-->
ಸ್ಫೂರ್ತಿಯ ಮಾತುಗಳು : ಸಂಚಿಕೆ - 114

ಸ್ಫೂರ್ತಿಯ ಮಾತುಗಳು : ಸಂಚಿಕೆ - 114

ಸ್ಫೂರ್ತಿಯ ಮಾತುಗಳು : ಸಂಚಿಕೆ - 114
ಲೇಖಕರು : ರಮೇಶ ಎಂ. ಬಾಯಾರು 
ರಾಜ್ಯಪ್ರಶಸ್ತಿ ಪುರಸ್ಕೃತ ನಿವೃತ್ತ ಅಧ್ಯಾಪಕರು
ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
ಮೊಬೈಲ್ ಸಂಖ್ಯೆ : +91 94486 26093
rameshbayar@gmail.com 

                   

ಕೊಟ್ಟೂರಪ್ಪ ಉತ್ತಮ ಕೃಷಿಕ. ಸಣ್ಣ ಹಿಡುವಳಿಯಲ್ಲಿ ತರಕಾರಿ, ಭತ್ತ, ಮೆಣಸು, ಜೋಳಗಳನ್ನು ಬೆಳೆಯುತ್ತಿದ್ದ. ವಾಸಿಸಲು ಒಂದು ಪುಟ್ಟ ಮನೆ. ಅವನ ಮಡದಿಯು ಗೃಹಿಣಿಯಾಗಿದ್ದುಕೊಂಡು ಹೊಲದ ಕೆಲಸದಲ್ಲೂ ಪತಿಗೆ ನೆರವಾಗುತ್ತಿದ್ದಳು. ಒಬ್ಬ ಮಗನನ್ನು ಪಡೆದ ಈ ಸಂಸಾರ ನೆಮ್ಮದಿಯಿಂದ ಜೀವನ ಸಾಗಿಸುತ್ತದೆ. 

