-->
ಮಕ್ಕಳಿಗಾಗಿ ವಿಜ್ಞಾನ : ಸಂಚಿಕೆ - 29

ಮಕ್ಕಳಿಗಾಗಿ ವಿಜ್ಞಾನ : ಸಂಚಿಕೆ - 29

ಮಕ್ಕಳಿಗಾಗಿ ವಿಜ್ಞಾನ : ಸಂಚಿಕೆ - 29
ಲೇಖಕರು : ದಿವಾಕರ ಶೆಟ್ಟಿ ಎಚ್
ನಿವೃತ್ತ ಪ್ರವಾಚಕರು
ಸರಕಾರಿ ಶಿಕ್ಷಕ ಶಿಕ್ಷಣ ಮಹಾವಿದ್ಯಾಲಯ
ಮಂಗಳೂರು, ದಕ್ಷಿಣ ಕನ್ನಡ ಜಿಲ್ಲೆ
Mob: 9448571203

     
ಪ್ರೀತಿಯ ಮಕ್ಕಳೇ.... ನಾನು ಜೀವ ಉಗಮದ ಬಗ್ಗೆ ಬರೆಯಬೇಕೆಂದು ಹೊರಟವನು. ಮೂರು ಕಂತುಗಳಲ್ಲಿ ಮುಗಿಸಬಹುದು ಎಂದು ಎರಡು ಕಂತುಗಳ ವಿಷಯದೊಂದಿಗೆ ಬರೆಯಲು ಪ್ರಾರಂಭಿಸಿದೆ. ಮತ್ತೊಂದು ಕಂತಿಗಾಗಿ ವಿಷಯ ಹುಡುಕಾಡತೊಡಗಿದವನಿಗೆ ಅರಿವಾದದ್ದು ಇದು ಮೂರು ಕಂತುಗಳಲ್ಲಿ ಮುಗಿಯುವುದಿಲ್ಲ ಎಂದು. ಮರದ ಕೊಂಬೆಗಳು ಟಿಸಿಲೊಡೆಯುತ್ತದಲ್ಲ ಹಾಗೆ ಲೇಖನ ವಿಸ್ತಾರವಾಗುತ್ತಲೇ ಸಾಗಿದೆ. ಮೂರು ವಾರಗಳ ಹಿಂದೆಯೇ ಗುಂಪಿನ ಪ್ರವರ್ತಕರಾದ ತಾರಾನಾಥ ಕೈರಂಗಳ ಸರ್ ಇಪ್ಪತ್ತೈದಾಯಿತು ಎಂದು ನೆನಪಿಸಿದ್ದಾರೆ. ಆದರೆ ಅದರಲ್ಲಿ ಬೇಗ ಮುಗಿಸಿ ಎಂಬ ಧ್ವನಿ ಇರಲಿಲ್ಲ. ಅದ್ದರಿಂದ ಈಗ 29 ರಲ್ಲಿದ್ದೇನೆ. ಮೊನ್ನೆ ಭೂಮಿಯ ಮೇಲೆ ಸ್ವತಂತ್ರ ಆಮ್ಲಜನಕದ ಅಸ್ತಿತ್ವದೊಂದಿಗೆ ಜೀವ ಉಗಮವನ್ನು ತಳುಕು ಹಾಕಿ ಮುಗಿಸಿಬಿಡೋಣ ಅಂದುಕೊಂಡರೆ ಅಮ್ಲಜನಕ ವಾತಾವರಣಕ್ಕಿಂತ ಜೀವಿ ಹಳೆಯದು ಎಂದು ಅಧ್ಯಯನ ಹೇಳುತ್ತದೆ. ಅಂದರೆ ವಾತಾವರಣ ಮೀಥೇನ್ ಸಮೃದ್ಧವಾಗಿರುವಾಗಲೇ ಜೀವಿ ಅಸ್ತಿತ್ವಕ್ಕೆ ಬಂದಿದೆ ಎಂಬುದನ್ನು ಮುಚ್ಚಿಟ್ಟು ಲೇಖನವನ್ನು ಮುಗಿಸುವುದು ಸಾಧುವೂ ಅಲ್ಲ ಸಾಧ್ಯವೂ ಇಲ್ಲ. ಅದರಲ್ಲಿಯೂ ಸಾಹಿತ್ಯಿಕವಾಗಿ ಸಸ್ಯಗಳ ಬಗ್ಗೆ ಬರೆಯುತ್ತಿರುವ ಶ್ರೀಮತಿ ವಿಜಯ ಸಾಲೆತ್ತೂರು ಟೀಚರ್ ಮೀಥೇನ್ ನಲ್ಲಿ ಜೀವ ಉಗಮವೇ ಎಂದು ಅಚ್ಚರಿ ಹೊರಹಾಕುವುದರೊಂದಿಗೆ ಮುಂದಿನ ಸಂಚಿಕೆಗಾಗಿ ಕಾಯುತ್ತೇವೆ ಎಂದಿದ್ದಾರೆ. ಆದರೆ ಈಗ ವಿಜ್ಞಾನಿಗಳು ಎಂತಹ ಸ್ಥಿತಿಯನ್ನು ತಲುಪಿದ್ದಾರೆಂದರೆ ಯಾವುದೇ ಒಂದು ಆಕಾಶಕಾಯದಲ್ಲಿ ಮೀಥೇನ್ ಇದೆ ಎಂದರೆ ಅಲ್ಲಿ ಜೀವವನ್ನು ಹುಡುಕಬೇಕು ಎಂಬ ನಿರ್ಧಾರ ಕೈಗೊಂಡಿದ್ದಾರೆ. ಕೆಪ್ಲರ್ ವ್ಯೋಮ ದೂರದರ್ಶಕ (Kepler Space Telescope) 2015 ರಲ್ಲಿ  ಒಂದು ಶ್ವೇತ ಕುಬ್ಜವನ್ನು (white dwarf) ಗುರುತಿಸಿತು. ಇದು ಭೂಮಿಯಿಂದ ಸುಮಾರು 120 ಜ್ಯೋತಿರ್ವರ್ಷಗಳಷ್ಟು ದೂರ ಇತ್ತು. ಅದರ ಹೆಸರು K2-18 ಅದರ ಸುತ್ತ ಒಂದು ಗ್ರಹ ಸುತ್ತುತ್ತಿರುವುದು ಗಮನಕ್ಕೆ ಬಂತು. ಇದು K2-28b. ಇದನ್ನು ಜೇಮ್ಸ್ ವೆಬ್ ವ್ಯೋಮ ದೂರದರ್ಶಕ (JWST) ದೃಢೀಕರಿಸಿದೆ. ಈ ಬಾಹ್ಯ ಗ್ರಹ ಭೂಮಿಗಿಂತ 8.6 ಪಟ್ಟು ದೊಡ್ಡದಿದೆ. ಇದು ಒಂದು Hycean (ಜಲಜನಕದಿಂದ ಆವೃತ್ತವಾದ ಸಾಗರವನ್ನು ಹೊಂದಿರುವ) ಎಂದು ನಂಬಲಾಗಿತ್ತು. ಆದರೆ ಈಗ ಅದರಲ್ಲಿ ಇರುವುದು ನೀರಲ್ಲ ಬದಲಾಗಿ ಮೀಥೇನ್ ಅನ್ನುವುದು ಸ್ಪಷ್ಟವಾಗಿದೆ. ಯಾವಾಗ ಅಲ್ಲಿ ಮೀಥೇನ್ ಇದೆ ಎನ್ನುವುದು ಸ್ಪಷ್ಟವಾಯಿತೋ ಆಗ ವಿಜ್ಞಾನಿಗಳು ಜೀವ ಹುಡುಕಾಟಕ್ಕೆ ಹೊಸ ಗರಿ ಮೂಡಿತು. ವಿಜ್ಞಾನಿಗಳು K2-18B ನಲ್ಲಿ ಜೀವ ಇದೆ ಎಂದು ಬಲವಾಗಿ ನಂಬಿದ್ದಾರೆ.

