-->
ನಿಷ್ಪಾಪಿ ಸಸ್ಯಗಳು : ಸಂಚಿಕೆ - 49

ನಿಷ್ಪಾಪಿ ಸಸ್ಯಗಳು : ಸಂಚಿಕೆ - 49

ನಿಷ್ಪಾಪಿ ಸಸ್ಯಗಳು : ಸಂಚಿಕೆ - 49
ಲೇಖಕರು: ವಿಜಯಾ ಬಿ ಶೆಟ್ಟಿ ಸಾಲೆತ್ತೂರು
ಸಹ ಶಿಕ್ಷಕಿ, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ 
ಬಾಳೆಪುಣಿ (ಇರಾ), ಬಂಟ್ವಾಳ ತಾಲೂಕು
ದಕ್ಷಿಣ ಕನ್ನಡ ಜಿಲ್ಲೆ

  

ಪ್ರೀತಿಯ ಮಕ್ಕಳೇ....
      ಹೇಗಿದ್ದೀರಿ...? ಉರಿ ಬಿಸಿಲು ಮನೆ ಹೊರಗೆ ಧಗೆ, ಸೆಖೆ ಮನೆಯೊಳಗೆ...! ನಿಮ್ಮ ಹೊರಾಂಗಣ ಆಟಗಳಿಗೂ ಈ ರಣಬಿಸಿಲು ಬ್ರೇಕ್ ಹಾಕಿದೆಯಲ್ಲವೇ..?

       ನಾವು ಸಣ್ಣವರಿದ್ದಾಗ ಮಣ್ಣಿನ ಅಗರಿ(ಳಿ) ನ ಮೇಲೆ, ಗದ್ದೆ ತೋಟದ ಬೇಲಿಯಲ್ಲಿ ಇದ್ದ ಬೇಲಿಯಲುಂಬುಡು ಎಂಬ ಗಿಡದ ಎಲೆ ಮುರಿದು ಕೇಪಳ ಅಥವಾ ಕಿಸ್ಕಾರ ಎಂಬ ಹೂವಿನ ಮದ್ಯೆ ಹಚ್ಚಿ ಬಾಯಲ್ಲಿಟ್ಟು ಊದುತ್ತಿದ್ದೆವು. ಉರುಟುರುಟಾದ ಗಾಳಿಗುಳ್ಳೆಗಳು ಒಂದೊಂದಾಗಿ ಹಾರಿ ಒಡೆಯುವುದನ್ನು ನೋಡುವುದೇ ಹಬ್ಬವಾಗಿತ್ತು. ಅದರ ಗಾಢ ಹಸುರಾದ ಎಲೆಗಳು ಆಕರ್ಷಕವಾಗಿದ್ದವು. ಗೊಂಚಲು ಗೊಂಚಲಾಗಿರುತ್ತಿದ್ದ ಕಾಯಿಗಳನ್ನು ತಿನ್ನದಂತೆ ಮನೆಯಲ್ಲಿ ಎಚ್ಚರಿಸುತ್ತಿದ್ದರು. 
      ಬೇಲಿ ಅಲುಂಬುಡು ಎಂಬುವುದು ತುಳು ಭಾಷೆಯ ಹೆಸರು. ಇದು ಕೆಲವು ವರ್ಷಗಳ ಹಿಂದೆ ವಿಶ್ವದ ಗಮನ ಸೆಳೆದ ಅಪರೂಪದ ಸಸ್ಯವಾಗಿದೆ. ಈ ಸಸ್ಯವೇ ಜತ್ರೋಪಾ. ಜತ್ರೋಪಾ ಕರ್ಕಾಸ್ (Jatropha curcas) ಎಂಬ ವೈಜ್ಞಾನಿಕ ಹೆಸರುಳ್ಳ ಈ ಗಿಡ ಯುಪೋರ್ಬಿಯೇಸಿ (Euphorbiaceae) ಎಂಬ ಕುಟುಂಬಕ್ಕೆ ಸೇರಿದೆ.

