-->
ಹಕ್ಕಿ ಕಥೆ : ಸಂಚಿಕೆ - 150

ಹಕ್ಕಿ ಕಥೆ : ಸಂಚಿಕೆ - 150

ಹಕ್ಕಿ ಕಥೆ : ಸಂಚಿಕೆ - 150
ಲೇಖಕರು : ಅರವಿಂದ ಕುಡ್ಲ
ಅಧ್ಯಾಪಕ
ಮೂಡಂಬೈಲು ಹಿರಿಯ ಪ್ರಾಥಮಿಕ ಶಾಲೆ
ಬಂಟ್ವಾಳ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ

            
             
ಎಲ್ಲರಿಗೂ ನಮಸ್ಕಾರ... ಈ ವಾರದ ಹಕ್ಕಿ ಕಥೆಗೆ ಸ್ವಾಗತ....

'ಹಾರ್ನ್ ಬಿಲ್ ಹಕ್ಕಿಗಳು ಈ ಬಾರಿ ಬೇಸಿಗೆಯಲ್ಲಿ ತಮ್ಮ ಗೂಡು ಕಟ್ಟುವ ತಾಣಗಳ ಬಳಿ ಇನ್ನೂ ಬಂದಿಲ್ಲ ಗೂಡು ಕಟ್ಟಲು ಪ್ರಾರಂಭಿಸಿಲ್ಲ’ ಎಂಬ ವರದಿಯನ್ನು ಕೆಲವು ದಿನಗಳ ಹಿಂದೆ ಪತ್ರಿಕೆಯಲ್ಲಿ ಓದಿದೆ. ಹಾರ್ನ್ ಬಿಲ್ ಗೂಡು ಅಂದ ತಕ್ಷಣ ಕೆಲವು ವರ್ಷಗಳ ಹಿಂದೆ ಜೂನ್ ತಿಂಗಳಿನಲ್ಲಿ ಹಳಿಯಾಳದಲ್ಲಿ ಭಾಗವಹಿಸಿದ ತರಬೇತಿ ಒಂದು ನೆನಪಾಯಿತು. ಧಾರವಾಡದಿಂದ ದಾಂಡೇಲಿಗೆ ಹೋಗುವ ಮಾರ್ಗದಲ್ಲಿ ಸಿಗುವ ಹಳಿಯಾಳ ಎಂಬ ಸುಂದರವಾದ ಊರು. ಪಟ್ಟಣದಿಂದ ಹೊರಗೆ ಒಂದು ಕಡೆ ನಮ್ಮ ತರಬೇತಿ ಕಾರ್ಯಕ್ರಮ ಇತ್ತು. ಮೊದಲ ದಿನದ ತರಬೇತಿ ಮುಗಿಸಿ ಮಲಗಿದ ನಮಗೆ ಒಳ್ಳೆ ನಿದ್ದೆ. ಬೆಳಗ್ಗೆ ಬೇಗನೆ ಎಚ್ಚರವಾಯಿತು. ನಾನು ಸ್ವಲ್ಪ ದೂರ ವಾಕಿಂಗ್ ಹೋಗಿ ಬರೋಣ ಅಂತ ಹೊರಟೆ. ಹಳಿಯಾಳ ಧಾರವಾಡ ರಸ್ತೆಯಲ್ಲಿ ಇನ್ನೂ ಅಷ್ಟಾಗಿ ವಾಹನ ಸಂಚಾರ ಆರಂಭ ಆಗಿರಲಿಲ್ಲ. ನಡೆಯುತ್ತಾ ಹೋಗುವಾಗ ರಸ್ತೆಯ ಎರಡು ಬದಿಗಳಲ್ಲಿ ಸಾಲು ಸಾಲು ಮರಗಳು. ಅವುಗಳನ್ನ ನೋಡುವುದೇ ಬಹಳ ಚಂದ. ಹೀಗೆ ಬೆಳಗಿನ ಹವೆಯನ್ನು ಸವಿಯುತ್ತಾ ಮುಂದೆ ಹೋಗುತ್ತಿರುವಾಗ ಸುಮಾರು ದೂರದಲ್ಲಿ ಮರದ ಕೊಂಬೆಯಲ್ಲಿ ಕಪ್ಪು ಬಿಳುಪು ಬಣ್ಣದ ಹಕ್ಕಿಯೊಂದು ಹಾರಿ ಬಂದು ಕುಳಿತದ್ದು ಕಾಣಿಸಿತು. ಗಿಡುಗ ನಿಗಿಂತ ಸ್ವಲ್ಪ ದೊಡ್ಡದಾದ ಹಕ್ಕಿ ಹಾರಿ ಬಂದು ದೊಡ್ಡದೊಂದು ಕೊಂಬೆಯ ಮೇಲೆ ಕುಳಿತು ಒಮ್ಮೆ ಆ ಕಡೆ ಈ ಕಡೆ ನೋಡಿತು. ಎರಡೆರಡು ಕೊಕ್ಕು ಗಳು ಇರುವಂತೆ ಕಾಣುತ್ತಿದ್ದ ಹಕ್ಕಿ ಕೊಂಬೆಯಿಂದ ತುಸು ಕೆಳಗೆ ಒಂದು ಪೊಟರೆಯ ಒಳಗಡೆ ಕೊಕ್ಕು ಹಾಕಿ ಹೊರತೆಗೆಯಿತು. ಇದನ್ನು ನೋಡುತ್ತಾ ನಡೆಯುತ್ತಿದ್ದ ನಾನು ನನ್ನ ನಡಿಗೆಯನ್ನು ನಿಧಾನಗೊಳಿಸಿ ಒಂದೆಡೆ ಮರದ ಮರೆಯಲ್ಲಿ ನಿಂತುಕೊಂಡೆ. ಮರದ ಪೊಟರೆಯ ಒಳಗಡೆಯಿಂದ ಇನ್ನೊಂದು ಕೊಕ್ಕು ಹೊರಗಡೆ ಕಾಣಿಸಿತು. ಮೇಲೆ ಕೊಂಬೆಯಲ್ಲಿ ಕುಳಿತ ಹಕ್ಕಿ ಸ್ವಲ್ಪ ಕೆಳಗೆ ಬಂದು ತನ್ನ ಗಂಟಲಿನಿಂದ ಒಂದೊಂದಾಗಿ ಹಣ್ಣುಗಳನ್ನು ತೆಗೆದು ಪೊಟರೆಯ ಒಳಗಿರುವ ಕೊಕ್ಕಿಗೆ ತುತ್ತು ನೀಡಲು ಪ್ರಾರಂಭಿಸಿತು. ಸುಮಾರು 8 ರಿಂದ 10 ಹಣ್ಣುಗಳನ್ನು ನೀಡಿದ ಹಕ್ಕಿ ಆ ನಂತರ ಅಲ್ಲಿಂದ ಹಾರಿಹೋಯಿತು. ನಾನು ನಿಧಾನವಾಗಿ ಪೊಟರೆ ಇರುವ ಮರದ ಹತ್ತಿರ ಬಂದು ಅದನ್ನು ಗಮನಿಸಲು ಪ್ರಾರಂಭಿಸಿದೆ. ಒಳಗಡೆ ಹಕ್ಕಿಯೊಂದು ಇರುವುದು ಅದರ ದೊಡ್ಡ ಕೊಕ್ಕಿನ ತಿಳಿ ಹಳದಿ ಮತ್ತು ಕಪ್ಪು ಬಣ್ಣದಿಂದ ತುಸುವೇ ಕಾಣುತ್ತಿತ್ತು. ಜೀವನದಲ್ಲಿ ನಾನು ಅದೇ ಮೊದಲ ಬಾರಿಗೆ ಹಾರ್ನ್ ಬಿಲ್ ಹಕ್ಕಿಯ ಗೂಡನ್ನು ನೋಡಿದ ಖುಷಿ ನನ್ನದಾಗಿತ್ತು.
