-->
ಜಗಲಿ ಕಟ್ಟೆ : ಸಂಚಿಕೆ - 53

ಜಗಲಿ ಕಟ್ಟೆ : ಸಂಚಿಕೆ - 53

ಜಗಲಿ ಕಟ್ಟೆ : ಸಂಚಿಕೆ - 53
ತಾರಾನಾಥ್ ಕೈರಂಗಳ
ಮಕ್ಕಳ ಜಗಲಿ
ಮಕ್ಕಳ ಡಿಜಿಟಲ್ ಆನ್ಲೈನ್ ಪತ್ರಿಕೆ
ದಕ್ಷಿಣ ಕನ್ನಡ ಜಿಲ್ಲೆ. 


ಇದು ನಿಮ್ಮ ಮನೆಯ 
ಮಕ್ಕಳ ಜಗಲಿ
www.makkalajagali.com
    ಮಕ್ಕಳ ಜಗಲಿಯ ನನ್ನ ಎಲ್ಲಾ ಆತ್ಮೀಯ ಓದುಗ ಬಂಧುಗಳಿಗೆ ಪ್ರೀತಿಯ ನಮಸ್ಕಾರಗಳು.... ನಿಮ್ಮ ಜೊತೆ ಮಾತಾಡುವ ನಿಮ್ಮ ಸಲಹೆ, ಹೊಸ ಆಲೋಚನೆಗಳನ್ನು ನಮ್ಮ ಜೊತೆ ಹಂಚಿಕೊಳ್ಳುವುದಕ್ಕಾಗಿ ಈ ಜಗಲಿ ಕಟ್ಟೆ.... ಮಕ್ಕಳ ಜಗಲಿಗೆ ಸಂಬಂಧಿಸಿದ ಯಾವುದೇ ವಿಷಯದ ಕುರಿತಾಗಿ ನಿಮ್ಮ ಅನಿಸಿಕೆಗಳು ಹಾಗೂ ಸಲಹೆಗಳನ್ನು ಸ್ವೀಕರಿಸುತ್ತೇವೆ. ವಿದ್ಯಾರ್ಥಿಗಳು, ಪೋಷಕರು, ಶಿಕ್ಷಕರು, ಹಿತೈಷಿಗಳು ನಮಗೆ ಬರೆದು ಕಳುಹಿಸಿ.... ಹೆಸರು ವಿಳಾಸ ಹಾಗೂ ಭಾವಚಿತ್ರದೊಂದಿಗೆ ನಿಮ್ಮ ಅನಿಸಿಕೆಗಳು 100 ಪದಗಳ ಮಿತಿಯಲ್ಲಿರಲಿ..... ತಾರಾನಾಥ್ ಕೈರಂಗಳ


     ಬೇಸಿಗೆ ರಜೆ ಕಳೆದು ಮತ್ತೆ ಶಾಲೆ ಆರಂಭವಾಗುವ ದಿನಗಳು ಹತ್ತಿರವಾಯಿತು. ರಜೆಯಲ್ಲಿ ಕಳೆದ ಸಂತೋಷದ ಕ್ಷಣಗಳನ್ನು ಮೆಲುಕು ಹಾಕುವುದೇ ಒಂದು ಸಂಭ್ರಮ. ಆ ಎಲ್ಲಾ ಸಂಭ್ರಮದ ಮೂಟೆಯನ್ನು ಹೊತ್ತು ಮುಂದಿನ ಶೈಕ್ಷಣಿಕ ದಿನಗಳನ್ನು ಪ್ರೀತಿಯಿಂದ ಸ್ವಾಗತಿಸಿ ಸಂತೋಷದಿಂದ ಕಳೆಯಬೇಕು. ಮುಂದಿನ ತರಗತಿಗೆ ಹೋಗಲಿರುವ ತನ್ನ ಶಾಲೆ ಅಥವಾ ಹೊಸ ಶಾಲೆಯು ಆತ್ಮೀಯತೆಯ, ಸಂತಸದ ಕಲಿಕೆಯನ್ನು ಕಟ್ಟಿಕೊಡುವಂತಾಗಲಿ.

