-->
ಮಕ್ಕಳಿಗಾಗಿ ವಿಜ್ಞಾನ : ಸಂಚಿಕೆ - 26

ಮಕ್ಕಳಿಗಾಗಿ ವಿಜ್ಞಾನ : ಸಂಚಿಕೆ - 26

ಮಕ್ಕಳಿಗಾಗಿ ವಿಜ್ಞಾನ : ಸಂಚಿಕೆ - 26
ಲೇಖಕರು : ದಿವಾಕರ ಶೆಟ್ಟಿ ಎಚ್
ನಿವೃತ್ತ ಪ್ರವಾಚಕರು
ಸರಕಾರಿ ಶಿಕ್ಷಕ ಶಿಕ್ಷಣ ಮಹಾವಿದ್ಯಾಲಯ
ಮಂಗಳೂರು, ದಕ್ಷಿಣ ಕನ್ನಡ ಜಿಲ್ಲೆ
Mob: 9448571203

   
ಪ್ರೀತಿಯ ಮಕ್ಕಳೇ..... ಕಳೆದ ವಾರ ಸಿಡುಬು ನಿರ್ಮೂಲನೆಯ ಬಗ್ಗೆ ಬರೆಯುತ್ತಾ ಮೇ 8 1780 ಎಂದಿದ್ದೆ. ಅದು 1980 ಎಂದಾಗಬೇಕು. ನಾವು ಸಣ್ಣವರಿರುವಾಗ ಸಿಡುಬಿನ ವಿರುದ್ದ ಲಸಿಕೆ ಹಾಕುತ್ತಿದ್ದರು. ಅದನ್ನು ದಾಕು ಅಥವಾ ದೇವಿ ಹಾಕವುದು ಎನ್ನುತ್ತಿದ್ದರು. ನಾವು ಶಾಲೆಗೆ ಸೇರುವಾಗ ತುಂಬ ಬೇಕಾದ ಪ್ರವೇಶ ಅರ್ಜಿಯಲ್ಲಿ ದೇವಿ ಹಾಕಲಾಗಿದೆಯೇ ಎಂಬ ಕಾಲಂ ಭರ್ತಿ ಮಾಡಬೇಕಾಗಿತ್ತು. ಈಗ ಅದು ಇಲ್ಲ. ಅದರ ಅಗತ್ಯವೂ ಇಲ್ಲ.

ನಿಮ್ಮ ಮನೆಯಲ್ಲಿ ಒಂದು ಹಳೆಯ ಹಲಸಿನ ಮರ ಇದೆಯಲ್ಲ ಅದರ ವಯಸ್ಸು ಎಷ್ಟು ಎಂದು ನಿಮ್ಮ ಅಮ್ಮನ ಬಳಿ ಕೇಳಿ. ಅಮ್ಮ ಹೇಳುತ್ತಾರೆ ನಾನು ನೋಡುವಾಗಲೂ ಇದು ಇಷ್ಟೇ ಎತ್ತರ ಇತ್ತು ಈಗ ಸ್ವಲ್ಪ ದಪ್ಪ ಆಗಿದೆ ಅಷ್ಟೇ. ಅಪ್ಪ ಹೇಳುತ್ತಾರೆ ಒಂದು ಎಪ್ಪತ್ತೈದಾದರೂ ಆಗಿರಬಹುದಂತೆ. ಈ ಸಸ್ಯಗಳ ಬೆಳವಣಿಗೆ ಆರಂಭದಲ್ಲಿ ವೇಗವಾಗಿದ್ದರೂ ನಂತರ ನಿಧಾನವಾಗುತ್ತಾ ಹೋಗುತ್ತದೆ. ಏಕೆ ಹೀಗೆ ಎಂದು ಎಂದಾದರೂ ಯೋಚಿಸಿದ್ದೀರಾ? ಇರಲಿ ಬಿಡಿ. ಫಿಲಿಪ್ಪೀನ್ಸ್ ನಲ್ಲಿ ಕಂಡು ಬರುವ ಒಂದು ಜಾತಿಯ ಬಿದಿರು ಎಷ್ಟು ವೇಗವಾಗಿ ಬೆಳೆಯುತ್ತದೆಂದರೆ ಮೊದಲ ದಿನ 12 ಅಡಿಗಳಷ್ಟು. ಅಲ್ಲಿಯ ಜನ ಮರಣ ದಂಡನೆಗೆ ಗುರಿಯಾದ ವ್ಯಕ್ತಿಯನ್ನು ಆ ಕಳಲೆಯ ನೇರದಲ್ಲಿ ಗೂಟ ಹೊಡೆದು ಕಟ್ಟಿ ಬಿಡುತ್ತಿದ್ದರಂತೆ. ದಿನ ಬೆಳಗಾಗುವಾಗ ಅದು ಆತನ ಗುದದ್ವಾರದ ಮೂಲಕ ತೂರಿ ಹೋಗಿ ಕೈದಿ ಸತ್ತು ಹೋಗಿಬಿಡುತ್ತಿದ್ದನಂತೆ. ನಿಮ್ಮ ತೋಟದ ಸಮೀಪ ಒಂದು ರಕ್ಕಸ ಕಳೆಯ ಬಳ್ಳಿ ಬೆಳೆಯುವುದನ್ನು ನೋಡಿರಬಹುದು. ಇವತ್ತು ಆ ಬಳ್ಳಿ ನಿಮ್ಮ ಅಡಿಕೆ ಮರಕ್ಕೆ ಹಬ್ಬಲು ಆರಂಭಿಸಿದರೆ ನಾಲ್ಕು ದಿನಗಳಾಗುವಾಗ ಅದು ಅಡಿಕೆ ಮರದ ಗರಿಗಳನ್ನು ಆವರಿಸಿರುವುದನ್ನು ನೋಡುತ್ತೀರಿ. ಅಡಿಕೆ ಮರಕ್ಕೆ 25 ವರ್ಷ ತಗುಲಿದ ಎತ್ತರಕ್ಕೆ ಬೆಳೆಯಲು ಈ ಬಳ್ಳಿಗೆ ಕೇವಲ ನಾಲ್ಕು ದಿನ ಸಾಕಾಯ್ತು. ಏಕೆ ಹೀಗೆ ಎಂದು ಒಮ್ಮೆಯಾದರೂ ನಿಮ್ಮನ್ನು ಕೇಳಿಕೊಂಡಿದ್ದೀರಾ? ಇದು ಪ್ರಕೃತಿ ರೂಪಿಸಿದ ಉಳಿತಾಯದ ರಹಸ್ಯ. ಮರದ ಎತ್ತರ ಮತ್ತು ದಪ್ಪ ಹೆಚ್ಚಾಗುವುದನ್ನು ನಾವು ಬೆಳವಣಿಗೆ (growth) ಎನ್ನುವುದು. ಎತ್ತರ ಹೆಚ್ಚುವುದು ಪ್ರಾಥಮಿಕ ಬೆಳವಣಿಗೆಯಾದರೆ (primary) ದಪ್ಪಕ್ಕೆ ಬೆಳೆಯುವುದು ಅನುಷಂಗಿಕ (secondary). ಕೋಶ ವಿಭಜನೆಯಾಗುತ್ತಾ ಇದ್ದ ಹಾಗೆ ಲಗೋರಿ ಆಟದಲ್ಲಿ ಒಂದು ಕಲ್ಲಿನ ಮೇಲೆ ಇನ್ನೊಂದು ಕಲ್ಲನ್ನಿಡುತ್ತಾ ಲಗೋರಿ ಕಟ್ಟುತ್ತೇವಲ್ಲ ಹಾಗೆ ಮರದ ಎತ್ತರ ಹೆಚ್ಚುತ್ತಾ ಹೋಗುತ್ತದೆ. ಈ ಕೋಶಗಳು ಬೇರೆ ಬೇರೆ ಕೆಲಸ ಮಾಡುವ ಕೋಶಗಳ ಒಂದು ಒಂದು ಸಮೂಹಗಳಾಗಿ ಪರಿವರ್ತನೆಯಾಗುತ್ತವೆ (differentiation). ಈ ಒಂದೇ ರೀತಿಯ ಕೆಲಸ ಮಾಡುವ ಕೋಶಗಳ ಸಮೂಹ ಅಂಗಾಂಶ (tissue). ಅಂದೆ ಅಂಗಾಂಶಗಳು ರೂಪುಗೊಳ್ಳುತ್ತವೆ. ಪ್ರಾಣಿಗಳಲ್ಲಿ ಇದು ಮೂಳೆ, ರಕ್ತ, ನರ ಸ್ನಾಯು ಹೀಗಾದರೆ ಸಸ್ಯಗಳಲ್ಲಿ ಪ್ಯಾರೆಂಕೈಮಾ, ಕೋಲೆಂಕೈಮಾ, ಸ್ಲೀರೆಂಕೈಮಾ ಸಾಗಾಣಿಕೆ ಹೀಗೆ. ಈ ಕೋಶಗಳ ಪರಿವರ್ತನೆಗೆ ಅಪಾರ ಪ್ರಮಾಣದ ಶಕ್ತಿ ಮತ್ತು ಸಮಯ ಬೇಕು. ಮರಗಳಿಗೆ ನೆಟ್ಟಗೆ ನಿಲ್ಲುವ ಶಕ್ತಿಯೊದಗಿಸುವ ಆಧಾರ ಅಂಗಾಂಶಗಳೆಂದರೆ ಸ್ಲೀರೆಂಕೈಮಾ ಮತ್ತು ಕೋಲೆಂಕೈಮಾ. ಈ ಕೋಲೆಂಕೈಮಾ ಜೀವಂತ ಜೀವಕೋಶಗಳಾಗಿದ್ದು ಅಲ್ಪ ಪ್ರಮಾಣದ hemicellulose, cellulose ಮತ್ತು ಪೆಕ್ಟಿನ್ ಹೊಂದಿರುತ್ತವೆ. ಕೋಲೆಂಕೈಮಾ ಮೃದು ಕಾಂಡದ ಬಳ್ಳಿಗಳ ಆಧಾರ ಅಂಗಾಂಶ. ಇದರ ಪರಿವರ್ತನೆಗೆ (differentiation) ಅಷ್ಟೇನೂ ಶಕ್ತಿ ಹಾಗೂ ಸಮಯ ಬೇಕಾಗಿಲ್ಲ. ಅಂದರೆ ಒಂದು ಒಳ್ಳೆಯ ಉಳಿತಾಯ ಯೋಜನೆ. ಆದರೆ ಈ ಸ್ಲೀರೆಂಕೈಮಾ ಹಾಗಲ್ಲ ಅಪಾರವಾದ ಸೆಲ್ಯುಲೋಸ್, ಅಥವಾ ಲಿಗ್ನಿನ್ ಸಂಗ್ರಹಣೆ ಮಾಡುತ್ತಾ ಹೋಗಿ ಅದರೊಳಗಿನ ಕೋಶದ್ರವ್ಯವೇ ಒಣಗಿ ಸತ್ತ ಜೀವಕೋಶಗಳ ಗುಂಪಾಗಿ ಬಿಡುತ್ತದೆ. ಪ್ಯಾರೆಂಕೈಮಾ ಕೋಶಗಳು ಸ್ಲೀರೆಂಕೈಮಾ ಆಗಿ ಬದಲಾಗಲು ಅಪಾರವಾದ ಸಮಯ ಮತ್ತು ವಸ್ತು ಸಂಚಯ ಬೇಕು. ಆದ್ದರಿಂದ ಮರಗಳು ದಪ್ಪನಾಗಿ ಬೆಳೆಯುವುದು ನಿಧಾನ. ಬಳ್ಳಿಗಳು ದಟ್ಟವಾದ ಕಾಡಿನಲ್ಲಿ ಮೇಲ್ಗಡೆ ಮರಗಳ ನೆರಳು ಇರುವುದರಿಂದ ಕೆಳಗಡೆ ಹುಲುಸಾಗಿ ಬೆಳೆಯಲಾರವು. ನೆಟ್ಟಗೆ ನಿಲ್ಲೋಣ ಎಂದರೆ ಅಪಾರವಾದ ಸಮಯ ಮತ್ತು ಸಂಪನ್ಮೂಲ ಬೇಕು. ಸಣ್ಣ ಬಳ್ಳಿಗೆ ಇದು ಸಾಧ್ಯವೇ? ಹಾಗೆ ಸಾಯಬೇಕಷ್ಟೆ. ಅದಕ್ಕೋಸ್ಕರ ಕಡಿಮೆ ಖರ್ಚಿನ ಅಂಗಾಂಶದ (ಕೋಲೆಂಕೈಮಾ) ಸಹಾಯದಿಂದ ಮರವನ್ನೇ ಆಧರಿಸಿ ಏರುತ್ತಾ ಹೋಗಿ ಮರದ ತುದಿಯಲ್ಲಿ ತನ್ನ ಎಲೆಗಳ ಕೊಡೆಯನ್ನು ಬಿಡಿಸಿ ಬದುಕುತ್ತದೆ. ಮರಕ್ಕೋ ತಾನು ಬಹಳ ಬಳ್ಳಿಗಳಿಗೆ ಆಶ್ರಯವಾಗಿದ್ದೇನೆಂಬ ಅಹಂ. ಇದು ಜೀವ ಜಗತ್ತಿನ ಮಾಯಾಜಾಲ. ಯಾರನ್ನೋ ಆಶ್ರಯಿಸಿ ಯಾರೋ ಬದುಕು ಕಟ್ಟಿಕೊಂಡು ಅವರನ್ನೇ ಶೋಷಣೆ ಮಾಡುವುದು.

