-->
ಜಗಲಿ ಕಟ್ಟೆ : ಸಂಚಿಕೆ - 51

ಜಗಲಿ ಕಟ್ಟೆ : ಸಂಚಿಕೆ - 51

ಜಗಲಿ ಕಟ್ಟೆ : ಸಂಚಿಕೆ - 51
ತಾರಾನಾಥ್ ಕೈರಂಗಳ
ಮಕ್ಕಳ ಜಗಲಿ
ಮಕ್ಕಳ ಡಿಜಿಟಲ್ ಆನ್ಲೈನ್ ಪತ್ರಿಕೆ
ದಕ್ಷಿಣ ಕನ್ನಡ ಜಿಲ್ಲೆ. 


ಇದು ನಿಮ್ಮ ಮನೆಯ 
ಮಕ್ಕಳ ಜಗಲಿ
www.makkalajagali.com
    ಮಕ್ಕಳ ಜಗಲಿಯ ನನ್ನ ಎಲ್ಲಾ ಆತ್ಮೀಯ ಓದುಗ ಬಂಧುಗಳಿಗೆ ಪ್ರೀತಿಯ ನಮಸ್ಕಾರಗಳು.... ನಿಮ್ಮ ಜೊತೆ ಮಾತಾಡುವ ನಿಮ್ಮ ಸಲಹೆ, ಹೊಸ ಆಲೋಚನೆಗಳನ್ನು ನಮ್ಮ ಜೊತೆ ಹಂಚಿಕೊಳ್ಳುವುದಕ್ಕಾಗಿ ಈ ಜಗಲಿ ಕಟ್ಟೆ.... ಮಕ್ಕಳ ಜಗಲಿಗೆ ಸಂಬಂಧಿಸಿದ ಯಾವುದೇ ವಿಷಯದ ಕುರಿತಾಗಿ ನಿಮ್ಮ ಅನಿಸಿಕೆಗಳು ಹಾಗೂ ಸಲಹೆಗಳನ್ನು ಸ್ವೀಕರಿಸುತ್ತೇವೆ. ವಿದ್ಯಾರ್ಥಿಗಳು, ಪೋಷಕರು, ಶಿಕ್ಷಕರು, ಹಿತೈಷಿಗಳು ನಮಗೆ ಬರೆದು ಕಳುಹಿಸಿ.... ಹೆಸರು ವಿಳಾಸ ಹಾಗೂ ಭಾವಚಿತ್ರದೊಂದಿಗೆ ನಿಮ್ಮ ಅನಿಸಿಕೆಗಳು 100 ಪದಗಳ ಮಿತಿಯಲ್ಲಿರಲಿ..... ತಾರಾನಾಥ್ ಕೈರಂಗಳ



ಎಸ್ ಎಸ್ ಎಲ್ ಸಿ ಪರೀಕ್ಷಾ ಪಲಿತಾಂಶ ಪ್ರಕಟವಾಗಿದೆ. ಉನ್ನತ ಸಾಧನೆ ಮಾಡಿರುವ ಮಕ್ಕಳ ಜಗಲಿಯ ಎಲ್ಲಾ ವಿದ್ಯಾರ್ಥಿಗಳಿಗೆ ಅಭಿನಂದನೆಗಳು. 

ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ರಾಜ್ಯಕ್ಕೆ ಪ್ರಥಮ ಸ್ಥಾನವನ್ನು ಪಡೆದ ಬಾಗಲಕೋಟೆಯ ಅಂಕಿತಾ ದಿನ ಬೆಳಗಾಗುವುದರೊಳಗೆ ಎಲ್ಲರ ಮನೆ ಮಾತಾದಳು. ಈ ಯಶಸ್ಸು ಗಳಿಸಿಕೊಳ್ಳುವುದಕ್ಕಾಗಿ ಇಷ್ಟು ವರ್ಷಗಳ ಕಾಲ ಪಟ್ಟ ಶ್ರಮ ಫಲ ಕೊಟ್ಟಿತು. ಬಾಲ್ಯದಿಂದಲೇ ಅಕ್ಷರಾಭ್ಯಾಸ, ಸುಂದರವಾಗಿ ಬರೆಯುವುದನ್ನು ರೂಢಿ ಗೊಳಿಸುವುದು, ಸ್ಪಷ್ಟವಾದ ಓದು, ಪುಸ್ತಕಗಳನ್ನು ಓದುವ ಹವ್ಯಾಸ, ಪ್ರತಿಯೊಂದು ಪಾಠವನ್ನು ಕೂಡ ನಿತ್ಯ ನಿರಂತರವಾಗಿ ಓದಿ ಮನನ ಮಾಡಿಕೊಳ್ಳುವುದು. ಸಂದೇಹಗಳಿದ್ದಾಗ ಶಿಕ್ಷಕರಲ್ಲಿ, ತಿಳಿದವರಲ್ಲಿ ಕೇಳಿ ತಿಳಿದು ಪರಿಹರಿಸಿಕೊಂಡು ಇನ್ನೂ ಗಟ್ಟಿಗೊಳಿಸುವುದು ಹೀಗೆ ನಿತ್ಯ ಪಠ್ಯ ವಿಷಯದಲ್ಲಿ ಮಗ್ನರಾಗಿ ಸಾಧನೆಯನ್ನು ಇಟ್ಟುಕೊಂಡು ಮುಂದುವರಿಯುವುದು ಯಶಸ್ಸಿಗೆ ದಾರಿಯನ್ನು ಮಾಡಿಕೊಡುತ್ತದೆ. ಇದೊಂದು ತಪಸ್ಸಿನ ಹಾಗೆ ಇಟ್ಟುಕೊಂಡ ಗುರಿಯನ್ನು ಛಲ ಬಿಡದೆ ಸಾಧಿಸುವುದು. ಆದರೆ ಸಾಧನೆಯ ಹಾದಿಯಲ್ಲಿ ಸ್ವತಹ ಮಾಡುವ ಕೆಲವಷ್ಟು ಎಡವಟ್ಟುಗಳಿಂದ ಈ ಸಾಧನೆಯಿಂದ ಹಿಂದುಳಿಯುವವರೂ ಇರಬಹುದು. ಹೀಗೆ ಕೆಲವೇ ಕೆಲವು ಅಂಕಗಳಲ್ಲಿ ಈ ಸಾಧನೆ ತಪ್ಪಿ ಕೈತಪ್ಪಿ ಹೋದ ಅನೇಕ ವಿದ್ಯಾರ್ಥಿಗಳಂತೂ ಪರಿತಪಿಸದೆ ಇರಲಾರರು. ಒಂದು ಚೂರು ಪ್ರಯತ್ನ ಮಾಡುತ್ತಿದ್ದರೆ, ಸ್ವಲ್ಪ ಆಲೋಚನೆ ಮಾಡಿ ಉತ್ತರ ಬರೆಯುತ್ತಿದ್ದರೆ... ಪೂರ್ಣ ಅಂಕ ಗಳಿಸಬಹುದಿತ್ತು ಎನ್ನುವುದೂ ಇದೆ. ಫೇಲಾದ ವಿದ್ಯಾರ್ಥಿಗಳಂತೂ ಗುರುಗಳು, ಹೆತ್ತವರು ಹೇಳಿದ ಮಾತು ಕೇಳುತ್ತಿದ್ದರೆ, ಕಲಿಯುತ್ತಿದ್ದರೆ ಈ ಪರೀಕ್ಷೆಯಲ್ಲಿ ಪಾಸಾಗಬಹುದಿತ್ತು ಎಂದು ಚಿಂತೆ ಮಾಡುವವರೂ ಇರಬಹುದು. ಏನೇ ಇರಲಿ ತಪ್ಪುಗಳನ್ನು ತಿದ್ದಿಕೊಂಡು ಮುಂದಿನ ಹಂತದಲ್ಲಿ ಸರಿಪಡಿಸಿಕೊಂಡು ಸಾಗುವವರೇ ಬುದ್ಧಿವಂತರೆನಿಸಿಕೊಳ್ಳುತ್ತಾರೆ.
        