ಮೊನ್ನೆ ಮೊನ್ನೆ ನನ್ನ ಬಾಲ್ಯದ ಸ್ನೇಹಿತರೊಬ್ಬರು ಕರೆ ಮಾಡಿದ್ದರು. ಹೈಸ್ಕೂಲ್ನಲ್ಲಿ ನಾವು ಸಹಪಾಠಿಗಳು. ಸುಮಾರು 25 ವರ್ಷಗಳ ಹಿಂದಿನ ಹೈಸ್ಕೂಲಿನಲ್ಲಿ ಕಳೆದ ದಿನಗಳನ್ನು ಮೆಲುಕು ಹಾಕುತ್ತಾ ಮಾತನಾಡುತ್ತಿದ್ದೆವು. ಗಣಿತ ವಿಷಯವನ್ನು ತುಂಬಾ ಕಷ್ಟವೆಂದು ಭಾವಿಸಿದ್ದ ಆತ ಶಾಲಾ ಪರೀಕ್ಷೆಗಳಲ್ಲಿ ಪಾಸಾಗುತ್ತಿದ್ದುದೆ ಬಹಳ ಅಪರೂಪ. ಮನೆಯ ಬಡತನ, ಅನೇಕ ಸಮಸ್ಯೆಗಳ ಮಧ್ಯೆಯು ಶಾಲೆಗಳಲ್ಲಿ ಉತ್ತಮ ಅಂಕ ಗಳಿಸಿ ಕಲಿಯುವುದೆಂದರೆ ಅಸಾಮಾನ್ಯ ಸಂಗತಿ. ಗಣಿತ ವಿಷಯವನ್ನು ಕಬ್ಬಿಣದ ಕಡಲೆಯೆಂದು ಭಾವಿಸಿದ್ದ ನನ್ನ ಗೆಳೆಯನ ಜೊತೆಗೆ ಒಟ್ಟು ಐದು ವಿದ್ಯಾರ್ಥಿಗಳ ತಂಡಕ್ಕೆ ಗಣಿತ ಲೆಕ್ಕ ಕಲಿಸುವ ಜವಾಬ್ದಾರಿಯನ್ನು ನನಗೆ ಗಣಿತ ಮಾಸ್ಟ್ರು ನೀಡಿದ್ದರು. ಗಣಿತ ವಿಷಯದಲ್ಲಿ ತುಂಬಾ ಆಸಕ್ತಿ ಇದ್ದ ನನಗೆ ಇದೊಂದು ಖುಷಿಯ ವಿಚಾರವಾಗಿತ್ತು. ಪರೀಕ್ಷೆ ಕಳೆದು ವಾರ್ಷಿಕ ಫಲಿತಾಂಶ ಬಂದಾಗ ಗೆಳೆಯ ಪಾಸಾಗಿದ್ದ. ಅವನಿಗಿಂತ ಹೆಚ್ಚು ಖುಷಿ ನನಗೆ. ಫೇಲಾದರೆ ಟೈಲರ್ ಅಥವಾ ಮೇಸ್ತ್ರಿಯಾಗುತ್ತೇನೆ ಎನ್ನುತ್ತಿದ್ದ ಆತ ದೂರದ ಮುಂಬೈಗೆ ಹೋಗಿ  ಕೆಲಸ ಮಾಡುತ್ತ ಪಿಯುಸಿ ಮುಂದುವರಿಸಿದರು. ಕಲಿಯುವ ಆಸಕ್ತಿ ಹೆಚ್ಚಾಗ ತೊಡಗಿತು. ಪದವಿ ಗಳಿಸಿದರು. ನಂತರ ಅತ್ಯುನ್ನತ ಶ್ರೇಣಿಯಲ್ಲಿ ಎಂಬಿಎ ಉನ್ನತ ವ್ಯಾಸಂಗ ಪೂರ್ಣಗೊಳಿಸುತ್ತಾರೆ. ಧನಾತ್ಮಕ ಆತ್ಮವಿಶ್ವಾಸದೊಂದಿಗೆ, ಛಲ ಮತ್ತು ಧೈರ್ಯವನ್ನು ತುಂಬಿಕೊಂಡು ಸಾಗಿದ ಇವರು ಉನ್ನತ ಸ್ಥಾನಕ್ಕೆ ಏರಿದರು. ಕಟ್ಟಡ ನಿರ್ಮಾಣ ಕ್ಷೇತ್ರದಲ್ಲಿ ವಿಶೇಷ ಒಲವನ್ನು ತೋರಿ ತನ್ನ ಸ್ವಂತ ಸಂಸ್ಥೆಯನ್ನು ಸ್ಥಾಪಿಸಿ ಸಿಇಒ ಆದರು. ಹೀಗೆ ಸಾಗಿದ ನನ್ನ ಗೆಳೆಯನ ಜೀವನಕ್ಕೆ ಭದ್ರಬುನಾದಿಯನ್ನು ಹಾಕಿದ್ದು ಹತ್ತನೇ ತರಗತಿಯಲ್ಲಿ ಪಾಸ್ ಎಂಬ ಸರ್ಟಿಫಿಕೇಟ್ ಮಾತ್ರ...!! ಬಾಲ್ಯದ ಹುಡುಗಾಟದಲ್ಲಿ ಮೈಮರೆಯುವ ಕೆಲವರು ಒಂದು ಹಂತವನ್ನು ದಾಟಿ ಮುಂದುವರಿದರೆ ವಿಶೇಷ ವ್ಯಕ್ತಿಯಾಗುವ ಸಾಧ್ಯತೆಗಳು ಬಹಳಷ್ಟಿವೆ ಎನ್ನುವುದಕ್ಕೆ ನನ್ನ ಗೆಳೆಯನೇ ಸಾಕ್ಷಿ. 

