ಸವಿಜೇನು : ಸಂಚಿಕೆ - 05
Sunday, May 5, 2024
Edit
ಸವಿಜೇನು : ಸಂಚಿಕೆ - 05
ಲೇಖಕರು: ನಾಗೇಂದ್ರ ಬಂಜಗೆರೆ, ಶಿಕ್ಷಕರು
ಸರಕಾರಿ ಹಿರಿಯ ಪ್ರಾಥಮಿಕ ಶಾಲೆ, ಮಿಂಚೇರಿ
ಬಳ್ಳಾರಿ ತಾಲೂಕು ಮತ್ತು ಜಿಲ್ಲೆ
Mob : +91 99029 12684
ಈ ಪ್ರಕೃತಿಯಲ್ಲಿ ಅತ್ಯಂತ ಸಣ್ಣ ಜೀವಿ ತನ್ನದೇ ಆದ ಪ್ರಮುಖ ಪಾತ್ರ ವಹಿಸುತ್ತದೆ. ಎಷ್ಟೋ ಬಾರಿ ಪ್ರಕೃತಿಯನ್ನು ಸಮತೋಲನ ಮಾಡುವಲ್ಲಿ ಬಹಳ ಪ್ರಧಾನ ಪಾತ್ರವನ್ನೇ ವಹಿಸುವ ಜೇನುಹುಳುಗಳ ಪಾತ್ರ ನಿಸರ್ಗದಲ್ಲಿ ಬಹಳ ದೊಡ್ಡದು. ಆ ಜೇನಿನ ಸುತ್ತ ಕಲಿತ ಪಾಠಗಳ, ಥ್ರಿಲ್ಲಿಂಗ್ ಅನುಭವಗಳ, ನೀವು ಕಂಡಿರದ ಕೇಳಿರದ ಅಗತ್ಯವಾಗಿ ತಿಳಿಯಲೇ ಬೇಕಾದ ಮಾಹಿತಿಯುತ 'ಸವಿಜೇನು' ಎಂಬ ವಿಶೇಷ ಶೀರ್ಷಿಕೆಯಡಿಯಲ್ಲಿ ವಿಸ್ತಾರವಾದ ಬರಹ ಸರಣಿಗಳನ್ನು ನೀವೂ ಓದಿ ಆನಂದಿಸಿ... ನಾಗೇಂದ್ರ ಬಂಜಗೆರೆ, ಶಿಕ್ಷಕರು ಮತ್ತು ಬರಹಗಾರರು
ನನಗೆ ಜೇನು ಕೀಳುತಿದ್ದುದರಿಂದ ಅನೇಕ ತೆರನಾದ ಜೀವಕ್ಕೆ ಅಪಾಯ ಇತ್ತು. ಜೇನುನೊಣಗಳು ಕಚ್ಚುವುದು, ಕಾಡುಹಂದಿಗಳು ತಿವಿಯುವುದು, ಹಾಗೂ ಪೊದೆಗಳಲ್ಲಿ ಹಾವುಗಳು..! ಮತ್ತು ಮರಹತ್ತಿ ಜೇನು ತೆಗೆಯುವಾಗ ಜೇನಿನಧಾಳಿಗೆ ಬಂದೊದಗಬಹುದಾದ ಅಪಾಯದ ಸಾದ್ಯತೆ, ಇಳಿಯಲು ಹತ್ತಲು ಮೆಟ್ಟಿಲು ಇಲ್ಲದ ಪಾಳು ಬಾವಿಗಳಲ್ಲಿ ಇಳಿಯುತ್ತಿದ್ದು.. ಹೀಗೆ ಈ ಮೇಲೆ ತಿಳಿಸಿದವುಗಳಿಂದ ಅಪಾಯ ಇದ್ದೇ ಇತ್ತು. ಏನೆಲ್ಲಾ ಆದರೂ ಜೇನು ತಿನ್ನುವುದು, ಜೇನು ಹುಡುಕುವುದು ಕಡಿಮೆ ಆಗಲಿಲ್ಲ. ವರ್ಷಗಳು ಕಳೆದಂತೆ ನಾನು ಜೇನಿನ ವಿಷಯದಲ್ಲಿ ಬಹಳ ಪರಿಣಿತನಾದೆ. ನನ್ನ ಜೇನು ಕೃಷಿ ನಿರಂತರವಾಗಿ ಮುಂದುವರೆದಿತ್ತು. ಈ ಹಿಂದೆ ಜೇನು ಹುಡುಕಲು, ಜೇನು ಕೀಳಲು ಪಡುತಿದ್ದ ಪ್ರಯಾಸ ಬಹಳಮಟ್ಟಿಗೆ ಸುಧಾರಿಸಿತು. ಅನುಭವದಿಂದ ಅನೇಕ ಪಾಠಗಳನ್ನು ಕಲಿತ ನಾನು ಈ ದಿನಗಳಲ್ಲಿ ಬಹುತೇಕ Smart techniques ಬಳಸಿದೆ ಎಂದೆನ್ನಬಹುದು. ದೈಹಿಕವಾಗಿ ಮಾನಸಿಕವಾಗಿ ಒಂದಷ್ಟು ವಿಕಸನ ನನ್ನಲ್ಲೂ ಆಗಿತ್ತು. ಸಾಧ್ಯಾಸಾಧ್ಯತೆ ಗಳನ್ನು ಬಹುಬೇಗ ಗುರುತಿಸುವ ಹಂತಕ್ಕೆ ಬಂದಿದ್ದೆ. ಅದೇನೆಂದರೆ ನಾನು ಜೇನು ಬೇಕೆಂದರೇ ಗಿಡಗಂಟೆಗಳು, ಪೊದರು ಗಳಲ್ಲಿ ಹುಡುಕುವ ಬದಲು ನೀರು ಇರುವ ಜಾಗಕ್ಕೆ ಮೊದಲು ಬೇಟಿಕೊಡುತ್ತಿದ್ದೆ. ಬೇಸಿಗೆಯಲ್ಲಿ ನೀರುಕುಡಿಯಲು ದಾಂಗುಡಿ ಇಡುತಿದ್ದ ನೂರಾರು ಜೇನು ಹುಳುಗಳು ನೀರಲ್ಲಿ ಮುಳುಗದ, ನೀರು ನೇರವಾಗಿ ಹುಳುಗಳ ಮೇಲೆ ಬೀಳದ ಸುರಕ್ಷಿತ ಸ್ಥಳದಲ್ಲಿ ಜೇನುಹುಳುಗಳು ನೀರು ಕುಡಿಯುತ್ತವೆ. ನಾನು ಮೊದಲು ಇಂತಹ ಜೇನುಹುಳುಗಳು ನೀರು ಕುಡಿಯುವ ಸ್ಥಳಗಳಲ್ಲಿ ನಿಂತು ಒಂದೆರಡು ನಿಮಿಷ ಆ ಹುಳುಗಳು ಯಾವ ದಿಕ್ಕಿನಿಂದ ಹಾರಿ ಬರುತ್ತವೆ ಮತ್ತು ಯಾವ ದಿಕ್ಕಿನೆಡೆಗೆ ಹಾರಿ ಹೋಗುವವು ಎಂದು ಸೂಕ್ಷ್ಮವಾಗಿ ಅವಲೋಕಿಸಿ ನೋಡುತ್ತಿದ್ದೆ. ಆ ಹುಳುಗಳು ನೀರು ಕುಡಿಯುವ ಸ್ಥಳದಿಂದ ಯಾವ ಕಡೆಗೆ ಹಾರುತ್ತಾವೋ ಆ ಕಡೆಯೇ ಅವುಗಳ ಗೂಡು..! ಕೀಟ ಸಣ್ಣದಾಗಿದ್ದರಿಂದ ಅವುಗಳು ಹಾರುವುದು ದೂರದವರೆಗೆ ಕಾಣುತ್ತಿದ್ದಿಲ್ಲವಾದರೂ ಅವು ಎತ್ತಕಡೆಗೆ ಹಾರುತ್ತಾವೆಂದು ಒಂದೆರಡು ಮೀಟರ್ ನಷ್ಟು ಕಾಣಿಸುತ್ತಿದ್ದವು. ಆ ಸರಳರೇಖೆಯಲ್ಲಿಯೇ ಅದರ ಗೂಡು. ಆ ಹುಳುಗಳು ಎತ್ತಕಡೆಗೆ ಹಾರುವವು ಎಂಬುದನ್ನು ಗಮನಿಸಿಯೇ ನಾನು ಇಂತಹ ಜಾಗದಲ್ಲೇ ಜೇನು ಇದೆ, ಇಂತಹ ಗಿಡ, ಪೊದೆಯಲ್ಲೇ ಗೂಡು ಕಟ್ಟಿದೆ ಎಂದು ದೂರದಿಂದಲೇ ನಿರ್ಧರಿಸುತ್ತಿದ್ದೆ. ಪ್ರತಿ ಗಿಡವೂ, ಪ್ರತಿ ಕೊಂಬೆ ರೆಂಬೆಯ ಚಿತ್ರಣವು ನನ್ನ ತಲೆಯಲ್ಲಿ Data ಇತ್ತು. ಹೀಗೆ ಗುರುತಿಸಿದ ಸ್ಥಳ ನಿಖರವಾಗಿರುತ್ತಿತ್ತಾದರೂ ಗೂಡು ಕಟ್ಟಿರುವ ಗಿಡ, ಪೊದರು ಕೆಲವೊಮ್ಮೆ ಅಲ್ಪಸ್ವಲ್ಪ ವ್ಯತ್ಯಾಸಗಳು ಇರುತಿದ್ದವು. ಈ ಮೊದಲಿನಂತೆ ಕಿಲೋಮೀಟರ್ ಗಟ್ಟಲೇ ಬಿಸಿಲಲ್ಲಿ ನಡೆಯುವುದು ತಪ್ಪಿ Location ತಿಳಿದು ನೇರವಾಗಿ ಜೇನು ಕಿತ್ತುತರಲು ಹೋಗುತ್ತಿದ್ದೆ. ಹುಳುಗಳು ನೀರು ಕುಡಿಯುವ ಸ್ಥಳದಲ್ಲಿ ಕೂರುತ್ತಿದ್ದ ಹುಳುಗಳ ಪ್ರಮಾಣ ನೋಡಿಯೇ ಎಷ್ಟು ಜೇನು ಗೂಡಿನ ಹುಳುಗಳು ಎಂದು ಅಂದಾಜು ಮಾಡುತ್ತಿದ್ದೆ. ಕೆಲವೊಮ್ಮೆ ನಾನು ಹೋಗಲು ಸಾಧ್ಯವಾಗದೇ ಹಾಸ್ಟೆಲ್ ಗೆ ಹೋಗುವ ಸಂದರ್ಭಗಳಲ್ಲಿ ಅಮ್ಮ ಅಪ್ಪನಿಗೆ ಇಂತಹ ಸ್ಥಳದಲ್ಲಿ ಎಲ್ಲೋ ಜೇನು ಇದಾವೆ. ಯಾವಾಗಲಾದರೂ ಹೋದಾಗ ಕಿತ್ತುಕೊಂಡು ಬನ್ನಿ ಅಂತ ಹೇಳಿ ಹೋಗುತಿದ್ದೆ. ಒಂದುವೇಳೆ ನಾನು ಅಂದಾಜಿಸಿದ ಸ್ಥಳದಲ್ಲಿ ಜೇನು ಕಾಣದೇ ಇದ್ದರೇ ಅದೇ ಸರಳ ರೇಖೆಯಲ್ಲಿ ಹಿಂದೆ ಮುಂದೆ ನೋಡಿದರೆ ಜೇನು ಸಿಕ್ಕೆ ಸಿಗುತ್ತಿತ್ತು.
ಆಗಿನ ದಿನಗಳಲ್ಲಿ ಅತೀ ಹೆಚ್ಚು ಜೇನು ತಿನ್ನುತ್ತಿದ್ದ ನಾನು ನರಪೇತಲನಾಗಿ ಕಾಣುತ್ತಿದ್ದೆ. ಆ ಸಪೂರ ದೇಹದಿಂದಲೇ ಎಂಥಹ ಮರವನ್ನಾದರೂ ಹತ್ತುವುದಕ್ಕೆ ಅನುಕೂಲವಾಗಿತ್ತು. ಆ ದಿನಗಳಲ್ಲಿ ನನ್ನ ಕಣ್ಣಿಗೆ ಬಿದ್ದ ಯಾವ ಜೇನನ್ನು ಕಿತ್ತು ತಿನ್ನದೇ ಬಿಡುತ್ತಿರಲಿಲ್ಲ. ಅದನ್ನು ತೆಗೆಯಲು ಬೇಕಾಗುವ ಪರಿಕರಗಳನ್ನು ಅಥವಾ ಸಹಾಯಕ್ಕಾಗಿ ಇತರೆ ಯಾರಾದರೂ ಬೇಕೆಂದರೂ ಕರೆದು ಕೊಂಡಾದರೂ ತೆಗೆಯದೇ ಬಿಡುತ್ತಿರಲಿಲ್ಲ. ಎಷ್ಟೇ ಜೇನು ತೆಗೆದರೂ ಆರಂಭದ ದಿನಗಳನ್ನು ಹೊರತು ಪಡಿಸಿ ಇತರರ ಸಹಾಯ ಪಡೆದದ್ದು ತುಂಬಾ ಕಡಿಮೆಯೇ. ಬೇರೆಯವರು ನೋಡಿದ ಜೇನುಗಳನ್ನು ತೆಗೆಯಲು ನನ್ನ ಸಹಾಯವನ್ನು ಇತರರು ಪಡೆದುಕೊಳ್ಳುತ್ತಿದ್ದರು. ಆದರೆ ನಾನು ಏಕಾಂಗಿಯಾಗಿ ಜೇನುತೆಗೆದಿರುವ ದಿನಗಳೇ ಹೆಚ್ಚು.
