ನಿಷ್ಪಾಪಿ ಸಸ್ಯಗಳು : ಸಂಚಿಕೆ - 50
Wednesday, May 15, 2024
Edit
ನಿಷ್ಪಾಪಿ ಸಸ್ಯಗಳು : ಸಂಚಿಕೆ - 50
ಲೇಖಕರು: ವಿಜಯಾ ಬಿ ಶೆಟ್ಟಿ ಸಾಲೆತ್ತೂರು
ಸಹ ಶಿಕ್ಷಕಿ, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ
ಬಾಳೆಪುಣಿ (ಇರಾ), ಬಂಟ್ವಾಳ ತಾಲೂಕು
ದಕ್ಷಿಣ ಕನ್ನಡ ಜಿಲ್ಲೆ
ಹೇಗಿದ್ದೀರಿ...? ರಜಾ ಕಾಲವನ್ನು ಆನಂದಿಸುತ್ತಿರುವಿರಲ್ಲವೇ? ಮಳೆರಾಯನೂ ಈ ವಾರ ಅಲ್ಲಿ ಇಲ್ಲಿ ಸುತ್ತಾಡುತ್ತಾ ಬೊಗಸೆ ತುಂಬಾ ತಂಪೆರಚುತ್ತಿದ್ದಾನೆ.
ಮನೆಯಂಗಳದಲ್ಲಿ ನೀರಿರದೆ ಸೊರಗಿದ್ದ ಸದಾಪುಷ್ಪದಂತಹ ಹೂಗಿಡಗಳು ತವಕದಿಂದ ಚಿಗುರುತ್ತಿವೆ. ಸದಾ ಪುಷ್ಪ ಸದಾ ಎಲ್ಲರ ಮನೆಯಂಗಳದ ಕೂಸು! ಸದಾಪುಷ್ಪದ ಅಧರಗಳ ನಗುವಿರದೆ ಕೈತೋಟ ಪೂರ್ಣವಾಗದು. ಸರ್ವ ಋತುಗಳಲ್ಲೂ ಹೂಗಳನ್ನು ನೀಡುವ ಈ ಬಹುವಾರ್ಷಿಕ ಸಸ್ಯವು ನಿತ್ಯ ಪುಷ್ಪವೆಂದೂ, ಬಟ್ಟಲು ಹೂ, ಕಾಶಿ ಕಣಗಿಲೆ, ಗಣೇಶನ ಹೂ, ಸದಾ ಮಲ್ಲಿಗೆ, ಗಿಡವು ಹೂಗಳಿಂದ ಸದಾ ತುಂಬಿರುವುದರಿಂದ ಅನಂತ ಪುಷ್ಪವೆಂದೂ ಹೆಸರು ಪಡೆದಿದೆ. ಮಡಗಾಸ್ಕರ್ ಈ ಸದಾಪುಷ್ಪದ ತವರು ಆಗಿರುವುದರಿಂದ ಇಂಗ್ಲೀಷ್ ಭಾಷೆಯಲ್ಲಿ ಮಡಗಾಸ್ಕರ್ ಪೆರಿವಿಂಕಲ್ ಎಂದು ಹೆಸರು ಪಡೆದರೆ ಸಂಸ್ಕೃತದಲ್ಲಿ ನಿತ್ಯಕಲ್ಯಾಣಿ ಎನಿಸಿದೆ.
ಮಡಗಾಸ್ಕರ್ ನಿಂದ ಅಂದಚಂದವೆಂದು ಬಂದ ಈ ಸದಾಪುಷ್ಪ ಈಗ ಹಳ್ಳಿಯಿಂದ ದಿಲ್ಲಿಯವರೆಗೂ ಹಬ್ಬಿದೆ. ಚೀನಾ, ಮಲೇಷ್ಯಾ, ಪಾಕಿಸ್ತಾನ, ಬಾಂಗ್ಲಾದೇಶದ ತುಂಬಾ ಇರುವ ಈ ಗಿಡವನ್ನು ಆಸ್ಟ್ರೇಲಿಯಾದಲ್ಲಿ ರೈತರು ಅಗಾಧವಾಗಿ ಬೆಳೆಯುತ್ತಾರೆಂದರೆ ಅಚ್ಚರಿಯಲ್ಲವೇ?
