-->
ಮಕ್ಕಳಿಗಾಗಿ ವಿಜ್ಞಾನ : ಸಂಚಿಕೆ - 30

ಮಕ್ಕಳಿಗಾಗಿ ವಿಜ್ಞಾನ : ಸಂಚಿಕೆ - 30

ಮಕ್ಕಳಿಗಾಗಿ ವಿಜ್ಞಾನ : ಸಂಚಿಕೆ - 30
ಲೇಖಕರು : ದಿವಾಕರ ಶೆಟ್ಟಿ ಎಚ್
ನಿವೃತ್ತ ಪ್ರವಾಚಕರು
ಸರಕಾರಿ ಶಿಕ್ಷಕ ಶಿಕ್ಷಣ ಮಹಾವಿದ್ಯಾಲಯ
ಮಂಗಳೂರು, ದಕ್ಷಿಣ ಕನ್ನಡ ಜಿಲ್ಲೆ
Mob: 9448571203

     

ಪ್ರೀತಿಯ ಮಕ್ಕಳೇ..... ಒಂದು ಜೀವಿ ಅಂದರೆ ಅದರ ಒಳಗಡೆ ನಿರಂತರವಾಗಿ ಕ್ರಿಯೆಗಳು ನಡೆಯುತ್ತಲೇ ಇರುತ್ತವೆ. ಒಂದಷ್ಟು ಕ್ರಿಯೆಗಳಲ್ಲಿ ಹೊಸ ವಸ್ತುಗಳು ಉತ್ಪತ್ತಿಯಾಗುತ್ತವೆ. ಉದಾಹರಣೆ ಸರಳವಾದ ಅಮೈನೋ ಆಮ್ಲಗಳನ್ನು ಬಳಸಿಕೊಂಡು ಸಂಕೀರ್ಣ ಪ್ರೋಟೀನ್‌ಗಳ ತಯಾರಿಯಾಗುತ್ತವೆ. ದ್ಯುತಿ ಸಂಶ್ಲೇಷಣೆಯ ಹಂತದಲ್ಲಿ ಇಂಗಾಲದ ಡೈಆಕ್ಸೈಡ್ ಮತ್ತು ನೀರನ್ನು ಬಳಸಿಕೊಂಡು ಗ್ಲುಕೋಸ್ ತಯಾರಿಸುತ್ತವೆ. ಕೋಶ ವಿಭಜನೆಯ ಪೂರ್ವದಲ್ಲಿ ಕೋಶವು ಹೊಸ ಸಂಸಾರ ಆರಂಭಿಸಲು ಬೇಕಾದ ಎಲ್ಲ ವಸ್ತುಗಳೂ ಹೊಸದಾಗಿ ತಯಾರಾಗುತ್ತದೆ. ಇವೆಲ್ಲ ಕಟ್ಟುವ ಕೆಲಸಗಳು ಇದನ್ನು ಚಯ ಕ್ರಿಯೆಗಳು (anabolic activities) ಎನ್ನುವುದು. ಉಸಿರಾಟ ನಡೆಯವಾಗ ಗ್ಲುಕೋಸ್ ಆಮ್ಲಜನಕದೊಂದಿಗೆ ವರ್ತಿಸಿ ಸರಳವಾದ ಇಂಗಾಲದ ಡೈಆಕ್ಸೈಡ್ ಆಗಿ ಒಡೆದು ಹೋಗುತ್ತದೆ, ಪ್ರೋಟೀನ್ ಅಮೋನಿಯ, ಯೂರಿಯಾ, ಯೂರಿಕ್ ಆಮ್ಲ ಕ್ರಿಯಾಟಿನ್ ಮೊದಲಾದ ವಸ್ತುಗಳಾಗಿ ಒಡೆಯುತ್ತವೆ. ಇವುಗಳು ಅಪಚಯ ಕ್ರಿಯೆಗಳು (catabolic activities). ಇವೆರಡೂ ಒಟ್ಟಾಗಿ ಚಯಾಪಚಯ ಕ್ರಿಯೆಗಳು (metabolic activities). ಈ ಎಲ್ಲಾ ರಾಸಾಯನಿಕ ಕ್ರಿಯೆಗಳೆಂದರೆ ಹೊಸ ಬಂಧಗಳು (new bonds) ಸ್ಥಾಪಿಸಲ್ಪಡುವುದು ಅಥವಾ ಹಳೆಯ ಬಂಧಗಳು ಒಡೆಯಲ್ಪಡುವದು. ಅಂದರೆ ಶಕ್ತಿ ಬೇಡುವ ಅಥವಾ ಶಕ್ತಿ ಬಿಡುಗಡೆಯಾಗುವ ಕ್ರಿಯೆಗಳು. ಅಂದರೆ ಜೀವಕೋಶದಲ್ಲಿ ಶಕ್ತಿಯ ಬೇಡಿಕೆ ನಿರಂತರ. ಶಕ್ತಿಯ ಉತ್ಪಾದನೆಗೆ ಇಂಧನ ಬೇಕು. ಕೋಶದ ಶಕ್ತಿ ಎಂದರೆ ಆಹಾರ. ಈ ಆಹಾರವನ್ನು ಜೀವಿಗಳು ಸ್ವತಃ ತಯಾರಿಸಿಕೊಳ್ಳಬಹುದು ಅಂದರೆ ಸ್ವಪೋಷಕಗಳು (autotrophs). ಉಳಿದವು ತಮ್ಮ ಆಹಾರಕ್ಕಾಗಿ ಬೇರೆ ಜೀವಿಗಳು ತಯಾರಿಸಿದ ಆಹಾರದ ಮೇಲೆ ಅವಲಂಬಿತವಾಗಿರಬಹುದು ಅಂದರೆ ಪರ ಪೋಷಕಗಳು (hetritrophes). ಇವುಗಳು ಸ್ವಪೋಷಕಗಳನ್ನು ಅಥವಾ ಸ್ವಪೋಷಕಗಳು ಸಂಗ್ರಹಿಸಿದ ಆಹಾರಗಳನ್ನು ಅಂದರೆ ಕಾಳುಗಳು ಗಡ್ಡೆಗಳು ಸೊಪ್ಪುಗಳನ್ನು ತಿಂದು ಜೀರ್ಣಿಸಿಕೊಳ್ಳಬೇಕಾಗತ್ತದೆ. ಅಂದರೆ ಈ ಆಹಾರವನ್ನು ಜೀರ್ಣಿಸಿಕೊಳ್ಳಲು ಒಂದು ಪ್ರತ್ಯೇಕವಾದ ಸಂಕೀರ್ಣ ಅಂಗವ್ಯೂಹವನ್ನು ಹೊಂದಿರಬೇಕಾಗುತ್ತದೆ. ಅಂದರೆ ಸ್ವಪೋಷಕಗಳಿಂದ ಪರಪೋಷಕಗಳಾಗುತ್ತಿದ್ದಂತೆ ಸಂಕೀರ್ಣತೆ ಹೆಚ್ಚುತ್ತಾ ಹೋಗುತ್ತದೆ. ಎಷ್ಟೆಂದರೆ ಏಕ ಕೋಶಿಕ ಪರಪೋಷಕವಾದ ಪ್ಯಾರಮೀಸಿಯಂನಲ್ಲಿ ಕೂಡಾ ಒಂದು ಬಾಯಿಯಂತಹ ರಚನೆ ರೂಪುಗೊಳ್ಳುತ್ತದೆ. ಜೀವ ವಿಕಾಸ ಎಂಬ ಏಣಿಯ ಮೆಟ್ಟಿಲುಗಳೇ ಹಾಗೆ. ಏರುತ್ತಾ ಹೋದಂತೆ ಸಂಕೀರ್ಣವಾಗುತ್ತಾ ಸಾಗುತ್ತದೆ.