ಕೈಯ ಐದು ಬೆರಳುಗಳಲ್ಲಿ ಯಾವ ರೀತಿ ವ್ಯತ್ಯಾಸಗಳಿವೆಯೋ ಅದೇ ರೀತಿ ಪ್ರತಿಯೊಬ್ಬ ವಿದ್ಯಾರ್ಥಿಯಲ್ಲಿ ಕೂಡ ವ್ಯತ್ಯಾಸಗಳಿರುವುದನ್ನು ಗಮನಿಸಿದ್ದೇವೆ. ಇಂತಹ ಸಮಸ್ಯೆಗಳು ಅನೇಕ ಕಡೆ ತಾವು ಕೂಡ ಕಂಡಿರಬಹುದು. ಒಂದು ಬೇಸಿಗೆ ಶಿಬಿರದ ಸಂಯೋಜಕರು ಸೇರಿದ ಶಿಬಿರಾರ್ಥಿಗಳಲ್ಲಿ ತಮ್ಮ ಬೇಸರವನ್ನು ಏರುದನಿಯಲ್ಲಿ ವ್ಯಕ್ತಪಡಿಸುತ್ತಿದ್ದರು. ಹಿಂದಿನ ದಿನ ಶಿಬಿರದಲ್ಲಿ ಮಾಡಿಟ್ಟ ಬಲೂನ್ ಗೊಂಬೆಗಳನ್ನು ಐದಾರು ವಿದ್ಯಾರ್ಥಿಗಳು ಕಾಲಲ್ಲಿ ತುಳಿದು ಹಾಳು ಮಾಡಿದ್ದರು. ತುಂಬಾ ತುಂಟತನದ ವಿದ್ಯಾರ್ಥಿಗಳಾಗಿದ್ದ ಇವರು ಇದ್ದ ವಸ್ತುಗಳನ್ನು ಹಾಳು ಮಾಡುವುದೆಂದರೆ ಅದೇನೋ ವಿಕೃತ ಖುಷಿ. ಬಾಲ್ಯದಿಂದಲೇ ಈ ತರಹದ ನಂಟಿಗೆ ಒಳಗಾಗಿ ಹವ್ಯಾಸವಾಗಿ ಬೆಳೆದು ಬಂದಿರಲೂ ಬಹುದು. ನೆಟ್ಟ ಗಿಡಗಳನ್ನು ಮುರಿಯುವುದು ಅಥವಾ ಕಿತ್ತು ಬಿಸಾಡುವುದು, ದಾರಿಯಲ್ಲಿ ಹೋಗುವಾಗ ಪಕ್ಷಿಗಳು ಅಥವಾ ಇನ್ಯಾವುದೇ ಜೀವಿಗಳನ್ನು ಕಂಡಾಗ ಅದಕ್ಕೆ ಕಲ್ಲು ಬಿಸಾಡಿ ಕೊಲ್ಲುವುದು. ಪುಸ್ತಕದಲ್ಲಿರುವ ಅಥವಾ ಗೋಡೆಯಲ್ಲಿ ಚಿತ್ರಗಳಿದ್ದಾಗ ಅದನ್ನು ವಿಕೃತಿಗೊಳಿಸುವುದು. ಸೈಕಲ್, ಸ್ಕೂಟರ್, ಬೈಕು ವಾಹನಗಳ ಚಕ್ರದ ಗಾಳಿಯನ್ನು ತೆಗೆಯುವುದು. ಹೀಗೆ ವಿಕೃತಿ ಮೆರೆಯುವ ವಿದ್ಯಾರ್ಥಿಗಳನ್ನು ಕಾಣುತ್ತೇವೆ. ಇಂತಹ ವಿದ್ಯಾರ್ಥಿಗಳು ಈ ಶಿಬಿರದ ಮೂಲಕ ಬದಲಾಗುವುದನ್ನು ಕಾಣುತ್ತೇವೆ. ಹೀಗೆ ಪ್ರತಿ ವರ್ಷ ನಡೆಯುವ ಶಿಬಿರದಲ್ಲಿ ಭಾಗವಹಿಸುವ ಮೂಲಕ ತಮ್ಮ ವರ್ತನೆಯಲ್ಲಿ ಕೂಡ ತುಂಬಾ ಬದಲಾವಣೆಯನ್ನು ತಂದು ಕೊಳ್ಳುವ ವಿದ್ಯಾರ್ಥಿಗಳನ್ನು ನಾವು ಕಂಡಿದ್ದೇವೆ.

ಮಕ್ಕಳ ಜಗಲಿಯಲ್ಲಿ ಮೂಡಿಬಂದ ಲೇಖಕಿ ಹಾಗೂ ಶಿಕ್ಷಕಿ ಚಿತ್ರಾಶ್ರೀ ಕೆ ಎಸ್ ಸಹ ಶಿಕ್ಷಕರು (ಕಲಾ) ಇವರು ಬರೆದಿರುವ ಪ್ರವಾಸ ಕಥನ : ಪೂರ್ವ ಕರಾವಳಿಯ ಅಪೂರ್ವ ಪ್ರವಾಸ..! - ಇದರ ಮೂರನೇ ಭಾಗ ಸೊಗಸಾಗಿ ಮೂಡಿಬಂದಿದೆ. ಅದೇ ರೀತಿ ನಿಮ್ಮೂರ ಶಾಲೆಯ ಸುದ್ದಿಯಲ್ಲಿ 7ನೇ ತರಗತಿಯ ವಿದ್ಯಾರ್ಥಿನಿ ವೈಷ್ಣವಿ ಕಡ್ಯ ಇವರು ಬರೆದಿರುವ 'ಮಾತೃ ಪೂಜನ ಮತ್ತು ಕೈ ತುತ್ತು' ತಮ್ಮ ಶಾಲೆಯ ಸಂಸ್ಕಾರ ಭರಿತ ಕಾರ್ಯಕ್ರಮದ ವರದಿ ಚೆನ್ನಾಗಿತ್ತು.

