-->
ಶಿಕ್ಷಕರ ಸ್ಕೂಲ್ ಡೈರಿ : ಸಂಚಿಕೆ - 48

ಶಿಕ್ಷಕರ ಸ್ಕೂಲ್ ಡೈರಿ : ಸಂಚಿಕೆ - 48

ಶಿಕ್ಷಕರ ಸ್ಕೂಲ್ ಡೈರಿ : ಸಂಚಿಕೆ - 48
ಲೇಖಕರು : ಶ್ರೀಮತಿ ಶ್ವೇತಾ ಹಳದೀಪುರ
ಸರಕಾರಿ ಪದವಿ ಪೂರ್ವ ಕಾಲೇಜು 
ಪ್ರೌಢಶಾಲಾ ವಿಭಾಗ 
ಕಾಟಿಪಳ್ಳ 7ನೇ ವಿಭಾಗ
ಮಂಗಳೂರು, ದಕ್ಷಿಣ ಕನ್ನಡ ಜಿಲ್ಲೆ
Mob: +91 94820 43140
          
                   

ಈ ಸಲದ ಎಸ್ ಎಸ್ ಎಲ್ ಸಿ ಫಲಿತಾಂಶ ಬಂದಾಗ ನನಗೆ ದಿಗ್ಭ್ರಮೆಯಾಗಿತ್ತು. ಇಷ್ಟು ವರ್ಷದ ನನ್ನ ಸೇವೆಯಲ್ಲಿ ಕೋವಿಡ್ ನಂತರದ ಅವಧಿಯಲ್ಲಿ ನೂರಕ್ಕೆ ನೂರು ಫಲಿತಾಂಶ ಗಣಿತದಲ್ಲಿ ದಾಖಲಾಗಿತ್ತು. ಇದಕ್ಕೆ ಕಾರಣ ತಿಳಿದರೆ ನೀವು ಸಹ ಮೂಕ ವಿಸ್ಮಿತರಾಗುತ್ತೀರಿ.

ಪ್ರೌಢಾವಸ್ಥೆ ಎನ್ನುವುದು ಒಂದು ವಿಚಿತ್ರವಾದ ಮನುಷ್ಯನ ಜೀವನದ ಘಟ್ಟ. ಆ ಸಮಯದಲ್ಲಿ ವಿಶೇಷವಾಗಿ ಗಂಡು ಮಕ್ಕಳಿಗೆ ನಾನೇ ಶ್ರೇಷ್ಠ ನಾನೇ ಬುದ್ದಿವಂತ... ನಾನೇ ಚಂದ... ನನ್ನನ್ನೇ ಎಲ್ಲರೂ ಗಮನಿಸಬೇಕು... ಎನ್ನುವ ವಿಶೇಷ ಅಭಿಮಾನವಿರುತ್ತದೆ. ಅವನ ಅಭಿಮಾನಕ್ಕೆ ಭಂಗ ಬಂದಾಗ ಯಾವುದೇ ಯೋಚನೆ ಮಾಡದೇ ಗುರು ಹಿರಿಯರು ಎಂಬುದನ್ನು ಲೆಕ್ಕಿಸದೆ ಅವರಿಗೆ ತಿರುಗಿ ಬೀಳುವುದು ಅವರ ಮಾತನ್ನು ಕಡೆ ಗಣಿಸುವುದು ಎಷ್ಟೇ ಬುದ್ಧಿವಾದ ಹೇಳಿದರೂ ಕಿವಿಗೆ ಹಾಕಿಸಿಕೊಳ್ಳುವ ಗೋಜಿಗೆ ಹೋಗದೇ ತನ್ನದೇ ದಾರಿಯಲ್ಲಿ ನಡೆಯುವುದು.... ಹೀಗೆ ಎಲ್ಲವನ್ನೂ ನೋಡಿದ್ದೇವೆ. ನೀವು ಪ್ರೌಢಶಾಲಾ ಶಿಕ್ಷಕರಾಗಿದ್ದರೆ ಇದೇನು ನಿಮಗೆ ಹೊಸತಲ್ಲ. ಇಂತಹ ಅನೇಕ ಘಟನೆಗಳು ನಮ್ಮ ಕಣ್ಣೆದುರಲ್ಲಿ ದಿನನಿತ್ಯವೂ ಜರುಗುತ್ತಿರುತ್ತವೆ. ನಾವು ತುಂಬಾ ಒಳ್ಳೆಯ ವಿದ್ಯಾರ್ಥಿ ಎಂದು ಮನಸ್ಸಿನಲ್ಲಿ ಎಣಿಸಿದರೂ ಆ ವಿದ್ಯಾರ್ಥಿ ಶಿಕ್ಷಕರಿಗೆ ಎದುರುತ್ತರ ನೀಡುವುದನ್ನು ಕಾಣುತ್ತೇವೆ. 
     ಈ ಸಲದ ಎಸ್‌ ಎಸ್‌ ಎಲ್‌ ಸಿ ಬ್ಯಾಚ್ ನಲ್ಲಿ ಅಂತಹ ಸ್ವಭಾವದ್ದೇ ಮಕ್ಕಳು. ಆ ಮಕ್ಕಳನ್ನು ಹೇಗೆ ತಿದ್ದುವುದು ಎನ್ನುವುದೇ ಸವಾಲಾಗಿತ್ತು. ಗಂಡು ಮಕ್ಕಳನ್ನು ಹೆಣ್ಣು ಮಕ್ಕಳನ್ನು ಬೇರೆ ಬೇರೆ ಮಾಡಿ ಪ್ರತ್ಯೇಕ ತರಗತಿಗಳನ್ನು ನಡೆಸಿದರೂ ಗಂಡು ಮಕ್ಕಳನ್ನು ಹತೋಟಿಗೆ ತರಲು ತುಂಬಾ ಕಷ್ಟವಾಗುತ್ತಿತ್ತು. ದಿನ ಕಳೆದಂತೆ ಎಸ್ ಎಸ್ ಎಲ್ ಸಿ ಫಲಿತಾಂಶದ ಚಿಂತೆ ಕಾಡುತ್ತಿತ್ತು.

