ಪ್ರವಾಸ ಕಥನ : ಪೂರ್ವ ಕರಾವಳಿಯ ಅಪೂರ್ವ ಪ್ರವಾಸ..! - ಭಾಗ 3
Wednesday, May 8, 2024
Edit
ಪ್ರವಾಸ ಕಥನ : ಪೂರ್ವ ಕರಾವಳಿಯ ಅಪೂರ್ವ ಪ್ರವಾಸ..! - ಭಾಗ 3
ಲೇಖಕಿ : ಚಿತ್ರಾಶ್ರೀ ಕೆ ಎಸ್
ಸಹ ಶಿಕ್ಷಕರು (ಕಲಾ),
ಸರಕಾರಿ ಪ್ರೌಢಶಾಲೆ, ಬಡಗ ಎಕ್ಕಾರು,
ಮಂಗಳೂರು ಉತ್ತರ ವಲಯ.
ದಕ್ಷಿಣ ಕನ್ನಡ ಜಿಲ್ಲೆ
ವಿಶಾಖಪಟ್ಟಣದ ಹೃದಯಭಾಗದಲ್ಲಿದ್ದ ಜೀವ ವೈವೀಧ್ಯತಾ ಉದ್ಯಾನವನದ ಭೇಟಿ ನಮ್ಮ ಇಡೀ ಪ್ರವಾಸದ ಅತ್ಯುಪಯುಕ್ತ ಭಾಗ.
ಕೇವಲ ಮೂರು ಎಕರೆ ಜಾಗದೊಳಗೆ ಹಲವು ವಿಧದ ಸಾವಿರಾರು ಸಸ್ಯಗಳು.. ಅವುಗಳನ್ನು ಅವಲಂಬಿಸಿದ ನೂರಾರು ಬಗೆಯ ಚಿಟ್ಟೆಗಳ- ಕೀಟಗಳ ಸಂಗ್ರಹವಿರುವ ಸ್ಥಳ ಅದೂ ನಗರದ ಹೃದಯಭಾಗದಲ್ಲಿ? ಕಲ್ಪನೆಯನ್ನೂ ಮೀರಿದ ವಾಸ್ತವ ಕಣ್ಣೆದುರಿಗೆ ತೆರೆದುಕೊಂಡಾಗ ನಂಬಲೇಬೇಕಾಯ್ತು! ಮಳೆಕಾಡಿನ ಆರ್ಕಿಡ್ ಹಾಗೂ ಮರಳುಗಾಡಿನ ಕಳ್ಳಿ ಗಿಡಗಳ ಸಮೂಹ ಕೆಲವೇ ಮೀಟರ್ ಗಳ ಅಂತರದಲ್ಲಿ ಬೆಳೆದು ನಳನಳಿಸುತ್ತಿರುವುದು ಸಸ್ಯಪ್ರಿಯ ವಿಜ್ಞಾನಿ ಡಾ. ರಾಮಮೂರ್ತಿ ಎಂಬ ಅಪೂರ್ವ ವ್ಯಕ್ತಿಯ ಪ್ರೀತಿಯ ಆರೈಕೆಯಿಂದ!
