-->
ಜಗಲಿ ಕಟ್ಟೆ : ಸಂಚಿಕೆ - 50

ಜಗಲಿ ಕಟ್ಟೆ : ಸಂಚಿಕೆ - 50

ಜಗಲಿ ಕಟ್ಟೆ : ಸಂಚಿಕೆ - 50
ತಾರಾನಾಥ್ ಕೈರಂಗಳ
ಮಕ್ಕಳ ಜಗಲಿ
ಮಕ್ಕಳ ಡಿಜಿಟಲ್ ಆನ್ಲೈನ್ ಪತ್ರಿಕೆ
ದಕ್ಷಿಣ ಕನ್ನಡ ಜಿಲ್ಲೆ. 


ಇದು ನಿಮ್ಮ ಮನೆಯ 
ಮಕ್ಕಳ ಜಗಲಿ
www.makkalajagali.com
    ಮಕ್ಕಳ ಜಗಲಿಯ ನನ್ನ ಎಲ್ಲಾ ಆತ್ಮೀಯ ಓದುಗ ಬಂಧುಗಳಿಗೆ ಪ್ರೀತಿಯ ನಮಸ್ಕಾರಗಳು.... ನಿಮ್ಮ ಜೊತೆ ಮಾತಾಡುವ ನಿಮ್ಮ ಸಲಹೆ, ಹೊಸ ಆಲೋಚನೆಗಳನ್ನು ನಮ್ಮ ಜೊತೆ ಹಂಚಿಕೊಳ್ಳುವುದಕ್ಕಾಗಿ ಈ ಜಗಲಿ ಕಟ್ಟೆ.... ಮಕ್ಕಳ ಜಗಲಿಗೆ ಸಂಬಂಧಿಸಿದ ಯಾವುದೇ ವಿಷಯದ ಕುರಿತಾಗಿ ನಿಮ್ಮ ಅನಿಸಿಕೆಗಳು ಹಾಗೂ ಸಲಹೆಗಳನ್ನು ಸ್ವೀಕರಿಸುತ್ತೇವೆ. ವಿದ್ಯಾರ್ಥಿಗಳು, ಪೋಷಕರು, ಶಿಕ್ಷಕರು, ಹಿತೈಷಿಗಳು ನಮಗೆ ಬರೆದು ಕಳುಹಿಸಿ.... ಹೆಸರು ವಿಳಾಸ ಹಾಗೂ ಭಾವಚಿತ್ರದೊಂದಿಗೆ ನಿಮ್ಮ ಅನಿಸಿಕೆಗಳು 100 ಪದಗಳ ಮಿತಿಯಲ್ಲಿರಲಿ..... ತಾರಾನಾಥ್ ಕೈರಂಗಳ



ಜಗಲಿಯಲ್ಲಿ ಮುಕ್ತ ಮಾತುಕತೆಗಾಗಿ ಆರಂಭ ಮಾಡಿದ ಜಗಲಿಕಟ್ಟೆಗೀಗ 50ನೇ ಸಂಚಿಕೆಯ ವಾರ. ಬರೆಯುವ ಮತ್ತು ಓದುವ ಮನಸ್ಸುಗಳನ್ನು ಒಂದೆಡೆ ಬೆಸೆಯುವ ಜಗಲಿಗೆ ಹಲವಾರು ಮೈಲುಗಲ್ಲನ್ನು ದಾಟಿ ಬಂದ ಸಂತೃಪ್ತಿ ಇದೆ. ಚಿತ್ರ ಬರೆಯುವ ಕೈಗಳಿಗೆ ಪ್ರೋತ್ಸಾಹ ನೀಡಿ, ಕಥೆ, ಕವನ, ಲೇಖನ, ಬರೆಯುವ ಪ್ರತಿಭೆಗಳಿಗೆ ಬೆಂಬಲ ನೀಡಿ ಜಗಲಿಯ ವೇದಿಕೆಯಲ್ಲಿ ಪ್ರಕಟಿಸುತ್ತಾ ಮಕ್ಕಳ ಕಲೆ ಮತ್ತು ಸಾಹಿತ್ಯದ ಅಭಿರುಚಿಗೆ ಬೆನ್ನು ತಟ್ಟುವ ಕೆಲಸ ಮಾಡುತ್ತಿರುವುದು ನಿಮಗೆಲ್ಲ ಗೊತ್ತೇ ಇದೆ. 'ಮಕ್ಕಳ ಜಗಲಿ' ಅಗತ್ಯಕಾಲದಲ್ಲಿ ಸದ್ದುದೇಶದೊಂದಿಗೆ ಆರಂಭವಾದ ಪ್ರಪ್ರಥಮ ಮಕ್ಕಳ ಕನ್ನಡ ಡಿಜಿಟಲ್ ಪತ್ರಿಕೆ ಎನ್ನುವುದು ಪ್ರೀತಿಯಿಂದ ಒಪ್ಪಬಹುದಾದ ವಿಷಯ.

