-->
ಸ್ಫೂರ್ತಿಯ ಮಾತುಗಳು : ಸಂಚಿಕೆ - 116

ಸ್ಫೂರ್ತಿಯ ಮಾತುಗಳು : ಸಂಚಿಕೆ - 116

ಸ್ಫೂರ್ತಿಯ ಮಾತುಗಳು : ಸಂಚಿಕೆ - 116
ಲೇಖಕರು : ರಮೇಶ ಎಂ. ಬಾಯಾರು 
ರಾಜ್ಯಪ್ರಶಸ್ತಿ ಪುರಸ್ಕೃತ ನಿವೃತ್ತ ಅಧ್ಯಾಪಕರು
ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
ಮೊಬೈಲ್ ಸಂಖ್ಯೆ : +91 94486 26093
rameshbayar@gmail.com 


      
ನಾಗರಿಕತೆಯ ಹೆಸರಿನಲ್ಲಿ ಮನೆ ಅಥವಾ ಕಟ್ಟಡಗಳ ಸುತ್ತಲಿನ ಸೌಂದರ್ಯ ಹೆಚ್ಚಿಸುವುದರಿಂದ ನಿಧಾನವಾಗಿ ಪರಿಸರದ ನಾಶವೂ ನಡೆದೇ ನಡೆಯುತ್ತದೆ. ವಾಸ್ತವ್ಯದ ಪರಿಸರವನ್ನು ಅಂದವಾಗಿರಿಸುವುದು ನಾಗರಿಕತೆಯ ಲಕ್ಷಣ ಎಂದು ನಾವು ಅಭಿಮಾನದಿಂದ ಎದೆಯುಬ್ಬಿಸಿ ಹೇಳಿದರೂ ನೈಜ ಚಿಂತನೆಗೆ ನಮ್ಮನ್ನೊಡ್ಡಿದರೆ ಸುತ್ತಲಿನ ಸೌಂದರ್ಯವರ್ಧನೆಯೊಂದಿಗೆ ಪರಿಸರವೂ ನಾಶವಾಗುವುದೆಂಬುದನ್ನು ಎಲ್ಲರೂ ಒಪ್ಪಲೇಬೇಕು. ವಾಸ್ತವ್ಯಕ್ಕೆ ಪೂರಕವಾಗಿ ಅನುಕೂಲತೆಗಳನ್ನು ಪಡೆಯವುದು ಅಗತ್ಯವಾದರೂ ಪರಿಸರದ ಸಂರಕ್ಷಣೆಗೆ ಗರಿಷ್ಟ ಆದ್ಯತೆಯನ್ನು ನೀಡುವ ಮನಸ್ಸು ಪ್ರತಿಯೊಬ್ಬರದಾಗಬೇಕು. 

