ ಪರಿಕಲ್ಪನೆ
ಬರಹ : ತಾರಾನಾಥ್ ಕೈರಂಗಳ
ಸರಕಾರಿ ಪ್ರೌಢಶಾಲೆ ಮಂಚಿ - ಕೊಳ್ನಾಡು
ಬಂಟ್ವಾಳ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
Mob : 9844820979
ಮಂಚಿ - ಕೊಳ್ನಾಡು ಸರಕಾರಿ ಪ್ರೌಢಶಾಲೆಯು ಬಂಟ್ವಾಳ ತಾಲೂಕಿನ ಗ್ರಾಮೀಣ ಭಾಗದ ಹಳೆಯ ಪ್ರೌಢಶಾಲೆ. ಸುಮಾರು 45 ವರ್ಷಗಳ ನಮ್ಮ ಶಾಲೆಗೆ ಪ್ರಬುದ್ಧ ರಂಗಕರ್ಮಿ ಡಾ ಬಿ ವಿ ಕಾರಂತರ ಹುಟ್ಟೂರಿನ ಶಾಲೆಯೆನ್ನುವ ಐತಿಹ್ಯವಿದೆ. ಈ ಶಾಲೆಗೆ ಹಾಗೂ ಈ ಊರಿಗೆ ಯಕ್ಷಗಾನ, ರಂಗ ಭೂಮಿ, ಸಾಹಿತ್ಯ ಹೀಗೆ ಸಾಂಸ್ಕೃತಿಕ ವೈವಿಧ್ಯತೆಯ ಒಂದು ವಿಧದ ನಂಟಿದೆ ಎನ್ನುವುದು ಸತ್ಯ.
ನಮ್ಮ ಶಾಲೆಯ ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷರಾದ ಶ್ರೀ ರಾಮ್ ಪ್ರಸಾದ್ ರೈ ತಿರುವಾಜೆ, "ಪಟ್ಲ ಫೌಂಡೇಶನ್ ವತಿಯಿಂದ ಯಕ್ಷದ್ರುವ ಯಕ್ಷ ಶಿಕ್ಷಣ ಎನ್ನುವ ವಿಶೇಷ ಕಾರ್ಯಕ್ರಮವನ್ನು ಆಯೋಜನೆ ಮಾಡಿದ್ದಾರೆ. ನಮ್ಮ ಶಾಲೆಯಲ್ಲಿಯೂ ಮಾಡಿದರೆ ಮಕ್ಕಳು ನಾಟ್ಯ ತರಗತಿಗೆ ಬರಬಹುದಾ..." ಎಂದಾಗ ಒಮ್ಮೆ ಆಶ್ಚರ್ಯವೂ.. ಆನಂದವೂ.. ಆಯಿತು. ಮುಖ್ಯೋಪಾಧ್ಯಾಯರಾದ ಶ್ರೀಮತಿ ಸುಶೀಲಾ ವಿಟ್ಲ ಹಾಗೂ ಶಾಲಾ ಅಭಿವೃದ್ಧಿ ಸಮಿತಿಯ ಅಧ್ಯಕ್ಷರು ಕೂಡಲೇ ಒಪ್ಪಿಗೆ ಸೂಚಿಸಿದರು.