ಹಕ್ಕಿಕಥೆಯ ಕೊನೆಯ 150ನೇ ಸಂಚಿಕೆಯ ಹಕ್ಕಿಕಥೆಯಲ್ಲಿ ಮಲೆ ದಾಸಮಂಗಟ್ಟೆ ಹಕ್ಕಿಯ ಪರಿಚಯ ಮಾಡಿರುವ ಗೆಳೆಯ ಅರವಿಂದ್ ಕುಡ್ಲ ರವರಿಗೆ..... ಈ ಮಾತು....
      ದಿನಾಂಕ 14-11-2020 ರಂದು ಲೋಕಾರ್ಪಣೆಗೊಂಡ "ಮಕ್ಕಳ ಜಗಲಿಯ" ಹಿಂದೆ ಅರವಿಂದ್ ಕುಡ್ಲ ರವರ ಸಹಕಾರ ತುಂಬಾನೇ ಇದೆ. ಸ್ವರೂಪದ ಮೂಲಕ ಪರಿಚಿತರಾಗಿ ಸಮಾನ ಮನಸ್ಕರಾಗಿ ಬೆರೆತು ಆತ್ಮೀಯ ಗೆಳೆಯನಾಗಿ ಜೊತೆಯಾಗಿ ಬಹಳಷ್ಟು ವರ್ಷಗಳೇ ಕಳೆಯಿತು. ಯಾವುದೇ ವಿಚಾರಗಳಿರಲಿ ಮುಕ್ತ ಮನಸ್ಸಿನಿಂದ ಚರ್ಚಿಸಿ ಆಲೋಚನೆಗಳನ್ನು ವಿನಿಮಯ ಮಾಡಿಕೊಳ್ಳುತ್ತಾ ಬಂದವರು ನಾವು. ಬಹಳಷ್ಟು ಕಾರ್ಯಕ್ರಮಗಳಲ್ಲಿ ಜೊತೆಯಾಗಿ ಕೆಲಸ ಮಾಡಿಕೊಳ್ಳುತ್ತಾ ಸೃಜನಶೀಲ ವ್ಯಕ್ತಿಯಾಗಿ ಗುರುತಿಸಿಕೊಂಡವರು ಇವರು. ಮೈಮ್, ರಂಗಭೂಮಿ, ಚಿತ್ರಕಲೆ, ಫೋಟೋಗ್ರಫಿ, ಚಾರಣ, ಮಕ್ಕಳ ಶಿಬಿರಗಳು ಹೀಗೆ ಎಲ್ಲವುಗಳಲ್ಲೂ ತೊಡಗಿಸಿಕೊಂಡು ಸೈ ಎನಿಸಿಕೊಂಡವರು. ಮಕ್ಕಳ ಜಗಲಿಯಲ್ಲಿ ಹಕ್ಕಿಗಳ ಬಗ್ಗೆ ಪರಿಚಯದ ಸಂಚಿಕೆಯನ್ನು ಮಾಡೋಣ ಎಂದಾಗ ಕೂಡಲೇ ಒಪ್ಪಿಕೊಂಡು ಮುಂದುವರಿದವರು ಇವರು.
     30-06-2021 ರಿಂದ 08-05-2024 ರ ವರೆಗೆ ನಿರಂತರವಾಗಿ 150 ಸಂಚಿಕೆಗಳನ್ನು ಮಕ್ಕಳ ಜಗಲಿಯ ಎಲ್ಲಾ ಓದುಗರಿಗೆ ನೀಡಿದ್ದಾರೆ. ಪರಿಸರದಲ್ಲಿ ಸಿಗುವ ಹಕ್ಕಿ, ವಲಸೆ ಹಕ್ಕಿಗಳು, ಕಡಲ ಹಕ್ಕಿಗಳು, ಹಿಮಾಲಯದ ಹಕ್ಕಿಗಳು ಹೀಗೆ ವೈವಿಧ್ಯ ವಿಭಾಗದಲ್ಲಿ ಸಂಚಿಕೆಗಳನ್ನು ನೀಡಿದ್ದಾರೆ. ತಮ್ಮ ಅಮೂಲ್ಯ ಸಮಯವನ್ನು ನೀಡಿ ಪ್ರಕಟಿಸಿದ ಅತ್ಯಪೂರ್ವವಾದ 150 ಹಕ್ಕಿಗಳ ಪರಿಚಯವು ಮಕ್ಕಳ ಜಗಲಿಯಲ್ಲಿ ದಾಖಲೆಯಾಗಿ, ಎಲ್ಲರ ಮನಸ್ಸಿನಲ್ಲಿ ಸಾಕ್ಷಿಯಾಗಿ ಉಳಿಯಲಿದೆ. ತನ್ನ ಆಸಕ್ತಿಯ ಕ್ಷೇತ್ರವಾದ ಹಕ್ಕಿಗಳ ಅಧ್ಯಯನವನ್ನು ಸೊಗಸಾದ ಬರಹದೊಂದಿಗೆ ಪ್ರತಿವಾರ ಪ್ರಸ್ತುತಪಡಿಸುತ್ತಿದ್ದುದು ಮಕ್ಕಳ ಜಗಲಿಯ ವಿಶೇಷ ಆಕರ್ಷಣೆಯಾಗಿತ್ತು. ಹೊಸ ಹಕ್ಕಿಯ ಕಾತುರದೊಂದಿಗೆ ಕಾಯುತ್ತಿದ್ದ ಎಲ್ಲರನ್ನು ಸ್ವಾಗತಿಸಿ ವಾರಕ್ಕೊಂದು ಹಕ್ಕಿಯಂತೆ ಪಕ್ಷಿ ಲೋಕದ ಆಸಕ್ತಿಯನ್ನು ಎಲ್ಲರಲ್ಲೂ ಹುಟ್ಟಿಸಿದ ಅರವಿಂದ ಕುಡ್ಲ ರವರಿಗೆ ನಿಮ್ಮೆಲ್ಲರ ಪರವಾಗಿ ಪ್ರೀತಿಪೂರ್ವಕವಾದ ಧನ್ಯವಾದಗಳು....
    ಅಲ್ಪವಿರಾಮದ ಬಿಡುವಿನೊಂದಿಗೆ ಹೊಸ ವಿನ್ಯಾಸದ ಹೊಸ ಬರಹದೊಂದಿಗೆ ನಮ್ಮ ಜೊತೆ ಮತ್ತೆ ಸೇರಲಿದ್ದಾರೆ ಎನ್ನುವ ಆಶಯ ಇದೆ... ನಮಸ್ಕಾರ.


ಕಳೆದ ಸಂಚಿಕೆಯ ಜಗಲಿಕಟ್ಟೆ - 50 ಅಂಕಣದಲ್ಲಿ ನಿವೃತ್ತ ವಿಜ್ಞಾನ ಶಿಕ್ಷಕರಾದ ಶ್ರೀರಾಮ ಮೂರ್ತಿ... ಇವರು ತಮ್ಮ ಅನಿಸಿಕೆಯನ್ನು ಹಂಚಿಕೊಂಡಿದ್ದರು. ಈ ವಾರದ ಜಗಲಿ ಕಟ್ಟೆಯ ಓದುಗರ ಮಾತುಕತೆಯನ್ನು ಈಗ ಓದೋಣ....


ನಮಸ್ತೆ ಸರ್ .....
 ಎಷ್ಟೊಂದು ಚೆಂದದ ಹಕ್ಕಿಯ ಬಗ್ಗೆ ಬರೆದಿದ್ದಾರೆ ಅಮ್ಮಾ...! ಹಕ್ಕಿ ಕಥೆ ಸಂಚಿಕೆಯಲ್ಲಿ ಅರವಿಂದ ಸರ್...... ಎಂಬ ಶಿಶಿರನ ಕುತೂಹಲ ಭರಿತ ಆಸಕ್ತಿಯಿಂದ ಹಕ್ಕಿ ಕಥೆ ಸಂಚಿಕೆ ಓದಲು ಆರಂಭಿಸಿದ್ದು..... ಕಳೆದ ವಾರ 150ನೇ ಸಂಚಿಕೆ ಓದಿದೆ. ನಮ್ಮ ಪರಿಸರದಲ್ಲಿ ದಿನನಿತ್ಯ ಕಾಣುವ ಹಾಗು ಅಪರೂಪದ ಹಕ್ಕಿಗಳ ಬಗ್ಗೆ ವಿಸ್ತೃತವಾಗಿ ಬರೆಯುವ ಅವರ ಶೈಲಿ ಆಕರ್ಷಣೀಯ..... ಪ್ರತೀ ವಾರವು ಕಾತರದ ಕಾಯುವಿಕೆ ಎಲ್ಲವೂ ಸುಂದರ ನೆನಪು. ನಾಜೂಕಾದ ಗೂಡು ಹೆಣೆಯುವ ನೇಕಾರ ಹಕ್ಕಿ... ಅದರಲ್ಲೂ ಹಿಮಾಲಯದ ಚಾರಣ ಸರಣಿಯಲ್ಲಿ ಪರಿಚಯಿಸಿದ ಸುಂದರ ಹಕ್ಕಿಗಳು.... ಪರಿಸರವನ್ನು ಪ್ರೀತಿಸುವ ನಮಗೆ ಹಕ್ಕಿಗಳ ಬಗ್ಗೆಯೂ ಆಸಕ್ತಿ ಹೆಚ್ಚಿಸಿಕೊಳ್ಳಲು ಕಾರಣವಾಯಿತು. ಅರವಿಂದ ಕುಡ್ಲ ಸರ್ ನಿಮಗೆ ನಮ್ಮ ಅಂತರಾಳದ ನಮನಗಳು. ವೖವಿಧ್ಯಮಯವಾದ ಸಂಚಿಕೆಗಳ ಓದುವ ಖುಷಿಯನ್ನು ನೀಡುತ್ತಿರುವ ಮಕ್ಕಳ ಜಗಲಿಗೆ ಧನ್ಯವಾದಗಳು.
................................ ಕವಿತಾ ಶ್ರೀನಿವಾಸ ದೈಪಲ 
'ಚೈತನ್ಯ ' ನೆಲ್ಯಡ್ಕ, ಅಂತರ, 
ನರಿಕೊಂಬು ಅಂಚೆ ಮತ್ತು ಗ್ರಾಮ  
ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
****************************************


