-->
ಜೀವನ ಸಂಭ್ರಮ : ಸಂಚಿಕೆ - 136

ಜೀವನ ಸಂಭ್ರಮ : ಸಂಚಿಕೆ - 136

ಜೀವನ ಸಂಭ್ರಮ : ಸಂಚಿಕೆ - 136
ಲೇಖಕರು : ಎಂ.ಪಿ. ಜ್ಞಾನೇಶ್ 
ಶಿಕ್ಷಣಾಧಿಕಾರಿ 
ಪ್ರಧಾನ ಮಂತ್ರಿ ಪೋಷಣ್ ಶಕ್ತಿ ನಿರ್ಮಾಣ
(ಮಧ್ಯಾಹ್ನ ಉಪಹಾರ ಯೋಜನೆ) 
ಜಿಲ್ಲಾ ಪಂಚಾಯತ್ ಮಂಗಳೂರು
ದಕ್ಷಿಣ ಕನ್ನಡ ಜಿಲ್ಲೆ 

                  

ಮಕ್ಕಳೇ, ಇಂದು ಅಭ್ಯಾಸ ಎಂದರೇನು? ನೋಡೋಣ. ಪತಂಜಲ ಮಹರ್ಷಿಯ ಯೋಗ ಸೂತ್ರ 13ರಲ್ಲಿ "ತತ್ರ ಸ್ಥಿತೌ ಯತ್ನೋ ಅಭ್ಯಾಸ" ಎಂದು ಹೇಳಿದ್ದಾನೆ. ಸೂತ್ರ 14ರಲ್ಲಿ "ಸತು ದೀರ್ಘಕಾಲ ನೈರಂತರ್ಯ ಸತ್ಕಾರ ಆಸೇವಿತೋ ದೃಢಭೂಮಿ" ಎಂದಿದ್ದಾನೆ. ಹದಿಮೂರರ ಸೂತ್ರದ ಅರ್ಥ ಪುನಃ ಪುನಃ ಮಾಡುವುದೇ ಅಭ್ಯಾಸ. ಸೂತ್ರ 14ರಲ್ಲಿ ಅಭ್ಯಾಸ ದೃಢವಾಗುವ ಉಪಾಯದ ಬಗ್ಗೆ ಹೇಳುತ್ತಾನೆ. ಈ 'ಅಭ್ಯಾಸ' ಎನ್ನುವುದು ಸತತವಾಗಿ ಸಾಗಬೇಕು, ಆಗ ಅದು ದೃಢವಾಗುತ್ತದೆ. ಇದನ್ನು ಒಂದು ಉದಾಹರಣೆಯಿಂದ ನೋಡೋಣ. 