ಈ ವೈರಸ್ ಮತ್ತು ವೈರಾಯ್ಡ್ ಗಳ ವಿಷಯದಲ್ಲಿಯೂ ನಿಮಗೆ ಹಾಗೇ ಅನ್ನಿಸುವುದಿಲ್ಲವೇ? ಯಾವುದೇ ಸಂಕೀರ್ಣ ರಚನೆಗಳಿಲ್ಲ. ಯಾವುದೇ ಸಂಕೀರ್ಣ ಜೀವ ಚಟುವಟಿಕೆಗಳಿಲ್ಲ. ಒಂದು ತುಂಡು ಅನುವಂಶೀಯ ವಸ್ತುವನ್ನಿಟ್ಟುಕೊಂಡು ಎಷ್ಟೊಂದು ಸಹಸ್ರಮಾನಗಳ ಕಾಲ ಕೆಲವೊಮ್ಮೆ ಮನುಕುಲವನ್ನು ನಡುಗಿಸುತ್ತಾ ತಮ್ಮ ಅಸ್ತಿತ್ವವನ್ನು ಉಳಿಸಿಕೊಂಡು ಬಂದಿವೆ ನೋಡಿ. ದುರ್ದೈವಶಾತ್ ಅವುಗಳ ಮೇಲಿರುವ ಪ್ರೋಟೀನ್ ಕವಚ ಸಾಬೂನಿನಿಂದ ಕರಗಿಸಲ್ಪಡುವುದರಿಂದ ಕೈ ತೊಳೆಯುವ ಮೂಲಕ ಕೊರೋನಾದಿಂದ ದೂರವಿರುವುದು ಸಾಧ್ಯವಾಯಿತು ಅಷ್ಟೇ. 

ಮಕ್ಕಳೇ ನಾವು ಜೀವ ಜಗತ್ತಿನಿಂದ ಕಲಿಯಬೇಕಾದ ಪಾಠ ಇದೇ. ಈ ಜಗತ್ತಿನಲ್ಲಿ ದೌರ್ಬಲ್ಯ (weakness) ಅಥವಾ ದುರ್ಬಲ (weak) ಎಂಬುದಿಲ್ಲ. ನಮ್ಮ ದೌರ್ಬಲ್ಯವನ್ನು ಅರ್ಥಮಾಡಿಕೊಂಡು ಅದನ್ನು ಶಕ್ತಿಯಾಗಿ (strength) ಪರಿವರ್ತಿಸಿಕೊಳ್ಳುವ ಕಲೆ ತಿಳಿದಿರಬೇಕು ಅಷ್ಟೇ. ಬಲಿಷ್ಠ ನಾದ ಮಾನವ ನಾಲ್ಕೇ ನಾಲ್ಕು ಸೀನಿಗೆ ಹೆದರಿ ವೈದ್ಯರಲ್ಲಿ ಓಡುವಂತೆ ಮಾಡುತ್ತದೆ ಒಂದು ವೈರಸ್. ನೂರಾರು ವರ್ಷ ಕೊಬ್ಬಿ ಬೆಳೆದ ಮರದ ತುದಿಯಲ್ಲಿ ಎಲೆ ಚಾಚುವುದು ದುರ್ಬಲ ಬಳ್ಳಿ.
........................................ ದಿವಾಕರ ಶೆಟ್ಟಿ ಎಚ್
ನಿವೃತ್ತ ಪ್ರವಾಚಕರು
ಸರಕಾರಿ ಶಿಕ್ಷಕ ಶಿಕ್ಷಣ ಮಹಾವಿದ್ಯಾಲಯ
ಮಂಗಳೂರು, ದಕ್ಷಿಣ ಕನ್ನಡ ಜಿಲ್ಲೆ
Mob: 9448571203
********************************************