-->
ಹಕ್ಕಿ ಕಥೆ : ಸಂಚಿಕೆ - 149

ಹಕ್ಕಿ ಕಥೆ : ಸಂಚಿಕೆ - 149

ಹಕ್ಕಿ ಕಥೆ : ಸಂಚಿಕೆ - 149
ಲೇಖಕರು : ಅರವಿಂದ ಕುಡ್ಲ
ಅಧ್ಯಾಪಕ
ಮೂಡಂಬೈಲು ಹಿರಿಯ ಪ್ರಾಥಮಿಕ ಶಾಲೆ
ಬಂಟ್ವಾಳ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ

        
     ಎಲ್ಲರಿಗೂ ನಮಸ್ಕಾರ. ಈ ವಾರದ ಹಕ್ಕಿ ಕಥೆಗೆ ಸ್ವಾಗತ.... ಬೇಸಗೆಯ ಬಿಸಿಲು ತಾರಕದಲ್ಲಿದೆ. ಬಿಸಿಲು ಏರಿದ ಮೇಲೆ ಹೊರಗೆ ಹೋಗುವುದೇ ಬೇಡ ಎನ್ನುವಷ್ಟು ಕಿರಿಕಿರಿ. ಕಳೆದ ವಾರ ಚುನಾವಣಾ ಕರ್ತವ್ಯ ಮುಗಿಸಿ ಬಂದು ಆರೋಗ್ಯವೂ ಸ್ವಲ್ಪ ಕೆಟ್ಟಿತ್ತು. ಎರಡು ದಿನ ಎಲ್ಲೂ ಹೋಗದೆ ಮನೆಯಲ್ಲೇ ವಿಶ್ರಾಂತಿ ಪಡೆದೆ. ರಜೆಯಲ್ಲಿ ಆಟ ಆಡಲು ಯಾರೂ ಇಲ್ಲದೆ ಮಗಳು ಮನೆಯಲ್ಲಿ ಚಡಪಡಿಸುತ್ತಿದ್ದಳು. ಅಪ್ಪಾ ಬೀಚ್ ಗೆ ಹೋಗಿ ಸ್ವಲ್ಪ ಆಟ ಆಡಿ ಬರೋಣ ಎಂದು ಪ್ರಸ್ತಾವನೆ ಇಟ್ಟಳು. ತಕ್ಷಣ ಆಗಬಹುದು ಎಂದು ಮಗಳನ್ನೂ ಮಡದಿಯನ್ನೂ ಕರೆದುಕೊಂಡು ತಣ್ಣೀರುಬಾವಿ ಬೀಚ್ ಕಡೆ ಬಂದೆ. ವಾರದ ದಿನವಾದ್ದರಿಂದ ಹೆಚ್ಚು ಜನಜಂಗುಳಿ ಇರಲಿಲ್ಲ. ನೀರಿನ ಮಟ್ಟ ಸ್ವಲ್ಪ ಹೆಚ್ಚಿತ್ತು. ಚಂದ್ರ ಮತ್ತು ಭೂಮಿಯ ನಡುವೆ ಗುರುತ್ವಾಕರ್ಷಣೆಯ ಕಾರಣದಿಂದ ಸಮುದ್ರ ತೀರದಲ್ಲಿ ಉಬ್ಬರ ಮತ್ತು ಇಳಿತಗಳಾಗುತ್ತವೆ. ಇಳಿತ ಇದ್ದಾಗ ಬಹಳ ಅಗಲ ಆಟವಾಡುವ ಜಾಗ ಇರುತ್ತಿದ್ದುದು ಉಬ್ಬರದ ಕಾರಣ ಬಹಳ ಕಿರಿದಾಗಿ ಕಾಣುತ್ತಿತ್ತು. ಮಗಳಿಗೆ ಇದರ ಪರಿವೆಯೇ ಇರಲಿಲ್ಲ. ಬೇಗ ಹೋಗಿ ಕಾಲು ಒದ್ದೆ ಮಾಡಿಕೊಂಡು ಆಟ ಪ್ರಾರಂಭ ಮಾಡಿದಳು. ಅವಳ ಅಮ್ಮನೂ ಸೇರಿಕೊಂಡಳು. ಇಬ್ಬರೂ ಮರಳಿನಲ್ಲಿ ಮನೆ ಕಟ್ಟಲು ಪ್ರಾರಂಭ ಮಾಡಿದರು. 
         ಸಮುದ್ರದ ಅಲೆಗಳ ಜೊತೆ ಬರುವ ಸಂಜೆಯ ಗಾಳಿಯೂ ಬಿಸಿಯಾಗಿತ್ತು. ದೂರದಲ್ಲಿ ನೋಡಿದರೆ ಬೀಸಿ ಬಂದ ಗಾಳಿ ದೂರದ ಕಡಲ ಕಿನಾರೆಯ ಮೇಲೆ ನೀರಿನ ಹನಿಗಳನ್ನು ತಂದು ರಾಶಿ ಹಾಕುತ್ತಿರುವಂತೆ ಕಾಣುತ್ತಿತ್ತು. ಸ್ವಲ್ಪ ಹೊತ್ತು ಅದನ್ನೇ ನೋಡುತ್ತಾ ಸುಮ್ಮನೆ ಕುಳಿತಿದ್ದೆ. ಅಷ್ಟರಲ್ಲಿ ಪಕ್ಕದ ಮರಳಿನ ಮೇಲೆ ಏನೋ ಓಡಾಡಿದ ಹಾಗಾಯ್ತು. ಸೂಕ್ಷ್ಮವಾಗಿ ಗಮನಿಸಿದಾಗ ಮರಳಿನದ್ದೇ ಬಣ್ಣದ ಸಣ್ಣ ಏಡಿಗಳು ತಮ್ಮ ಬಿಲದ ಒಳಗಿನಿಂದ ಹೊರಬಂದು ಓಡಾಡುತ್ತಿರುವುದು ಕಾಣಿಸಿತು. ಮರಳಿನಲ್ಲಿ ಸಣ್ಣ ಸಣ್ಣ ನೂರಾರು ತೂತುಗಳು ಕಾಣಿಸಿದವು. ನೀರಿನ ತೆರೆಗಳು ತೀರಕ್ಕೆ ಬಂದು ಅಪ್ಪಳಿಸುವಾಗ ಅವು ತಮ್ಮ ಬಿಲದ ಒಳಗೆ ಅಡಗಿ ಮರೆಯಾಗುತ್ತಿದ್ದವು. ನೀರಿನ ತೆರೆ ಸರಿದ ಮೇಲೆ ಹೊರಗಡೆ ಬಂದು ಮರಳಿನ ಉಂಡೆಯನ್ನು ಹೊರಗೆಸೆದು ಆಕಡೆ ಈ ಕಡೆ ಅಡ್ಡಡ್ಡ ಓಡಾಡಿ ಏನನ್ನೋ ಹುಡುಕುತ್ತಿದ್ದವು.  ಅಷ್ಟರಲ್ಲಿ ಆಕಡೆ ದೂರದಿಂದ ಯಾರೋ ನಡೆದು ಬರುತ್ತಿರುವುದು ಕಾಣಿಸಿತು. ನಡೆದು ಬರುತ್ತಿರುವ ವ್ಯಕ್ತಿಯ ಮುಂದೆ ಮರಳಿನ ಮೇಲೆ ಕಪ್ಪು ಬಿಳಿ ಬಣ್ಣದ ಯಾವುದೋ ಪುಟಾಣಿ ಹಕ್ಕಿ ನೆಲದ ಮೇಲೆ ಓಡುತ್ತಿರುವುದು ಕಾಣಿಸಿತು. ನಡೆದುಕೊಂಡು ಬರುತ್ತಿರುವ ವ್ಯಕ್ತಿ ತನ್ನನ್ನು ಹಿಡಿದು ಬಿಡುತ್ತಾನೆ ಎಂದು ಭಯ ಆಯ್ತೋ ಏನೋ ತಕ್ಷಣ ಹಾರಿ ನೀರಿನ ಮೇಲೆ ತೇಲುತ್ತಾ ಆತನಿಂದ ದೂರ ಹೋಯಿತು. ಮತ್ತೆ ತನ್ನ ಪುಟಾಣಿ ದೇಹವನ್ನು ಕೀಲು ಕುದುರೆಯಂತೆ ಕುಣಿಸುತ್ತಾ ಮರಳಿನಲ್ಲಿ ಕೊಕ್ಕು ಚುಚ್ಚಿ ಏನನ್ನೋ ಹುಡುಕಲು ಆರಂಭಿಸಿತು. 