ಜೀವಿಯ ಜೀವ ಕ್ರಿಯೆಗಳಿಗೆ ಶಕ್ತಿ ಬೇಕು. ಚಯಾಪಚಯ (metabolic) ಕ್ರಿಯೆಗಳಲ್ಲಿ ಶಕ್ತಿ ಬಿಡುಗಡೆ ಮಾಡುವ ಕ್ರಿಯೆ ಉಸಿರಾಟ. ಇಲ್ಲಿ ಬಿಡುಗಡೆಯಾದ ಶಕ್ತಿ ಅಡಿನೋಸಿನ್ ಡೈ ಫಾಸ್ಫೇಟ್ (ADP) ಅನ್ನು ಬಿಡುಗಡೆಯಾದ ಶಕ್ತಿಯನ್ನು ಅಡಿನೋಸಿನ್ ಟ್ರೈ ಫಾಸ್ಫೇಟ್ (ATP)  ಅನ್ನಾಗಿ ಪರಿವರ್ತಿಸುತ್ತದೆ. ಇಲ್ಲಿ ಹೊಸ ವಸ್ತುವೇನೂ ಉತ್ಪತ್ತಿಯಾಗುವುದಿಲ್ಲ. ಕೆಲವೇ ಇಲೆಕ್ಟ್ರಾನುಗಳು ಹರಿವು ಅಷ್ಟೇ. ಇಲೆಕ್ಟ್ರಾನ್ ಗಳ ಹರಿವು ಎಂದರೆ ವಿದ್ಯುತ್ಪ್ರವಾಹ ತಾನೆ. ನಮಗೆ ಶಕ್ತಿ ಉತ್ಪಾದನೆ ಆಗಬೇಕೆಂದರೆ ಗ್ಲುಕೋಸ್ ಆಮ್ಲಜನಕದಲ್ಲಿಯೇ ಉರಿಯ ಬೇಕೆಂದೇನೂ ಇಲ್ಲ ಬದಲಾಗಿ ಒಂದು ಇಲೆಕ್ಟ್ರಾನ್ ಪ್ರವಾಹ ಉಂಟಾದರೆ ಸಾಕು. ಅಂದರೆ  ಉಸಿರಾಟಕ್ಕೆ ಆಮ್ಲಜನಕವೇ ಬೇಕೆಂದೇನೂ ಇಲ್ಲ. ಆಮ್ಲಜನಕ ಇದ್ದರೆ ಒಳ್ಳೆಯದು. ‌ಇಂತಹ ಉಸಿರಾಟ ಆಮ್ಲಜನಕ ಸಹಿತ ಉಸಿರಾಟ (aerobic respiration). ಆಮ್ಲಜನಕ ಇಲ್ಲದೇ ನಡೆಯುವ ಉಸಿರಾಟ ನಿರ್ವಾಯು (ಆಮ್ಲಜನಕ ರಹಿತ ಉಸಿರಾಟ) (anaerobic respiration). ಆಮ್ಲಜನಕಯುಕ್ತ ವಾತಾವರಣ ರೂಪುಗೊಳ್ಳುವುದಕ್ಕೆ ಮೊದಲೇ ಜೀವ ರೂಪುಗೊಂಡಿರುವುದು ಹೀಗೆ.