ಆದರೂ ಛಲ ಬಿಡದ ಮನಸ್ಸು. ಒಂದು ದಿನ ವಿದ್ಯಾರ್ಥಿಗಳೊಂದಿಗೆ ಮಾತನಾಡುವಾಗ, "ನೀವೆಲ್ಲರೂ ನನ್ನ ವಿಷಯದಲ್ಲಿ ಉತ್ತೀರ್ಣರಾದರೆ ನಿಮ್ಮನ್ನು ವಿಸ್ಮಯ ವಾಟರ್ ಪಾರ್ಕ್ ಗೆ ಕರೆದುಕೊಂಡು ಹೋಗುತ್ತೇನೆ" ಎಂದೆ. ಅಸಾಧ್ಯವಾದುದನ್ನು ಸಾಧ್ಯವಾಗಿಸಲು ನಾಂದಿ ಹಾಡಿತು. ಅದು ಇಷ್ಟು ಸುಲಭವೆಂದು ನನಗೆ ಎಣಿಸಿರಲಿಲ್ಲ. ಆಗ ಒಟ್ಟು 18 ಮಕ್ಕಳಿದ್ದ ಆ ಗುಂಪಿನಲ್ಲಿ ನಾಲ್ಕು ಸ್ವರಗಳು ಎಚ್ಚೆತ್ತುಕೊಂಡು ನೀವು ಹೇಳುವುದು ನೂರಕ್ಕೆ ನೂರು ಸತ್ಯವೇ..? ಎಂದು ಮರು ಪ್ರಶ್ನೆ ಹಾಕಿದರು. ನಾನು ಸಹ ಮನಸ್ಸಿನಲ್ಲಿ ಇದು ಅಸಾಧ್ಯವಾದ ಮಾತು ಎಂದು ಎಣಿಸಿ ಅವರಿಗೆ ಸ್ವರ ಜೋಡಿಸಿ ನೂರಕ್ಕೆ ನೂರು ಸತ್ಯ. ನೀವು ಪಾಸ್ ಆಗಿ ತೋರಿಸಿ ನಾನು ವಿಸ್ಮಯ ತೋರಿಸುತ್ತೇನೆ ಎಂದು ಹೇಳಿಬಿಟ್ಟೆ. ಪ್ರೌಢ ಮನಸ್ಸುಗಳು ಎಷ್ಟು ಶಕ್ತಿಶಾಲಿ. ಎಣಿಸಿದನ್ನು ಮಾಡಿ ತೋರಿಸುವ ಶಕ್ತಿ ಆ ಮನಸ್ಸುಗಳಿಗೆ ಇದೆ ಎಂದು ನನಗೆ ಗೊತ್ತಾದದ್ದು ಫಲಿತಾಂಶ ಬಂದ ದಿನವೇ...! ಐದು ಗಂಡು ಮಕ್ಕಳು ಸೇರಿ ತಮ್ಮ ತರಗತಿಯಲ್ಲಿ ಕಲಿಕೆಯಲ್ಲಿ ಹಿಂದುಳಿದ ಎಲ್ಲಾ ವಿದ್ಯಾರ್ಥಿಗಳಿಗೆ ಕಲಿಸಲು ಪ್ರಾರಂಭಿಸಿದ್ದರು. ಮನೆಗೆ ಹೋಗಿ ಸಹ ಒಂದೊಂದು ಮನೆಯಲ್ಲಿ ನಾಲ್ಕು ಜನ ವಿದ್ಯಾರ್ಥಿಗಳು ಸೇರಿ ಕಲಿಯಲು ಪ್ರಾರಂಭಿಸಿದ್ದರು. ನಾನು ಬಿಡಿಸಿದ ಎಲ್ಲಾ ಮಾದರಿ ಪ್ರಶ್ನೆ ಪತ್ರಿಕೆಗಳನ್ನು ಅದರಲ್ಲಿ ಇರುವ ಸುಲಭ ಪ್ರಶ್ನೆಗಳನ್ನು ಅವರಿಗೆ ಹೇಳಿಕೊಡಲು ಪ್ರಾರಂಭಿಸಿದ್ದರು. ಇದೆಲ್ಲಾ ಅವರು ಹೇಳುವಾಗ ಅವರು ಸುಮ್ಮನೆ ನನಗೆ ಹೇಳುತ್ತಾರೆ ಎಂದು ಎಣಿಸಿದ್ದೆ. ಆದರೆ ವಿವೇಕಾನಂದರು ಹೇಳುವ ಹಾಗೆ ಯುವಶಕ್ತಿ ಸೇರಿದರೆ ಎಂತಹ ಕಠೋರ ಕೆಲಸವನ್ನು ಸಹ ಸಾಧಿಸಬಹುದೆಂದು ಇವರು ಮಾಡಿ ತೋರಿಸಿದರು.
 