ಯಕ್ಷಗಾನ ಕರಾವಳಿ ಭಾಗದ ಗಂಡುಕಲೆ ಎನ್ನುವುದು ಜನಜನಿತ. ರಾಮಾಯಣ ಮತ್ತು ಮಹಾಭಾರತ ಮುಂತಾದ ಪೌರಾಣಿಕ ಕಥೆಗಳನ್ನು ಜನಸಾಮಾನ್ಯರಿಗೆ ತಲುಪಿಸುವ ಮಾಧ್ಯಮ ಕಲೆಯಾಗಿ ಗುರುತಿಸುವುದರ ಜತೆಗೆ ಒಬ್ಬ ವ್ಯಕ್ತಿಯ ಪರಿಪೂರ್ಣ ವ್ಯಕಿತ್ವ ಹಾಗೂ ಸಂಸ್ಕಾರ ತುಂಬುವ ಕಲೆಯೂ ಹೌದು. ಶಾಲಾ ಶಿಕ್ಷಣದಿಂದ ವಂಚಿತರಾದ ಅದೆಷ್ಟೊ ಹಿರಿಯ ತಲೆಮಾರಿನ ಕಲಾವಿದರು ಯಕ್ಷಗಾನದಿಂದ ಮಹಾ ವಿದ್ವಾಂಸರಾಗಿರುವ ನಿದರ್ಶನಗಳು ಸಾಕಷ್ಟಿವೆ. ಪ್ರಸ್ತುತ ಶಿಕ್ಷಣ ವ್ಯವಸ್ಥೆಯಲ್ಲಿ ಕೊರತೆಯಾಗಿ ಕಾಣುತ್ತಿರುವ ನೈತಿಕ ಮೌಲ್ಯ, ಮಾನವೀಯತೆ, ಗೌರವ, ಸಂಸ್ಕಾರ ಇವೆಲ್ಲವುಗಳು ಯಕ್ಷಗಾನ ಶಿಕ್ಷಣದಿಂದ ದೊರೆಯುವುದಾದರೆ ಶಾಲಾ ಶಿಕ್ಷಣಕ್ಕೆ ಪೂರಕವಾಯಿತೆನ್ನುವುದರಲ್ಲಿ ಸಂಶಯವಿಲ್ಲ.
ಓರ್ವ ಅತ್ಯುತ್ತಮ ಯಕ್ಷ ಗುರುಗಳಾದ ಅಶ್ವತ್ಥ್ ಮಂಜನಾಡಿ ಇವರನ್ನು ನೇಮಕ ಮಾಡಿ ಉದ್ಘಾಟನೆಗೆ ದಿನ ನಿಗದಿಪಡಿಸಿದರು. ದಿನಾಂಕ 18-08-2023 ರಂದು ಯಕ್ಷಗಾನ ನಾಟ್ಯ ತರಬೇತಿ ಶಿಕ್ಷಣದ ಉದ್ಘಾಟನೆಯನ್ನು ಮಂಗಳೂರು ಮಹಾನಗರ ಪಾಲಿಕೆಯ ಉಪ ಆಯುಕ್ತರು ಹಾಗೂ ನಮ್ಮ ಶಾಲಾ ಹಿರಿಯ ವಿದ್ಯಾರ್ಥಿಯಾಗಿರುವ ರೇಖಾ ಜೆ ಶೆಟ್ಟಿ ನೆರವೇರಿಸಿದರು. ಭಾಗವತ ಪಟ್ಲ ಸತೀಶ್ ಶೆಟ್ಟಿ ಯವರ ಉಪಸ್ಥಿತಿಯಲ್ಲಿ ಉದ್ಘಾಟನೆ ನೆರವೇರಿರುವುದು ಸೌಭಾಗ್ಯವೆನಿಸಿತು. ಸುಂದರ ಕಂಠದಿಂದ ಹಾಡಿದ ಭಾಗವತಿಕೆ ಹಾಡು ನೆರೆದ ಎಲ್ಲಾ ವಿದ್ಯಾರ್ಥಿಗಳಿಗೆ, ಶಿಕ್ಷಕರಿಗೆ, ಪೋಷಕರಿಗೆಲ್ಲಾ ಸಂಭ್ರಮವನ್ನು ತುಂಬಿತು.
ಈ ಸಭಾ ಕಾರ್ಯಕ್ರಮದಲ್ಲಿ ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷರು ರಾಮ್ ಪ್ರಸಾದ್ ರೈ ತಿರುವಾಜೆ, ಹಿರಿಯ ವಿದ್ಯಾರ್ಥಿ ಹಾಗೂ ಯಕ್ಷಗಾನ ಕಲಾವಿದ ಪುಷ್ಪರಾಜ ಕುಕ್ಕಾಜೆ, ಯಕ್ಷಧ್ರುವ ಪಟ್ಲ ಫೌಂಡೇಶನ್ ಕಾರ್ಯದರ್ಶಿಯಾಗಿರುವ ಪುರುಷೋತ್ತಮ ಭಂಡಾರಿ, ಶಾಲಾ ಅಭಿವೃದ್ಧಿ ಸಮಿತಿಯ ಅಧ್ಯಕ್ಷರಾಗಿದ್ದ ಪ್ರವೀಣ್ ಕೊಟ್ಟಾರಿ, ಮುಖ್ಯೋಪಾಧ್ಯಾಯರಾದ ಶ್ರೀಮತಿ ಸುಶೀಲಾ ವಿಟ್ಲ ಇವರು ಉಪಸ್ಥಿತರಿದ್ದರು.
