-->
ಸವಿಜೇನು : ಸಂಚಿಕೆ - 08

ಸವಿಜೇನು : ಸಂಚಿಕೆ - 08

ಸವಿಜೇನು : ಸಂಚಿಕೆ - 08
ಲೇಖಕರು: ನಾಗೇಂದ್ರ ಬಂಜಗೆರೆ, ಶಿಕ್ಷಕರು 
ಸರಕಾರಿ ಹಿರಿಯ ಪ್ರಾಥಮಿಕ ಶಾಲೆ, ಮಿಂಚೇರಿ
ಬಳ್ಳಾರಿ ತಾಲೂಕು ಮತ್ತು ಜಿಲ್ಲೆ
Mob : +91 99029 12684

      ಈ ಪ್ರಕೃತಿಯಲ್ಲಿ ಅತ್ಯಂತ ಸಣ್ಣ ಜೀವಿ ತನ್ನದೇ ಆದ ಪ್ರಮುಖ ಪಾತ್ರ ವಹಿಸುತ್ತದೆ. ಎಷ್ಟೋ ಬಾರಿ ಪ್ರಕೃತಿಯನ್ನು ಸಮತೋಲನ ಮಾಡುವಲ್ಲಿ ಬಹಳ ಪ್ರಧಾನ ಪಾತ್ರವನ್ನೇ ವಹಿಸುವ ಜೇನುಹುಳುಗಳ ಪಾತ್ರ ನಿಸರ್ಗದಲ್ಲಿ ಬಹಳ ದೊಡ್ಡದು. ಆ ಜೇನಿನ ಸುತ್ತ ಕಲಿತ ಪಾಠಗಳ, ಥ್ರಿಲ್ಲಿಂಗ್ ಅನುಭವಗಳ, ನೀವು ಕಂಡಿರದ ಕೇಳಿರದ ಅಗತ್ಯವಾಗಿ ತಿಳಿಯಲೇ ಬೇಕಾದ ಮಾಹಿತಿಯುತ 'ಸವಿಜೇನು' ಎಂಬ ವಿಶೇಷ ಶೀರ್ಷಿಕೆಯಡಿಯಲ್ಲಿ ವಿಸ್ತಾರವಾದ ಬರಹ ಸರಣಿಗಳನ್ನು ನೀವೂ ಓದಿ ಆನಂದಿಸಿ... ನಾಗೇಂದ್ರ ಬಂಜಗೆರೆ, ಶಿಕ್ಷಕರು ಮತ್ತು ಬರಹಗಾರರು


ಮುದ್ದಿನ ಮಗಳು ತನೇಹಾಳ ಜನನವಾಗಿತ್ತು. ಬಳ್ಳಾರಿಯ ಬಿಸಿಲು ಮತ್ತು ಧೂಳಿಗೆ ಬೇಸತ್ತು ಟೂ ವೀಲರ್ ಬದಲು ಯಾವೂದಾದರೂ ಸೆಕೆಂಡ್ ಹ್ಯಾಂಡ್ ಕಾರ್ ಕೊಳ್ಳುವ ನಿರ್ಧಾರ ಮಾಡಿದ್ದೆ. ಗೆಳೆಯ ಜೇಮ್ಸ್ ಗೆ ಕರೆಮಾಡಿ ವಿಚಾರಿಸಿದೆ. ಜೇಮ್ಸ್ ನ ಮತ್ತೊಬ್ಬ ಗೆಳೆಯ ಹಿರಿಯೂರಿನಲ್ಲಿ ಕಾರ್ ಗ್ಯಾರೇಜ್ ಮಾಲಿಕ ಶ್ರೀಧರ್ ಅವರನ್ನು ಸಂಪರ್ಕಿಸಿದಾಗ ಬರ್ರಿ ಬ್ರದರ್ ನೋಡೋಣ ಎಂದು ಹೇಳಿದ್ದರು.

2014 ನೇ ಇಸವಿಯ ಮಾರ್ಚ್ ತಿಂಗಳಲ್ಲಿ ಒಂದಷ್ಡು ದುಡ್ಡು ಹಿಡಿದುಕೊಂಡು ಹಿರಿಯೂರಿನ ಜೇಮ್ಸ್ ಮನೆಗೆ ಬಂದೆ. ಜೇಮ್ಸ್ ನನ್ನ ಹಳೆಯ ಸ್ನೇಹಿತ. ನಾನು ಮನೆಗೆ ಹೋದ ಸಂಭ್ರಮಕ್ಕೆ ವೆರೈಟಿ ವೆರೈಟಿ ಎರಡೆರಡು ತಿಂಡಿ, ಮಿರ್ಚಿ ಬೋಂಡ ಮಿಕ್ಚರ್ ಐಟಮ್ಸ್ ಮಾಡಿಸಿದ್ದ. ಇಬ್ಬರೂ ತಿಂಡಿಯನ್ನೇ ಊಟದಂತೆ ಹೊಟ್ಟೆತುಂಬಾ ಮಾಡಿ ಶ್ರೀಧರ್ ಗ್ಯಾರೇಜ್ ಬಳಿ ಬಂದೆವು. ನಮ್ಮ ಬಜೆಟ್ ಇಷ್ಟು ಎಂದು ಹೇಳಿದ್ದಕ್ಕೇ ಅವರು ಯಾರ್ ಯಾರಿಗೋ ಕಾಲ್ ಮಾಡಿ ಇಂಥಾ ಬಜೆಟ್ ಗೆ ಒಂದು ಕಾರು ಬೇಕು ವಿಚಾರಿಸಿದರು. ಅದಕ್ಕೆ ಅಮರಾಪುರದಲ್ಲಿ ಒಂದು ಕಾರ್ ಇದೆ, ಆದರೆ ಯಾವುದೋ ಪಾರ್ಟಿ ನೋಡಿಹೋಗಿದ್ದಾರೆ ಸಂಜೆಗೆ ಪೈನಲ್ ಮಾತು ತಿಳಿಸುವೆವು ಎಂದು ಹೇಳಿದ್ದರಿಂದ ಸಂಜೆ ನೋಡುವ ಬಿಡಿ ಜೇಮ್ಸ್ ಎಂದು ಹೇಳಿ ಬೈಕ್ ಹತ್ತಿ NH-4 ಹೈವೇ ಹಿಡಿದೆವು.