         ಬೀಜಗಳ ಮೂಲಕ ಹಾಗೂ ಗೆಲ್ಲುಗಳನ್ನು ನೆಡುವ ಮೂಲಕ ವಂಶಾಭಿವೃದ್ಧಿ ನಡೆಸುವ ಜತ್ರೋಪಾ ನೈಸರ್ಗಿಕವಾಗಿ ಎಲ್ಲೆಡೆ ಕಾಣಸಿಗುವ ಗಿಡವಾದರೂ ಅಮೇರಿಕಾದ ಉಷ್ಣವಲಯಕ್ಕಿದು ಸ್ಥಳೀಯವಾಗಿದೆ. ಆಫ್ರಿಕಾ ಮತ್ತು ಏಷ್ಯಾದಲ್ಲಿ ಕ್ಯಾಸ್ಟರ್ ಆಯಿಲ್ ಪ್ಲಾಂಟ್ ಎಂದು ಅನ್ವರ್ಥವಾಗಿಯೇ ಕರೆಯುತ್ತಾರೆ. ನಿತ್ಯಹರಿದ್ವರ್ಣ ಪೊದೆ ಸಸ್ಯವಾದ ಜತ್ರೋಪಾ 6 ಮೀಟರಿಗೂ ಹೆಚ್ಚು ಎತ್ತರ ಬೆಳೆದು ಸಣ್ಣ ಮರದಂತೆಯೂ ಕಾಣಬಲ್ಲದು. ಎಲೆಗಳು ಗಾಢ ಹಾಗೂ ತಿಳಿ ಹಸಿರಿನಲ್ಲಿದ್ದು ಸ್ವಲ್ಪ ದಪ್ಪಗಿರುತ್ತವೆ. ಅಕ್ಷಾ ಕಂಕುಳಲ್ಲೆ ಹೂಗೊಂಚಲಿದ್ದು ಒಂದೇ ಹೂಗೊಂಚಲಲ್ಲಿ ಗಂಡು ಹೆಣ್ಣು ಹೂಗಳಿರುತ್ತವೆ. ಹೂಗಳಲ್ಲಿ ಜೇನಿರುತ್ತದೆ. ತೇವ ಭೂಮಿಗೂ ಶುಷ್ಕ ಭೂಮಿಗೂ ಸೈ ಎನುವ ಈ ಸಸ್ಯ ವಿಷಕಾರಿ ಎಂದು ಪರಿಗಣಿಸುವ ಪೋರ್ಬೋಲ್ ಎಸ್ಟರ್ ಅಂಶ ಹೊಂದಿದೆ. ಆದರೆ ಮೆಕ್ಸಿಕೋ ದಲ್ಲಿ ವಿಷರಹಿತವಾದ ಜತ್ರೋಪಾ ಕೂಡ ಇದೆ. ಇದಲ್ಲಿ ಸ್ಥಳೀಯ ಸಸ್ಯವಾಗಿದೆ.
         ಜತ್ರೋಪಾ ಸಸ್ಯದ ಬೀಜಗಳಲ್ಲಿ 27% ದಿಂದ 40% ತೈಲ ಇರುವುದರಿಂದಲೇ ಇಂದಿನ ಕಾಲಘಟ್ಟದಲ್ಲಿ ವಿಶ್ವಾದ್ಯಂತ ಸದ್ದು ಮಾಡಿದೆ..! ಈ ತೈಲ ಅಂತಿಂತಹ ತೈಲವಲ್ಲ... ಕಾರು, ಬಸ್ಸು, ಜೆಟ್ ವಿಮಾನಗಳಿಗೆ ಕೂಡ ಇಂಧನವಾಗಬಲ್ಲ ತಾಕತ್ತು ಹೊಂದಿರುವುದೇ ವಿಶೇಷತೆ..! ಇದೊಂದು ಉತ್ತಮ ಗುಣಮಟ್ಟದ ಜೈವಿಕ ಡೀಸೆಲ್ ಇಂಧನ ಎಂಬ ಅಂಶ ಮುಂದುವರಿದ ರಾಷ್ಟ್ರಗಳ ನಿದ್ದೆಗೆಡಿಸಿದೆ. ತೇವಾಂಶ ಅಧಿಕವಿದ್ದರೆ ಹಲವು ಕೊಯ್ಲು ಮಾಡಬಹುದು ಎಂದು ಈಗಾಗಲೇ ಕಂಡುಕೊಳ್ಳಲಾಗಿದೆ. ತೈಲವು ಒಲೀಕ್, ಲಿಸೋಲಿಕ್ ಆಮ್ಲಗಳಿಂದ ಮಾಡಲ್ಪಟ್ಟಿದೆ. 80% ಕೊಬ್ಬಿನಾಂಶವಿದೆ. ಪ್ರತಿ ಎಕ್ರೆಗೆ 1600 ಗ್ಯಾಲನ್ ಡೀಸೆಲ್ ಇಂಧನದ ಸಂಭಾವ್ಯತೆ ಇದೆ ಎನ್ನಲಾಗುತ್ತದೆ. ಕಬ್ಬು, ಕಾಫಿ, ಹಣ್ಣು, ತರಕಾರಿ ಬೆಳೆಗಳ ನಡುವೆ ಇದನ್ನು ಬೆಳೆಯಬಹುದೆಂದರೂ ಸ್ಥಳೀಯ ಜೀವ ವೈವಿಧ್ಯತೆ ಗಾಗುವ ಹಾನಿ, ನೀರು ಸಂಗ್ರಹಣಾ ಪ್ರದೇಶಕ್ಕೇನು ತೊಂದರೆ...?, ಖಾದ್ಯ ಆಹಾರ ಬೆಳೆಗಳನಡುವಿನ ಸ್ಪರ್ಧೆ ಹೇಗೆ ನಡೆಯಬಹುದೆಂಬ ವಿಚಾರಗಳಲ್ಲಿ ವಿಜ್ಞಾನಿಗಳು ಅಧ್ಯಯನ ದಲ್ಲಿ ತೊಡಗಿದ್ದಾರೆ. ಸೋಯಬೀನ್ ಗಿಂತ 4 ಪಟ್ಟು ಹೆಚ್ಚು ತೈಲ ನೀಡುವ ಜತ್ರೋಪಾ ಅದು ಉತ್ಪಾದಿಸುವ ಶಕ್ತಿ ಘಟಕಕ್ಕೆ 5 ಪಟ್ಟು ಹೆಚ್ಚು ನೀರನ್ನು ಬೇಡುತ್ತದೆಯೆಂದರೆ ರೈತರೂ ಯೋಚಿಸಬೇಕಾಗುತ್ತದೆ. ಭವಿಷ್ಯದ ಜೈವಿಕ ಡೀಸೆಲ್ ಎಂದು ಗುರುತಿಸಲಾಗಿದ್ದರೂ ಇನ್ನೂ ಸುಧಾರಣಾ ಸಸ್ಯವಾಗಿ ಸಾಕಲಾಗಿಲ್ಲ. ಪರಿಣಾಮವಾಗಿ ಉತ್ಪಾದಕತೆಯ ನಿಖರತೆಯಿಲ್ಲ. ಆದರೂ ಇಂಡೋನೇಷ್ಯಾ ದಲ್ಲಿ ಕಡ್ಡಾಯ ನೆಡುವ ಯೋಜನೆಯಿದೆ. ಏಕೆಂದರೆ ಈ ನಿಷ್ಪಾಪಿ ಸಸ್ಯವನ್ನು ವಿದ್ಯುಚ್ಛಕ್ತಿ ಸ್ಥಾವರಗಳಿಗೆ ಶಕ್ತಿ ನೀಡಲು, ಜೈವಿಕ ಅನಿಲ ಉತ್ಪಾದಿಸಲು, ಗ್ಯಾಸ್ ಪೈಯರ್ ಗಳಲ್ಲಿ, ಯಂತ್ತೋಪಕರಣಗಳ ಲೂಬ್ರಿಕಂಟ್, ತೈಲ ಉತ್ಪಾದಿಸಲು ಬಳಕೆಯೇ ಮಾತ್ರವಲ್ಲದೆ ಪರಿಸರದಿಂದ ಇಂಗಾಲದ ಡೈಆಕ್ಸೈಡ್ ಹೀರಿಕೊಳ್ಳುತ್ತದೆ. ಹವಾಮಾನ ಬದಲಾವಣೆ ಸಜ್ಜುಗೊಳ್ಳುತ್ತದೆ. ಒಣ, ಬಿಸಿ ಭೂಮಿಯಲ್ಲೂ ಬೆಳೆಯಬಹುದು.
  
