ನಿಷ್ಪಾಪಿ ಸಸ್ಯಗಳು : ಸಂಚಿಕೆ - 48
Wednesday, May 1, 2024
Edit
ನಿಷ್ಪಾಪಿ ಸಸ್ಯಗಳು : ಸಂಚಿಕೆ - 48
ಲೇಖಕರು: ವಿಜಯಾ ಬಿ ಶೆಟ್ಟಿ ಸಾಲೆತ್ತೂರು
ಸಹ ಶಿಕ್ಷಕಿ, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ
ಬಾಳೆಪುಣಿ (ಇರಾ), ಬಂಟ್ವಾಳ ತಾಲೂಕು
ದಕ್ಷಿಣ ಕನ್ನಡ ಜಿಲ್ಲೆ
ಹೇಗಿದ್ದೀರಿ...? ಬಿಸಿಲ ಝಳಕ್ಕೆ ತಿರುಗಾಟ ನಡೆಸದೇ ಮನೆಯೊಳಗೇ ಇದ್ದೀರಲ್ಲವೇ?
ಇಂದು ನಾನು ನಿಮಗೊಂದು ಒಗಟು ಕೇಳುವೆ.
ಆಡು ಮುಟ್ಟದ ಸೊಪ್ಪು ಯಾವುದು?
ಖಂಡಿತವಾಗಿಯೂ ನಿಮಗೆ ಹೆಸರು ಗೊತ್ತಿರಬಹುದು... ಅಂತ ಭಾವಿಸಿದ್ದೇನೆ.
ಹತ್ತಾರು ವರ್ಷಗಳ ಹಿಂದೆ ಈ ಗಿಡ ನಮ್ಮೆಲ್ಲರ ಮನೆಯ ಹಾಗೂ ತೋಟದ ಬೇಲಿಗೆ ಆಧಾರವಾಗಿತ್ತು. ಇದರಲ್ಲಿರುವ ವಿಷದ ಅಂಶದಿಂದಾಗಿ ಆಡು, ಕುರಿ, ಜಾನುವಾರುಗಳು ಮುಟ್ಟದ ಕಾರಣ ಬೇಲಿಗೆ ಇದೇ ಗಿಡವನ್ನು ನೆಡುತ್ತಿದ್ದರು. ಈಗೆಲ್ಲ ಇಂಟರ್ಲಾಕ್ ಗಳು, ಕಲ್ಲಿನ ಕಂಪೌಂಡ್ ಗಳು ಸರಳವಾಗಿ ನಮ್ಮ ಜೊತೆಗೆ ಬದುಕುತ್ತಿದ್ದ ಸಸ್ಯಗಳನ್ನು ದೂರಮಾಡಿವೆ. ನಮ್ಮ ಸೌಂದರ್ಯದ ಪರಿಕಲ್ಪನೆ ಲಕೋಟೆಯೊಳಗೆ ಅಂಗಡಿಯಲ್ಲಿ ಸಿಗುವ ಚಪಾತಿ, ದೋಸೆಗಳಂತಾಗಿದೆ..!
ಭಾರತದ ಉಷ್ಣವಲಯ ಹಾಗೂ ಸಮಶೀತೋಷ್ಣ ವಲಯಗಳಲ್ಲಿ ಹುಲುಸಾಗಿ ಬೆಳೆಯುವ ಈ ಸಸ್ಯವು ಹಿಮಾಲಯದ ತಪ್ಪಲಿನಲ್ಲಿಯೂ ಹಬ್ಬಿದೆ. ಇದನ್ನು ಸಾಮಾನ್ಯವಾಗಿ ಆಡುಸೋಗೆ ಎನ್ನುತ್ತಾರೆ. ಮಲಬಾರ್ ನಟ್, ವಾಸಕ ಎಂದು ಕರೆಯಲ್ಪಡುವ ಆಡುಸೋಗೆಗೆ ಸಂಸ್ಕೃತ ದಲ್ಲಿ ಶ್ವೇತಾವಾಸ, ವಾಸಕವೆನ್ನುತ್ತಾರೆ.