ಜೇಮ್ಸ್ ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರಗೊಂಡು ಪಾದ್ರಿಯೂ ಆಗಿದ್ದುದ್ದುದರಿಂದ ಅವರ ಚರ್ಚಿನ ಸದಸ್ಯರೊಬ್ಬರು ಹೈವೇ ಪಕ್ಕ ಹೊಸದಾಗಿ ಆರಂಭ ಆಗಬೇಕಿದ್ದ ಹೋಟೆಲ್ ನ್ನು ಹೋಟೇಲ್ನವರ ಚರ್ಚಿನ ಪಾದ್ರಿಯೂ ಆಗಿದ್ದ ಜೇಮ್ಸ್ ಉದ್ಘಾಟನೆ ಮಾಡಬೇಕಿತ್ತು. ಪೂರ್ವ ನಿರ್ಧರಿತ ಯೋಜನೆಯಂತೆ ಬಾ ಇಲ್ಲಿ ಒಂದು ಹೋಟೆಲ್ opening ceremony ಇದೆ ಹೋಗೋಣ ಎಂದು ಇಬ್ಬರೂ Pulsar ಬೈಕ್ ಹತ್ತಿ ಹೊರಟೆವು. ಹಿರಿಯೂರಿನಿಂದ ಸಾಣೆಕೆರೆಗೆ ಬರುವ ರಸ್ತೆ ಮಗ್ಗುಲಲ್ಲಿ ಅನೇಕ ಲಂಟಾನ ಗಿಡದ ಪೊದೆಗಳು ತುಂಬಾ ಇವೆ. ಗಾಡಿಯಲ್ಲಿ ಬರುತ್ತಿದ್ದಾಗ ಜೇಮ್ಸ್ ಗಾಡಿ ನಿಲ್ಸು.. ಜೇನು ಇದೆ ಎಂದೆ.. 70-80 ರ ವೇಗದಲ್ಲಿ ಇದ್ದ ಗಾಡಿ ನಾನೇನೊ ಹೇಳಿದ್ದು ಕೇಳದೇ ನಾನೇನು ಹೇಳುತ್ತಿದ್ದೇನೆ ಎಂದು ನಿಧಾನವಾಗಿ ಬ್ರೇಕ್ ಹಾಕುತ್ತಾ ನಿಲ್ಲಿಸಿದ.‌

ಏನು ಮಾಷ್ಟ್ರೇ ?? ಏನೋ ಹೇಳಿದೆಯಲ್ಲಾ??

ಜೇಮ್ಸ್ ಹಿಂದೆ ಒಂದು ಗಿಡದಲ್ಲಿ ಜೇನು ಇದೆ..

ಹ್ಞಾಂ...ಜೇನಾ...?? ಯಾವ ಗಿಡದಲ್ಲಿ?? ಎಂದು ಇವನದು ಜೇನಿನ ಭ್ರಮೆ.. ಇಷ್ಟು ಸ್ಪೀಡ್ ಲ್ಲಿ ಹೋಗುವಾಗ ಜೇನು ಕಾಣಿಸಿತಾ ಇವನಿಗೆ ಎನ್ನುವ ರೀತಿಯಲ್ಲಿ' ಬಾ ನೋಡಾನಾ...' ಎಂದು ಗಾಡಿ ತಿರುಗಿಸಿದ...

ನಿಲ್ಲು... ನಿಲ್ಲು... slow... ಅಗೋ ಆ ಗಿಡದಲ್ಲಿ ಇದೆ ನೋಡು...

ಎಲ್ಲಿದೆ ಮಾಸ್ಟ್ರೇ?? ಎಂದು ಪಿಳಿ ಪಿಳಿ ನೋಡುತ್ತಿದ್ದ...

ಏ ಆ ಗಿಡದಲ್ಲಿ ಕರ್ರಗೆ ಕಾಣಿಸುತ್ತಿದೆ ಅಲ್ಲ ಮಾರಾಯ... ನಿನಗೆ ಕಾಣಿಸುತ್ತಿಲ್ಲವೇ??

ಹ್ಞೂಂ ಹು... ಕಾಣ್ತಾ ಇಲ್ಲ...

ಗಾಡಿಯಲ್ಲೇ ಕುಳಿತಿದ್ದ ನಾನು ಕೆಳಗಿಳಿದು ಬಾ ಇಲ್ಲಿ ಎಂದು ರಸ್ತೆ ಇಳಿದು ಲಂಟಾನ ಗಿಡದ ಸಮೀಪಕ್ಕೆ ಇಬ್ಬರೂ ಬಂದೆವು. ತೋರು ಬೆರಳ ತೋರಿಸಿ ಹೇಳಿದೆ ಕಾಣ್ತಿದೆಯಾ ಈಗ???

ಹೌದಲ್ಲೋ... ಅಬ್ಬಬ್ಬ್ಬ...

ನಿನ್ನವೇನು ಕಣ್ಣೊ... ಇಷ್ಟು ಸ್ಪೀಡ್ ಆಗಿ ಹೋಗುವಾಗ ಇದು ನಿನ್ನ ಕಣ್ಣಿಗೆ ಬಿದ್ದಿದೆಯಲ್ಲಾ??? ನನಗೆ ನಿಂತು ನೋಡಿದರೂ ಕಾಣ್ತಾ ಇಲ್ಲ... ಲೇ... ಅಬ್ಬಾ ಬ್ಬಾ... ಎಂದು ಜೇಮ್ಸ್ ನನ್ನ ಮುಖ ಮುಖ ನೋಡುತ್ತಿದ್ದ.

ಅಲ್ಲೇ ಬಿದ್ದಿದ್ದ ಸೊಪ್ಪೆದಂಟೊಂದನ್ನು ತೆಗೆದು ತುಪ್ಪದ ಇರುವಿಕೆ ಪರೀಕ್ಷಿಸಿದೆ. ನಿನ್ನೆಯೋ ಮೊನೆಯೋ ಕುಳಿತ ಹುಳುಗಳು ಅಂಡಾಕಾರವಾಗಿ ಕೂತಿವೆ. ಜೇನಿನ ರೊಟ್ಟಿಯನ್ನು ಕಟ್ಟಿದ್ದರೆ ಅಗಲವಾಗಿ ಕಾಣುತ್ತದೆ. ಕೆಲವೇ ದಿನಗಳ ಹಿಂದೆ ಕುಳಿತಿದ್ದರೆ ಗುಪ್ಪಗೆ ಒಂದರ ಕಾಲೊಂದನ್ನು ಜಾಲದಂತೆ ಹಿಡಿದುಕೊಂಡು ಗುಪ್ಪಗೆ ಮೊಟ್ಟೆಯಾಕಾರದಲ್ಲಿ ಕುಳಿತ್ತಿರುತ್ತಾವೆ. ದಿನಕಳೆದಂತೆ ಗೂಡು ರಚನೆಯಾದ ಮೇಲೆ ಒಂದರ ಕಾಲು ಒಂದು ಹಿಡಿದು ಕೊಳ್ಳದೇ ಸ್ವತಂತ್ರವಾಗಿ ಜೇನು ತಟ್ಟಿಯ ತುಂಬೆಲ್ಲಾ ಓಡಾಡುತ್ತಾವೆ.

ಜೇಮ್ಸ್ ಜೇನು ತುಪ್ಪ ಇಲ್ಲ... ನಿನ್ನೆಯೋ ಮೊನ್ನೆಯೋ ಇಲ್ಲಿ ಬಂದು ಕುಳಿತಿವೆ. ಕೀಳಲಾ ಎಂದೆ...

ಜೇಮ್ಸ್ ; ಹೇ.."ತುಪ್ಪ ಇಲ್ಲ ಅಂದ್ರೆ ಸುಮ್ ಸುಮ್ಮನೇ ಯಾಕೆ ಕೀಳ್ತೀಯಾ?? ಬೇಡ ಬಾ ಅಲ್ಲಿ ಹತ್ತು ಗಂಟೆಗೆ ಹೋಟಲ್ ಓಪನಿಂಗ್ ಗೆ ಹೇಳಿದ್ರೂ... ಈಗಾಗಲೇ ಹನ್ನೊಂದು ಕಾಲು ಬಾ ಹೊಗೋಣ ಟೈಮ್ ಆಗತ್ತೆ ಬಾ ಗಾಡಿ ಹತ್ತು ಹೋಗೋಣ ಎಂದನು...