ಕಳೆದ ಒಂದು ತಿಂಗಳ ಈಚೆಗೆ ಹಲವಾರು ಮಕ್ಕಳ ಬೇಸಿಗೆ ಶಿಬಿರದಲ್ಲಿ ಭಾಗವಹಿಸುವ ಅವಕಾಶ ನನ್ನದಾಗಿತ್ತು. ಹೊರಾಂಗಣಕ್ಕೆ ಹೋಗಲಾರದಷ್ಟು ಬಿಸಿಲಾಗಿದ್ದರೆ... ಒಳಗಡೆ ಕೂರಲಾಗದಷ್ಟು ಸೆಖೆ. ಒಳಾಂಗಣದಲ್ಲಿ ಹತ್ತಾರು ಫ್ಯಾನುಗಳು ತಿರುಗುತ್ತಿದ್ದರೂ ಮಕ್ಕಳ ಜೊತೆ ಎಲ್ಲರೂ ಬೆವತು ಒದ್ದೆಯಾಗುತ್ತಿದ್ದುದು ಎಂದಿಗಿಂತ ಈ ಬಾರಿ ಹೆಚ್ಚೇ ಎನ್ನಬಹುದು. ಪ್ರತಿ ಶಿಬಿರದಲ್ಲಿ ಮಕ್ಕಳ ಜೊತೆ ಈ ಬಗ್ಗೆ ಮಾತನಾಡುವುದಿದೆ. ಸಾಮಾನ್ಯವಾಗಿ ಮಕ್ಕಳಲ್ಲಿ ಈ ಬಗ್ಗೆ ಪ್ರಶ್ನೆತ್ತಿದಾಗ "ರಸ್ತೆ ಅಗಲೀಕರಣ, ಮನೆ , ಫ್ಲಾಟುಗಳ ನಿರ್ಮಾಣ ಈ ಕಾರಣದಿಂದ ಮರ, ಅರಣ್ಯಗಳ ನಾಶ, ವಿಪರೀತ ವಾಯುಮಾಲಿನ್ಯ, ಹೀಗಾಗಿ ಭೂಮಿಯ ಉಷ್ಣಾಂಶ ಹೆಚ್ಚಿದೆ" ಅನ್ನುತ್ತಾರೆ.