ನಿಮಗೆಲ್ಲಾ ತೇನ್ ಸಿಂಗ್ ಬಗ್ಗೆ ಗೊತ್ತು. ತೇನ್ ಸಿಂಗ್ ಚಿಕ್ಕ ಬಾಲಕ. ಹಿಮಾಲಯ ಪರ್ವತದ ಸನಿಹದಲ್ಲೇ ವಾಸವಾಗಿದ್ದನು. ತಂದೆ ಇರಲಿಲ್ಲ. ತಾಯಿ ಆತನನ್ನು ಸಾಕಿ ಸಲಹುತ್ತಿದ್ದಳು. ಆ ಬಾಲಕ ದಿನಾಲು ಹಿಮಾಲಯ ಪರ್ವತ ನೋಡುತ್ತಿದ್ದನು. ಅದರ ತುದಿಗೆ ಮೌಂಟ್ ಎವರೆಸ್ಟ್ ಎನ್ನುವರು. ಅದು ಹಿಮಾಲಯದ ತುತ್ತ ತುದಿ. ಇದುವರೆಗೆ ಯಾರೂ ಅಲ್ಲಿಗೆ ಹೋಗಿರಲಿಲ್ಲ. ಅದು ಸುಮಾರು 8km ಎತ್ತರ. ಹಿಮದಿಂದ, ಹಿಮದ ಗೆಡ್ಡೆಯಿಂದ ತುಂಬಿತ್ತು. ಆಳವಾದ ಪ್ರಪಾತ, ಕಣಿವೆ. ಮೇಲೆ ಏರಿದರೆ ಆಮ್ಲಜನಕದ ಕೊರತೆ, ಜಾರಿದರೆ ಜೀವಕ್ಕೆ ಅಪಾಯ. ಆತನಿಗೆ ಅಲ್ಲಿಗೆ ಹೋಗಬೇಕೆಂಬ ಆಸೆ. ಒಮ್ಮೆ ತಾಯಿಯ ಬಳಿ ಹೇಳುತ್ತಾನೆ. ಅಮ್ಮ, ನಾನು ಆ ಹಿಮಾಲಯದ ತುತ್ತ ತುದಿಗೆ ಹೋಗಬೇಕು ಅಂತ ಆಸೆ ಎನ್ನುತ್ತಾನೆ. ಆತನ ತಾಯಿ ನಿಜವಾಗಿಯೂ ಮಹಾನ್ ತಾಯಿ ಆಗಿದ್ದರು. ಆಕೆ ಹೇಳುತ್ತಾಳೆ, ಅದೇನು ಮಹಾ?. ನೀನು ಅಭ್ಯಾಸ ಮಾಡು, ಖಂಡಿತ ನೀನು ಏರಿಯೇ ಏರುತ್ತಿ ಎಂದಳು. ಈಗಿನ ತಾಯಂದಿರ ಬಗ್ಗೆ ಹೇಳುವುದಾದರೆ, ಮಗು ಹೊರಗೆ ಹೋದರೆ ಏನು ಅಪಾಯ ಕಾದಿದೆಯೋ ಎಂದು, ಮನೆಯಿಂದ ಹೊರಗೆ ಹೋಗಬೇಡ. ಹೋದರೆ, ಇಷ್ಟೇ ದೂರ ಹೋಗು. ಇಷ್ಟೇ ಸಮಯಕ್ಕೆ ಬಾ, ಎಂದು ಆಜ್ಞೆ ಮಾಡುತ್ತಾರೆ. ಆದರೆ ತೇನ್ ಸಿಂಗ್ ನ ತಾಯಿ ಹಾಗೆ ಹೇಳಲಿಲ್ಲ. ನೀನು ಮನಸ್ಸು ಮಾಡಿದರೆ, ಅದೇನು ಮಹಾ?. ಪ್ರಯತ್ನಿಸು, ಒಂದು ದಿನ ಏರೇ ಏರುತ್ತಿ ಎಂದಿದ್ದಳು. ಎಷ್ಟು ವ್ಯತ್ಯಾಸ ಅಲ್ಲವೇ. ಈ ಮಾತನ್ನು ಕೇಳಿದ್ದೆ ತೇನ್ ಸಿಂಗನ ಮನಸ್ಸಿನಲ್ಲಿ ಹಿಮಾಲಯದ ತುದಿ ಮನಸ್ಸನ್ನು ತುಂಬಿತ್ತು. ಆತನ ಕನಸಿನಲ್ಲೂ ಅದೇ ಏರಿದಂತೆ, ಇಳಿದಂತೆ. ಆತನ ಮನಸ್ಸಿನಲ್ಲೂ ಅದೇ ತುಂಬಿತ್ತು. ಆತ ಅಲ್ಲಿ ಜೀವನೋಪಾಯಕ್ಕಾಗಿ ಪ್ರಾಣಿಗಳನ್ನು ಸಾಕುತ್ತಿದ್ದನು. ಅದನ್ನು ಹಿಮಾಲಯದ ತಪ್ಪಲಿನಲ್ಲಿ ಮೇಯಿಸಲು ಹೋಗುತ್ತಾನೆ. ಆ ಜನಾಂಗದ ವೃತ್ತಿ ಏನೆಂದರೆ ಹಿಮಾಲಯ ಹತ್ತುವವರಿಗೆ ಸಹಾಯ ಮಾಡುವುದು. ಅವರಿಗೆ ಶೇರ್ಪಾ ಜನಾಂಗ ಎನ್ನುವರು. ಆತ ತಾನು ಸಾಕಿದ್ದ ಪ್ರಾಣಿ ಮೇಯಲು ಬಿಟ್ಟು, ಬೆಟ್ಟ ಹತ್ತಲು ಶುರು ಮಾಡಿದ. ಮೊದಲನೇ ದಿನ ಸ್ವಲ್ಪ, ಎರಡನೇ ದಿನ ಇನ್ನು ಎತ್ತರ, ಮೂರನೇ ದಿನ ಅದಕ್ಕಿಂತ ಎತ್ತರ, ಹೀಗೆ ದಿನ ದಿನಾ ಅಭ್ಯಾಸ ಶುರು ಮಾಡಿದ. ಹೀಗೆ ಅಭ್ಯಾಸ ನಿರಂತರವಾಗಿ ಕೆಲವು ವರ್ಷ ಸಾಗಿತ್ತು. ಆ ಅಭ್ಯಾಸ ಮಾಡುವಾಗ ಅಲ್ಲಿರುವ ಹಿಮ, ಹಿಮದ ಗೆಡ್ಡೆ, ಕಂದಕ, ಅಲ್ಲಿ ಹೇಗೆ ಇರಬೇಕು...? ಆಮ್ಲಜನಕದ ಕೊರತೆ ಆದರೆ ಏನು ಮಾಡಬೇಕು ? ಆಹಾರ, ನೀರಿಗೆ ಏನು ಮಾಡಬೇಕು...? ಇದನ್ನೆಲ್ಲ ತಿಳಿಯ ತೊಡಗಿದನು ಮತ್ತು ಅಭ್ಯಾಸ ಮಾಡುತ್ತಿದ್ದನು. ಹೀಗೆ ಸುಮಾರು ವರ್ಷ ಅಭ್ಯಾಸ ಮಾಡಿದ ನಂತರ, ಒಮ್ಮೆ ಸಿಗ್ಮಂಡ್ ಹಿಲರಿ ಜೊತೆ ಸೇರಿ ಹಿಮಾಲಯದ ತುತ್ತ ತುದಿಗೆ, ಮೊಟ್ಟಮೊದಲ ಬಾರಿಗೆ ಹೋಗಿ ಭಾರತದ ಬಾವುಟ ಹಾರಿಸಿದನು.

