-->
ಸ್ಫೂರ್ತಿಯ ಮಾತುಗಳು : ಸಂಚಿಕೆ - 115

ಸ್ಫೂರ್ತಿಯ ಮಾತುಗಳು : ಸಂಚಿಕೆ - 115

ಸ್ಫೂರ್ತಿಯ ಮಾತುಗಳು : ಸಂಚಿಕೆ - 115
ಲೇಖಕರು : ರಮೇಶ ಎಂ. ಬಾಯಾರು 
ರಾಜ್ಯಪ್ರಶಸ್ತಿ ಪುರಸ್ಕೃತ ನಿವೃತ್ತ ಅಧ್ಯಾಪಕರು
ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
ಮೊಬೈಲ್ ಸಂಖ್ಯೆ : +91 94486 26093
rameshbayar@gmail.com 


2023-24ನೇ ಸಾಲಿನ ಎಸ್ ಎಸ್ ಎಲ್ ಸಿ ಸಾರ್ವತ್ರಿಕ ಪರೀಕ್ಷೆಯ ಫಲಿತಾಂಶ ಘೋಷಣೆಯಾಗಿದೆ. ಈ ಬಾರಿಯ ಪರೀಕ್ಷೆಗಳು ಬಹಳ ಪಾರದರ್ಶಕವಾಗಿ ಜರಗುವಂತೆ ಕರ್ನಾಟಕ ಶಾಲಾ ಪರೀಕ್ಷೆ ಹಾಗೂ ಮೌಲ್ಯನಿರ್ಣಯ ಮಂಡಳಿಯು ವ್ಯಾಪಕ ಭದ್ರತೆ, ಮತ್ತು ಕಟ್ಟು ನಿಟ್ಟಿನ ಕ್ರಮಗಳನ್ನು ಅನುಷ್ಠಾನಗೊಳಿಸಿದೆ. ಪರೀಕ್ಷಾ ಕೇಂದ್ರಗಳನ್ನು ವೆಬ್ ಕಾಸ್ಟ್ ಗೊಳಪಡಿಸಿ ಕೇಂದ್ರೀಕೃತ ವ್ಯವಸ್ಥೆಯ ಮೂಲಕ ಪರೀಕ್ಷಾ ಅವ್ಯವಹಾರಗಳು ಮತ್ತು ನಕಲು ತಡೆಗೆ ಕ್ರಮ ಜರಗಿಸಲಾಗಿದೆ ಎಂದು ಓದಿದ್ದೆ ಮತ್ತು ಆಲಿಸಿದ್ದೆ. ಫಲಿತಾಂಶಗಳು ಪ್ರಕಟವಾದಾಗ ಶೇಕಡಾ ಉತ್ತೀರ್ಣತೆ ಶೇಕಡಾ ಹತ್ತರಷ್ಟು ಇಳಿಕೆಯಾಗಿರುವುದು ಕಂಡು ಬಂತು. ಶೇಕಡಾ ಇಪ್ಪತ್ತು ಅಂಕಗಳನ್ನು ಸೇರಿಸಿಯೂ ಫಲಿತಾಂಶದಲ್ಲಿ ಇಳಿಕೆಯೆಂದರೆ ನೈಜ ಫಲಿತಾಂಶದ ಚಿತ್ರಣ ಹೇಗಿರಬಹುದು ಎಂಬ ಸಂದೇಹ. ಶೈಕ್ಷಣಿಕವಾಗಿ ಸಾಧನೆ ಮಾಡುವ ಪ್ರದೇಶಗಳಿಗೆ ಫಲಿತಾಂಶವು ಸ್ವಲ್ಪ ಮಟ್ಟಿನ ನಿರಾಳತೆಯನ್ನೂ ತಂದೊದಗಿಸಿದಂತೆ ಕಾಣಿಸಿತು. ಪರೀಕ್ಷಾ ಮಂಡಳಿಯ ಮಹೋನ್ನತ ಹೆಜ್ಜೆಯಿಂದಾಗಿ ಸಹಸ್ರಾರು ಶಿಕ್ಷಕರು ಸಮಾಧಾನದ ನಿಟ್ಟುಸಿರು ಬಿಡಲು ಸಾಧ್ಯವಾಯಿತು. ಇಂತಹ ಸುಧಾರಿತ ಪ್ರಶಂಸನೀಯವಾದ ಹೆಜ್ಜೆಗಳು ನಿರಂತರ ಅಪೇಕ್ಷಣೀಯ.