ಮಕ್ಕಳಿಗೆ ಈ ಬಗ್ಗೆ ಅರಿವಿದೆ. ಶಾಲಾ ಪಠ್ಯದಲ್ಲೂ ಕೂಡ ಈ ಬಗ್ಗೆ ಜಾಗೃತಿ ಮೂಡಿಸುವ ಅರಿವನ್ನು ಮೂಡಿಸುವ ಪಾಠಗಳು ಇವೆ. ಇಲ್ಲಿ ಬೋಧನೆ ಮಾತ್ರ ಆಗುತ್ತಿವೆ. ಪ್ರಾಯೋಗಿಕವಾಗಿ ಕೆಲಸ ಕಾರ್ಯಗಳು ಮಾತ್ರ ನಿರ್ಲಿಪ್ತವಾಗಿದೆ. ಮರಗಳ ನಾಶ ನಿತ್ಯ ಆಗುತ್ತಿದೆ. ದೊಡ್ಡ ದೊಡ್ಡ ಕಾಡುಗಳು ದಿನದಿಂದ ದಿನಕ್ಕೆ ಬರಿದಾಗುತ್ತಿರುವುದು ಕಾಣುತ್ತಿದೆ. ಮನುಷ್ಯನ ಸ್ವಾರ್ಥಕ್ಕೆ ಸಾವಿರಾರು ಮರಗಳು ಧರೆಗುರುಳುತ್ತಿವೆ. ಖಾಸಗಿಯಾಗಿ ಭೂಮಿ ಹೊಂದಿರುವ ಮಾಲಕರು ಮರಗಳನ್ನು ಕಡಿದು ವಾಣಿಜ್ಯ ಸಂಕೀರ್ಣಗಳನ್ನಾಗಿ ಬದಲಾಯಿಸುತ್ತಿದ್ದರೆ ಇದ್ದ ಕೆಲವಷ್ಟು ಕಾಡುಗಳು ಸ್ವಾರ್ಥಿಗಳ ಕೈಗೆ ಸಿಕ್ಕು ರೆಸಾರ್ಟು, ಕ್ಲಬ್ಬುಗಳಿಗಾಗಿ ಬೋಳಾಗುತ್ತಿದೆ.

ಈ ಬಗ್ಗೆ ಚಿಂತೆ ಮಾಡುವವರು ಯಾರು..? ಈ ಭೂಮಿಯನ್ನು ನಾಳೆಗಾಗಿ ಉಳಿಸುವ ಹೊಣೆಗಾರಿಕೆ ಎಲ್ಲರದ್ದಾಗಿದ್ದರೂ ದೇಶದ ಆಡಳಿತ ವ್ಯವಸ್ಥೆ ಒಳಗಡೆ ವಿವಿಧ ಸ್ಥರಗಳಲ್ಲಿ ಅಧಿಕಾರ ಹೊಂದಿದವರಿಗೆ ಹೆಚ್ಚಿನ ಅವಕಾಶ ಇದ್ದೇ ಇರುತ್ತದೆ. ಪ್ರಜಾಪ್ರಭುತ್ವದ ವ್ಯವಸ್ಥೆ ಒಳಗಡೆ ನಾವು ಆರಿಸುವ ನಾಯಕ ಭೂಮಿಯನ್ನು ಉಳಿಸುವ ನಾಯಕನಾಗಬೇಕಾಗಿದೆ. ಸ್ವಾರ್ಥ ಇರದ ಅಧಿಕಾರಿಗಳಾಗಲಿ ಅಥವಾ ಜನಪ್ರತಿನಿಧಿಗಳಾಗಲಿ ಈ ಪ್ರಕೃತಿಯನ್ನು ಉಳಿಸುವ ಕಟ್ಟುನಿಟ್ಟಾದ ಕಾನೂನು ವ್ಯವಸ್ಥೆ ಜಾರಿ ಆಗಬೇಕಾಗಿದೆ. ಒಂದು ಗಾದೆ ಮಾತಿನಂತೆ "ಬೇಲಿಯೇ ಎದ್ದು ಹೊಲ ಮೇದಂತೆ" ಸಾಗಿದರೆ ಮುಂದೊಂದು ದಿನ ನಮ್ಮ ನೆಲ ಬರಡಾಗುವುದರಲ್ಲಿ ಎರಡು ಮಾತಿಲ್ಲ. ಕಳೆದ ವಾರ ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಯಾಕೂಬ್ ಸರ್ ಅವರ ಲೇಖನ "ಮನುಕುಲ ನಾಶ ಸನ್ನಿಹಿತವಾಗಿದೆಯೇ?"... ಎಲ್ಲರನ್ನು ಚಿಂತನೆಗೀಡು ಮಾಡಿತ್ತು. 
       ನಮ್ಮ ಗುರಿ ಕೃತಕತೆಯನ್ನು ಸ್ಥಾಪಿಸುವುದಕ್ಕಿಂತಲೂ ಇರುವ ಪ್ರಾಕೃತಿಕತೆಯನ್ನು ಉಳಿಸುವ ಉದ್ದೇಶ ನಮ್ಮದಾಗಿರಲಿ... ಈ ಭೂಮಿ ಅಸಮತೋಲನವಾಗದಿರಲಿ...! ನಮಸ್ಕಾರ



ಕಳೆದ ಸಂಚಿಕೆಯ ಜಗಲಿಕಟ್ಟೆ - 49 ಅಂಕಣದಲ್ಲಿ ನಿವೃತ್ತ ವಿಜ್ಞಾನ ಶಿಕ್ಷಕರಾದ ಶ್ರೀರಾಮ ಮೂರ್ತಿ... ಇವರು ತಮ್ಮ ಅನಿಸಿಕೆಯನ್ನು ಹಂಚಿಕೊಂಡಿದ್ದರು. ಈ ವಾರದ ಜಗಲಿ ಕಟ್ಟೆಯ ಓದುಗರ ಮಾತುಕತೆಯನ್ನು ಈಗ ಓದೋಣ....



ಎಲ್ಲರಿಗೂ ನಮಸ್ಕಾರಗಳು,
     ಗಳಿಕೆ ಬದುಕಿಗಾಗಿ ಇರಬೇಕೆ ಹೊರತು ಬದುಕಿಗಾಗಿ ಗಳಿಕೆ ಅಲ್ಲ ಎಂಬುದನ್ನು ತಮ್ಮ ಈ ಸಲದ ಸಂಚಿಕೆಯಲ್ಲಿ ಶಿಕ್ಷಣಾಧಿಕಾರಿಯವರಾದ ಶ್ರೀ ಜ್ಞಾನೇಶ್ ಸರ್ ರವರು ಸುಂದರವಾಗಿ ನಿರೂಪಿಸಿದ್ದಾರೆ.
    ನಮ್ಮ ದೇಹದ ಮೇಲೆ ನಾವು ಪ್ರೀತಿಯನ್ನು ತೋರಿಸಿ ದೇಹ ಸದೃಢವಾಗಿರುವಂತೆ ನೋಡಿಕೊಂಡಾಗ ನಮಗೆ ಉತ್ತಮ ಕಾರ್ಯಗಳನ್ನು ಮಾಡಲು ಸಹಾಯಕವಾಗುವುದರ ಜೊತೆಗೆ ಇತರರಲ್ಲೂ ನಾವು ಪ್ರೀತಿಯನ್ನು ತೋರಿಸಬೇಕೆಂಬ ಸಂದೇಶವನ್ನು ಸಾರುವ ಉತ್ತಮ ಲೇಖನ ರಮೇಶ್ ಬಾಯಾರ್ ಅವರಿಂದ.
    ಬೆಳವಣಿಗೆಗೆ ಹಲವಾರು ವರ್ಷಗಳನ್ನು ತೆಗೆದುಕೊಳ್ಳುವ ಒಂದು ಮರ ಆದರೆ ಮರದಲ್ಲಿ ಅತ್ಯಂತ ವೇಗವಾಗಿ ಕಡಿಮೆ ಸಮಯದಲ್ಲಿ ಬಳ್ಳಿಯು ಹಬ್ಬಿಕೊಂಡು ಹೇಗೆ ಮರದಷ್ಟೇ ಎತ್ತರವಾಗಿ ಬೆಳೆಯುತ್ತದೆ ಹಾಗೆಯೇ ವೈರಸ್ ಕೂಡ ಸಣ್ಣದಾಗಿದ್ದರೂ ನಮ್ಮ ದೇಹವನ್ನು ವೇಗವಾಗಿ ಪರಾವಲಂಬಿಯಾಗಿ ಆಕ್ರಮಿಸುತ್ತದೆ ಎನ್ನುವುದನ್ನು ಹೋಲಿಸಿ ಬರೆದ ದಿವಾಕರ ಸರ್ ವರ ವೈಜ್ಞಾನಿಕ ಸಂಚಿಕೆ ತುಂಬಾ ಇಷ್ಟವಾಯಿತು. ಧನ್ಯವಾದಗಳು ಸರ್.
     ಅರವಿಂದ ಸರ್ ರವರ ಹಕ್ಕಿ ಕಥೆ ಸಂಚಿಕೆ ಇನ್ನೇನು 150 ಗಡಿಯಲ್ಲಿದೆ. ತುಂಬಾ ಚೆನ್ನಾಗಿ ಹಕ್ಕಿಗಳ ಪರಿಚಯವಾಗುತ್ತಿದೆ. ಈ ವಾರ ಗದ್ದೆ ಗೊರವ ಹಕ್ಕಿಯ ಪರಿಚಯ ಸೊಗಸಾಗಿತ್ತು. ಪ್ರಕೃತಿಯಲ್ಲಿರುವ ಹೆಚ್ಚಿನ ಹಕ್ಕಿಗಳ ಪರಿಚಯ ಜಗಲಿಯ ಮಕ್ಕಳಿಗೆ ಮತ್ತು ಓದುಗರಿಗೆ ಸಿಗಬೇಕನ್ನುವ ಕಳಕಳಿಯೊಂದಿಗೆ ಸಂಚಿಕೆಗಳನ್ನು ನಿರಂತರವಾಗಿ ಮುಂದುವರಿಸಲು ಅವರಲ್ಲಿ ವಿನಂತಿಸುತ್ತೇನೆ.
