-->
ಹೃದಯದ ಮಾತು : ಸಂಚಿಕೆ - 40

ಹೃದಯದ ಮಾತು : ಸಂಚಿಕೆ - 40

ಹೃದಯದ ಮಾತು : ಸಂಚಿಕೆ - 40
ಲೇಖಕರು : ಯಾಕೂಬ್ ಎಸ್ ಕೊಯ್ಯೂರು
ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಮುಖ್ಯ ಶಿಕ್ಷಕರು
ಸರಕಾರಿ ಪ್ರೌಢಶಾಲೆ ಕಾಯರ್ತಡ್ಕ
ಬೆಳ್ತಂಗಡಿ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ


  
       "ಅಬ್ಬಾ ಇದೆಂತಹ ಬಿಸಿಲು, ಸೆಕೆ ತಡೆಯಲಾಗುತ್ತಿಲ್ಲ. ಹೊರಗಡೆ ಹೆಜ್ಜೆ ಹಾಕುವುದೇ ಅಸಾಧ್ಯ. ಇಂತಹ ಉರಿ ನನ್ನ ಅನುಭವದಲ್ಲಿ ಈ ವರೆಗೆ ಕಂಡಿಲ್ಲ" ಇದು ಇತ್ತೀಚೆಗೆ ಪ್ರತಿಯೊಬ್ಬರ ಬಾಯಿಂದ ಹೊರಡುವ ವಾಕ್ಯಗಳು. ಮದುವೆ, ಮದರಂಗಿ ಕಾರ್ಯಕ್ರಮಗಳಲ್ಲಿ ಒಂದತ್ತು ನಿಮಿಷ ನಿಲ್ಲಲಾಗುತ್ತಿಲ್ಲ. ಸಂತೆಗಳು ಹಾಗೂ ಬೀದಿಬದಿ ವ್ಯಾಪಾರ ಅಸಾಧ್ಯವಾಗುತ್ತಿದೆ. ಕಾರ್ಮಿಕರು ಕೆಲಸ ಮಾಡುವುದು ದುಸ್ತರವಾಗಿದೆ. ವ್ಯಾಪಾರ ಮಳಿಗೆಗಳಲ್ಲಿ, ಕಚೇರಿಗಳಲ್ಲಿ ಸಮಯ ಕಳೆಯಲಾಗುತ್ತಿಲ್ಲ. ವಾಹನಗಳಲ್ಲಿ ಪ್ರಯಾಣ ಕಠಿಣವಾಗಿದೆ. ಬೈಕ್ ಸವಾರರಿಗಂತು ಯಮ ಯಾತನೆಯ ಅನುಭವ. ಕೆಲವೊಮ್ಮೆ ಆಕಾಶದತ್ತ ದೃಷ್ಟಿ ಬೀರಿ ಮೋಡದ ತುಣುಕುಗಳೇನಾದರೂ ಕಾಣಬಹುದೇ ಎಂಬ ನಿರೀಕ್ಷೆ.

ಸರ್ವತ್ರವಾಗಿ ಭೂ ಮಂಡಲ ಕೆಂಡಾಮಂಡಲವಾಗಿದೆ. ಒಂದರ್ಥದಲ್ಲಿ ಪ್ರಕೃತಿ ಮುನಿಸಿಕೊಂಡಿರಬೇಕು. 20 ರಿಂದ 35 ಡಿಗ್ರಿ ಸೆಲಿಷಿಯಸ್ಸ್ ಬಹುಶಃ ಮನುಷ್ಯ ಸಹಿಸಿಕೊಳ್ಳಬಹುದಾದ ಉಷ್ಣತೆ. ಆಂಧ್ರದ ನಂದ್ಯಾಲದಲ್ಲಿ 45.6C, ರಾಯಚೂರಿನಲ್ಲಿ 43C, ಕಲ್ಬುರ್ಗಿಯಲ್ಲಿ 42.9 C ಉಷ್ಣತೆ ದಾಖಲಾಗಿದ್ದು ಮನುಕುಲಕ್ಕೆ ಎಚ್ಚರಿಕೆಯ ಗಂಟೆಯಾಗಿದೆ. ಅಲ್ಲದೆ ನೂರಾರು ಕಡೆ ಉಷ್ಣತೆ 40C ಗಿಂತಲೂ ಅಧಿಕ ದಾಖಲಾಗಿದೆ. ಮ್ಯಾನ್ಮಾರ್ ನ ಟೌನ್ಶಿಪ್ ನಲ್ಲಿ ಜಗತ್ತಿನ ಗರಿಷ್ಠ 48.2C ಉಷ್ಣತೆ ದಾಖಲಾಗಿರುವುದು ಭಯ ಮೂಡಿಸುತ್ತಿದೆ.

ಮನೆಯ ಒಳಗಡೆಯೂ ಇರಲಾಗದ ಪರಿಸ್ಥಿತಿ ಬಂದೊದಗಿದೆ. ವರ್ಷದಿಂದ ವರ್ಷಕ್ಕೆ ಉಷ್ಣತೆಯ ಪ್ರಮಾಣ ಏರುತ್ತಿರುವುದು ಗಮನಿಸಲಾಗುತ್ತಿದೆ. 'ಗ್ಲೋಬಲ್ ವಾರ್ಮಿಂಗ್' ಬಗ್ಗೆ ನಾವು ತಳೆದ ದಿವ್ಯ ನಿರ್ಲಕ್ಷ್ಯ ನಮ್ಮ ಭವಿಷ್ಯದ ಪೀಳಿಗೆಯನ್ನು ವಿನಾಶದತ್ತ ಒಯ್ಯುತ್ತಿದೆ. '2015 ರ ಪ್ಯಾರೀಸ್ ಕ್ಲೈಮೇಟ್ ಅಗ್ರಿಮೆಂಟ್' ಪರಿಸರ ಉಳಿಸುವತ್ತ ತೆಗೆದುಕೊಂಡ ಉತ್ತಮ ನಿರ್ಧಾರವಾಗಿತ್ತಾದರೂ, ಅದರ ಅನುಷ್ಠಾನದಲ್ಲಿ ನಿರ್ಲಕ್ಷ್ಯ ವಹಿಸಲಾಯಿತು. ಇಲ್ಲವಾದಲ್ಲಿ ಅಲ್ಪ ಪ್ರಮಾಣದಲ್ಲಾದರೂ ಹಾನಿಯನ್ನು ತಪ್ಪಿಸಬಹುದಾಗಿತ್ತು.

ಭೂಮಿಯ ಸುತ್ತ ಆವರಿಸಿರುವ ಓಝೋನ್ ಪದರ ನಮ್ಮ ಜೀವ ರಕ್ಷಕ. ಸೂರ್ಯನ ಅಪಾಯಕಾರಿ ನೇರಳಾತೀತ (ಅಲ್ಟ್ರಾ ವಾಯ್ಲೆಟ್) ವಿಕಿರಣಗಳು ಭೂಮಂಡಲವನ್ನು ಪ್ರವೇಶಿಸುವುದನ್ನು ತಡೆಯುವುದೇ ಈ ಓಝೋನ್ ಪದರ. ವಿಪರೀತ ಪರಿಸರ ಮಾಲಿನ್ಯದಿಂದ ತೂತು ಬಿದ್ದಿರುವ ಓಝೋನ್ ಪದರದ ಸ್ಥಿತಿ ವರ್ಷದಿಂದ ವರ್ಷಕ್ಕೆ ಬಿಗಡಾಯಿಸುತ್ತಿದೆ. ತತ್ಪರಿಣಾಮವಾಗಿ ಭೂಮಿಯನ್ನು ಪ್ರವೇಶಿಸುವ ನೆರಳಾತೀತ ವಿಕಿರಣಗಳು ಮಾರಕವಾದ ಕ್ಯಾನ್ಸರ್ ರೋಗಕ್ಕೆ ಕಾರಣವಾಗಿದೆ. 

"ಹಸಿರು ಮನೆ ಪರಿಣಾಮ" (ಗ್ರೀನ್ ಹೌಸ್ ಇಪೆಕ್ಟ್) ಭೂ ಮಂಡಲಕ್ಕೆ ಮಾರಕವಾಗಿ ಪರಿಣಮಿಸಿದೆ. ಅದರ ಪರಿಣಾಮವೇ ಭೂ ಮಂಡಲ ಕುದಿಯುತ್ತಿರುವುದು. ಸೂರ್ಯನಿಂದ ಬರುವ ರಕ್ತಾತೀತ (ಇನ್ಫ್ರಾ ರೆಡ್) ವಿಕಿರಣಗಳು ಬಾಹ್ಯಮಂಡಲಕ್ಕೆ ಸಹಜವಾಗಿ ಹಿಂತಿರುಗಬೇಕು. ಆದರೆ ಭೂಮಂಡಲದಲ್ಲಿ ನಿರ್ಮಾಣಗೊಂಡ ಕೃತಕ ಪದರ ಅವುಗಳನ್ನು ಹೊರಹೋಗದಂತೆ ತಡೆಯುತ್ತಿದೆ. ಇದರಿಂದ ಭೂ ಪರಿಸರ ತೀವೃವಾಗಿ ಬಿಸಿಯಾಗುತ್ತದೆ. ಇದೇ "ಹಸಿರು ಮನೆ ಪರಿಣಾಮ". ಭೂಮಿಯ ಇನ್ನೊಂದು ಅವಳಿ ಗ್ರಹವಾದ "ಶುಕ್ರಗ್ರಹ" ಕೊತ ಕೊತನೆ ಕುದಿಯಲು ಇದೇ ಕಾರಣ.