ತೈಲವು ಸಾಬೂನು, ಮೇಣದ ಬತ್ತಿ, ಆಲಿವ್ ಎಣ್ಣೆಗೆ ಕಲಬೆರಕೆಗಾಗಿ ಬಳಕೆಯಾದರೆ ತೊಗಟೆಯು ಮೀನಿನ ವಿಷವಾಗಿ, ಗುರುತು ಹಾಕಲು ಬಳಕೆಯಲ್ಲಿದೆ. ಜತ್ರೋಪಾ ತ್ಯಾಜ್ಯವು ರಾಳ, ರಸಗೊಬ್ಬರ, ದ್ರವತೈಲ, ಬಣ್ಣಕ್ಕಾಗಿ ಬಳಸಲ್ಪಡುತ್ತದೆ. ಬೀಜಗಳು ಗರ್ಭನಿರೋಧಕ ವಾಗಿ ಕಾರ್ಯವೆಸಗಬಲ್ಲವು. ಎಲೆಗಳು, ಬೀಜದ ಸಿಪ್ಪೆ ಮಾತ್ರವಲ್ಲ ಕಾಂಡ, ಎಣ್ಣೆಯ ಹಿಂಡಿಯೂ ಸಂಭಾವ್ಯ ಗೊಬ್ಬರವಾಗಿದೆ. ಗಿಡವನ್ನು ಉರುವಲಾಗಿಯೂ ಬಳಸಬಹುದಾಗಿದೆ.
     ಮಯನ್ಮಾರ್, ಬ್ರೆಸಿಲ್, ಫಿಲಿಫೈನ್ಸ್ ನಲ್ಲಿ ಜೈವಿಕ ಇಂಧನವಾಗಿ ಬಳಕೆಯಲ್ಲಿದೆ. ವಾಯುಯಾನಕ್ಕೆ ಕಚ್ಚಾತೈಲಕ್ಕಿಂತ ಇದು ಅಗ್ಗವಾಗಿದೆ ಎನ್ನಲಾಗಿದೆ. ಪಳೆಯುಳಿಕೆ ಇಂಧನಕ್ಕೆ ಅಗ್ಗದ ಮತ್ತು ಹೆಚ್ಚು ಪರಿಸರ ಸ್ನೇಹಿ ಪರ್ಯಾಯ ಹುಡುಕಲು ವಿಮಾನಯಾನ ಉದ್ಯಮಕ್ಕಿದು ಭರವಸೆಯ ಹೆಜ್ಜೆ. ಆಗಸ್ಟ್ 27, 2018ರಲ್ಲಿ ಸ್ಪೈಸ್ ಜೆಟ್ ಜಟ್ರೋಫಾ ಆಧಾರಿತ ಇಂಧನ ಬಳಸಿದ ಭಾರತೀಯ ವಿಮಾನಯಾನ ಸಂಸ್ಥೆ ಯಿಂದ ಮೊದಲ ಯಶಸ್ವಿ ಹಾರಾಟ ಪೂರ್ಣಗೊಳಿಸಿತು.