ಸದಾಪುಷ್ಪ ಬಯಲು ಸೀಮೆಯಲ್ಲಿ ಶಿವನನ್ನು ಪೂಜಿಸಲು ಬಳಸುವ ಶ್ರೇಷ್ಠ ಪುಷ್ಪವಾದರೆ ಕೆಲವೆಡೆ ಮನೆಬಾಗಿಲಿಗೆ ಪೂಜನೀಯ ಭಾವದಿಂದ ಸಮರ್ಪಣೆಗೊಳ್ಳುವ ಹೂವಾಗಿದೆ. ಗೆಲ್ಲು ಹಾಗೂ ಬೀಜಗಳಿಂದ ಪ್ರಸಾರಗೊಳ್ಳುವ ಈ ಸಸ್ಯ ಎರಡು ಮೂರಡಿ ಎತ್ತರ ಬೆಳೆಯಬಲ್ಲದು. ಸ್ವಲ್ಪ ಗಟ್ಟಿ ಕಾಂಡವಿದ್ದರೂ ಹಸಿರಾದ ಮೇಲ್ಮೈ ಹೊಂದಿ ನಯವಾಗಿ ಹೊಳಪಿನಿಂದ ಕೂಡಿದ ಎಲೆಗಳು ಕಾಂಡದುದ್ದಕ್ಕೂ ಎದುರೆದುರಾಗಿರುತ್ತವೆ. ಗೋಲಾಕಾರವಾಗಿ ತುದಿಯಲ್ಲಿ ಚೂಪಾಗಿರುವ ಎಲೆಗಳ ತೊಟ್ಟಿನ ಬಳಿಯೇ ಮೊಗ್ಗುಗಳು ಕಾಣಿಸಿಕೊಳ್ಳುತ್ತವೆ. ಕೋಮಲವಾದ ಹೂಗಳಿಗೆ ಐದು ದಳಗಳು. ತಿಳಿ ಗುಲಾಬಿ ಹಾಗೂ ಬಿಳಿ ಬಣ್ಣಗಳಲ್ಲಿ ಮಾತ್ರ ಕಾಣಸಿಗುತ್ತಿದ್ದ ಸದಾಪುಷ್ಪವು ಇತ್ತೀಚೆಗೆ ದಟ್ಟ ಗುಲಾಬಿ, ಕೆಂಪು, ತಿಳಿ ನೇರಳೆ, ಬಿಳಿ ಬಣ್ಣದ ನಡುವೆ ಕೆಂಪು ಚುಕ್ಕೆ ಇರಿಸಿಕೊಂಡ ಹೂಗಿಡಗಳೂ ಕಾಣಿಸುತ್ತಿವೆ.
ಪುಟ್ಟ ಹೂಗಳಿಗೆ ಹಲವಾರು ಬೀಜಗಳಿರುವ ತೆಳ್ಳಗಿನ ಕೋಡುಗಳಾಗುತ್ತವೆ. ಮರಳು ಮಣ್ಣು, ಮೆತ್ತಗಿನ ಮಣ್ಣು ಅಥವಾ ನೀರಿನ ಅಭಾವ ಇರುವ ಮಣ್ಣಿನಲ್ಲೂ ಈ ಗಿಡ ಬೆಳೆಯಬಲ್ಲದು. ಶಾಖೆಗಳ ತುದಿ ಕತ್ತರಿಸಿದರೆ ಗಿಡವು ಮತ್ತಷ್ಟು ವಿಶಾಲವಾಗಿ ಹಬ್ಬಿ ಬೆಳೆದು ಹೂವಿನ ಬುಟ್ಟಿಯಂತೇ ಕಾಣಿಸುವುದು. ಎಲೆಯ ರಸ ಕಹಿ ಇದ್ದು ಇದಕ್ಕೆ ಯಾವುದೇ ಕೀಟಬಾಧೆ ಕಾಣಿಸದು. ಮಳೆಗಾಲ ಚಳಿಗಾಲದ ಭೇದವಿರದೆ ಹೂ ಬಿಡುವ ಈ ಸದಾಪುಷ್ಪವು ಕ್ಯಾತರಾಂತಸ್ ರೋಸಿಯಸ್ (Catharanthus roseus) ಎಂಬ ಸಸ್ಯ ಶಾಸ್ತ್ರೀಯ ಹೆಸರು ಹೊಂದಿದ್ದು ಎಪೋಸೈನೇಸಿ (Apocynaceae) ಕುಟುಂಬಕ್ಕೆ ಸೇರಿದೆ.