ಅವ್ಯವಹಾರಗಳಿಗೆ ಅರೆಯಲಾದ ಮದ್ದಿನ ಪರಿಣಾಮ ಫಲಿತಾಂಶದಲ್ಲಿ ಗೋಚರಿಸಿತು. ಉಡುಪಿ, ದಕ್ಷಿಣ ಕನ್ನಡ ಮತ್ತು ಶಿವಮೊಗ್ಗ ಜಿಲ್ಲೆಗಳು ಫಲಿತಾಂಶದ ಪ್ರಮಾಣದಲ್ಲಿ ಮೊದಲ ಮೂರು ಸ್ಥಾನಗಳನ್ನು ಪಡೆದರೆ ಹೆಚ್ಚಾಗಿ ಮುಂದಿರುತ್ತಿದ್ದ ಬೀದರ್ ಮತ್ತು ಕಲಬುರ್ಗಿ ಜಿಲ್ಲೆಗಳು ಹಿಂದುಳಿದುದು ವಿಶೇಷ. ಫಲಿತಾಂಶದಲ್ಲಿ ಬಾಲಕರ ಕೊಡುಗೆ 65.9% ಮತ್ತು ಬಾಲಕಿಯರ ಕೊಡುಗೆ 81.11% ಎಂಬುದು ಬಾಲಕರ ಸಿದ್ಧತೆಯು ಕಳಪೆಯಾಗುತ್ತಿರುರುವುದನ್ನು ಬಿಂಬಿಸುತ್ತದೆ. ಬಾಲಕರಿಗೂ ಸಾಧನೆ ಮಾಡುವ ತಾಕತ್ತಿದೆ. ಆದರೂ ಅವರು ಮೈ ಕೊಡವಿ “ಜಡತ್ವ” ದಿಂದ ಹೊರ ಬರುತ್ತಿಲ್ಲವಲ್ಲ...! 

ಅನುದಾನರಹಿತ ವಿದ್ಯಾ ಸಂಸ್ಥೆಗಳಿಗೆ ಸಾಮಾನ್ಯವಾಗಿ ಉತ್ತಮ ಶೈಕ್ಷಣಿಕ ಹಿನ್ನೆಲೆಗಳಿರುವ, ಕಲಿಕಾಸಕ್ತರು ದಾಖಲಾಗುತ್ತಾರೆ. ಒಟ್ಟಾರೆಯಾಗಿ ರಾಜ್ಯದ ಅನುದಾನರಹಿತ ವಿದ್ಯಾ ಸಂಸ್ಥೆಗಳ ಫಲಿತಾಂಶವು 86.46 % ಇದೆಯಾದರೂ 62 ಅನುದಾನ ರಹಿತ ವಿದ್ಯಾ ಸಂಸ್ಥೆಗಳ ಸಾಧನೆ ಶೂನ್ಯ ಎಂಬುದು ವಿಮರ್ಶನೀಯ. ಮೂರು ಸರಕಾರಿ ಪ್ರೌಢ ಶಾಲೆಗಳು ಮಾತ್ರವೇ ಶೂನ್ಯ ಸಂಪಾದನೆ ಮಾಡಿದ್ದರೆ, 13 ಅನುದಾನಿತ ಪ್ರೌಢ ಶಾಲೆಗಳು ಶೂನ್ಯದತ್ತ ಸಾಗಿವೆ. ಅನುದಾನಿತ ಮತ್ತು ಸರಕಾರಿ ಪ್ರೌಢ ಶಾಲೆಗಳಲ್ಲಿ ಬೋಧಕರ ಸಂಖ್ಯೆ ಇಳಿಮುಖವಾಗಿರುವುದೂ ಈ ಶೂನ್ಯ ಸಂಪಾದನೆಗೆ ಕಾರಣವಾಗಿರಬಹುದೇ...? ಎಂಬುದನ್ನೂ ಕಂಡುಕೊಳ್ಳಬೇಕಾಗಿದೆ. ಪೂರಕ ಪರೀಕ್ಷೆಗಳ ಸಂಖ್ಯೆಯನ್ನು ಹೆಚ್ಚಿಸಿರುವುದರಿಂದಾಗಿ ರಾಜ್ಯದಲ್ಲಿ ಫಲಿತಾಂಶ ಇಳಿಕೆಯಾಗಿರಬಹುದೇ..? 