ಬೇಗನೇ ಹೋಗಬೇಕಾಗಿದ್ದುರಿಂದ ಅದನ್ನು ಹಾಗೆ ಬಿಟ್ಟು ಬೈಕು ಹತ್ತಿದೆ. ಜೇಮ್ಸ್ಗೆ ನನ್ನ ಈ ಜೇನು ಕೀಳುವ ಕಸುಬಿನ ಬಗ್ಗೆ ಗೊತ್ತಿರಲಿಲ್ಲ. ಅವನು ನನಗೆ ಸಿಟಿಯಲ್ಲೇ ಪರಿಚಯ ಆದುದ್ದರಿಂದ ನಮ್ಮ ಹಳ್ಳಿಯ ಸೊಗಡಿನ ಕಸುಬು ಪರಿಚಯಿಸುವ ಸಂದರ್ಭ ಬಂದಿರಲಿಲ್ಲ. ದಿಢೀರನೇ ಇಂದು ವೇಗವಾಗಿ ಹೋಗುವಾಗಲೇ ಜೇನನ್ನು ಗುರುತಿಸಿದ್ದುದುದರಿಂದ ಜೇಮ್ಸ್ ಗೆ ಅಚ್ಚರಿಯೂ, ಪ್ರಶ್ನಾರ್ಥಕವೂ ಆಗಿತ್ತು...

ಅಲ್ಲಿ ಹೋಟೆಲ್ ópening ಉತ್ಸವಕ್ಕೆ ಜೇಮ್ಸ್ ನ ಆಗಮನಕ್ಕಾಗಿಯೇ ಕಾಯುತ್ತಿದ್ದ ಹತ್ತಿಪ್ಪತ್ತು ಜನ ನಾವು ಹೋದ ತಕ್ಷಣವೇ ಅವರ ಕ್ರಿಶ್ಚಿಯನ್ ಧರ್ಮದಂತೆ ಪ್ರಾರ್ಥನೆ ಮಾಡಿದರು. ನನಗೆ ಈ ಪ್ರಾರ್ಥನೆಗಳ ಹಾಡಲು ಬಾರದೆ ಇದ್ದುದರಿಂದ ನಾನು ಕೇವಲ ಮೂಕನಂತೆ ಹಾಜರಿ ಇದ್ದೆ. ಅದಾದ ನಂತರ ನಾನು ಮತ್ತು ಜೇಮ್ಸ್ ಇಬ್ಬರೂ ಟೇಪ್ ಕಟ್ ಮಾಡುವುದರ ಮೂಲಕ ವಿದ್ಯುಕ್ತವಾಗಿ ಹೋಟೆಲ್ ಉದ್ಘಾಟನೆ ಮಾಡಿಬಿಟ್ಟೆವು. ಒಳಗಡೆ ಹೋಗಿ ಸುತ್ತಲೂ ನೋಡಿ ಕಿಚನ್ ಅಲ್ಲಿ ಲುಂಗಿ ಟವೆಲ್ ಹಾಕಿ ನಿಂತಿದ್ದ ಸಾಧಾರಣ ಎತ್ತರದ ಒಬ್ಬ ವ್ಯಕ್ತಿಯನ್ನು "ಏನ್ ಕೆಂಚಣ್ಣ ಅರಾಮಿದ್ದೀಯಾ?" ಎಂದು ಜೇಮ್ಸ್ ಕೇಳಿದ.

"ಹ್ಞೂ ಪಾಸ್ಟರ್ ಅರಾಮಿದ್ದೀನಿ.."

ಈ ಜೇಮ್ಸ್ ಮಾತಾಡಿಸಿದ ಕೆಂಚಪ್ಪನೇ ಈ ಹೋಟೆಲ್ ನ ಮುಖ್ಯ ಬಾಣಸಿಗ... ಭಟ್ಟ...

ಜೇಮ್ಸ್: ಏನ್ ಮಾಡೀರಾ ಭಟ್ರೆ ಉಣ್ಣಾಕೆ ?

ಭಟ್ಟ: ಚಿಕನ್ ಬಿರಿಯಾನಿ, ಕಬಾಬ್ ಪಾಸ್ಟ್ರೇ..

ಬಿರಿಯಾನಿ ಪಾತ್ರೆಯ ಮುಚ್ಚಳ ಸರಿಸಿ ಎಂಟತ್ತು ಅಗುಳು ಬಾಯಲ್ಲಿ ಹಾಕಿ ನೋಡಿ ಅಗೆದು ನುಂಗಿ ಹ್ಞೂ... ಚೆನ್ನಾಗಿ ಮಾಡಿಯಾ ಎಂದು ಜೇಮ್ಸ್ ಹೇಳಲು ಕುತ್ಕೋಳಿ ಪಾಸ್ಟರೇ ಊಟ ಮಾಡುವಿರಂತೆ ಎಂದು ವಾಟರ್ ಬಾಟಲ್, ಪ್ಲೇಟ್ ಕೊಟ್ಟು ನಮ್ಮಿಬ್ಬರನ್ನು ಕೂರಿಸಿದರು.

ಜೇಮ್ಸ್: ಕೆಂಚಣ್ಣ ಬಾರಪ್ಪ ಇಲ್ಲಿ ಎಂದು ಕರೆದ.

ಕೆಂಚಣ್ಣ: 'ಹೇಳಿ ಪಾಸ್ಟರೇ ..' ಎಂದು ವಿನಮ್ರವಾಗಿ ಬಂದು ನಿಂತರು.

ಜೇಮ್ಸ್ : ಮೇಷ್ಟ್ರೆ.. ಇವನು ಯಾರ್ ಗೊತ್ತಾ?

ನಾನು; ಕೆಂಚಪ್ಪನ ಮುಖ ನೋಡುತ್ತಾ...ಗೊತ್ತಾಗುತ್ತಿಲ್ಲಪ್ಪ..

ಕೆಂಚಪ್ಪ : ಹೇ ಬಿಡ್ರಿ ಪಾಸ್ಟರೇ ಅದೆಲ್ಲಾ ಯಾಕೆ ಎಂದು ತಲೆ ಕರೆದುಕೊಂಡು ಕಿಚನ್ ಕಡೆಗೆ ಹೋಗಲು ತಿರುಗಿದ.

ಜೇಮ್ಸ್: ಹೇಯ್ ಬಾ.. ಇಲ್ಲಿ ಬಾ.. ಬಾ..... ನಮ್ ಮಾಸ್ಟರ್ ಗೆ ನಿನ್ ಪರಿಚಯ ಮಾಡಿಸಿಕೊಡುವೆ ಬಾ ಎಂದು ಜೇಮ್ಸ್ ಕೆಂಚಪ್ಪನನ್ನು ವಾಪಾಸು ಕರೆದ.

ಜೇಮ್ಸ್: ಮಾಸ್ಟರೇ ಇವನು ಕೆಂಚಪ್ಪ ಅಂತ.. ಐದಾರು ವರ್ಷಗಳ ಹಿಂದೆ ಪೋಲಿಸರಿಗೆ ಮೋಸ್ಟ್ Wanted person ಆಗಿದ್ದವನು..

ನಾನು: ಹೌದಾ? ಏನಪ್ಪ ಕಥೆ? ಆ ಲೆವೆಲ್ ಹವಾ ಮಾಡೀಯೇನು ಎಂದೆ..