ಪರಿಸರವೆನ್ನುವುದು ಕೇವಲ ಮರಗಿಡ ಬಳ್ಳಿಗಳು ಮಾತ್ರವಲ್ಲ. ನಮ್ಮ ಸುತ್ತ ಬದುಕುವ ಎಲ್ಲ ಜೀವಿಗಳೂ, ಪಕ್ಷಿಗಳೂ, ಉರಗಗಳು ಪರಿಸರದಿಂದ ಭಿನ್ನವಲ್ಲ. ಜಲಮೂಲಗಳು, ಗುಡ್ಡ ಬೆಟ್ಟಗಳು, ಕಣಿವೆಗಳು, ನದಿ ನದಗಳು, ತೋಡುಗಳು, ಹೊಳೆಗಳು ಎಲ್ಲವೂ ಪರಿಸರದ ಅವಿಚ್ಛಿನ್ನ ಭಾಗಗಳು. ಪ್ರಾಣಿಗಳ ಹಾವಳಿಯಿಂದ ಬೆಳೆ ನಾಶವಾಗುತ್ತಿದೆಯೆಂಬ ಕೂಗು ಇತ್ತೀಚೆಗೆ ವ್ಯಾಪಕ. ಈ ಕೂಗಿಗೆ ಸಂಬಂಧಿಸಿದವರ ಕೃಷಿ ಕಾಯಕ ಇತ್ತೀಚೆಗಷ್ಟೇ ಸ್ಥಾಪಿತವಾದುದು. ಇವರ ಕೃಷಿಯಾರಂಭವಾಗಿ ಕೆಲವೇ ದಶಕಗಳು ಸಂದಿರಬಹುದು. ಪ್ರಾಣಿಗಳು ಏಕೆ ಹಾವಳಿ ಮಾಡುತ್ತಿವೆಯೆಂದು ಗಂಭೀರವಾಗಿ ಯೋಚನೆ ಮಾಡಿದರೆ ನಾವು ಅವುಗಳ ಜಮೀನನ್ನು ಸ್ವಂತಕ್ಕೆ ಬಳಸುತ್ತಿದ್ದೇವೆ. ಇದರಿಂದಾಗಿ ಅವುಗಳ ಪರಿಸರ ನಮ್ಮ ವಶವಾಗಿರುವುದರಿಂದ ಅವುಗಳ ಆಹಾರವನ್ನು ನಮ್ಮ ಕೃಷಿ ಭೂಮಿಯಲ್ಲಿಯೇ ಅವು ಕಂಡುಕೊಳ್ಳುತ್ತವೆ. ನಮಗೆ ಬೇಕಾದಂತೆ ಪರಿಸರದ ಸ್ವರೂಪ ಬದಲಿಸಿದಾಗ ಸಹಜವಾಗಿಯೇ ಪರಿಸರದಲ್ಲಿ ಮೂಲತಃ ಇದ್ದ ಪ್ರಾಣಿ ಪಕ್ಷಿಗಳಿಗೆ ಏನು ಮಾಡಲಾದೀತು?