ಈ ಬಾರಿಯ ಫಲಿತಾಂಶದಲ್ಲಿ ಬಹಳ ಅಚ್ಚರಿ ಮೂಡಿಸುವ, ಅದೇ ರೀತಿಯಲ್ಲಿ ಅತ್ಯಂತ ಪ್ರೇರಣಾದಾಯಕ ಸಂಗತಿಯನ್ನು ನಾನು ಗುರುತಿಸಿರುವೆ. ಅದನ್ನು ಹಂಚಿಕೊಳ್ಳದೇ ಇದ್ದರೆ ಹೇಗೆ? ಇಡೀ ರಾಜ್ಯದಲ್ಲಿ ಅಂಕಿತಾ ಬಸಪ್ಪ ಕೊನ್ನೂರು ಎಂಬ ಏಕೈಕ ವಿದ್ಯಾರ್ಥಿನಿ 625ರಲ್ಲಿ 625 ಅಂಕ ಪಡೆದು ಪೂರ್ಣಾಂಕಿತಳಾಗಿ ರಾಜ್ಯಕ್ಕೆ ಮೊದಲಿಗಳಾಗಿದ್ದಾಳೆ. ಐ ಎ ಎಸ್ ಓದುವ ಗುರಿಯೊಂದಿಗೆ ಮುನ್ನುಗ್ಗುತ್ತಿರುವ ಈಕೆ ದೇಶದ ವಿದ್ಯಾರ್ಥಿಗಳೆಲ್ಲರಿಗೂ ಅನುಕರಣೀಯಳು. ಅವಳಿಗೆ ನಮ್ಮ ಅಭಿನಂದನೆಗಳು. ಬಾಗಲಕೋಟೆ ಜಿಲ್ಲೆಯ ಮುಧೋಳದ ಮೊರಾರ್ಜಿ ದೇಸಾಯಿ ಶಾಲೆಯಲ್ಲಿ ಈಕೆ ಓದಿದಳು. ಇದು ಸಮಾಜ ಕಲ್ಯಾಣ ಇಲಾಖೆ ನಡೆಸುವ ಸರಕಾರಿ ಶಾಲೆಯೆಂಬುದು ಒಂದು ವಿಶೇಷ. ಇಲ್ಲಿ ಓದುವವರೆಲ್ಲರೂ ಬಡವರೆಂಬುದು ಮುಕ್ತ ಸತ್ಯ. ಆಕೆ ಹೇಳುವಂತೆ ಓದುವ ಶಾಲೆ ಚಿಕ್ಕದು, ದೊಡ್ಡದು ಎಂಬುದು ಮುಖ್ಯವಲ್ಲ. ಸಾಧನೆಗೆ ಗುರಿ ದೊಡ್ಡದಿರಬೇಕೆಂಬುದೇ ಮುಖ್ಯ. ಮನಸ್ಸಿದ್ದರೆ ತೊಡಕೆಲ್ಲಿ? ಅವಿರತ ಪ್ರಯತ್ನ, ಸಾಧಿಸುವ ಛಲವಿದ್ದಲ್ಲಿ ಬಡತನವಿದ್ದರೂ ವಿದ್ಯಾರ್ಥಿನಿಲಯದಲ್ಲಿದ್ದರೂ ಸಾಧನೆ ಮಾಡಲು ಸಾಧ್ಯ ಎಂಬ ಸಂದೇಶವನ್ನು ಈ ಪುಟ್ಟಿ ನಮಗೆ ನೀಡಿದ್ದಾಳೆ. ವಿದ್ಯಾರ್ಥಿನಿಲಯದಲ್ಲಿ ಮೊಬೈಲ್ ಸಾಂಗತ್ಯವಿರದೇ ಇರುವುದೂ ಅವಳ ಸಾಧನೆಗೆ ಕೊಡುಗೆ ನೀಡಿರುತ್ತದೆ.

625ರಲ್ಲಿ 624 ಅಂಕ ಪಡೆದ ಏಳು ಸಾಧಕರು, ಇವರಲ್ಲಿ ದ.ಕ ಜಿಲ್ಲೆಯ ಚಿನ್ಮಯ್ ಕೂಡಾ ಸೇರಿದ್ದಾನೆ. 623 ಅಂಕ ಪಡೆದ ಹದಿನಾಲ್ಕು, 622 ಅಂಕ ಪಡೆದ ಇಪ್ಪತ್ತೊಂದು, 621 ಅಂಕ ಪಡೆದ ನಲುವತ್ತನಾಲ್ಕು, 620 ಅಂಕ ಪಡೆದ ಅರುವತ್ತ ನಾಲ್ಕು ಸಾಧಕರ ಸಾಧನೆಯೂ ಮಹಾನ್. ಇವರು ಪರೀಕ್ಷೆಯನ್ನು ನಿರ್ಭಯವಾಗಿ, ಅತ್ಯಂತ ಲೀಲಾ ಜಾಲವಾಗಿ ಆಟದೋಪಾದಿಯಲ್ಲಿ ಎದುರಿಸಿದ್ದಾರೆ. ಇವರೆಲ್ಲರಿಗೂ ನಮ್ಮ ನಿಮ್ಮ ಅಭಿನಂದನೆಯಿರಲಿ. ವಿದ್ಯಾರ್ಥಿಗಳ ಸ್ವಪ್ರಯತ್ನ, ಹೆತ್ತವರ ಪ್ರೋತ್ಸಾಹ, ಶಿಕ್ಷಕರ ಸಮಚಿತ್ತದ ಮಾರ್ಗದರ್ಶನ ಅವರೆಲ್ಲರಿಗೆ ವರವಾಗಿದೆ. ಅನುತ್ತೀರ್ಣರಾದವರಿಗೆ ಪರೀಕ್ಷೆ-2 ಸಂತಸದ ಫಲಿತಾಂಶವನ್ನು ಒದಗಿಸಲಿ.
........ರಮೇಶ ಎಂ. ಬಾಯಾರು ಎಂ.ಎ, ಬಿಎಡ್
ರಾಜ್ಯಪ್ರಶಸ್ತಿ ಪುರಸ್ಕೃತ ನಿವೃತ್ತ ಅಧ್ಯಾಪಕರು
“ಸ್ಕಂದ” ಕುಳ ಗ್ರಾಮ
ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
ಮೊಬೈಲ್ ಸಂಖ್ಯೆ : +91 94486 26093
rameshbayar@gmail.com 
******************************************** 


Ads on article

Advertise in articles 1

advertising articles 2

Advertise under the article