    ಮಕ್ಕಳೇ, ಯುದ್ಧದ ಕಾರ್ಮೋಡ ಆಗಾಗ ಕವಿಯುವ ಆಗಸದಲ್ಲಿ ಜತ್ರೋಪಾ ಯಾವ ನಿರೀಕ್ಷೆಯನ್ನೂ ಮಾನವರಲ್ಲಿ ಚಿಗುರಿಸಬಲ್ಲದು ಅಲ್ಲವೇ...? ಕೇವಲ ಒಂದು ಸಸ್ಯ ನಮ್ಮ ವಿಶ್ವವನ್ನು ಮುಂದೊಂದು ದಿನ ಆಳಬಹುದು... ಎಂಬ ನಿರೀಕ್ಷೆ ಸಸ್ಯ ವಿಜ್ಞಾನಿಗಳಲ್ಲಿದೆ. ನಿಜವಾಗಲೂ ಬಹುದು.. ಏನಂತೀರಾ...?
        ಮುಂದಿನ ವಾರ ಇನ್ನೊಂದು ನಿಷ್ಪಾಪಿ ಸಸ್ಯದ ಜೊತೆ ಭೇಟಿಯಾಗುತ್ತೇನೆ.. ನಮಸ್ಕಾರ.
..................... ವಿಜಯಾ ಬಿ ಶೆಟ್ಟಿ ಸಾಲೆತ್ತೂರು
ಸಹ ಶಿಕ್ಷಕಿ, ಸರ್ಕಾರಿ ಹಿರಿಯ ಪ್ರಾಥಮಿಕ 
ಶಾಲೆ , ಬಾಳೆಪುಣಿ (ಇರಾ)
ಬಂಟ್ವಾಳ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
Mob : +91 78925 87191
*******************************************


Ads on article

Advertise in articles 1

advertising articles 2

Advertise under the article