ಜೀವನ ಸಂಭ್ರಮ : ಸಂಚಿಕೆ - 138
Sunday, May 19, 2024
Edit
ಜೀವನ ಸಂಭ್ರಮ : ಸಂಚಿಕೆ - 138
ಲೇಖಕರು : ಎಂ.ಪಿ. ಜ್ಞಾನೇಶ್
ಶಿಕ್ಷಣಾಧಿಕಾರಿ
ಪ್ರಧಾನ ಮಂತ್ರಿ ಪೋಷಣ್ ಶಕ್ತಿ ನಿರ್ಮಾಣ
(ಮಧ್ಯಾಹ್ನ ಉಪಹಾರ ಯೋಜನೆ)
ಜಿಲ್ಲಾ ಪಂಚಾಯತ್ ಮಂಗಳೂರು
ದಕ್ಷಿಣ ಕನ್ನಡ ಜಿಲ್ಲೆ
ಮಕ್ಕಳೇ, ಇಂದು ನಾನು ಪತಂಜಲಿ ಯೋಗ ಸೂತ್ರ ಗ್ರಂಥ ಓದುವಾಗ, ಎರಡನೇ ಪಾದ, ಎರಡನೇ ಸೂತ್ರದಲ್ಲಿ ಒಂದು ಪದ ಓದಿದೆ. ಸಮಾಧಿ ಭಾವದರ್ಶನ. ಇದು ನಮಗೆ ಲಾಭವಾಗಬಹುದು ಎಂದು, ಇದರ ಕುರಿತು ಬರೆಯುತ್ತಿದ್ದೇನೆ.
ಸಮಾಧಿ ಎಂದರೆ ಮನಸ್ಸು ಮಗ್ನವಾಗುವುದು, ತಲ್ಲೀನ ವಾಗುವುದು, ತನ್ಮಯತೆ ಹೊಂದುವುದು, ಮುಳುಗುವುದು ಎಂದರ್ಥ. ನಾವು ಯಾವುದೇ ಜ್ಞಾನ ಪಡೆಯಬೇಕಾದರೆ, ಆ ಜ್ಞಾನದ ಆನಂದ ನಮಗಾಗಬೇಕಾದರೆ, ಅದರಲ್ಲಿ ನಾವು ಮಗ್ನರಾಗಬೇಕು, ತನ್ಮಯರಾಗಬೇಕು. ಯಾವುದೇ ವಸ್ತುವಿನ, ಶಬ್ದದ, ಸಂತೋಷ ಪಡೆಯಬೇಕಾದರೆ ಮಗ್ನತೆ ಬೇಕಾಗುತ್ತದೆ. ನಾವು ಎಲ್ಲಿಯಾದರೂ ಹೋದಾಗ, ಅನೇಕ ವಸ್ತುಗಳನ್ನು ನೋಡುತ್ತೇವೆ. ಅವುಗಳಲ್ಲಿ ಯಾವುದೋ ಒಂದು ನಮ್ಮ ಮನಸ್ಸಿಗೆ ಹಿತವಾದರೆ, ಅದರಲ್ಲಿ ಮಗ್ನರಾಗುತ್ತೇವೆ. ಆಗ ನಮಗೆ ಅದರ ಆನಂದ ಉಂಟಾಗುತ್ತದೆ. ಎಲ್ಲಾ ವಸ್ತು ನೋಡಿದಾಗ, ಮನಸ್ಸು ಆ ಎಲ್ಲಾ ವಸ್ತುರೂಪ ತಾಳುತ್ತದೆ. ಆದರೆ ಅನುಭವಿಸುವುದಿಲ್ಲ. ಅದರಲ್ಲಿ ಒಂದರಲ್ಲಿ ಮಗ್ನರಾದಾಗ ಮಾತ್ರ , ಆ ವಸ್ತುವಿನಿಂದ ಸಂತೋಷವಾಗುತ್ತದೆ. ಮನಸ್ಸು ಸ್ಥೂಲ ಮತ್ತು ಸೂಕ್ಷ್ಮ ವಸ್ತುಗಳಲ್ಲಿ ಮಗ್ನವಾಗುತ್ತದೆ. ಅದರಲ್ಲಿ ಸ್ಥೂಲವಸ್ತುವಿನ ತನ್ಮಯತೆ ಬಗ್ಗೆ ನೋಡೋಣ.