ಸದಾ ಹಸಿರಾಗಿ ಪೊದೆಯಂತಿರುವ ಈ ಗಿಡವು ಸುಮಾರು 4 ಮೀಟರಿನಷ್ಟು ಎತ್ತರಕ್ಕೆ ಬೆಳೆಯುತ್ತದೆ. ಅಭಿಮುಖವಾಗಿ ಗಿಣ್ಣುಗಳಲ್ಲಿ ಮೂಡುವ ಎಲೆಗಳು ಮಾವಿನೆಲೆಯಂತೆ ದೊಡ್ಡದಾಗಿದ್ದರೂ ಮೃದುವಾಗಿ, ನುಣುಪಾಗಿರುತ್ತವೆ. ಎಲೆಗಳು ಕೆಳಭಾಗಕ್ಕೆ ಬಾಗಿದಂತಿರುತ್ತವೆ. ಇದರ ಎಲೆಗಳು ಸಿಂಹದ ಹಸ್ತದಂತಿವೆ ಎಂಬ ಕಾರಣಕ್ಕೆ ಈ ಗಿಡಕ್ಕೆ ಸಿಂಹಪರ್ಣಿ ಎಂದೂ ಕರೆಯುವರು. ಎಲೆಗಳ ಎರಡು ತುದಿಗಳೂ ಚೂಪಾಗಿರುತ್ತವೆ. ಎಲೆಗಳ ಬುಡದಲ್ಲಿ ತೆನೆಯಂತೆ ಹೂಗೊಂಚಲು ಗಳಾಗುತ್ತವೆ. ಸಾಮಾನ್ಯವಾಗಿ ಬಿಳಿ ಬಣ್ಣದ ಹೂಗಳಿದ್ದರೂ ತಿಳಿ ಗುಲಾಬಿ, ತಿಳಿ ನೇರಳೆ ಹೂಗಳಾಗುವ ಜಾತಿಯೂ ಇದೆ. ಇದರ ಹೂಗಳಲ್ಲಿ ಸಿಹಿಯಾದ ಮಕರಂದ ಇರುವುದರಿಂದ ಅವುಗಳ ಸುತ್ತ ಜೇನು ಹುಳುಗಳು, ದುಂಬಿಗಳೂ ಸದಾ ಝೇಂಕರಿಸುತ್ತಿರುತ್ತವೆ. ಬಿಳಿಯ ಹೂವಿನಲ್ಲಿ ಎರಡು ಪುಟ್ಟ ಎಸಳುಗಳಿದ್ದು ಈ ದಳಗಳ ಮೂಲದಲ್ಲಿ ಒಂದಕ್ಕೊಂದು ಸೇರಿವೆ. ಅಲ್ಲೇ ಪುಷ್ಪದಳಕ್ಕೆ ಸೇರಿದಂತೆ ಮೂರು ಪುಟಾಣಿ ದಳಗಳ ಜೊತೆ ಎರಡು ಕೇಸರಗಳು ಹಾಗೂ ಉದ್ದನೆಯ ಶಲಾಕೆಯ ರಚನೆಯಿದೆ. ನಾಲ್ಕು ಬೀಜಗಳಿರುವ ಚಪ್ಪಟೆ ಕಾಯಿಯಿಂದ ಹೊಸ ಗಿಡಗಳು ಹುಟ್ಟುವುದಕ್ಕಿಂತಲೂ ಗೆಲ್ಲು ನೆಟ್ಟು ಅಥವಾ ಬೇರು ಹೋದಲ್ಲೆಲ್ಲ ಗಿಡವಾಗುತ್ತವೆ.
ಅಕ್ಯಾಂಥೇಸಿ (Acanthaceae) ಕುಟುಂಬದ ಆಡುಸೋಗೆ Adhatoda zeylanica ಎಂಬ ಶಾಸ್ತ್ರೀಯ ನಾಮ ಹೊಂದಿದೆ. ಈ ಗಿಡದ ಚಿಗುರನ್ನು ಕತ್ತರಿಸಿ ಅಂಗೈಮೇಲೆ ನೇರವಾಗಿ ನಿಲ್ಲಿಸಿದರೆ ತುಂಬಾ ಹೊತ್ತು ನೇರವಾಗಿಯೇ ನಿಲ್ಲುತ್ತದೆ. ಹೀಗೆ ಮಾಡುವುದು ನಮ್ಮ ಬಾಲ್ಯದ ಆಟವಾಗಿತ್ತು. ಮನೆಯಲ್ಲಿ ಮಕ್ಕಳಿಗೆ ಕಜ್ಜಿಯಾದರೆ, ಕೆಮ್ಮು, ನೆಗಡಿಯಾದರೆ ಎಲ್ಲರ ಮನೆಯಲ್ಲೂ ಆಡುಸೋಗೆ ರಸವೇ ಮೊದಲ ಮದ್ದಾಗಿತ್ತು.