ಮಗ ಬೆಳೆಯುತ್ತಿದ್ದಂತೆ ಸ್ವಂತ ಊರಿನಲ್ಲಿ ಪಿ.ಯೂ ತರಗತಿ ತನಕ ಕೊಟ್ಟೂರಪ್ಪ ಓದಿಸಿದ. ಮಗನಿಗೆ ಮುಂದೆ ನಗರಗಳಲ್ಲಿ ಓದುವ ಅನಿವಾರ್ಯತೆ ಉಂಟಾಯಿತು. ಕಾಲೇಜು ಶುಲ್ಕ, ಹಾಸ್ಟೆಲ್ ಬಿಲ್ ಮುಂತಾದ ವೆಚ್ಚಗಳಿಗೆ ಪ್ರತೀ ವರ್ಷ ಲಕ್ಷಾಂತರ ರೂಪಾಯಿಗಳನ್ನು ಕೊಟ್ಟೂರಪ್ಪ ಖರ್ಚು ಮಾಡಬೇಕಾಯಿತು. ಸಣ್ಣ ಹಿಡುವಳಿದಾರರಿಗೆ ಬ್ಯಾಂಕ್ ದೊಡ್ಡ ಗಾತ್ರದ ಸಾಲ ನೀಡದು. ಸಣ್ಣ ಪುಟ್ಟ ಕೈಸಾಲ ಮಾಡಿ ಎರಡು ವರ್ಷ ಮಗನ ಶಿಕ್ಷಣ ಮತ್ತು ಕುಟುಂಬದ ವೆಚ್ಚಗಳನ್ನು ಸರಿದೂಗಿಸಿದ. ಕೈ ಸಾಲಕ್ಕೂ ತತ್ವಾರ ಬಂದಾಗ ಕೊಟ್ಟೂರಪ್ಪ ತನ್ನ ಮನೆ ಮತ್ತು ಭೂಮಿಯನ್ನೇ ಮಾರಿದ. ಮಾರಾಟದಿಂದ ಬಂದ ಹಣದಿಂದ ಕೈಸಾಲ ಮಾಡಿದುದನ್ನು ತೀರಿಸಿದ. ಉಳಿದ ಹಣವನ್ನು ಮಗನ ವಿದ್ಯಾಭ್ಯಾಸಕ್ಕೆ ಮೀಸಲಿಟ್ಟು ಬಾಡಿಗೆ ಮನೆಯೊಂದರಲ್ಲಿ ವಾಸ ಆರಂಭಿಸಿದನು. ತನ್ನ ಮತ್ತು ಹೆಂಡತಿಯ ಹೊಟ್ಟೆ ಹೊರೆಯಲು ಕೂಲಿ ಮಾಡಲು ದೊಡ್ಡ ಹಿಡುವಳಿದಾರರ ಮನೆಗೆ ಹೋಗುತ್ತಿದ್ದನು. ಮಗನ ವಿದ್ಯಾಭ್ಯಾಸ ಮುಗಿದು ಆತನಿಗೆ ಪ್ರತಿಷ್ಠಿತ ಕಂಪೆನಿಯಲ್ಲಿ ಪ್ರಬಂಧಕ ಹುದ್ದೆ ದೊರಕಿತು. ಕೊಟ್ಟೂರಪ್ಪ ದಂಪತಿಗಳು, ಜಾಗ ಮಾರಿಯಾದರೂ ತಾವು ಮಗನಿಗೆ ಕಲಿಸಿದುದರಲ್ಲಿ ಸಾರ್ಥಕತೆ ಕಂಡು ತೃಪ್ತರಾದರು. ಒಳ್ಳೆಯ ಸಂಬಳ ಮತ್ತು ಭತ್ಯೆಗಳು ಮಗನಿಗೆ ಸಿಗಲಾರಂಭಿಸಿದುದರಿಂದ ಅವನಿಗೆ ಹೆಣ್ಣು ಕೊಡಲು ಹಲವರು ಮುಂದೆ ಬಂದರು. ಮದುವೆಯೂ ಆಯಿತು. ಮದುವೆಯಾದ ನಂತರ ಉದ್ಯೋಗದಲ್ಲಿ ಭಡ್ತಿ ಪಡೆದ ಆತ ವಿದೇಶಕ್ಕೆ ಹೋಗಬೇಕಾಯಿತು. ಮಡದಿಯನ್ನೂ ಕರೆದುಕೊಂಡು ಮಗ ಕಾರ್ತಿಕ್ ಆಸ್ಟ್ರೇಲಿಯಾ ಸೇರಿದನು. ದುಡಿಮೆ ಕಷ್ಟವಾದ ಅಪ್ಪ ಅಮ್ಮನಿಗೆ ಜೀವನ ನಿರ್ವಹಣೆಗೆ ಕಾರ್ತಿಕ್ ಪ್ರತೀ ಮಾಸ ಹಣ ಕೊಡುತ್ತಾ ಇದ್ದ. 

ತಂದೆ ಮಾರಿದ್ದ ಹಿಡುವಳಿಯನ್ನು ವಾಪಸ್ ಖರೀದಿಸಲು ಕಾರ್ತಿಕ್ ಯೋಚಿಸಿದ. ರಜೆಯಲ್ಲಿ ಊರಿಗೆ ಬಂದವನೇ ಆ ಭೂಮಿಯನ್ನು ಖರೀದಿ ಮಾಡಿಯೇ ಬಿಟ್ಟ. ಮನೆಯನ್ನು ಹಿಂದಿನ ಖರೀದಿದಾರರು ಮುರಿದಿದ್ದರು. ಕಾರ್ತಿಕ್ ಆಸ್ಟ್ರೇಲಿಯಾದಿಂದ ಬೆಂಗಳೂರಿಗೆ ವರ್ಗಾವಣೆಗೊಂಡನು. ಈಗಾಗಲೇ ಮೊಮ್ಮಗಳನ್ನು ಪಡೆದ ಕೊಟ್ಟೂರಪ್ಪ ಅಜ್ಜನಾಗಿ ಬಿಟ್ಟ. ಕೊಟ್ಟೂರಪ್ಪನ ಹೆಂಡತಿ ಕಾಯಿಲೆ ಬಿದ್ದು ತನ್ನ ಎಪ್ಪತ್ತನೇ ವಯಸ್ಸಿನಲ್ಲಿ ಸಾವನ್ನಪ್ಪಿದಾಗ ಕೊಟ್ಟೂರಪ್ಪನಿಗೆ ಎಂಭತ್ತೈದು. ಒಬ್ಬನೇ ಬಾಡಿಗೆ ಮನೆಯಲ್ಲಿದ್ದು ಕಷ್ಟ ಪಡುವುದಕ್ಕಿಂತ ಕೆಲವು ತಿಂಗಳುಗಳ ಕಾಲ ಆಶ್ರಮದಲ್ಲಿರು. ಮನೆ ಕಟ್ಟಿದ ನಂತರ ಮನೆಗೆ ಕರೆಸುವೆ ಎಂದ ಮಗ ಕಾರ್ತಿಕ್. ಮುಗ್ಧ ಅಪ್ಪನ ಒಪ್ಪಿಗೆಯೂ ಸಿಕ್ಕಿತು. ಕೊಟ್ಟೂರಪ್ಪ ಆಶ್ರಮವಾಸಿಯಾದ. ಆಶ್ರಮಕ್ಕೆ ಪ್ರತೀ ತಿಂಗಳು ಕೊಟ್ಟೂರಪ್ಪನ ಹೆಸರಿನಲ್ಲಿ ಕಾರ್ತಿಕ್ ಹಣ ಕೊಡುತ್ತಲೂ ಇದ್ದ.