ನಮ್ಮ ನಡುವೆ ಹಲವಾರು ಶತಮಾನಗಳಿಂದ ಜೊತೆಯಾಗಿರುವ ಈ ಸದಾಪುಷ್ಪವೆಂಬ ನಿಷ್ಪಾಪಿ ಸಸ್ಯವು ಸಾಂಪ್ರದಾಯಿಕ ಔಷಧಿ ಸಸ್ಯವಾಗಿರುವುದು ಮಾತ್ರವಲ್ಲದೆ ವೈಜ್ಞಾನಿಕವಾಗಿ ಕೂಡ ಮನುಷ್ಯ ತನ್ನನ್ನು ಅವಲಂಬಿಸುವಂತೆ ಆಗಿರುವುದರಿಂದಲೇ ಆರ್ಥಿಕವಾಗಿ ರೈತರಿಗೆ ಬಲ ನೀಡಿದೆ. ಸದಾ ಪುಷ್ಪದ ಎಲೆ, ಹೂ, ಬೇರುಗಳು ಔಷಧೀಯ ಗುಣಗಳನ್ನು ಹೊಂದಿವೆ ಎಂದು ಆಧುನಿಕ ವಿಜ್ಞಾನ ಕಂಡುಕೊಂಡಿದೆ. ಎಲೆಗಳಲ್ಲಿ ದೊರಕುವ ವಿನ್ ಕ್ರಿಸ್ಟಿನ್ ಹಾಗೂ ವಿನ್ ಬ್ಲಾಸ್ಟಿನ್ ನನ್ನು ರಕ್ತದ ಕ್ಯಾನ್ಸರ್ ನಿವಾರಕವಾಗಿ ಬಳಕೆ ಮಾಡಲಾಗುತ್ತಿದೆ. ಕ್ಯಾನ್ಸರ್ ಜೀವಾಣು ಪತ್ತೆ ಹಾಗೂ ನಾಶಕಾರ್ಯ ಏಕಕಾಲದಲ್ಲಿ ನಿರ್ಧರಿಸಬಲ್ಲ ಚಿಕಿತ್ಸಾವಿಧಾನ ರೂಪಿಸಲು ಸದಾ ಪುಷ್ಪ ಗಿಡದ ಕಾರ್ಬನ್ ಬಳಕೆ ಮಾಡಿ ವಿಜ್ಞಾನಿಗಳು ಯಶಸ್ವಿ ಯಾಗಿದ್ದಾರೆನ್ನಲಾಗಿದೆ. ಈ ವಿಧಾನಕ್ಕೆ ಕಾರ್ಬನ್ ನ್ಯಾನೋಡಾಟ್ಸ್ ವಿಧಾನವೆಂದು ಹೆಸರಿಸಲಾಗಿದೆ.
