ಸವಿಜೇನು : ಸಂಚಿಕೆ - 06
Saturday, May 11, 2024
Edit
ಸವಿಜೇನು : ಸಂಚಿಕೆ - 06
....................... ನಾಗೇಂದ್ರ ಬಂಜಗೆರೆ, ಶಿಕ್ಷಕರು
ಲೇಖಕರು: ನಾಗೇಂದ್ರ ಬಂಜಗೆರೆ, ಶಿಕ್ಷಕರು
ಸರಕಾರಿ ಹಿರಿಯ ಪ್ರಾಥಮಿಕ ಶಾಲೆ, ಮಿಂಚೇರಿ
ಬಳ್ಳಾರಿ ತಾಲೂಕು ಮತ್ತು ಜಿಲ್ಲೆ
Mob : +91 99029 12684
ಈ ಪ್ರಕೃತಿಯಲ್ಲಿ ಅತ್ಯಂತ ಸಣ್ಣ ಜೀವಿ ತನ್ನದೇ ಆದ ಪ್ರಮುಖ ಪಾತ್ರ ವಹಿಸುತ್ತದೆ. ಎಷ್ಟೋ ಬಾರಿ ಪ್ರಕೃತಿಯನ್ನು ಸಮತೋಲನ ಮಾಡುವಲ್ಲಿ ಬಹಳ ಪ್ರಧಾನ ಪಾತ್ರವನ್ನೇ ವಹಿಸುವ ಜೇನುಹುಳುಗಳ ಪಾತ್ರ ನಿಸರ್ಗದಲ್ಲಿ ಬಹಳ ದೊಡ್ಡದು. ಆ ಜೇನಿನ ಸುತ್ತ ಕಲಿತ ಪಾಠಗಳ, ಥ್ರಿಲ್ಲಿಂಗ್ ಅನುಭವಗಳ, ನೀವು ಕಂಡಿರದ ಕೇಳಿರದ ಅಗತ್ಯವಾಗಿ ತಿಳಿಯಲೇ ಬೇಕಾದ ಮಾಹಿತಿಯುತ 'ಸವಿಜೇನು' ಎಂಬ ವಿಶೇಷ ಶೀರ್ಷಿಕೆಯಡಿಯಲ್ಲಿ ವಿಸ್ತಾರವಾದ ಬರಹ ಸರಣಿಗಳನ್ನು ನೀವೂ ಓದಿ ಆನಂದಿಸಿ... ನಾಗೇಂದ್ರ ಬಂಜಗೆರೆ, ಶಿಕ್ಷಕರು ಮತ್ತು ಬರಹಗಾರರು
ನಮ್ಮದು ಅಪ್ಪಟ ಬಯಲು ಸೀಮೆ. ಗಾಳಿಕಾಲದಲ್ಲಿ ಊಟ ಸಾಕಾಗದೇ ತಿನ್ನುವಂತದ್ದೆಂದು ಯಾರಾದರು ಏನನ್ನಾದರೂ ಕೊಟ್ಟರೆ ಅದನ್ನು ಕ್ಷಣಾರ್ಧದಲ್ಲಿ ತಿಂದು ಮುಗಿಸುವ ಹಸಿವು ನಮ್ಮನ್ನು ಕಾಡುತ್ತಿತ್ತು. ಮುಂಗಾರು ಮಳೆ ಬರುವವರೆಗೆ ನಮಗೆ ಮುದ್ದೆ ಬಿಟ್ಟರೆ ತಿನ್ನಲು ಅಂತ ಇದ್ದ ಏಕ ಮಾತ್ರ ವಸ್ತು ಅಂದರೆ ಅದು ಮನೆಗೆ ತಿನ್ನಲು ಅಂತ ತೆಗೆದಿರಿಸಿದ ಕಡಲೆಕಾಯಿ ಮಾತ್ರ. ಅದು unlimited ಆಗಿ ಇರದೇ ಬಹಳ Limit ಆಗಿಯೇ ಇರತ್ತಿತ್ತು. ಆ ಕಡಲೇಕಾಯಿ ಚೀಲದ ಪಕ್ಕದಲ್ಲಿ ಇದ್ದ ನಾಲ್ಕಾರು ಚೀಲ ಶೇಂಗಾಕಾಯಿಯನ್ನು ಬಿಲ್ ಕುಲ್ ಮುಟ್ಟುವ ಹಾಗೆ ಇರಲಿಲ್ಲ. ಅದು ಮುಂಬರುವ ಮುಂಗಾರಿಗೆ ಬಿತ್ತಲಿಕ್ಕೆ ಅಂತ ಆಯ್ದು ತೆಗೆದಿರಿಸಿದ ಕಡಲೆಕಾಯಿ. ಮೇ ಜೂನ್ ತಿಂಗಳಲ್ಲಿ ಕಡಲೇಕಾಯಿ ಸುಲಿದು ಮಳೆಗಾಲಕ್ಕೆ ಬೀಜ ಬಿತ್ತಲು ಒಪ್ಪ ಮಾಡುವ ಕೆಲಸ ಆರಂಭ ಆಗುತ್ತಿತ್ತು. ಆಗ ಮಾತ್ರ ಕಡಲೆಕಾಯಿಯನ್ನು ಸುಲಿಯುವ ನೆಪದಲ್ಲಿ ಒಂದಷ್ಟು ಹೆಚ್ಚಿಗೆ ತಿನ್ನುತ್ತಿದ್ದೆವು. ಅದು ನಾಲ್ಕೈದು ದಿನಕ್ಕೆ ಮುಗಿದು ಹಸನು ಮಾಡಿದ ಬೀಜಕ್ಕೆ ಕೆಂಪಿರುವೆಗಳು ಹೋಗಿ ತಿನ್ನಬಾರದೆಂದು ಡಿ ಡಿ ಟಿ ಪುಡಿಯನ್ನು ಹಾಕಿ ಹುಷಾರಾಗಿ ಒಂದು ಕಡೆ ಎತ್ತಿಡುತ್ತಿದ್ದರು. ಆಗ ತಿನ್ನಲು ಉಳಿಯುತ್ತಿದ್ದುದು ಬಿತ್ತಲು ಸೂಕ್ತವಲ್ಲದ ಎಳಸು ಬೀಜಗಳು. ಸೀರಲು ಎಂದು ಕರೆಯುವ ಬಹಳ ರುಚಿಕಟ್ಟಾದ ಈ ಸೀರಲು ಬೀಜ ಅಪರೂಪಕ್ಕೆ ಒಂದು ಹಿಡಿ ಸಿಗುತ್ತಿತ್ತು. ಅದು ಎಲ್ಲೆಲ್ಲಿಗೂ ಸಾಕಾಗದೇ ಹೊಟ್ಟೆಯ ತಾಳಕ್ಕೆ ಹೆಜ್ಜೆಹಾಕುತ್ತಾ ನಾನು ಒಂದರ್ಥದಲ್ಲಿ ಜೇನಿನ ಹಿಂದೆ ಬಿದ್ದದ್ದು ಅಂತ ಹೇಳಬಹುದು. ಆಗಾಗ ಸಿಗುತ್ತಿದ್ದ ಜೇನುಗಳು ಮನೋರಂಜನೆ ನೀಡುತ್ತಾ, ಆಗಾಗ ಕಚ್ಚಿ ನೋವನ್ನೂ ನೀಡುತ್ತಾ, ನನ್ನ ಹೊಟ್ಟೆಯನ್ನು ತುಂಬಿಸುತ್ತಿದ್ದವು. ನಮ್ಮ ಅತ್ಯಲ್ಪ ಫ್ರೆಂಡ್ಸ್ ಸರ್ಕಲ್ ನಲ್ಲಿ ನನ್ನ ಗೆಳೆಯ ಒಬ್ಬ ಇದ್ದ. ಅವನ ಹೆಸರು ವೀರೇಶ. ಆದರೆ ಅವನ ಹೆಸರು ವೀರೇಶ ಅಂತ ನನಗೆ ಗೊತ್ತಾಗಿದ್ದು ಅವನೂ ನಾನು ಸ್ನೇಹಿತರಾಗಿ ಎರಡ್ಮೂರು ವರ್ಷ ಯಾವುದೋ ಗಣತಿ ಮಾಡುವಾಗ ನಮ್ಮ ಗುರುಗಳೊಬ್ಬರು ಒಂದು ಸ್ಥಳದಲ್ಲಿ ಕುಳಿತು ಪ್ರತಿ ಮನೆಯಲ್ಲಿ ಗಂಡು ಹೆಣ್ಣು ಮಕ್ಕಳು ಅವರ ಹೆಸರುಗಳು ಕೇಳುತ್ತಾ ಮಾಹಿತಿಯನ್ನು ಪಡೆಯುತ್ತಿದ್ದಾಗ ಅವನ ಹೆಸರು ಈಚ ಅಲ್ಲ ಅವನ ನಿಜವಾದ ಹೆಸರು ವೀರೇಶ ಅಂತ. ಅವನನ್ನ ಎಲ್ಲರೂ 'ಈಚ' ಅಂತಲೇ ಕರೆಯುತ್ತಿದ್ದುದು. ಅವರ ಅಪ್ಪ ಅಮ್ಮನೂ ಸೇರಿ ಎಂದೂ ಅವನನ್ನು ವೀರೇಶ ಅಂತ ಕರೆದುದು ನನಗೆ ಗೊತ್ತಿಲ್ಲ. ಅವನಾಗಲೀ ಬೇರೆ ಯಾರಾದರೂ ಅವನ ಹೆಸರನ್ನು ಕೇಳಿದರೆ ಅವನು 'ಈಚ' ಅಂತಲೇ ತನ್ನ ನಾಮಾಂಕಿತವನ್ನು ಹೇಳಿಕೊಳ್ಳುತ್ತಿದ್ದ. ಈಚನು ನನ್ನ ಕೆಲಸಗಳಾದ ಬೇವಿನಹಣ್ಣು, ಹೊಂಗೆಕಾಯಿ , ಶೇಂಗಾ ಸೀಜನ್ ನಲ್ಲಿ ಶೇಂಗಾ ಆರಿಸಲು ಇಬ್ಬರೂ ಜೊತೆಗೆ ಹೋಗುತ್ತಿದ್ದೆವು. ಒಂದರ್ಥದಲ್ಲಿ ನನ್ನ ಚಟುವಟಿಕೆಯ ಭಾಗವಾಗಿದ್ದ ಈಚ. ನಾವು ಶೇಂಗಾ ಆರಿಸಲು ಹೋಗುತ್ತಿದ್ದ ಭೂಷಣ್ಣನ ಕಟ್ಟೆ ಎಂಬ ಜಮೀನ್ದಾರರ ಹೊಲಕ್ಕೆ ಹೋಗುತ್ತಿದ್ದೆವು. ಅವರದು ಬಹಳ ಜಮೀನು ಇದ್ದಿದ್ದರಿಂದ ಬರೀ ಆಳುಗಳ ಮೇಲೆಯೇ ಕೆಲಸ ಆಗಬೇಕಿತ್ತು. 'ಆಳು ಮಾಡಿದ ಕೆಲಸ ಹಾಳು' ಎಂಬ ನಾಣ್ಣುಡಿಯನ್ನು ಪುಷ್ಟೀಕರಿಸುವಂತೆ ಟ್ರಾಕ್ಟರ್ ಟಿಲ್ಲರ್ ಯಂತ್ರಗಳಲ್ಲಿ ಶೇಂಗಾ ಹರಗಿದ್ದುದರಿಂದ ಶೇಂಗಾ ಕಾಯಿಯೆಲ್ಲಾ ಚೆಲ್ಲಾಪಿಲ್ಲಿಯಾಗಿ ಹೊಲದ ಉದ್ದಕ್ಕೂ ಚೆಲ್ಲಿದ ಹಾಗೆ ಉದುರಿರುತ್ತಿದ್ದವು. ಅವುಗಳನ್ನು ಆರಿಸಲು ಆಳುಗಳಿಗೆ ಹೇಳಿದಾಗ ಉದುರಿದುದರಲ್ಲಿಯೇ ಅರ್ಧ ಉಳಿಸಿ ಅಲ್ಲೊಂದು ಇಲ್ಲೋಂದು ಆರಿಸಿಕೊಂಡು ತೋರ್ಪಡಿಸುವಿಕೆಗಾಗಿ ಮಾತ್ರ ಆರಿಸಿದ್ದರಿಂದ ನಾನು ಈಚ ಹೋಗಿ ಆರಿಸಿಕೊಂಡು ಬಂದಾಗ ನಮಗೂ ಸ್ವಲ್ಪಮಟ್ಟಿಗೆ ಕಿಮ್ಮತ್ತು ಬಂದಿತ್ತು. ಆ ಹೊಲದಲ್ಲಿ ಮರಳು ಮರಳು ಇದ್ದುದರಿಂದ ಶೇಂಗಾ ಬಳ್ಳಿ ಹರಗಲು ವೇಗವಾಗಿ ಹೊಡೆದ ಟಿಲ್ಲರ್ ನ ರಭಸಕ್ಕೆ ಮೆದೆಗಟ್ಟಲೇ ಶೇಂಗಾ ಬಳ್ಳಿಯೇ ತಿರುವುಗಳಲ್ಲಿ ಮುಚ್ಚಿ ಹೋಗಿರುತಿತ್ತು. ನಾನು ಅಲ್ಲೊಂದು ಇಲ್ಲೊಂದು ಬಿದ್ದಿರುವ ಶೇಂಗಾ ಬುಡ್ಡೆಗಳನ್ನು ಆಯ್ದು ಚೀಲಕ್ಕೆ ಹಾಕಿಕೊಂಡರೇ ಇವನು ಮಾತ್ರ ಮೆದೆಗಟ್ಟಲೇ ಬಳ್ಳಿ ಮರಳು ತೋಡಿ ಹುಡುಕಿ ಕಡಲೆಕಾಯಿಯನ್ನು ತರಿದು ತರಿದು ಚೀಲದಲ್ಲಿ ಹಾಕಿಕೊಳ್ಳುತ್ತಿದ್ದ. ಅವನ ಸಂಗ್ರಹ ನನಗಿಂತಲೂ ಯಾವಾಗಲೂ ಡಬಲ್ ಇರುತಿತ್ತು. ಇಷ್ಟೇ ಅಲ್ಲಾ ಅವನ ಕೆಲಸಗಳು ಹುಟ್ಟುತರಲೆಗಳಂತೆಯೂ ಇದ್ದು ಸೀರೀಯಸ್ ಆಗಿ ಕೆಲಸವನ್ನು ಮಾಡುತ್ತಿದ್ದ. ಅವನು ಎಲ್ಲಿಯೇ ಕೆಲಸಕ್ಕೆ ಹೋಗಲಿ, ಸುಮ್ಮನೇ ಹೋಗಲಿ ಮನೆಗೆ ತಿನ್ನಲಿಕ್ಕೋ, ಸಾರಿಗೋ ಒಂದಷ್ಟು ಉಪಯೋಗ ಆಗುವಂತಹ ಕೆಲಸಗಳನ್ನು ಮಾಡಿಕೊಂಡು ಹೋಗುತ್ತಿದ್ದ. ಉದಾಹರಣೆಗೆ ಯಾವುದಾದರೂ ತೋಟಗಳಿಗೆ ಹೋದಾಗ ಅಲ್ಲಿರುವ ತರಕಾರಿಗಳನ್ನು ಹುಡುಕಿ ಟವೆಲ್ ಗೆ ಹಾಕುತ್ತಿದ್ದ. ಹುಣಸೇ ಮರಗಳ ಅಡಿ ಹೋದರೆ ಮುಂಗಾರು ಸಂದರ್ಭದಲ್ಲಿ ಹುಣಸೇ ಚಿಗುರನ್ನು,ದಸರಾ ದೀಪಾವಳಿ ಸಮಯದಲ್ಲಿ ಹೋದರೆ ಹುಣಸೇ ಕಾಯಿಯಯನ್ನು ಇನ್ನೂ ಆಗಷ್ಟ್ ಸೆಪ್ಟೆಂಬರ್ ತಿಂಗಳುಗಳಲ್ಲಿ ಯಾರದ್ದೊ ಹೊಲಗಳಿಗೆ ದನಗಳ ಮೇಯಿಸಲು ಹೋದಾಗ ಅವರು ಮನೆ ಬಳಕೆಗೆ ಹಾಕಿಕೊಂಡಿರುತ್ತಿದ್ದ ಜವಳೀಕಾಯಿ, ಹೀರೇಕಾಯಿ, ಸೌತೇಕಾಯಿ ಅಪರೂಪಕ್ಕೆ ಕಲ್ಲಂಗಡಿ ಹಣ್ಣನ್ನೂ ಮನೆಗೆ ಕೊಂಡೊಯ್ಯುತ್ತಿದ್ದ. ಹಾಗೆ ಇವನು ಡಿಸೆಂಬರ್ -ಜನವರಿ ತಿಂಗಳುಗಳಲ್ಲಿ ಹುಣಸೇ ಮರಗಳ ಕೆಳಗೆ ಬಿದ್ದಿರುವ ಹುಣಸೇ ಹಣ್ಣನ್ನೂ ಕೆಲವೊಮ್ಮೆ ಕೋಲು ಕಲ್ಲಿನಿಂದ ಹೊಡೆದು ಕೆಡವಿಕೊಂಡಾದರೂ ಅವನ ವಲ್ಲಿ ತುಂಬಿಸುತ್ತಿದ್ದನು. ಮಳೆಗಾಲದಲ್ಲಿ ಅವನ ಚಿತ್ತ ಇದ್ದದ್ದು ಬಿಡುವಾದಗಲೆಲ್ಲಾ ನಮ್ಮ ಮನೆಯ ಸಮೀಪ ಇದ್ದ ಹಳ್ಳಕ್ಕೆ ಬಂದು ಆ ಹಳ್ಳದಲ್ಲಿ ಏಡಿಗಳನ್ನು ಹಿಡಿಯುತ್ತಾ ನಿಂತುಕೊಂಡ ನೀರು ಆವಿಯಾಗುವವರೆಗೂ ಅವನು ಯಾವಾಗಲೂ ಅತ್ತ ಕಡೆ ಸುಳಿದಾಡುತ್ತಲೇ ಇರುತ್ತಿದ್ದ. ಪ್ರತಿ ಬಾರಿ ಬಂದಾಗಲೂ ಕೈಯಲ್ಲಿ ಒಂದು ಟಿಫನ್ ಕ್ಯಾರಿಯರ್ ಇರುತ್ತಿತ್ತು. ಅದರಲ್ಲಿ ಕೈಗೆ ಸಿಕ್ಕ ಏಡಿಗಳನ್ನು ಏಡಿಗಳ ಬಿಲದಲ್ಲಿ ಕೈ ಹಾಕಿ ಹಿಡಿಯುತ್ತಾ, ಸ್ವಲ್ಪಮಟ್ಟಿಗೆ ನೀರು ಕಡಿಮೆಯಾದಾಗ ನೀರೊಳಗೆ ನೆಲದಲ್ಲಿ ಕೈಯಿಂದ ಜಾಲಾಡುತ್ತಾ ಏಡಿ ಹಿಡಿಯುತ್ತಿದ್ದ. ನಾನು ಅವನ ಜೊತೆಗೆ ಹೋಗುತ್ತಿದ್ದೆ ಆದರೂ ನೀರಲ್ಲಿ ಕೈಗಳನ್ನು ಜಾಲಾಡುತ್ತಾ ಏಡಿ ಹಿಡಿಯುವಲ್ಲಿ ಅವನಷ್ಟು ಚುರುಕಾಗಿರಲಿಲ್ಲ. ಹಿಡಿದಾದ ಮೇಲೆ ಒಣಪ್ರದೇಶಕ್ಕೆ ಬಂದು ಎಲ್ಲವನ್ನೂ ನೆಲಕ್ಕೆ ಸುರಿವಿ ಎಷ್ಟು ಇದ್ದಾವೆ?? ಎಷ್ಟು ಗಾತ್ರದವು ಇದ್ದಾವೆಂದು ಎಣಿಸಿ ನೋಡುವಾಗ ನಾನು ಬಹಳ ಸಂಭ್ರಮಿಸುತ್ತಿದ್ದೆ. ಅಡ್ಡವಾಗಿ ನಡೆಯುತ್ತಾ ತಮ್ಮ ಚಿಮುಟದ ಕೈಗಳ ಏಡಿಗಳನ್ನು ನೋಡಿ ಕುಣಿದಾಡುತ್ತಿದ್ದ ನನಗೆ ನನ್ನ ಹುಡುಕಿಕೊಂಡು ಬಂದು ನನಗೆ ಅವನು ಹಿಡಿದ ಏಡಿಗಳನ್ನು ತೋರಿಸಿ ಹೋಗುತ್ತಿದ್ದ. ಯಾವಾಗಲೋ ಒಮ್ಮೆ ಎಂಟತ್ತು ಏಡಿಗಳನ್ನು ಟವೆಲ್ ನಲ್ಲಿ ಕಟ್ಟಿಕೊಂಡು ಕೈಯಲ್ಲಿ ದೊಡ್ಡ ಟಿಫನ್ ಕ್ಯಾರಿಯರ್ ಹಿಡಿದು ಬಂದಿದ್ದ. ಇಷ್ಟೊಂದು ಏಡಿ ಹಿಡಿದೆಯಾ ಎಲ್ಲಿ ಕ್ಯಾರಿಯರ್ ಅಲ್ಲಿ ಇರುವ ಏಡಿಗಳನ್ನು ನೋಡೋಣ ಎಂದು ಬಾಕ್ಸ್ ನ ಮುಚ್ಚಳ ತೆಗೆದರೆ ಕ್ಯಾರಿಯರ್ ತುಂಬಾ ಮೀನು!! ಹಿಡಿಗಾತ್ರದ, ಹೆಬ್ಬೆರಳು ಗಾತ್ರದ, ಕಿರುಬೆರಳು ಹೀಗೆ ನಾನಾ ಗಾತ್ರದ ಎರಡ್ಮೂರು ಕೆಜಿಯಷ್ಟು ಮೀನು ಹಿಡಿದು ತಂದಿದ್ದ. ಆಗಲೇ ನನಗನಿಸಿದ್ದು ಈಚ ಹುಡುಗನಾಗಿದ್ದರೂ ಸಾಮಾನ್ಯ ಹುಡುಗನಲ್ಲ. ಇವನ ಕೆಲಸ ಎಲ್ಲವೂ ದೊಡ್ಡವರಂತೆಯೇ ಎಂದು..
ಈಚನದು ನನ್ನ ಬಳಿ ಯಾವಾಗಲೂ ಒಂದೇ ಕೋರಿಕೆ. ನನಗೆ ಜೇನು ಕಂಡಾಗ ಅವನನ್ನೂ ನನ್ನ ಜೊತೆಗೆ ಕರೆದುಕೊಂಡು ಹೋಗಬೇಕು. ಇದಕ್ಕಾಗಿ ಇನ್ನುಳಿದ ಸಂದರ್ಭಗಳಲ್ಲಿ ಇವನು ನನ್ನ favour ಆಗಿಯೇ ಇರುತ್ತಿದ್ದುದು. ಹೊರಗಡೆ ಅವನಿಗೆ ಏನೇ ತಿನ್ನುವ ವಸ್ತುಗಳು ಸಿಕ್ಕರೂ ಅದರಲ್ಲಿ ಕಿಂಚಿತ್ತಾದರೂ ನನ್ನ ಪಾಲು ಇರುತ್ತಿತ್ತು. ಒಮ್ಮೆ ಯಾರದ್ದೋ ಹೊಲಕ್ಕೆ ಹೊತ್ತು ಮುಳುಗಿದಾಗ ಕರೆದುಕೊಂಡು ಹೋಗಿ ಹುಲ್ಲು ಸೊಪ್ಪಿನ ಕೆಳಗೆ ಮುಚ್ಚಿಟ್ಟಿದ್ದ ಕಲ್ಲಂಗಡಿ ಕಿತ್ತು ತಂದು ಇಬ್ಬರೂ ಸೇತುವೆಯ ಕೆಳಗಡೆ ಕೂತು ಅನಾಗರಿಕರಂತೆ ತಿಂದಿದ್ದೆವು.