ಈ ಸಸ್ಯಕಾಶಿಯನ್ನು ಬೆಳೆಸಿ ಉಳಿಸಿ ಮುಂದಿನ ಪೀಳಿಗೆಗೆ ಪರಿಚಯಿಸುವ ಅಪರೂಪದ ಕಾರ್ಯದಲ್ಲಿ ತೊಡಗಿರುವ ಡಾ. ರಾಮಮೂರ್ತಿ. ಅವರ ಮೊದಲ ಪ್ರಶ್ನೆಯೇ "ನಿಮಗೆ ಹೇಗೆ ಈ ಸ್ಥಳದ ಬಗ್ಗೆ ತಿಳಿಯಿತು?" ನಮಗೆ ವಿಚಿತ್ರವೆನಿಸಿತು! ಯಾವುದೋ park ಎಂದು ಭಾವಿಸಿ ತಿರುಗಾಡಲು ಬಂದವರೋ ಅಥವಾ ಪರಿಸರದ ಬಗೆಗೆ ಆಸಕ್ತಿಯಿಂದ ತಿಳಿಯಲು ಬಂದವರೋ ಎಂಬ ಅವರ ನೋಟದ ಕುತೂಹಲಕ್ಕೆ ಸಮಾಧಾನವಾಗುವಂತೆ ನಮ್ಮನ್ನು ನಮ್ಮ ಹವ್ಯಾಸಗಳ ಸಹಿತ ಪರಿಚಯಿಸಿಕೊಂಡ ತಕ್ಷಣ ಅವರ ಶಿಷ್ಯತ್ವ ದೊರೆಯಿತು! ಶಿಕ್ಷಕ ವೃತ್ತಿಯ ಬಗೆಗೆ ಸ್ವತಃ ಶಿಕ್ಷಕರಾದ ಅವರಿಗೆ ಇರುವ ಗೌರವಾದರ ಕಂಡು ಸಂತಸವಾಯ್ತು.
ಸಸ್ಯಗಳನ್ನು ಅವುಗಳ ವೈಜ್ಞಾನಿಕ ಹೆಸರು, ಸಾಮಾನ್ಯ ಹೆಸರು ಹಾಗೂ ಉಪಯುಕ್ತ ಗುಣಗಳ ಸಹಿತ ಪರಿಚಯಿಸುತ್ತಿದ್ದ ಅವರ ಅಗಾಧ ಜ್ಞಾನ ಸಮುದ್ರದಲ್ಲಿ ವಿಹರಿಸುವ ಭಾಗ್ಯ ನಮ್ಮದಾಗಿದ್ದಕ್ಕೆ ಅಚ್ಚರಿಪಡುತ್ತಾ ಜೊತೆಗೆ ಸಾಗಿದೆವು.
ಜುರಾಸಿಕ್ ಯುಗದ ಆದರೆ ಇಂದಿಗೂ ಬದಲಾಗದ ಸಸ್ಯವರ್ಗದ ಪರಿಚಯದೊಂದಿಗೆ ಆರಂಭವಾದ ವಿವರಣೆ "ಇದು ನೋಡಿ ಕರ್ಪೂರ ತುಳಸಿ, ಇದು ಲವಂಗ ತುಳಸಿ, ಮತ್ತಿದು ರುದ್ರ ತುಳಸಿ…" ಎಂದು ಆ ಗಿಡಗಳ ಒಂದೊಂದೇ ಎಲೆಯನ್ನು ಕಿತ್ತು ಕೈಗಿಟ್ಟು ಆಸ್ವಾದಿಸಿ ಅನುಭವಾತ್ಮಕ ಕಲಿಕೆ ಕಟ್ಟಿಕೊಟ್ಟರು. ತಾವು ಬೆಳೆಸಿದ ನಕ್ಷತ್ರ ಹಾಗೂ ರಾಶಿ ಆಧಾರಿತ ಸಸ್ಯಕ್ಷೇತ್ರದಲ್ಲಿ ನಮ್ಮ ಜನ್ಮ ನಕ್ಷತ್ರ- ಗ್ರಹಗಳ ಆಧಾರದಲ್ಲಿ ಮರಗಳನ್ನು ಹೆಸರಿಸಿ ಅದರೊಂದಿಗೆ ನಮ್ಮನ್ನು ನಿಲ್ಲಿಸಿ ಅದರ ಗುಣಗಳನ್ನು ಆಪ್ತವಾಗಿ ಪರಿಚಯಿಸಿದ್ದು ಅವುಗಳ ಬಗೆಗೆ ವಿಶೇಷ ಆಸಕ್ತಿ ಬೆಳೆಯುವಂತಿತ್ತು. ನನ್ನ ತಂದೆಯವರು ಹೆಸರಿಡುವಾಗಲೇ ನಕ್ಷತ್ರದ ಹೆಸರನ್ನೇ ನನಗಿಟ್ಟ ಕಾರಣ ನಕ್ಷತ್ರದ ಬಗೆಗೆ ಮೊದಲೇ ಪ್ರೀತಿ ಇತ್ತು.. ಅದಕ್ಕೆ ಬಿಲ್ವ ವೃಕ್ಷದ ಗುಣವನ್ನು ಹೊಂದಿಸಿ ಅವರ ವಿವರಣೆ ಕೇಳುವಾಗ ಆಹಾ! ಎಂತಹಾ ಭಾಗ್ಯವಿದು ಎನಿಸಿತು.