ಅನುಭವದಲ್ಲಿ ಶ್ರೀಮಂತರಾಗಬೇಕಾಗಿದ್ದರೆ, ಈ ತನ್ಮಯತೆ ಅಗತ್ಯ. ಉದಾಹರಣೆಗೆ, ನಾವು ಒಂದು ಹೂವನ್ನು ಅನುಭವಿಸಬೇಕಾದರೆ, ನಮ್ಮ ಕಣ್ಣು, ಹೂವಿನ ರೂಪದಲ್ಲಿ ಮಗ್ನವಾಗಬೇಕು. ಮೂಗು ವಾಸನೆಯಲ್ಲಿ ಮಗ್ನವಾಗಬೇಕು. ಮನಸ್ಸು ಅದರ ರೂಪ ಸುಗಂಧದಲ್ಲಿ ಮಗ್ನವಾದರೆ, ಆ ಹೂವು ನಮಗೆ ಸಂತೋಷ ನೀಡಿದಂತೆ. ಹಾಗೆಯೇ ಒಂದು ಹಾಡನ್ನು ಅನುಭವಿಸಬೇಕೆಂದರೆ, ಕಿವಿಯು ಹಾಡಿನ ಶಬ್ದ, ರಾಗ, ಮತ್ತು ಸಂಗೀತದಲ್ಲಿ ಮಗ್ನವಾಗಿರಬೇಕು. ಮನಸ್ಸು ಹಾಡಿನ ಮಾಧುರ್ಯದಲ್ಲಿ ಮಗ್ನವಾಗಿದ್ದರೆ ಆ ಹಾಡಿನ ಸಂತೋಷವಾಯಿತು ಎಂದರ್ಥ. ನಾವು ಊಟ ಮಾಡುತ್ತೇವೆ. ಪಕ್ಕದವರ ತಟ್ಟೆಯೊಂದಿಗೆ ಹೋಲಿಸಿ, ನಮಗೆ ಇದು ಕೊರತೆಯಾಯಿತು ಎಂದು ಕೊರಗುತ್ತೇವೆ. ಊಟದಲ್ಲಿ ಆನಂದ ಪಡೆಯಬೇಕಾದರೆ, ಬಹಳಷ್ಟು ಬೇಕಾಗಿಲ್ಲ. ಇರುವುದರಲ್ಲೇ ಮಗ್ನವಾದರೆ ಅಂದರೆ ನಾಲಿಗೆ ರುಚಿಯಲ್ಲಿ ಮಗ್ನವಾಗಬೇಕು. ಮನಸ್ಸು ಆಹಾರದ ಸವಿಯಲ್ಲಿ ಮಗ್ನವಾಗಿರಬೇಕು. ಹಾಗೆಯೇ ಸ್ಪರ್ಶ. ಬೇರೆ ಬೇರೆ ವಸ್ತು ಮುಟ್ಟಿದಾಗ ಅದರ ಸ್ಪರ್ಶವೇ ಬೇರೆ ಬೇರೆ ಇರುತ್ತದೆ. ಆ ಸ್ಪರ್ಶವೂ ಆನಂದವನ್ನೇ ನೀಡುತ್ತದೆ. ನಮಗೆ ಆನಂದವಾಗಬೇಕಾದರೆ ಮಗ್ನತೆ ಇರಬೇಕು. ಈಗ ಸಾಗರದಲ್ಲಿ ಮೇಲೆ ಈಜಿದರೆ ಮುತ್ತುರತ್ನ ಸಿಗುವುದಿಲ್ಲ. ಸಾಗರದ ಆಳಕ್ಕೆ ಮುಳುಗಿ, ಭೂಮಿಯ ಸಮೀಪಕ್ಕೆ ಹೋದರೆ, ಅಲ್ಲಿ ಮುತ್ತು ರತ್ನ ಸಿಗುತ್ತದೆ. ನಾವು ಓದುವುದರಲ್ಲೂ ಆನಂದ ಪಡೆಯಬಹುದು. ಮನಸ್ಸು ಆ ಪದದ ರೂಪ, ಸೌಂದರ್ಯ, ಮಾಧುರ್ಯ, ಸವಿ ಮತ್ತು ಸುಗಂಧವನ್ನು ಅನುಭವಿಸುವಲ್ಲಿ ಮಗ್ನವಾದರೆ, ಓದು ಆನಂದ ಕೊಡುತ್ತದೆ. ನಾವು ಬೇರೆಯವರು ಓದುವುದನ್ನು ನೋಡಿ, ನಾನು ಇನ್ನೂ ಹಿಂದೆ ಇದ್ದೇನೆ ಎಂದು ಬರಾ-ಬರಾ ಓದಿದರೆ ಆನಂದ ಸಿಗುವುದಿಲ್ಲ. ಅವಸರದಿಂದ ಅನುಭವವಾಗುವುದಿಲ್ಲ. ಅನುಭವವಿಲ್ಲ, ಅದರಲ್ಲಿ ಆನಂದವಿಲ್ಲ. ಶಿಕ್ಷಕರು ಪಾಠ ಮಾಡುವಾಗ ಕಣ್ಣು ಶಿಕ್ಷಕರಲ್ಲಿ, ಶಿಕ್ಷಕರ ಮಾತಿನಲ್ಲಿ, ಕಿವಿ ಮಗ್ನವಾಗಿರಬೇಕು. ಮನಸ್ಸು ಅವರು ಬರೆಯುವ, ಹೇಳುವ ಶಬ್ದದ ಸುಗಂಧ, ಮಾಧುರ್ಯ ಮತ್ತು ಸೌಂದರ್ಯದಲ್ಲಿ ಮಗ್ನವಾದರೆ, ಪ್ರತಿ ಪಾಠವು ಆನಂದವನ್ನು ನೀಡುತ್ತದೆ.