ಕೆಂಚಪ್ಪ ; ಹಂಗೇನಿಲ್ಲ ಬಿಡಿಸಾರ್ ಎಂದು ತಲೆಕೆರೆದುಕೊಳ್ಳುತ್ತಾ ನಾಚುತ್ತಾ ನುಡಿದ..

ನಾನು : ಇರಲಿ ಪರವಾಗಿಲ್ಲ ಹೇಳು ಕೆಂಚಣ್ಣ ಎಂದು ಕೇಳಿದೆ.

ಜೇಮ್ಸ್ : ಮಾಸ್ಟರೇ ಇವನಾವು ಬಹಳ ಸ್ಟೋರಿ ಇದಾವೆ... ಅತಿಂಥಾ ಸ್ಟೋರಿ ಅಲ್ಲ ನೀನ್ ಒಂದೊಂದ್ ಸ್ಟೋರಿ ಕೇಳಿದ್ರೆ ಶಾಕ್ ಆಗುತ್ತೀಯಾ..

ನಾನು: ಅಬ್ಬಾ...! ಹೌದಾ? ಕೆಂಚಣ್ಣ ಹಂಗಾದರೇ ಹೇಳಪ್ಪ ಕೇಳೋಣ.. ಹೇಳು.. ಹೇಳು.. ಅದಕ್ಕೇನು??

ಜೇಮ್ಸ್ : ಕೆಂಚಣ್ಣ ಅದು 'ಚಳಿಕಾಯಿಸ್ಕೊಂಡಿದ್ದು' ಒಂದು ಹೇಳು ನಮ್ ಮಾಸ್ಟರ್ ಗೆ... ಅಂಥಾವೆಲ್ಲಾ ತಿಳುಕೋ ಬೇಕು ಅವರು, ಅವರಿಗೆ ಗೊತ್ತಿಲ್ಲ ಹೇಳು ಹೇಳು.. ಅಂದ.

ನಾನು: ಹೇಳಪ್ಪ ಏನೋ ಇಂಟರೆಸ್ಟಿಂಗ್ ಇದೆ ಅನಿಸುತ್ತದೆ...

ಕೆಂಚಪ್ಪ: ಉಗಳನ್ನು ನುಂಗಿ ಗಂಟಲನ್ನು ಸರಿ ಮಾಡಿಕೊಳ್ಳುತ್ತಾ 'ಸಾರ್ ಅದು ಒಂದು ಚಳಿಗಾಲ ಸಾರ್.. ಕೆಟ್ಟ ಚಳಿ ಅಂದರೆ ಚಳಿ.. ಎಷ್ಟು ರಗ್ಗು ಹೊದ್ದುಕೊಂಡರೂ ನಿದ್ದೆ ಬರಲಿಲ್ಲ ಸಾರ್... ರಾತ್ರಿ ಹನ್ನೆರಡು - ಹನ್ನೆರಡುವರೆ ಆಗಿತ್ತು. ಯಾಕೋ ನಿದ್ದೆ ಬರತಿಲ್ಲ. ತಲೆಗೆ ಮಪ್ಲರ್ ಸುತ್ತಿಕೊಂಡು ಹಂಗೆ ಬೀಡಿ ಪೆಟ್ಟಿಗೆ ಹಿಡಿದು ಬೀಡಿ ಹಚ್ಚಿಕೊಂಡು ಹಾಗೆ ಒಂದು ಒಂದೂವರೆ ಕಿಲೊಮೀಟರ್ ನಡೆದು ಹೋದೆ. ಅಲ್ಲಿನ ಏರಿಯಾ ಎಲ್ಲಾ ಶ್ರೀಮಂತರ ಮನೆಗಳು ಅವು. ಅದೊಂದು ಸಾಹುಕಾರರ ಮನೆ ಕಾಣಿಸಿತು. ನುಗ್ಗೋಣ ಅನಿಸಿತು.. ಕಾಂಪೌಂಡ್ ಎಗರಿ ನುಗ್ಗಿದೆ ಸಾರ್' ಅಂದ..

ನಾನು ಏನೊ ನಾಲ್ಕಾರು ಜನಸೇರಿದಾಗ ಮಾಡಿದ ತಮಾಷೆಯೊ, ಕೀಟಲೆಯೋ ಎಂದುಕೊಂಡರೇ ಇವನು ಸೀರಿಯಸ್ ಆಗಿ ದಾರಿಯಲ್ಲಿ ಬಾಳೆಹಣ್ಣಿನ ಸಿಪ್ಪೆ ತುಳಿದು ಬಿದ್ದಂತೆ ಸಿಲ್ಲಿಯಾಗಿ ದರೋಡೆ ಪ್ರಸಂಗ ನನ್ನನ್ನು ಹುಬ್ಬೇರುವಂತೆ ಮಾಡಿತು..

ಮುಂದಕ್ಕೆ ಕೇಳಬೇಕು ಎನಿಸಿ

ನಾನು : ಇದೇನೋ ಮಾರಾಯ ಎಷ್ಟು ಸುಲಭವಾಗಿ ಹೇಳುತ್ತೀಯಾ?? ಮನೆಯಲ್ಲಿ ಯಾರೂ ಇರಲಿಲ್ವೇ?

ಕೆಂಚಪ್ಪ: ಇದ್ದರು ಸಾರ್. ನಾನು ಹಿಂದಿನ ಬಾಕ್ಲಿಂದ ಹೋದೆ. ಒಂದೇ ಬೋಲ್ಟ್ ಹಾಕಿದ್ದರು. ಎರಡ್ಮೂರು ಸರಿ ಹಂಗೆ ಕದ ಅಲ್ಲಾಡಿಸಿದೆ. ಬೋಲ್ಟ್ ಕೆಳಗೆ ಸರಿದು ಬಾಗಿಲು ಓಪನ್ ಆಯಿತು.

ನಾನು: ಒಳಗೆ ಹೋಗಿ ಏನು ಮಾಡಿದೆ?

ಕೆಂಚಪ್ಪ : ಸಾರ್ ಒಳಗಡೆ ಹೋದೆ. ಮೂರು ರೂಂ ಒಂದು ಹಾಲ್ ಇತ್ತು. Hall ನಲ್ಲಿ ಯಾರೋ ಒಬ್ಬರೋ ವಯಸ್ಸಾದವರು ಮಲಗಿದ್ದರು. ಒಂದು ರೂಂ ಒಳಗಿನಿಂದ ಲಾಕ್ ಆಗಿತ್ತು. ನಿಧಾನವಾಗಿ ಮತ್ತೊಂದು ರೂಂ ಒಳಗೆ ಹೋದೆ. ಅಲ್ಲಿ ಗಾಡ್ರೇಜ್ ಓಪನ್ ಮಾಡಿದೆ.

ನಾನು: ಅದಕ್ಕೆ ಬೀಗ ಹಾಕಿರಲಿಲ್ಲವಾ??? ಅದನ್ನೂ ಒಡೆದು ತೆಗೆದಾ? ಶಬ್ಧ ಆಗಲಿಲ್ಲವಾ???