ನಮ್ಮ ಪ್ರದೇಶದಲ್ಲಿ 1960 ರ ದಶಕದಲ್ಲಿ ಅವರವರು ಸಾಗುವಳಿ ಮಾಡುತ್ತಿದ್ದ ಜಮೀನಿನಲ್ಲಿ ಕೃಷಿ ಮಾಡಲು ನೀರಿಗಾಗಿ ಅವರವರ ಶಕ್ತಾನುಸಾರ ಬಾವಿಗಳನ್ನು ತೋಡಿಸಿಕೊಂಡಿದ್ದರು. ಈ ಮೊದಲು ನದಿ, ಹಳ್ಳ ಕಾಲುವೆಗಳಲ್ಲಿ ಹರಿಯುವ ನೀರನ್ನು ಅವಲಂಬಿಸಿದ್ದ ನಾಗರೀಕತೆ ಹಳ್ಳದಲ್ಲಿ ನೀರು ಬತ್ತಿದಾಗ ನೀರಿಗಾಗಿ ಕಂಡುಕೊಂಡ ಸರಳ ವಿಧಾನವೇ ಈ ಬಾವಿ ತೋಡುವ ಮೂಲಕ ನೀರನ್ನು ಕಂಡುಕೊಂಡಿದ್ದು. ಬಾವಿಗಳನ್ನು ಚಿತ್ರದುರ್ಗ ಸುತ್ತಮುತ್ತಲಿನಲ್ಲಿ ಸಾಮಾನ್ಯವಾಗಿ ಮೂವತ್ತು ನಲವತ್ತು ಅಡಿ ಆಳ ಮತ್ತು ಅಗಲದ ಬಾವಿಯಲ್ಲಿ ಹತ್ತು ಹನ್ನೆರಡು ಅಡಿ ಆಳದಲ್ಲೇ ಹತ್ತಾರು ಎಕರೆಗೆ ಉಣಿಸಬಹುದಾದ ನೀರು ಸಿಗುತ್ತಿತ್ತು ಎಂದರೆ ಅಂತರ್ಜಲದ ಸಮೃದ್ಧಿ ಎಷ್ಟಿತ್ತು ಎಂದು ಅಂದಾಜಿಸಬಹುದು. ನಮ್ಮ ಚಿಕ್ಕಪ್ಪ ಹೇಳುವ ಪ್ರಕಾರ ಕೇವಲ ಹತ್ತು ಹದಿನೈದು ಅಡಿ ಆಳದಲ್ಲಿ ಬಾವಿಗೆ ಹರಿದು ಬರುತ್ತಿದ್ದ ನೀರಿನ ಹರಿವಿನ ರಭಸ ಈಜಾಡಲು ಹೋದವರನ್ನು ರಭಸದಿಂದ ಹಿಂದಕ್ಕೆ ತಳ್ಳುತ್ತಿತ್ತಂತೆ...!! ಈ ಮಾತು ನಾನು ಕೇಳಿದಾಗಿನಿಂದಲೇ ನನಗೆ ಈ ಬಾವಿಗಳ ಬಗ್ಗೆ ಕೌತುಕ ಉಂಟಾಗಿದ್ದು. ಅಂದಿನಿಂದ ನಾನು ಯಾವುದೇ ತೋಟ ಹೊಲಗದ್ದೆಗಳಿಗೆ ಹೋಗಲಿ ಮೊದಲು ನಾನು ಬೇಟಿಕೊಡುತ್ತಿದ್ದುದು ಅಲ್ಲಿನ ಬಾವಿಗಳ ಬಳಿ...! ಅದು ಪಾಳುಬಾವಿ ಯಾಗಿದ್ದರೂ..! ನನಗೆ ಬುದ್ಧಿ ಬರುವ ವೇಳೆಗೆ ನಾನು ನೋಡಿದ ಬಹುತೇಕ ಬಾವಿಗಳಲ್ಲಿ ನೀರು ತಳ ಕಂಡಿತ್ತು. ಬಹುತೇಕ ಬಾವಿಗಳಲ್ಲಿ ನೀರು ಬತ್ತಿ ಹೋಗಿ ಕೆಲವೇ ವರ್ಷಗಳ ಹಿಂದೆ ಬಳಕೆಯಲ್ಲಿದ್ದ ತಾಜಾತನದ ಕುರುಹುಗಳು ಮಾತ್ರ ಉಳಿದಿದ್ದವು. ಉಳ್ಳವರಾದ ಕೆಲವರು ಆಳಕ್ಕೆ ಕುಸಿದ ಅಂತರ್ಜಲ ತೆಗೆಯಲು ಬಾವಿಯಲ್ಲೇ ಕೊಳವೆ ಬಾವಿಯನ್ನು ತೋಡಿಸಿ ಇನ್ನೂ ಆಳಕ್ಕೆ ಸೇರಿಹೋಗಿದ್ದ ನೀರನ್ನು ಎತ್ತುವ ಸಾಹಸಕ್ಕೆ ಕೈ ಹಾಕಿದ್ದರು.ಇನ್ನೂ ಬಹುತೇಕರು, ಬಾವಿಯಲ್ಲಿ ನೀರು ಹೋದವು ಎಂದು ತೋಟದಲ್ಲಿ ಬೆಳೆಸಿದ್ದ ತೆಂಗು, ಕಂಗು (ಅಡಕೆ), ಬಾಳೆ, ಮಾವು, ಹಲಸು ಎಲ್ಲವೂ ದಿನದಿಂದ ದಿನಕ್ಕೆ ಒಣಗಿ ಹಿಂದೊಂದು ದಿನ ತೋಟ ಇತ್ತು ಎನ್ನುವ ಮುಖಚರ್ಯೆಯೇ ಅಳಿದು ಹೋಯಿತು. ನದಿ ಹಳ್ಳದೊಂದಿಗೆ ಬೆಸೆದಿದ್ದ ಮನುಷ್ಯನ ನಾಗರೀಕತೆಯ ಸಂಬಂಧ ಬಾವಿಯೊಂದಿಗೆ ಬೆಸೆದು ಬಾವಿಯ ನೀರು ಬತ್ತಿದ ಮೇಲೆ ಮೇಟಿ ಹಿಡಿದು ದನಕರುಗಳ ಸಾಕಿ ಹಾಲು, ಮೊಸರು, ತುಪ್ಪದಲ್ಲಿ ಕೈ ತೊಳೆಯುತ್ತಿದ್ದ ಮನುಷ್ಯರು ತಲಾ ತಲಾಂತರಗಳಿಂದ ಪಾಲಿಸಿಕೊಂಡು ಬಂದಿದ್ದ ಪದ್ಧತಿ, ಸಂಸ್ಕೃತಿಯ ನಾಶ ಆಗಿ ಇಂದಿನ ನಗರೀಕರಣ, ಕೈಗಾರಿಕೀಕರಣ, ನಿರುದ್ಯೋಗದ ಸಮಸ್ಯೆ, ಇನ್ನಿತರೆ ಪರೋಕ್ಷ ಸಾಮಾಜಿಕ ಸಮಸ್ಯೆಗಳ ಪಾಳುಬಾವಿಗೆ ಬಿದ್ದು ತೊಳಲಾಡುತ್ತಿರುವ ಇಂದಿನ ಸಮಾಜವನ್ನು ಕಣ್ಣಾರೆ ಕಾಣುತ್ತಿರುವುದು ದುರಂತ ಸಂಗತಿಯಾಗಿದೆ.