ನಾವು ಆನಂದ ಪಡಲು ಬಹಳ ವಸ್ತು ಬೇಕಾಗಿಲ್ಲ. ಆ ವಸ್ತು ನಮ್ಮದೇ ಆಗಿರಬೇಕಾಗಿಲ್ಲ. ವಸ್ತು, ಶಬ್ದ , ರಸ, ಗಂಧ ಯಾರದಾದರೇನು? ಅದರಲ್ಲಿ ಮನಸ್ಸು ಮಗ್ನವಾದರೆ, ಅದರ ಸೌಂದರ್ಯ, ಮಾಧುರ್ಯ, ಸವಿ, ಮನ ತುಂಬುತ್ತದೆ. ಅದೇ ಅನುಭವ. ಆದರೆ ನಾವು ಹಾಗೆ ಮಾಡುವುದಿಲ್ಲ. ವಸ್ತು ನೋಡಿದಾಗ ತಾರತಮ್ಯ ಮಾಡುತ್ತೇವೆ. ವಸ್ತು ನೋಡಿದಾಗಲೇ ನನ್ನದಾಗಬೇಕು ಎಂದು ಬಯಸಿ, ಸಿಗದಿದ್ದಾಗ ಕೊರಗುತ್ತೇವೆ. ಎಲ್ಲಾ ವಸ್ತುಗಳು ನಮ್ಮದಾಗಬೇಕೆಂದೇನು ಇಲ್ಲ. ಅನುಭವಿಸುವ ಕಲೆ ಇದ್ದರೆ ಸಾಕು. ಜೀವನ ಆನಂದದಿಂದ ತುಂಬುತ್ತದೆ. ವಸ್ತು ಮಾಲೀಕರಾಗುವುದು ಮುಖ್ಯವಲ್ಲ. ವಸ್ತು ಗಳಿಸುವುದು ಮುಖ್ಯವಲ್ಲ. ಏಕೆಂದರೆ ವಸ್ತುಗಳನ್ನೇ, ವ್ಯಕ್ತಿಗಳನ್ನೇ ಮನಸ್ಸಿನಲ್ಲಿ ತುಂಬಲು ಸಾಧ್ಯವಿಲ್ಲ. ಮತ್ತು ಅದು ಇದ್ದ ಹಾಗೆ ಇರುವುದಿಲ್ಲ, ಬದಲಾಗುತ್ತದೆ ಮತ್ತು ನಾಶವಾಗುತ್ತದೆ. ಮನಸ್ಸನ್ನು ತುಂಬುವುದು ಸೌಂದರ್ಯ, ಮಾಧುರ್ಯ, ಸವಿ, ರುಚಿ ಮಾತ್ರ. ಮನಸ್ಸಿನಲ್ಲಿ ತುಂಬುವುದಕ್ಕೆ ಅನುಭವ ಎನ್ನುವರು. ಹಾಗಾಗಿ ಅನುಭವಿಸುವುದು ಮುಖ್ಯ. ವಸ್ತು ಸಂಪತ್ತಲ್ಲ. ಆ ವಸ್ತುವಿನ ಸೌಂದರ್ಯ, ಮಾಧುರ್ಯ, ಸುಗಂಧ, ರುಚಿ, ಸಂಪತ್ತು ಅನ್ನುವುದನ್ನು ತಿಳಿದಿರಬೇಕು. ಆದರೆ ಎಷ್ಟು ಹೊತ್ತು ಮಗ್ನರಾಗಿರಬೇಕು ಎಂಬ ವಿವೇಕ ಮುಖ್ಯ. ಇದಕ್ಕೆ ಪತಂಜಲಿ ಗುಣ ಸಮಾಧಿ ಎಂದು ಕರೆದನು.
