ಹೃದಯದ ಮಾತು : ಸಂಚಿಕೆ - 41
Thursday, May 9, 2024
Edit
ಹೃದಯದ ಮಾತು : ಸಂಚಿಕೆ - 41
ಲೇಖಕರು : ಯಾಕೂಬ್ ಎಸ್ ಕೊಯ್ಯೂರು
ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಮುಖ್ಯ ಶಿಕ್ಷಕರು
ಸರಕಾರಿ ಪ್ರೌಢಶಾಲೆ ಕಾಯರ್ತಡ್ಕ
ಬೆಳ್ತಂಗಡಿ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
ಅಪ್ಪನಿಗೆ ಹಸಿವಾಗುತ್ತಿದೆ. ಹೊತ್ತು ದಾಟಿದೆ. ಕೇಳೋಣವೆಂದರೆ ಸೊಸೆಯ ಭಯ. ಅಡುಗೆ ಕೋಣೆಯಲ್ಲಿ ಸೊಸೆಯ ಗೊಣಗಾಟ ಬೇರೆ. ಕಡೆಗೂ ತಟ್ಟೆಯಲ್ಲಿ ಅನ್ನ ಸಾರು ತಂದು ಅಪ್ಪನ ಮುಂದೆ ಜೋರಾಗಿ ಕುಕ್ಕಿದಳಾಕೆ. ಸ್ವಲ್ಪ ಸಾರು ಮೈಮೇಲೆ ಚೆಲ್ಲಿದರೂ, ವಿರೋಧಿಸುವ ಶಕ್ತಿ ಅವರಲ್ಲಿರಲಿಲ್ಲ. ಮಗನ ಕಣ್ಣೆದುರೇ ಇವೆಲ್ಲಾ ನಡೆಯುತ್ತಿದ್ದರೂ ಅಸಹಾಯಕನಾಗಿದ್ದ. ಬಳಿ ಬಂದು ಅಪ್ಪನನ್ನು ಅಪ್ಪಿಕೊಂಡು ಕಣ್ಣೀರು ಸುರಿಸಿದ. ಅಪ್ಪನಿಗೂ ಆತನ ಅಸಹಾಯಕತೆಯ ಅರಿವಿತ್ತು. ಮಗನ ಬೆನ್ನು ಸವರಿ ಸಮಾಧಾನ ಪಡಿಸುತ್ತಿದ್ದರು ಅಪ್ಪ.
ಸೊಸೆ ಮನಗೆ ಕಾಲಿಟ್ಟು ವರ್ಷವಿನ್ನೂ ಪೂರ್ತಿಯಾಗಿರಲಿಲ್ಲ. ಅದಾಗಲೇ ತನ್ನ ಜೀವನಾಡಿಯಾಗಿದ್ದ ಮಡದಿ ಇಹಲೋಕ ತ್ಯಜಿಸಿದ್ದಳು. ಅಲ್ಲಿ ತನಕ ಯಾವುದೇ ಸಮಸ್ಯೆಯಿಲ್ಲದೆ ಸುಖವಾಗಿದ್ದ ಅಪ್ಪನಿಗೆ ಬದುಕಿನ ಕರಾಳ ಮುಖ ಗೋಚರಿಸತೊಡಗಿತು. ಸೊಸೆಯ ದಿನನಿತ್ಯದ ಮಾನಸಿಕ ಹಾಗೂ ದೈಹಿಕ ಹಿಂಸೆಯಿಂದ ಆ ಮುದಿ ಜೀವ ಮುದುಡಿ ಹೋಗಿತ್ತು. ಅಂದು ತನ್ನ ಒಂದಷ್ಟು ಬಟ್ಟೆ ಚೀಲದಲ್ಲಿ ತುಂಬಿಸಿ ಮಗನ ಮುಂದೆ ನಿಂತು "ಮಗ ನನ್ನ ಸಂಬಂಧಿಯೊಬ್ಬರು ನನ್ನನ್ನು ಮನೆಗೆ ಕರೆಯುತ್ತಿದ್ದಾರೆ, ಸ್ವಲ್ಪ ದಿನ ಹೋಗಿ ಬರುತ್ತೇನೆ" ಎಂದವರೇ ಮಗನನ್ನು ಅಪ್ಪಿಕೊಂಡರು. ಮಗನೂ ಅಪ್ಪನಿಗೆ ಹೆಂಡತಿಯಿಂದಾಗುತ್ತಿದ್ದ ಕಿರುಕುಳದಿಂದ ಬೇಸತ್ತಿದ್ದ. "ಆಗಲಿ ಅಪ್ಪಾ, ಹೋಗಿ ಬನ್ನಿ" ಅಂದ. ಸೊಸೆ ದೂರದಲ್ಲಿ ನೋಡುತ್ತಾ ಮನಸ್ಸಲ್ಲೇ ಖುಷಿಪಡುತ್ತಿದ್ದಳು.