     ಇನ್ನೊಂದು ಮಾತು ನಾನಿಲ್ಲಿ ಹೇಳಲೇಬೇಕು. ನಾನು ಮಂಚಿ ಹೈಸ್ಕೂಲಿಗೆ ಕರ್ತವ್ಯಕ್ಕೆ ಹಾಜರಾದಾಗ ರಂಗಭೂಮಿಯ ಭೀಷ್ಮ ಡಾ. ಬಿ ವಿ ಕಾರಂತರ ಹುಟ್ಟೂರೆಂದು ತುಂಬಾ ಖುಷಿ ಪಟ್ಟೆ. ಜೊತೆಗೆ ಈ ಊರು ಅನೇಕ ಸಾಹಿತಿಗಳನ್ನು, ಕಲಾವಿದರನ್ನು ಕೊಡುಗೆಯಾಗಿ ನೀಡಿಯೂ ಪ್ರಸಿದ್ಧಿಯಾಗಿದೆ. ಪ್ರಸ್ತುತ ನಾನು ಕಾರ್ಯನಿರ್ವಹಿಸುತ್ತಿರುವ ಶಾಲೆಯಲ್ಲಿ ಕಲಿತ ಹಿರಿಯ ವಿದ್ಯಾರ್ಥಿನಿಯೊಬ್ಬರು ದೂರದ ಊರಿನಲ್ಲಿ ಪೋಲಿಸ್ ಇಲಾಖೆಯ ದೊಡ್ಡ ಹುದ್ದೆಯಲ್ಲಿದ್ದರು. ಸಾಹಿತಿಯಾಗಿಯೂ ಗುರುತಿಸಿಕೊಂಡ ಇವರು ಪ್ರಾಮಾಣಿಕ ಹಾಗೂ ದಕ್ಷ ಅಧಿಕಾರಿಯೆಂದು ಹೆಸರು ಗಳಿಸಿದ್ದರು. ಇಂತಹ ಅಧಿಕಾರಿಗಳು, ಸಾಹಿತಿಗಳು, ನಮ್ಮ ಶಾಲೆಯಲ್ಲಿ ಕಲಿತ ಹಿರಿಯ ವಿದ್ಯಾರ್ಥಿಯೆಂದು ತಿಳಿದು ತುಂಬಾ ಅಭಿಮಾನ ಬಂತು. ಹೀಗೆ ಒಂದು ದಿನ ಶಾಲೆಗೆ ಬರಬೇಕೆಂದು ಆಮಂತ್ರಣ ನೀಡಿದಾಗ ಬಹಳ ಪ್ರೀತಿಪೂರ್ವಕವಾಗಿ ಒಪ್ಪಿಕೊಂಡು ಬಂದು ವಿದ್ಯಾರ್ಥಿಗಳ ಜೊತೆ ಸಂವಾದ ನಡೆಸಿದರು. ಇಂತಹ ವ್ಯಕ್ತಿತ್ವ ವಿದ್ಯಾರ್ಥಿಗಳಿಗೆ ಯಾವತ್ತು ಕೂಡ ಮಾದರಿ. ತುಂಬಾ ತೂಕದ ಮಾತುಗಳು ಸಹಕಾರ ಮನೋಭಾವ , ಪ್ರಶಂಸಿಸುವ ಗುಣಗಳಿಂದಾಗಿ ನಾನು ತುಂಬಾ ಇಷ್ಟ ಪಡುವ ವ್ಯಕ್ತಿಗಳಲ್ಲಿ ಒಬ್ಬರೆನಿಸಿದರು. ಮಕ್ಕಳ ಜಗಲಿಯ ಆರಂಭದ ಸಂದರ್ಭದಲ್ಲಿ ಕೂಡ ಕೆಲವಷ್ಟು ಸಲಹೆಗಳನ್ನು ಪಡೆದಿದ್ದೆ.  ಕರ್ತವ್ಯದಲ್ಲಿ ದಕ್ಷತೆ, ಅವರ ಪ್ರಾಮಾಣಿಕ ನಡೆಗಳನ್ನು ಕಂಡು ಕುತೂಹಲ ಭರಿತನಾಗಿ ಪ್ರಶ್ನೆ ಕೇಳಿದಾಗ.. ಹೇಳಿದ ಮಾತು, "ನನ್ನ ತಂದೆ ತಾಯಿ ಬೆಳೆಸಿದ ರೀತಿ ಅವರ ಆದರ್ಶ, ಹಾಗೂ ನನ್ನ ಶಾಲೆಯ ಗುರುಗಳು ಹೇಳಿಕೊಟ್ಟ ಪ್ರಾಮಾಣಿಕತೆ, ವೃತ್ತಿ ಜೀವನದಲ್ಲಿ ಯಶಸ್ಸುಗಳಿಸಲು ಸಾಧ್ಯವಾಯಿತು" ಎಂದಾಗ ಭ್ರಷ್ಟಾಚಾರ ರಹಿತ ಸಮಾಜದ ನಿರ್ಮಾಣಕ್ಕೆ ತಂದೆ ತಾಯಿ, ಗುರುಗಳು, ಒಂದು ಶಾಲೆ ಎಷ್ಟು ಕಾರಣವಾಗಬಲ್ಲುದು ಎಂಬುದಕ್ಕೆ ಇವರೇ ಸಾಕ್ಷಿ ಎಂದೆನಿಸಿತು... ನಮಸ್ಕಾರ
          