ನಮ್ಮ ವಾತಾವರಣ ಅನಿಲಗಳ ಒಂದು ಮಿಶ್ರಣ. ಅದರಲ್ಲಿ ಸಾರಜನಕ, ಆಮ್ಲಜನಕ, ಇಂಗಾಲದ ಡೈಆಕ್ಸೈಡ್ ಮತ್ತು ನೀರಾವಿ ಅದರ ಪ್ರಮುಖ ಘಟಕಗಳು. ಅತ್ಯಲ್ಪ ಪ್ರಮಾಣದಲ್ಲಿ ಇತ್ತ ಅನಿಲಗಳೂ ಇವೆ. ಇದರಲ್ಲಿ ಮೀಥೇನ್ ಕೂಡಾ ಒಂದು. ಇದು ವಾತಾವರಣದಲ್ಲಿ ಎಷ್ಟಿದೆ ಎಂದರೆ ಕೇವಲ 1.9 ppm (part per million) (ಮಿಲಿಯದಲ್ಲಿ ಒಂದು ಭಾಗ). ಆದರೆ ಭೂಮಿಯ ಮೇಲೆ ಬದುಕುವ ಕೆಲವೊಂದು ಬ್ಯಾಕ್ಟೀರಿಯಾಗಳು 5000 ದಿಂದ 10000 ppm ಸಾಂದ್ರ ಮೀಥೇನ್ ವಾತಾವರಣದಲ್ಲಿಯೂ ಸೊಂಪಾಗಿ ಬೆಳೆಯವ ಬ್ಯಾಕ್ಟೀರಿಯಾಗಳಿವೆ. ಅಂತಹ ವಾತಾವರಣ ಎಲ್ಲಿಯಾದರೂ ಇದೆಯಾ ಎಂಬ ಪ್ರಶ್ನೆ ನಿಮಗೆ ಬಂದಿರಬಹುದು. ಹೌದು ಇದೆ. ನಿಮ್ಮ ಮನೆಯಲ್ಲಿ ಗೋಬರ್ ಅನಿಲ ಸ್ಥಾವರವಿದ್ದರೆ ಅದೇ. ಅದರಲ್ಲಿ ಉತ್ಪತ್ತಿಯಾಗುವುದು ಮಿಥೇನ್. ಆ ಡ್ರಮ್ ನಲ್ಲಿ ತುಂಬಿರುವುದು ಮಿಥೇನ್. ಇದನ್ನು ಉತ್ಪತ್ತಿ ಮಾಡುವ ಬ್ಯಾಕ್ಟೀರಿಯಾಗಳು ಗಂಧಕದ ಅಪಕರ್ಷಣೆಯ (sulphur reduction ಮೂಲಕ ತಮಗೆ ಬೇಕಾದ ಶಕ್ತಿಯನ್ನು ಉತ್ಪತ್ತಿ ಮಾಡಿಕೊಳ್ಳುತ್ತದೆ. ಅಂದರೆ ನಿರ್ವಾಯು ಉಸಿರಾಟ. ಈ ಕ್ರಿಯೆಯಲ್ಲಿ ಅವುಗಳು ಉತ್ಪತ್ತಿ ಮಾಡುವ ವಿಷಕಾರಿ ಮೀಥೇನ್ ನ ವಾತಾವರಣದಲ್ಲಿ ಅವುಗಳು ಬದುಕಲೇ ಬೇಕು. ಈ ಜೀವಿಗಳು ಉತ್ಪತ್ತಿ ಮಾಡುವ ಇಲೆಕ್ಟ್ರಾನ್ ಪ್ರವಾಹ ಪ್ರಬಲ ವಿದ್ಯುತ್ ಪ್ರವಾಹವನ್ನು ಸೃಷ್ಟಿಸಲ್ಪಡುತ್ತದೆ ಎನ್ನುತ್ತಾರೆ ವಿಜ್ಞಾನಿಗಳು. ಈ ಮೀಥೇನ್ ಬ್ಯಾಕ್ಟೀರಿಯಾಗಳು ಗತ ಇತಿಹಾಸಗಳಲ್ಲ. ಅವು ನಮ್ಮ ನಡುವೆ ಬದುಕಿವೆ. ಮಥೆನೋಬ್ಯಾಕ್ಟೀರಿಯಂ, ಮೀಥೇನೋಸಾರ್ಸಿನಿಯಾ, ಮೀಥೇನೋಕಾಕ್ಕಸ್, ಮೀಥೇನೋಸ್ಪೈರಿಲ್ಲಂ ಈ ಮೀಥೇನೋಜೆನಿಕ್ ಬ್ಯಾಕ್ಟೀರಿಯಾಗಳು. 

ಈ ಜೀವ ಪೂರ್ವ ಜೀವಿಗಳೊಂದಿಗೆ ನಾವೂ ಬದುಕುತ್ತಿದ್ದೇವೆ ಎಂದು ಹೆಮ್ಮೆಪಡೋಣ.
.................................... ದಿವಾಕರ ಶೆಟ್ಟಿ ಎಚ್
ನಿವೃತ್ತ ಪ್ರವಾಚಕರು
ಸರಕಾರಿ ಶಿಕ್ಷಕ ಶಿಕ್ಷಣ ಮಹಾವಿದ್ಯಾಲಯ
ಮಂಗಳೂರು, ದಕ್ಷಿಣ ಕನ್ನಡ ಜಿಲ್ಲೆ
Mob: 9448571203
******************************************** 


Ads on article

Advertise in articles 1

advertising articles 2

Advertise under the article