ಮಂಚಿ ಕೊಳ್ನಾಡು ಪ್ರೌಢಶಾಲೆಯ ಆಸಕ್ತ ಒಟ್ಟು 86 ವಿದ್ಯಾರ್ಥಿಗಳು ಯಕ್ಷಗಾನ ಯಕ್ಷಧ್ರುವ ನಾಟ್ಯ ತರಬೇತಿಯಲ್ಲಿ ಪಾಲ್ಗೊಂಡರು. ವಾರದ ಎರಡು ದಿನ ಮಂಗಳವಾರ ಮತ್ತು ಶುಕ್ರವಾರ ಬೆಳಿಗ್ಗೆ 8:30 ರಿಂದ 10 ಗಂಟೆಯವರೆಗೆ ಸಮಯ ನಿಗದಿಯಾಯಿತು. ಶಾಲಾ ಪಠ್ಯಗಳಿಗೆ ಯಾವುದೇ ರೀತಿಯಲ್ಲಿ ತೊಂದರೆಯಾಗದೆ ನಿರಂತರವಾಗಿ ಸಾಗುತ್ತಾ ಎಲ್ಲಾ ವಿದ್ಯಾರ್ಥಿಗಳು ಆಸಕ್ತಿಯಿಂದ ಪಾಲ್ಗೊಳ್ಳುತ್ತಿದ್ದುದು ಬಹಳ ಸಂತೋಷವನ್ನು ಮೂಡಿಸಿತು. ಪ್ರತಿ ಯಕ್ಷಗಾನ ನಾಟ್ಯ ತರಗತಿ ಇರುವ ದಿನ ಎಲ್ಲಾ ವಿದ್ಯಾರ್ಥಿಗಳು ಪೋಷಕರ ಪಾದಕ್ಕೆ ನಮಸ್ಕರಿಸಿ ಬರುವ ಸಂಪ್ರದಾಯವನ್ನು ರೂಢಿಸಿಕೊಂಡೆವು. ಇಂತಹ ಸಂಸ್ಕಾರ ಗುಣಗಳು ಜೊತೆ ಜೊತೆಗೆ ಬೆಳೆಯಬೇಕೆಂದು ನಮ್ಮ ನಿಲುವಾಗಿತ್ತು. ಈ ನಾಟ್ಯ ತರಗತಿಯ ಪ್ರಯೋಜನವನ್ನು ಪಡೆದು ಡಿಸೆಂಬರ್ 23 ರಂದು ಶಾಲಾ ವಾರ್ಷಿಕೋತ್ಸವ ಸಂಭ್ರಮದಲ್ಲಿ ಶಾಲಾ ಮಕ್ಕಳ "ಶ್ರೀ ಕೃಷ್ಣ ಲೀಲೆ - ನರಕಾಸುರ ವಧೆ" ಪ್ರಸಂಗವನ್ನು ಅತ್ಯುತ್ತಮವಾಗಿ ಪ್ರದರ್ಶಿಸಲಾಯಿತು. ವಿದ್ಯಾರ್ಥಿಗಳ ಪ್ರತಿಭೆ ಅವರ ಪರಿಶ್ರಮ, ಶ್ರದ್ಧೆಗಳು ಗುರುಗಳ ದಕ್ಷ ನಿರ್ದೇಶನದಿಂದ ಅನಾವರಣಗೊಂಡಿತ್ತು. ಹೀಗೆ ವಿದ್ಯಾರ್ಥಿಗಳ ಹಾಗೂ ಪೋಷಕರ ಒಟ್ಟು ಬೆಂಬಲ ನಿರಂತರವಾಗಿ ವಿದ್ಯಾರ್ಥಿಗಳ 86 ಸಂಖ್ಯೆಯನ್ನು ಕೊನೆಯವರೆಗೆ ಕಾಯ್ದಿರಿಸುವಲ್ಲಿ ಯಶಸ್ವಿಯಾದೆವು.
