-->
ನಿಷ್ಪಾಪಿ ಸಸ್ಯಗಳು : ಸಂಚಿಕೆ - 52

ನಿಷ್ಪಾಪಿ ಸಸ್ಯಗಳು : ಸಂಚಿಕೆ - 52

ನಿಷ್ಪಾಪಿ ಸಸ್ಯಗಳು : ಸಂಚಿಕೆ - 52
ಲೇಖಕರು: ವಿಜಯಾ ಬಿ ಶೆಟ್ಟಿ ಸಾಲೆತ್ತೂರು
ಸಹ ಶಿಕ್ಷಕಿ, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ 
ಬಾಳೆಪುಣಿ (ಇರಾ), ಬಂಟ್ವಾಳ ತಾಲೂಕು
ದಕ್ಷಿಣ ಕನ್ನಡ ಜಿಲ್ಲೆ

      
ಪ್ರೀತಿಯ ಮಕ್ಕಳೇ.... ಹೇಗಿದ್ದೀರಿ...? ಮಳೆರಾಯ ನಿಮ್ಮ ಬೇಸಿಗೆಯ ರಜಾದಿನಗಳನ್ನು ತಂಪುಗೊಳಿಸಿ ಉಲ್ಲಾಸ ತುಂಬಿದ್ದಾನಲ್ಲವೇ? ಅಂಗಳದ ಪಾರಿಜಾತ, ದಾಸವಾಳದ ಗಿಡಗಳಿಗೆ ಹಬ್ಬಿದ್ದ ಮಲ್ಲಿಗೆ ಬಳ್ಳಿ ಹಿಗ್ಗಿ ಚಿಗಿತು ಮೊಗ್ಗು ಬಿಟ್ಟಿದುದ ಕಂಡಿರಾ!
       ಅದೇನೋ ಅಂಗಳದ ಕತೆಯಾಯ್ತು. ನೀವು ಗದ್ದೆಯಂಚು, ಬೇಲಿ, ಮಾರ್ಗದ ಬದಿ, ಗುಡ್ಡ ಬೆಟ್ಟಗಳ ಕಡೆ ಕಣ್ಣು ಹಾಯಿಸಿದರೆ ಯಾರೂ ನೆಟ್ಟಿರದ ಬಳ್ಳಿಯೊಂದು ಮಲ್ಲಿಗೆಯಂತೆ ಬಿಳಿ ಬಿಳಿಯಾಗಿ ಹಸಿರ ನಡುವೆ ಬೆಳ್ಳಿ ಚುಕ್ಕಿಯಂತೆ ನಗುವುದನ್ನು ಕಂಡಿರಾ?
     ಖಂಡಿತವಾಗಿಯೂ ನೋಡಬಲ್ಲಿರಿ. ಏಕೆಂದರೆ ಇದು ದಕ್ಷಿಣ ಭಾರತದ ಸ್ಥಳೀಯ ಸಸ್ಯ. ಇದನ್ನು ಕಾಡು ಮಲ್ಲಿಗೆ ಎನ್ನುತ್ತಾರೆ. ತುಳುವಿನಲ್ಲಿ ಎದುರೋಲ್ ಎಂದರೆ ಆಂಗ್ಲ ಭಾಷೆಯಲ್ಲಿ ಮಲಬಾರ್ ಜಾಸ್ಮಿನ್ ಎನ್ನುವರು. ಪೊದೆ, ಮರಗಳ ಜೊತೆ ಬೆಳೆಯುವ ಈ ಸಸ್ಯ ಬಳ್ಳಿ ಯಂತೆ ಐದಾರು ಮೀಟರ್ ಮೇಲೇರಬಲ್ಲದು. ಒಂಟಿಯಾಗಿದ್ದರೆ ಸುತ್ತಲೂ ಶಾಖೆಗಳನ್ನು ಹಬ್ಬಿಸಿ ಇರಬಲ್ಲದು. ಪರಸ್ಪರ ವಿರುದ್ಧ ಜೋಡಣೆಯಾದ ಹಸಿರಾದ ಎಲೆಗಳು 1cm ನಷ್ಟಿರುವ ತೊಟ್ಟಿನಾರಂಭದಲ್ಲಿ ಹೃದಯದಾಕಾರದಲ್ಲಿದ್ದು ತುದಿ ಚೂಪಾಗಿರುತ್ತವೆ. ಹೆಚ್ಚು ನೀರು ಬೇಡದ ಈ ಕಾಡು ಮಲ್ಲಿಗೆ ಚಳಿಗಾಲ ಮಳೆಗಾಲದಲ್ಲಿ ಹೂಗಳನ್ನರಳಿಸುತ್ತವೆ. ಕಹಿಗೆ ಪರ್ಯಾಯವೆಂಬಂತಿರುವ ಎಲೆಯ ರಸವೇ ಇದರ ವಿಶೇಷತೆ. ಕವಲೊಡೆದು ಹಬ್ಬಿದ ಶಾಖೆಗಳ ತುದಿಗಳಲ್ಲಿ ಗೊಂಚಲುಗಳಲ್ಲಿ ಅರಳುವ ಪುಷ್ಪಗಳು ಮಲ್ಲಿಗೆಯನ್ನೆ ಹೋಲುತ್ತವಾದರೂ ಸ್ವಲ್ಪ ದೊಡ್ಡ ಗಾತ್ರ ಹೊಂದಿವೆ. ದಳಗಳ ನಡುವೆ ಹೆಚ್ಚು ಅಂತರವಿದೆ. ಮೊಗ್ಗು ನಸು ನೇರಳೆ ಬಣ್ಣದಲ್ಲಿರುವುದರಿಂದ ಹೂ ದಳಗಳ ಮೇಲ್ಭಾಗ ಬಿಳಿಯಾದರೂ ಅಡಿಭಾಗ ನಸು ನೇರಳೆಯೇ ಇರುವುದು. ಹೂವಿಗೆ ಮಲ್ಲಿಗೆಯಂತೆ ಹಿತಕರವಾದ ಪರಿಮಳವಿದೆ. ಆದರೆ ಮಲ್ಲಿಗೆಯ ಕಂಪಿಗೂ ಕಾಡು ಮಲ್ಲಿಗೆ ಕಂಪಿಗೂ ಬಹಳ ವ್ಯತ್ಯಾಸವಿದೆ. ಮೊಗ್ಗನ್ನು ಕೊಯ್ದು ಮಾಲೆ ಮಾಡಿದರೂ ಹೂಗಳು ಅರಳುತ್ತವೆ. ಎಂಟು ದಳಗಳಿರುವ ಹೂವಿನ ಎಸಳುಗಳು ಕೊಳವೆಯಾಕಾರಕ್ಕೆ ಜೋಡಣೆಯಾಗಿದ್ದು ಹೂ ಉದುರಿದ ಬಳಿಕ ಪುಷ್ಪಪಾತ್ರೆ ಅಪ್ಪಿ ಹಿಡಿದಂತೆ ಕಾಯಿಗಳ ಬೆಳವಣಿಗೆಯಾಗುತ್ತದೆ. ಹಸಿರಾದ ಕಾಯಿ ಬೆಳೆಯುತ್ತ ನಸು ನೇರಳೆ ಬಣ್ಣ ಹಾಗೂ ಹಣ್ಣಾದಾಗ ಕಪ್ಪಾಗಿ ಆಕರ್ಷಕವಾಗಿ ಕಾಣಿಸುತ್ತದೆ.
     ಕಾಡು ಮಲ್ಲಿಗೆಯೊಂದು
     ಕಾಡಿನಲಿ ನರಳುತಿದೆ
     ಬಾಡಿ ಹೋಗುವ ಮುನ್ನ
     ಕೀಳುವವರಾರೆಂದು
           ಪಸರಿಸುವ ಕಂಪ
           ಆಘ್ರಾಣಿಸುವವರಿಲ್ಲ
           ಯಾವ ಪಾಪಕೆ ನನ್ನ
           ಇಲ್ಲಿ ತಂದೆಸೆದೆ?
ಅಂತ ಕವಿ ಮನ ಯೋಚಿಸುವುದುಂಟು. ಆದರೆ ಪ್ರಕೃತಿಗೆ ಆ ಭಯವಿಲ್ಲ. ಪರ್ಣ, ಪುಷ್ಪ, ಗಂಧ ನಿತ್ಯ ನಿರ್ಮಲ ನಿಸರ್ಗದ ಪೂಜೆಗಾಗಿರುವ ಸುವಸ್ತುಗಳು. 