ಕಳೆದ ಸಂಚಿಕೆಯ ಜಗಲಿಕಟ್ಟೆ - 52ಅಂಕಣದಲ್ಲಿ  ನಿವೃತ್ತ ವಿಜ್ಞಾನ ಶಿಕ್ಷಕರಾದ ಶ್ರೀರಾಮ ಮೂರ್ತಿ... ಇವರು ತಮ್ಮ ಅನಿಸಿಕೆಯನ್ನು ಹಂಚಿಕೊಂಡಿದ್ದರು. ಈ ವಾರದ ಜಗಲಿ ಕಟ್ಟೆಯ ಓದುಗರ ಮಾತುಕತೆಯನ್ನು ಈಗ ಓದೋಣ....


ಮಕ್ಕಳ ಜಗಲಿ ಸಂಚಿಕೆ -138, ಎಂ.ಪಿ ಜ್ಞಾನೇಶ್ ರವರ ಲೇಖನ ತನ್ಮಯತೆ ತುಂಬಾ ಚೆನ್ನಾಗಿತ್ತು. ಆಧ್ಯಾತ್ಮಿಕ ಜೀವನಕ್ಕೆ ಬೇಕಾದ ಆಳವಾದ ವಿಷಯವನ್ನು, ಅದರ ತಿರುಳನ್ನು ಸುಲಭವಾಗಿ ತಮ್ಮ ಲೇಖನದಲ್ಲಿ ಪ್ರಸ್ತುತ ಪಡಿಸಿದ್ದಾರೆ. ಧನ್ಯವಾದಗಳು...
................................................. ವಿದ್ಯಾಶ್ರೀ
ಶ್ರೀನಿಕೇತನ,  ಬೆಂದೂರ್
ಕಂಕನಾಡಿ, ಮಂಗಳೂರು
*******************************************