ಇದು ಪ್ರಾಚೀನ ಕಾಲದ ರಾಜ ಮನೆತನಗಳ ಶ್ಯಾಂಪೂ ಎಂದು Shampoo Ginger ಎಂಬ ಶುಂಠಿಯ ಪ್ರಬೇಧ ಅವರು ಪರಿಚಯಿಸಿದಾಗ ವಿಸ್ಮಯವಾಯ್ತು!
ಅದರ ನೈಸರ್ಗಿಕ ಬಣ್ಣ ಹಾಗೂ ಪರಿಮಳಗಳ ಜೊತೆಗೆ ಔಷಧೀಯ ಗುಣವೂ ಸೇರಿದ್ದು ಹಿಂದೆಲ್ಲ ಅದರ ರಸವನ್ನೇ ಶ್ರೀಮಂತರು ತಲೆಗೂದಲನ್ನು ತೊಳೆಯಲು ಬಳಸುವಷ್ಟು ಅದು ಪ್ರಸಿದ್ಧಿ ಪಡೆದಿತ್ತು.
ಇದು ರಕ್ತ ಚಂದನ, ಇದು ಶ್ರೀಗಂಧ ಎಂದು ಪರಿಚಯಿಸುತ್ತಾ ಮುಂದುವರಿದವರು ಶ್ರೀಗಂಧಕ್ಕೆ ಸಂಬಂಧಿಸಿದಂತೆ ಪೌರಾಣಿಕ ನಂಬಿಕೆಯೊಂದನ್ನು ಹಂಚಿಕೊಂಡರು- ಹಿರಣ್ಯ ಕಶ್ಯಪುವನ್ನು ಕೊಲ್ಲಲು ನರಸಿಂಹಾವತಾರ ತಳೆದ ದೇವರ ಉಗ್ರ ಕೋಪ ಶಮನವಾಗಲು ಪ್ರಹ್ಲಾದನು ಶ್ರೀಗಂಧವನ್ನು ನರಸಿಂಹ ದೇವರಿಗೆ ಲೇಪಿಸಿದನಂತೆ! ಶ್ರೀಗಂಧದ ತಂಪೆರೆಯುವ ಗುಣ ತಿಳಿಸುವ ಈ ಬಗೆಯ ಪೌರಾಣಿಕ ನಂಬಿಕೆಗಳ ಹಿಂದೆ ಸಸ್ಯಗಳ ಔಷಧೀಯ ಮೌಲ್ಯಗಳನ್ನು ಮುಂದಿನ ಪೀಳಿಗೆಗೆ ಪರಿಚಯಿಸುವ ಅಪೂರ್ವ ಆಲೋಚನೆ ಇರುವುದನ್ನು ನಾವು ಗುರುತಿಸಬೇಕಷ್ಟೇ!
ಮುಂದುವರಿದು ಸರ್ಪಗಂಧವನ್ನು ಪರಿಚಯಿಸುವಾಗ 'ಇದು ವಿಷವಿಲ್ಲದ ಹಾವಿನ ಕಡಿತಕ್ಕೆ ಬಳಕೆಯಾಗುವ ಪಾರಂಪರಿಕ ಮದ್ದು' ಎಂದು ಸ್ಪಷ್ಟಪಡಿಸಿದರು.