ಒಂದು ದಿನ ಈಚ ನಮ್ಮ ಮನೆಗೆ ಏನೋ ಸಂತಸದ ಸುದ್ದಿಯನ್ನು ಹೊತ್ತು ತಂದಂತೆ ಬಂದು ಸ್ವಲ್ಪ ದೂರಕ್ಕೆ ಕರೆದುಕೊಂಡು ಹೋಗಿ "ದೊಣ್ಣೆ ಕಾಟ (ಓತೀಕ್ಯಾತ) ಹೊಡೆದು ಮಣ್ಣಲ್ಲಿ ಹೂತಿಟ್ಟರೆ ದುಡ್ಡು ಸಿಗುವುದಂತೆ" ಯಾರ್ಯಾರಿಗೋ ಎಷ್ಟೆಷ್ಟೋ ಹಣ ಸಿಕ್ಕಿತಂತೆ. ಇಷ್ಟು ಸಿಕ್ಕಿತಂತೆ ಎಂದು ಹೇಳಿದ. ನಮಗೋ ಹಣ ಸಿಗುತ್ತಲೇ ಇರಲಿಲ್ಲ. ಹಣ ಸಿಕ್ಕರೆ ಅಂಗಡಿಯಲ್ಲಿ ಏನಾದರೂ ಕೊಂಡು ತಿನ್ನಬಹುದು ಎಂದು ಎಷ್ಟು ಹಂಬಲಿಸಿದರೂ ನಮಗೆ ನಯಾಪೈಸೆಯೂ ಸಿಗದೇ ಹಣ ಎಂದರೆ ನಿದ್ದೆಯಲ್ಲೂ ಹಪಾಹಪಿಸುವಂತಾಗಿದ್ದೆವು.ನಮ್ಮ ಹಸಿವು ನೀಗದೇ ಅಂಗಡಿಗೆ ಹೋದಾಗ ಕಾಣುತ್ತಿದ್ದವೆಲ್ಲಾ ತಿನ್ನಬೇಕೆನಿಸಿದರೂ ಏನನ್ನೂ ಕೊಳ್ಳಲಾಗದೇ, ತಿನ್ನಲಾಗದೇ ಯಾರಾದರೂ ಸಂಬಂಧಿಕರು ಒಂದೋ ಎರಡೋ ರೂಪಾಯಿಯನ್ನು ಕೊಟ್ಟರೆ ಇದರಲ್ಲಿ ಯಾರದ್ದೂ ಕಿಂಚಿತ್ತೂ ಪಾಲಿಲ್ಲವೆಂದೂ ಇದು ಸಂಪೂರ್ಣ ನನಗೆ ಮಾತ್ರ ಸೇರಿದ ಏಕ ಮಾತ್ರ ಸ್ವತ್ತೆಂಬಂತೆ ಜೋಪಾನವಾಗಿ ಕಾಪಿಟ್ಟುಕೊಳ್ಳುತ್ತಿದ್ದ ನಮಗೆ ದುಡ್ಡು ಸಿಗುತ್ತದೆ ಎಂದರೇ ಏನಾದರೂ ಸರಿಯೇ ಅದು ಮಾಡಲು ತಯಾರಿದ್ದೆವು. ಅಂದು ಅವನ ಒತ್ತಾಸೆ ಏನಿತ್ತೆಂದರೇ ಈಗಲೇ ಇಬ್ಬರೂ ಓತೀಕ್ಯಾತ ಶಿಕಾರಿಗೆ ಇಳಿಯಬೇಕೆಂಬ ರೀತಿಯಲ್ಲಿ ಇತ್ತು. ಆದರೆ ಅಂದು ಮತ್ತೊಂದು ಕೆಲಸ ನಿಗದಿಯಾದ್ದರಿಂದ ನಾಳೆ ಶನಿವಾರ ಅಲ್ಲವೇ...? ನಾಳೇ ಶಾಲೆ ಬಿಟ್ಟಮೇಲೆ ಓತೀಕ್ಯಾತಗಳ ಶಿಕಾರಿ ಮಾಡೋಣ ಎಂದು ಶಿಕಾರಿಗೆ ಮುಹೂರ್ತ ಫಿಕ್ಸ್ ಮಾಡಿದೆ. ಈ ಒಂದು ವಿಚಾರ ನಮ್ಮ ತಲೆಯಲ್ಲಿ ರೋಮಾಂಚನ ಉಂಟು ಮಾಡಿತ್ತು. ಅದರಂತೆ ಅವುಗಳನ್ನು ಹೊಡೆದು ಮಣ್ಣಲ್ಲಿ ಹೂತು ಹಾಕಿದ್ದೂ ಆಯಿತು. ಇದು ಅಷ್ಟೇನು ಕೆಲಸಮಾಡಲಿಲ್ಲವಾದರೂ ಕಾಕತಾಳೀಯ ಎಂಬಂತೆ ಒಮ್ಮೆ ನಾಟಕ ಆಡಿದ ಮರುದಿನ ಬೆಳ್ಳಂಬೆಳಿಗ್ಗೆ ನಾನಾ ಮುಖಬೆಲೆಯ 29 ರುಪಾಯಿ ನಾಣ್ಯಗಳು ಈಚನಿಗೆ ಸಿಕ್ಕಿತ್ತು..!!ನನಗೂ ಅಲ್ಲೊಂದು ಇಲ್ಲೊಂದು ಐವತ್ತು ಪೈಸೆ, ರೂಪಾಯಿಗಳು ಸಿಕ್ಕಿದ್ದವು. ಇದು ಕೆಲವು ದಿನಗಳು ನಮ್ಮ ತಲೆಯಲ್ಲಿ ಉಳಿದು ಓತೀಕ್ಯಾತ ಕಂಡಾಗಲೆಲ್ಲಾ ಹೊಡೆದು ಮಣ್ಣಲ್ಲಿ ಹೂತು ಹಾಕುವ ಅಭ್ಯಾಸ ಆಗಾಗ ಮುಂದವರೆದಿತ್ತು.
ಈಚನಿಂದ ಕಲ್ಲಂಗಡಿ, ಸೌತೆಕಾಯಿ ಇತರ ವಸ್ತಗಳು ತಿಂದಿದ್ದ ಋಣಕ್ಕಾಗಿ ಒಂದು ದಿನ ನಾನು ಈಚ ನಮ್ಮ ಹೊಲಕ್ಕೆ ಹೊಂದಿಕೊಂಡಿರುವ ಹಳ್ಳಕ್ಕೆ ಜೇನು ಹುಡುಕಲು ಹೋದೆವು. ಈಚನಿಗೆ ಜೇನಿನ ಬೇಟೆಯಾಡುವುದರ ಬಗ್ಗೆ ಅಷ್ಟಾಗಿ ಗೊತ್ತಿರಲಿಲ್ಲ. ಆದರೆ ಎಲ್ಲಿಯಾದರೂ ಹಂದಿ, ಮೊಲಗಳು ಕಾಣಬಹುದೆಂದೂ, ಕಂಡರೆ ಅವುಗಳನ್ನೂ ಹೊಡೆಯುವ, ಕೌಜುಗ, ಪುರ್ಲೆ, ಬೆಳವಗಳು ಕಂಡರೇ ಅವುಗಳನ್ನೂ ಹಿಡಿಯುವ ವಿಶ್ವಾಸ ಎದ್ದು ಕಾಣಿಸುತ್ತಿತ್ತು. ಅವರ ತಂದೆ ಪ್ರೊಫೆಷನಲ್ ಬೇಟೆಗಾರ ಅಗಿದ್ದುದರಿಂದ ಎಲ್ಲಾ ಬೇಟೆಗಾರಿಕೆಯ ಕೌಶಲಗಳು ಅವನಲ್ಲಿ ಅಂತರ್ಗತವಾಗಿತ್ತು. ನಾನು ಜೇನು ಹುಡುಕುವ ಕೆಲಸ ಮಾಡುತ್ತಿದ್ದರೆ ಈಚ ಮಾತ್ರ ಕಂಡ ಕಂಡ ಪಕ್ಷಿಗಳಿಗೆ ಕಲ್ಲು ಹೊಡೆದು ಉರುಳಿಸುವ ಪ್ರಯತ್ನ ಮಾಡುತ್ತಲೇ ಇದ್ದ. ಎಲ್ಲಿಯಾದರೂ ದಟ್ಟವಾದ ಗಿಡಗಂಟೆಗಳಿರುವ ಪ್ರದೇಶ ಕಂಡರೆ ಜೇನು ನೋಡಲು ಹೋಗುತ್ತಿದ್ದ ನನ್ನನ್ನು ತಡೆದು "ಇರು ಇರು ಇಂತಹದ್ದರಲ್ಲೇ ಹಂದಿಗಳು ಇರುವುದು... ನಾನು ಹೇಳುವವರೆಗೂ ಹೋಗಬೇಡ" ಎಂದು ಅದರ ಸುತ್ತಲೂ ಹೋಗಿ ಹಂದಿಯದ್ದೋ, ಮೊಲದ್ದೊ ಹೆಜ್ಜೆಗುರುತುಗಳು