66 ಬಗೆಯ ಕ್ಷಾರ ಪದಾರ್ಥಗಳು ಇರುವ ಸದಾಪುಷ್ಪ ಮಧುಮೇಹ ನಿಯಂತ್ರಕ. ಇನ್ಸುಲಿನ್ ಉತ್ಪಾದನೆಯನ್ನು ಉತ್ತೇಜಿಸುವ ಸಾಮರ್ಥ್ಯ ಹೊಂದಿದೆ. ರಕ್ತದ ಏರು ಒತ್ತಡದ ಸಮಸ್ಯೆಗೆ, ಸುಟ್ಟ ಗಾಯ ನಿವಾರಣೆಗೆ, ಗಾಯ ಬೇಗ ವಾಸಿಯಾಗಲು, ರಕ್ತ ಭೇದಿಗೆ, ಅಧಿಕ ಕೊಲೆಸ್ಟರಾಲ್ ನಿವಾರಣೆಗೆ, ಟೈಪ್ 2 ಮಧುಮೇಹಕ್ಕೆ ಔಷಧೀಯ ಅಂಶಗಳನ್ನು ಹೊಂದಿದ ಅಪೂರ್ವ ಸಸ್ಯವಾಗಿದೆ.
ಚೀನಾದಲ್ಲಿ ಮಧುಮೇಹ, ಮಲೇರಿಯಾ, ಗಂಟಲುನೋವು, ಲ್ಯುಕೇಮಿಯಾಗಳಿಗೆ ಪ್ರಯೋಜನ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ವೈದ್ಯರ ಸಲಹೆ ಇರದೆ ಹೆಚ್ಚು ಸೇವನೆ ಮಾಡಿದರೆ ರಕ್ತದಲ್ಲಿ ಸಕ್ಕರೆ ಪ್ರಮಾಣ ಕುಸಿಯಬಹುದು. ನಮಗೆ ನಾವೇ ವೈದ್ಯರಾಗುವುದು ಸೂಕ್ತವಲ್ಲ ಅಲ್ಲವೇ?
ಮಕ್ಕಳೇ, ಈ ಗಿಡದ ಬಗ್ಗೆ ನಮ್ಮ ನಡುವೆ ಒಂದು ಮೂಢನಂಬಿಕೆ ಹರಡಿದೆ. ಅದೇನೆಂದರೆ ಸದಾಪುಷ್ಪವು ಮನೆಯ ಎದುರು ಇರತಕ್ಕ ಗಿಡವಲ್ಲ ಅಥವಾ ಅದು ಸ್ಮಶಾನದಲ್ಲಿರುವ ಹೂಗಿಡವೆಂದೂ ಬೆದರಿಸುವುದನ್ನು ಕಂಡಿದ್ದೇನೆ. ಇದೇ ಹೂ ಕರ್ನಾಟಕದ ಉತ್ತರ ಭಾಗದಲ್ಲಿ ಶಿವನಿಗೆ, ಗಣೇಶನಿಗೆ ಶ್ರೇಷ್ಠ ವೆಂದು ಪರಿಗಣಿಸಲಾಗುತ್ತದೆ. ಸೃಷ್ಟಿಯಲ್ಲಿ ಯಾವುದೂ ಕೆಟ್ಟದೆಂದು ಇಲ್ಲವೆಂಬುದನ್ನು ನಾವು ಮನಗಾಣಬೇಕು. ರಕ್ತದ ಕ್ಯಾನ್ಸರ್ ಗೆ ಔಷಧಿಯಾಗಬಲ್ಲ ಗಿಡವೊಂದು ಬೆಳೆಯಾಗಿ ರೈತನ ಕೈ ಹಿಡಿದಿರುವಾಗ ವರ್ಷವಿಡೀ ಹೂ ನೀಡುವ ಅಪೂರ್ವ ಸಸ್ಯವನ್ನು ಕಣ್ತಂಪಿಗಾಗಿ ಉಳಿಸೋಣ, ಬೆಳೆಸೋಣ ಆಗದೇ?
ಮುಂದಿನ ವಾರ ಇನ್ನೊಂದು ನಿಷ್ಪಾಪಿ ಸಸ್ಯದ ಜೊತೆ ಭೇಟಿಯಾಗುತ್ತೇನೆ.. ನಮಸ್ಕಾರ.
ಸಹ ಶಿಕ್ಷಕಿ, ಸರ್ಕಾರಿ ಹಿರಿಯ ಪ್ರಾಥಮಿಕ
ಶಾಲೆ , ಬಾಳೆಪುಣಿ (ಇರಾ)
ಬಂಟ್ವಾಳ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
Mob : +91 78925 87191
*******************************************