ಗುಣಗಳು ಅಂದಾಗ ಮೂರು. ಸಾತ್ವಿಕ, ರಾಜಸಿಕ ಮತ್ತು ತಾಮಸಿಕ. ಸಾತ್ವಿಕದಲ್ಲಿ ಮನಸ್ಸು ತನ್ಮಯವಾದರೆ ಸಾತ್ವಿಕ ಗುಣ ಸಮಾಧಿ. ರಾಜಸಿಕದಲ್ಲೇ ಮನಸು ತನ್ನಯವಾದರೆ ರಾಜಸಿಕ ಗುಣ ಸಮಾಧಿ ಮತ್ತು ತಾಮಸದಲ್ಲಿ ಮನಸ್ಸು ತನ್ಮಯವಾದರೆ ತಾಮಸಿಕ ಗುಣ ಸಮಾಧಿ ಎಂದು ಕರೆದನು. ತಾಮಸಿಕ ಗುಣಸಮಾಧಿ ಎಂದರೆ ತನಗೆ ಮತ್ತು ಸಮಾಜಕ್ಕೆ ಹಿತವಿಲ್ಲದಿರುವುದರಲ್ಲಿ ಮನಸ್ಸು ತನ್ಮಯವಾಗುತ್ತದೆ. ಉದಾಹರಣೆಗೆ ಮದ್ಯಪಾನ, ಧೂಮಪಾನ, ಜಡತ್ವ, ಸೋಮಾರಿತನ. ರಾಜಸಿಕ ಗುಣ ಸಮಾಧಿ ಎಂದರೆ ಬೇಕು ಬೇಡಗಳ ನಡುವೆ ಹೋರಾಟ. ಬೇಕಾದುದನ್ನೇ ಪಡೆಯಲು ತಲ್ಲಿನರಾಗುವುದು. ಬೇಡವಾದುದನ್ನು ದೂರಸರಿಸಲು ತನ್ಮಯರಾಗುವುದು. ಇದು ತನಗೆ ಹಿತ ಇರಬಹುದು, ಇರದೇ ಇರಬಹುದು. ಸಮಾಜಕ್ಕೆ ಹಿತ ಅಲ್ಲ. ಸಾತ್ವಿಕ ಗುಣ ಸಮಾಧಿ ಎಂದರೆ ತನಗೆ ಸಮಾಜಕ್ಕೆ ಹಿತವಾಗುವುದು. ವಿಜ್ಞಾನಿ ಸಂಶೋಧನೆಯಲ್ಲಿ ಮಗ್ನನಾಗುವುದು. ಶಿಲ್ಪಿ ಕೆತ್ತೋದರಲ್ಲಿ ತನ್ಮಯರಾಗುವುದು. ಚಿತ್ರಕಾರ ಚಿತ್ರ ರಚನೆಯಲ್ಲಿ ತನ್ಮಯನಾಗುವುದು. ಗಾಯಕ ಗಾಯನದಲ್ಲಿ ತನ್ಮಯನಾಗುವುದು. ನಟ ನಟನೆಯಲ್ಲಿ ತನ್ಮಯ ಆಗುವುದು. ಹೀಗೆ ಮನಸ್ಸು ಅರಳಿಸುವುದರಲ್ಲಿ ಮಗ್ನರಾಗಬೇಕು. ಮನಸ್ಸು ಕೆರಳಿಸುವುದರಲ್ಲಿ ಅಲ್ಲ. ಅದು ಹಿತಮಿತವಾಗಿದ್ದರೆ ಬದುಕು ಶ್ರೀಮಂತ ಸುಂದರ ಅಲ್ಲವೇ ಮಕ್ಕಳೇ....
ಶಿಕ್ಷಣಾಧಿಕಾರಿ
ಪ್ರಧಾನ ಮಂತ್ರಿ ಪೋಷಣ್ ಶಕ್ತಿ ನಿರ್ಮಾಣ
(ಮಧ್ಯಾಹ್ನ ಉಪಹಾರ ಯೋಜನೆ)
ಜಿಲ್ಲಾ ಪಂಚಾಯತ್ ಮಂಗಳೂರು
ದಕ್ಷಿಣ ಕನ್ನಡ ಜಿಲ್ಲೆ
*******************************************