ಈ ಘಟನೆ ಓದಿದ ನಂತರ ಪತಂಜಲರ ಸೂತ್ರ ನೆನಪಿಸಿಕೊಳ್ಳಿ. ಸುಮಾರು 2500 ವರ್ಷಗಳ ಹಿಂದೆ, ನಮ್ಮ ಮನಸ್ಸನ್ನು ಕುರಿತು ಅಧ್ಯಯನ ಮಾಡಿದ ಪ್ರಾಯೋಗಿಕ ಮನಶಾಸ್ತ್ರಜ್ಞ. ಅಭ್ಯಾಸ ಎಂದರೆ ಮೆಲ-ಮೆಲ, ಮತ್ತೆ- ಮತ್ತೆ, ಮಾಡುವುದೇ ಅಭ್ಯಾಸ. ಕಲಿಕೆ ದೃಢವಾಗಬೇಕಾದರೆ ನಿರಂತರವಾಗಿ, ದೀರ್ಘಕಾಲ ಸಾಗಿದರೆ, ದೃಢವಾಗುತ್ತದೆ. ಯಾವುದೇ ಕಲಿಕೆಯಾಗಲಿ ಸಂಗೀತ, ಚಿತ್ರಕಲೆ, ಶಿಲ್ಪಕಲೆ, ನಾಟಕ, ಸಂಶೋಧನೆ, ಪಾಠ, ಯಾವುದೇ ಆಗಿರಲಿ, ಅದನ್ನು ಪದೇ -ಪದೇ, ಪದೇ- ಪದೇ, ನಿಧಾನವಾಗಿ, ನಿರಂತರವಾಗಿ ಮಾಡುತ್ತಿದ್ದರೆ, ಆ ಕಲೆ ದೃಢವಾಗಿ, ಅದರಲ್ಲಿ ಯಶಸ್ವಿಯಾಗುತ್ತೇವೆ. ಪದೇ-ಪದೇ, ಪದೇ- ಪದೇ, ನಿಧಾನವಾಗಿ ಮಾಡುತ್ತಲೇ ಇದ್ದರೆ, ಅದರಲ್ಲಿ ಅಪ ಯಶಸ್ಸು ಅನ್ನುವುದೇ ಇಲ್ಲ. ಹೀಗೆ ದೀರ್ಘಕಾಲ ಪದೇ-ಪದೇ ಮಾಡಬೇಕಾದರೆ, ಅದರಲ್ಲಿ ಪ್ರೀತಿ ಇರಬೇಕು. ಪ್ರೀತಿ ಇದ್ದರೆ, ಅದರಲ್ಲಿ ಮನಸ್ಸು ತನ್ನಿಂದ ತಾನೆ ಮಗ್ನವಾಗುತ್ತದೆ. ಆಗ ವಸ್ತುವಿನ ಸತ್ಯ ದರ್ಶನವಾಗುತ್ತದೆ. ಅದರಲ್ಲಿ ಯಶಸ್ವಿಯಾಗುತ್ತೇವೆ. ಈ ತತ್ವ ಅನುಸರಿಸಿ ಜೀವನ ಶ್ರೀಮಂತ, ಸುಂದರ ಯಶಸ್ವಿಯಾಗಿ ಬದುಕಬಹುದಾಗಿದೆ.