ಇದ್ದಾವೆಯೇ ಎಂದು ಹೋಗಿ ಹುಡುಕಿ ಬರುತ್ತಿದ್ದ. ಬಂದ ಮೇಲೆ "ಥೋ ಏನು ಇಲ್ಲ ಕಣ್ಲೇ... ಇದ್ದೀದ್ದರೇ....." ಎಂದು ಹಲ್ಲನ್ನು ಕಡಿಯುತಿದ್ದ. ಆಮೇಲೆ ನನ್ನದು ಜೇನು ಹುಡುಕವ ಕಾರ್ಯ... ಈಚ ಅದರ ಸುತ್ತಲೂ ಸುತ್ತು ಹಾಕಿ ಹೆಜ್ಜೆ ಗುರುತುಗಳನ್ನು ಹುಡುಕುವ ಹೊತ್ತಿಗೆ ನಾನು ನಿಂತಲ್ಲೇ ಅತ್ತ ಇತ್ತ ಸರಿದಾಡುತ್ತಾ ಹುಳುಗಳ ಚಲನವಲನದಿಂದ ಅಲ್ಲಿ ಜೇನುಗಳು ಇರಬಹುದಾದ ಸಾದ್ಯತೆಗಳನ್ನು ಅವಲೋಕಿಸಿರುತ್ತಿದ್ದೆ. ಇದ್ದರೆ ಇದೆಯೆಂದು, ಇಲ್ಲವಾದರೆ ಇಲ್ಲ ನಡೆಯೆಂದು ಮುಂದಕ್ಕೆ ಹೋಗುತ್ತಿದ್ದೆವು. ಹಾಗೆ ಮುಂದೆ ಹೋದಾಗ ಅಲ್ಲೊಂದು ಪೊದೆಯಲ್ಲಿ ಒಂದು ಸಾಧಾರಣ ಜೇನು ಕಂಡಿತು. ಪರೀಕ್ಷಿಸಿ ನೋಡಿದರೆ ತುಪ್ಪ ಇಲ್ಲವಾಗಿತ್ತು. ಅವನಿಗೆ ನಾನು ತುಪ್ಪ ಇಲ್ಲ ಮುಂದಿನ ವಾರಕ್ಕೆ ಸ್ವಲ್ಪ ತುಪ್ಪ ಸಿಗತ್ತೆ ಎಂದೇಳಿದೆ. ಆದರೆ ಈಚ ನನ್ನ ನಡೆಗೆ ಅನುಮಾನ ವ್ಯಕ್ತಪಡಿಸಿದ. 'ನೀನು ಇಲ್ಲೇ ಇರ್ತಿಯಾ... ನಾನು ಹೋದಮೇಲೆ ನೀನು ಕಿತ್ತು ತಿಂತೀಯಾ' ಎಂದದ್ದರಿಂದ ಸ್ಥಳದಲ್ಲೇ ಜೇನುಕಟ್ಟಿದ ಕೊನೆಯ ಹಿಡಿದು ಅಲ್ಲಾಡಿಸಿ ಹುಳುಗಳ ಎಬ್ಬಿಸಿದೆ. ಹುಳುಗಳು ಎಬ್ಬಿಸಿದ್ದಕ್ಕೆ ಹೆದರಿದ ಈಚ ಮುಖದ ತುಂಬಾ ಮುಸುಕಿನಂತೆ ಟವೆಲ್ ಸುತ್ತಿಕೊಂಡು "ಹುಷಾರ್...ಹುಷಾರ್..." ಎಂದು ಹೇಳುತ್ತಿದ್ದ. ಜೇನು ಕಿತ್ತುಕೊಂಡು ಬಂದು ಈಚನ ಕೈಗಿತ್ತು ನೋಡ್ಲೇ ತುಪ್ಪ ಇಲ್ಲ ಎಂದು ತಳದಲ್ಲಿದ್ದ 5-10 ml ತುಪ್ಪವನ್ನು ಜೇನು ರೊಟ್ಟಿಯನ್ನು ಅವನಿಗೆ ಕೊಟ್ಟುಬಿಟ್ಟೆ. ಈಚ ಬೆರಳನ್ನು ಚೀಪುತ್ತಾ "ಜೇನು ತುಪ್ಪ ಚೆನ್ನಾಗಿದೆ. ಆದರೆ ತುಪ್ಪ ಇನ್ನೂ ಜಾಸ್ತಿ ಇರಬೇಕಾಗಿತ್ತು. ಥೋ... ಇನ್ನೊಂದು ಒಳ್ಳೆಯ ಜೇನು ಹುಡುಕಿಕೊಡು ಪ್ಲೀಸ್.. ಪ್ಲೀಸ್... ಕಣ್ಲೇ" ಎಂದು ಪುನಃ ವಿನಂತಿಸಿಕೊಂಡ... ಜಾಸ್ತಿ ತುಪ್ಪ ಇರುವ ಜೇನನ್ನು ತಿನಿಸಬೇಕೆಂದು ನನಗೂ ಅನಿಸಿದ್ದರಿಂದ ನನ್ನ ಹುಡುಕಾಟ ಮುಂದೆ ಸಾಗಿತ್ತು.
ಹಾಗೆ ಹುಡುಕುತ್ತಾ ಹುಡುಕುತ್ತಾ ಸುಮಾರು ಒಂದು ಕಿಲೋಮೀಟರ್ ನಷ್ಟು ದೂರ ಹಳ್ಳದ ಒಡಲಲ್ಲೇ ಸಾಗಿದೆವು. ಅಲ್ಲೊಂದು ಏಕೈಕ ತಾಳೆ ಮರ ಇತ್ತು. ಅದೊಂದು ಬಹು ದಟ್ಟವಾದ ಹಳ್ಳದ ಪ್ರದೇಶವಾಗಿತ್ತು. ಅಲ್ಲಿ ಬಹಳ ಪ್ರಮಾಣದ ನೀರು ನಿಂತುಕೊಳ್ಳುತ್ತಿದ್ದುರಿಂದ ಗಿಡಮರಗಳು ಹೆಚ್ಚೆಚ್ಚು ಬೆಳೆದಿದ್ದವು. ಇಲ್ಲಿ ನಾಲ್ಕೈದು ಹೊಂಗೆ, ತುಗ್ಗಲೀ ಮರಗಳು ಎತ್ತರವಾದ ಕತ್ತಾಳಿ ಬೊಂಬು, ದಟ್ಟವಾದ ಎಷ್ಟೋ ವರ್ಷಗಳಿಂದ ಬೆಳೆದು ಬಲಿತ ಸರ್ಕಾರಿ ಜಾಲಿ ಗಿಡಗಳು ಯಥೇಚ್ಛವಾಗಿ ಬೆಳೆದಿದ್ದವು. ಇಲ್ಲಿ ಜೇನುಗಳು ಸಿಕ್ಕೇ ಸಿಗುತ್ತಾವೆಂದು ನನಗೆ ಭರವಸೆಯಿದ್ದರೆ ಈಚನಿಗೆ ಇಲ್ಲಿ ಹಂದಿಗಳು ಗ್ಯಾರಂಟಿಯಾಗಿ ಇದ್ದೇ ಇರುತ್ತಾವೆ. ಒಂದಾದರೂ ಒಂದಾದರೂ ಕಂಡೇ ಕಾಣುತ್ತದೆ. ಕೊನೆಗೆ ಹಂದಿ ಇಲ್ಲವೆಂದರೂ ಮೊಲಗಳಾದರಂತೂ ಇಲ್ಲದೇ ಇರಲು ಸಾಧ್ಯವೇ ಇಲ್ಲ. ಒಂದು ಒಳ್ಳೆಯ ಕೊಡಲಿಯನ್ನಾದರೂ ತರಬೇಕಿತ್ತು ಎಂದು ಈಚ ಪೇಚಾಡುತ್ತಿದ್ದ. ಹಾಗೆ ಮುಂದೆ ಹೋಗುತ್ತಾ ಮರಳು ಹಳ್ಳದ ತುಂಬಾ ತುಂಬಿ ಹೋಗಿತ್ತು. ತಣ್ಣನೆಯ ಜಾಗ ಹಂದಿಗಳು ನಿಜವಾಗ್ಲೂ ಇಂತಹ ಜಾಗದಲ್ಲೇ ಇರೋದು. ಅವುಗಳು ಈ ಹಳ್ಳದಲ್ಲಿ ನೀರಿದ್ದರೆ ನೀರಿನಲ್ಲಿಯೇ ಎಮ್ಮೆಗೊಡ್ಡುಗಳ ತರ ಬಿದ್ದು ಉರುಳಾಡುತ್ತಿರುತ್ತಾವೆಂದು ಊರಲ್ಲಿ ನೋಡಿದ ವರಾಹಗಳಿಗೆ ಹೋಲಿಕೆ ಮಾಡಿ ಮಾತಾಡುತ್ತಿದ್ದ.