ಎಲ್ಲರಿಗೂ ನಮಸ್ಕಾರಗಳು,
    ನಿರಂತರ ಅಭ್ಯಾಸದಿಂದ ಏನನ್ನು ಬೇಕಾದರೂ ಸಾಧಿಸಬಹುದು ಎಂಬುದನ್ನು ತೇನ್ ಸಿಂಗ್ ರವರ ಕಥೆಯ ಮೂಲಕ ಶಿಕ್ಷಣಾಧಿಕಾರಿಯವರಾದ ಜ್ಞಾನೇಶ್ ಸರ್ ರವರು ಬಹಳ ಸುಂದರವಾಗಿ ವಿವರಿಸಿದ್ದಾರೆ.
     ಇಂದಿನ ಆಧುನಿಕ ಯುಗದಲ್ಲಿ ಬೆಳೆದ ಮಕ್ಕಳು ತಮ್ಮ ತಂದೆ ತಾಯಿಯವರನ್ನು ನೋಡಿಕ್ಕೊಳ್ಳುವ ಪರಿ ಬಹಳಷ್ಟು ಖೇದಕರ. ಪ್ರಸ್ತುತ ಸನ್ನಿವೇಶಕ್ಕೆ ಕೈಗನ್ನಡಿಯಂತಿದೆ ರಮೇಶ್ ಸರ್ ರವರ ಲೇಖನ.
     ಆಹಾರ ಕೆಡಲು ಸೂಕ್ಷ್ಮಜೀವಿಗಳು ಕಾರಣವಾದರೂ ಅದಕ್ಕಿಂತ ಮುಖ್ಯವಾಗಿ ಅವುಗಳಲ್ಲಿರುವ ಕಿಣ್ವಗಳು ಆಹಾರವನ್ನು ಕೆಡಿಸಲು ಹೇಗೆ ಕಾರಣವಾಗುತ್ತವೆ ಎನ್ನುವುದರ ಜೊತೆಗೆ ಜೀವಿಗಳ ದೇಹದಲ್ಲಿರುವ ಕಿಣ್ವಗಳ ಮಹತ್ವವನ್ನು ಸುಂದರವಾಗಿ ದಿವಾಕರ ಸರ್ ರವರು ತಮ್ಮ ವೈಜ್ಞಾನಿಕ ಸಂಚಿಕೆಯಲ್ಲಿ ತಿಳಿಸಿದ್ದಾರೆ.
    ಮಲೆ ದಾಸ ಮಂಗಟ್ಟೆ ಎನ್ನುವ ಸುಂದರ ಹಕ್ಕಿಯ ಸೊಗಸಾದ ಪರಿಚಯದೊಂದಿಗೆ ಹಕ್ಕಿ ಕಥೆ ಎನ್ನುವ ವಿಶಿಷ್ಟ ಸಂಚಿಕೆ 150ಕ್ಕೆ ತಲುಪಿದ್ದು ಸಂತೋಷವಾದರೂ ಮುಂದಕ್ಕೆ ಈ ಸಂಚಿಕೆ ಇಲ್ಲ ಎನ್ನುವುದು ಬೇಸರದ ವಿಚಾರ. ಅರವಿಂದ ಸರ್ ರವರು ಖಂಡಿತವಾಗಿಯೂ ಹೊಸ ವಿಷಯದೊಂದಿಗೆ ಮತ್ತೆ ನಮ್ಮೊಂದಿಗೆ ಇರುವರೆಂಬ ಸದಾಶಯಗಳೊಂದಿಗೆ ಅವರಿಗೆ ನನ್ನ ಪ್ರೀತಿಪೂರ್ವಕ ನಮನಗಳು.
      ವಿಜಯಾ ಮೇಡಂ ರವರಿಂದ ಜೈವಿಕ ಡೀಸೆಲ್ ಉತ್ಪತ್ತಿಗೆ ಸಹಕಾರಿ ಎನ್ನಲಾದ ಜತ್ರೋಪಾ ಗಿಡದ ಪರಿಚಯ ಸೊಗಸಾಗಿತ್ತು. ನಾನು ಶಾಲೆಗೆ ಹೋಗುತ್ತಿರುವ ಸಮಯದಲ್ಲಿ ನಮ್ಮ ಮನೆಯ ಹತ್ತಿರವೂ ಬೇಲಿ ಗಿಡವಾಗಿ ಇದ್ದ ಸಸ್ಯ ಈಗ ಇಲ್ಲ.