ಸಂಬಂಧಿಕರ ಮನೆಗೆಂದು ಹೊರಟ ಅಪ್ಪ ಯಾವುದೋ ಪೇಟೆಯ ಬೀದಿಯಲ್ಲಿ ಭಿಕ್ಷೆ ಬೇಡಿ ಬದುಕುತ್ತಿದ್ದ ವಿಷಯ ಮಗನಿಗೆ ತಿಳಿಯಲೇ ಇಲ್ಲ. ಇದೊಂದು ಕತೆಯಾಗಿ ಕಂಡರೂ ವಾಸ್ತವವಾಗಿ ಅಪ್ಪಂದಿರ ಪರಿಸ್ಥಿತಿ ಬಿಗಡಾಯಿಸುತ್ತಿರುವು ದಂತೂ ಸತ್ಯ. ಇತ್ತೀಚೆಗೆ ಆಸ್ತಿ ವಿಷಯಕ್ಕೆ ಸಂಬಂಧಿಸಿ ಮಗ ಅಪ್ಪನನ್ನು ಕೈಯಿಂದಲೇ ಹೊಡೆದು ಸಾಯಿಸಿದ ವೀಡಿಯೋವೊಂದು ಹೃದಯ ಹಿಂಡುವಂತಿತ್ತು. ಆಸ್ತಿಗಾಗಿ ಅಪ್ಪನನ್ನು ಕೊಲ್ಲುವ ಮಕ್ಕಳು ಅಸಂಖ್ಯ. ಮನೆಯ ನಾಲ್ಕು ಗೋಡೆಗಳ ಮಧ್ಯೆ ಮಾನಸಿಕ ಹಾಗೂ ದೈಹಿಕ ಹಿಂಸೆಯನ್ನು ಸಹಿಸುತ್ತಾ ಬದುಕುತ್ತಿರುವ ನೂರಾರು ಅಪ್ಪಂದಿರು ನಮ್ಮ ಮಧ್ಯೆ ಬದುಕಿರುವುದನ್ನು ಅಲ್ಲಗಳೆಯಲಾಗದು.
ತ್ಯಾಗದ ಬದುಕಿಗೆ ಅನುಪಮ ಉದಾಹರಣೆಯೇ ಅಪ್ಪ. ತನ್ನ ಹೆಂಡತಿ ಹಾಗೂ ಮಕ್ಕಳ ಹಿತಕ್ಕಾಗಿ ಆತ ಮೌನವಾಗಿ ಎಲ್ಲಾ ಕಷ್ಟಗಳನ್ನು ಸಹಿಸಬಲ್ಲ. ದಿನದ ದುಡಿಮೆ ಕಡಿಮೆ ಇದ್ದಾಗ ಉಪವಾಸ ಬಿದ್ದಾದರೂ ಮನೆ ಮಂದಿಯ ಹಸಿವು ನೀಗಿಸಬಲ್ಲನಾತ. ತಾನು ಹರಿದ ಬಟ್ಟೆ ಧರಿಸಿದರೂ ಮಕ್ಕಳಿಗೆ ದುಬಾರಿ ಬಟ್ಟೆ ಕೊಡಿಸುವಲ್ಲಿ ಹಿಂಜರಿಯಲಾರ. ಕಾಲಲ್ಲಿ ಧರಿಸಿದ ಚಪ್ಪಲಿ ತೂತಾಗಿದ್ದರೂ, ಮಕ್ಕಳಿಗೆ ಹೊಸ ಚಪ್ಪಲಿ ಕೊಡಿಸುವಲ್ಲಿ ಬೇಸರಿಸಲಾರ. ತನಗೆ ಕಾಣದ ದೃಶ್ಯವನ್ನು ಹೆಗಲ ಮೇಲೆ ಕೂರಿಸಿ ಮಕ್ಕಳಿಗೆ ತೋರಿಸಬಲ್ಲ ಹೃದಯವಂತ ಅಪ್ಪ.