ನಾನು ಹಾಗೆ ದಟ್ಟನೆಯ ಅಗಣಿತ ಸಂಖ್ಯೆಯ ಚಿಗುರಿನ ಕಾಂಡಗಳೊಂದಿಗೆ ಛತ್ರಿಯಂತೆ ವಿಸ್ತರಿಸಿದ್ದ ತುಗ್ಗಲೀ ಮರದ ಮೇಲೆ ಒಂದು ತುಂಬಾ ದೊಡ್ಡದೂ ಅಲ್ಲದ ಚಿಕ್ಕದೂ ಅಲ್ಲದ ಕೆಂಪು ಹುಳಗಳಿದ್ದ ಜೇನುಗೂಡೊಂದನ್ನು ನೋಡಿದೆ.
"ಈಚ ಅಗೋ ಅಲ್ಲಿನೋಡು ಜೇನು..." ಎಂದು ತೋರಿಸಿದೆ. ಜೇನು ಗೂಡನ್ನು ನೋಡುತ್ತಾ ಗೂಡುಕಟ್ಟಿದ ಕೊಂಬೆಯ ಮೇಲೆ ಉಡ ಇದೆ.
ನಾನು ಪುನಃ ನೋಡಿ 'ಅದು ಉಡವಲ್ಲ... ಅದು ದೊಣ್ಣೆಕಾಟ..' (ಓತೀಕ್ಯಾತ)
"ಏ ಅದು ನಿಜವಾಗ್ಲೂ ಉಡ... ದೊಣ್ಣೆಕಾಟ ಕಿರುಬೆರಳ ದಪ್ಪ ಇರುತ್ತಾವೆ ನೋಡು ಎಷ್ಟು ದಪ್ಪ ಇದೆ ಅದು ನಿಜವಾಗ್ಲೂ ಉಡನೇ ಕಣ್ಲೇ..." ಎಂದು ಹೇಳುತ್ತಾ ಅಲ್ಲೇ ಸ್ವಲ್ಪ ದೂರದಲ್ಲಿ ಬಿದಿದ್ದ ಕಲ್ಲಗಳನ್ನು ಹಿಡಿದು ತಂದ..
"ಈಚ ಅದು ಉಡ ಅಲ್ಲವೋ ನಿಜವಾಗಲೂ ಅದು ದೊಣ್ಣೆಕಾಟನೋ... ನೋಡು ಬಾಲ... ಅದರ ಉಬ್ಬಿದ ಕಣ್ಣು... ಮುಳ್ಳು ಮುಳ್ಳಿನ ಮೈ.. ಅದೆಲ್ಲಾ ನೋಡಿದರೆ ಅದು ದೊಣ್ಣೆ ಕಾಟವೇ... ಆದ್ರೆ ಸ್ವಲ್ಪ ನೋಡಕೆ ದೊಡ್ಡದು ಕಾಣಿಸುತ್ತಿದೆ...."
ಸ್ವಲ್ಪ ನಿಧಾನಿಸಿ ಕಣ್ಣು ಮಿಟುಕಿಸದೇ ಅದನ್ನೇ ನೋಡುತ್ತಲೇ ತಿರುಗುತ್ತಾ ನಡೆದ...
"ಸರಿ ಹಂಗಾದ್ರೆ... ದೊಡ್ಡ ದೊಣ್ಣೆಕಾಟ ಹೊಡೆದು ಹೂಣಿಸಿದರೆ ದುಡ್ಡು ಸಿಗತ್ತೆ....ಹ್ಹ...ಹ್ಹ..ಹ್ಹ..." ಎಂದ...
ಆ ಓತೀಕ್ಯಾತವು ಜೇನಿಗೆ ಹೊಂದಿಕೊಂಡಂತೆಯೇ ಇದ್ದು ಜೇನಿಗೆ ತೊಂದರೆ ಮಾಡದೇ ಓತೀಕ್ಯಾತವನ್ನು ಹೊಡೆಯುವುದು ಅಸಾಧ್ಯವಾಗಿತ್ತು. ಒಂದು ವೇಳೆ ಇವು ಅಪಾಯಕಾರಿ ಹುಳುಗಳಂತೆ ಇದ್ದುದರಿಂದ ಅವಸರ ವಾಗಿ ಕಲ್ಲಿಂದ ಹೊಡೆಯಲಿಲ್ಲ. ಮರಳಿನ ಮೇಲೆ ಕೂತು ಬಲಗೈಯನ್ನು ಹಿಂದೆ ಚಾಚಿ ಮರಳಿ ಎಡಗೈಯಲ್ಲಿ ಮರಳನ್ನು ತೊಡಿ ಹಿಂದೆ ಹಾಕುತ್ತಿದ್ದೆ.
"ಹೇಯ್... ಆ ದೊಣ್ಣೆಕಾಟ ಜೇನುತಿನ್ನುತ್ತಿದೆ..... ನೋಡು.. ನೋಡು..." ಎಂದು ಆಶ್ಚರ್ಯ ಚಕಿತನಾಗಿ ಅದನ್ನೇ ನೋಡುತ್ತಾ ಹೇಳಿದ.
"ದೊಣ್ಣೆಕಾಟ ಜೇನು ತಿನ್ನಲ್ಲ.."
"ಏಯ್ ನಿಜವಾಗ್ಲೂ ಕಣೋ... ನೋಡ್ತಾ ಇರು... ಅದನ್ನೇ ನೋಡ್ತಾ ಇರು .... ತಿನ್ತಾತೆ... ಸತ್ಯವಾಗಲೂ ತಿನ್ನತ್ತೆ..."