ಗಣಿತ ಪರೀಕ್ಷೆಯ ದಿನ ಮತ್ತು ಪರೀಕ್ಷೆಗೆ ಇದ್ದ ಮೂರು ದಿನಗಳಲ್ಲಿ ತಮ್ಮ ಸಹಪಾಠಿಗಳಿಗೆ ಅಗತ್ಯವಿದ್ದ ಎಲ್ಲಾ ಕಲಿಕಾಂಶಗಳನ್ನು ಅವರ ಭಾಷೆಯಲ್ಲಿ ಕಲಿಸಿ, ಕಲಿಸಿ ಅವರಿಗೆ ಕನಿಷ್ಠ ಅಂಕ ಬರುವ ಹಾಗೆ ಶ್ರಮಿಸಿದ್ದರು. ಫಲಿತಾಂಶ ಬಂದ ದಿನ ನನಗಿಂತ ಆತುರ ಅವರಿಗೆ. ಎಲ್ಲಾ ಗಂಡು ಮಕ್ಕಳು ವಿದ್ಯಾರ್ಥಿಗಳು ಉತ್ತೀರ್ಣರಾಗಿರುವ ಸುದ್ದಿ ತಿಳಿದು ಖುಷಿಯೋ ಖುಷಿ. ನನಗೆ ಮಾತ್ರ ಪ್ರಾಣ ಸಂಕಟ. ಈಗ ಹೇಳಿದ ಮಾತಿನಂತೆ ದೂರದ ವಿಸ್ಮಯಕ್ಕೆ ಅವರನ್ನು ಕರೆದುಕೊಂಡು ಹೋಗುವ ಜವಾಬ್ದಾರಿ ನನ್ನ ಮೇಲಿದೆ. ಆದರೂ ನನಗೆ ಸಂತೋಷವಾಗಿದೆ. ಇದರಿಂದ ಕಲಿತ ಪಾಠ.... ಪ್ರೌಢ ಮನಸ್ಸುಗಳು ಒಂದಾದರೆ ಯಾವುದನ್ನು ಸಹ ಸಾಧಿಸಿ ತೋರಿಸಬಲ್ಲರು ಎಂಬುದಕ್ಕೆ ಈ ಒಂದು ಘಟನೆ ಸಾಕ್ಷಿ ಯಾಯಿತು. ಈ ಗಂಡು ವಿದ್ಯಾರ್ಥಿಗಳೊಂದಿಗೆ ಪೈಪೋಟಿಗೆ ಇಳಿದ, ಉಳಿದ 25 ವಿದ್ಯಾರ್ಥಿನಿಯರು ಸಹ ಗಣಿತದಲ್ಲಿ ಪಾಸಾಗಿ ನನ್ನ ವಿಷಯಕ್ಕೆ ಶೇಕಡ 100 ಫಲಿತಾಂಶ ತಂದು ಕೊಟ್ಟಿದ್ದರು. ಮನಸಿದ್ದರೆ ಮಾರ್ಗ, ಒಗ್ಗಟ್ಟಿಗೆ ಬಲ, ಪರಿಶ್ರಮದಿಂದ ಅಸಾಧ್ಯವಾದುದನ್ನು ಸಾಧಿಸಬಹುದು ಎಂದು ನನ್ನ ಶೈಕ್ಷಣಿಕ ಜೀವನದಲ್ಲಿ ನಾನು ಅರಿತುಕೊಂಡ ಸತ್ಯವಾಯಿತು.
........................ ಶ್ರೀಮತಿ ಶ್ವೇತಾ ಹಳದೀಪುರ
ಸರಕಾರಿ ಪದವಿ ಪೂರ್ವ ಕಾಲೇಜು 
ಪ್ರೌಢಶಾಲಾ ವಿಭಾಗ 
ಕಾಟಿಪಳ್ಳ 7ನೇ ವಿಭಾಗ
ಮಂಗಳೂರು, ದಕ್ಷಿಣ ಕನ್ನಡ ಜಿಲ್ಲೆ
Mob: +91 94820 43140
*******************************************


Ads on article

Advertise in articles 1

advertising articles 2

Advertise under the article