     ಜಗಲಿಯಲ್ಲಿ ಹಲವು ದಿನಗಳ ನಂತರ ಚಿತ್ರಾಶ್ರೀಯವರ ಪ್ರವಾಸ ಕಥನದ ಸರಣಿಯನ್ನು ಕಂಡಂತಾಯಿತು. ವಿಶಾಖಪಟ್ಟಣಂನ ಜೀವ ವೈವಿಧ್ಯತಾ ಉದ್ಯಾನವನದ ವಿಶೇಷ ಸಸ್ಯ ತಜ್ಞರು ಬೆಳೆಸಿರುವ ಹಲವು ಗಿಡಗಳ ಪರಿಚಯ ಸಿಕ್ಕ ಹಾಗಾಯಿತು.
     ಅಪ್ಪನ ಕುರಿತಾದ ಮನೋಜ್ಞ ಚಿತ್ರಣ ಯಾಕೂಬ್ ಸರ್ ರವರಿಂದ. ವಯಸ್ಸಾದ ಅಪ್ಪಂದಿರನ್ನು ಇಂದಿನ ಮಕ್ಕಳು ನಡೆಸಿಕ್ಕೊಳ್ಳುವ ರೀತಿ ನಿಜಕ್ಕೂ ಆಘಾತಕಾರಿ. ಮನಮಿಡಿಯುವ ಲೇಖನ.
     ವಾಣಿಯಕ್ಕನವರಿಂದ ಮಕ್ಕಳಿಗಾಗಿ ಕುತೂಹಲಕಾರಿ ಪುಸ್ತಕ ಅನೆಗೊಂದು ದಾರಿ ಪುಸ್ತಕದ ಪರಿಚಯ ಸೊಗಸಾಗಿತ್ತು.
     ನಮ್ಮೂರ ಶಾಲೆ ಸುದ್ದಿಯಲ್ಲಿ ನಮ್ಮ ಶಾಲೆಯಲ್ಲಿ ಯಕ್ಷಗಾನ ತಂಡ ರಚಿಸಿ ಯಶಸ್ವೀ ಪ್ರದರ್ಶನ ನೀಡಿದ ಕುರಿತಾದ ಅನುಭವವನ್ನು ತುಂಬಾ ಚೆನ್ನಾಗಿ ಹಂಚಿಕೊಂಡ್ಡಿದ್ದೀರಿ ಸರ್. ನಮ್ಮ ಶಾಲೆಯಲ್ಲಿ ಇಂತಹ ಬೇರೆ ಬೇರೆ ಕಾರ್ಯಕ್ರಮಗಳನ್ನು ತಾವು ಅನುಷ್ಠಾನ ಗೊಳಿಸಿದ್ದೀರಿ. ಧನ್ಯವಾದಗಳು ಸರ್.
ಇದೇ ಸಂಚಿಕೆಯಲ್ಲಿ ಮಾತೃ ಪೂಜನ ಎನ್ನುವ ವಿಶಿಷ್ಠ ಕಾರ್ಯಕ್ರಮದ ಕುರಿತಾದ ಲೇಖನ ವೈಷ್ಣವಿ ಕಡ್ಯ ಇವರಿಂದ ಚೆನ್ನಾಗಿ ಮೂಡಿಬಂದಿದೆ.
     ತನ್ನ ಮಿತ್ರನೊಂದಿಗೆ ಜೇನು ಹುಡುಕಾಟ ಜೊತೆಯಲ್ಲಿ ಓತಿಕ್ಯಾತ ಜೇನುನೊಣಗಳನ್ನು ಭಕ್ಷಿಸುವ ಕುರಿತಾದ ಸುಂದರ ಅನುಭವದ ಲೇಖನ ನಾಗೇಂದ್ರ ಸರ್ ರವರಿಂದ ಚೆನ್ನಾಗಿತ್ತು.
     ರಮೇಶ್ ಉಪ್ಪುಂದರವರ ಪದದಂಗಳ ಸಂಚಿಕೆ ಸೊಗಸಾಗಿ ಮೂಡಿಬಂದಿದೆ.
     ಈ ವಾರ ಹಲವು ಲೇಖನಗಳ ಮೂಲಕ ಮುದ ನೀಡಿದ ಜಗಲಿಯ ಎಲ್ಲರಿಗೂ ನನ್ನ ಮನದಾಳದ ಕೃತಜ್ಞತೆಗಳು.
....................................... ಶ್ರೀರಾಮ ಮೂರ್ತಿ
ನಿವೃತ್ತ ವಿಜ್ಞಾನ ಶಿಕ್ಷಕರು
ಬಾಯಾರು, ಕಾಸರಗೋಡು ಜಿಲ್ಲೆ
Mob: +91 94819 74949
*******************************************