ನಾನು ತದೇಕ ಚಿತ್ತದಿಂದ ಆ ಓತೀಕ್ಯಾತವನ್ನು ನೋಡುತ್ತಾ ಕುಳಿತೆ... ಜೇನುಗೂಡು ಸಮೀಪದಲ್ಲೇ ಇದೆ. ನೋಡಲು ಶುರುಮಾಡಿ 20-30 ಸೆಕೆಂಡ್ ಆಗಿರಬಹುದು. ತನ್ನ ಎರಡೂ ಮುಂಗಾಲುಗಳನ್ನು ಕೊಂಚ ಬಗ್ಗಿಸಿ ಜೇನುಗೂಡುಗಳಿಂದ ಬಗ್ಗಿ ಒಂದು ಹುಳವನ್ನು ಬಾಯಲ್ಲಿ ಕಚ್ಚಿ ಹಿಂದೆ ಸರಿದುಕೊಂಡಿತು. ಸ್ಪಸ್ಟತೆ ಅನ್ನಿಸದೇ ಖಾತರಿಗಾಗಿ ಮತ್ತೇ ಅದನ್ನೇ ನೋಡುತ್ತಾ ಕುಳಿತೆವು. ಏನಾಶ್ಚರ್ಯ??? ನಿಜವಾಗಲೂ ಆ ಓತೀಕ್ಯಾತ ಪ್ರತಿ ಇಪ್ಪತ್ತು-ಮೂವತ್ತು ಸೆಕೆಂಡಿಗೆ ಒಂದೊಂದು ಜೇನುಹುಳುವನ್ನು ಹಿಡಿದು ಲೊಚ ಲೊಚನೆ ನುಂಗುತ್ತಿದೆ. ಆ ಜೇನು ಗೂಡಿನಲ್ಲಿರುವ ಹುಳುಗಳಿಗೆ ಯಾವುದೋ ಒಂದು ಪ್ರಾಣಿ ನಮ್ಮ ಗೂಡಿನಿಂದ ನಮ್ಮ ಕುಟುಂಬದ ಸದಸ್ಯರನ್ನು ಹಿಡಿದು ನುಂಗುತ್ತಿದೆ ಎಂದು ಯಾವ ಸುಳಿವು ಯಾವ ಹುಳುವಿಗೂ ಗೊತ್ತಾಗುತ್ತಿಲ್ಲ. ಅದೊಂದು ನಿರ್ಜೀವವಸ್ತುವಿನಂತೆ ಜೇನಿನ ಪಕ್ಕ ಸರಿದು ಬಂದು ಒಂದೊಂದೇ ಒಂದೊಂದೇ ಹುಳುಗಳನ್ನು ಹಿಡಿದು ಬಾಯಲ್ಲಿ ಹಾಕಿಕೊಳ್ತಾ ಇದೆ. ಆ ಓತೀಕ್ಯಾತ ಅದೆಷ್ಟು ದಿನದಿಂದ ಈ ಹುಳುಗಳ ಮಾರಣ ಹೋಮ ಮಾಡುತ್ತಿದೆಯೋ ತಿಳಿಯದು. ಅದುವರೆಗೆ ಜೇನುಹುಳುಗಳನ್ನು ಈ ಓತೀಕ್ಯಾತ ತಿನ್ನತ್ತೆ ಅಂತ ನನಗೆ ಗೊತ್ತೇ ಇರಲಿಲ್ಲ. ಗೊದ್ದ, ಇರುವೆ ಗಳನ್ನು ತಿನ್ನಬಹುದು ಎಂದು ನನಗೆ ತಿಳಿದಿತ್ತು. ಆದರೆ ಜೇನುಗೂಡಿಗೆ ಬಾಯಿ ಹಾಕಿ ಅವುಗಳಿಗೆ ಗೊತ್ತಾಗದೇ ಭಕ್ಷಿಸುವುದು ಎಂದು ನಾನು ಈ ಓತೀಕ್ಯಾತದ ಬಗ್ಗೆ ಊಹಿಸಿಯೂ ಇರಲಿಲ್ಲ. ಇದನ್ನು ನೊಡಿದ ನನಗೆ ಆ ಜೇನು ಹುಳುಗಳ ಬಗ್ಗೆ ಅತೀವ ಕನಿಕರ ಉಂಟಾಯಿತು. ಅವುಗಳ ಈ ಅಮಾಯಕತೆಗೆ ಏನು ಹೇಳಬೇಕೋ ತಿಳಿಯದಾಯಿತು. ಪಾಪ ಅವು ಯಾವಕ್ಕೂ ಗೊತ್ತೇ ಆಗದೇ ಸೈಲೆಂಟ್ ಆಗಿಯೇ ತಿಂದು ಮುಗಿಸುತ್ತಿದೆಯಲ್ಲಾ??? ಆ ಜೇನು ಹುಳುಗಳಲ್ಲಿರುವ ಕೆಲವು ಹುಳುಗಳ ಆಯಸ್ಸು ಕೆಲವೇ ನಿಮಿಷ, ಇನ್ನೂ ಕೆಲವು ಹುಳುಗಳ ಆಯಸ್ಸು ಕೆಲವು ಗಂಟೆಗಳು! ಒಟ್ಟಾರೆಯಾಗಿ ಅವೆಲ್ಲವುಗಳ ಆಯಸ್ಸು ಉಳಿದಿರುವುದು ಕೆಲವೇ ದಿನಗಳು !!. ಆ ಜೇನುಹುಳುಗಳ ಸ್ಥಿತಿಯನ್ನು ಕಂಡು ಪಾಪ ಎಂದೆನಿಸಿತು. ಜೇನು ಹುಳುಗಳ ತಿಂದು ಈ ದೊಣ್ಣೆಕಾಟ ಎಷ್ಟು ದಪ್ಪ ಆಗಿದೆಯಲ್ಲಾ ಎಂದು ಅಚ್ಚರಿ ಉಂಟಾಗಿ ದೂರಕ್ಕೆ ಬಂದು ದೊಣ್ಣೆಕಾಟವನ್ನು ಗುರಿಯಾಗಿಸಿ ಕಲ್ಲನ್ನು ಹೊಡೆದೆವು. ನಾವು ಹೊಡೆದ ಕಲ್ಲು ಜೇನಿಗೂ ಬೀಳದೇ, ಆ ಓತೀಕ್ಯಾತಕ್ಕೂ ಬೀಳದೇ ರೆಂಬೆಕೊಂಬೆಗಳಿಗೆ ಬಿದ್ದು ಓತೀಕ್ಯಾತವೇನೋ ಪಕ್ಕದ ರೆಂಬೆಗೆ ಸರಿದು ಹೋಯಿತು.
ಆ ತುಗ್ಗಲೀ ಮರದಲ್ಲಿ ಕಟ್ಟಿದ ಜೇನು ನೋಡಲು ಹೆಜ್ಜೇನಿನಂತೆಯೇ ಇತ್ತು. ಆದರೆ ಹುಳುಗಳು ಮಾತ್ರ ಹೆಜ್ಜೇನಿಗಿಂತ ಚಿಕ್ಕವೂ, ಕಿರಿಜೇನಿಗಿಂತ ದೊಡ್ಡವೂ ಹಾಗೂ ಕೆಂಪು ಬಣ್ಣದಲ್ಲಿ ಇದ್ದವು. ಇದು ನಾನು ತೆಗೆಯುತ್ತಿದ್ದ ಕೋಲು ಜೇನಾಗಲೀ, ತುಡುವೆ ಜೇನಾಗಲೀ ಅದು ಆಗಿರದೇ ಈ ಜೇನಿನ ಪ್ರಭೇದವೇ ವಿಭಿನ್ನವಾಗಿ ಇದ್ದುದು ಕೆಲವೇ ಸೆಂಕೆಂಡ್ಗಳಲ್ಲಿ ತಿಳಿಯಿತು. ಕಲ್ಲೊಡೆದು ಓತೀಕ್ಯಾತ ಓಡಿಸಿದ ಮೇಲೆ ಈಚ "ಅಬ್ಬಾ.... ಅಂತೂ ದೊಡ್ಡದಾದ ಒಂದು ಜೇನು ಸಿಕ್ಕಿತು... ಕೀಳಲೇ.. ಮರಹತ್ತು... ತೆಗಿ ಎಂದು ಹೇಳಿದ. ಈಚನ ಅಪೇಕ್ಷೆಗೆ ನಾನು ಅಸಮ್ಮತಿಯನ್ನು ನೀಡಿ "ಇವು ಹುಳುಗಳು ಬೇರೆ ಜಾತಿಯವು ಆಗಿದ್ದು ಇದನ್ನು ತೆಗೆಯಲು ಪ್ರಯತ್ನಿಸಿದರೆ ಹುಳುಗಳು ಕಚ್ಚಬಹುದು. ಈ ತರಹದ ಜೇನನ್ನು ನಾನೂ ಹಿಂದೆ ಎಂದೂ ತೆಗೆದಿಲ್ಲ. ಬೇಡಪ್ಪ.. ಬೇಕಾದರೆ ಬೇರೊಂದು ಜೇನನ್ನು ಹುಡುಕಿಕೊಡುವೆ ಇದನ್ನು ಮಾತ್ರ ಕೀಳಲು ಆಗಲ್ಲ" ಎಂದು ಸಾರಾಸಗಟಾಗಿ ತಿರಸ್ಕರಿಸಿದೆ. ಗೊತ್ತಿಲ್ಲದ ಹುಳುಗಳ ತಂಟೆಗೆ ಹೋಗಿ ಕಚ್ಚಿಸಿಕೊಳ್ಳುವ ಮೂರ್ಖ ಪ್ರಯತ್ನವನ್ನು ಮಾಡಲು ಯಾಕೋ ಅಂಜಿದೆ.