ಐದಾರು ವರ್ಷಗಳ ನಂತರ ಕಾರ್ತಿಕ್ ನಿಗೆ ವಯೋನಿವೃತ್ತಿಯಾಯಿತು. ಅವನು ಊರಿನಲ್ಲಿ ಮನೆ ಕಟ್ಟಿ ವಾಸಿಸಲು ನಿರ್ಧರಿಸಿದನು. ಬೇಕಷ್ಟು ಕೋಣೆಗಳಿರುವ ಭವ್ಯವಾದ ಒಂದಂತಸ್ತಿನ ಮನೆಯೂ ನಿರ್ಮಾಣವಾಯಿತು. ಮನೆ ಪ್ರವೇಶದ ಕಾರ್ಯಕ್ರಮ ನಿಗದಿಯಾಯಿತು. ಆಶ್ರಮಕ್ಕೆ ಬೆಳಗ್ಗೆ ಬೇಗ ಕಾರು ಬಂತು. ಕೊಟ್ಟೂರಪ್ಪ ನೂತನ ಮನೆಗೆ ಬಂದ, ಬರುವಾಗ ತನ್ನ ಬಟ್ಟೆ ಬರೆಗಳನ್ನೂ ತುಂಬಿ ತಂದ. ಮನೆಯು ಅರಮನೆಯಂತೆ ಅಲಂಕೃತವಾಗಿತ್ತು. ಕೊಟ್ಟೂರಪ್ಪನಿಗೆ ಆನಂದವೋ ಆನಂದ! ತನ್ನ ಕನಸ್ಸು ಈಡೇರಿದ ಖುಷಿಯಿಂದ ಆತನ ಮನಸ್ಸು ನಲಿಯಿತು. ನೆಂಟರು, ಗೆಳೆಯರು, ಗಣ್ಯರ ದಂಡೇ ಬರಲಾರಂಭಿಸಿತು. ಮಗ ಮತ್ತು ಸೊಸೆ ಮೊಮ್ಮಗಳೊಂದಿಗೆ ಎಲ್ಲರನ್ನೂ ಹುರುಪು ತುಂಬಿದ ಮನಸ್ಸಿನಿಂದ ಸ್ವಾಗತಿಸ ತೊಡಗಿದ. ಇದರ ನಡುವೆ ತನಗೆ ಯಾವ ಕೋಣೆಯಿರಬಹುದೆಂದು ಯೋಚಿಸುತ್ತಲೇ ಇದ್ದ. ಮಗನಲ್ಲಿ ಕೇಳೋಣ ಎಂದರೆ ಆತ ಬಂದವರ ಆತಿಥ್ಯದಲ್ಲಿಯೇ ಮಗ್ನನಾಗಿದ್ದ. ಮಧ್ಯಾಹ್ನದ ಭೂರಿ ಭೋಜನವಾಯಿತು. ಬಂದವರೆಲ್ಲರೂ ಹೊರಡುತ್ತಿದ್ದರು. ಮತ್ತೊಂದಷ್ಟು ನವ ಆಗಂತುಕರರ ಆತಿಥ್ಯ ನಡೆಯುತ್ತಲೇ ಇತ್ತು. ಸಂಜೆಯಾಗುತ್ತಾ ಬಂತು. ತಾನಿದ್ದ ಆಶ್ರಮದ ಕಾರೊಂದು ಬಂತು. ಆಶ್ರಮದ ಮೇಲ್ವಿಚಾರಕರು ಬಂದಿದ್ದರು. ಕೊಟ್ಟೂರಪ್ಪ ಬಹಳ ಆನಂದದಿಂದ ಅವರನ್ನು ಬರಮಾಡಿಕೊಳ್ಳಲು ಮುಂದೆ ಬಂದರೆ, “ಹೊರಡಲು ಇನ್ನೂ ನೀವು ತಯಾರಿಯಾಗಲಿಲ್ಲವೇ? ನಿಮ್ಮ ಬ್ಯಾಗ್ ಎಲ್ಲಿ? ಹೊರಡೋಣ; ಎಂದು ಕೈಹಿಡಿದರು. ಎದುರುಗಡೆಯಿದ್ದ ಮಗ ಸೊಸೆಯರನ್ನು ಕೊಟ್ಟೂರಪ್ಪ ನೋಡುತ್ತಲೇ ಇದ್ದ. ಅವರು ಉಸಿರೆತ್ತಲಿಲ್ಲ. ಕೊಟ್ಟೂರಪ್ಪ ಕಣ್ಸನ್ನೆಯ ಮೂಲಕವೇ ಇದೇನು ಸಂಗತಿಯೆಂದು ಕೇಳಿದರೆ ಅವರು ತುಟಿ ಪಿಟಿಕೆನ್ನಲಿಲ್ಲ. ಮೇಲ್ವಿಚಾರಕರು ಕೊಟ್ಟೂರಪ್ಪನ ಉಡುಪುಗಳ ಬ್ಯಾಗ್ ತರಿಸಿದರು. ಅವನ ಕೈಹಿಡಿದು ಗಾಡಿಯತ್ತ ನಡೆದರೆ ಕೊಟ್ಟೂರಪ್ಪನ ಕಣ್ಣುಗಳಿಂದ ಜೀವಮಾನದಲ್ಲೇ ಹರಿಯದಷ್ಟು ನೀರಿನ ಧಾರೆಯಿಳಿಯ ತೊಡಗಿತು. ಮಗ ಸೊಸೆಯರ ಮುಖದಲ್ಲಿ ಪೀಡೆ ತೊಲಗಿದ ಧನ್ಯತಾ ಭಾವ ಕುಣಿಯಿತು. ಮಗ ಬದಲಾಗಿದ್ದ. ಹೆತ್ತವರಿಗೆ ಮಕ್ಕಳಿಂದ ಅಪೇಕ್ಷೆಗಳಿರಬಾರದು. ಹೆತ್ತವರು ಮಕ್ಕಳ ಅವಲಂಬಿಗಳಾಗಿ ಇರಬಾರದು ಎಂಬ ಘನವಾದ ಮಾತುಗಳಿವೆ. ಅವುಗಳನ್ನು ಒಪ್ಪಿಕೊಳ್ಳೋಣ. ಕೊಟ್ಟೂರಪ್ಪ ಮಗನಿಗಾಗಿ ತನ್ನ ಎಲ್ಲವನ್ನೂ ತ್ಯಾಗ ಮಾಡಿದ. ತನ್ನ ಬದುಕಿನ ಭದ್ರತೆಯನ್ನು ಮಗನಿಗೆ ಧಾರೆಯೆರೆದ. ಮಗನಾದರೋ ತನ್ನ ಅಪ್ಪನಿಗೆ ಭದ್ರತೆ ನೀಡ ಬೇಕಾದ ಕರ್ತವ್ಯವನ್ನು ಮರೆತ. ಕಥೆಯಾಲಿಸಿದಾಗ ಮೂಡುವ ಪ್ರಶ್ನೆ, “ಇದೇನ ನ್ಯಾಯ?’
........ರಮೇಶ ಎಂ. ಬಾಯಾರು ಎಂ.ಎ, ಬಿಎಡ್
ರಾಜ್ಯಪ್ರಶಸ್ತಿ ಪುರಸ್ಕೃತ ನಿವೃತ್ತ ಅಧ್ಯಾಪಕರು
“ಸ್ಕಂದ” ಕುಳ ಗ್ರಾಮ
ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
ಮೊಬೈಲ್ ಸಂಖ್ಯೆ : +91 94486 26093
rameshbayar@gmail.com 
******************************************** 


Ads on article

Advertise in articles 1

advertising articles 2

Advertise under the article