ಓದುಗರ ಮಾತುಕತೆಯಲ್ಲಿ..... ಅನಿಸಿಕೆ ಅಭಿಪ್ರಾಯಗಳನ್ನು ಹಂಚಿಕೊಂಡು, ಬರೆಯುವ ಪ್ರತಿಯೊಬ್ಬರಿಗೂ ಪ್ರೇರಣೆಯಾಗುತ್ತಿರುವ ಮಕ್ಕಳ ಜಗಲಿ ಕುಟುಂಬದ ನಿವೃತ್ತ ವಿಜ್ಞಾನ ಶಿಕ್ಷಕರಾದ ಶ್ರೀರಾಮ ಮೂರ್ತಿ, ಕವಿತಾ ಶ್ರೀನಿವಾಸ ದೈಪಲ .. ಇವರಿಗೆ ಧನ್ಯವಾದಗಳು. 
       ಮಕ್ಕಳ ಜಗಲಿಗೆ ಸಂಬಂಧಿಸಿದ ಯಾವುದೇ ವಿಷಯದ ಕುರಿತಾಗಿ ನಿಮ್ಮ ಅನಿಸಿಕೆಗಳು ಹಾಗೂ ಸಲಹೆಗಳನ್ನು ಸ್ವೀಕರಿಸುತ್ತೇವೆ. ವಿದ್ಯಾರ್ಥಿಗಳು, ಪೋಷಕರು, ಶಿಕ್ಷಕರು, ಹಿತೈಷಿಗಳು ನಮಗೆ ಬರೆದು ಕಳುಹಿಸಿ.... ಹೆಸರು ವಿಳಾಸ ಹಾಗೂ ಭಾವಚಿತ್ರದೊಂದಿಗೆ ನಿಮ್ಮ ಅನಿಸಿಕೆಗಳು 100 ಪದಗಳ ಮಿತಿಯಲ್ಲಿರಲಿ.....
   ಮುಂದಿನ ವಾರದ ಜಗಲಿ ಕಟ್ಟೆಯಲ್ಲಿ ಮತ್ತೆ ಸಿಗೋಣ.... ನಮಸ್ಕಾರ
................................. ತಾರಾನಾಥ್ ಕೈರಂಗಳ
ಮಕ್ಕಳ ಜಗಲಿ
ಮಕ್ಕಳ ಡಿಜಿಟಲ್ ಆನ್ಲೈನ್ ಪತ್ರಿಕೆ
ದಕ್ಷಿಣ ಕನ್ನಡ ಜಿಲ್ಲೆ. 
Mob : 9844820979
******************************************


Ads on article

Advertise in articles 1

advertising articles 2

Advertise under the article