ಕೆಂಚಪ್ಪ : ಸಾರ್ ನಮ್ ಜನ ಬಡವರಾದರೂ ಶ್ರೀಮಂತರಾದರೂ ಬೀರೂ ಕೀ ಬೀರಿನ ಮೇಲೆ, ಇಂಟರ್ಲಾಕರ್ದು ಅಲ್ಲೇ ಒಳಗೆ ಎಲ್ಲಿಯಾದರೂ ಬಟ್ಟೆ ಕೆಳಗೆ ಮೇಲೆ ಇಟ್ಟೇ ಇಟ್ಟಿರುತ್ತಾರೆ ಸಾರ್. ಕೀ ಇಲ್ಲದೇ ಇರೋ ಸಂದರ್ಭಗಳು ತುಂಬಾ ಕಡಿಮೆ. ಒಂದು ವೇಳೆ ಕೀ ಸಿಗಲಿಲ್ಲ ಅಂದರೆ ಸ್ಕ್ರೂಡ್ರೈವರ್/ರಾಡ್ನಿಂದ ಓಪನ್ ಮಾಡುತ್ತೀವಿ ಸಾರ್ ಎಂದ.

ನಾನು : ಬೀರು ಒಳಗೆ ದುಡ್ಡು ಬಂಗಾರ ಇತ್ತಾ?

ಕೆಂಚಪ್ಪ : ಒಂದು ಇಂಟರ್ ಲಾಕ್ ಓಪನ್ ಮಾಡ್ಲಿಲ್ಲ ಸಾರ್. ಆದರೆ ನೂರು ರೂಪಾಯಿ ನೋಟಿನವು ಬಹಳ ಕಟ್ಟು ದುಡ್ಡು ಇದ್ದವು.. ಅಲ್ಲೇ ಕಾಲು ಹೊರೆಸಲು ಹಾಕಿದ್ದ ಒಂದು ಗೋಣಿಚೀಲ ತಗಂಡು ಎಲ್ಲವನ್ನೂ ಆ ಚೀಲಕ್ಕೆ ತುಂಬಿಕ್ಯಂಡೆ ಸಾರ್. ಅರ್ಧಚೀಲ ತುಂಬಿತ್ತು. ಆ ಚೀಲವನ್ನು ಬುಜಕ್ಕೆ ಹಿಂದಕ್ಕೆ ನೇತುಹಾಕಿಕೊಂಡು, ಕೊರೆಯ ತುದಿಯನ್ನು ಎದೆಯ ಮುಂದೆ ಎರಡೂ ಕೈಯಲ್ಲಿ ಹಿಡಿದುಕೊಂಡು ನಡೆದು ಬರುತ್ತಾ ಇದ್ದೆ. ಎರಡುವರೆ ಮೂರು ಗಂಟೆ ಆಗಿತ್ತು ಸಾರ್. ಸಳಿ(ಚಳಿ) ಅಂದ್ರೆ ತುಂಬಾ ಸಳಿ ಆಗುತ್ತಿತ್ತು. ಗಡಗಡ ನಡುಗುವ ಚಳಿ ಅದಕ್ಕೆ ಅಲ್ಲೇ ಯಾವುದೋ ಅರ್ಧಂಬರ್ದ ಕಟ್ಟಿದ್ದ ಒಂದು ಮನೆಯೊಳಗೆ ಹೋಗಿ ಚೀಲ ಕೆಳಗಿಟ್ಟು ಒಂದರಿಂದೆ ಒಂದು ಮೂರ್ನಾಲ್ಕು ಬೀಡಿ ಎಳೆದೆ ಸಾರ್, ಚಳಿ ಕಮ್ಮಿಯಾಗಲಿಲ್ಲ. ಅದಕ್ಕೇ ಚೀಲದಾಗೆ ನೋಟ್ ಇದ್ದವಲ್ಲ? ಅವುಗಳಿಗೆ ಬೆಂಕಿ ಹಾಕಿ ಬೆಳಕು ಹರಿಯೋವರೆಗೂ ಚಳಿಕಾಯಿಸ್ಕಂಡೆ ಸಾರ್..

ನಾನು: ಅಬ್ಬಾಬ್ಬಾ ಕೆಂಚಣ್ಣ. ಥೂ ನಿನ್ನ... ಹೇ... ಅವರೆಷ್ಟು ಕಷ್ಟಪಟ್ಟು ಯಾವುದಕ್ಕೆ ಹಣ ಕೂಡಿಟ್ಟಿದ್ದರೊ ಏನೋ... ಮಾಡೋದು ಮಾಡಿದ್ದೆ ನೀನಾದರೂ ಕಷ್ಟಕ್ಕೆ ಬಳಸಿಕೋ ಬೇಕಾಗಿತ್ತು. ಅದು ಬಿಟ್ಟು ದುಡ್ಡು ಸುಟ್ಟು ಬಹಳ ದಡ್ಡ ಕೆಲಸ ಮಾಡಿದೆ ನೀನು. ಕಳ್ಳತನ ಮಾಡಬಾರದಿತ್ತು, ಆದರೂ ಮಾಡಿದ್ದೆ ಅದರಲ್ಲೇ ಜೀವನ ಕಟ್ಟಿಕೊಳ್ಳುವುದ ಬಿಟ್ಟು ಬೆಂಕಿಹಾಕಿ ಚಳಿ ಕಾಯಿಸ್ಕಂಡೀಯಾ? ಥೂ ನಿನ್ನ ಮೂರ್ಖ...

ಕೆಂಚಪ್ಪ : ಸಾರ್ ನಾನು ಕಳ್ಳತನ ಮಾಡ್ತಿರೋದು ಖುಷಿ ಮತ್ತು ಟೈಮ್ ಪಾಸ್ ಗೆ ಸಾರ್. ಅಲ್ಲಾ ಸಾರ್ ಎಂಥಹ ಸಾವುಕಾರ ಆದರೂ ದುಡ್ಡಲ್ಲಿ ಯಾರಾದ್ರೂ ಚಳಿ ಕಾಯಿಸ್ಕೊಂಡಿದ್ದಾರಾ ಸಾರ್ ನೀವ್ ಎಲ್ಲಿಯಾದ್ರೂ ಕೇಳಿರಾ? ನಾಲ್ಕಾಣೆ ಗಲೀಜಲ್ಲಿ ಬಿದ್ದಿದ್ದರೂ ಎತ್ಕಂಡ್ ಜೇಬಲ್ಲಿ ಹಾಕ್ಕೋತ್ತಾರೆ ಆದ್ರೆ ನಾನು ದುಡ್ಡಲ್ಲಿ ಸಳಿ(ಚಳಿ)ಕಾಯಿಸ್ಕೊಂಡೀನೀ ಅದೇ ಸಾರ್ ನನ್ ರೆಕಾರ್ಡ್.. ಅಷ್ಟು ಸಾಕು ಸಾರ್...

ಅವನಿಗೆ ಅದೊಂದು ಯಾರೂ ಮಾಡದ ರೆಕಾರ್ಡ್, ಅವನ ಪಾಲಿಗೆ ಅದೊಂದು WORLD RECORD ಎಂಬಂತೆ feel ಆಗುತ್ತಿದ್ದ. ಅವನ ಆ ಕೆಲಸದ ಬಗ್ಗೆ ಅತೀವ ಗರ್ವವೂ ಇತ್ತು..

ನಾನು: ಅಬ್ಬಾ ಬ್ಬಾ ಬ್ಬಾ... ಬಾರೀ ಇದೀಯಾ ಕೆಂಚಣ್ಣ ನೀನು. ಅವು ಅಂದಾಜು ಎಷ್ಟು ಕಟ್ಟು ಇದ್ದವಪ್ಪ ನೋಟುಗಳು?

