ಮಕ್ಕಳಿಗಾಗಿ ವಿಜ್ಞಾನ : ಸಂಚಿಕೆ - 27
Tuesday, May 7, 2024
Edit
ಮಕ್ಕಳಿಗಾಗಿ ವಿಜ್ಞಾನ : ಸಂಚಿಕೆ - 27
ಲೇಖಕರು : ದಿವಾಕರ ಶೆಟ್ಟಿ ಎಚ್
ನಿವೃತ್ತ ಪ್ರವಾಚಕರು
ಸರಕಾರಿ ಶಿಕ್ಷಕ ಶಿಕ್ಷಣ ಮಹಾವಿದ್ಯಾಲಯ
ಮಂಗಳೂರು, ದಕ್ಷಿಣ ಕನ್ನಡ ಜಿಲ್ಲೆ
Mob: 9448571203
ಪ್ರೀತಿಯ ಮಕ್ಕಳೇ... ಸುದೀರ್ಘವಾದ ವಿಜ್ಞಾನ ಓದಿನ ಓಟದಲ್ಲಿ 25 ಪುಟಗಳನ್ನು ತಿರುಗಿಸಿದ್ದು ನಿಮಗೆ ಅರಿವಿರಬಹುದು. ಈ ಪಯಣದಲ್ಲಿ ಜೀವದ ಆರಂಭದ ಬಗ್ಗೆ ತಿಳಿದೆವು. ಸಂಕೀರ್ಣ ರಚನೆ ಇಲ್ಲದ ಜೀವ ಚಟುವಟಿಕೆ ಇಲ್ಲದೇ ವಂಶಾಭಿವೃದ್ಧಿಯನ್ನೇ ಹೋಲುವ ಕ್ರಿಯೆಯ ಮೂಲಕ ತಮ್ಮ ಪೀಳಿಗೆಯನ್ನು ಮುಂದುವರಿಸುತ್ತಿರುವ ವೈರಸ್ ಮತ್ತು ವೈರಾಯ್ಡ್ ಗಳ ಬಗ್ಗೆ ತಿಳಿದೆವು. ಇವು ಸರಳ ರಚನೆ ಹೊಂದಿವೆ ಎಂದ ಕೂಡಲೇ ಮೊದಲು ಕಾಣಿಸಿಕೊಂಡವು ಎನ್ನುವ ಹಾಗಿಲ್ಲ. ಏಕೆಂದರೆ ಇವುಗಳಿಗೆ ಸಂಖ್ಯೆ ಹೆಚ್ಚಿಸಲು ಒಂದಲ್ಲಾ ಒಂದು ಕೋಶ ಬೇಕೇ ಬೇಕು. ಆದ್ದರಿಂದ ಜೀವಿಗಳೇ ಮೊದಲು ಬಂದವು. ಈ ಜೀವಿಯ ರಚನಾತ್ಮಕ ಮತ್ತು ಕಾರ್ಯನಿರ್ವಾಹಕ ಘಟಕ ಒಂದು ಕೋಶ. ಜೀವಿಗಳು ಒಂದೇ ಒಂದು ಕೋಶದಿಂದ ಮಾಡಲ್ಪಟ್ಟಿರಬಹುದು ಅಥವಾ ಅನೇಕ ಕೋಶಗಳಿಂದಾಗಿರಬಹುದು. ಅದು ಬಹುಕೋಶೀಯ ಜೀವಿಯಾಗಿದ್ದರೆ ಬೇರೆ ಬೇರೆ ಕೆಲಸ ಮಾಡಲು ಪ್ರತ್ಯೇಕ ಕೋಶಗಳ ಗುಂಪಿರಬಹುದು. ಅವುಗಳನ್ನು ಅಂಗಾಂಶ ಎನ್ನುವುದಾಗಿ ಅರಿತಿದ್ದೀರಿ. ಏಕ ಕೋಶಿಕ ಜೀವಿಯಾಗಿದ್ದರೂ ಕೂಡಾ ಎಲ್ಲಾ ಜೀವ ಚಟುವಟಿಕೆಗಳನ್ನು ಮಾಡಲೇಬೇಕು. ಈ ಜೀವ ಚಟುವಟಿಕೆಗಳನ್ನು ಒಟ್ಟಾಗಿ ಜೈವಿಕ ಚಟುವಟಿಕೆಗಳೆನ್ನುತ್ತೇವೆ. ಈ ಜೈವಿಕ ಚಟುವಟಿಕೆಗಳು ಜೀವಿಗಳ ಒಳಗೆ ನಡೆಯುವ ರಾಸಾಯನಿಕ ಕ್ರಿಯೆಗಳು ಅಂದರೆ ಜೀವ ರಾಸಾಯನಿಕ ಕ್ರಿಯೆಗಳು. ಈ ಜೀವ ರಾಸಾಯನಿಕ ಕ್ರಿಯೆಗಳ ವೇಗ ತುಂಬಾ ನಿಧಾನವಾಗಿದ್ದರೆ ಸಾಗದು ಅದು ಸಾಕಷ್ಟು ವೇಗವಾಗಿ ನಡೆಯ ಬೇಕಾಗುತ್ತದೆ. ಅಂದರೆ ಈ ರಾಸಾಯನಿಕ ಕ್ರಿಯೆಗಳ ವೇಗ ಹೆಚ್ಚಿಸಲು ಸೂಕ್ತವಾದ ವೇಗವರ್ಧಕ ಒಂದರ ಅಗತ್ಯವಿರುತ್ತದೆ. ಜೀವ ರಾಸಾಯನಿಕ ಕ್ರಿಯೆಯಲ್ಲಿ ಭಾಗವಹಿಸುವ ವೇಗವರ್ಧಕಗಳನ್ನು ಕಿಣ್ವಗಳು (enzymes) ಎನ್ನುತ್ತೇವೆ. ಈ ಕಿಣ್ವಗಳು ಪ್ರೋಟೀನ್‌ಗಳಿಂದ ಮಾಡಲ್ಪಟ್ಟವು. ಎಲ್ಲಾ ಕಿಣ್ವಗಳೂ ಪ್ರೋಟೀನ್‌ಗಳು ಆದರೆ ಎಲ್ಲಾ ಪ್ರೋಟೀನ್‌ಗಳೂ ಕಿಣ್ವಗಳಲ್ಲ. ಅಂದರೆ ಪ್ರೋಟೀನ್‌ಗಳೆಂಬ ದೊಡ್ಡ ಕುಟುಂಬದ ಕೆಲವು ಸದಸ್ಯರು ಜೀವ ರಾಸಾಯನಿಕ ಕ್ರಿಯೆಗಳ ವೇಗವನ್ನು ನಿಯಂತ್ರಿಸುವ ಮೂಲಕ ಕಿಣ್ವಗಳಾಗಿ ಕೆಲಸ ಮಾಡುತ್ತವೆ. ನೀವು ಜೀರ್ಣ ಕ್ರಿಯೆಯಲ್ಲಿ ಭಾಗವಹಿಸುವ ಕಿಣ್ವಗಳ ಬಗ್ಗೆ ತಿಳಿದಿದ್ದೀರಿ. ಆದರೆ ಈ ಕಿಣ್ವಗಳು ಬರೇ ಜೀರ್ಣ ಕ್ರಿಯೆ ಮಾತ್ರವಲ್ಲ ಎಲ್ಲ ಜೀವ ರಾಸಾಯನಿಕ ಕ್ರಿಯೆಯಲ್ಲಿ ಭಾಗವಹಿಸುತ್ತವೆ. ಮನೆಯಲ್ಲಿ ಅಮ್ಮ ಮಾಡಿದ ಅಡುಗೆಯನ್ನು ಫ್ರಿಜ್ ನಲ್ಲಿ ಇಡುವುದನ್ನು ಅಥವಾ ಅದನ್ನು ಆಗಾಗ ಬಿಸಿ ಮಾಡುವುದನ್ನು ಗಮನಿಸಿದ್ದೀರಲ್ಲವೇ? ಯಾಕೆ ಹೀಗೆ ಎಂದು ಕೇಳಿದರೆ ಅಲ್ಲದಿದ್ದರೆ ಆಹಾರ ಹಾಳಾಗಿ ಬಿಡುತ್ತದೆ ಎನ್ನುತ್ತಾರೆ. ಈ ಆಹಾರ ಹಾಳಾಗುವುದೂ ಒಂದು ಜೀವ ರಾಸಾಯನಿಕ ಕ್ರಿಯೆ. ಇದನ್ನು ನಿಯಂತ್ರಿಸುವುದೂ ಕಿಣ್ವಗಳೇ. ಕಿಣ್ವಗಳು 20°C ಮತ್ತು 40°C ನಡುವೆ ಗರಿಷ್ಠ ಚಟುವಟಿಕೆಯಿಂದಿರುತ್ತದೆ. 10°C ನಂತರ ಉಷ್ಣತೆ ಪ್ರತೀ 10° ನಷ್ಟು ಹೆಚ್ಚಿದರೆ ಕಿಣ್ವಗಳ ಸಾಮರ್ಥ್ಯ ದ್ವಿಗುಣವಾಗುತ್ತದೆ. ಇದು 37.5°C ನಲ್ಲಿ ಗರಿಷ್ಠವಾಗಿರುತ್ತದೆ. ಆದ್ದರಿಂದ ಬೇಸಿಗೆಯಲ್ಲಿ ಆಹಾರ ಬೇಗನೆ ಹಾಳಾಗುತ್ತದೆ. ಹಾಲು ಅಥವಾ ಮೊಸರು ಯಾಕಮ್ಮಾ ಹುಳಿಯಾಗಿದೆ ಎಂದು ಕೇಳಿದರೆ ಬೇಸಗೆಯಲ್ವಾ ಎಂದು ಕೇಳಿದ್ದು ನೆನಪಿದೆಯಾ? 