ನಮಸ್ತೇ,
    ಯಾವುದೇ ವಿಷಯ ಅಥವಾ ವಸ್ತುವಿನ ಬಗ್ಗೆ ಮನಸ್ಸು ಕೇಂದ್ರೀಕೃತಗೊಂಡಾಗ ಮನಸ್ಸಿನ ಏಕಾಗ್ರತೆ ಹೇಗೆ ಉಂಟಾಗುತ್ತದೆ ಎಂಬುದನ್ನು ಬಹಳ ಸುಂದರವಾಗಿ ಶಿಕ್ಷಣಾಧಿಕಾರಿ ಶ್ರೀ ಜ್ಞಾನೇಶ್ ಸರ್ ರವರು ನಿರೂಪಿಸಿದ್ದಾರೆ. ನಾವೆಲ್ಲರೂ ಸಾತ್ವಿಕ ಮನೋಭಾವ ಹೊಂದಿರಬೇಕೆನ್ನುವ ಕಿವಿಮಾತಿನೊಂದಿಗೆ  ತಮ್ಮ ಈ ಸಲದ  ಸಂಚಿಕೆ ತುಂಬಾ ಇಷ್ಟವಾಯಿತು.
    'ಪರಿಸರ ಹಿತವೇ ಜನಹಿತ' ಎನ್ನುವ ಸಂದೇಶವನ್ನು ಸಾರುವ ಪ್ರಸ್ತುತ ಕಾಲಘಟ್ಟಕ್ಕೆ ಸೂಕ್ತ ಹಾಗೂ ಸಕಾಲಿಕ ಲೇಖನ ಬಾಯಾರ್ ರಮೇಶ್ ಸರ್ ರವರು  ಲೇಖನದಲ್ಲಿ ವ್ಯಕ್ತಪಡಿಸಿದ ಪ್ರತಿ ಅಂಶವೂ ಈಗಿನ ಕಾಲಕ್ಕೆ ಕ್ಕೆಗನ್ನಡಿಯಂತಿದೆ. ಉತ್ತಮ ಲೇಖನಕ್ಕಾಗಿ ಧನ್ಯವಾದಗಳು ಸರ್. 
    ಮಕ್ಕಳಿಗಾಗಿ ವಿಜ್ಞಾನ ಸರಣಿಯಲ್ಲಿ ದಿವಾಕರ ಶೆಟ್ಟಿ ಹೆಚ್ ಬರೆದಿರುವ 'ಜೀವ ಪೂರ್ವ ಜೀವಿಗಳೊಂದಿಗೆ ಬದುಕು' ಸಂಚಿಕೆ ತುಂಬಾ ಚೆನ್ನಾಗಿತ್ತು...
    ಮಳೆಗಾಲ ಪ್ರಾರಂಭವಾದರೆ ಸಾಕು ತೋಟ, ಮನೆ ಸುತ್ತುಮುತ್ತ ಎಲ್ಲಾ ಕಡೆ ಮತ್ತೆ ಚಿಗುರಿ ಸುಂದರ ಹೂಗಳ ಗೊಂಚಲಿನಿಂದ ರಥದ ಹಾಗೆ ಕಾಣುವ ರಥ ಪುಷ್ಪ ಗಿಡದ ಚೆಂದದ ಪರಿಚಯ ವಿಜಯಾ ಮೇಡಂರವರಿಂದ. ಧನ್ಯವಾದಗಳು ಮೇಡಂ.
     ಶ್ರೀಮಂತಿಕೆ ಹೊರತಾಗಿ ಪ್ರೀತಿ, ಪ್ರೇಮ ವಾತ್ಸಲ್ಯ, ಮಮತೆಯಿಂದ ಕೂಡಿದ ಜೀವನವೂ ಮುಖ್ಯ. ದುಡ್ಡೇ ದೊಡ್ಡಪ್ಪ ಎನ್ನುವವರಿಗೆ ಕಿವಿಮಾತಿನಂತಿದೆ ಯಾಕುಬ್ ಸರ್ ರವರ ಈ ಸಲದ ಲೇಖನ.