ನೀರಿನ ಪಾತ್ರೆಗಳಾಗಿ ಜನರ ಬದುಕು ಕಟ್ಟಿಕೊಟ್ಟ ಈ ಬಾವಿಗಳು ನೀರಿಲ್ಲದೇ ದಿನಗಳು, ತಿಂಗಳುಗಳು, ವರ್ಷಗಳು ಕಳೆದಂತೆ ಈ ಬಾವಿಯಲ್ಲೇ ವಿವಿಧ ಜಾತಿಯ ಗಿಡ ಗಂಟೆಗಳು ಬೆಳೆದು ಅಕ್ಷರಶಃ ಗೂಬೆಗಳ ವಾಸಸ್ಥಾನ ಗಳಾದವು. ನಾನು ನನ್ನ ತಮ್ಮ ಬಾಲ್ಯದ ದಿನಗಳಲ್ಲಿ ಗೂಬೆಗಳ ನೋಡಲೆಂದೇ ಈ ಪಾಳು ಬಾವಿಗಳಿಗೆ ಬೇಟಿಕೊಟ್ಟು ಅವುಗಳ ಬೆಕ್ಕಿನಂತಹ ಮುಖವನ್ನು ನೋಡುವುದೇ ನಮಗೆ ಸಂಭ್ರಮವೆನಿಸುತ್ತಿತ್ತು. ಈ ಬಾವಿಗಳಲ್ಲಿ ನಾನು ಅಮ್ಮ ಗೂಬೆ, ಅಪ್ಪಗೂಬೆ ಮರಿಗೂಬೆ ಹೀಗೆ ಗೂಬೆಯ ಕುಟುಂಬವನ್ನೇ ನೋಡಿದ್ದೇನೆ. ಅವುಗಳನ್ನು ಕಲ್ಲು ಹೊಡೆದು ಹಾರಿಸಿ ಖುಷಿ ಪಡುತ್ತಾ ಬಾವಿಗಳು ಗೂಬೆಗಳ ಅಘೋಷಿತ ವಾಸದ ಮನೆಗಳಾಗೇ ರೂಪು ತಳೆದವು. ಇನ್ನೂ ನೀರಿಗಾಗಿ ಆಧುನಿಕ ಬೋರ್ ವೆಲ್ ಆಶ್ರಯಿಸಿ ಅಲ್ಪಸ್ವಲ್ಪ ಬಾವಿಗೆ ಸೇರುತಿದ್ದ ನೀರಿನಲ್ಲಿ ಎರಡ್ಮೂರು ಕೆಜಿ ಗಾತ್ರದ ನಾವು ಗೌಡರ ಕಪ್ಪೆ ಎಂದು ಕರೆಯುತ್ತಿದ್ದ Bull frog ಗಳು ಈ ಬಾವಿಯಲ್ಲಿ ಇರುತ್ತಿದ್ದವು. ನಾವು ಇವುಗಳನ್ನು ನೋಡಿ ಅವುಗಳಿಗೂ ಕಲ್ಲು ಹೊಡೆದು ನೀರಿಗೆ ಹಾರಿಸುವುದೇ ನಮ್ಮ ಕೆಲಸವಾಗಿತ್ತು. ಇತ್ತೀಚಿನ ವರ್ಷಗಳಲ್ಲಿ ಈ ಗೂಬೆಗಳ ಸಂತತಿಯೂ, ಕಪ್ಪೆಗಳ ಸಂತತಿಯೂ ಅಳಿವಿನಂಚಿಗೆ ಬಂದು ಈ ಪಾಳುಬಾವಿಯಲ್ಲಿ ಈಗ ಅಳಿಲುಗಳು ಮಾತ್ರ ಅಲ್ಲಲ್ಲಿ ಕಾಣಸಿಗುತ್ತಿವೆ.