ಯೇಸುದಾಸ್ ಖ್ಯಾತ ಸಂಗೀತಶಾಸ್ತ್ರಜ್ಞ ಹೇಳಿದ್ದ ಒಂದು ಮಾತು. "ನನಗೆ ಈಗ 84 ವರ್ಷ. ದಿನಾ 10 ಗಂಟೆ ಅಭ್ಯಾಸ ಮಾಡುತ್ತೇನೆ. ನಾನು ಹಣಕ್ಕೆ ಮಹತ್ವ ಕೊಡುವುದಿಲ್ಲ. ನಾನು ಹಾಡಿ ಹೋಗುತ್ತೇನೆ. ಹಣ, ಕೀರ್ತಿ, ಸನ್ಮಾನ ನನ್ನ ಹಿಂಬಾಲಿಸಿ ಅವೇ ಬರುತ್ತದೆ." ಮಕ್ಕಳೇ ಜ್ಞಾನವೇ ಸಂಪತ್ತು. ಅಭ್ಯಾಸವೇ ಸಂಪತ್ತು. ಅಲ್ಲವೇ ಮಕ್ಕಳೇ....
......................................... ಎಂ.ಪಿ. ಜ್ಞಾನೇಶ್ 
ಶಿಕ್ಷಣಾಧಿಕಾರಿ 
ಪ್ರಧಾನ ಮಂತ್ರಿ ಪೋಷಣ್ ಶಕ್ತಿ ನಿರ್ಮಾಣ
(ಮಧ್ಯಾಹ್ನ ಉಪಹಾರ ಯೋಜನೆ) 
ಜಿಲ್ಲಾ ಪಂಚಾಯತ್ ಮಂಗಳೂರು
ದಕ್ಷಿಣ ಕನ್ನಡ ಜಿಲ್ಲೆ 
*******************************************


Ads on article

Advertise in articles 1

advertising articles 2

Advertise under the article