    ಈ ವಾರದ ಜಗಲಿಯಲ್ಲಿ ಮಕ್ಕಳ ಬಹಳಷ್ಟು ಚಿತ್ರಗಳು ಪ್ರಕಟವಾಗಿವೆ. ಎಲ್ಲವೂ ಸೊಗಸಾಗಿವೆ. ಜೊತೆಗೆ ಶರ್ವಿಳಾರವರ ಕವನಗಳು ಮಕ್ಕಳ ಕಥೆಗಳು ಎಲ್ಲವೂ ಚೆನ್ನಾಗಿ ಮೂಡಿ ಬಂದಿವೆ. ಮಕ್ಕಳೆಲ್ಲರಿಗೂ ಅಭಿನಂದನೆಗಳು.
    ವಾಣಿಯಕ್ಕನವರಿಂದ ವಿನ್ನಿ ಪೂಹಾ ಎನ್ನುವ ಆಕರ್ಷಕ ಪುಸ್ತಕದ ಪರಿಚಯ. ಧನ್ಯವಾದಗಳು ಅಕ್ಕ.
    ಶಿಕ್ಷಕರ ಡೈರಿಯಲ್ಲಿ ಶ್ವೇತಾ ಮೇಡಂ ರವರು ಗಣಿತ ಪರೀಕ್ಷೆಯಲ್ಲಿ ಶೇಕಡಾ 100 ಫಲಿತಾಂಶ ಬರಲು ಕೈಗೊಂಡ ಕ್ರಮ ಹಾಗೂ ಯಶಸ್ಸು ಪಡೆದ ಬಗೆಯ ಕುರಿತಾದ ಅನುಭವ ಚೆನ್ನಾಗಿ ಮೂಡಿ ಬಂದಿದೆ.
    ನಾಗೇಂದ್ರರವರ ಸವಿ ಜೇನು ಸಂಚಿಕೆಯಲ್ಲಿ ಕಳ್ಳನೋರ್ವನ ಅನುಭವವನ್ನು ಅವನ ಮಾತಿನಲ್ಲೇ ಸೊಗಸಾಗಿ ತಿಳಿಸಿದ್ದಾರೆ.
     ರಮೇಶ್ ಉಪ್ಪುಂದರವರ ಪದದಂಗಳ ಉತ್ತಮವಾಗಿ ಮೂಡಿಬರುತ್ತಿದೆ.
    ಈ ವಾರದ ಜಗಲಿಯಲ್ಲಿ ಮಕ್ಕಳ ಚಿತ್ರಗಳು, ಕವನಗಳು ಕಥೆಗಳ ಜೊತೆಗೆ ಹಿರಿಯರ ಲೇಖನಗಳು ಸೊಗಸಾಗಿ ಮೂಡಿ ಬಂದಿವೆ. ಇದಕ್ಕೆ ಕಾರಣರಾದ ಎಲ್ಲರಿಗೂ ನನ್ನ ಆತ್ಮೀಯ ನಮನಗಳು.
....................................... ಶ್ರೀರಾಮ ಮೂರ್ತಿ
ನಿವೃತ್ತ ವಿಜ್ಞಾನ ಶಿಕ್ಷಕರು
ಬಾಯಾರು, ಕಾಸರಗೋಡು ಜಿಲ್ಲೆ
Mob: +91 94819 74949
*******************************************