2024 ಫೆಬ್ರವರಿ - 6ನೇ ತಾರೀಕಿಗೆ ಮೂಡಬಿದ್ರೆಯ ಆಳ್ವಾಸ್ ನಲ್ಲಿ ಯಕ್ಷ ರೂಪಕ ಸ್ಪರ್ಧೆಯ ದಿನಾಂಕ ನಿಗದಿಯಾದ ನಂತರ ಅನಿವಾರ್ಯವಾಗಿ ವಿದ್ಯಾರ್ಥಿಗಳ ಸಂಖ್ಯೆಯನ್ನು ಸೀಮಿತಗೊಳಿಲಾಯಿತು. ದಿನದ ಹೆಚ್ಚು ಹೊತ್ತು ಅಭ್ಯಾಸ, ಸಮಯದ ಅನುಕೂಲತೆ, ಸಂಪೂರ್ಣ ತೊಡಗಿಸಿಕೊಳ್ಳುವ ಮುಖೇನ 40 ವಿದ್ಯಾರ್ಥಿಗಳ ಪರಿಪೂರ್ಣ ತಂಡವನ್ನು ರಚಿಸಲು ಸಾಧ್ಯವಾಯಿತು. "ಲಕ್ಷ್ಮೀ ಸ್ವಯಂವರ" ಕಥಾ ಭಾಗವನ್ನು ಹತ್ತು ನಿಮಿಷಗಳ ರೂಪಕದಲ್ಲಿ ಸಂಯೋಜಿಸಿ ತೆರೆಯ ಮೇಲೆ ಕಾಣಿಸುವ ಸೃಜನಶೀಲ ಪ್ರಯತ್ನವೂ ಇಲ್ಲಿ ಸಾಗಿತು. ಹೆಜ್ಜೆ, ನೃತ್ಯ, ಭಾವ, ಅಭಿನಯ ಹೀಗೆ ಪ್ರತಿಯೊಂದರಲ್ಲೂ ಶುದ್ಧತೆ ಹಾಗೂ ಬದ್ಧತೆಯನ್ನು ಕಾಪಾಡಿಕೊಂಡು ವಿದ್ಯಾರ್ಥಿಗಳನ್ನು ಪಳಗಿಸಿದ ಗುರುಗಳ ಸಾಮರ್ಥ್ಯ ಸ್ತುತ್ಯಾರ್ಹ. ತನ್ನನ್ನು ತಾನು ಸಂಪೂರ್ಣವಾಗಿ ತೊಡಗಿಸಿ ಅಭ್ಯಾಸದಲ್ಲಿ ನಿರತರಾದ ವಿದ್ಯಾರ್ಥಿಗಳು ಅತ್ಯುತ್ತಮ ಪ್ರದರ್ಶನಕ್ಕಾಗಿ ಪಟ್ಲ ಫೌಂಡೇಶನ್ ನಿರ್ಮಾಣ ಮಾಡಿಕೊಟ್ಟ ಆಳ್ವಾಸ್ ನ ವೇದಿಕೆಯನ್ನು ಏರುವ ಸೌಭಾಗ್ಯವನ್ನು ಗಿಟ್ಟಿಸಿಕೊಳ್ಳುವುದೇ ಅಭಿಮಾನದ ಸಂಗತಿಯಾಗಿತ್ತು. ಎರಡನೆಯ ವೇದಿಕೆಯ ಕ್ರಮ ಸಂಖ್ಯೆ 21 ಕೊನೆಯ ಸ್ಪರ್ಧಿಯಾಗಿ ಪ್ರದರ್ಶನ ನೀಡಿ ವೇದಿಕೆಯಿಂದಿಳಿದಾಗ... ಪ್ರದರ್ಶನವನ್ನು ಕುತೂಹಲದಿಂದ ನೋಡಿದ ಮುಖ್ಯ ಶಿಕ್ಷಕರು, ಶಿಕ್ಷಕ ವೃಂದ, ಶಾಲಾ ಅಭಿವೃದ್ಧಿ ಸಮಿತಿಯ ಅಧ್ಯಕ್ಷರು, ಸದಸ್ಯರು, ವಿದ್ಯಾರ್ಥಿಗಳ ಪೋಷಕರು ಹೀಗೆ ಪ್ರತಿಯೊಬ್ಬರಲ್ಲೂ ಕೂಡ ಸಂತೃಪ್ತ ಭಾವ ಮೂಡಿತ್ತು. ಯಕ್ಷ ಧ್ರುವ ಶಿಕ್ಷಣದ ಮಂಚಿ - ಕೊಳ್ನಾಡು ಶಾಲೆಯ ಎಲ್ಲಾ ವಿದ್ಯಾರ್ಥಿಗಳು ಭಾವಪೂರ್ಣವಾಗಿ ವೇದಿಕೆಯ ಮುಂಭಾಗದಲ್ಲಿ ಆಸೀನರಾಗಿ ಪ್ರಶಸ್ತಿಯ ಘೋಷಣೆಗಾಗಿ ಭರವಸೆಯ ಕಣ್ಣುಗಳು ನಿರೀಕ್ಷಿಸುತ್ತಿದ್ದವು. ಕದ್ರಿ ನವನೀತ ಶೆಟ್ಟಿ ಯವರು ದ್ವಿತೀಯ ಬಹುಮಾನದ ಘೋಷಣೆ ಮಾಡಿದ ಕೂಡಲೇ ವಿದ್ಯಾರ್ಥಿಗಳ ಸಂಭ್ರಮ ಕಟ್ಟೆಯೊಡೆದು ವೇದಿಕೆಯತ್ತ ಜಿಗಿದು ಓಡುವ ದೃಶ್ಯವೇ ಮನೋಹರವಾಗಿತ್ತು. 20,000 ನಗದು ಬಹುಮಾನ, ಪ್ರಶಸ್ತಿ ಪತ್ರ, ಪ್ರಶಸ್ತಿ ಫಲಕಗಳನ್ನು ಸ್ವೀಕರಿಸಲು ಮುಖ್ಯೋಪಾಧ್ಯಾಯರು, ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷರು, ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷರು ಹೀಗೆ ವೇದಿಕೆಯನ್ನೇರಲು ಅವಕಾಶ ಕಲ್ಪಿಸಿದ ವಿದ್ಯಾರ್ಥಿಗಳ ಅದ್ಭುತ ಪ್ರದರ್ಶನ ಎಲ್ಲರ ಮನಸ್ಸನ್ನು ಸೂರೆಗೊಂಡಿತ್ತು. ತನ್ನ ಸೃಜನಶೀಲ ಕೌಶಲ್ಯದಿಂದ ಅದ್ಭುತ ಮಾರ್ಗದರ್ಶನ ನೀಡಿದ ಯುವ ಯಕ್ಷಗಾನ ಕಲಾವಿದ ಅಶ್ವತ್ಥ್ ಮಂಜನಾಡಿ ಎಲ್ಲರ ಪ್ರಶಂಸೆಗೆ ಪಾತ್ರರಾದರು. ಈ ಒಟ್ಟು ವ್ಯವಸ್ಥೆಯನ್ನು ಸಂಘಟಿಸಿದ, ಈ ರೀತಿಯ ವಿಭಿನ್ನ ಪರಿಕಲ್ಪನೆಗೆ ನಾಂದಿ ಹಾಡಿದ ಭಾಗವತ ಪಟ್ಲ ಸತೀಶ್ ಶೆಟ್ಟಿಯವರ ಪಟ್ಲ ಫೌಂಡೇಶನ್ ಸಾವಿರ ಸಾವಿರ ಮಕ್ಕಳನ್ನು ಯಕ್ಷಲೋಕಕ್ಕೆ ಕೊಂಡೊಯ್ದ ಇತಿಹಾಸಕ್ಕೆ, ದಾಖಲೆಗೆ, ಕ್ರಾಂತಿಗೆ ಮುನ್ನುಡಿ ಬರೆಯಿತು.
"ಯಕ್ಷದ್ರುವ ಯಕ್ಷ ಶಿಕ್ಷಣ - ಈ ವಿಭಿನ್ನ ಪರಿಕಲ್ಪನೆ ಮುಂದುವರೆಯುತ್ತಾ ಇರಲಿ"
ವಂದನೆಗಳೊಂದಿಗೆ..
ಸರಕಾರಿ ಪ್ರೌಢಶಾಲೆ ಮಂಚಿ - ಕೊಳ್ನಾಡು
ಬಂಟ್ವಾಳ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
Mob : 9844820979
******************************************