ಬೆಳಿಗ್ಗೆಯಿಂದ ಸಂಜೆ ತನಕ ಉರಿ ಬಿಸಿಲಿನಲ್ಲಿ ದುಡಿಯುತ್ತಾ, ತಲೆಗೆ ಸುತ್ತಿಕೊಂಡ ತುಂಡು ಬಟ್ಟೆಯಲ್ಲಿ ಆಗಾಗ ಬೆವರು ಒರೆಸಿಕೊಳ್ಳುತ್ತಿರುವಾಗ ಕರುಳು ಹಿಂಡುವಂತಿರುತ್ತದೆ. ಆ ಮಧ್ಯೆಯೂ ತನ್ನ ಮಕ್ಕಳು ಶಾಲೆಯಲ್ಲಿ ಕುಳಿತು ಓದುತ್ತಿರುವ ದೃಶ್ಯ ಕಲ್ಪಿಸಿಕೊಂಡು ಮನಸ್ಸಿಗೆ ನೆಮ್ಮದಿ ತಂದುಕೊಳ್ಳುವ ಅಪ್ಪನ ತ್ಯಾಗಕ್ಕೆ ಸರಿಸಾಟಿ ಇರದು. ಶ್ರೀಮಂತಿಕೆ ಇರಲಿ, ಇಲ್ಲವೇ ಬಡತನವಿರಲಿ ಅಪ್ಪ ತನ್ನ ಮಕ್ಕಳಿಗಾಗಿ ಎಂದೂ ಜಿಪುಣನಾಗಲಾರ. ದಿನದಿಂದ ದಿನಕ್ಕೆ ಕೃಶವಾಗುತ್ತಾ ಮಕ್ಕಳಿಗಾಗಿ ಬದುಕುತ್ತಿರುವ ಅಪ್ಪಂದಿರು, ತನ್ನ ಇಳಿ ವಯಸ್ಸಿನಲ್ಲಿ ನಿರ್ಗತಿಕರಂತೆ ಬದುಕುತ್ತಿರುವುದು ಕಾಲದ ಮಹಿಮೆಯೇ ಸರಿ.
ಮಕ್ಕಳಿಂದ ಮನೆಯಿಂದ ಹೊರದಬ್ಬಲ್ಪಟ್ಟ ಅಪ್ಪಂದಿರು ಸಹಸ್ರ ಸಂಖ್ಯೆಯಲ್ಲಿ ಕಾಣಬಹುದು. ಬೀದಿಯಲ್ಲಿ ವ್ಯಾಪಾರ ಮಾಡುತ್ತಿರುವ ಇಳಿವಯಸ್ಸಿನ ಬಹುತೇಕ ಮಂದಿ ಮಕ್ಕಳಿಂದ ಬೀದಿಗೆ ತಳ್ಳಲ್ಪಟ್ಟ ದುರಾದೃಷ್ಟವಂತ ಅಪ್ಪಂದಿರಾಗಿರುತ್ತಾರೆ. ಭಿಕ್ಷಾ ಪಾತ್ರೆ ಹಿಡಿದು, ಬೀದಿ ಸುತ್ತಿ ಹಸಿವು ನೀಗಿಸಿಕೊಳ್ಳುತ್ತಿರುವ ನೂರಾರು ಮಂದಿಯ ಮಕ್ಕಳು, ಇದೇ ಭಿಕ್ಷುಕ ಕಟ್ಟಿದ ಮನೆಯಲ್ಲಿ ಸುಖ ನಿದ್ರೆ ಮಾಡುತ್ತಿರುವುದು ವಿಪರ್ಯಾಸವೇ ಸರಿ.
ಅಪ್ಪ ಅಂದರೆ ಆಕಾಶ. ಅಪ್ಪ ಅಂದರೆ ಮಾಣಿಕ್ಯ. ಶ್ರೀಮಂತರಿರಲಿ ಬಡವರಿರಲಿ ಅಪ್ಪನ ಸ್ಥಾನ ಮಕ್ಕಳ ಬದುಕಲ್ಲಿ ಸಾಮಾನ್ಯವಾಗಲು ಸಾಧ್ಯವೇ ಇಲ್ಲ. ವೃದ್ಧಾಪ್ಯದಲ್ಲಿ ಅವರ ಹಾರೈಕೆ ಮಕ್ಕಳ ಕರ್ತವ್ಯ. ಅಸಹಾಯಕ ಅಪ್ಪಂದಿರಿಗೆ ಬೇಕಿರುವುದು ಹಾರೈಕೆಯಷ್ಟೇ!. ಹೊತ್ತಿಗೆ ಒಂದಿಷ್ಟು ಆಹಾರ, ತೊಡಲು ಕನಿಷ್ಟ ಬಟ್ಟೆಯಷ್ಟೇ ಅವರ ಬೇಡಿಕೆಯಿರಬಹುದು. ದಿನಕ್ಕೊಂದು ಸ್ನಾನ, ಹಿತವಾದ ನಾಲ್ಕು ಮಾತು ಅವರಿಗೆ ನೆಮ್ಮದಿಯನ್ನು ನೀಡಬಲ್ಲುದು. ವೃದ್ಧಾಪ್ಯದ ಅಪ್ಪಂದಿರಿಗೆ ಹಣದ ಅಗತ್ಯವಿರದು, ಅವರಿಗೆ ಬೇಕಿರುವುದು ಮಕ್ಕಳ ಸಾನಿಧ್ಯ. ಹಿತವಾದ ಮಕ್ಕಳ, ಮೊಮ್ಮಕ್ಕಳ ಸ್ಪರ್ಶವಷ್ಟೇ.
ಸಂಬಂಧ, ಬಾಂಧವ್ಯಗಳು ಕಾಲ ಕಸವಾಗುತ್ತಿರುವ ಕಾಲವಿದು. ಆರೋಗ್ಯ ಹಾಗೂ ಹಣವಿದ್ದರಷ್ಟೇ ಎಲ್ಲಾ ಸಂಬಂಧಗಳು!!!. ಭಾವನಾತ್ಮಕವಾದ ಬದುಕು ಸತ್ವಹೀನವಾಗಿದೆ. ಭವಿಷ್ಯದಲ್ಲಿ ವೃದ್ಧಾಪ್ಯಕ್ಕೆ ಕಾಲಿಡುತ್ತಿರುವ ಅಪ್ಪಂದಿರು ಕರುಳ ಸಂಬಂಧದ ಸ್ಪರ್ಶವಿಲ್ಲದ ಜಗತ್ತಿನಲ್ಲಿ ವೇದನೆಯ ಬದುಕು ಸಾಗಿಸುವುದು ಅನಿವಾರ್ಯವಾಗಬಹುದು. ಅದು ಮನೆ ಇಲ್ಲವೇ ವೃದ್ಧಾಶ್ರಮಗಳಾಗಿರಬಹುದು. ಆ ಕಾಲಕ್ಕೆ ಸಿದ್ಧವಾಗುವ ಮನೋಸ್ಥಿತಿಯನ್ನು ರೂಢಿಸಿಕೊಳ್ಳಬೇಕೇ ಹೊರತು, ಭಾವನಾತ್ಮಕ ಜಗತ್ತಿಗೆ ಮತ್ತೆ ಮರುಳುವ ಕನಸು ವ್ಯರ್ಥವೇ ಸರಿ.
ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಮುಖ್ಯ ಶಿಕ್ಷಕರು
ಸರಕಾರಿ ಪ್ರೌಢಶಾಲೆ ಕಾಯರ್ತಡ್ಕ
ಬೆಳ್ತಂಗಡಿ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
Mob : +91 90089 83286
******************************************
ನನ್ನ ಲೇಖನಗಳ ಸಂಗ್ರಹ (ಒಟ್ಟು62) ಪುಸ್ತಕದ ರೂಪದಲ್ಲಿ ಲಭ್ಯವಿದೆ. ಆಸಕ್ತಿಯುಳ್ಳ ಓದುಗರು ಸಂಪರ್ಕಿಸಬಹುದು....... ಯಾಕೂಬ್ ಎಸ್ ಕೊಯ್ಯೂರು, ರಾಷ್ಟ್ರ ಪ್ರಶಸ್ತಿ ಪುರಸ್ಕೃತ
ಮುಖ್ಯ ಶಿಕ್ಷಕರು,
ಸರಕಾರಿ ಪ್ರೌಢಶಾಲೆ ಕಾಯರ್ತಡ್ಕ
ಬೆಳ್ತಂಗಡಿ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
Mob : +91 90089 83286
******************************************