ಓದುಗರ ಮಾತುಕತೆಯಲ್ಲಿ.....  ಅನಿಸಿಕೆ ಅಭಿಪ್ರಾಯಗಳನ್ನು ಹಂಚಿಕೊಂಡು, ಬರೆಯುವ ಪ್ರತಿಯೊಬ್ಬರಿಗೂ ಪ್ರೇರಣೆಯಾಗುತ್ತಿರುವ ಮಕ್ಕಳ ಜಗಲಿ ಕುಟುಂಬದ ನಿವೃತ್ತ ವಿಜ್ಞಾನ ಶಿಕ್ಷಕರಾದ ಶ್ರೀರಾಮ ಮೂರ್ತಿ,  ವಿದ್ಯಾಶ್ರೀ, ಮಂಗಳೂರು, .. ಇವರಿಗೆ ಧನ್ಯವಾದಗಳು. 
       ಮಕ್ಕಳ ಜಗಲಿಗೆ ಸಂಬಂಧಿಸಿದ ಯಾವುದೇ ವಿಷಯದ ಕುರಿತಾಗಿ ನಿಮ್ಮ ಅನಿಸಿಕೆಗಳು ಹಾಗೂ ಸಲಹೆಗಳನ್ನು ಸ್ವೀಕರಿಸುತ್ತೇವೆ. ವಿದ್ಯಾರ್ಥಿಗಳು, ಪೋಷಕರು, ಶಿಕ್ಷಕರು, ಹಿತೈಷಿಗಳು ನಮಗೆ ಬರೆದು ಕಳುಹಿಸಿ.... ಹೆಸರು ವಿಳಾಸ ಹಾಗೂ ಭಾವಚಿತ್ರದೊಂದಿಗೆ ನಿಮ್ಮ ಅನಿಸಿಕೆಗಳು 100 ಪದಗಳ ಮಿತಿಯಲ್ಲಿರಲಿ.....
   ಮುಂದಿನ ವಾರದ ಜಗಲಿ ಕಟ್ಟೆಯಲ್ಲಿ ಮತ್ತೆ ಸಿಗೋಣ.... ನಮಸ್ಕಾರ
................................. ತಾರಾನಾಥ್ ಕೈರಂಗಳ
ಮಕ್ಕಳ ಜಗಲಿ
ಮಕ್ಕಳ ಡಿಜಿಟಲ್ ಆನ್ಲೈನ್ ಪತ್ರಿಕೆ
ದಕ್ಷಿಣ ಕನ್ನಡ ಜಿಲ್ಲೆ. 
Mob : 9844820979
******************************************


Ads on article

Advertise in articles 1

advertising articles 2

Advertise under the article