ಅರಣ್ಯ ನಾಶ 'ಗ್ಲೋಬಲ್ ವಾರ್ಮಿಂಗ್' ಗೆ ಮನುಷ್ಯ ನೀಡುತ್ತಿರುವ ಉದಾರ ಕೊಡುಗೆ. ಇಂಗಾಲದ ಡೈ ಆಕ್ಸೈಡ್ ಹೀರಿಕೊಂಡು ಆಮ್ಲಜನಕವನ್ನು ಪರಿಸರಕ್ಕೆ ಹೇರಳವಾಗಿ ಕೊಡಬಲ್ಲ ಮರಗಳು ಎಗ್ಗಿಲ್ಲದೆ ಧರೆಗುರುಳುತ್ತಿದೆ. ವಾಹನಗಳ ಅತಿಯಾದ ಬಳಕೆ ಭೂಮಿಯ ಉಷ್ಣತೆಯಲ್ಲಿ ಬಹುಮುಖ್ಯ ಪಾತ್ರ ವಹಿಸುತ್ತಿದೆ. ಭಾರತವೊಂದರಲ್ಲೇ ವಾರ್ಷಿಕ 21 ಮಿಲಿಯ ವಾಹನಗಳು ಹೆಚ್ಚುವರಿಯಾಗಿ ಮಾರ್ಗವನ್ನು ಸೇರುತ್ತಿದೆ. ವಾಹನಗಳು ಕಾರ್ಬನ್ ಮಾನಾಕ್ಸೈಡ್, ಹೈಡ್ರೋಕಾರ್ಬನ್ಸ್, ನೈಟ್ರೋಜನ್ ಆಕ್ಸೈಡ್ಸ್, ಸಲ್ಫರ್ ಡೈ ಆಕ್ಸೈಡ್, ನೀರಾವಿ ಮುಂತಾದ ಮಾರಕ ಅಂಶಗಳನ್ನು ಪರಿಸರಕ್ಕೆ ಹೇರಳವಾಗಿ ಧಾರೆಯೆರೆಯುತ್ತಿದೆ.  
ರೆಫ್ರಿಜರೇಟರ್, ಹವಾನಿಯಂತ್ರಕಗಳಿಂದ ಹೊರಬರುವ ಕ್ಲೋರೋಪ್ಲೂರೋ ಕಾರ್ಬನ್ (CFC) ಗಳು ವಿನಾಶಕಾರಿ ಪರಿಣಾಮ ಬೀರುತ್ತಿದೆ. ಕೈಗಾರಿಕೆಗಳ ಬೆಳವಣಿಗೆ, ಕಲ್ಲಿದ್ದಲು, ಪೆಟ್ರೋಲಿಯಂಗಳು, ಸ್ವಾಭಾವಿಕ ಅನಿಲಗಳು ಇವುಗಳು ಪರಿಸರ ಮಾರಕಗಳಾಗಿ ಪರಿಣಮಿಸಿದೆ.

ಪರಿಸರದಲ್ಲಿ ಅಸಮತೋಲನ ಇಂದು ಸರ್ವವ್ಯಾಪಿಯಾಗಿದೆ. ಆಗಾಗ ಕಂಡು ಬರುತ್ತಿರುವ ಕಾಡ್ಗಿಚ್ಚು ಪರಿಸರದ ಅಸ್ತಿತ್ವವನ್ನೇ ಅಲ್ಲಾಡಿಸುತ್ತಿದೆ. ಜ್ವಾಲಾಮುಖಿಗಳಿಂದ ಸೃಷ್ಠಿಯಾಗುವ ಹೊಗೆ ಹಾಗೂ ಬೂದಿ ಭೂಮಂಡಲಕ್ಕೆ ಮಾರಕವಾಗುತ್ತಿದೆ. ಇವೆಲ್ಲದರ ಪರಿಣಾಮವಾಗಿ ಭೂಮಿಯ ಉಷ್ಣತೆ ವರ್ಷದಿಂದ ವರ್ಷಕ್ಕೆ ಏರುಗತಿಯನ್ನು ಕಾಣುತ್ತಿದೆ.