ಕೆಂಚಪ್ಪ : ಸಾರ್ ನಾನು ಎಣಿಸಲಿಲ್ಲ. ಆದರೆ ಹದಿನೈದು ಇಪ್ಪತ್ತು ಕಟ್ಟು ಅಂತೂ ಇದ್ದವು ಸಾರ್.

ನಾನು : ಅಲ್ಲಪ್ಪಾ ಕೆಂಚಣ್ಣಾ ತೂ ನಿನ್ನಾ.. ಅನ್ಯಾಯವಾಗಿ ಒಂದೂವರೆ ಎರಡು ಲಕ್ಷ ಸುಟ್ಟಾಕಿಯಲ್ಲಾ..

ಕೆಂಚಪ್ಪ ತಲೆ ತಗ್ಗಿಸಿಕೊಂಡು ನಿಂತ..

ಮುಂದುವರೆದು ಅಲ್ಲ ಕೆಂಚಣ್ಣ ಈ ಕಳ್ಳರಿಗೆ ಕಳ್ಳತನ ಮಾಡಲು ಸರಿಯಾದ ಸಮಯ ಯಾವುದು?

ಕೆಂಚಪ್ಪ: ಸಾರ್ ಸಾಮಾನ್ಯವಾಗಿ ಕಳ್ಳತನ ಮಾಡಲು ಸರಿಯಾದ ಸಮಯ ಅಂದರೆ ಮಧ್ಯರಾತ್ರಿ ಒಂದು ಗಂಟೆಯಿಂದ ಮೂರು- ಮೂರುವರೆ ವರೆಗೆ ಸರಿಯಾದ ಸಮಯ. ಈ ಟೈಮ್ನಲ್ಲಿ ಸಣ್ಣಪುಟ್ಟ, ಎಂಥ ದೊಡ್ಡ ಶಬ್ಧ ಆದರೂ ಯಾರೂ ಎದ್ದೇಳಲ್ಲ ಸಾರ್...

ನಾನು : ಕಳ್ಳತನ ಹೆಂಗೆಲ್ಲಾ ಮಾಡುತ್ತಿರಿ?? ಕಳ್ಳತನ ಮಾಡಲು ಮನೆಗಳಿಗೆ ಬೀಗ ಹಾಕಿದ ಮನೆಗಳು ಸೂಕ್ತವೇ...?

ಕೆಂಚಣ್ಣ: ಹ್ಞು ಸಾರ್ ಮತ್ತೆ ಬೀಗ ಹಾಕಿದ್ದ ಮನೆಗಳಾದರೆ ಯಾವುದೇ ಭಯ ಇರಲ್ಲ ನಿರಾತಂಕವಾಗಿ ಕೆಲಸ ಮುಗಿಸಬಹುದು. ನನ್ನ ಇತಿಹಾಸದಲ್ಲಿ ಅಕ್ಕ ಪಕ್ಕದ ಮನೆಯವರು ಎದ್ದು ಬಂದು ಕಳ್ಳರನ್ನು ಓಡಿಸಿದ ಮಾತೇ ಇಲ್ಲ. ಆದರೆ ವಾಸ ಇರುವ ಮನೆಗಳಲ್ಲಿ ಎಷ್ಟು ಜನ ಇದಾರೆ ಅವರು ಎಲ್ಲೆಲ್ಲಿ ಮಲಗಿರುತ್ತಾರೆ ಅಂತ ನೋಡಿ ಸದ್ದು ಮಾಡದೆ ಕೆಲಸ ಮಾಡಬೇಕಾಗತ್ತೆ..

ನಾನು : ಮನೆಗಳಿಗೆ ಬೀಗ ಡೋರ್ ಲಾಕ್ ಮಾಡಿರುತ್ತಾರಲ್ಲ ಅದೇಗೆ ಒಳಗೆ ನುಗ್ಗುವಿರಿ?

ಕೆಂಚಣ್ಣ: ಬೀಗ ಒಡೆಯುತ್ತೀವಿ, ಬಾಗಿಲು ಮುರಿಯುತ್ತೀವಿ ಸಾರ್... ಸಾರ್..
ಒಂದು ಒಂದುವರೆ ಅಡಿಯ ಒಂದು ರಾಡ್/ಸ್ಕ್ರೂ ಡ್ರೈವರ್ ಇದರೆ ಸಾಕು ಅಷ್ಟೇ. ಡೋರ್ ಲಾಕ್ ಈತರ ಬರದೇ ಇದ್ದರೆ ಬಾಗಿಲಿನ ಹಲಗೆ/ಕಿಟಕಿ, ಹೀಗೆ ಪರ್ಯಾಯವಾಗಿ ಹೇಗೆ ತೂರಿ ಹೋಗಲು ಸಾದ್ಯವೋ ನೋಡುತೀವಿ..

ಪೋಲಿಸ್ ಕೈಗೆ ನೀನ್ ಸಿಕ್ಕಿಲ್ಲವೋ?

ಕೆಂಚಣ್ಣ: ಈ ಕೇಸಲ್ಲಿ ಇಲ್ಲ ಸಾರ್ ಆದ್ರೆ ಬೇರೆ ಕೇಸಲ್ಲಿ ಹಿಡಿದಿದ್ದರು. ಅವರೇ ಸಾರ್ ನನ್ನ ಜೀವನ ಹಾಳ್ ಮಾಡಿದ್ದು..

ನಾನು : ಏಯ್ ಕೆಂಚಣ್ಣ ಕಳ್ಳತನ ಮಾಡುವುದು ತಪ್ಪಲ್ಲವೇನು? ತಪ್ಪು ಮಾಡಿರುವುದು ನೀನು ಅವರೇನು ಹಾಳು ಮಾಡಿದರು?? ಮಾಡಿದ ತಪ್ಪಿಗೆ ಶಿಕ್ಷೆಯಾಗಬೇಕು ಅಲ್ಲವೇ?

ಕೆಂಚಣ್ಣ: ಸಾರ್ ನಾನು ಮಾಡದ ತಪ್ಪುಗಳಿಗೆ ಪೋಲಿಸ್ ನವರು ನನ್ನ ಮೇಲೆ ಹೊರಿಸಿದರು ಸಾರ್.. ಯ್ಯಾವ್ಯಾವೋ ಕೇಸ್ ನನ್ತಲೆಗೆ ಕಟ್ಟಿ ಹಾಕಿದರು. ನನಗೆ ಆ ವ್ಯವಸ್ಥೆ ಬಗ್ಗೆ ಪೈಟ್ ಮಾಡಲು ಸಾಧ್ಯ ಆಗಲಿಲ್ಲ.. ಎಲ್ಲಾ ಅವರೇ ಬರೆದು ಸೈನ್ ಹಾಕಿಸ್ತಾರೆ... ಸೈನ್ ಹಾಕಿದ ಮೇಲೆ ಮುಗಿತು. ಬಂದ ಶಿಕ್ಷೆ ಅನುಭವಿಸಲೇ ಬೇಕು...

ನಾನು : ಹೋಗ್ಲಿಬಿಡು ನೀನು ತಪ್ಪುಗಳನ್ನು ಮಾಡದೇ ಇದ್ದರೆ ನಿನಗೆ ಖಂಡಿತಾ ನ್ಯಾಯ ಸಿಗತ್ತೆ..