45°C ಗಿಂತ ಹೆಚ್ಚಿನ ಉಷ್ಣತೆಯಲ್ಲಿ ಈ ಕಿಣ್ವದ ಪ್ರೋಟೀನ್‌ಗಳು ವಿಘಟನೆಯಾಗುತ್ತವೆ (ನಾಶವಾಗುತ್ತದೆ) (denaturing of enzymes) ಅದಕ್ಕೋಸ್ಕರವೇ ಅಮ್ಮ ಹಾಲನ್ನು ಮತ್ತು ಸಾಂಬಾರನ್ನು ಕುದಿಸುವುದು. ಉಷ್ಣತೆ 10°C ಗಿಂತ ಕಡಿಮೆಯಾದಾಗ ಈ ಕಿಣ್ವಗಳ ಚಟುವಟಿಕೆ ಕುಂಠಿತವಾಗುತ್ತದೆ. 5°C ಗಿಂತ ಕೆಳಗೆ ಹೋಗುತ್ತಿದ್ದಂತೆ ಅವು ಹೆಚ್ಚು ಕಡಿಮೆ ನಿಷ್ಕ್ರಿಯವಾಗುತ್ತವೆ (ನಾಶವಾಗುವುದಿಲ್ಲ). ಆದ್ದರಿಂದಲೇ ಅಮ್ಮ ಮೊಸರು ಕೆಡದಂತೆ ಫ್ರಿಜ್ ನಲ್ಲಿಡುತ್ತಾರೆ. ಮೀನನ್ನು ಮುಂಜುಗಡ್ಡೆ ಹಾಕಿ ಯಾಕೆ ಸಂರಕ್ಷಿಸುತ್ತಾರೆ ಎಂದು ತಿಳಿಯಿತೇ?
ನಮಗೆ ಗುರುಗಳು ಆಹಾರವನ್ನು ಕೆಡುವಂತೆ ಮಾಡುವುದು ಸೂಕ್ಮಾಣು ಜೀವಿಗಳು ಎಂದಿದ್ದಾರೆ. ನೀವು ಕಿಣ್ವಗಳು ಎನ್ನುತ್ತೀರಲ್ಲ ಎನ್ನಬಹುದು. ಸೂಕ್ಮಾಣು ಜೀವಿಗಳು ಸ್ವತಃ ಏನೂ ಮಾಡಲಾರವು ಅವು ಉತ್ಪಾದಿಸುವ ಕಿಣ್ವಗಳು ಈ ಎಲ್ಲಾ ಅವಾಂತರಗಳನ್ನು ಮಾಡುತ್ತವೆ. ಮನುಷ್ಯನ ದೇಹದ ಉಷ್ಣತೆ ಯಾಕೆ 37°C ಇರುತ್ತದೆ ಎಂದು ಗೊತ್ತಾಯಿತೇ? ತೀವ್ರವಾದ ಜ್ವರ ಬಂದಾಗ ನಮ್ಮ ಜೀವ ರಾಸಾಯನಿಕ ಕ್ರಿಯೆಗಳ ವೇಗ ಏಕೆ ತಗ್ಗುತ್ತದೆ ತಿಳಿಯಿತೇ? ಶೀತ ರಕ್ತ ಪ್ರಾಣಿಗಳಿಗಿಂತ ಉಷ್ಣ ರಕ್ತ ಪ್ರಾಣಿಗಳು ಜೀವ ವಿಕಾಸದ ಏಣಿಯ ಮೇಲಿನ ಮೆಟ್ಟಿಲಿನಲ್ಲಿವೆ ಎಂಬುದು ತಿಳಿಯಿತೇ. ಕಿಣ್ವಗಳಿಲ್ಲದೇ ಜೀವ ಅಸ್ತಿತ್ವದಲ್ಲಿರದು ಎಂಬುದು ಮನದಟ್ಟಾಯಿತೇ..?
ನಿವೃತ್ತ ಪ್ರವಾಚಕರು
ಸರಕಾರಿ ಶಿಕ್ಷಕ ಶಿಕ್ಷಣ ಮಹಾವಿದ್ಯಾಲಯ
ಮಂಗಳೂರು, ದಕ್ಷಿಣ ಕನ್ನಡ ಜಿಲ್ಲೆ
Mob: 9448571203
********************************************