ಪ್ರತಿ ಮನೆಯಲ್ಲೂ ಇಲೆಕ್ಟ್ರಿಕ್ ಮತ್ತು ಇಲೆಕ್ಟ್ರಾನಿಕ್ ಉಪಕರಣಗಳು ಇತ್ತೀಚೆಗೆ ಸಾಮಾನ್ಯ. ಕೆಲಸದ ತ್ತಡಗಳ ನಡುವೆ ಶ್ರಮವನ್ನು ಹಗುರ ಮಾಡಲು ಮಿಕ್ಸಿ ಮತ್ತು ಗ್ರೈಂಡರ್ ಇಲ್ಲದಿದ್ದರೆ ಹೇಗೆ? ಏ.ಸಿ, ಫ್ರಿಡ್ಜ್ ನಾಗರಿಕ ಬದುಕಿನ ಪ್ರತೀಕ. ಇವು ಇಲ್ಲದೆ ಇದ್ದರೆ ಮನೆಗೆ ಲಕ್ಷಣವೇ ಇಲ್ಲ. ಒಂದು ಏ ಸಿ ಹಾಕಿಸಲು ಐವತ್ತು ಸಾವಿರದ ತನಕ ವ್ಯಯವಾಗುತ್ತದೆ. ಅದೇ ಮನೆಯ ಸುತ್ತ ಒಂದು ಸಾವಿರ ರೂ ವೆಚ್ಚ ಮಾಡಿ ಹಣ್ಣಿನ ಗಿಡ ನೆಡಿಸಿದರೆ ಪರಿಸರಕ್ಕೂ ಹಿತ, ಪ್ರಾಣಿ ಪಕ್ಷಿಗಳಿಗೂ ಸಂತಸ. ಮನೆಯೊಳಗೆ ಮತ್ತು ಸುತ್ತಮುತ್ತ ಏ.ಸಿ ಗಿಂತ ಮಿಗಿಲಾದ ನೈಜ ತಂಪು ಸಿಗುವುದಲ್ಲವೇ? ಸಮಯವಿದ್ದಾಗ ನಮ್ಮ ಅರೆಯುವ ಕಲ್ಲು ತಿರುಗಿದರೆ ನಾಲಿಗೆ ಹೊಟ್ಟೆಗಳಿಗೆ ಹಿತ ಮತ್ತು ಕುಟುಂಬದ ವೆಚ್ಚದಲ್ಲಿ ನಿಯಂತ್ರಣ ಆಗುವುದಿಲ್ಲವೇ? ನಮ್ಮ ಹಿರಿಯರು ಆಹಾರ, ತರಕಾರಿಗಳ ಸಂರಕ್ಷಣೆಗೆ ಬಳಸುತ್ತಿದ್ದ ವಿಧಾನಗಳನ್ನು ನಾವೂ ಅನುಸರಿಸಿದರೆ ಫ್ರಿಡ್ಜ್ ನಮಗೆ ಅತ್ಯಗತ್ಯವೆನಿಸದು. ನಾಗರಿಕತೆಯ ಹೆಸರಿನಲ್ಲಿ ಎಲ್ಲವೂ ಅಗತ್ಯವಲ್ಲ. ಅವರಲ್ಲಿದೆ ನಮ್ಮಲ್ಲೂ ಇರಲಿ ಎಂಬ ಮನಸ್ಸಿನಿಂದ ಪ್ರತಿಯೊಬ್ಬರೂ ಹೊರ ಬಂದರೆ ನಾಗರಿಕತೆಯ ಹೆಸರಿನಲ್ಲಿ ಆಗುತ್ತಿರುವ ಪರಿಸರ ನಾಶದ ಪ್ರಮಾಣವನ್ನು ತಗ್ಗಿಸಬಹುದಲ್ಲವೇ?
ಮನರಂಜನೆ ಮತ್ತು ಸಂವಹನ ಮಾಧ್ಯಮಗಳು ನಾಗರಿಕತೆಯಲ್ಲಿ ಬಿಟ್ಟಿರಲಾಗದ ಅಂಶಗಳು. ಅಂತರ್ಜಾಲವಿಲ್ಲದೆ ಇವು ಉಸಿರಾಡವು. ಅಂತರ್ಜಾಲ ಸಂಪರ್ಕ ಬಲಯುತವಾಗಿರಲು ಅಲ್ಲಲ್ಲಿ ಏಳುವ ಟವರ್ ಗಳು ಪರಿಸರ ಹಾನಿಕಾರಕ. ಪರಿಸರದ ಹಕ್ಕಿಗಳ ಕೆಲವು ಸಂತತಿಗಳು ನಾಶದಂಚಿಗೆ ಸರಿಯುತ್ತಿವೆ. ಬಸ್, ಪಾರ್ಕು, ಕ್ರೀಡಾಂಗಣ, ಸಭಾಂಗಣ ಹೀಗೆ ಎಲ್ಲೆಂದರಲ್ಲಿ ಚಿತ್ರೀಕರಣ ಮಾಡುತ್ತಿರುವ, ಸದ್ದು ಮಾಡುತ್ತಾ ಮಾತನಾಡುತ್ತಿರುವ, ಸಂಗೀತ ಹಾಡುತ್ತಿರುವ ಏರು ಧ್ವನಿಯ ಮೊಬೈಲ್ ಗಳು ಬಳಕೆದಾರ ಮತ್ತು ಜೊತೆಗಾರರ ಆರೋಗ್ಯಕ್ಕೆ ಸವಾಲಾಗುತ್ತಿವೆ. ಸಮಾರಂಭಗಳಲ್ಲಿ ಡಿ.ಜೆ ಉಂಟು ಮಾಡುವ ಶಬ್ದಮಾಲಿನ್ಯ ಮಕ್ಕಳನ್ನು ಕಿವುಡುತನಕ್ಕೆ ನೂಕುತ್ತಿವೆ, ಕಾಯಿಲೆಯಿಂದ ಮಲಗಿದವರ ಪ್ರಾಣಕ್ಕೂ ಸಂಚಕಾರ ಆಗುವುದಿದೆ. ಇವೆಲ್ಲವೂ ಬೇಡವೇ ಬೇಡವೆಂದಲ್ಲ. ನಾಗರಿಕ ಬದುಕು ತನ್ನ ಗಟ್ಟಿಗತನವನ್ನು ಪ್ರದರ್ಶನ ಮಾಡಲಿ. ಆದರೆ ಇತಿಮಿತಿಯಿಂದ ಬಳಕೆ ಮಾಡಲು ಸಮಸ್ಯೆಗಳಿಲ್ಲ ತಾನೇ? ಯಾವುದೇ ಕಾರ್ಯಕ್ರಮಕ್ಕೂ ಬರುವವರೆಲ್ಲರೂ ಮೊಬೈಲ್ ತರುತ್ತಾರೆ. ಹೆಚ್ಚಿನವರು ದೃಶ್ಯಗಳನ್ನು ಸೆರೆಹಿಡಿಯುತ್ತಾರೆ. ಕೆಲವೊಮ್ಮೆ ಕ್ಲಿಕ್ಕಿಸುವ ಮೇಲಾಟದಲ್ಲಿ ತಳ್ಳಾಟಗಳು, ಪರಿಣಾಮ ಜಗಳಗಳು ನಡೆಯುವುದೂ ಇದೆ. ದಾಖಲೆಗಾಗಿ ಒಬ್ಬಿಬ್ಬರು ದೃಶ್ಯಾವಳಿಗಳನ್ನು ಸೆರೆ ಹಿಡಿದು ಹಂಚಬಹುದಲ್ಲ. ಕಾರ್ಯಕ್ರಮದ ಸಡಗರವನ್ನು ನೋಡಿ ಆನಂದಿಸುವ ಕಣ್ಣುಗಳಿಗೆ ಕ್ಲಿಕ್ಕಿಸುವ ದಂಡು ಪರದೆಯಾಗಬಾರದಲ್ಲ. ನಾಗರಿಕತೆಗೆ ಇಂತಹ ಪ್ರಕರಣಗಳು ಅಸಹ್ಯವಲ್ಲವೇ?