ಕೆಂಚಣ್ಣ: ಸಾರ್ ದೇವರ ಕೃಪೆಯಿಂದ ನಾನು ಬೇಲ್ ಮೇಲೆ ಇದ್ದೀನಿ. ಇನ್ನೂ ಒಂದೆರಡು ಕೇಸ್ ಇದಾವೆ ಕ್ಲಿಯರ್ ಮಾಡಿಕ್ಯಂತೀನಿ ಸಾರ್.. ಇನ್ನೂ ಸ್ವಲ್ಪ ದಿನ.. ಅವು ಆದರೆ ಮುಗೀತು.

ಆಗ್ಲಿ ಒಳ್ಳೇದಾಗಲಿ ಆದರೆ ಅಪರಾಧ ಮಾಡಿ ಜೈಲಿಗೆ ಹೋದ್ರೆ ಹೆಂಡತಿ ಮಕ್ಕಳ ಗತಿ ಏನು ಕೆಂಚಣ್ಣ? ಹೋಗ್ಲಿಬಿಡು ಇನ್ಮೇಲೆ ಆ ಕೆಲಸ ಮಾಡಬ್ಯಾಡ. ತಪ್ಪು ಮಾಡುವ ಮೊದಲೇ ಯೋಚನೆ ಮಾಡಬೇಕಿತ್ತು. ಈಗ ತಪ್ಪಾಗಿದೆ. ಇನ್ಮೇಲಾದರೂ ಮಾಡಬೇಡಿ...

ಇಲ್ಲಾ ಸಾರ್ ಬಿಟ್ಟಾಕಿನೀ ಮಾಡಲ್ಲ ಸಾರ್ ಅರ್ಥ ಆಗಿದೆ.. ಆ ಜನಗಳ ಶಾಪದಿಂದ ಕಳ್ಳರು ಎಷ್ಟೇ ಕಳ್ಳತನ ಮಾಡಿದರೂ ಅವರ ಬಡತನ ಮಾತ್ರ ಹೋಗುವುದಿಲ್ಲ.. ಅದ್ಕೆ ಸಾರ್ ಕಳ್ಳರು ಕೊನೆಯವರಗೂ ಕಳ್ಳರಾಗಿಯೇ ಉಳಿತಾರೆ.. ಅದೇ ಸಾರ್ ಜನಗಳ ಶಾಪ.. ನಾನು ಕಳ್ಳತನ ಬಿಟ್ಟು ಐದಾರು ವರ್ಷ ಆಯಿತು ಸಾರ್ ಮಾಡುವುದಿಲ್ಲ. ಬೇಕಾದರೆ ಪಾಸ್ಟರ್ ನ ಕೇಳಿ ಅಂದ...

ನಾನು: ಆಯ್ತಪ್ಪ.. ಕಷ್ಟಪಟ್ಟು ದುಡಿದು ಚೆನ್ನಾಗಿರು. ಇಷ್ಟೋತ್ತು ಬಹಳ ಮಾಹಿತಿಕೊಟ್ರೀ.. ಬಿರಿಯಾನಿ ತುಂಬಾ ಸಕತ್ತಾಗಿತ್ತು.. ಚೆನ್ನಾಗಿ ಮಾಡಿದ್ದೀಯಾ.. ಇದೇ ಕೆಲಸ ಮಾಡಿಕೊಂಡು ಮುಂದುವರೆಯಪ್ಪ ಮತ್ತೆ ಆ ನಿನ್ ಮೂಲ ಕೆಲಸಕ್ಕೆ ಕೈ ಹಾಕಬೇಡ. ಅನ್ಯಾಯವಾಗಿ ಗಳಿಸಿದ್ದು ನಮಗೆ ದಕ್ಕದೇ ಅದರಿಂದ ನಮ್ಮ ಮಾನ ಮರ್ಯಾದೆಯೂ ಹೋಗತ್ತೆ. ಸಾರ್ವಜನಿಕವಾಗಿ 'ಕಳ್ಳ' ಎನ್ನುವ ಪಟ್ಟ ಕಟ್ಟಿಕೊಂಡು ಬದುಕಬೇಕಾಗತ್ತೆ. ಗೌರವ ಇರಲ್ಲ ಇದೇ ಕೆಲಸ ಮಾಡಿಕೊಂಡು ಗೌರವಯುತವಾಗಿ ಬದುಕು ಎಂದೇಳಿ ಎಲ್ಲರಿಗೂ bye ಹೇಳಿ ಜೇಮ್ಸ್ ನಾನು ಹಿಂದಿರುಗಿದೆವು.

ಯಾವ ಯಾವ ಪರಿಸ್ಥಿತಿಗಳು ಯಾರ್ಯಾರ ಕೈಯಲ್ಲಿ ಎಂಥೆಂಥಾ ದುಷ್ಕೃತ್ಯ ಯಾವಾಗ ಮಾಡಿಸುತ್ತವೆಯೋ ಗೊತ್ತಿಲ್ಲ.. ಅನಿವಾರ್ಯ ವೋ ಅಗತ್ಯವೋ.. ಖುಷಿಗೋ... ಆದರೆ ನಾವು ಆಯ್ದುಕೊಳ್ಳಬೇಕಾದದ್ದು ನಮ್ಮ ಗೌರವ ಕಾಪಾಡುವಂತಿರಬೇಕು. ಬೈಕಲ್ಲಿ ಹಿಂದಿರುಗುವಾಗ ರಸ್ತೆ ಬದಿಯ ಲಂಟಾನ ಗಿಡದಲ್ಲಿ ಒಂದು ಜೇನು ಕಂಡು ಜೇಮ್ಸ್ ಗಾಡಿ ನಿಲ್ಲಿಸು ಅಂತ ಹೇಳಿದೆ. ಜೇಮ್ಸ್ ಗೆ ಅಚ್ಚರಿಯೋ ಅಚ್ಚರಿ.. ಏನ್ ಕಣ್ಣಜ್ಜ ನಿನ್ನಾವು, ಇಷ್ಟು ಸ್ಪೀಡ್ ಲ್ಲಿ ಹೆಂಗೆ ಕಾಣಿಸುತ್ತಾವೋ ಎಂದು ಇಳಿದು ಎಲ್ಲಿದೆ ಎಂದು ಹುಡುಕುತ್ತಿದ್ದ. ಇಲ್ಲೇ ಇಲ್ಲವೇ ಜೇಮ್ಸ್‌‌ ಎಂದು ತೋರಿಸಿ ಅದನ್ನು ಕಿತ್ತೆ. ದೂರದಲ್ಲಿ ಹೋಗಿ ಜೇಮ್ಸ್ ನಿಂತಿದ್ದ. ಜೇನು ಕೈಯಲ್ಲಿ ಹಿಡಿದು ಇಬ್ಬರೂ ತಿನ್ನತೊಡಗಿದೆವು.

ನಾನು: ಜೇಮ್ಸ್ ಈ ಕೆಂಚಪ್ಪ ನಿಜವಾಗಲೂ ದುಡ್ಡುನ್ನು ಹಾಕಿ ಚಳಿಕಾಯಿಸ್ಕೊಂಡಿರುತ್ತಾನಾ?? ಅಥವಾ ಬಿಲ್ಡಪ್ ಗೆ ನನ್ನದೂ ರೆಕಾರ್ಡ್ ಇದೆ ಅಂತ ಬೊಗಳೆ ಬಿಡುತ್ತಿದ್ದಾನೆಯೇ???