     ಹಿಂದಿನ ಕಾಲದಲ್ಲಿ ಬೇಲಿ ಗಿಡವಾಗಿ ಬೆಳೆಸಲ್ಪಡುತ್ತಿದ್ದ ಆಡು ಸೋಗೆಯ ವೈದ್ಯಕೀಯ ಮಹತ್ವವನ್ನು ವಿಜಯಾ ಮೇಡಂ ರವರು ಬಹಳ ಸುಂದರವಾಗಿ ತಿಳಿಸಿದ್ದಾರೆ. ಇತ್ತೀಚೆಗಿನ ದಿನಗಳಲ್ಲಿ ಈ ಉಪಯುಕ್ತ ಸಸ್ಯವನ್ನು ಕಾಣುವುದೇ ಅಪರೂಪ.
    ಜಾಗತಿಕ ತಾಪಮಾನದ ಏರಿಕೆಗೆ ಕಾರಣಗಳು ಮಾನವನ ಮೇಲೆ ಅದರಿಂದಾಗುವ ಪರಿಣಾಮಗಳ ಕುರಿತಾದ ಸಕಾಲಿಕ ಲೇಖನ ಯಾಕೂಬ್ ಸರ್ ರವರಿಂದ. ಧನ್ಯವಾದಗಳು ಸರ್.
    ವಾಣಿಯಕ್ಕ ನವರಿಂದ ಈ ಸಲ ಸಾವಿತ್ರಿ ಬಾಯಿ ಪುಲೆಯವರ ಕುರಿತಾದ ಸುಂದರ ಪುಸ್ತಕದ ಪರಿಚಯ. ಧನ್ಯವಾದಗಳು ಅಕ್ಕ.
    ರಮೇಶ್ ಉಪ್ಪುಂದರವರ ಪದಗಳ ಹುಡುಕಾಟಕ್ಕೆ ಕಾರಣವಾದ ಪದದಂಗಳ ಸಂಚಿಕೆ ಸೊಗಸಾಗಿ ಮೂಡಿಬಂದಿದೆ.
    ಸವಿ ಜೇನು ಸಂಚಿಕೆಯಲ್ಲಿ ನಾಗೇಂದ್ರ ಸರ್ ರವರು ಪಾಳು ಬಾವಿಯಲ್ಲಿ ಜೇನು ತೆಗೆದ ಅನುಭವವನ್ನು ಸೊಗಸಾಗಿ ವಿವರಿಸಿದ್ದಾರೆ.
    ಮಕ್ಕಳ ಕವನಗಳಲ್ಲಿ ಯಶಸ್ವಿನಿಯವರ ಕವನಗಳು ಸೊಗಸಾಗಿವೆ. ಅಭಿನಂದನೆಗಳು.
     ಮಕ್ಕಳ ಜಗಲಿಗೆ ಲೇಖನ ಹಾಗು ಕವನಗಳನ್ನು ಕಳುಹಿಸಿದ ಎಲ್ಲರಿಗೂ ತುಂಬು ಹೃದಯದ ಧನ್ಯವಾದಗಳು.
....................................... ಶ್ರೀರಾಮ ಮೂರ್ತಿ
ನಿವೃತ್ತ ವಿಜ್ಞಾನ ಶಿಕ್ಷಕರು
ಬಾಯಾರು, ಕಾಸರಗೋಡು ಜಿಲ್ಲೆ
Mob: +91 94819 74949
*******************************************