ಕೆಲವರು ತಮ್ಮ ಆಹಾರವನ್ನು ಆಹಾರವನ್ನು ತಾವೇ ತಯಾರಿಸಿದರೆ ಇನ್ನು ಕೆಲವರು ಬೇರೆಯವರು ತಯಾರಿಸಿಟ್ಟ ಆಹಾರವನ್ನು ತಾವೇ ತಿಂದುಂಡು ಕೊಬ್ಬಿ ಮೆರೆಯುತ್ತವೆ. ಈ ಪ್ರಪಂಚದಲ್ಲಿ ಆಲಸಿಗಳಿಗೇನು ಕೊರತೆ. ತಮ್ಮ ಆಹಾರವನ್ನು ತಾವೂ ಬೇಯಿಸಲಾರರು ಬೇರೆಯವರು ತಯಾರಿಸಿಟ್ಟ ಆಹಾರವನ್ನು ಜೀರ್ಣಿಸಿಕೊಳ್ಳಲೂ ಆಲಸ್ಯ ಬಿಡದವರು. ಇವರು ಕೊಳಕು ಜಾಗವಾದರೂ ಕೊಳೆತು ಕರಗಿರುವ ಸರಳ ಘಟಕಗಳನ್ನು ಪಾಲಿಗೆ ಬಂದದ್ದು ಪಂಚಾಮೃತ ಎಂದು ಅದನ್ನೇ ಹೀರಿ ಸುಖಿಸುವವರ ಒಂದು ದೊಡ್ಡ ಸಾಮ್ರಾಜ್ಯವೇ ಇದೆ. ಇವರೇ ಕೊಳೆತಿನಿಗಳು (saphrophytes). ಇವುಗಳಿಗೆ ಆಹಾರ ಬೇಯಿಸಲು ಬೇಕಾದ ಎಲೆಗಳು, ಆ ಎಲೆಗಳಲ್ಲಿ ಆಹಾರ ತಯಾರಿಸಲು ಬೇಕಾದ ಪತ್ರಹರಿತ್ತು ಬೇಕಾಗಿಲ್ಲ, ಜೀರ್ಣಿಸಲು ಜೀರ್ಣಾಂಗವ್ಯೂಹ ದ ಅವಶ್ಯಕತೆ ಇಲ್ಲ. ಅಣಬೆಗಳೇ ಈ ಆಲಸಿ ಜೀವಿಗಳು. ಇವುಗಳ ಆಹಾರ ದೇಹದ ಹೊರಗಡೆ ಜೀರ್ಣವಾಗುತ್ತದೆ ಎನ್ನಬಹುದು. 

ನೋಡಿ ಪ್ರಕೃತಿಗೆ ಸರಳತೆ ಬೇಕು, ಸಂಕೀರ್ಣ ರಚನೆ ಮಾಡಲು ವೆಚ್ಚ ಜಾಸ್ತಿ ಎಂದುಕೊಂಡಾಗಲೆಲ್ಲಾ ಅಡ್ಡ ದಾರಿಗಳನ್ನು ಕಂಡುಕೊಳ್ಳುತ್ತದೆ.
.................................... ದಿವಾಕರ ಶೆಟ್ಟಿ ಎಚ್
ನಿವೃತ್ತ ಪ್ರವಾಚಕರು
ಸರಕಾರಿ ಶಿಕ್ಷಕ ಶಿಕ್ಷಣ ಮಹಾವಿದ್ಯಾಲಯ
ಮಂಗಳೂರು, ದಕ್ಷಿಣ ಕನ್ನಡ ಜಿಲ್ಲೆ
Mob: 9448571203
******************************************** 


Ads on article

Advertise in articles 1

advertising articles 2

Advertise under the article