ಒಂದಾನೊಂದು ಕಾಲದಲ್ಲಿ ನೀರಿನ ಪಾತ್ರೆಗಳಾಗಿದ್ದ ಬಾವಿಗಳು ನನ್ನ ಪಾಲಿಗೆ ಅಕ್ಷರಶಃ 'ಜೇನಿನ ಪಾತ್ರೆ' ಗಳಾಗಿದ್ದುದು ಈ ಪಾಳುಬಾವಿಗಳೇ... ಯಾಕೆಂದರೇ ಅಂದಿನ ದಿನಗಳಲ್ಲಿ ನನಗೆ ಅತ್ಯುತ್ತಮ ಪ್ರಮಾಣದ ಜೇನು ದೊರಕಿರುವುದು ಈ ಪಾಳುಬಾವಿಗಳಲ್ಲೇ...! ದಶಕಗಳಿಂದಲೂ ನಿಷ್ಪ್ರಯೋಜಕ ವಾದ ಯಾವುದಾದರೂ ಒಂದು ಬಾವಿಗೆ ಇಳಿದರೆ ಅದರಲ್ಲಿ ಬೆಳೆದ ಗಿಡಗಂಟೆಗಳಲ್ಲಿ ಕನಿಷ್ಠ ಎರಡು ಮೂರು ಜೇನು ಖಚಿತವಾಗಿ ಸಿಕ್ಕೇ ಸಿಗುತ್ತಿದ್ದವು. ಅಲ್ಲದೇ ಬಾವಿ ಹೊರತುಪಡಿಸಿ ಉಳಿದ ಜಾಗಗಳಲ್ಲಿ ಇರುತ್ತಿದ್ದ ಜೇನುಗಳು ಇತರ ಕುರಿಗಾಹಿಗಳಿಗೆ ಅವರಿವರ ಪಾಲಾಗುತ್ತಿದ್ದವು. ಆದರೆ ಇಳಿಯಲು ಹತ್ತಲು ಮೆಟ್ಟಿಲುಗಳು ಪೂರಾ ಸವೆದು ಅಳಿದುಳಿದ ಅಪಾಯಕಾರಿ ಮೆಟ್ಟಿಲುಗಳು/ಕೆಲವು ಬಾವಿಗಳು ಮಣ್ಣು ಕುಸಿದು ಮೆಟ್ಟಿಲೇ ಇಲ್ಲದ ಬಾವಿಗಳಲ್ಲಿ ಮಾತ್ರ ಅಪ್ಪಿ ತಪ್ಪಿಯೂ ಯಾರೂ ಇಳಿಯುತ್ತಿರಲಿಲ್ಲ. ಆದರೆ ನಾನು ಮಾತ್ರ ಇಂತಹ ಬಾವಿಗಳಲ್ಲಿ ಇಳಿಯುವ ಸಾಹಸ ಮಾಡುತ್ತಿದ್ದೆ. ಆ ಬಾವಿಗಳು ನೀರಿಲ್ಲದೇ ಎರಡ್ಮೂರು ದಶಕಗಳೇ ಕಳೆದುದರಿಂದ ಇಳಿಯಲು ಹತ್ತಲು ಮಾಡಿದ್ದ ಹಾದಿ ಮಳೆಯ ನೀರಿಗೆ ಪೂರ ಸವೆದು ಹೋಗಿ ಇಳಿಯಲು ಬಾರದ ಸ್ಥಿತಿಯನ್ನು ತಲುಪಿದ್ದವು. ಆದರೆ ಬಾವಿಯ ಒಳಗಡೆ ಬಹಳ ಗಿಡಗಂಟೆಗಳು, ಗಿಡಮರಗಳು ಬೆಳೆದಿರುತ್ತಿದ್ದವು. ಒಮ್ಮೆ ನಾನು ನಮ್ಮನೆಯಿಂದ ಒಂದೂವರೆ ಕಿಲೋಮೀಟರ್ ದೂರದಲ್ಲಿದ್ದ ಅಂತಹ ಒಂದು ಪಾಳುಬಾವಿಯ ಸಮೀಪ ಬಂದೆ. ಒಳಗಿನಿಂದ ಮೇಲೆ ಹುಳ ಹೊರಬರುವುದು, ಒಳಹೋಗುವುದು ಗಮನಿಸಿದ ನಾನು ಇಳಿಯುವ ಜಾಗ ತುಂಬಾ ಸವೆದು ಕಡಿದಾಗಿದ್ದರೂ ಹಾಗೆ ಜಾರುವ ಬಂಡಿಯ ರೀತಿ ಜಾರಿ ಇಳಿದುಬಿಟ್ಟೆ. ಇಳಿ ಇಳಿಯುತ್ತಲೇ ಒಂದು ಜೇನು ಬಾವಿಯ ಮೂಲೆಯಲ್ಲಿದ್ದ ಹಳೆಯ ಮುಳ್ಳುಗಂಟಿಗಳಲ್ಲಿ ಇದ್ದುದು ಕಣ್ಣಿಗೆ ಬಿತ್ತು. ತಡಮಾಡದೇ ಕಿತ್ತು ತೆಗೆದೆ. ಸಮಾರು ಇನ್ನೂರು ಮುನ್ನೂರು ಗ್ರಾಂಗಳಷ್ಟು ತುಪ್ಪ ಇರಬಹುದು. ತುಪ್ಪ ಚೆನ್ನಾಗಿಯೇ ಇತ್ತು. ಅಂದು ಜೇನಿಗಾಗಿ ಬಹಳ ಹೊತ್ತು ಅಲೆದಾಡಿದ್ದರಿಂದ ಹೊಟ್ಟೆಗೆ ಏನಾದರೂ ಹಾಕಬೇಕಿತ್ತು. ಹಸಿವೆಯಿಂದ ಜೇನನ್ನು ಬಾಯಲ್ಲಿಡುತ್ತಾ ಮೇಲೆ ನೋಡಿದೆ. ಬಾವಿಯಲ್ಲಿದ್ದ ಸಾಧಾರಣ ಎತ್ತರದ ಬೇವಿನ ಮರದಲ್ಲಿ ಹೆಜ್ಜೇನಿನಂತೆ ಕೋಲು ಜೇನು ಗೂಡು ಕಟ್ಟಿತ್ತು. ಆ ಜೇನು ಕಟ್ಟಿ ಕನಿಷ್ಟ ಒಂದುವರೆ ಎರಡು ತಿಂಗಳುಗಳು ಆಗಿರಬಹುದು. ಮೊಳದಷ್ಟು ಉದ್ದ ಬರಿ ತಲೆಯ ಭಾಗ ಇತ್ತು. ಹಸಿದ ಹೊಟ್ಟೆಗೆ ಕೈಯಲ್ಲಿ ಹಿಡಿದ ಮಧುರ ಜೇನನ್ನು ಅಲ್ಲೇ ಕುಳಿತು ಪೂರಾ ಖಾಲಿ ಮಾಡಿದೆ. ಜೇನು ಮತ್ತು ಜೇನಿನ ತಟ್ಟಿ/ರೊಟ್ಟಿ ನಾನು ಕೈಯಲ್ಲಿ ಹಿಡಿದುದರಿಂದ ಜೇನುನೊಣಗಳು ಅದರ ಮೇಲೆ ಕುಳಿತುಕೊಳ್ಳಲು ಹತ್ತಿರ ಬಂದು ಕುಳಿತುಕೊಳ್ಳಲು ಪ್ರಯತ್ನಿಸುತ್ತಿದ್ದವು. ನಾನು ಕೈ ಬೀಸುತ್ತಾ ಅವುಗಳನ್ನು ಕೊಡವಿ ತಿಂದು ಖಾಲಿ ಮಾಡಿದೆ. ಕೆಲವೊಮ್ಮೆ ತುಪ್ಪ ಮಾತ್ರ ತೆಗೆದು ಅದರ ರೊಟ್ಟಿಯ ಭಾಗವನ್ನು ಅಲ್ಲಿಯೇ ಬಿಟ್ಟರೆ ಪುನಃ ಅವು ಅಲ್ಲಿಯೇ ಇದ್ದು ತುಪ್ಪದ ಭಾಗವನ್ನು ಪುನಃ ನಿರ್ಮಾಣ ಮಾಡಿ ತಮ್ಮ ಸಂತಾನೋತ್ಪತ್ತಿ ಕಾರ್ಯವನ್ನು ಮಾಡಿಕೊಳ್ಳುತ್ತವೆ. ನಾನು ಒಂದೇ ದಿನ ಹತ್ತಾರು ಜೇನು ತೆಗೆದರೆ ಜೇನುತಟ್ಟೆಯನ್ನು ಸಾಮಾನ್ಯವಾಗಿ ಹಾಗೆ ಬಿಟ್ಟು ಬರುತ್ತಿದ್ದೆ. ಜೇನು ತಿಂದು ಬೆರಳನ್ನು ಚೀಪುತ್ತಾ ಮಚ್ಚು ಹಿಡಿದು ಬೇವಿನ ಮರವನ್ನು ಹತ್ತಿದೆ. ಮಚ್ಚಿನ ಸಹಾಯದಿಂದ ಗೂಡುಕಟ್ಟಿದ ಕೊನೆಯನ್ನು ಅಲ್ಲಾಡಿಸುತ್ತಾ ಅದರ ಕೊನೆಯನ್ನು ಕಡಿದೆ. ತಟ್ಟಿ ಬಹಳ ಅಗಲವಾಗಿದ್ದರಿಂದ ಮತ್ತು ಬೇವಿನ ಮರ ನೇರವಾಗಿದ್ದುದರಿಂದ ಜೇನನ್ನೂ ಕೈಯಲ್ಲಿ ಹಿಡಿಯಬೇಕಿತ್ತು. ಹಾಗೂ ಮರದಿಂದ ಇಳಿಯಲು ಎರಡೂ ಕೈಗಳ ಸಹಾಯ ಬೇಕಾಗಿತ್ತು. ಒಂದು ಕೈಯಲ್ಲಿ ಮರ ಇಳಿಯುವುದು ಅಸಾಧ್ಯವಾಗಿದ್ದರಿಂದ ಜೇನುತಟ್ಟೆಯನ್ನು ಅಲ್ಲೇ ಬೇವಿನ ಮರದ ಕವಲಿನ ಕಾಂಡಕ್ಕೆ ಸಿಕ್ಕಿಸಿ, ಮಚ್ಚನ್ನು ಕೆಳಗೆಸೆದು ಬಾಯಿಯಲ್ಲಿ ತುಪ್ಪದ ಕೊನೆಯನ್ನು ಕಚ್ಚಿಕೊಂಡು ಜಾರುತ್ತಾ ಬೇವಿನ ಮರದಿಂದ ಬಾವಿಯೊಳು ಇಳಿದೆ. ಹಸಿದ ಹೊಟ್ಟೆಗೆ ಜೇನು ತಿಂದೂ ಆಯಿತು ಕೈಯಲ್ಲೊಂದು ಹಿಡಿದೂ ಆಯಿತು. ನಡೆ ಹೋಗೋಣ ಎಂದು ಮೆಟ್ಟಿಲಕಡೆ ನೋಡಿದರೆ ಚೌಕಾಕಾರದ ಧರೆಯಷ್ಟೇ ಕಾಣುತ್ತಿದೆ. ಮೆಟ್ಟಿಲುಗಳೇ ಕಾಣುತ್ತಿಲ್ಲ. ಗೋಡೆ ಅಂಟಿಕೊಂಡ ಒಂದು ಅಡಿಯಷ್ಟು ಮಟ್ಟಿಲುಗಳ ಅವಶೇಷ ಇದೆ ಬಿಟ್ಟರೆ ಮಳೆಯ ನೀರಿಗೆ ಮಣ್ಣು ಕೊಚ್ಚಿ ಬರಿ ಕಲ್ಲಿನ ಹರಳುಗಳು ಮಾತ್ರ ಮೆಟ್ಟಿಲ್ಲಿ ಉಳಿದು ಹತ್ತಲು ಹಿಡಿತ ಸಿಗುತ್ತಿಲ್ಲ. ಭೂಮಿಯ ಮೇಲ್ಮೈಗಿಂತಲೂ ಆಳಕ್ಕೆ ಹೋದಂತೆಲ್ಲಾ ಭೂಮಿಯ ಗುರುತ್ವ ಹೆಚ್ಚುತ್ತಾ ಹೋಗುತ್ತದೆ. ಅಥವಾ ಆಳದಲ್ಲಿರುವ ವಸ್ತುವು ಹೆಚ್ಚು ಗುರುತ್ವವನ್ನು ಪಡೆಯುತ್ತದೆ. ಈ ನಿಯಮಾನುಸಾರ ಗುರುತ್ವ ಬಲ ನನ್ನನ್ನು ಕಡಿಮೆ ಅಸ್ಪಷ್ಟ ಜಾಗದಲ್ಲಿ ಸರಳವಾಗಿ ಹತ್ತಲು ಅವಕಾಶ ಮಾಡಿಕೊಡುತ್ತಿಲ್ಲ. ಮೆಟ್ಟಿಲು ಅಗಲವಾಗಿಲ್ಲದಿದ್ದರೆ ಕೊನೇ ಪಕ್ಷ ಒಂದು ಕಾಲು ಬಿಗಿಯಾಗಿ ಇಟ್ಟು ಮೆಟ್ಟಿಲಗೋಡೆ ಸಪೋರ್ಟ್ ಸಿಕ್ಕರೆ ಸಾಕಿತ್ತು. ಹತ್ತಬಹುದಿತ್ತು. ಆದರೆ ಮೆಟ್ಟಿಲಗೊಡೆಯು ದಶಕಗಳ ಮಳೆಯ ರಭಸ ಮತ್ತು ಪ್ರಾಕೃತಿಕ ಕಾರಣಗಳಿಂದ ಆಕೃತಿ ಕಳೆದು ಹುಡಿ ಹುಡಿಯಾದ ಮಣ್ಣು ಮಾತ್ರ ಸಿಗುತ್ತಿದೆ. ಒಂದೆರಡು ಹೆಜ್ಜೆ ಇಡಬಹುದಾದರೂ ಮೇಲೆತ್ತಲು ಆಗುತ್ತಿಲ್ಲ. ಹೀಗೆ ಹತ್ತಲು ಪ್ರಯತ್ನಿಸುತ್ತಾ ಒಮ್ಮೆ ಎರಡು ಮೂರು ಅಡಿ ಹಿಂದಕ್ಕೆ ಜಾರಿದ್ದರಿಂದ ತೊಡೆ ಮೊಣಕಾಲು ತರಚಿಹೋದವು. ಹೀಗೆ ಹತ್ತಾರು ಬಾರಿ ಪ್ರಯತ್ನಿಸಲಾಗಿ ಪ್ರತಿ ಪ್ರಯತ್ನವೂ ವಿಫಲವಾಗಿ ನನ್ನ ಆತ್ಮವಿಶ್ವಾಸ ಕುಂದುತ್ತಾ ಹೋಯಿತು. ಹತ್ತುತ್ತಾ... ಜಾರುತ್ತಾ ನನ್ನ ಪ್ರಯತ್ನಕ್ಕೆ ನನ್ನ ದೇಹ ಆಯಾಸವಾಯಿತು. ಬೇಸಿಗೆಯಾಗಿದ್ದುದರಿಂದ ಆ ಬಾವಿಯಲ್ಲಿ ಹೆಚ್ಚು ಗಾಳಿಯಾಡದೇ ಒಂದು ರೀತಿಯ ನಿರ್ವಾತ (ಗಾಳಿಯಾಡದ) ಪ್ರದೇಶದಂತಾಗಿತ್ತು. ಬಡಕಲದೇಹವೇ ವಿಪರೀತ ಬೆವೆಯಿತು. ಅಂದು ನಾನು ಸಹಾಯಕ್ಕೆ ಹಗ್ಗವನ್ನೂ ಅಥವಾ ಯಾರನ್ನಾದರೂ ಕರೆದುಕೊಂಡು ಹೋಗಿದ್ದರೆ ಚೆನ್ನಿತ್ತು. ಆದರೆ ಆಕಸ್ಮಿಕವಾಗಿ ಹಗ್ಗವೂ ಸಹಚರರು ಇಲ್ಲದೇ ಇದ್ದುದುದರಿಂದ ಬಾವಿಯಿಂದ ಮೇಲೆ ಹತ್ತಲಾಗದೇ ಗಲಿಬಿಲಿ ಹೆಚ್ಚತೊಡಗಿತು. ಬಾವಿಯಲ್ಲಿ ನೀರಿದ್ದ ಕಾಲದಲ್ಲಿ ಬಾವಿಯಲ್ಲಿ ಯಾರಾದರೂ ಮುಳುಗಿ ಸತ್ತಿದ್ದರೆ ಸತ್ತವರು ದೆವ್ವ-ಪ್ರೇತಗಳಾಗಿ ಅಲ್ಲೇ ಇರುತ್ತಾರೆಂದೂ, ಯಾರಾದರೂ ಹೋದರೆ ಕಣ್ಣಿಗೆ ಕಾಣದೇ ನೂರೊಂದು ರೀತಿಯಲ್ಲಿ ಕಾಟಕೊಡುತ್ತಾರೆಂದು ನಾನು ಅನೇಕರು ಹೇಳುವ ಕತೆಗಳನ್ನು ಕೇಳಿದ್ದೆ. ಹತ್ತಲಾಗದೇ ಹತಾಶನಾಗಿದ್ದಕ್ಕೂ, ಈ ಪ್ರೇತದ ಕತೆಗಳು ನೆನಪಾಗಿ ಏಕಾಂಗಿಯಾಗಿದ್ದ ನನ್ನನ್ನು ಕೊಂಚ ಅಧೀರನನ್ನಾಗಿಸಿತು. ಭಯದಿಂದ ನಾಲ್ಕೈದು ಬಾರಿ ಜೋರಾಗಿ ಕೂಗಿದೆ. ನನ್ನ ದ್ವನಿ ಯಾರಿಗೆ ಕೇಳಬೇಕು??? ನಾನು ಕೂಗುವ ಶಬ್ದ ನಾಲ್ಕೂ ದಿಕ್ಕಿಗೆ ಬಾವಿಯ ಗೋಡೆಗಳು ಇದ್ದುದರಿಂದ ನಾನು ಕೂಗುತ್ತಿದ್ದ ಶಬ್ಧ ಲಂಬಕೋನದಲ್ಲಿ ಮೇಲ್ಮೈ ಕಡೆಗೆ ಹೋಗುತ್ತಿತ್ತು. ನನ್ನ ದುರದೃಷ್ಟವಶಾತ್ ನಾನೆಷ್ಟೇ ಕೂಗಿದರೂ ನನ್ನ ಶಬ್ಧ ಕೇಳಿಸಿಕೊಂಡು ಸಹಾಯಕ್ಕೆ ಬರುವ ಯಾವ ಸಾಧ್ಯತೆಯೂ ಕಾಣಲಿಲ್ಲ. ಕೂಗಿ ಬೇರೆಯವರ ಸಹಾಯ ಪಡೆಯ ಬಯಸುವುದು ನಿಷ್ಪ್ರಯೋಜಕ ಎಂದು ಮನಗಂಡು ಜೇನುತುಪ್ಪದ ಬೇವಿನ ಕೊನೆಯನ್ನು ಅಲ್ಲೇ ಮುಳ್ಳುಗಳ ಮೇಲೆ ಇಟ್ಟೆ. ಕೈಯಲ್ಲಿದ್ದ ಮಚ್ಚು ನನ್ನ ಏಕಮಾತ್ರ ಆಯುಧವಾಗಿ ಮಚ್ಚಿನ ತುದಿಯಿಂದಲೇ ಮಳೆಯ ನೀರಿಗೆ ಕೊರೆದು, ಸವೆದು ಇಲ್ಲದಂತಿದ್ದ ಮೆಟ್ಟಿಲ ಜಾಗದಲ್ಲಿ ಕುದುರೆಯ ಹೆಜ್ಜೆಯಂತೆ ಗುಂಡಿ ತೆಗೆದು