ಓದುಗರ ಮಾತುಕತೆಯಲ್ಲಿ..... ಅನಿಸಿಕೆ ಅಭಿಪ್ರಾಯಗಳನ್ನು ಹಂಚಿಕೊಂಡು, ಬರೆಯುವ ಪ್ರತಿಯೊಬ್ಬರಿಗೂ ಪ್ರೇರಣೆಯಾಗುತ್ತಿರುವ ಮಕ್ಕಳ ಜಗಲಿ ಕುಟುಂಬದ ನಿವೃತ್ತ ವಿಜ್ಞಾನ ಶಿಕ್ಷಕರಾದ ಶ್ರೀರಾಮ ಮೂರ್ತಿ.. ಇವರಿಗೆ ಧನ್ಯವಾದಗಳು. 
       ಮಕ್ಕಳ ಜಗಲಿಗೆ ಸಂಬಂಧಿಸಿದ ಯಾವುದೇ ವಿಷಯದ ಕುರಿತಾಗಿ ನಿಮ್ಮ ಅನಿಸಿಕೆಗಳು ಹಾಗೂ ಸಲಹೆಗಳನ್ನು ಸ್ವೀಕರಿಸುತ್ತೇವೆ. ವಿದ್ಯಾರ್ಥಿಗಳು, ಪೋಷಕರು, ಶಿಕ್ಷಕರು, ಹಿತೈಷಿಗಳು ನಮಗೆ ಬರೆದು ಕಳುಹಿಸಿ.... ಹೆಸರು ವಿಳಾಸ ಹಾಗೂ ಭಾವಚಿತ್ರದೊಂದಿಗೆ ನಿಮ್ಮ ಅನಿಸಿಕೆಗಳು 100 ಪದಗಳ ಮಿತಿಯಲ್ಲಿರಲಿ.....
   ಮುಂದಿನ ವಾರದ ಜಗಲಿ ಕಟ್ಟೆಯಲ್ಲಿ ಮತ್ತೆ ಸಿಗೋಣ.... ನಮಸ್ಕಾರ
................................. ತಾರಾನಾಥ್ ಕೈರಂಗಳ
ಮಕ್ಕಳ ಜಗಲಿ
ಮಕ್ಕಳ ಡಿಜಿಟಲ್ ಆನ್ಲೈನ್ ಪತ್ರಿಕೆ
ದಕ್ಷಿಣ ಕನ್ನಡ ಜಿಲ್ಲೆ. 
Mob : 9844820979
******************************************

Ads on article

Advertise in articles 1

advertising articles 2

Advertise under the article