ಈ ನಿಷ್ಪಾಪಿ ಸಸ್ಯವು ಮೈ ಪೂರ್ತಿ ಔಷಧಿಯನ್ನೇ ತುಂಬಿಕೊಂಡಿದೆ. ಎಲೆ, ಹೂ, ತೊಗಟೆ, ಬೇರುಗಳು ಹಲವು ರೋಗಗಳಿಗೆ ನೂರಾರು ವರ್ಷಗಳಿಂದ ಔಷಧಿಯಾಗಿದೆ. ಶ್ವಾಸನಾಳದ ಕಫ, ರಕ್ತಶುದ್ಧಿ, ಅಸ್ತಮಾ, ಗಾಯ, ಒಸಡುಗಳ ರಕ್ತಸ್ರಾವ, ಅಂಗೈ ಅಂಗಾಲು ಉರಿ, ಮೂತ್ರದಲ್ಲಿ ರಕ್ತಸ್ರಾವ, ದೇಹದ ತೂಕ ಇಳಿಸಲು, ನೇತ್ರ ವಿಕಾರ, ಕರುಳಿನ ಹುಣ್ಣು, ಸಂಧಿವಾತ, ಹೊಟ್ಟೆ ಹುಳು, ರಕ್ತಪಿತ್ತ ಇತ್ಯಾದಿಗಳಿಗೆ ಉಪಯುಕ್ತ ಔಷಧಿಯಾಗಿದೆ.
ಎಲೆಗಳಿಂದ ಕ್ರಿಮಿನಾಶಕ, ಶಿಲೀಂಧ್ರ ನಾಶಕಗಳನ್ನು ತಯಾರಿಸುತ್ತಾರೆ. ಗಿಡದಿಂದ ಕಷಾಯ, ಲೇಹಗಳನ್ನು ತಯಾರಿಸುವರು. ಎಲೆಗಳಿಂದ ಬರುವ ಬಣ್ಣವನ್ನು ಬಟ್ಟೆ ಮತ್ತು ಚರ್ಮಕ್ಕೆ ಬಣ್ಣ ಹಾಕಲು ಬಳಸುವರು. ಚೆನ್ನಾಗಿ ಬಲಿತ ಮಾವು, ಬಾಳೆಗೊನೆಗಳನ್ನು ಆಡುಸೋಗೆ ಎಲೆಗಳಿಂದ ಮುಚ್ಚಿಟ್ಟರೆ ಆಕರ್ಷಕ ಬಣ್ಣದೊಂದಿಗೆ ಹಣ್ಣಾಗುವುದು ಮಾತ್ರವಲ್ಲದೆ ಹೆಚ್ಚು ಕಾಲ ಕೆಡದು.
ಒಣ ಎಲೆಗಳನ್ನು ಪುಡಿಮಾಡಿ ಚುಟ್ಟ, ಸಿಗರೇಟು ತಯಾರಿಸುವರು. ಈ ಸಸ್ಯದ ಎಲೆರಸದ ಚುಚ್ಚುಮದ್ದು ನೀಡಿದರೆ ರಕ್ತದ ಏರು ಒತ್ತಡ ಕಡಿಮೆಯಾಗುವುದು. ವ್ಯಾಸಿಸೈನ್ ಎಂಬ ಕಟು ಕಹಿ ಕ್ಷಾರ ಈ ಗಿಡದ ಮೈ ತುಂಬಿದೆ. ಇದೊಂದು ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಸಂಜೀವಿನಿಯೇ ಸರಿ. ಅತ್ಯಲ್ಪ ನೀರು ಬೇಡುವ ಈ ಸಸ್ಯವನ್ನು ಎಲ್ಲಿಯೂ ಬೆಳೆಸಬಹುದು... ನೀವೂ ಪ್ರಯತ್ನಿಸಿ ಆಗದೇ...
ಮುಂದಿನ ವಾರ ಇನ್ನೊಂದು ನಿಷ್ಪಾಪಿ ಸಸ್ಯದ ಜೊತೆ ಭೇಟಿಯಾಗುತ್ತೇನೆ.. ನಮಸ್ಕಾರ.
ಸಹ ಶಿಕ್ಷಕಿ, ಸರ್ಕಾರಿ ಹಿರಿಯ ಪ್ರಾಥಮಿಕ
ಶಾಲೆ , ಬಾಳೆಪುಣಿ (ಇರಾ)
ಬಂಟ್ವಾಳ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
Mob : +91 78925 87191
*******************************************