ಬಲಿತ ಮರವು ಪ್ರಕೃತಿಯಿಂದ ಅತ್ಯಧಿಕ ಪ್ರಮಾಣದಲ್ಲಿ ಇಂಗಾರಾಮ್ಲ ಅನಿಲವನ್ನು ಹೀರಿ ಆಮ್ಲಜನಕವನ್ನು ಬಿಡುಗಡೆಗೊಳಿಸಿ ನಮಗೆ ಉಸಿರಾಗುತ್ತದೆ. ಬಲಿತ ಮರಗಳೇ ಕಟ್ಟಡಗಳಿಗೆ ಬೇಕಾಗುತ್ತವೆಯೆಂಬುದೂ ಸಹಜ. ಕಟ್ಟಡಗಳನ್ನು ಕನಿಷ್ಠ ಮರಗಳನ್ನು ಬಳಸಿ ನಿರ್ಮಿಸುವ ಅಗತ್ಯವಿದೆಯಲ್ಲವೇ? ನಮ್ಮ ತೋಟ, ಮನೆ ಮತ್ತಿತರ ಭಾಗಗಳಿಗೆ ರಸ್ತೆ ಅಗತ್ಯ. ರಸ್ತೆಯನ್ನು ಡಾಮರು ಅಥವಾ ಕಾಂಕ್ರೀಟಿನಿಂದ ಮುಚ್ಚಿದರೆ ಮಳೆಗಾಲದಲ್ಲಿ ನೀರಿಂಗಲು ತಡೆಯಾಗುತ್ತದೆ. ಬೇಸಗೆಯ ಮೊದಲ ತಿಂಗಳುಗಳಿಂದಲೇ ಕುಡಿಯುವ ನೀರಿನ ಹಾಹಾಕಾರ ವೇಳುತ್ತಿದೆಯಾದ್ದರಿಂದ ರಸ್ತೆಗಳನ್ನು ಡಾಮರು ಮತ್ತು ಕಾಂಕ್ರೀಟು ಮುಕ್ತಗೊಳಿಸುವ ಸಾಧ್ಯತೆಯತ್ತ ಗಮನವಿತ್ತರೆ ಪರಿಸರ ಉಳಿಯುತ್ತದೆ. ಮನೆ, ತೋಟ, ಹೊಲಗಳಿಗೆ ವಾಹನ ದಟ್ಟಣೆಯಿರದು. ಧೂಳು ಕೆಸರು ತುಂಬದು. ಹುಲ್ಲು ಬೆಳೆಸಿದರೂ ರಸ್ತೆಗಳು ಸಂಚಾರ ಯೋಗ್ಯಗೊಳ್ಳುತ್ತವೆ.

ನಾಗರೀಕತೆಯಲ್ಲಿ ನಳ್ಳಿ ನೀರು, ಚರಂಡಿ ವ್ಯವಸ್ಥೆ ಇರಲೇ ಬೇಕು. ದುರ್ನಾತ ಬೀರುವ ಚರಂಡಿಗಳು ಪರಿಸರದ ಆರೋಗ್ಯಕ್ಕೆ ಹಾನಿಕರ. ಕಸಕಡ್ಡಿಗಳು ತುಂಬಿ ಕೊಳಚೆಯ ಹರಿವಿಗೆ ತಡೆಯಾಗಬಾರದು. ನಳ್ಳಿ ನೀರಿನ ಸರಬರಾಜು ಕೊಳವೆಗಳಾಗಲಿ, ಪೈಪುಗಳಾಗಲೀ ಬಿರುಕು ಬಿಟ್ಟಿರಬಾರದು. ಒಂದು ಹನಿ ನೀರೂ ಅಮೃತ ಸಮಾನ. ನೀರು ಪೋಲಾಗದಂತೆ, ಅಪವ್ಯಯವಾಗದಂತೆ ನಮ್ಮೊಳಗೆ ನಿರಂತರ ಭಾವುಕವಾದ ಚಿಂತನೆಯಿರಲಿ 

ಕಬಕದಲ್ಲಿ ಪ್ರಧಾನ ಮಂತ್ರಿ ಜನೌಷಧ ಕೇಂದ್ರವಿದೆ. ನನಗೆ ಔಷಧ ಬೇಕಿತ್ತು. ಕಳೆದ ವಾರ ಅಲ್ಲಿ ಔಷಧ ಖರೀದಿಯ ನಂತರ ಮೆಡಿಕಲ್ಸ್ ನವರು ಎಂಟು ರೂಪಾಯಿ ನನಗೆ ಮರಳಿಸಬೇಕಾಯಿತು. ಏಳು ರೂಪಾಯಿಗಳನ್ನು ಹಿಂತಿರುಗಿಸುತ್ತಾ ಚಾಕಲೇಟೊಂದನ್ನು ಕೊಟ್ಟರು. ಚಿಲ್ಲರೆ ಹಣದ ಹೊಂದಾಣಿಕೆಯನ್ನು ಬೆಂಬಲಿಸ ಬೇಕಾದುದು ನಮ್ಮ ಧರ್ಮ. ನನಗೆ ಸ್ವಲ್ಪ ಕೆಮ್ಮೂ ಇತ್ತು. ಮಿಂಟ್ ಚಾಕಲೇಟು ಗಂಟಲಿಗೆ ಹಿತವಾಗಬಹುದೆಂದು ಸಿಪ್ಪೆ ಕಿತ್ತು ಬಾಯೊಳಗೆಸೆದೆ. “ಕಸ ಕೈಯಲ್ಲಿದೆ. ಏಲ್ಲಿ ಹಾಕಲಿ? ಕಸದ ತೊಟ್ಟಿ ಎಲ್ಲಿದೆ?” ಎಂದೆ. “ಒಳಗಿದೆ” ಎಂದರು. ಸಿಪ್ಪೆಯನ್ನು ಅವರ ಕೈಗಿತ್ತೆ. ಅವರು ಒಳಗೊಯ್ದು ಕಸದ ಡಬ್ಬದಲ್ಲಿ ಹಾಕಿದರು. ಕಸವನ್ನು ವಿಲೇ ಮಾಡುವುದನ್ನು ಬೆಂಬಲಿಸಿದ ಮೆಡಿಕಲ್ಸ್ ಸೇಲ್ಸ್ ಮಾತೆ ಅವರ ಸ್ವಭಾವವನ್ನು ಬಹಳ ಇಷ್ಟಪಟ್ಟೆ. ಎಲ್ಲೆಂದರಲ್ಲಿ ಕಸಹಾಕಬಾರದೆಂಬ ಪ್ರಜ್ಞೆ ನಾಗರಿಕತೆ ಮತ್ತು ಪರಿಸರ ಹಿತದ ಲಕ್ಷಣ. ಅದರಲ್ಲೂ ಪ್ಲಾಸ್ಟಿಕ್ ಕಸಗಳು ಕರಾರುವಾಕ್ಕಾಗಿ ಪಂಚಾಯತು ವ್ಯವಸ್ಥೆಗಳ ಮೂಲಕ ವಿಲೆಯಾಗದೇ ಇದ್ದರೆ ನಾವು ಅನಾಗರಿಕರ ಸಾಲಿಗೆ ಸೇರುತ್ತೇವೆ. ಪರಿಸರ ನಾಶದ ನೇರ ಹೊಣೆಗಾರರಾಗುತ್ತೇವೆ.