ಮಾರ್ಚ್ ನಿಂದ ಜೂನ್ ತಿಂಗಳ ನಡುವೆ ದೊಡ್ಡ ಮರದ ಪೊಟರೆಗಳಲ್ಲಿ ಸೇರಿಕೊಂಡು ಹೆಣ್ಣು ಹಕ್ಕಿ ತನ್ನ ಗರಿಗಳನ್ನೆಲ್ಲ ಉದುರಿಸಿಕೊಳ್ಳುತ್ತದೆ. ಜೊತೆಗೆ ತನ್ನದೇ ಹಿಕ್ಕೆ ಬಳಸಿ ಕೊಕ್ಕು ಮಾತ್ರ ಆಚೆ ಬರುವಷ್ಟು ಪೊಟರೆಯ ಬಾಯಿಯನ್ನು ಮುಚ್ಚುತ್ತದೆ. ಮೊಟ್ಟೆ ಒಡೆದು ಮರಿ ಬಂದು ಅವುಗಳಿಗೆ ರೆಕ್ಕೆ ಬಲಿತು ಹಾರುವವರೆಗೂ ಹೆಣ್ಣು ಹಕ್ಕಿ ಗೂಡಿನ ಒಳಗೆಯೇ ವಾಸವಾಗಿ ಕಾವು ಕೊಟ್ಟು ಮರಿಗಳಿಗೆ ರಕ್ಷಣೆಯನ್ನು ನೀಡುತ್ತದೆ. ತನ್ನ ಸಂಗಾತಿ ಮತ್ತು ಅದರ ಮರಿಗಳಿಗೆ ಪ್ರತಿನಿತ್ಯ ಆಹಾರ ಹುಡುಕಿ ತಂದು ಹೊಟ್ಟೆ ತುಂಬಿಸುವ ಜವಾಬ್ದಾರಿಯನ್ನು ಗಂಡು ಹಕ್ಕಿ ಬಹಳ ತನ್ಮಯತೆಯಿಂದ ನಿಭಾಯಿಸುತ್ತದೆ. ಹಾಗಾಗಿ ಒಮ್ಮೆ ಜೋಡಿಯಾದ ಹಕ್ಕಿಗಳು ಜೀವನಪೂರ್ತಿ ಜೊತೆಯಾಗಿ ವಾಸ ಮಾಡುತ್ತದೆ. ಜಾಗ ಉತ್ತಮ ಅನ್ನಿಸಿದರೆ ಮತ್ತೆ ಮತ್ತೆ ಅದೇ ಪೊಟರೆಯ ಬಳಕೆಯನ್ನು ಪ್ರತಿವರ್ಷ ಮಾಡುತ್ತವೆ. ಹಣ್ಣುಗಳು ಈ ಹಕ್ಕಿಯ ಮುಖ್ಯ ಆಹಾರ. ಹಣ್ಣುಗಳನ್ನು ತಿಂದು ಅದರ ಬೀಜವನ್ನು ಕಾಡಿನ ಬೇರೆ ಬೇರೆ ಕಡೆ ಬೀಳಿಸುವುದರಿಂದ ಇವುಗಳನ್ನು ಕಾಡಿನ ಕೃಷಿಕ ಎಂದು ಕರೆಯಲಾಗುತ್ತದೆ. ಹಣ್ಣಿನ ಮರಗಳ ಬೀಜ ಪ್ರಸಾರದಲ್ಲಿ ಈ ಹಕ್ಕಿಗಳ ಪಾತ್ರ ಬಹಳ ಪ್ರಮುಖವಾದದ್ದು. ಮರಿಗಳು ಇರುವ ಕಾಲದಲ್ಲಿ ಇವು ಹಲ್ಲಿ ಇಲಿ ಮತ್ತು ಇತರೆ ಸಣ್ಣ ಜೀವಿಗಳನ್ನು ಹಿಡಿದು ಮರಿಗಳಿಗೆ ತಿನಿಸುತ್ತವೆ. ಮಲೆನಾಡು ಮತ್ತು ಇತರೆ ಭಾಗಗಳಲ್ಲಿ ಹಲವಾರು ಕಡೆ ರಸ್ತೆ ಅಗಲೀಕರಣ, ಕೃಷಿ ವಿಸ್ತರಣೆ, ಕೈಗಾರಿಕೆ ಇಂತಹ ಬೇರೆ ಬೇರೆ ಕಾರಣಕ್ಕಾಗಿ ಬೃಹತ್ ಮರಗಳನ್ನು ಕಡಿದಾಗ ಇಂತಹ ಹಲವು ಹಕ್ಕಿಗಳ ಆವಾಸವೇ ನಾಶವಾಗುತ್ತದೆ. ಜೊತೆಗೆ ನಾವಿಂದು ಎದುರಿಸುತ್ತಿರುವ ಹವಾಮಾನ ಬದಲಾವಣೆಗೂ ಹಳೆಯ ಬಲಿತ ಕಾಡಿನ ಮರಗಳನ್ನು ಕಡಿಯುವುದು ಮುಖ್ಯ ಕಾರಣ ಎಂದು ವಿಜ್ಞಾನಿಗಳು ಹೇಳುತ್ತಾರೆ. ಏಕೆಂದರೆ ಮರಗಳು ನಮ್ಮ ತಮ್ಮ ಜೀವಿತದ ದ್ವಿತೀಯ ಅರ್ಧ ಭಾಗದಲ್ಲಿ ಹೆಚ್ಚು ಕಾರ್ಬನ್ ಡೈಯಾಕ್ಸೈಡ್ ಹೀರಿಕೊಳ್ಳುತ್ತವೆ. ನೂರಾರು ವರ್ಷ ಹಳೆಯ ಮರಗಳನ್ನ ಕಡಿಯುವುದರಿಂದ ನಾವೇ ಈಗಿನ ಸಮಸ್ಯೆಗಳನ್ನು ತಂದು ಕೊಂಡಿದ್ದೇವೆ ಎಂದರೆ ತಪ್ಪಾಗಲಾರದು. ನಾವು ನಮ್ಮ ಬದುಕನ್ನ ಸರಳ ಮಾಡಿಕೊಳ್ಳುವುದೇ ಇದಕ್ಕೆ ಉಳಿದಿರುವ ಏಕೈಕ ಪರಿಹಾರ.
ಹಕ್ಕಿಯ ಕನ್ನಡ ಹೆಸರು: ಮಲೆ ದಾಸಮಂಗಟ್ಟೆ
ಇಂಗ್ಲೀಷ್ ಹೆಸರು: Malabar Pied Hornbill
ವೈಜ್ಞಾನಿಕ ಹೆಸರು: Anthracoceros coronatus
ಚಿತ್ರ ಕೃಪೆ: ಮೋಹಿತ್ ಶೆಣೈ

ಈ 150ನೆಯ ಸಂಚಿಕೆಯೊಂದಿಗೆ ಹಕ್ಕಿಕಥೆ ಸರಣಿಗೆ ಅಲ್ಪ ವಿರಾಮ ಇಡುತ್ತಿದ್ದೇನೆ. ಇನ್ನೊಂದು ಹೊಸ ವಿನ್ಯಾಸದಲ್ಲಿ ಪರಿಸರದ ಕಥೆಗಳ ಮೂಲಕ ಮತ್ತೆ ನಿಮ್ಮ ಮುಂದೆ ಬರುತ್ತೇನೆ. ನಮಸ್ಕಾರ.
.......................................... ಅರವಿಂದ ಕುಡ್ಲ
ಅಧ್ಯಾಪಕ
ಮೂಡಂಬೈಲು ಹಿರಿಯ ಪ್ರಾಥಮಿಕ ಶಾಲೆ
ಬಂಟ್ವಾಳ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
+91 98448 98124
********************************************


Ads on article

Advertise in articles 1

advertising articles 2

Advertise under the article