ಹೆಜ್ಜೆ ಮಾಡಿದೆ. ಎರಡ್ಮೂರು ಮಾರು ಅಂದರೆ ಎಂಟತ್ತು ಅಡಿ ದಾಟಿದರೆ ಮುಂದಿನ ಜಾಗ ಹತ್ತಲು ಬರುವಂತಿತ್ತು. ಮತ್ತೊಂದಷ್ಟು ನನ್ನ ಮಂಗನ ಬುದ್ದಿ ಕೆಲಸ ಮಾಡಿದ್ದರಿಂದ ಬಲಗಡೆಗೆ ಬಾವಿಯ ಪ್ರಪಾತ ಇದ್ದುದರಿಂದ ಆಕಸ್ಮಿಕವಾಗಿ ಯಾವುದೇ ಸಂದರ್ಭದಲ್ಲಿ ಜಾರಿ ಪ್ರಪಾತಕ್ಕೆ ಬೀಳುವ ಸಾಧ್ಯತೆ ಇದ್ದುದರಿಂದ ಎಂಟತ್ತು ಅಡಿಯ ಜಾಲಿಮರದ ಒಂದು ಗಳವನ್ನು ಕಡಿದು ಮುಳ್ಳುಗಳೆಲ್ಲಾ ಸವರಿದೆ. ಇಷ್ಟೆಲ್ಲ ಕೆಲಸ ಮಾಡಲು ಅಂದಾಜು ಒಂದು ತಾಸಿಗಿಂತಲೂ ಅಧಿಕ ಸಮಯ ತೆಗೆದುಕೊಂಡಿತು. ಈ ಶ್ರಮದ ಬೆವರಿಗೆ ಹಾಕಿದ್ದ ಬಟ್ಟೆಯೆಲ್ಲಾ ನೆನೆದು ನೀರಿನ ದಾಹ ಮಿತಿ ಮೀರಿತ್ತು. ಧೈರ್ಯ ಮಾಡಿ ನಾಲ್ಕೈದು ಪ್ರಯತ್ನದಲ್ಲಿ ಮಚ್ಚನ್ನು ಗಡ್ಡೆಗೆ ಎಸೆದೆ. ಮುಳ್ಳುಗಳ ಮೇಲೆ ಆನಿಸಿಟ್ಟ ಜೇನುತುಪ್ಪದ ಮೇಲೆ ನೂರಾರು ಹುಳುಗಳು ಕೂತು ತುಪ್ಪ ಹೀರಿ ಕುಡಿಯುವ ಕೆಲಸ ಮಾಡುತ್ತಿದ್ದವು. ಆ ಹುಳುಗಳನ್ನು ಎಬ್ಬಿಸಿ, ಓಡಿಸಿ ಪುನಃ ಬಾಯಲ್ಲಿ ಆ ಕೊನೆಯನ್ನು ಕಚ್ಚಿಕೊಂಡು ಗಳವನ್ನು ಊರುಗೋಲಾಗಿ ಹಿಡಿದುಕೊಂಡು ಏಕಾಗ್ರತೆಯಿಂದ ದಾಪುಗಾಲು ಇಡುತ್ತಾ, ಮುಟ್ಟಿದರೆ ಉದುರಿಬೀಳುತ್ತಿದ್ದ ಮಣ್ಣನ್ನೇ ಹಿಡಿದುಕೊಂಡು ಹತ್ತಿಬಿಟ್ಟೆ..! ನಾನು ತೆಗೆದ ಜೇನಿಗಿಂತ ಆ ಬಾವಿಯಿಂದ ಮೇಲೆ ಹತ್ತಿ ಬಂದಿದ್ದೆ ಸಾಹಸವಾಗಿತ್ತು. ಅಂದಿನಿಂದ ಸಮರ್ಪಕ ಮೆಟ್ಟಿಲುಗಳು ಇಲ್ಲದ ಬಾವಿಗೆ ಇಳಿಯುತ್ತಿರಲಿಲ್ಲ. ಇಳಿಯಲೇ ಬೇಕಾದ ಅನಿವಾರ್ಯತೆ ಇದ್ದರೆ ಜೊತೆಗಿರಲು ಯಾರಾದರೂ ಒಬ್ಬರನ್ನು ಕರೆದುಕೊಂಡು ಹೋಗುತ್ತಿದ್ದೆ. ಸುಮಾರು ಅರ್ಧ ಕಿಲೋಮೀಟರ್ ಅಷ್ಟು ದೂರ ಬಂದು ಹೊಂಡದ ನೀರನ್ನು ಹೊಟ್ಟೆತುಂಬಾ ಕುಡಿದು ಮನೆಕಡೆ ಹೆಜ್ಜೆ ಹಾಕಿದೆ. ಅಂದು ಸುಮಾರು ಎರಡು ಕ್ವಾಟರ್ ಬಾಟಲ್ ಗೂ ಅಧಿಕ ತುಪ್ಪ ಅಂದು ಶೇಖರಣೆ ಆಗಿತ್ತು. ಸಾಮಾನ್ಯವಾಗಿ ಕಂಡ ಜೇನುಗಳಲ್ಲಿ ಯಾವನ್ನೂ ಬಳಸುತ್ತಿರಲಿಲ್ಲವಾದರೂ, ಈ ಕೆಲವೊಮ್ಮೆ ಪಾಳು ಬಾವಿಯ ಗೋಡೆಗೆ ಕಟ್ಟಿರುತ್ತಿದ್ದವು. ಅವು ಬಾವಿಗೆ ಇಳಿದರೂ ಸಿಗುತ್ತಿರಲಿಲ್ಲ. ಬಾವಿಯ ಮೇಲ್ಬಾಗದಿಂದಲೂ ಬಡಿಗೆಗೂ ಎಷ್ಟು ಪ್ರಯತ್ನಿಸಿದರೂ ಸಿಗುತ್ತಿರಲಿಲ್ಲ. ಅವುಗಳನ್ನು ತೆಗೆಯಲು ಯಾವ ಆಪ್ಷನ್ ಇರುತ್ತಿರಲಿಲ್ಲ. ಆ ತರಹದವುಗಳು ಮಾತ್ರ ನನ್ನಿಂದ ಬದುಕಿಕೊಳ್ಳುತ್ತಿದ್ದವು...
ಸರಕಾರಿ ಹಿರಿಯ ಪ್ರಾಥಮಿಕ ಶಾಲೆ, ಮಿಂಚೇರಿ
ಬಳ್ಳಾರಿ ತಾಲೂಕು ಮತ್ತು ಜಿಲ್ಲೆ
Mob : +91 99029 12684
*******************************************