ನಾವು ಭೂಮಿಯ ಮೇಲೆ ಅನೇಕ ವರ್ಷಗಳ ಹಿಂದೆ ಡೈನಾಸರಸ್ ದೈತ್ಯ ಜೀವಿಗಳು ನಾಶವಾದ ಬಗ್ಗೆ ಕೇಳಿದ್ದೆವು. ಆದರೆ ಇಂದು ನಮ್ಮ ನಾಶದ ಆರಂಭವನ್ನು ನಾವು ಅನುಭವಿಸುತ್ತಿದ್ದೇವೆ. ಏರುತ್ತಿರುವ ಉಷ್ಣತೆಯನ್ನು ಕೂಡಿಟ್ಟ ಹಣದಿಂದ ತಗ್ಗಿಸಲಾಗದು. ಹವಾನಿಯಂತ್ರಕಗಳು ತಾತ್ಕಾಲಿಕ ಶಮನವನ್ನು ನೀಡಬಹುದಷ್ಟೇ. ಪ್ರಕೃತಿದತ್ತವಾದ ಮಳೆ ನಮ್ಮಿಂದ ದೂರ ಸರಿಯುತ್ತಿದೆ. ನೀರಿನ ಸೆಳೆಗಳು ಬರಿದಾಗುತ್ತಿವೆ. ಭೂ ಪದರ ಒಡೆದು ಬಿರುಕು ಬಿಡುತ್ತಿದೆ. ವರ್ಷಗಳು ಗತಿಸಿದಂತೆ ದುಷ್ಪರಿಣಾಮಗಳು ಹೆಚ್ಚಾಗಬಹುದಲ್ಲದೆ ಕಡಿಮೆಯಂತೂ ಆಗದು. ಉಷ್ಣತೆಯ ತೀವ್ರತೆ ಮತ್ತಷ್ಟು ಹೆಚ್ಚುತ್ತಾ ಬಂದಂತೆ ಉರುಳಿ ಬೀಳುವ ಮನುಷ್ಯ ದೇಹಗಳು ಎಲ್ಲೆಂದರಲ್ಲಿ ಸಹಜವಾಗಬಹುದು. ಇದು ಮುಂದುವರಿದಂತೆ ಮನುಕುಲ ಹಾಗೂ ಒಟ್ಟಿಗೆ ಜೀವ ಕುಲ ಈ ಭೂಮಿಗೆ ವಿದಾಯ ಹೇಳದೆ ವಿಧಿಯಿಲ್ಲ. ಮುಂದಿನ ಒಂದೆರಡು ದಶಕಗಳು ಈ ನಿಟ್ಟಿನಲ್ಲಿ ನಿರ್ಣಾಯಕವಾಗಲಿದೆ.
...................... ಯಾಕೂಬ್ ಎಸ್ ಕೊಯ್ಯೂರು
ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಮುಖ್ಯ ಶಿಕ್ಷಕರು
ಸರಕಾರಿ ಪ್ರೌಢಶಾಲೆ ಕಾಯರ್ತಡ್ಕ
ಬೆಳ್ತಂಗಡಿ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
Mob : +91 90089 83286
******************************************


ನನ್ನ ಲೇಖನಗಳ ಸಂಗ್ರಹ (ಒಟ್ಟು62) ಪುಸ್ತಕದ ರೂಪದಲ್ಲಿ ಲಭ್ಯವಿದೆ. ಆಸಕ್ತಿಯುಳ್ಳ ಓದುಗರು ಸಂಪರ್ಕಿಸಬಹುದು....... ಯಾಕೂಬ್ ಎಸ್ ಕೊಯ್ಯೂರು, ರಾಷ್ಟ್ರ ಪ್ರಶಸ್ತಿ ಪುರಸ್ಕೃತ 
ಮುಖ್ಯ ಶಿಕ್ಷಕರು, 
ಸರಕಾರಿ ಪ್ರೌಢಶಾಲೆ ಕಾಯರ್ತಡ್ಕ
ಬೆಳ್ತಂಗಡಿ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
Mob : +91 90089 83286
******************************************


Ads on article

Advertise in articles 1

advertising articles 2

Advertise under the article