   ಹಾಲು ಬಿಳುಪಿನ ಬಣ್ಣದಲಿ ನಕ್ಷತ್ರಗಳಂತೆ ಮಿನುಗುತ್ತ ಆಹ್ಲಾದಕರ ಕಂಪನ್ನು ತಂಗಾಳಿಗೆ ಮೆತ್ತುತ್ತಾ ನಲಿವ ಸಸ್ಯವಾದ ಕಾಡು ಮಲ್ಲಿಗೆಯೆಂಬ ನಿಷ್ಪಾಪಿ ಸಸ್ಯದ ಶಾಸ್ತ್ರೀಯ ನಾಮ ಜಾಸ್ಮಿನಮ್ ಮಲಬಾರಿಕಮ್ (Jasminum Malabaricum) ಒಲಿಯೇಸಿ (Oleaceae) ಕುಟುಂಬಕ್ಕೆ ಸೇರಿದೆ. ಇದು ಪಶ್ಚಿಮ ಘಟ್ಟಗಳ ಔಷಧೀಯ ಸಸ್ಯವಾಗಿದೆ. ಕಣ್ಣಿನ ಪೊರೆ, ರಕ್ತಶುದ್ಧಿ, ಚರ್ಮ ರೋಗಗಳಿಗೆ ಬಳಕೆಯಲ್ಲದೆ ಕಾಸ್ಮೆಟಿಕ್ ಮತ್ತು ಡಿಟರ್ಜಂಟ್ ಗಳಿಗೆ ಬಳಸುತ್ತಾರೆ. ತಿಂದ ಆಹಾರವೇ ಕೆಲವೊಮ್ಮೆ ವಿಷದಂತೆ ವರ್ತಿಸಿದಾಗ ವಾಂತಿ ಮಾಡಿಸಲು ಈ ಗಿಡದ ಎಲೆ ರಸ ಬಳಸುತ್ತಿದ್ದರು.
      ಮಕ್ಕಳೇ.... ನಮ್ಮ ಹಿರಿಯರು ತಮ್ಮ ಬಡತನದ ದಿನಗಳಲ್ಲಿ ಹೊಟ್ಟೆಯ ಹಸಿವು ನೀಗಿಸಲು ಬೇರೆ ದಾರಿಯೇ ಇಲ್ಲವೆನುವ ಕಾಲದಲ್ಲಿ ಈ ಕಾಡುಮಲ್ಲಿಗೆಯ ಕಹಿ ತುಂಬಿದ ಹಣ್ಣುಗಳನ್ನು ಕೊಯ್ದು ಬಟ್ಟೆಯಲ್ಲಿ ಕಟ್ಟಿ ನೀರಿನಲ್ಲಿಟ್ಟು ದಿನಾ ನೀರು ಬದಲಾಯಿಸ್ತಾ ಕಹಿ ತಗ್ಗಿಸಿ ಉಪ್ಪು ಹಾಕಿ ಬೇಯಿಸಿ ತಿನ್ನುತ್ತಿದ್ದರೆಂದರೆ ಇಂದು ಊಹಿಸಲಾದರೂ ಸಾಧ್ಯವೇ? ನಂಬಲೇ ಬೇಕು. ಫಾಸ್ಟ್ ಫುಡ್ ನ ಕಾಲದಲ್ಲಿ ನಾವಿರುವಾಗ ಹಿರಿಯರು ಪಟ್ಟಿದ್ದ ಕಷ್ಟದ ಬಗ್ಗೆಯೂ ಅರಿವಿರಬೇಕಲ್ಲವೇ?
     
ಸರಿ ಮಕ್ಕಳೇ, ಮುಂದಿನ ವಾರ ಇನ್ನೊಂದು ನಿಷ್ಪಾಪಿ ಸಸ್ಯದ ಜೊತೆ ಭೇಟಿಯಾಗುತ್ತೇನೆ.. ನಮಸ್ಕಾರ.
..................... ವಿಜಯಾ ಬಿ ಶೆಟ್ಟಿ ಸಾಲೆತ್ತೂರು
ಸಹ ಶಿಕ್ಷಕಿ, ಸರ್ಕಾರಿ ಹಿರಿಯ ಪ್ರಾಥಮಿಕ 
ಶಾಲೆ , ಬಾಳೆಪುಣಿ (ಇರಾ)
ಬಂಟ್ವಾಳ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
Mob : +91 78925 87191
*******************************************


Ads on article

Advertise in articles 1

advertising articles 2

Advertise under the article