ನಾನು ಹಲವೆಡೆ ನೋಡುವ ದೃಶ್ಯಗಳು ಬಹಳ ನೋವನ್ನುಂಟು ಮಾಡುತ್ತಿವೆ. ಬೆಲೆ ಬಾಳುವ ಕಾರುಗಳಲ್ಲಿ ಬರುತ್ತಾರೆ. ಜನಸಂದಣಿ ಕಡಿಮೆಯಿರುವ ಸ್ಥಳಗಳಲ್ಲಿ ಮನೆಯಿಂದ ತುಂಬಿ ತಂದ ಕಸವನ್ನು ಚೆಲ್ಲಿ ಬಿಡುತ್ತಾರೆ. ಕಸದ ರಾಶಿ ಬೆಳೆಯ ತೊಡಗುತ್ತದೆ. ಈ ರೀತಿ ಕಸ ಎಸೆಯುವ ಸಿರಿವಂತ ಮತಿಭ್ರಷ್ಟರಿಗೇನನ್ನಲಿ? ಕೆಲವರು ಗಾಡಿಯೊಳಗೆ ತಿಂಡಿ ತಿಂದರೆ ಅದರ ಕಸವನ್ನು ಗಾಡಿಯಲ್ಲೇ ಮನೆಗೊಯ್ದು ವಿಲೇ ಮಾಡುವ ಹೃದಯವಂತರೂ ಇದ್ದಾರೆ. ಇಂತಹ ಮಹಾನುಭಾವರಿಗೆ ಶಿರ ಮಣಿಸಿ ನಮಸ್ಕರಿಸಲೇ ಬೇಕು. ಇತ್ತೀಚೆಗೆ ಹೃದಯವಂತರ ಸಂಖ್ಯೆಯು ಸಣ್ಣ ಪ್ರಮಾಣದಲ್ಲಿ ಹೆಚ್ಚುತ್ತಿದೆ ಎಂಬುದು ಸಂತಸದಾಯಕ. 

ನಾಗರಿಕತೆಯು ಜನರ ಆರೋಗ್ಯ ಮತ್ತು ಪರಿಸರಕ್ಕೆ ಕೊಡಲಿಯಾಗದಿರಲಿ, ಪರಿಸರದ ಹಿತವೇ ನಮ್ಮ ಶ್ರೇಷ್ಟ ಭಾವ ಹಾಗೂ ಪ್ರಥಮ ಆದ್ಯತೆಯಾಗಲಿ.
........ರಮೇಶ ಎಂ. ಬಾಯಾರು ಎಂ.ಎ, ಬಿಎಡ್
ರಾಜ್ಯಪ್ರಶಸ್ತಿ ಪುರಸ್ಕೃತ ನಿವೃತ್ತ ಅಧ್ಯಾಪಕರು
“ಸ್ಕಂದ” ಕುಳ ಗ್ರಾಮ
ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
ಮೊಬೈಲ್ ಸಂಖ್ಯೆ : +91 94486 26093
rameshbayar@gmail.com 
******************************************** 


Ads on article

Advertise in articles 1

advertising articles 2

Advertise under the article