ಅಷ್ಟೊತ್ತಿಗಾಗಲೇ ಸಂಜೆ ಸುಮಾರು ಮೂರೂವರೆ ಆಗಿತ್ತು. ತೆಂಗಿನ ಮರಗಳ ನೆರಳಿಗೆ ಕಟ್ಟಿದ್ದ ದನಗಳನ್ನು ಗೋದಲಿಗೆ ಕಟ್ಟಿ ಹುಲ್ಲು ಹಾಕಬೇಕಾಗಿತ್ತು. ಈಗ ಜೇನು ಹುಡುಕಲು ಹೋದರೆ ಹೊತ್ತಾಗತ್ತೆ ಬೇರೊಂದು ದಿನ ಹುಡುಕಿಕೊಡುವೆ ಎಂದು ವಾಪಸ್ ಹಿಂತಿರುಗಿದೆವು. ಆ ಓತೀಕ್ಯಾತ ದಿನವೂ ಆ ಹುಳುಗಳನ್ನು ಹಿಡಿದು ತಿನ್ನುತ್ತಿರಬಹುದೇ ಎಂಬ ಪ್ರಶ್ನೆ ನನ್ನಲ್ಲಿ ಉಂಟಾಗಿ ಮರುದಿನವೂ ನಾನು ಮಧ್ಯಾಹ್ನದ ಸುಮಾರಿಗೆ ಹೋಗಿ ನೋಡಲು ಆಗಲೂ ಆ ಓತೀ ನಿನ್ನೆ ಇದ್ದ ಸೇಮ್ position ನಲ್ಲೇ ಕುಳಿತು ಜೇನು ಹುಳುಗಳನ್ನು ಹಿಡಿದು ಹೊಟ್ಟೆಗೆ ಹಾಕಿಕೊಳ್ತಾ ಇತ್ತು. ಆಗಲೂ ನಾನು ಕಲ್ಲೊಡೆದು ಆ ಓತಿಯನ್ನು ಅಲ್ಲಿಂದ ಓಡಿಸಿದೆನಾದರೂ ಅದು ಆಮೇಲಾದರೂ ಬಂದು ತಿನ್ನಬಹುದೆಂಬ ಸಂಶಯ ಉಂಟಾಯಿತು. ನಿರಂತರವಾಗಿ ಸುಮಾರು ಹತ್ತು ದಿನಗಳ ಕಾಲ ನಾನು ಅನುದಿನವೂ ಬಂದು ನೋಡುತ್ತಿದ್ದೆ. ಆ ಓತೀ ಪ್ರತಿದಿನವೂ ಹುಳುಗಳ ಹಿಡಿದು ಹೊಟ್ಟೆಗಾಕಿಕೊಳ್ಳುತ್ತಿತ್ತು. ದಿನದಿಂದ ದಿನಕ್ಕೆ ಹೆಚ್ಚಾಗಬೇಕಿದ್ದ ಜೇನುಹುಳುಗಳ ಸಂಖ್ಯೆಯು ದಿನದಿಂದ ದಿನಕ್ಕೆ ಕಡಿಮೆ ಆಯಿತು. ಹತ್ತು ಹನ್ನೆರಡನೆಯ ದಿನ ಈ ಜೇನುಹುಳುಗಳಿಗೆ ಈ ಓತೀಕ್ಯಾತದ ಬಗ್ಗೆ ಗೊತ್ತಾಯಿತೋ ಏನೋ.. ಅವೆಲ್ಲವೂ ಕಟ್ಟಿದ್ದ ಗೂಡನ್ನು ಬಿಟ್ಟು ಯಾವಾಗಲೋ ಎದ್ದುಹೋಗಿದ್ದವು. ಸಾವಿರ ಸಂಖ್ಯೆಯಲ್ಲಿ ಜೇನು ಹುಳುಗಳ ಭಕ್ಷ್ಯ ಭೋಜನ ಮಾಡಿದ ಓತೀಕ್ಯಾತ ಅದೆಷ್ಟು ದಿನ ಬದುಕಿತೋ ಗೊತ್ತಿಲ್ಲ... ಈಗಲೂ ಸನ್ನಿವೇಶವನ್ನು ನೆನೆಸಿಕೊಂಡರೆ ಪಾಪ ಎನಿಸುತ್ತದೆ. ಅಂದ ಹಾಗೆ ಗೆಳೆಯ ಈಚನಿಗೆ ಇದರ ನಂತರವೂ ನಾಲ್ಕೈದು ಬಾರಿ ಮಸ್ತಾಗಿ ತುಪ್ಪ ಇರುವ ಎಂಟತ್ತು ಜೇನುಗಳನ್ನು ವಿವಿಧ ಸಂದರ್ಭಗಳಲ್ಲಿ ತಿನ್ನಿಸಿ ಅವನ ಋಣವನ್ನು ತೀರಿಸಿದ್ದೇನೆ.
ಈ ಘಟನೆಗೂ ಕೆಲವೇ ದಿನಗಳ ಮುಂಚೆ ದನಗಳನ್ನು ನೆರಳಿಗೆ ಕಟ್ಟುತ್ತಿದ್ದ ನಮ್ಮ ತೆಂಗಿನ ಮರದ ಗರಿಗಳಿಗೆ ಒಂದೆರಡು ಜೇನು ಕಟ್ಟಿದ್ದವು. ಅವುಗಳನ್ನು ತೆಗೆಯಲು ಸಮಯ ಒದಗಿಬಂದಿರಲಿಲ್ಲ. ನಾನು ಅಲ್ಲೇ ಸಮೀಪ ಹೊಲಕ್ಕೆ ನೀರು ಹಾಯಿಸುತ್ತಿದ್ದೆ. ಒಂದು ಹದ್ದು ಏನನ್ನೋ ಹಿಡಿಯುವ ಹಾಗೆ ವೇಗವಾಗಿ ಬಂದು ಆ ಗರಿಗಳಿಗೆ ಬಡಿಯಿತು. ನಾನೇನೋ ಓತೀಕ್ಯಾತವೋ, ಹಾವೋ ಇರಬೇಕೆಂದು ಅಂದುಕೊಂಡೆ ಆದರೆ ಅದು ತನ್ನ ಚೂಪಾದ ಉಗುರಗಳಲ್ಲಿ ಹೊತ್ತೊಯ್ದದ್ದು ಜೇನು ರೊಟ್ಟಿಯನ್ನು.!! ನಾನು ಈ ಎರಡೂ ಸಂದರ್ಭದ ಪ್ರತ್ಯಕ್ಷ ಸಾಕ್ಷಿಯಾಗಿದ್ದು ಪ್ರಕೃತಿ ವೈಶಿಷ್ಟ್ಯವನ್ನು ಕಂಡು ನನಗೂ ಆಶ್ಚರ್ಯಕರನನ್ನಾಗಿಸಿತ್ತು. ಆಹಾರ ಸರಪಳಿಯಲ್ಲಿ ಶೋಷಿಸುವ ಪ್ರಾಣಿಯ ಕಪಟವೋ, ದೌರ್ಜನ್ಯವೊ, ಅಥವಾ ಶೋಷಣೆಗೆ ಒಳಗಾಗುವ ಪ್ರಾಣಿಯ ಮುಗ್ದತೆಯೋ, ಅದರ ಮೌಢ್ಯವೋ ನಾನರಿಯೇ... ಆದರೆ ಒಂದನ್ನೊಂದು ಕೊಂದು ತಿನ್ನುವುದು ಮಾತ್ರ ದಿಟ.. ಆ ದಿನ ಪೂರಾ ನನ್ನನ್ನು ಈ ಎರಡೂ ಸಂಗತಿಗಳು ಬಹುವಾಗಿ ಕಾಡಿದವು. ಅನ್ಯಾಯವಾಗಿ ಜೇನುಹುಳುಗಳು ಹದ್ದು , ಓತೀಕ್ಯಾತಕ್ಕೆ ಬಲಿಯಾಗುತ್ತಿವೆಯಲ್ಲಾ??? ಅದೆಷ್ಟು ಜೇನು ಹುಳುಗಳನ್ನು ಯಾವ ಯಾವ ಪ್ರಾಣಿ ಪಕ್ಷಿ, ಕೀಟಗಳು ಹಿಡಿದು ತಿನ್ನುತ್ತಿವೆಯೋ??ಪಾಪ ಅಣುಮಾತ್ರ ಜೇನುಹುಳಗಳಿಗೇ ಇಷ್ಟೊಂದು ಹಿಡಿದು ತಿನ್ನುವ ಸರಪಳಿ ಇರುವಾಗ ತೊಂದರೆ ಮಾಡದೇ ಸುಲಭವಾಗಿ ದೌರ್ಜನ್ಯಕ್ಕೆ ಒಳಗಾಗುವ ಸಾಧು ಜೀವಿಗಳ ಪರಿಸ್ಥಿತಿ ಏನಾಗಬಹುದು?? ಎಂಬ ಯಕ್ಷ ಪ್ರಶ್ನೆಯೊಂದು ನನ್ನನ್ನು ಬಹುವಾಗಿ ಕಾಡಿತು.
ಸರಕಾರಿ ಹಿರಿಯ ಪ್ರಾಥಮಿಕ ಶಾಲೆ, ಮಿಂಚೇರಿ
ಬಳ್ಳಾರಿ ತಾಲೂಕು ಮತ್ತು ಜಿಲ್ಲೆ
Mob : +91 99029 12684
*******************************************