ಇಲ್ಲ ಮಾಸ್ಟರ್... ಅವನು ಖತರ್ನಾಕ್... ತುಂಬಾ ಕ್ರೇಜಿ... ಅವನಿಗೆ ಏನು ಅನಿಸುತ್ತೋ ಹಾಗೆ ಮಾಡ್ತಿದ್ದ.. ಆದರೆ ಈಗ ಮೊದಲಿನ ಹುಚ್ಚುತನ ಇಲ್ಲ... ವಾಸ್ತವ ಪ್ರಪಂಚ ಅವನಿಗೆ ಅರ್ಥ ಆದಂಗಿದೆ.

ಜೇನು ಸವಿಯುತ್ತಾ ಅಲ್ಲಾ ಜೇಮ್ಸ್ ಆ ಕೆಂಚಪ್ಪ ಕಳ್ಳತನ ಬಿಡುತ್ತಾನ..? ನಿಜವಾಗ್ಲೂ ಒಳ್ಳೆಯವನಾಗಿದ್ದಾನ??! ಅಥವಾ ಕೆಲವು ದಿನಗಳವರೆಗೆ ನಾಟಕನಾ??

ಜೇಮ್ಸ್: ಹ್ಞೂ ಮೇಷ್ಟ್ರೇ.. ಒಳ್ಳೆಯವನಾಗಿದ್ದಾನೆ. ಇಲ್ಲ ಅಂದ್ರೆ ಎಂಟತ್ತು ಸಾವಿರ ಕೊಡೋ ಈ ಅಡುಗೆ ಭಟ್ರ ಕೆಲಸಕ್ಕೆ ಯಾಕ್ ಬರ್ತಿದ್ದ?? ಕೆಲವೇ ನಿಮಿಷಗಳಲ್ಲಿ ಅವನು ಇಲ್ಲಿ ತಿಂಗಳಿಗೆ ಕೊಡುವ ದುಡ್ಡನ್ನು ಕಳ್ಳತನದ ಮೂಲಕ ಸಂಪಾದನೆ ಮಾಡುತ್ತಾನೆ. ಬಿಟ್ಟಿರುವುದಕ್ಕೇ ಅವನು ಈ ಕೆಲಸ ಮಾಡುತ್ತಿರುವುದು. ನನ್ ಕಣ್ಣೋಟದ ಕವರಿಂಗ್ ಏರಿಯಾದಲ್ಲೇ ಕಂಟ್ರೋಲ್ ಲ್ಲೇ ಇದ್ದಾನೆ. ಈಗ ನಾಲ್ಕೈದು ವರ್ಷಗಳ ಕಾಲ ಅಂತಹವು ಯಾವೂ ಮಾಡಿಲ್ಲ. ಬದಲಾಗಿದ್ದಾನೆ. ಬದಲಾಗಿಲ್ಲ ಅಂದ್ರೆ ಅವನು ಈ ಕೆಲಸಗಳೆಲ್ಲಾ ಮಾಡುತ್ತಿರಲಿಲ್ಲ... ಒಂದು ವೇಳೆ ಅವನು ಇನ್ಮೇಲೂ ಬದಲಾಗಲಿಲ್ಲ ಅಂದರೆ ಕಾನೂನಿನಿಂದ ತಪ್ಪಿಸಿಕೊಳ್ಳಲು ಆಗುವುದಿಲ್ಲ... ಶಿಕ್ಷೆಯೋ... ಜೈಲೊ.. ಅನುಭವಿಸುತ್ತಾನೆ. ಯಾರು ಏನು ಮಾಡಾಕೆ ಆಗತ್ತೆ...??

ಅವನು ಬದಲಾಗಲಿ ಜೇಮ್ಸ್ ಏನೇ ಏನೋ ಬ್ಯಾಡ್ ಟೈಂ ಲ್ಲಿ ಏನೋ ಆಗಿರತ್ತೆ ಆದರೆ ಅದನ್ನು ಬದಲಾಯಿಸ್ಕೊಂಡು ಬಾಳಬೇಕು. ತಪ್ಪು ದಾರಿ ಹಿಡಿದದ್ದು ತಪ್ಪು ಅಂತಾ ಗೊತ್ತಾದ ಮೇಲೆ ಅದನ್ನೇ ಮುಂದುವರೆಸುವುದು ತಪ್ಪು ಎಂದು ಹೇಳುತ್ತಾ ರಸ್ತೆಯಲ್ಲಿ ಸಿಕ್ಕ ಮತ್ತೊಂದು ಜೇನನ್ನು ಕಿತ್ತು ಕೈಯಲ್ಲಿ ಹಿಡಿದು ಬೈಕ್ ಹತ್ತಿದೆವು. ಕೈಯಲ್ಲಿ ಹಿಡಿದ ಜೇನನ್ನು ನೋಡಿದ ಜನರು ಹೈ ಜೇನು... ಎಂದು ಉದ್ಗಾರ ತೆಗೆದರೆ ಜೇಮ್ಸ್ ಗೆ ಗೊತ್ತು ಪರಿಚಯದವರು ನಮ್ಗೂ ಜೇನುತುಪ್ಪ ಕೊಡಿ ಎಂದು ಕೇಳುತ್ತಿದ್ದರು. ಯಾರಿಗೂ ಕೊಡಲಾಗದೇ ಮನೆಗೆ ಬಂದೆವು. ಜೇಮ್ಸ್ ನ ಹೆಂಡತಿ ಮಕ್ಕಳೆಲ್ಲಾ ಜೇನು ತಿಂದು ಖುಷಿ ಪಟ್ಟರು. ಜೇಮ್ಸ್ ತನ್ನ ಹೆಂಡತಿಗೆ ಮಾಸ್ಟರ್ ಬೈಕಲ್ಲೇ ಜೇನು ನೋಡಿದರು. ಒಂದು ಜೇನುಹುಳುಗಳು ಕಚ್ಚದೇ ಜೇನನ್ನೂ ಕಿತ್ತರು ಎಂದು ಗುಣಗಾನ ಮಾಡಿದರು. ಅದೇ ಲಾಸ್ಟ್.. ಆ ಕೆಂಚಪ್ಪ ಈಗ ಎಲ್ಲಿದ್ದಾನೋ?? ಹೇಗಿದ್ದಾನೋ ಗೊತ್ತಿಲ್ಲ ಒಳ್ಳೆಯವನಾಗಿಯೇ ಗೌರವದಿಂದ ಬದುಕುತ್ತಿದ್ದಾನೆ ಎನ್ನುವ ನಂಬಿಕೆ ಇದೆ..

ಮುಂದಿನ ಭಾಗದಲ್ಲಿ ನಿರೀಕ್ಷಿಸಿ... ಆನೆ ಹುಲಿ ಇರುವ ಮದುಮಲೈ ಅಭಯಾರಣ್ಯದಲ್ಲಿ ಜೇನು ಕಿತ್ತದ್ದು.... (ಮುಂದುವರಿಯುವುದು....)
....................... ನಾಗೇಂದ್ರ ಬಂಜಗೆರೆ, ಶಿಕ್ಷಕರು 
ಸರಕಾರಿ ಹಿರಿಯ ಪ್ರಾಥಮಿಕ ಶಾಲೆ, ಮಿಂಚೇರಿ
ಬಳ್ಳಾರಿ ತಾಲೂಕು ಮತ್ತು ಜಿಲ್ಲೆ
Mob : +91 99029 12684
*******************************************


Ads on article

Advertise in articles 1

advertising articles 2

Advertise under the article