         ನನ್ನ ಗಮನ ಎಲ್ಲ ಈಗ ಹಕ್ಕಿಯ ಮೇಲೆ ಹೋಯಿತು. ಬೆನ್ನು, ತಲೆ, ರೆಕ್ಕೆಗಳೆಲ್ಲ ಬೂದು ಬಣ್ಣ, ಹೊಟ್ಟೆ, ಕುತ್ತಿಗೆಗಳು ಬಿಳೀ ಬಣ್ಣ, ಸ್ವಲ್ಪ ಉದ್ದದ ಕೊಕ್ಕು, ಮೋಟು ಬಾಲ,ಪುಟಾಣಿ ಕಾಲುಗಳ ಹಕ್ಕಿ. ಮರಳಿನ ನಡುವೆ ಇರುವ ಏಡಿಗಳು ಮತ್ತು ನೀರಿನ ಮೂಲಗಳ ಆಸುಪಾಸಿನಲ್ಲಿ ಸಿಗುವ ಜೀವಿಗಳು ಇದರ ಮುಖ್ಯ ಆಹಾರವಂತೆ. ಚಳಿಗಾಲದಲ್ಲಿ ಉಷ್ಣವಲಯದ ಪ್ರದೇಶಗಳಿಗೆ ವಲಸೆ ಬರುವ ಈ ಹಕ್ಕಿಗಳು ಮೇ ತಿಂಗಳ ಮೊದಲ ವಾರದಲ್ಲಿ ಮರಳಿ ಉತ್ತರದ ತಮ್ಮ ನೆಲೆಗಳಿಗೆ ವಾಪಾಸು ಹೋಗುತ್ತವೆಯಂತೆ. 

       ಸೂರ್ಯಾಸ್ತ ಆಗಿ ಕತ್ತಲಾಯ್ತು. ನಾವು ಹೊರಡುವಾಗಲೂ ಹಕ್ಕಿ ಅಲ್ಲೇ ಅಡ್ಡಾಡುತ್ತಿತ್ತು.‌ ಇನ್ನೇನು ಮರಳಿ ತವರಿಗೆ ಹೊರಟಿರುವ ಹಕ್ಕಿಗೆ ಸುಖ ಪ್ರಯಾಣ ಎಂದು ಹೇಳುತ್ತಾ ನಾವು ನಮ್ಮ ಮನೆಗೆ ಹೊರಟೆವು.
ಕನ್ನಡದ ಹೆಸರು: ಗದ್ದೆಗೊರವ
ಇಂಗ್ಲೀಷ್ ಹೆಸರು: Common Sandpiper
ವೈಜ್ಞಾನಿಕ ಹೆಸರು: Actitis hypoleucos
ಚಿತ್ರ ಕೃಪೆ : ಕಿರಣ್ ಕಿಗ್ಗಾಲ್
ಮುಂದಿನ ವಾರ ಹೊಸತೊಂದು ಹಕ್ಕಿ ಕಥೆಯೊಂದಿಗೆ ಭೇಟಿ ಮಾಡೋಣ.